ಆರತಿ ಎಚ್ ಎನ್ ಕಂಡ ಮಾರಿಯೋ ಮಿರಾಂಡಾ ಜಾದೂ…

ಆರತಿ ಎಚ್ ಎನ್

Mario Miranda
ಒಬ್ಬ ಬರಹಗಾರನ ವ್ಯಕ್ತಿಚಿತ್ರಗಳು, ಹೆಸರುಗಳು ಜನಮಾನಸದ ನೆನಪಲ್ಲಿ ಹಾಸುಹೊಕ್ಕಾಗಿರುವುದನ್ನು ಪ್ರಪಂಚದಾದ್ಯಂತ ನೋಡಿದ್ದೇವೆ.
ಆದರೆ ಭಾರತದ ಒಬ್ಬ ವ್ಯಂಗ್ಯಚಿತ್ರಕಾರ ಚಿತ್ರಿಸಿದ caricatures ಗಳ ಹೆಸರುಗಳು ನಮ್ಮೆಲ್ಲರ ನೆನಪಿನ ರಂಗಸ್ಥಳವನ್ನು ಇನ್ನೂ ರಂಜನೀಯ ಮಾಡುತ್ತದೆ ಎಂದರೆ ಅಂತಹ ಕಲಾವಿದ ಶ್ರೇಷ್ಠನೇ ಇರಬೇಕು.
Bundaldass,
Godbole,
Miss Fonseca,
Ms Nimboopani,
Rajani ❤️
70-80ರ ದಶಕದ The Current, Illustrated weekly, TOI, Femina, Filmfareಗಳಲ್ಲಿ ಅಕ್ಷರಶಃ ಮುಳುಗಿ ಹೋಗುತ್ತಿದ್ದ ಯುವ ಜನಾಂಗ ಎಂದೂ ಈ ಹೆಸರುಗಳನ್ನು ಮರೆಯಲಾರರು.

ಮಾರಿಯೋ ಮಿರಾಂಡಾ ಜಾದೂ ಬೆರಳಿನ ರೇಖಾ ಚಿತ್ರಕಾರ, ವ್ಯಂಗ್ಯಚಿತ್ರಕಾರ, ನಾನು ಅತ್ಯಂತ ಇಷ್ಟಪಡುವ ಭಾರತದ ಕಲಾವಿದ.
ಬರಹಗಾರರನ್ನು ನಾನು ಹಚ್ಚಿಕೊಂಡು ಓದುವ ರೀತಿಯಲ್ಲೇ ಅನೇಕ ಕಲಾವಿದರು ನನ್ನ ಬದುಕಿನ ಭಾಗವಾಗಿ ಹೋಗಿದ್ದಾರೆ. ಅವನ ಚಿತ್ರಗಳನ್ನು ತೀವ್ರವಾಗಿ ಮೋಹಿಸುವ ಕಲಾರಾಧಕಿ ನಾನು. ಪುಸ್ತಕಗಳನ್ನು ಕೊಳ್ಳುವ ಹಾಗೆ, ಕಲಾಕೃತಿಗಳನ್ನೂ ಕೊಳ್ಳುತ್ತೇನೆ.

ಮಾರಿಯೋ ಮಿರಾಂಡಾ ಗೋವೆಯವರು. Goa ಮತ್ತು Mumbaiಯ ಜನಜೀವನ, ಚರ್ಚುಗಳು, ಬಾರುಗಳು, ಅಸಂಖ್ಯಾತ ಅಪಾರ್ಟ್ಮೆಂಟ್ ಗಳು… ಇವೆಲ್ಲಾ ಮಾರಿಯೋ ಕೈಯಲ್ಲಿ ಅದ್ಭುತ ಚಿತ್ತಾಪಹರಣಗೊಳಿಸುವ ಕಲಾಕೃತಿಗಳಾಗಿವೆ. ಮಾರಿಯೋ ಜನಸಾಮಾನ್ಯರನ್ನು, ಅವರ ಸಹಜ ಜೀವನಶೈಲಿಯನ್ನು ಅಸಾಮಾನ್ಯ ಮಾಡಿದವನು. ‘ಕಪ್ಪು ಬಿಳುಪು’ ಚಿತ್ರಗಳಲ್ಲಿ ಸಪ್ತವರ್ಣವನ್ನು ತುಂಬಿದವನು.

ಕರಿ-ಬಿಳಿ ಎರಡೇ ಬಣ್ಣಕ್ಕೆ ನೋಡುವವರ ಕಣ್ಣುಗಳಲ್ಲಿ ಸಹಸ್ರ ವರ್ಣಛಾಯೆಗಳನ್ನು ಮೂಡಿಸಿದವರನು. ಅವನು ರಚಿಸಿದ ವರ್ಣಚಿತ್ರಗಳಿಗಿಂತ, ಕಪ್ಪು-ಬಿಳುಪು ಚಿತ್ರಗಳು ಅಷ್ಟು ಸುಪ್ರಸಿದ್ಧವಾಗಿರುವುದು ಅದಕ್ಕೆ ಏನೋ!!! ನನ್ನ ತಂದೆ ಪ್ರೊ.ಹಂಪನಾ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಮಾರಿಯೋ ಮಿರಾಂಡನನ್ನು ಬೆಂಗಳೂರಿಗೆ ‘ವ್ಯಂಗ್ಯ ಚಿತ್ರಕಾರರ ಸಮ್ಮೇಳನ’ಕ್ಕೆ ನಾಲ್ಕು ದಶಕಗಳ ಹಿಂದೆ 1980ರಲ್ಲೇ ಆಹ್ವಾನಿಸಿದ್ದರು.

ಅಬು ಅಬ್ರಹಾಂ, RK ಲಕ್ಷ್ಮಣ್, ವಿ.ರಾಮಮೂರ್ತಿ ಮುಂತಾದ 150 ಖ್ಯಾತ ಕಲಾರತ್ನಗಳು ಬಂದಿದ್ದರು ಎಂದರೆ ಆಶ್ಚರ್ಯವಾಗುತ್ತದೆ. ರಾಷ್ಟ್ರೀಯ ಚಿತ್ರಕಲಾವಿದರಿಗೆ ಸಾಹಿತ್ಯ ಸಂಸ್ಥೆಯೊಂದು ವೇದಿಕೆ ಕಲ್ಪಿಸುವಷ್ಟು (80ರಲ್ಲೇ) ಚೌಕಟ್ಟಿನಾಚೆ ಯೋಚಿಸುವ ಸೃಜನಶೀಲ ಮನಸ್ಸಿನ ನನ್ನ ತಂದೆಯನ್ನು ನೆನೆದು ನಮಿಸುತ್ತೇನೆ. ಆಗ ಚಿಕ್ಕವಳಾಗಿದ್ದ ನನಗೆ ಈ ಕಲಾವಿದರೊಂದಿಗೆ ಒಂದು ಚಿತ್ರ ತೆಗೆದುಕೊಳ್ಳಬಹುದು ಎಂಬ ಕಲ್ಪನೆಯೂ ಇರಲಿಲ್ಲ. 2011 ರಲ್ಲಿ ಮಾರಿಯೋ ಕಾಲವಶರಾದರು.

ಪ್ರತಿ ಬಾರಿ ಗೋವಾಗೆ ಹೋದಾಗಲೂ ನಾನು ಮಾರಿಯೋ ಮಿರಾಂಡಾ ಗ್ಯಾಲರಿಗೆ ತಪ್ಪದೆ ಭೇಟಿ ಕೊಡುತ್ತೇನೆ. ನನ್ನ ಮನೆಯಲ್ಲಿ, ಅಲ್ಲಿಗೆ ಹೋದಾಗಲೆಲ್ಲಾ ಕೊಂಡುತಂದ ಅವನ ಕಲಾಕೃತಿಗಳ ನೆನಪುಗಳ ತುಣುಕುಗಳಿವೆ. ಈ ಬಾರಿ ಮಳೆಹನಿಗಳ ಲಯಬದ್ಧ ಸಂಗೀತದ ಹಿನ್ನೆಲೆಯಲ್ಲಿ ಅವನ ಗ್ಯಾಲರಿಯಲ್ಲಿ ಕಳೆದ ಗಂಟೆಗಳು ಚಿತ್ತಭಿತ್ತಿಯಲ್ಲಿ ಮೂಡಿಸಿದ ಗೆರೆಗಳು, ಬಣ್ಣಗಳನ್ನು ಬಣ್ಣಿಸಲಾರೆ. ಮಾರಿಯೋನ ಅದೇ ತುಂಟತನದ ಕಣ್ಣ ಹೊಳಪನ್ನು ಇಡೀ ಗ್ಯಾಲರಿ ನೆನಪಿಸುತ್ತದೆ.

