ಅನಿತಾ ಪಿ. ತಾಕೊಡೆ
**
ಅದುರುವ ರೆಪ್ಪೆಯೊಳಗಿನ ಕಣ್ಣ ಬಿಂಬದಲಿ
ಕಂಡೂ ಕಾಣದಂತಿರುವ ನಿನ್ನೆಗಳು ಕೂಡಿಕೊಂಡು
ಇರುಳ ಮರೆಯಲಿರುವ ಛಾಯೆಗೆ ಬಣ್ಣ ಬಳಿದು
ದುತ್ತನೆ ಎದುರಿಗೆ ಬಂದು ನಿಂತು ಬಿಡುತ್ತವೆ
ಮಂಗಳ ಹಾಡಿದ ಪುಟಗಳಲ್ಲಿ ಸ್ಫುಟವಾಗದ ಮಾತುಗಳು
ಒಮ್ಮೊಮ್ಮೆ ನಿನ್ನೆಯೊಳಗೂ ಮುಳುಗೆದ್ದು ಗೆದ್ದ ಮೌನ
ಮಗದೊಮ್ಮೆ ಧ್ಯಾನದಲಿ ಲೀನ
ದಿನವರಳುವ ಸುಶಾಂತ ನಿರ್ಮಲತೆಯ ನಡುವೆ
ಆಪ್ತ ನಗುವೊಂದು ಅಪರಿಚಿತವಾದಾಗ
ನಿನ್ನೆಗಳು ಬಂದು ಸಮಜಾಯಿಷಿ ಕೇಳುತ್ತವೆ
ಗಡಿಯಾರದ ಮುಳ್ಳನು ಹಿಂದೆ ತಿರುಗಿಸಿದ ಹಾಗೆ
ನಿನ್ನೆಗಳ ಸೊಗಸು ಮುಂದೆಯೂ ಇರಬೇಕೆಂಬ ಜಿದ್ದಿ
ಈ ಜಟಾಪಟಿಯ ನಡುವೆ ಕಳೆದುಹೋಗುವ ಇಂದು
ಪತ್ತೆದಾರಿ ಕತೆಗಳಂತೆ ಬರುವ ನಾಳೆ
ಎದೆಯಾಳದಲಿ ತಳವೂರಿದ ಬೇರಿನ ಬಯಕೆಗಳು ತೀವ್ರವಾದಾಗ
ಉಸಿರ ಬಿಗಿಹಿಡಿದಿರುವ ಅಕ್ಕರೆಯ ಅಕ್ಷರಗಳು
ಭಾವಗಳ ಬೆನ್ನೇರಿ ಯಥಾವತ್ತಾಗಿ ಕವಿತೆಯೊಳಗಿಳಿಯುತ್ತವೆ
ಆಗ ನಿನ್ನೆಗಳು ತಾನಾಗಿ ಹಗುರಾಗುತ್ತವೆ
0 Comments