ಸೃಜನ್
**
ಸಾಹಿತಿ, ಅನುವಾದಕ ಸೃಜನ್ ಅವರು ಅನುವಾದಿಸಿದ್ದ ರಾಮ್ ಗೋಪಾಲ್ ವರ್ಮ ಅವರ ಕೃತಿ ‘ನನ್ನಿಷ್ಟ’ ಈಗ ಎರಡನೆಯ ಮುದ್ರಣ ಕಂಡಿದೆ.
ಪಲ್ಲವ ಪ್ರಕಾಶನ ಇದನ್ನು ಪ್ರಕಟಿಸಿದೆ.
ರಾಮ್ ಗೋಪಾಲ್ ವರ್ಮ ಬದುಕು, ಚಿತ್ರ ಬದುಕೆರಡೂ ಎಲ್ಲರನ್ನೂ ಆಕರ್ಷಿಸಿದ ಅಂಶ
ಸೃಜನ್ ಈ ಕೃತಿಗಾಗಿ ಬರೆದ ಮಾತುಗಳು ಇಲ್ಲಿವೆ.
**
ಆಗ ನಾನು ಸಿವಿಲ್ ಇಂಜಿನೀಯರಿಂಗ್ ಅಂತಿಮ ವರ್ಷದಲ್ಲಿದ್ದೆ. ಆಗತಾನೇ ‘ಶಿವ’ ಬಿಡುಗಡೆಯಾಗಿತ್ತು. ಕಾಲೇಜಿನ ತುಂಬಾ ಅದೇ ಟಾಕ್. ಹೊಸ ರೀತಿಯ ಟೇಕ್ಸ್. ಬೆಚ್ಚಿ ಬೀಳಿಸೋ ಫೈಟ್ಸ್, ಅದ್ಭುತ ಫೋಟೋಗ್ರಫಿ ಮತ್ತು ಅವಶ್ಯಕತೆಗೆ ತಕ್ಕಷ್ಟೆ ಮಾತುಗಳು. ಫುಲ್ ತೋಳಿನ ಶರಟನ್ನು ಮಡಚಿ ಇನ್‌ಶರ್ಟ್ ಮಾಡಿದ್ದ ಸೀರಿಯಸ್ ನಾಗಾರ್ಜುನ ಆಗ ನಮಗೆಲ್ಲಾ ಫೇವರೇಟ್. ಅಂದಿನಿಂದ ಇಂದಿನವರೆಗೆ ರಾಮಗೋಪಾಲ್ ವರ್ಮ ನನಗೆಂದಿಗೂ ಅಚ್ಚರಿಯೇ. ಈತನ ಎಲ್ಲ ಸಿನಿಮಾಗಳನ್ನು ನಾನು ನೋಡಿದ್ದೇನೆ. ಕೋಪ, ಪ್ರೀತಿ, ಇಷ್ಟ, ಆನಂದ, ವಿಷಾದಗಳಂತಹ ಬೇಸಿಕ್ ಎಮೋಷನ್ಸ್ಗಳನ್ನು ಅತ್ಯಂತ ಸಹಜವಾಗಿ ಚಿತ್ರೀಕರಿಸುವಲ್ಲಿ ಆತನಿಗೆ ಆತನೇ ಸಾಟಿ.
ಆತ ಸುತ್ತಲಿನ ಜಗತ್ತನ್ನು ನೋಡುವ ಪರಿ ತುಂಬಾ ಭಿನ್ನ. ಆತನಂತೆ ಸೋಲು-ಗೆಲುವುಗಳಿಗೆ ಅತೀತವಾಗಿ ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳುವುದು ಕೆಲವರಿಗೆ ಮಾತ್ರ ಸಾಧ್ಯ. ಅಂಥ ಕೆಲವೇ ಕೆಲವರಲ್ಲಿ ಒಬ್ಬರು ರಾಮಗೋಪಾಲ್ ವರ್ಮ. ಸಿನಿಮಾದೆಡೆಗಿನ ಮೋಹ ಅವನನ್ನು ನಿರ್ದೇಶಕನನ್ನಾಗಿ ಮಾಡಿರಬಹುದು. ಆತ ಖ್ಯಾತ ನಿರ್ದೇಶಕನಾಗದಿದ್ದರೂ ಸಮಾಜದ ಯಾವುದಾದರೊಂದು ಕ್ಷೇತ್ರದಲ್ಲಿ ತನ್ನದೇ ಆದ
ಛಾಪನ್ನು ಖಂಡಿತವಾಗಿ ಮೂಡಿಸುತ್ತಿದ್ದ. ರಾಮುವಿನ ಪುಸ್ತಕ ‘ನಾಇಷ್ಟಂ’ ಓದುವ ಮುನ್ನ ಬಿಡಿಬಿಡಿಯಾಗಿ ಬರೆದುಕೊಂಡಿದ್ದ ಲೇಖನಗಳು ತೆಲುಗಿನ ‘ಸಾಕ್ಷಿ’ ಪತ್ರಿಕೆಯ ಪುರವಣಿಯಲ್ಲಿ ಪ್ರತಿ ವಾರ ಪ್ರಕಟವಾಗುತ್ತಿದ್ದವು.
ಒಮ್ಮೆ ಹೊಸಪೇಟೆಗೆ ಬಂದಿದ್ದ ತೆಲುಗಿನ ಕವಿ ಡಾ.ಕೆ.ಶಿವಾರೆಡ್ಡಿಯವರೊಂದಿಗೆ ಮಾತನಾಡುವಾಗ ಅವರು ಕೂಡ ಪ್ರತಿವಾರ ರಾಮ್‌ಗೋಪಾಲ್ ವರ್ಮ ಕಾಲಮ್ಮನ್ನು ತಪ್ಪದೇ ಓದುತ್ತಿರುವೆನೆಂದು ಹೇಳಿದಾಗ ನನಗೆ ಅಚ್ಚರಿ ಅನಿಸಿತ್ತು. ನಾನು ಸಂಡೂರಿನಲ್ಲಿ ಓದುತ್ತಿದ್ದಾಗ ನನ್ನ ಬಾಲ್ಯದ ದಿನಗಳಲ್ಲಿ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ರ ‘ಮಾನಸ ಸರೋವರ’, ಜೋಸೈಮನ್‌ರ ‘ಒಡೆದ ಹಾಲು’, ‘ಮಳೆ ಬಂತು ಮಳೆ’ಗಳಂತಹ ಸಿನಿಮಾಗಳ ಚಿತ್ರೀಕರಣವನ್ನು ಶಾಲೆಗೆ ಬಂಕ್ ಮಾಡಿ ನಿರಂತರವಾಗಿ ನೋಡಲು ಗೆಳೆಯರೊಂದಿಗೆ ಹೋಗುತ್ತಿದ್ದೆ. ಸಿನಿಮಾ ಮತ್ತು ಚಿತ್ರೀಕರಣ ಆಗ ನನಗೆ ತುಂಬಾ ಚಕಿತಗೊಳಿಸಿದ್ದ ಸಂಗತಿಗಳಾಗಿದ್ದವು. ಮೂರು ತಾಸು ನೋಡುವ ಸಿನಿಮಾಗಳ ಹಿಂದಿನ ಮೇಕಿಂಗ್ ನನ್ನನ್ನು ತೀವ್ರವಾಗಿ ಮೋಡಿ ಮಾಡಿತ್ತು. ತೆರೆಯ ಹಿಂದಿನ ಜನರ ಜಗತ್ತು ನನಗೆ ಇಂದಿಗೂ ಸೋಜಿಗವೇ. ಆಗಲೇ ಗೊತ್ತಾಗಿದ್ದು ಅದೊಂಥರ ಜಾದೂ ಎಂದು.
ಆಮೇಲೆ ಕಾಲೇಜು ದಿನಗಳಲ್ಲಿ ‘ಶಿವ’ ಸಿನಿಮಾ ನೋಡಿದ ಮೇಲೆ ರಾಮಗೋಪಾಲ್‌ವರ್ಮ ಶೈಲಿಗೆ ಮಾರು ಹೋದೆ. ಕಥೆ, ಕಥನ, ಪಾತ್ರ, ಚಿತ್ರೀಕರಣ, ಹಿನ್ನೆಲೆ ಸಂಗೀತದವರೆಗೆ ತಲೆತಲಾಂತರದಿಂದ ಬಂದಿದ್ದ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮುರಿದ ರಾಮುನನ್ನು ಮತ್ತು ಸಿನಿಮಾಗಳನ್ನು ಕಳೆದ ಒಂದೂವರೆ ದಶಕದಿಂದ ಗಮನಿಸುತ್ತಾ ಬಂದಿದ್ದೇನೆ. ಆತನ ಯಶಸ್ಸು ವೈಫಲ್ಯಗಳನ್ನು ಆತ ವಿಶ್ಲೇಷಿಸುವ ರೀತಿಗೆ ದಂಗಾಗಿದ್ದೇನೆ. ಆತನ ಜೀವನ, ಸಿನಿಮಾ ಶೈಲಿ ಮತ್ತು ವಿದ್ಯಾಭ್ಯಾಸ ನನಗೆ ಎಲ್ಲೋ ಒಂದು ಕಡೆ ಕನೆಕ್ಟ್ ಆದುದರಿಂದಲೇ ಈ ಪುಸ್ತಕ ನನ್ನನ್ನು ಕಾಡಲು ಪ್ರಾರಂಭಿಸಿತು. ಈಗ ಪುಸ್ತಕ ನಿಮ್ಮ ಕೈಯಲ್ಲಿದೆ. ಆಮೇಲೆ ನಿಮ್ಮಿಷ್ಟ.
0 ಪ್ರತಿಕ್ರಿಯೆಗಳು