ಪ್ಯಾರಿಸ್, ಬರ್ಲಿನ್, ಬ್ರೆಜಿಲ್, ನ್ಯೂಯಾರ್ಕ್ ದೇಶಗಳಲ್ಲೂ ವಾಸಿಸಿದ ಮಾರಿಯೋ ರಚಿಸಿದ ಕಲಾಕೃತಿಗಳು ಅಜರಾಮರವಾಗಿವೆ.
ಒಂದು ಚಿಕ್ಕ ಭಿತ್ತಿಯಲ್ಲಿ ಅಡಗಿಸುವ ಹತ್ತಾರು ಮುಖಗಳು ಅವನ ವೈಶಿಷ್ಟತೆ. ಒಂದು ಮುಖದಂತೆ ಇನ್ನೊಂದು ಮುಖವಿಲ್ಲದಂತಿರುವ ತುಂಬಾ ಕ್ಲಿಷ್ಟವಾದ ಅವನ ಛಾಪಿನ ಶೈಲಿ. ಅವನ ನುರಿತ ಕೈಬೆರಳುಗಳಿಗೆ ಪ್ರತಿಯೊಂದು ವ್ಯಕ್ತಿಯೂ, ಘಟನೆಯೂ ಹಾಸ್ಯಲೇಪಿತವಾಗಿ ಮೂಡಿಬರುವಷ್ಟರಲ್ಲಿ, ಅದೊಂದು ಕಲಾಕೃತಿ ಆಗುತ್ತದೆ. ಅವುಗಳಲ್ಲಿನ ಭಿನ್ನತೆಗಳು, ಢಾಳಾಗಿ ಕಾಣುವ ಭಾವಾಭಿವ್ಯಕ್ತಿ, ಕೇವಲ ಒಂದು ರೇಖೆಗಿರುವ ಶಕ್ತಿಯನ್ನು ಇಷ್ಟು ಸಶಕ್ತವಾಗಿ ಬಿಂಬಿಸಲು ಸಾಧ್ಯವೇ ಎನಿಸುವಂತೆ ಮಾಡುತ್ತವೆ.

ಗೆರೆಗಳಲ್ಲಿ ಮಹಾಕಾವ್ಯ ಬರೆದ ಅಪೂರ್ವ ಕಲಾವಿದ ಮಿರಾಂಡನ್ನು ನೆನೆಯುವುದೆಂದರೆ, ಭಾವ ಪರವಶಳಾಗಿಬಿಡುತ್ತೇನೆ… ಗೋವಾದ ಮೂಲ ಸಿಹಿ “ಬಿಬಿಂಕಾ”ಗಿಂತಲೂ, ಕಾಡುವ ಕಡಲ ತೀರಕ್ಕಿಂತಲೂ, ಘಾಢ ಕಟು ವಾಸನೆಯ ಗೇರುಹಣ್ಣಿನ ಫೆನ್ನಿಗಿಂತಲೂ, ಹಸಿರ ಗಲ್ಲಿಗಳಲ್ಲಿ ಸರಕ್ಕನೆ ಎದುರಾಗುವ ಸುಂದರ ಪುರಾತನ ಚರ್ಚುಗಳಿಗಿಂತಲೂ, ಮಾಂಡೋವಿಯ ಪಾಪಲಾಲಿಯ ಸೇತುವೆಗಿಂತಲೂ, ಅದಕ್ಕಿಂತಲೂ… ಇದಕ್ಕಿಂತಲೂ…

ಮಾರಿಯೋ ಮಿರಾಂಡಾ ನನಗೆ ತುಂಬಾ ತುಂಬಾ ಇಷ್ಟ.

‍ಲೇಖಕರು Admin

September 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: