ಆನಂದ ಸೌದಿಗೆ ಪ್ರತಿಷ್ಠಿತ ‘ರಾಮನಾಥ್ ಗೋಯೆಂಕಾ ಪ್ರಶಸ್ತಿ’

ವಿಜಯಭಾಸ್ಕರ ರೆಡ್ಡಿ

**

‘ಇಂಡಿಯನ್ ಎಕ್ಸಪ್ರೆಸ್’ ಸಂಸ್ಥೆ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆ.

ಪಿಎಸೈ ಅಕ್ರಮ ತನಿಖಾ ವರದಿಗಳಿಗೆ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಆಯ್ಕೆ.

**

ಭಾರತೀಯ ಪತ್ರಿಕಾರಂಗದ ಭೀಷ್ಮ, ಪ್ರತಿಷ್ಠಿತ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಸಂಸ್ಥಾಪಕ ದಿ. ರಾಮನಾಥ ಗೋಯೆಂಕಾ ಅವರ ಸ್ಮರಣಾರ್ಥ ನೀಡಲಾಗುವ, ‘ರಾಮನಾಥ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ-2022’ನೇ ಸಾಲಿನ ಪ್ರಶಸ್ತಿಗೆ ‘ಕನ್ನಡಪ್ರಭ’ ಪತ್ರಿಕೆಯ ಯಾದಗಿರಿ ಜಿಲ್ಲೆಯ ಪ್ರಧಾನ ವರದಿಗಾರ ಆನಂದ ಮಧುಸೂದನ ಸೌದಿ ಆಯ್ಕೆಯಾಗಿದ್ದಾರೆ. ಒತ್ತಡಗಳ ನಡುವೆ ವೃತ್ತಿ ಗುಣಮಟ್ಟ ಕಾಯ್ದುಕೊಂಡು, ಸಾರ್ವಜನಿಕರಲ್ಲಿ ನಂಬಿಕೆ, ಪರಿಣಾಮ ಬೀರುವ ಪತ್ರಕರ್ತರ ಧೈರ್ಯ ಮತ್ತು ಬದ್ಧತೆ ಗುರುತಿಸಿ, 2005 ರಿಂದ ಇಂಡಿಯನ್ ಎಕ್ಸಪ್ರೆಸ್ ಸಂಸ್ಥೆಯ ರಾಷ್ಟ್ರಮಟ್ಟದ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ದೇಶದ ವಿವಿಧೆಡೆಯಿಂದ ಬಂದಿದ್ದ ಅನೇಕ ವರದಿಗಳ ಪೈಕಿ ತೀರ್ಪುಗಾರರು ಆನಂದ ಎಂ. ಸೌದಿಯವರ “ಪಿಎಸೈ ಅಕ್ರಮ” ಸುದ್ದಿಯನ್ನು ಪ್ರಾದೇಶಿಕ ಭಾಷಾ ವಿಭಾಗದ ಪ್ರಶಸ್ತಿಯಲ್ಲಿ ಆಯ್ಕೆ ಮಾಡಿದ್ದಾರೆ. ರಾಜ್ಯ, ರಾಷ್ಟ್ರವ್ಯಾಪಿ ಸದ್ದು ಮಾಡಿದ, ‘ಕನ್ನಡಪ್ರಭ’ ಬಯಲಿಗೆಳೆದ 545 ಹುದ್ದೆಗಳ ಪಿಎಸೈ ನೇಮಕ ಹಗರಣದ ಕುರಿತ ಸರಣಿ ತನಿಖಾ ವರದಿಗಳು ತೀರ್ಪುಗಾರರ ಗಮನ ಸೆಳೆದಿವೆ. ಪ್ರಶಸ್ತಿಯು 1 ಲಕ್ಷ ರು.ಗಳು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಕೇಂದ್ರ ಚುನಾವಣಾ ಆಯೋಗದ ನಿವೃತ್ತ ಆಯುಕ್ತ ಡಾ. ಎಸ್. ವೈ. ಖುರೇಶಿ, ನ್ಯಾಯಶಾಸ್ತ್ರಜ್ಞ ಹಾಗೂ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರರಾದ ಬಿ. ಎನ್. ಶ್ರೀಕೃಷ್ಣ, ಮಖನಲಾಲ್ ಚತುರ್ವೇದಿ ಪತ್ರಿಕೋದ್ಯಮ ಮತ್ತು ಸಂವಹನ ರಾಷ್ಟ್ರೀಯ ವಿವಿಯ ಡೀನ್ ಕೆ. ಜಿ. ಸುರೇಶ ಹಾಗೂ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ನ ಫೌಂಡಿಂಗ್ ಡೀನ್ ಹಾಗೂ ಇಂಟರನ್ಯಾಷನ್ ಇನ್ಸಟಿಟ್ಯೂಟ್ ಫಾರ್ ಹೈಯರ್ ಎಜುಕೇಶನ್ ರೀಸರ್ಚ್ ಆ್ಯಂಡ್ ಕೆಪಾಸಿಟಿ ಬಿಲ್ಡಿಂಗ್ ನಿರ್ದೇಶಕರಾದ ಪ್ರೊ. (ಡಾ.) ಸಿ. ರಾಜಕುಮಾರ್ ಅವರು ತೀರ್ಪುಗಾರರಾಗಿದ್ದರು.

ಇದೇ ಮಾರ್ಚ್ 19 ರ ಮಂಗಳವಾರ, ನವದೆಹಲಿಯಲ್ಲಿರುವ ಐಟಿಸಿ ಮೌರ್ಯ ಹೋಟೆಲ್‌ನ ಕಮಲ ಮಹಲ್‌ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ನಡೆದ ಸಮಾರಂಭದಲ್ಲಿ ಕೇಂದ್ರ ರಸ್ತೆ, ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಖಾತೆ ಸಚಿವ ನಿತಿನ್‌ ಗಡ್ಕರಿ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು . ಪಿಎಸೈ ಅಕ್ರಮ ಕುರಿತು ಆನಂದ ಎಂ. ಸೌದಿ ಅವರ ತನಿಖಾ ವರದಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದವು. ಅಂದಿನ ರಾಜ್ಯ ಬಿಜೆಪಿ ಸರ್ಕಾರದ ಮಜುಗರಕ್ಕೀಡಾಗಿಸಿ, ವಿಧಾನಸಭೆ ಹಾಗೂ ಮಂಡಲದ ಅಧಿವೇಶನದಲ್ಲಿ ಭಾರಿ ಸದ್ದು ಮಾಡಿದ್ದವು. ಸರ್ಕಾರ ಸಿಐಡಿ ತನಿಖೆಗೆ ಇದನ್ನು ಒಪ್ಪಿಸಿತ್ತು. ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್, ಡಿವೈಎಸ್ಪಿ ಶಾಂತಕುಮಾರ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಹಾಗೂ ಕಾಂಗ್ರೆಸ್ ಮುಖಂಡ ಆರ್. ಡಿ. ಪಾಟೀಲ್ ಸೇರಿದಂತೆ 107 ಜನರ ಬಂಧನಕ್ಕೆ ಕಾರಣವಾಗಿತ್ತು.

2022 ಜನವರಿಯಿಂದ ಸತತ ಒಂದು ವರ್ಷ, ಯಾದಗಿರಿ, ಕಲಬುರಗಿ, ಬೆಂಗಳೂರು, ಧಾರವಾಡ ಸೇರಿದಂತೆ ಕನ್ನಡಪ್ರಭದಲ್ಲಿ ವಿವಿಧೆಡೆಯಿಂದ ಪಿಎಸೈ ಅಕ್ರಮ ಕುರಿತು ಒಂದು ಸಾವಿರಕ್ಕೂ ಹೆಚ್ಚು ಸುದ್ದಿಗಳು, ಪ್ರಖರ ಸಂಪಾದಕೀಯಗಳು ಪ್ರಕಟಗೊಂಡಿವೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 2022 ನೇ ಸಾಲಿನಲ್ಲಿ ಅತ್ಯುತ್ತಮ ತನಿಖಾ ವರದಿಗಾಗಿ ಆನಂದ ಎಂ. ಸೌದಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಗೌರವ ಸೌದಿಯವರಿಗೆ ಸಂದಿದೆ. ಆನಂದ್ ಅವರು ಯಾದಗಿರಿಯ ಖ್ಯಾತ ತಜ್ಞವೈದ್ಯರಾಗಿದ್ದ ದಿ. ಡಾ. ಮಧುಸೂದನ ಸೌದಿಯವರ ಪುತ್ರ. ಹಿರಿಯ ಸಹೋದರ ಅಪ್ಪಾರಾವ್ ಸೌದಿ, ಕನ್ನಡಪ್ರಭ ಪತ್ರಿಕೆಯ ವಿಶೇಷ ವರದಿಗಾರರಾಗಿದ್ದು, ಬೀದರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 22 ವರ್ಷಗಳಿಂದ ಪತ್ರಿಕಾರಂಗದಲ್ಲಿರುವ ಆನಂದ ಎಂ. ಸೌದಿ, ಕನ್ನಡಪ್ರಭದಲ್ಲಿ ಸುದ್ದಿ ಸಂಗ್ರಾಹಕರಾಗಿ ವೃತ್ತಿ ಜೀವನ ಆರಂಭಿಸಿ, ದೂರದರ್ಶನ ಚಂದನ, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ದಿ ಸ್ಟೇಟ್ ವೆಬ್ ನ್ಯೂಸ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಹೈದರಾಬಾದ್, ಬಳ್ಳಾರಿ, ಕಲಬುರಗಿ ನಂತರ ಪ್ರಸ್ತುತ ಯಾದಗಿರಿ ಜಿಲ್ಲೆಯ ಕನ್ನಡಪ್ರಭ ಪತ್ರಿಕೆಯ ಪ್ರಧಾನ ವರದಿಗಾರರಾಗಿದ್ದಾರೆ. ಬಳ್ಳಾರಿ ಅಕ್ರಮ ಗಣಿಗಾರಿಕೆ, ಏರ್ಪೋರ್ಟ್ ವಿರುದ್ಧದ ರೈತರ ಹೋರಾಟ, ಗಣಿಗಳ್ಳರಿಂದ ರಾಜ್ಯ ಗಡಿಭಾಗದ ಒತ್ತುವರಿ ಸುದ್ದಿಗಳು ಸಂಚಲನ ಮೂಡಿಸಿದ್ದರೆ, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕೊಂಚವಾರಂ ಸಮೀಪ ನವಜಾತ ಹೆಣ್ಣು ಶಿಶುಗಳ ಸಾವಿನ ಪ್ರಕರಣ, ಗುಜ್ಜರ್ ಕೀ ಶಾದಿ, ಗುಲ್ಬರ್ಗ ವಿವಿ ಪಿಎಚ್ಡಿ ಹಗರಣ, ರೈತರ ಸಾಲಮನ್ನಾ ಹಣ ವಾಪಸ್ ಕುರಿತ ಹಾಗೂ ಯಾದಗಿರಿ ಮೆಡಿಕಲ್ ಕಾಲೇಜು ಸ್ಥಾಪನೆ ಬಗೆಗಿನ ಸರಣಿ ವರದಿಗಳು ಜನಾಂದೋಲನ ರೂಪಿಸಿದ್ದವು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ, ಕೊರೋನಾ ಕಾಲದ ಸಂಕಷ್ಟಗಳು, ಕೋವಿಡ್ ನಕಲಿ ಲಸಿಕಾಕರಣ ಹಾಗೂ ಕೋವಿಡ್ ಪರಿಹಾರ ಚೆಕ್ ಬೌನ್ಸ್ ಮುಂತಾದ ಸುದ್ದಿಗಳು ಸರ್ಕಾರದ ಕಣ್ತೆರೆಸಿದ್ದವು.

‍ಲೇಖಕರು Admin MM

March 20, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: