ಕಣ್ಮರೆಯಾದ ಕುವೆಂಪು ‘ಪದಕಗಳು’
ಜಿ.ಪಿ.ಬಸವರಾಜು
ತಮ್ಮ ಸಾಧನೆಯಿಂದ ಎತ್ತರೆತ್ತರಕ್ಕೆ ಏರಿದ್ದ ಕುವೆಂಪು ರಾಷ್ಟ್ರಮಟ್ಟದಲ್ಲಿ ಪಡೆದುಕೊಂಡಿದ್ದ ಮನ್ನಣೆಯ ಗುರುತುಗಳಾಗಿದ್ದ ಪದಕಗಳನ್ನು ಕದಿಯಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕುವೆಂಪು ಅವರ ‘ಕವಿಮನೆ’ (ಈಗದು ವಸ್ತು ಸಂಗ್ರಹಾಲಯ)ಯಲ್ಲಿದ್ದ ಈ ಪದಕಗಳನ್ನು ಚಿನ್ನದ ಪದಕಗಳೆಂದು ತಿಳಿದ ವ್ಯಕ್ತಿಯೊಬ್ಬ ಕದ್ದು ತಲೆಮರೆಸಿಕೊಂಡು, ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಸಮಾಜಕ್ಕೆ ಅತ್ಯಂತ ಉಪಯುಕ್ತವಾದ ಕೊಡುಗೆಗಳನ್ನು ನೀಡಿದ ಸಾಧಕರ ಪದಕಗಳನ್ನು ಕದ್ದಿರುವ ಪ್ರಕರಣಗಳು ಜಗತ್ತಿನಲ್ಲಿ ಬೇಕಾದಷ್ಟಿವೆ. ಭಾರತಕ್ಕೆ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ (ಸಾಹಿತ್ಯದಲ್ಲಿ) ಕವಿ ರವೀಂದ್ರನಾಥ ಟ್ಯಾಗೋರ್ ಅವರ ನೊಬೆಲ್ ಪದಕವನ್ನೇ ಕದಿಯಲಾಯಿತು. ಈವರೆಗೂ ಈ ಕಳ್ಳನನ್ನು ಪತ್ತೆಹಚ್ಚಲಾಗಿಲ್ಲ. ಈ ಪದಕವನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಿರಬಹುದೆಂದು ಶಂಕಿಸಲಾಗಿದೆ. ತನ್ನ ತನಿಖೆಯಿಂದ ಪ್ರಯೋಜನವಾಗಲಿಲ್ಲ ಎಂಬ ಕಾರಣಕ್ಕೆ ತನಿಖೆ ನಡೆಸುತ್ತಿದ್ದ ಸಿಬಿಐ ಪ್ರಕರಣವನ್ನು ಮುಕ್ತಾಯಗೊಳಿಸಿತು. ನೊಬೆಲ್ ಪ್ರತಿಷ್ಠಾನ ಇನ್ನೊಂದು ನಕಲು ಪದಕವನ್ನು ನೀಡಿ, ತನ್ನ ಗೌರವವನ್ನು ಮತ್ತೊಮ್ಮೆ ತೋರಿಸಿತು.
ಸಾಹಿತ್ಯ, ವಿಜ್ಞಾನ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಹಲವರ ಪದಕಗಳೂ ಕಳ್ಳರ ಪಾಲಾಗಿವೆ. ಚಿನ್ನದ ಆಸೆ, ಖಾಸಗೀ ಸಂಗ್ರಹಗಳಿಗೆ ತುಂಬಿಕೊಳ್ಳುವ ಹಂಬಲ, ಒತ್ತೆಯಾಳುಗಳಂತೆ ಚಿನ್ನದ ಪದಕಗಳನ್ನೂ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ಹುನ್ನಾರ ಹೀಗೆ ಅನೇಕ ಕಾರಣಗಳಿಗಾಗಿ ಪದಕಗಳ ಕಳವು ನಡೆಯುತ್ತಲೇ ಬಂದಿವೆ. ಅಮೆರಿಕ, ಇಂಗ್ಲೆಂಡ್, ನ್ಯೂಜಿಲೆಂಡ್ ಹೀಗೆ ಅನೇಕ ರಾಷ್ಟ್ರಗಳಲ್ಲಿ ಇಂಥ ಪ್ರಕರಣಗಳು ನಡೆದಿವೆ.
ತಮ್ಮ ಪ್ರೀತಿಪಾತ್ರ ವ್ಯಕ್ತಿಯ ಸಾಧನೆಗಳನ್ನು ತೋರಿಸುವ, ಎತ್ತರಗಳನ್ನು ಬಿಂಬಿಸುವ ಇಂಥ ವಸ್ತುಗಳನ್ನೂ ಬಿಡದೆ ಕದ್ದಾಗ ಜನ ನೊಂದುಕೊಳ್ಳುತ್ತಾರೆ. ತಮ್ಮ ಸಮಾಜದ ಮೌಲ್ಯಗಳ ಬಗ್ಗೆ ಚಿಂತಿಸುತ್ತಾರೆ. ಇದನ್ನು ಮೌಲ್ಯಗಳ ಕುಸಿತ ಎಂದೂ ಅರ್ಥೈಸುತ್ತಾರೆ. ಇವೆಲ್ಲ ಆ ಹೊತ್ತಿನ ಸಹಜ ಪ್ರತಿಕ್ರಿಯೆಗಳು.
ಕವಿ ಮನೆಯನ್ನು, ಅವರು ನಡೆದಾಡಿದ ಜಾಗಗಳನ್ನು, ಅವರಿಗೆ ಪ್ರೇರಣೆ ನೀಡಿದ ಹಲವಾರು ವಸ್ತುಗಳನ್ನು ಹಾಗೆಯೇ ಇಟ್ಟುಕೊಂಡು ಹೆಮ್ಮೆ ಪಡೆಯುವುದು, ಎಳೆಯ ತಲೆಮಾರಿನವರಲ್ಲಿ ಆಸೆ-ಭರವಸೆಗಳನ್ನು ಬಿತ್ತುವುದು ಇತ್ಯಾದಿ ಎಲ್ಲವೂ ಅನೇಕ ದೇಶಗಳಲ್ಲಿ ಉಳಿದುಕೊಂಡು ಬಂದಿರುವ ರೂಢಿಗಳು. ಇಂಥ ರೂಢಿಗಳೂ ಬೇಕಾಗುತ್ತವೆ. ಇವುಗಳ ಜೊತೆಗೆ ಹುಟ್ಟು ಹಬ್ಬ, ಅಧ್ಯಯನ ಪೀಠ, ಪ್ರತಿಮೆಗಳ ನಿರ್ಮಾಣ, ಬೀದಿ, ಪಾರ್ಕ್, ವೃತ್ತಗಳಿಗೆ ಹೆಸರಿಡುವುದು ಇತ್ಯಾದಿ ಆಚರಣೆಗಳೂ ನಡೆದು ಬಂದಿವೆ.
ಯಾವುದು ಸರಿ, ಯಾವುದು ತಪ್ಪು ಎಂದು ಹೇಳಲಾಗದಷ್ಟು ನಮ್ಮ ಸಮಾಜ ಸೂಕ್ಷ್ಮವಾಗಿದೆ. ಜಯಂತಿಗಳ ಅಬ್ಬರದಲ್ಲಿ ಜಾತಿಗಳ ಸಂಘಟನೆಗಳು ಬಲಗೊಳ್ಳುವುದು, ಜಯಂತಿಗಳ ಹೆಸರಿನಲ್ಲಿ ಸರ್ಕಾರಿ ರಜಾದಿನಗಳನ್ನು ಹೆಚ್ಚು ಮಾಡುತ್ತ ಹೋಗುವುದು, ಮಹಾನ್ ಸಾಧಕರ ಹೆಸರುಗಳನ್ನು ಮುಂದೆ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಅರ್ಥವಿಲ್ಲದೆ ಪೋಲುಮಾಡುವುದು ಇತ್ಯಾದಿ ಅನೇಕ ಪೋಲು ಸಂಸ್ಕೃತಿಯ ಚಟುವಟಿಕೆಗಳು ಭರಾಟೆಯಿಂದ ನಡೆಯುತ್ತಿವೆ. ಇವುಗಳ ವಿಮರ್ಶೆಯನ್ನು ಮಾಡಲು ಮುಂದಾಗುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂಬ ಭಾವನೆಯನ್ನು ಬೆಳೆಸಿರುವ ಹಂತಕ್ಕೆ ನಮ್ಮ ಸಮಾಜ ‘ಮುನ್ನಡೆದಿದೆ’. ಇಂಥ ಹೊತ್ತಿನಲ್ಲಿ ನಿಜಕ್ಕೂ ಸಾಧಕರನ್ನು ಜನಮನದಲ್ಲಿ ಬೇರೂರುವಂತೆ ಮಾಡುವುದು ಹೇಗೆ? ಇದರ ಚಿಂತನೆ ಅಷ್ಟಾಗಿ ನಡೆಯುವುದಿಲ್ಲ.
ಕವಿಯೊಬ್ಬನನ್ನು ಒಂದು ಸಮಾಜ ಗೌರವಿಸುವುದು ಹೇಗೆ? 20ನೇ ಶತಮಾನದ ಅತ್ಯಂತ ಪ್ರಭಾವೀ ಕವಿಯಾದ ಚಿಲಿಯ ಪಾಬ್ಲೊ ನೆರೂಡನ ಬದುಕಿನಲ್ಲಿ ನಡೆದುಹೋದ ಒಂದು ಘಟನೆಯನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು: ನೆರೂಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದು ಹೋಗುತ್ತಿದ್ದ. ಏಕಾಏಕಿ ಅವನನ್ನು ನಾಲ್ಕಾರು ಜನ ಕಾರ್ಮಿಕರು ಸುತ್ತುವರಿದು ತಮ್ಮ ಸಭೆಗೆ ಬರಬೇಕೆಂದು ಅಹ್ವಾನಿಸಿದರು. ಬಂದು ನಿಮ್ಮ ಕವಿತೆಗಳನ್ನು ಓದಿ ಎಂಬುದು ಅವರ ಬೇಡಿಕೆ.
ನೆರೂಡ ಗಾಬರಿಯಾದ. ಕಾರ್ಮಿಕರ ಸಭೆಯಲ್ಲಿ ತನ್ನ ಕಾವ್ಯ! ನೆರೂಡ ಗೊಂದಲಗೊಂಡ. ಹಿಂಜರಿದ. ತನ್ನ ಬಳಿ ಸದ್ಯ ಪುಸ್ತಕ ಇಲ್ಲ ಎಂದ. ಬಂದವರು ಇದನ್ನೆಲ್ಲ ಕೇಳಲೇ ಇಲ್ಲ. ತಾವು ಕವಿತೆಯನ್ನು ಕೊಡುವುದಾಗಿ ಕರೆದುಕೊಂಡು ಹೋದರು. ನೆರೂಡನ ಕವಿತೆಯ ಪುಸ್ತಕ ಅವರಲ್ಲಿತ್ತು. ಕೊಟ್ಟು ಓದಲು ಹೇಳಿದರು. ಸ್ಪ್ಯಾನಿಷ್ ಭಾಷೆಯ ಈ ಕವಿ ತನ್ನ ಜನರ ಮುಂದೆ ತನ್ನದೇ ಭಾಷೆಯಲ್ಲಿನ ಕವಿತೆಯೊಂದನ್ನು ಓದಿ ಪ್ರತಿಕ್ರಿಯೆಗಾಗಿ ಕಾದ. ಚಪ್ಪಾಳೆಯೋ ಚಪ್ಪಾಳೆ. ಇನ್ನೊಂದು ಕವಿತೆಯನ್ನು ಓದಲು ಕೋರಿಕೆ. ಆತ ಇನ್ನೊಂದನ್ನು ಓದಿದ; ಮತ್ತೊಂದನ್ನೂ. ಮತ್ತೆ ಮತ್ತೆ ಕವಿತೆಗಳನ್ನು ಓದಿದ. ಕಾರ್ಮಿಕರು ಎಷ್ಟು ಖುಷಿಯಾದರೆಂದರೆ ನೆರೂಡನಿಗೆ ಅದಕ್ಕಿಂತ ದೊಡ್ಡ ಮನ್ನಣೆ ಬೇಕೆಂದು ಅನ್ನಿಸಲಿಲ್ಲ.
ಕುವೆಂಪು ಕನ್ನಡ ಜನತೆಯ ಮೇಲೆ ಬೀರಿರುವ ಪ್ರಭಾವ ಬಹಳ ದೊಡ್ಡದು. ಅಕ್ಷರ ಗೊತ್ತಿರುವವರ ಮೇಲೆ ಒಂದು ರೀತಿಯ ಪ್ರಭಾವವಾದರೆ, ಗೊತ್ತಿಲ್ಲದವರ ಮೇಲೆ ಇನ್ನೊಂದು ರೀತಿಯಲ್ಲಿ. ಅವರ ಕವಿತೆಗಳನ್ನು ಹಾಡಿದವರು ನೂರಾರು ಜನ. ಅವರ ಕವಿತೆಯೊಂದು ನಾಡಗೀತೆಯಾಗಿ ಕಿವಿಯ ಮೇಲೆ ಬೀಳುತ್ತಲೇ ಇರುತ್ತದೆ. ಅವರ ಪ್ರೇಮಗೀತೆಗಳು ಎಷ್ಟು ಮಧುರ ಕಂಠಗಳನ್ನು ಹಾದು ಬಂದಿವೆ. ಅವರ ರಾಮಾಯಣ ದರ್ಶನ ಗಮಕಿಗಳ ಮೂಲಕ ಅಕ್ಷರ ಗೊತ್ತಿಲ್ಲದವರ ಬಳಿಗೆ ಹೋಗಿವೆ. ಅವರ ಕಾದಂಬರಿಗಳು, ನಾಟಕಗಳು, ಕಥೆಗಳು ರಂಗದ ಮೇಲೆ, ಸಿನಿಮಾ ಪರದೆಯ ಮೇಲೆ ಕಾಣಿಸಿಕೊಂಡು ಜನರನ್ನು ತಲುಪಿವೆ. ವಿದ್ವತ್ ವಲಯದ ಮೇಲೆ ಕುವೆಂಪು ಬರಹಗಳು, ಚಿಂತನೆಗಳು, ವಿಮರ್ಶೆಯ ನೋಟಗಳು ಬೀರಿರುವ ಪ್ರಭಾವವೂ ದೊಡ್ಡದೇ.
ಇದೆಲ್ಲದರ ಜೊತೆಗೆ ಕುವೆಂಪು ಕರ್ನಾಟಕದಲ್ಲಿ ವೈಚಾರಿಕ ಎಚ್ಚರವನ್ನು ಮೂಡಿಸಿದವರು. ‘ಗುಡಿಮಸೀದಿ ಚರ್ಚುಗಳನ್ನು ಬಿಟ್ಟು ಬನ್ನಿ’ ಎಂದು ಜನರನ್ನು ಕರೆದವರು. ಮೌಢ್ಯಗಳನ್ನು ತೊರೆಯಲು ಹೇಳಿದವರು. ಯಾರ ಅಂಕುಶದ ಕೆಳಗೂ ಬದುಕನ್ನು ಕಟ್ಟಿಕೊಳ್ಳಬಾರದು; ಮುಕ್ತ ಮನಸ್ಸಿನಿಂದ ಯೋಚಿಸಬೇಕೆಂದು ತರುಣರಿಗೆ ಕಿವಿ ಮಾತು ಹೇಳಿದವರು. ಪುರೋಹಿತಶಾಹಿಯ ವಿರುದ್ಧ ಕುವೆಂಪು ನಡೆಸಿದ ಹೋರಾಟ ಬಹಳ ದೊಡ್ಡದು. ಪುರೋಹಿತರ ಮಂತ್ರಗಳಿಗೆ ಬದಲಾಗಿ ಕನ್ನಡದಲ್ಲಿ ತಿಳಿಯುವ ಮಾತುಗಳನ್ನು ಹೇಳಿದರು.
ಮಂತ್ರ ಮಾಂಗಲ್ಯದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಯುವ ಭಾಷೆಯಲ್ಲಿ ಹೇಳಿ, ಪುರೋಹಿತರನ್ನು ದೂರವಿಟ್ಟು ವಿವಾಹಗಳು ನಡೆಯಬೇಕೆಂದು ಹೇಳಿದವರು. ಗಂಡು-ಹೆಣ್ಣಿನ ಒಪ್ಪಿಗೆಯ ಮೇರೆಗೆ, ಸಮಾನತೆಯ ತತ್ವವನ್ನು ಆಧರಿಸಿ ಮದುವೆಗಳು ನಡೆಯಬೇಕಾದದ್ದು ಅತ್ಯಗತ್ಯ. ಮದುವೆಯ ಹೆಸರಿನಲ್ಲಿ ಮೌಢ್ಯವನ್ನು ಹೆಚ್ಚಿಸಬಾರದು, ಅದ್ಧೂರಿಯ ಅನಗತ್ಯ ವೆಚ್ಚಗಳನ್ನು ಮಾಡಬಾರದು ಎಂದು ತಿಳಿಸಿಕೊಟ್ಟವರು. ಅತ್ಯಂತ ಸರಳ ರೀತಿಯಲ್ಲಿ ತಮ್ಮ ಮಕ್ಕಳ ಮದುವೆಯನ್ನು ಮಾಡಿ ತಮ್ಮ ವಿಚಾರಗಳನ್ನು ಆಚರಿಸಿ ದಾರಿ ತೋರಿಸಿದವರು. ಇವತ್ತಿಗೂ ನಮ್ಮ ಸಮಾಜದಲ್ಲಿ ಉಳಿದುಬಂದಿರುವ ಅನೇಕ ಮೌಢ್ಯಗಳನ್ನು ಎತ್ತಿತೋರಿಸಿದ ಕುವೆಂಪು ವೈಜ್ಞಾನಿಕ ಮನೋಭಾವ ಬೆಳೆಯಬೇಕೆಂದು ಹಂಬಲಿಸಿದರು.
ಈ ವಿಚಾರಗಳನ್ನು ಜನರಿಗೆ ತಲುಪಿಸುವುದು ಸಾಧ್ಯವಾಗಿದ್ದರೆ, ನಮ್ಮ ಸಮಾಜ ಬೇರೊಂದು ದಿಕ್ಕಿನಲ್ಲಿ ನಡೆಯುತ್ತಿತ್ತು. ನಿಜವಾದ ಸುಧಾರಣೆಯಾಗುತ್ತಿತ್ತು. ಕುವೆಂಪು ಅವರ ಕುಪ್ಪಳಿಯ ಮನೆಯ ಸುತ್ತಮುತ್ತಲಿನ ಕಾಡನ್ನು ಮುಕ್ಕಾಗದಂತೆ ಉಳಿಸಿಕೊಳ್ಳಲಾಗಿದೆ. ಹಾಗೆಯೇ ಬೆಟ್ಟಸಾಲು, ಕಣಿವೆ ಕಂದರಗಳನ್ನು ಆದಷ್ಟೂ ಜೋಪಾನವಾಗಿ ನೋಡಿಕೊಳ್ಳಲಾಗಿದೆ. ಈ ಹೊತ್ತಿಗೆ ಪೂರ್ಣ ನಾಶವಾಗಬಹುದಾಗಿದ್ದ ಪಶ್ಚಿಮ ಘಟ್ಟಗಳು ಇನ್ನೂ ಜೀವ ಉಳಿಸಿಕೊಂಡಿರುವುದಕ್ಕೆ, ಸರ್ಕಾರಗಳು ಕುವೆಂಪು ಆಶಯಕ್ಕೆ ಸ್ಪಂದಿಸಿದ್ದು, ಜನ ಒತ್ತಡ ಹೇರಿದ್ದು ಕಾರಣವಿರಬಹುದು. ಪಶ್ಚಿಮ ಘಟ್ಟಗಳು, ಅದನ್ನು ತಬ್ಬಿರುವ ಕಾಡು, ಪ್ರಾಣಿ ಪರಿಸರ ಇನ್ನೂ ಅಪಾಯದ ಅಂಚಿನಲ್ಲಿಯೇ ಉಳಿದಿವೆ ಎಂಬುದನ್ನೂ ಮರೆಯಲಾಗದು.
ಇಷ್ಟಾದರೂ, ಕುಪ್ಪಳಿ ಮತ್ತದರ ಸುತ್ತಲಿನ ಪರಿಸರ ಇನ್ನೂ ಹಸಿರಾಗಿರುವುದಕ್ಕೆ ಕುವೆಂಪು ಇದೆಲ್ಲದರ ಬಗ್ಗೆ ಇಟ್ಟುಕೊಂಡಿದ್ದ ಅಪಾರ ಪ್ರೀತಿಯೇ ಕಾರಣ. ಆದರೆ ಇಷ್ಟರಿಂದಲೇ ಕುವೆಂಪು ಉಳಿಯಲಾರರು. ಮುಖ್ಯವಾಗಿ ಅವರ ವಿಚಾರಗಳನ್ನು ಜನಮನದಲ್ಲಿ ಉಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿತ್ತು. ಅದ್ಧೂರಿಯ ಮದುವೆಗಳು, ಎಲ್ಲ ರೀತಿಯ ಮೌಢ್ಯಗಳು, ಪುರೋಹಿತಶಾಹಿಯ ಹಿಡಿತದಲ್ಲಿರುವ ಸಾವಿರಾರು ಸಂಗತಿಗಳಿಂದ ಕರ್ನಾಟಕ ಮುಕ್ತವಾಗಿಲ್ಲ. ಅಷ್ಟೇಕೆ ಶಿವಮೊಗ್ಗ ಜಿಲ್ಲೆಯಾಗಲೀ, ತೀರ್ಥಹಳ್ಳಿ ತಾಲ್ಲೂಕಾಗಲೀ, ಕುಪ್ಪಳಿಯ ಸುತ್ತಮುತ್ತಲ ಗ್ರಾಮಗಳಾಗಲೀ ಮುಕ್ತವಾಗಿಲ್ಲ. ಕುವೆಂಪು ಅವರ ಪರಮ ಭಕ್ತರೆಂದು ಹೆಳಿಕೊಳ್ಳುವವರೂ ಇಂಥ ದುಷ್ಟಶಕ್ತಿಗಳಿಂದ ಬಿಡುಗಡೆ ಪಡೆದಿಲ್ಲ. ಕುವೆಂಪು ಹೆಸರಿನಲ್ಲಿ ಎಷ್ಟೊಂದು ಸಂಘಟನೆಗಳಿವೆ, ಪ್ರತಿಷ್ಠಾನಗಳಿವೆ, ಎಷ್ಟೊಂದು ಚಟುವಟಿಕೆಗಳು ನಡೆಯುತ್ತಿವೆ. ಆದರೂ ಕುವೆಂಪು ಅವರ ವೈಚಾರಿಕ ಚಿಂತನೆ ಯಾಕೆ ಮೂಲೆಗುಂಪಾಯಿತು?
ಈ ಪ್ರಶ್ನೆಯನ್ನು ಕೇಳಿಕೊಳ್ಳುವ ಹೊತ್ತು ಇದೀಗ ಬಂದಿದೆ. ನಮ್ಮ ಚಿಂತನೆ ಮತ್ತು ಕ್ರಿಯೆ ನಡೆಯಬೇಕಾಗಿರುವುದು ಈ ದಿಕ್ಕಿನಲ್ಲಿಯೇ. ಆಗ ಕುವೆಂಪು ಉಳಿಯುತ್ತಾರೆ. ಜೀವಂತವಾಗಿ ನಮ್ಮ ಕಣ್ಮುಂದಿರುತ್ತಾರೆ.
ಬಹಳ ಅರ್ಥಪೂರ್ಣ ಬರಹ, ಕುವೆಂಪುವನ್ನು ನಮ್ಮ ನಡುವೆ ನಾವು ಬದುಕಿಸಿಕೊಳ್ಳಬೇಕಿದೆ