ಆನೆಯ ಬದುಕಿಗೆ 'ಅಸ್ತು'

ಶ್ರೀಧರ್ ತಾಳ್ಯ
ಡಾ. ಚಕ್ರಪಾಣಿ ಶಾಸ್ತ್ರಿ ಹೆಸರಾಂತ ಸಂಸ್ಕೃತ ವಿದ್ವಾಂಸ, ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಮಾಜಿ ನಿರ್ದೇಶಕ, ಪತ್ನಿ, ಇಬ್ಬರು ಪ್ರೌಢ ವಯಸ್ಕ ಸುಶಿಕ್ಷಿತ ಹೆಣ್ಣುಮಕ್ಕಳ ತುಂಬು ಕುಟುಂಬ, ಹಿರಿಯ ಮಗಳು ಇರಾಳ ಮದುವೆ ಆಗಿದ್ದು ಗಂಡ ಡಾಕ್ಟರ್ ಮತ್ತು ಇಬ್ಬರು ಮಕ್ಕಳೊಂದಿಗೆ ಪುಣೆಯಲ್ಲಿಯೇ ವಾಸಿಸುತ್ತಾಳೆ, ಕಿರಿಯ ಮಗಳು ಉಪನ್ಯಾಸಕಿ, ಬೇರೊಂದು ನಗರದಲ್ಲಿ ಸ್ವತಂತ್ರವಾಗಿ ವಾಸಿಸುತ್ತಾಳೆ, ಇಬ್ಬರಿಗೂ ತಂದೆಯೆಂದರೆ ಅಚ್ಚುಮೆಚ್ಚು, ತಂದೆಯ ಒಲುಮೆ ಇಬ್ಬರ ಪೈಕಿ ಯಾರಿಗೆ ಹೆಚ್ಚು ಎನ್ನುವುದರ ಬಗ್ಗೆ ಹೊಟ್ಟೆ ಕಿಚ್ಚು.
ಸಹದ್ಯೋಗಿ, ಶಿಷ್ಯವೃಂದದಲ್ಲೆಲ್ಲಾ “ಶಬ್ಧಪ್ರಭು” ಎನ್ನುವ ಬಿರುದು ಸಂಪಾದಿಸಿದ್ದ ಡಾ.ಶಾಸ್ತ್ರಿ, ಕುಟುಂದವರೆಲ್ಲರ ಪಾಲಿನ ನೆಚ್ಚಿನ “ಅಪ್ಪ”, ಹಲವಾರು ಕೃತಿಗಳನ್ನು ರಚಿಸಿದ ಮೇಧಾವಿ, ಸಂಸ್ಕೃತ, ಈಶೋಪನಿಷತ್, ಪ್ರಾಚೀನ ಗ್ರಂಥಗಳು, ಭಗವದ್ಗೀತೆಯಿಂದ ಹಿಡಿದು ಝೆನ್, ತಾವೋ ತತ್ವಗಳನ್ನು ಹೃದಯದಿಂದ ಅರಿತು ಅಳವಡಿಸಿಕೊಂಡವರು, ಆಧ್ಯಾತ್ಮದ ಎತ್ತರಕ್ಕೆ, ಹಿಮಾಲಯದ ಕಡೆಗೆ ನಡೆಯಬೇಕೆಂಬ ವಾಂಛೆಯವರು, ಜೊತೆಗೆ ಅಗಾಧ ನೆನಪಿನ ಶಕ್ತಿಯಿಂದ ನಾಲಿಗೆಯ ತುದಿಯಲ್ಲೇ ಪ್ರಸಂಗಕ್ಕೊಂದು ಶ್ಲೋಕ ಹೇಳಬಲ್ಲಷ್ಟು ಚಾಣಾಕ್ಯ. ಅದರಲ್ಲೂ ಝೆನ್ ತತ್ವದ ಅನುಸಾರ ಆಧ್ಯಾತ್ಮ, ಕಾಲ, ಸತ್ಯ, ನೆನಪುಗಳು, ಸಂಬಂಧಗಳನ್ನು ಓರೆಗೆ ಹಚ್ಚಿ “ಈ ಕ್ಷಣದೊಂದಿಗೆ” ಪರಮಾರ್ಶಿಸುವುದು ಅವರ ನೆಚ್ಚಿನ ಹವ್ಯಾಸ,
ವಿಶ್ರಾಂತ ಜೀವನದಲ್ಲೂ ತುಂಬು ಚಟುವಟಿಕೆಯಿಂದ ಇದ್ದ ಡಾ.ಶಾಸ್ತ್ರಿಯವರಿಗೆ ಇತ್ತೀಚಿಗೆ ನಿಧಾನವಾಗಿ ಮರೆವು ಆವರಿಸುತ್ತಿದೆ, ನೆನಪುಗಳು ಕೈ ಕೊಡುತ್ತಿವೆ, ವಾಗ್ಚಾತುರ್ಯ ಮಸುಕಾಗುತ್ತಿದೆ, ಇದೆಲ್ಲಾ ತಾರಕಕ್ಕೆ ತಲುಪಿದ್ದು ತಮ್ಮ ಪತ್ನಿಯನ್ನು ಕಳೆದುಕೊಂಡು ಒಂಟಿಯಾದ ನಂತರ.
 
ಹಿರಿಯ ಮಗಳು ಇರಾ ತಂದೆಯನ್ನು ಗಂಡನ ಸಹಾಯದೊಂದಿಗೆ ಪರಿಣಿತ ವೈದ್ಯರಲ್ಲಿ ಪರೀಕ್ಷಿಸಿದಾಗ ಡಾ.ಶಾಸ್ತ್ರಿ  ನೆನಪನ್ನು ಸಂಪೂರ್ಣವಾಗಿ ಕಳೆದುಕೊಂಡ ಆಲ್’ಜೈಮರ್ (Alzheimer) ರೋಗಿಯಾಗಿರುವುದು ನಿರ್ಧಾರವಾಗುತ್ತದೆ, ತನ್ನ ಮನೆಗೆ ಕರೆತಂದು ಸಂಭಾಳಿಸಲೆತ್ನಿಸುವ ಆಕೆಗೆ ತಂದೆಯ ಮರೆಗುಳಿತನದ ಎಡವಟ್ಟುಗಳಿಂದ ಮತ್ತು ಮಕ್ಕಳ ಪ್ರತಿರೋಧದಿಂದ ಸಂದಿಗ್ಧತೆಗೆ ಒಳಗಾಗುವ ಇರಾ ವೃದ್ಧಾಶ್ರಮಗಳನ್ನೆಲ್ಲಾ ಅಲೆದು ಕೊನೆಗೆ ಕುಟುಂಬದ ಪರಿಚಿತ ಯುವ ವಿದ್ಯಾರ್ಥಿಯೊಬ್ಬನನ್ನು ಜೊತೆಮಾಡಿ ತಂದೆಯನ್ನು ನೋಡಿಕೊಳ್ಳಲು ಅದೇ ಮನೆಯಲ್ಲೇ ಉಳಿಯುವ ಏರ್ಪಾಟು ಮಾಡುತ್ತಾಳೆ.

ಪೂರ್ಣ ಮುಗ್ಧ ಬಾಲಕನಂತೆ ಆಗಿಬಿಡುವ ವಯೋವೃದ್ಧ “ಮರೆಗುಳಿ ಅಪ್ಪ” ಕನ್ನಡಿಯ ಮೇಲೂ “ಇದು ನಾನು -ಅಪ್ಪ” ಎಂದು ಚೀಟಿ ಅಂಟಿಸಿಕೊಂಡಿರುವಾಗಲೂ ಆಗಾಗ ಒಳಗಿಂದ ಏನೋ ಪ್ರಕಾಶಿಸಿದಂತೆ, ಮೆದುಳಲ್ಲೆಲ್ಲೋ ಅಗ್ನಿ ಕಿಡಿ ಕಾರಿದಂತೆ ಝೆನ್, ತಾವೋ ಉಕ್ತಿಗಳನ್ನು ಭಗವದ್ಗೀತದ ಶ್ಲೋಕಗಳನ್ನು ಉಚ್ಚರಿಸಿಬಿಡಬಲ್ಲ. ಹೀಗೊಂದು ಸಾಮಾನ್ಯ ದಿನಗಳ ನಡುವೆ “ಅಪ್ಪ”ನನ್ನು ನೋಡಿಕೊಳ್ಳುವ ವಿದ್ಯಾರ್ಥಿ ಪರೀಕ್ಷೆ ಬರೆಯುವ ಸಲುವಾಗಿ ಮನೆಯಿಂದ ಹೊರಗಿರಬೇಕಾಗುತ್ತದೆ, ಇರಾ ಆ ಒಂದು ದಿನದ ಮಟ್ಟಿಗೆ ಅಪ್ಪನನ್ನು ತನ್ನ ಮನೆಗೆ ಕರೆದೊಯ್ಯಲು ಸ್ವತಃ ಕಾರ್ ತರುತ್ತಾಳೆ, ಕಾರಿನಲ್ಲಿ ತಂದೆಯನ್ನು ತನ್ನ ಮನೆಗೆ ಕರೆದೊಯ್ಯುವ ಮಾರ್ಗದಲ್ಲಿ “ಅಪ್ಪ’ ಟ್ರಾಪಿಕ್ ಸಂದಣಿಯಲ್ಲಿ ಅಂಗಡಿಗಳ ಮುಂದೆ ಸಾಗುತ್ತಿದ್ದ ಸಾಕಿದ ಆನೆಯೊಂದನ್ನು ನೋಡಿ ಮೋಹಿತನಾಗಿಬಿಡುತ್ತಾನೆ, ಈ ನಡುವೆ ಮಗಳ ಶಾಲಾ ನಾಟಕಕ್ಕೆ ನಿರ್ದಿಷ್ಟ ಬಟ್ಟೆ ಖರೀದಿ ಮಾಡುವ ಅನಿವಾರ್ಯತೆಗೆ ಸಿಲುಕುವ ಇರಾ ಅಪ್ಪನನ್ನು ಕಾರಿನಲ್ಲಿ ಕೂರಿಸಿ ಮಾರುಕಟ್ಟೆಯ ಗೊಂದಲವನ್ನು ಪ್ರವೇಶಿಸುತ್ತಾಳೆ, ಇತ್ತ ಅಪ್ಪನ ಆನೆಯೆಂಬ ಆಸೆಯು ಅದೇ ಕಾರಿನ ಮುಂದೆ ಸುಳಿದಾಡುತ್ತದೆ, ಮರೆವಿನ ಹೊಡೆತಕ್ಕೆ ಸಿಲುಕಿ ಮಗುವಿನ ಮನಸಿನವನಾದ ಅಪ್ಪ ಅಂತರ್ಯದ ಆಸೆಯನ್ನು ಅನುಸರಿಸಿ ಆನೆಯ ಜೊತೆಗೆ ಕಳೆದುಹೋಗುತ್ತಾನೆ.
ಸ್ವತಃ ಕಾರ್ಪೋರೇಟ್ ಜನರಿಗೆ ಸ್ಪರ್ಧಾತ್ಮಕ ಒತ್ತಡದ ಇಹದಲ್ಲಿಯ ಭೂತ-ಭವಿಷ್ಯತ್’ಗಳನ್ನು ಕಳೆದುಕೊಂಡು ವರ್ತಮಾನದಲ್ಲಿ ಹಗುರಾಗುವ ಧ್ಯಾನ, ಯೋಗದ ಬಗ್ಗೆ ತರಬೇತಿ ನೀಡಬಲ್ಲಷ್ಟು ಜಾಣೆ ಇರಾ ಸಂದಿಗ್ಧಕ್ಕೆ ಸಿಲುಕಿ ಬಿಡುತ್ತಾಳೆ. ಕುಟುಂಬದ ಬಗ್ಗೆ ಆಪಾರ ಪ್ರೀತಿಯುಳ್ಳ ಆಕೆಯ ಗಂಡ, ಕಿರಿಯ ಮಗಳು ದೇವಿಕಾ, ಪೋಲಿಸರೊಂದಿಗೆ ಹುಡುಕಾಟಕ್ಕೆ ಇಳಿಯುತ್ತಾರೆ. ಹುಡುಕಾಡುತ್ತಾ, ಹುಡುಕಾಡುತ್ತಾ ತಮ್ಮ ಒಳಗಿನ ಅಪ್ಪನೊಂದಿಗೆ ಬೆಸೆದ ನೆನಪುಗಳಿಗೆ ಇರಾ ಮತ್ತು ದೇವಿಕಾ ಮುಖಾಮುಖಿಯಾಗುತ್ತಾರೆ.
