ಕುಶವಂತ್ ದೀನಹಳ್ಳಿ
—-
ಆನೆ ಶೂಟರ್ ವೆಂಕಟೇಶಣ್ಣನ್ನ ಆನೆ ತುಳಿಯಿತು ಅಂತ ಸುದ್ದಿ ಕೇಳಿದ ತಕ್ಷಣ ಮನಸ್ಸು ಕಂಪಿಸಿತು…
ನಾನು ಹಾಸನಕ್ಕೆ ವರದಿಗಾರನಾಗಿ ಕಾಲಿಟ್ಟಾಗ ಕಾಡಾನೆ ಸೆರೆ ಕಾರ್ಯಾಚರಣೆ ಕೂಡ ನಡೀತಾ ಇತ್ತು ಸುಮಾರು 10 ವರ್ಷದಿಂದ ಈ ಹಿರಿಯ ವ್ಯಕ್ತಿ ಪರಿಚಯ .. ಸುದ್ದಿಗೆ ಹೋದಾಗ ನಗುಮುಖದಿ ಮಾತನಾಡಿಸುತ್ತಿದ್ದ ವೆಂಕಟೇಶ್ ಅಣ್ಣ.. ಇನ್ನು ಅವರ ಮಗ ಮೋಹಿತ್ ಕೂಡ ಹೀಗೆ ಪರಿಚಯ.. ಅವರನ್ನ ಹೊತ್ತು ಬಂದ ದೃಶ್ಯ ನೋಡಿ ಅಯ್ಯೋ ಭಗವಂತ ಉಳಿಲಪ್ಪ ಅಂದು ಕೊಂಡೆ. ಆದರೆ ಕೆಲವೇ ಕ್ಷಣದಲ್ಲಿ ನನ್ನ ಮೊಬೈಲ್ಗೆ ಜೀವ ಹೋಯಿತು ಅನ್ನೊ msg ಬಂತು..
ಆಗಲೇ ನೋಡಿ ಅವರನ್ನ ಆನೆ ಕಾರ್ಯಚರಣೆಯಲ್ಲಿ ನೋಡಿದ್ದು ಮಾತ್ನಾಡಿದ್ದು, ಅವ್ರ ಮಗ ಮೋಹಿತ್ ಜೊತೆ ಸಿಕ್ಕಾಗ ಮಾತ್ನಾಡಿಸುತ್ತಿದ್ದದ್ದು ಎಲ್ಲಾ ಚಿತ್ರಣ ಮನಸ್ಸಲ್ಲಿ ಕದಡಲು ಶುರುವಾದವು.. ನಮ್ಮ ಕ್ಯಾಮೆರಾ ಮನ್ ಮಾತ್ರ ಸುದ್ದಿಗೆ ಕಳಿಸಿ ನನ್ನ ಅನಾರೋಗ್ಯ ಕಾರಣ ಕಾಡಲ್ಲಿ ಓಡಾಡಲು ಸಾದ್ಯ ಇಲ್ಲದ ಕಾರಣ ನಾನು ಆ ಘಟನಾ ಸ್ಥಳಕ್ಕೆ ಹೋಗಿರಲಿಲ್ಲ.. ಆದರೆ ಅವರ ಜೀವ ಹೋದ ಆಸ್ಪತ್ರೆ ಬಳಿಗೂ ಹೋಗದೇ ಇರಲು ಮನಸ್ಸು ತಡೆಯಲಿಲ್ಲ ನಾನು ಅಲ್ಲಿಗೆ ಹೋದೆ.. ಅಲ್ಲಿ ನನಗೆ ಗೊತ್ತಿಲ್ಲದೆ ದುಃಖ ಆವರಿಸಿಕೊಂಡಿತು.
ಅವ್ರ ಮಗ ಮೋಹಿತ್ ನನ್ನ ಮುಂದೆಯೇ ಅಪ್ಪಾಜಿ,ಅಪ್ಪಾಜಿ, ನಂಗೆ ಅಪ್ಪಾಜಿ ಬೇಕು ಅಂತ ಸಣ್ಣ ಮಗುವಿನಂತೆ ರೋಧಿಸುತ್ತಿದ್ದ ದೃಶ್ಯ ನೋಡಿ ನನ್ನ ಕಣ್ಣಲ್ಲೂ ಹನಿ ಜಿನುಗಿದವು, ಓ ದೇವ್ರೇ ಎಂಥ ಪ್ರೀತಿ ಅಪ್ಪ ಮಗನ್ನ ಕಿತ್ತು ಕೊಂಡ್ಯಾ ಅನ್ನಿಸಿ ಹಿಂಸೆ ಶುರುವಾಯಿತು.. ಅಷ್ಟಕ್ಕೂ ಹೀಗೆ ನಾನು ಈ ಸಾಲು ಬರೆಯಲೇ ಬೇಕೆನಿಸಿ ತಡೆಯಲಾಗದೆ ಬರೆಯುತ್ತಿದ್ದೇನೆ..
ಆನೆ ಶೂಟರ್ ವೆಂಕಟೇಶ್ ಅರಣ್ಯ ಇಲಾಖೆಗೆ ಒಂದು ಪದಕ ಇದ್ದಂತೆ.. ದುರಂತ ಅಂದ್ರೆ ಪಾಪ ಅವರು ಇಂತಹ ಸಾಹಸ ಕೆಲಸ ಮಾಡಿದ್ರು ಗುತ್ತಿಗೆ ಆಧಾರದಲ್ಲೇ ಸೇವೆ ಸಲ್ಲಿಸಿ ಪ್ರಾಣ ಬಿಟ್ರು.
ಸುಮ್ನೇ ಊಹಿಸಿಕೊಳ್ಳಿ. ದಾರಿಯಲ್ಲಿ ಹೋಗುವಾಗ ಒಂದು ನಾಯಿ ಎರಗಿ ಬಂದ್ರೆ ಎದುರಿಗೆ ನಿಲ್ಲೊದು ಕಷ್ಟ ಅನ್ನುವಂತಿರುವಾಗ. ಈ ಮನುಷ್ಯ ಸೆಣಸಾಡುತ್ತಿದ್ದು ಬಲಿಷ್ಟ ಕಾಡಾನೆ ಮುಂದೆ ಎದೆ ಕೊಟ್ಟು ನಿಲ್ಲುವ ಧೈರ್ಯ!! ಜಸ್ಟ್ ಇಮ್ಯಾಜಿನ್ ಇವ್ರು ನಮ್ಮ ನಡುವೆ ಇದ್ದ ಒಬ್ಬ ಹೀರೋ ಅಲ್ವ?? 60 ವರ್ಷ ಆಗಿ ಸೇವೆ ನಿವೃತ್ತಿ ಆಗೋ ಏಜ್ ಮುಗಿದ್ರು 67 ರ ವಯಸ್ಸಿನಲ್ಲಿ ಆನೆಗೆ ಚುಚ್ಚು ಮದ್ದು ಶೂಟ್ ಮಾಡೋಕೆ ರಣಬೇಟೆಗಾರನಂತೆ ಕಾಡಲ್ಲಿ ನುಗ್ತಾ ಇದ್ರು ಅಂದ್ರೆ ಅದು ನಿಜವಾದ ಮಲೆನಾಡಿಗನ ಗುಂಡಿಗೆ ಅನ್ನಿಸ್ತು..
ಮಕ್ಕಳು ಎದೆ ಎತ್ತರಕ್ಕೆ ಬೆಳೆದು ಒಂದೇ ಮನೆಯಲ್ಲಿ ಇದ್ದು ಅಪ್ಪ ಬೇಡಪ್ಪ ನಿನಗೇ ಈ ಕೆಲ್ಸ ಇನ್ನ ಸಾಕು ಮಾಡು ಅಂದ್ರೂ, ಅವರಿಗಿದ್ದ ಕೆಲಸದ ಮೇಲಿನ ಮತ್ತು ಆನೆ ಮೇಲಿನ ಪ್ರೀತಿ ಹೇಗಿತ್ತು ಅಂತ.. ಅವ್ರನ್ನ ಕೊಂದ ಕಾಡಾನೆಗೆ ಭೀಮ ಅಂತ ಹೆಸರಿಟ್ಟಿದ್ದು ನಮ್ಮಪ್ಪನೇ, ಅದ್ಕೆ ಗಾಯ ಆಗಿದೆ ಕಣೋ ಅದನ್ನ ಹಿಡಿದು ಟ್ರೀಟ್ಮೆಂಟ್ ಕೊಡಬೇಕು, ನೀನು ಬರೀ ರಾಜಕೀಯ ಅಂತ ಓಡಾಡಬೇಡ, ಈ ಆನೆ ಬಗ್ಗೆನೂ ಹೇಳು ಅಂತ ನಮ್ಮಪ್ಪ ಹೇಳಿ ಈಗ ಅದೇ ಆನೆಗೆ ಪ್ರಾಣ ಕೊಟ್ರು ಅಂತ ಅವರ ಮಗ ಮೋಹಿತ್ ನನ್ನ ಬಳಿ ಹೇಳುತ್ತಾ ಅಳುವಾಗ ನನಗೆ ಹೇಗೆ ಏನು ಹೇಳೋದು ಮಾತೇ ನಿಂತು ಹೋಗಿ ಎಂಥ ಮನುಷ್ಯನಪ್ಪ ಕಾಡು ಮೃಗಗಳ ಬಗ್ಗೆ ಇವ್ರಿಗೆಷ್ಟು ಕಾಳಜಿ ಅನ್ನಿಸಿತು.
ವೆಂಕಟೇಶ್ ಅವ್ರ ಸೇವೆ ಹಾಸನದಲ್ಲಿ ಮಾತ್ರ ಅಲ್ಲ ರಾಜ್ಯ ದೇಶ ವಿದೇಶದಲ್ಲಿ ಗುರುತಿಸಲ್ಪಟ್ಟಿದೆ.. 200ಕ್ಕೂ ಕಾರ್ಯಾಚರಣೆಯಲ್ಲಿ ಇವರು ಭಾಗಿ ಆಗಿದ್ದಾರೆ. ಏನೇ ಇರಲಿ ವೆಂಕಟೇಶ್ ಅಣ್ಣ ವ್ಯಕ್ತಿತ್ವ ಎಂತದ್ದು ಅಂತ ಅಲ್ಲಿ ರೋಧಿಸುತ್ತಿದ್ದ ಬಾಂಧವರನ್ನ ನೋಡಿದಾಗ ಕಂಡಿತು.. ನಿಜಕ್ಕೂ ಆ ಹಿರಿ ಜೀವ ಯಾವ ಯುವಕನಿಗೂ ಕಮ್ಮಿ ಇಲ್ಲ ಅನ್ನುವಂತೆ 67ರ ವಯ್ಯಸ್ಸಲ್ಲೂ ಕಾಡಿಗೆ ನುಗ್ಗಿ ಹೋರಾಡಿ ವೀರಸ್ವರ್ಗ ಕಂಡಿದೆ..
ಕೊನೆಯಲ್ಲಿ ನಿಮಗೊಂದು ವಿಚಾರ ಅಂದ್ರೆ ಈ ಘಟನೆಯಲ್ಲಿ ಕಾಡಾನೆಗೆ ಚುಚ್ಚುಮದ್ದು ಶೂಟ್ ಮಾಡಿದ ನಂತರವೇ ಈ ಘಟನೆ ನಡೆದಿದೆ, ಕೆಲಸ ಮುಗಿತು ಅಂತ ಅವ್ರು ದೂರ ಓಡಬಹುದಿತ್ತು, ಆದರೆ ಅವರ ಹಿರಿತನ ಆನೆ ಮೇಲಿನ ಪ್ರೀತಿ ಪಾಪ ಆನೆಗೆ ಏನಾದ್ರು ಆದ್ರೆ ಅನ್ನೊ ಕಾಳಜಿ ನಂಬಿಕೆಯೂ ಈ ಘಟನೆಗೆ ಒಂದು ಕಾರಣ .ಅದೇನೆ ಇರಲಿ ನಮ್ಮ ಮಲೆನಾಡಿನ ದಂತಕಥೆಗಳ ಸಾಲಿನಲ್ಲಿ ಈ ವೆಂಕಟೇಶ್ ಅಣ್ಣ ಕಥೆ ಮುಂದಿನ ಮಕ್ಕಳಿಗೆ ಸ್ಫೂರ್ತಿ ಧೈರ್ಯ ಶೌರ್ಯ ದ ಕಥೆಯಾಗಿ ಮಾದರಿಯಾಗಲಿ ಅಲ್ವ.. we miss u sir
0 Comments