ಆನಂದ್ ಋಗ್ವೇದಿ ಪ್ರಶ್ನೆ- ರಾಧಾ ಶ್ಯಾಮರು ಪ್ರೇಮಿಗಳೇ?

ಪ್ರೇಮವೂ ಪ್ರೇಮವೇ!?

ಡಾ ಆನಂದ್ ಋಗ್ವೇದಿ

ತೂಗು ಮಂಚದಲ್ಲಿ ಕೂತು
ಮೇಘ ಶ್ಯಾಮ ರಾಧೆಗಾತು
ಹೇಳುತಿರುವ ಏನೋ ಮಾತು
ರಾಧೆ ನಾಚುತ್ತಿದ್ದಳು…!

ಎಚ್ಚೆಸ್ವಿಯವರ ಈ ಹಾಡು ಮನಸ್ಸನ್ನು ಮುದಗೊಳಿಸುತ್ತಿದ್ದಂತೇ, ಪ್ರಶ್ನೆಯೊಂದು ನನ್ನ ಮನದಲ್ಲಿ ಒಡಮೂಡುತ್ತದೆ.

ರಾಧಾ ಶ್ಯಾಮರು ಪ್ರೇಮಿಗಳೇ? ಪ್ರಣಯದ ಮಧುವ ಯಾಚಿಸಿ ಹೀರಿ ಪಡೆದವರೇ? ಧುಮುಗುಡುವ ಮುಖವನೆತ್ತಿ ಪರಸ್ಪರ ಕೊಟ್ಟುಕೊಂಡವರೇ!?

ಈ ತೆರನಾದ ಪ್ರಶ್ನೆಗಳೊಂದಿಗೆ ಎಂದೂ ಉತ್ತರ ಸಿಗದ ಪ್ರಶ್ನೆಗಳನ್ನು ಕೃಷ್ಣನನ್ನು ಜರೆಯುವವರು ಎಸೆಯತೊಡಗುತ್ತಾರೆ. ‘ನೂರಾರು ಗೋಪಿಕೆಯರೊಂದಿಗೆ ರಾಸಲೀಲೆ ಆಡಿದ ಆ ಗೋಪಬಾಲನಿಗೆ ನೈತಿಕತೆ ಎಂಬುದಿತ್ತೇ!?’ ‘ತನ್ನನ್ನು ಪ್ರೇಮಿಸಿದ್ದ ಆ ರಾಧೆಯನ್ನು ಮರೆತಿದ್ದು ಅಪರಾಧವಲ್ಲವೇ!?’ ‘ಎಲ್ಲವನ್ನೂ ತನ್ನ ಲಾಭಕ್ಕೆ ಬಳಸಿಕೊಂಡ ಆ ಕಪಟಿ ಮಹಾತ್ಮನಾಗುವುದು ಹೇಗೆ!?’

‘ಸರ್ವಂ ಕೃಷ್ಣಾರ್ಪಣಮಸ್ತು’ ಎನ್ನುವ ‘ಕೇಶವಗಚ್ಛತಿ’ ಎಂದೇ ನಂಬಿ ಉಪಾಸಿಸುವವರೂ ಎದುರಾಳಿಗಳ ಈ ತಾರ್ಕಿಕ ಪ್ರಶ್ನೆಗಳ ಬಾಣಗಳಿಗೆ ಪ್ರತ್ಯುತ್ತರಿಸಲಾರದೇ ತಲ್ಲಣಿಸಿಬಿಡ್ತಾರೆ!

ನನ್ನ ಇಷ್ಟದ ಮಹಾಕಾವ್ಯ ಮಹಾಭಾರತದಲ್ಲಿರುವ ಎಲ್ಲಾ ಪಾತ್ರಗಳೊಂದಿಗೆ ತಾದ್ಯಾತ್ಮವಿರುವ ನನಗೆ ‘ಕೃಷ್ಣ’ ಅತ್ಯಂತ ಪ್ರೀತಿಯ ಪಾತ್ರ. ‘ತಿಳಿಯ ಹೇಳುವೆ ಕೃಷ್ಣ ಕತೆಯನು…’ ಎಂದು ಇಡೀ ಮಹಾಭಾರತವನ್ನೇ ಕೃಷ್ಣ ಕತೆಯಾಗಿಸಿದ ಕುಮಾರವ್ಯಾಸನ ಭಕ್ತಿ ನನಗಿಲ್ಲ. ಕೃಷ್ಣನ ಭಕ್ತರು ಆತನ ಬೇರೆ ನಾಮಗಳಾದ ಕೇಶವ, ಮಾಧವ, ನಾರಾಯಣ, ಗೋವಿಂದ, ವಿಷ್ಣು, ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷಿಕೇಶ, ದಾಮೋದರ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ, ಅಚ್ಯುತ, ಅನಂತ,… ಮೊದಲಾದ ಇಪ್ಪತ್ನಾಲ್ಕು ಹೆಸರುಗಳನ್ನು ದಿನವೂ ಪಠಿಸಿದರೂ, ಸಹಸ್ರ ನಾಮಗಳನ್ನು ಉಗ್ಗಡಿಸಿದರೂ ಕೃಷ್ಣನ ನಿಜ ಸ್ವರೂಪ ಅರ್ಥವಾಗದು.