ಆನೆಯೊಂದಿಗೆ ಹಿಂಬಾಲು ಬೀಳುವ ಅಜ್ಜನನ್ನು ನಗರದ ಅಮಾನವೀಯತೆಯ ಕಂಡುಂಡ ಮಾವುತ ಹೆದರೆದುರುತ್ತಲೇ ಆನೆಯ ಮೇಲೆ ಪುಟ್ಟ ಮಗಳೊಂದಿಗೆ ಕೂರಿಸಿಕೊಂಡು ತಾನು ಬೀಡು ಬಿಟ್ಟಿದ್ದ ಗುಡಿಸಿಲಿಗೆ ಕರೆತರುತ್ತಾನೆ. ಕನ್ನಡ ಮರಾಠಿ ಬೆಸೆದು ಮಾತನಾಡುವ ದ್ವಿಭಾಷಿ ಮಾವುತನ ಹೆಂಡತಿ ಚನ್ನಮ್ಮ ಹಸಿವಾಗಿದೆ ಎನ್ನುವ ಅಜ್ಜನ ಸನ್ನೆಯೊಂದಕ್ಕೆ ಪ್ರತಿಕ್ರಿಯಿಸುವ ರೀತಿ ಹೃದಯಸ್ಪರ್ಶಿ ಅನುಭಾವದ ಅಲೆಯೊಂದನ್ನು ನೋಡುಗರ ಮನಸಿನಲ್ಲಿ ತುಯ್ದು ಹೋಗುತ್ತದೆ. ಅಜ್ಜನ ಮುಗ್ಧತೆಗೆ ಮರುಳಾಗುವ ಎರಡು ಮಕ್ಕಳ ತಾಯಿ, ಕನ್ನಡದ ಜೋಗುಳವ ಸುಶ್ರಾವ್ಯವಾಗಿ ಹಾಡಿ ಮಕ್ಕಳ ಮಲಗಿಸುವ ಕನ್ನಡತಿ ಚನ್ನಮ್ಮ ಮಾವುತ ಗಂಡನ ನಿರಾಕರಣೆಯನ್ನು ಲೆಕ್ಕಿಸದೇ “ಈ ಅಜ್ಜನ ಅದ್ಯಾವ ಸಾಲ ನಮ್ಮ ಮೇಲೆ ಇದಿಯೋ! ಅದು ತೀರೋವರ್ಗು ನಮ್ಮನೇಲಿ ಇರ್ತಾನ್ ಬಿಡು” ಎಂದು ನಿಸೂರಾಗುತ್ತಾಳೆ.
ಇರಾ, ದೇವಿಕಾ, ಪೋಲಿಸರು ಅಪ್ಪನ ಜಾಡು ಹಿಡಿದು ಮಾವುತನ ತಾತ್ಕಾಲಿಕ ಟೆಂಟ್ ವರೆಗೂ ಬರುತ್ತಾರ? ಅಪ್ಪ ಯಾರೊಂದಿಗೆ ಉಳಿದ ಎನ್ನುವುದೆಲ್ಲಾ ಸಿನಿಮಾ ನೋಡಿಯೇ ತಿಳಿಯಬೇಕು. ಆಲ್’ಜೈಮರ್ ಮತ್ತು ವೃದ್ಧಾಪ್ಯ ಎನ್ನುವುದು ಸಿನಿಮಾ ಕಥೆಯ ಮೂಲ ತಿರುಳಾದರೂ ನಗರ ಜೀವನ, ಕುಟುಂಬ, ಸಂಬಂಧಗಳ ನೇಯ್ಗೆ, ಮೂರನೇ ಜನರೇಶನ್ನಿನ ಪ್ರತಿಕ್ರಿಯೆಗಳು, ಹಳ್ಳಿ ಜನರ ಮುಗ್ಧತೆ, ವೃದ್ಧರ ನಿಜದ ಕಷ್ಟಗಳು ಎಲ್ಲವನ್ನು ಅಲ್ಲಲ್ಲಿ ಸ್ಪಷ್ಟವಾಗಿ ನಿರೂಪಿಸುತ್ತಾ, ಕೆಲವೊಮ್ಮೆ ರೂಪಕಗಳಲ್ಲಿ, ತಾವೋ, ಝೆನ್, ಉಪನಿಷತ್, ಭಗವದ್ಗೀತೆ ಉಕ್ತಿಗಳಲ್ಲಿ ಅಡಗಿಸುತ್ತಾ ಸಾಗುವ ಸಿನಿಮಾದ ಜೊತೆ ನಮ್ಮೊಳಗೂ ಒಂದು ಹುಡುಕಾಟದ ಅನುಭೂತಿ ಉಂಟುಮಾಡುವಷ್ಟು ಸಶಕ್ತವಾದ ನಿರೂಪಣೆ ಇದೆ.

2016ರಲ್ಲಿ ಕ್ರೌಡ್ಫಂಡಿಂಗ್ ನೆರವಿನೊಂದಿಗೆ ಬಿಡುಗಡೆಯಾದ ಈ ಸಿನಿಮಾ 2013ರಲ್ಲೇ ಜರ್ಮನ್ ಚಿತ್ರೋತ್ಸವದಲ್ಲಿ ಭಾಗವಹಿಸಿತ್ತು, ಅಲ್ಲದೇ ಬೇರೆ-ಬೇರೆ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಸಾಕಷ್ಟು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ. ಈ ಸಿನಿಮಾದ ನಿರ್ದೇಶಕರು ಸುಮಿತ್ರಾ ಭಾವೆ ಮತ್ತು ಸುನಿಲ್ ಸುಕ್ತಂಕರ್ ಜೋಡಿ ಮರೆವಿನ ಹೊಡೆತಕ್ಕೆ ಸಿಲುಕುವ ವಯೋವೃದ್ಧನ ಪಾತ್ರದಲ್ಲಿ ಮಗುವಿನಲ್ಲಿ ಮಗುವಂತೆ, ಶ್ಲೋಕಗಳು ನೆನಪಾದಗಲೆಲ್ಲಾ ತೇಜಸ್ಸಿನಿಂದ ಕಂಗೊಳಿಸುವ ಸಾತ್ವಿಕನಂತೆ ಪರಿವರ್ತನೆ ಹೊಂದುವ ಮೋಹನ್ ಅಗಾಶೆ ವೀಕ್ಷಕರು ಸಿನಿಮಾದ ಜೊತೆಗೆ ಕಳೆದುಹೋಗಲು ಸಹಾಯ ಮಾಡುತ್ತಾರೆ. ಅವರ ಮಗಳ ಪಾತ್ರದಲ್ಲಿರುವ ಇರಾವತಿ ಹರ್ಷೆ ಅಪ್ಪ ತನ್ನಿಂದಲೇ ಕಳೆದು ಹೋದ ಎನ್ನುವ ಪಶ್ಚಾತ್ತಾಪದಲ್ಲಿ, ಕಳೆದುಕೊಂಡ ವಿಷಾದದಲ್ಲಿ, ಅಪ್ಪ ಮತ್ತು ಮಕ್ಕಳ ನಡುವೆ ಇರುವ ಕಂದಕವ ದಾಟುವ ಸುಳಿಗೆ ಸಿಲುಕಿ ತಳಮಳಗುಟ್ಟುವ ದೃಶ್ಯಗಳಲ್ಲಿ ಮನ ಸೆಳೆಯುತ್ತಾರೆ. ಆನೆಯ ಹಿಂದೆ ಬರುವ ಅನಾಮಿಕ ಅಜ್ಜನಲ್ಲಿ ಮತ್ತೊಂದು ಮಗುವನ್ನು ಕಂಡುಕೊಳ್ಳುವ ದೇಸಿ ಸೊಗಡಿನ ಮಾವುತನ ಹೆಂಡತಿಯಾಗಿ ಪಾತ್ರವೇ ತಾನಾಗಿರುವ ಅಮೃತಾ ಸುಭಾಷ್ ಅವರ ಹೃದ್ಯ ಸಹಜ ಅಭಿನಯಕ್ಕಾಗಿ 2014ರಲ್ಲಿ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಆಶ್ಚರ್ಯವೇನಲ್ಲ.
ಈ “ಅಸ್ತು” ಸಿನಿಮಾದ ಕಲಾವಿದರ ಅಭಿನಯ ಬರೆದು ಹೊಗಳುವಂತದ್ದಲ್ಲ, ನೋಡಿ ಅನುಭಾವಿಸಬೇಕಾದದ್ದು. ಮಾವುತನ ಹೆಂಡತಿಯ ಕನ್ನಡದ “ಜೋ ಜೋ ಮಲಗಯ್ಯ ಮಾಲಿಂಗ ದೇವ” ಎನ್ನುವ ಜೋಗುಳಕ್ಕೆ ತಲೆದೂಗಿದರೆ ನೀವು ಹೇಳಿ-ಅಸ್ತು. ಅಪ್ಪನನ್ನು ಘನಪಾಠಿ ಅಪ್ಪನನ್ನಾಗೇ ನೋಡುತ್ತಿದ್ದ ವಿದ್ಯಾವಂತೆ ಮಗಳಿಗೆ “ಕೂಸನ್ನು” ಸರಿಯಾಗಿ ನೋಡ್ಕೊಳವ್ವ ಎನ್ನುವ ಒಂದು ಮಾತಿನಲ್ಲೇ ಇಡೀ ಸಮಸ್ಯೆಗೆ ಪರಿಹಾರವೊಂದನ್ನು ಹುಡುಕಿದ ಮಾವುತನ ಹೆಂಡತಿ ಚನ್ನಮ್ಮನ ಸಹಜ ಜಾಣ್ಮೆಗೆ ನೀವೂ ಹೇಳಿ ಅಸ್ತು. ಕಟ್ಟ ಕಡೆಗೊಮ್ಮೆ ಅಜ್ಜ “ಆಯೀ” ಎಂದಾಗ ನಿಮ್ಮ ಕಣ್ಣು ತುಂಬಿದರೆ ನೀವೇ ಹೇಳಿಬಿಡಿ ಅಸ್ತು. ಚಿತ್ರವನ್ನು ಅಮೇಜಾನ್ ಪ್ರೈಮ್ ನಲ್ಲಿ ನೋಡಬಹುದು.

‍ಲೇಖಕರು nalike

May 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. Dhanyakumar Minajagi

  “ಅಸ್ತು “ಎಂಬ ಮರಾಠಿ ಚಿತ್ರದ ಕುರಿತು ಮಾಡಿದ ವಿಶ್ಲೇಷಣೆ ಓದಿದರೆ, ಚಿತ್ರ ನೋಡಿದ ಅನುಭವ ಉಂಟಾಯಿತು.‌ ಈ ಚಿತ್ರ ಕುರಿತು ಶ್ರೀ ಪದ್ಮರಾಜ ದಂಡಾವತಿ ಅವರು ಪ್ರಜಾವಾಣಿಯ ತಮ್ಮ ಅಂಕಣದಲ್ಲಿ ಬರೆದಿದ್ದರು. ಅಂದಿನಿಂದ ಇಂದಿನ ತನಕ ಈ ಚಿತ್ರ ನೋಡಬೇಕೆಂಬ ತುಡಿತ ಹೆಚ್ಚುತ್ತಲೇ ಇದೆ. ಯು- ಟ್ಯೂಬ್ನಲ್ಲಿ ಹುಡುಕಿದೆ.ಆದರೆ ಪೂರ್ಣಪ್ರಮಾಣದ ಚಿತ್ರ ಸಿಗಲಿಲ್ಲ.‌ಒಂದು ಸಂದರ್ಶನ ಮತ್ತು ಚೆನ್ಲಮ್ಮನ ‌’ಕಾನಡಿ’ ಲಾಲಿ ಪದ ಮಾತ್ರ ಸಿಕ್ಕಿತು.‌ ಬೆಂಗಳೂರಿನ ಯಾವುದಾದರೂ ಫಿಲ್ಮ
  ಸೊಸೈಟಿ ಯವರು ಕೃಪೆಮಾಡಿ ಈ ಚಿತ್ರವೀಕ್ಷಿಸುವ ಅವಕಾಶ ಕಲ್ಪಿಸಿ ಕೊಡಲಿ.‌
  ವಂದನೆಗಳೊಂದಿಗೆ,
  ಧನ್ಯಕುಮಾರ ಮಿಣಜಗಿ.‌

  ಪ್ರತಿಕ್ರಿಯೆ
 2. Santhoshkumar LM

  ತುಂಬಾ ಚೆನ್ನಾಗಿ ಬರೆದಿದ್ದೀರ ಸರ್. “ಅಸ್ತು” ಅಷ್ಟು ಒಳ್ಳೆಯ ಸಿನಿಮಾ ಕೂಡ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Santhoshkumar LMCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: