ಸಾವಿತ್ರಿ ಮುಜುಮದಾರ
ಹೊಗೆಯನುಗುಳುವ ಫ್ಯಾಕ್ಟರಿ
ಇಂಗಾಲದಾಗಸ
ಕಫ ತುಂಬಿದ ಶ್ವಾಸ
ತುರಿಕೆ ಎದ್ದ ಚರ್ಮ
ಇವು ವಿಷಯಗಳೇ ಅಲ್ಲ
ವಿಷಕಂಠನ ಸ್ತುತಿ ಸಾಕಲ್ಲ
ಬೊಗಸೆ ನೀರ ಗಂಗಾ ಕಲ್ಯಾಣಕ್ಕಾಗಿ
ತುತ್ತು ಅನ್ನ ಭಾಗ್ಯಕ್ಕಾಗಿ
ನೆರಳ ವಸತಿ ಯೋಜನೆಗಾಗಿ
ಬದುಕು ಹೋರಾಟಕ್ಕಾಗಿ
ಅವನ ಲೇಖನಿ ಬರೆಯುವುದಿಲ್ಲ
ಕಕೋದಂಡಪಾಣಿ ಜಪ ಮಾಡುವನಲ್ಲ
ಶೌಚಾಲಯ ಭಾಗ್ಯ ಜ್ಯೋತಿ
ಪಡಿತರಚೀಟಿ ಬಸ್ ಪಾಸ್
ನೆರೆ ಪರಿಹಾರ ಬೆಳೆನಾಶ
ಇವು ಕಾವ್ಯದ ವಸ್ತುವೆ ಅಲ್ಲ
ಪುರಾಣ ಪ್ರವಚನ ಮಾಡುವನಲ್ಲ
ದಲಿತ ಹಸಿವು ರೈತನೇಣು
ಶ್ರಮಿಕ ಬೆವರು ನಾರಿಕೇಳ
ಇಲ್ಲಿ ಧ್ವನ್ಯಾರ್ಥವಿಲ್ಲ
ಆಧ್ಯಾತ್ಮ ಜೀವಿ ಬಿರುದು ಬಂದಿದೆಯಲ್ಲ
ಕಾದ ಭೂಮಿ ನಿರ್ಜಲ ನದಿ
ಬೋಳುಮರ ರಸಗೊಬ್ಬರ ಹೊಲ
ಕ್ರಿಮಿನಾಶದ ಬೆಳೆ ಕಸಾಯಿಖಾನೆಯ ದನ
ಗೋಳಿನ ಬದುಕಲ್ಲಿ ಸಾಹಿತ್ಯ ಗುಣವಿಲ್ಲ
ಸದ್ಗತಿಯ ದಾರಿ ಭಜನೆ ಇದೆಯಲ್ಲ
ಇಹಮುಖಿ ಬದುಕು
ಪರಮುಖಿ ಕಾವ್ಯ
ಇಬ್ಬಗೆಯ ಆತ್ಮ
ಸಾಕ್ಷಿ ಕೇಳುವುದಿಲ್ಲ
0 ಪ್ರತಿಕ್ರಿಯೆಗಳು