ಕೃಷ್ಣ ರಾಧೆಯರನ್ನು ಅಮರ ಪ್ರೇಮಿಗಳಂತೆ ಭಾವಿಸಿ ಚಾಮರಾಜನಗರದ ಶಿವಪ್ಪನವರು ನೂರಾರು ಹಾಡುಗಬ್ಬಗಳನ್ನೇ ರಚಿಸಿದ್ದಾರೆ. ಅವರಂತೆಯೇ ರಾಧಾಕೃಷ್ಣರ ಪ್ರೇಮವನ್ನು ಬಣ್ಣಿಸುವ ಹಲವು ಕವಿತೆಗಳು ಕನ್ನಡವಷ್ಟೇ ಅಲ್ಲ ಬಹುತೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಆದರೂ ‘ಲೋಕದ ಕಣ್ಣಿಗೆ ಹೆಣ್ಣು ಮಾತ್ರವಾದ ರಾಧೆ ತಮಗೆ ಕೃಷ್ಣನ ತೋರಿದ ಕಣ್ಣು’ ಎಂದು ಕವಿ ಎಚ್ಚೆಸ್ವಿ ಹೇಳುವಾಗ ಅವರಿಬ್ಬರೂ ಗಂಡು ಹೆಣ್ಣು ಎಂಬ ಲಿಂಗದ ಸೀಮಿತಾರ್ಥ ಮೀರಿದವರು ಎಂದೆನ್ನಿಸದೇ?

ನಿಜ, ಕೃಷ್ಣ ಎಂದರೆ ಗಂಡಷ್ಟೇ ಅಲ್ಲ, ರಾಧೆ ಹೆಣ್ಣು ಅಲ್ಲ. ಅವೆರಡೂ ಪುರುಷ ಪ್ರಕೃತಿಯಂತಹ ಅಮೂರ್ತ ಮೂರ್ತಿಗಳು, ಸಂಚಾರಿ ಮತ್ತು ಸ್ಥಾಯಿ ಭಾವಗಳು. ರಾಸಲೀಲೆ ಎಂಬ ಆಧ್ಯಾತ್ಮದ ತುರೀಯ ಅನುಭವ ನೀಡುವ ನೃತ್ಯದ ಪ್ರಕಾರದಲ್ಲಿ ಗೋಪಿಕೆಯರೊಂದಿಗೆ ನರ್ತಿಸಿದ ಕೃಷ್ಣ ಮನ ಮುಟ್ಟದೇ ಕೇವಲ ತನುವ ಮುಟ್ಟಿದನೇ!? ತನುವಿಗೆ (ತೊಗಲು… ಎಂಬ ಪಂಚೇದ್ರಿಯಗಳಿಗೆ) ಮಾತ್ರ ಅರ್ಥವಾಗುವ ಪ್ರೇಮವೂ ಪ್ರೇಮವೇ!?

ಕಾಮಿಸದೇ ಪ್ರೇಮ ದೊರಕದು ನಿಜ. ಕಾಮಿಸುವುದೆಂದರೆ ಕೇವಲ ಸುರತವೇ!? ಸು ರಥವೇರಿದ ಈ ಪ್ರೇಮ ವಿಹಂಗಮ ಯಾನಕ್ಕೆ ದೇಹವೊಂದೇ ಸಾಕೇ? ಮನದರಸ ಮನದನ್ನನ ಮನವರಿತ ಮಾನವಂತೆಯ ಮನದ ತುಡಿತ ತುಯ್ತವನ್ನು ಸಾಮಾನ್ಯ ಪರಿಭಾಷೆ ಅರ್ಥೈಸದು. ಎಂದೇ ಪ್ರತಿ ಹೆಣ್ಣಿನೊಳಗೂ ಇರುವ ರಾಧೆಗೆ ತನ್ನ ವಿವಾಹ, ಪತಿ ಹೊರತೂ ಎಂದೂ ಸಿಕ್ಕದ ದಕ್ಕದ ಕೃಷ್ಣನ ಬಗ್ಗೆಯೇ ಮೋಹ ವ್ಯಾಮೋಹ. ಭಾಗವತದ ಪ್ರಕಾರ – ಸತ್ಯವ್ರತನನ್ನು ಮದುವೆಯಾಗಿದ್ದ – ರಾಧೆಗೂ ಕೃಷ್ಣ ಸಿಕ್ಕದ ದಕ್ಕದ ಆದರೆ ಎಂದಿಗೂ ತೀರದ ಮೋಹದ ಮೋಹನ ಅಲ್ಲವೇ?

‍ಲೇಖಕರು Avadhi

May 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. ರಾಘವೇಂದ್ರ ಜೋಶಿ

  ‘ರಾಧಾ ಶ್ಯಾಮರು ಪ್ರೇಮಿಗಳೇ?’
  ಋುಗ್ವೇದಿಗಳ ಪ್ರಶ್ನೆ ಕುತೂಹಲಕಾರಿಯಾಗಿದೆ. ಹಾಗೆ ನೋಡಿದರೆ, ರಾಧಾಶ್ಯಾಮರ ಕತೆಗಳು ಜನಪದರಿನಲ್ಲಿ ಸಾಕಷ್ಟಿವೆ. ಆದರೆ ಇಂಥ ಪರಿಣಯ ಭಾವದ ಕತೆಗಳ ಮಧ್ಯೆ ‘ಗೀತೆ’ಯಲ್ಲಿ ಕೃಷ್ಣ ನಿಜಕ್ಕೂ ಹೇಳಿದ್ದೇನು? ಎಂಬುದು ಮುಸುಕಾಗಿ ಹೋಗಿರುವದು ದುರದೃಷ್ಟಕರ ಅಂತನಿಸುತ್ತದೆ.

  ಕೃಷ್ಣನ ಬಗ್ಗೆ ಆಧ್ಯಾತ್ಮ ಪ್ರಪಂಚಕ್ಕೆ ಯಾವುದೇ ಗೋಜಲುಗಳಿಲ್ಲ. ಆದರೆ ರಾಧೆಯ ಬಗ್ಗೆ ಇದೇ ಭಾವ ಇದ್ದಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಓಶೋ ಒಂದು ಕುತೂಹಲದ ವಿವರಣೆ ಕೊಡುತ್ತಾರೆ. ತಮ್ಮ ಈ ವಿವರಣೆಗೆ ಅವರು ಸಂತ ಕಬೀರರ ದೋಹೆಯೊಂದನ್ನು ಕೋಟ್ ಮಾಡುತ್ತಾರಾದರೂ ಸದ್ಯಕ್ಕೆ ಅದು ನನಗೆ ನೆನಪಾಗುತ್ತಿಲ್ಲ.

  ಇನ್ನು ವಿವರಣೆಯನ್ನು ಗಮನಿಸುವದಾದರೆ, ಕೃಷ್ಣ ಒಬ್ಬ ಮಹಾನ್ ಯೋಗಿ. ಜನ್ಮಜಾತ ವಿಭೂತಿ(ಸಿದ್ಧಿ)ಗಳನ್ನು ಹೊತ್ತುಕೊಂಡು ಬಂದಿರುವಾತ. (ಅವತಾರಿಗಳು ಜನ್ಮತಾಳುವದಿಲ್ಲ. ಸಂದರ್ಭ ಬಂದಾಗ ಪ್ರಕಟಗೊಳ್ಳುತ್ತಾರೆ!) ಇಂಥ ಯೋಗಿಯ ಸಾಂಗತ್ಯ ಯಾರಿಗೆ ತಾನೇ ಬೇಕಿಲ್ಲ? ಆದರೆ ಆತನ ಸಾಂಗತ್ಯ ಅಷ್ಟು ಸುಲಭವೇ? ಹಾಗೆ ಮಾಡಬೇಕಾದರೆ, ನಾವು ನಮ್ಮ ಸಕಲ ಇಂದ್ರಿಯಗಳನ್ನು ಒಳಗೆ ಸೆಳೆದುಕೊಳ್ಳಬೇಕು. ಅಂದರೆ, ಬಹಿರ್ಮುಖವಾಗಿರುವ ನಮ್ಮೆಲ್ಲ ವಿಚಾರಧಾರೆಗಳನ್ನು ಅಂತರ್ಮುಖ ಮಾಡಿಕೊಳ್ಳಬೇಕು. ಈ ವಿಚಾರಧಾರೆಗಳನ್ನೇ ಓಶೋ, ಕಬೀರರೀರ್ವರೂ ಸಂಕ್ಷೇಪವಾಗಿ ‘ಧಾರಾ’ ಎಂದು ಕರೆದರು. ಯೋಗದ ವಿವಿಧ ಮಾರ್ಗಗಳಲ್ಲಿ ಸಾಧಕರು ಹೀಗೆ ತಮ್ಮ ತಮ್ಮ ‘ವಿಚಾರಧಾರಾ’ವನ್ನು ಅಂತರ್ಮುಖಗೊಳಿಸುತ್ತಾರೆ. ಅಂದರೆ, ಲೋಕದ ಭೌತಿಕ ವಿಷಯಗಳ ಬಗ್ಗೆ ಅನಾಸಕ್ತರಾಗುತ್ತಾರೆ.

  ಅಲ್ಲಿಗೆ, ಒಂದು equation ತಯಾರಾಗಿ ಹೋಯಿತು. ಸಾಧಕನಲ್ಲಿ ಇದೂವರೆಗೂ ಬಹಿರ್ಮುಖವಾಗಿದ್ದ ವಿಚಾರಧಾರೆಗಳು ‘ಧಾರಾ’ ಎಂದು ಕರೆಯಲ್ಪಟ್ಟಿದ್ದವು. ಈಗ ಸಾಧಕನು ಅವೆಲ್ಲವನ್ನೂ ಹಿಮ್ಮುಖಗೊಳಿಸಿ, ಅಂತರ್ಮುಖಗೊಳಿಸಿಬಿಟ್ಟಿದ್ದರಿಂದ ‘ಧಾರಾ’ ಎಂಬುದು ಉಲ್ಟಾ ಆಯಿತು. ಆ ಮೂಲಕ, ‘ಧಾರಾ’ ಎಂಬುದು ಉಲ್ಟಾ ಆಗಿ ‘ರಾಧಾ’ ಅಂತಾಯಿತು!

  ರಾಧಾ ಅನ್ನುವದು ಯಾವುದೇ ಹೆಣ್ಣಲ್ಲ. ಅದು ಕೃಷ್ಣನ ಸಾಮಿಪ್ಯ ಹೊಂದುವ ಪರಿ. ಇಂದ್ರಿಯಗಳನ್ನು ಒಳಕ್ಕೆ ಸೆಳೆದುಕೊಳ್ಳುವದು, ಹಿಮ್ಮುಖಗೊಳಿಸುವದು ಯೋಗದಲ್ಲಿ ಪ್ರತಿ ಸಾಧಕನ ಮೊದಲ ಆದ್ಯತೆಯೇ ಆಗಿದೆ.

  ಹೀಗಿರುವಾಗ, ಭಗವಂತನ ಸಾಮಿಪ್ಯ ಹೊಂದಲೆಂದೋ ಅಥವಾ ಯೋಗದ ಪರಮಸ್ಥಿತಿ ಗಳಿಸಲೆಂದೋ, ಈ ‘ಧಾರಾ’ ಮತ್ತು ‘ರಾಧಾ’ಗಳೆಂಬ ಬಹಿರ್ಮುಖ, ಅಂತರ್ಮುಖ ಸ್ಥಿತಿಗಳ ಬಗ್ಗೆ ನಮ್ಮ ಪೂರ್ವಸೂರಿಗಳು ಒಂದು ನಿಗೂಢ ಸೂಚನೆ ಕೊಟ್ಟಿರಬಹುದೇ?

  ತನ್ಮೂಲಕ, ಈ ಪುಟ್ಟ ಪ್ರತಿಕ್ರಿಯೆ ಮೂಡಿಸಲು ಚೋದಿಸಿದ ಋುಗ್ವೇದಿಗಳಿಗೆ,
  ನಮಸ್ಕಾರ.

  -ರಾಘವೇಂದ್ರ ಜೋಶಿ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ರಾಘವೇಂದ್ರ ಜೋಶಿCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: