ಸತ್ಯರಂಗಸುತ
**
ಒಂದು ಸಿನಿಮಾ ಮನರಂಜನೆಯ ಜೊತೆಗೆ ಸಂದೇಶವನ್ನು ನೀಡಬೇಕು. ಭಿನ್ನ ಆಲೋಚನೆಗೆ ಪ್ರೇಕ್ಷಕರನ್ನು ತೆರೆದುಕೊಳ್ಳುವಂತೆ ಪ್ರೇರೇಪಿಸಬೇಕು. ಆ ಸಿನಿಮಾ ಮುಗಿದು ಹೋದರೂ ಅದರ ಗುಂಗು ಒಂದೆರಡು ದಿನವಾದರೂ ಮನದಲ್ಲಿ ಉಳಿಯುವಂತಿರಬೇಕು. ಈ ಎಲ್ಲಾ ಗುಣಗಳನ್ನು ಒಳಗೊಂಡ ಸಿನೆಮಾ ಮಾತ್ರ ಯಶಸ್ವಿಯಾಗಬಲ್ಲದು. ಸಿನಿಲೋಕದಲ್ಲಿ ಚಿರಸ್ಥಾಯಿಯಾಗಿ ನಿಲ್ಲಬಹುದು. ಇದೇ ಸಾಲಿಗೆ ಸೇರುವ ಒಂದು ಅಮೋಘ ದೃಶ್ಯಕಾವ್ಯವೇ ಆಡುಜೀವಿತಂ. ಈ ಚಿತ್ರದಲ್ಲಿ ಪಾತ್ರಗಳು ಕೇವಲ ಅಭಿನಯಿಸಿಲ್ಲ, ಜೀವಿಸಿವೆ. ಒಂದರ್ಥದಲ್ಲಿ ಪರಕಾಯ ಪ್ರವೇಶವನ್ನೇ ಮಾಡಿವೆ. ನಾನೋ ನೀನೋ ಎಂಬಂತೆ ಜಿದ್ದಿಗೆ ಬಿದ್ದು ತೆರೆಯನ್ನು ಅವರಿಸಿಕೊಂಡಿವೆ. ನೈಜ ಕತೆಯನ್ನು ತೆರೆಗೆ ತರುವಾಗ ನಗಣ್ಯವೆನಿಸಬಹುದಾದ ಸಿನಿಮೀಯ ಅಂಶಗಳನ್ನು ಬದಿಗಿಟ್ಟು ನೋಡಿದಾಗ ಈ ಚಿತ್ರ ನಮ್ಮನ್ನು ಹೊಸತೊಂದು ಲೋಕಕ್ಕೆ ಕರೆದೊಯ್ಯುತ್ತದೆ.
ನಾಯಕ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ನಿರ್ದೇಶಕ ಬ್ಲೆಸ್ಸಿ ಯವರ ಹದಿನೈದು ವರ್ಷಗಳ ಪರಿಶ್ರಮ ಚಿತ್ರದುದ್ದಕ್ಕೂ ಕಾಣಿಸುತ್ತದೆ. ದುಬೈ ವಿಮಾನ ನಿಲ್ದಾಣದಲ್ಲಿ ದಾರಿ ತಪ್ಪಿದ ಮುಗ್ಧ ಯುವಕನಾಗಿ, ಹಳ್ಳಿಯಲ್ಲಿದ್ದುಕೊಂಡು ದುಬೈನಲ್ಲಿ ದುಡಿಯಬೇಕೆಂಬ ಹಂಬಲ ಹೊತ್ತ ಜವಾಬ್ದಾರಿ ಗೃಹಸ್ಥನಾಗಿ, ಮೋಸ ಹೋಗಿ ಮರುಭೂಮಿಯಲ್ಲಿ ಆಡು ಮತ್ತು ಒಂಟೆಗಳ ಪರಿಚಾರಕನಾಗಿ ಅಭಿನಯದ ಉತ್ತುಂಗವನ್ನೇ ತಲುಪಿಬಿಟ್ಟಿದ್ದಾರೆ. ಇಡೀ ಚಿತ್ರವನ್ನು ಅವರಿಸಿಕೊಂಡರೂ, ಎಲ್ಲಿಯೂ ಸೋಲದಂತೆ ಚಿತ್ರವನ್ನು ಬೆನ್ನಿಗೆ ಕಟ್ಟಿಕೊಂಡು ಮುನ್ನಡೆಸಿದ್ದಾರೆ.
ಕೇರಳದ ಸ್ಥಳೀಯ ಸಂಸ್ಕೃತಿಯವನ್ನು ಪರಿಚಯಿಸುವುದರ ಜೊತೆಗೆ ಮರಳುಗಾಡಿನ ಜೀವನಶೈಲಿಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಅದರಲ್ಲೂ ಮರುಭೂಮಿಗೆ ಹೊಂದಿಕೊಳ್ಳಲು ನಜೀಬ್ ಪಡುವ ಪರಿಪಾಟಲು, ಆತನಿಗಾಗಿ ಮರುಗುವ ಇವನಂತೆಯೇ ಬಂದು ಸಿಲುಕಿದ್ದ ಮತ್ತೊಂದು ಜೀವದ ಜೀವನ ನೋಡುಗರ ಎದೆಯನ್ನು ಆರ್ದ್ರಗೊಳಿಸುತ್ತದೆ. ತಾನು ಮರುಭೂಮಿಯನ್ನು ಬಿಟ್ಟು ತಪ್ಪಿಸಿಕೊಳ್ಳುವ ಮುನ್ನವೂ ಆಡು ಮತ್ತು ಒಂಟೆಗಳಿಗೆ ಆಹಾರವನ್ನು ನೀಡಿ ಹೊರಡುವ ದೃಶ್ಯ ಈ ಇಡೀ ಚಿತ್ರಕ್ಕೊಂದು ಮಾನವೀಯತೆಯ ಸ್ಪರ್ಶವನ್ನು ನೀಡಿದೆ. ಖಲೀಫನ ಪಾತ್ರದಲ್ಲಿರುವ ನಟನ ಹಾವ ಭಾವ ನಿಜಕ್ಕೂ ಈತನೇ ಅವನಾಗಿದ್ದನೇನೋ ಅನಿಸುವಷ್ಟು ಭಾವತುಂಬಿ ಅಭಿನಯಿಸಿದೆ, ಮನಗೆದ್ದಿದೆ. ಅದರಲ್ಲೂ ಚಿತ್ರದ ಅಂತಿಮ ದೃಶ್ಯದಲ್ಲಿ ಜೈಲಿನಲ್ಲಿದ್ದ ನಜೀಬ್ ನನ್ನು ಗುರುತಿಸಲು ಬಂದಾಗ ಆತ ಜಗತ್ತಿನ ಅತೀ ಕ್ರೂರವ್ಯಕ್ತಿ ಎಂಬಂತೆ ಆ ಕ್ಷಣಕ್ಕೆ ಭಾಸವಾಗುತ್ತಾನೆ.
ಆಗ ತಾನೇ ಸಿಕ್ಕಿರುವ ತನ್ನ ಸ್ನೇಹಿತರಿಗಾಗಿ ಮರಳುಗಾಡನ್ನು ದಾಟಿ ತಪ್ಪಿಸಿಕೊಳ್ಳುವ ದಾರಿಯನ್ನು ತೋರಿಸಲು ಬಂದ ರಹೀಮ್ ದೇವದೂತನಂತೆಯೇ ಕಾಣಿಸುತ್ತಾನೆ. ನಿಸ್ವಾರ್ಥ ಉದ್ದೇಶದಿಂದ ನಜೀಬ್ ಮತ್ತು ಹಕೀಮ್ ರನ್ನು ಮಸಾರದ ನರಕದಿಂದ ಪಾರುಮಾಡಲು ಆತ ಪಡುವ ಶ್ರಮವಂತು ಎಲ್ಲರ ಮನಗೆಲ್ಲುತ್ತದೆ. 12th ಫೇಲ್ ಸಿನಿಮಾದಲ್ಲಿ ಬರುವ ಗೌರಿ ಭಯ್ಯಾನಂತೆ ಆಡುಜೀವಿತಂ ನ ರಹೀಮ್ ಪಾತ್ರವೂ ಹೃದಯವನ್ನು ಆವರಿಸುತ್ತದೆ, ಕಾಡುತ್ತದೆ. ಹಕೀಮ್ ನೀರಿಗಾಗಿ ಹಂಬಲಿಸುವಾಗ ತನ್ನ ಬೆವರನ್ನು ನೆಕ್ಕಿಸಿ ನಾಲಿಗೆಯನ್ನು ತಣಿಸುವುದು, ನಜೀಬ್ ನ ಕಾಲು ಗಾಯವಾದಾಗ ತನ್ನ ಬಟ್ಟೆಯನ್ನೇ ಬಿಚ್ಚಿ ಕಾಲಿಗೆ ಸುತ್ತುವುದು, ಇಂತವೆ ಅನೇಕ ಉದಾಹರಣೆಗಳು ಆತನ ಪಾತ್ರ ನೆನಪಿನಲ್ಲುಳಿಯುವಂತೆ ಮಾಡುತ್ತವೆ. ಮರುಭೂಮಿಯನ್ನು ತೊರೆಯುವ ಮುನ್ನ ನಾಯಕ ತನ್ನ ಹಳೆಯ ಬಟ್ಟೆಗಳನ್ನು ಧರಿಸುವುದು, ತಾನು ಎಂದಾದರೂ ಒಂದು ದಿನ ಅಲ್ಲಿಂದ ತಪ್ಪಿಸಿಕೊಳ್ಳುವೆನೆಂಬ ಆತನ ಅದಮ್ಯ ವಿಶ್ವಾಸವನ್ನು ಸಾರುತ್ತದೆ. ಜೊತೆಗೆ ಆಗ ಸ್ನಾನ ಮಾಡುವ ದೃಶ್ಯ ಆತನ ಬದುಕಿಗೆ ಹೊಸ ಹುಟ್ಟನ್ನು ನೀಡುವ ಉಪಮೆಯಂತೆ ತೋರುತ್ತದೆ. ನಡು ನಡುವೆ ಕಾಣಸಿಗುವ ಉಪ್ಪಿನಕಾಯಿ ದೃಶ್ಯ ಕತೆಯ ಜೀವಂತಿಕೆಯನ್ನು ತೋರುತ್ತಾ ಸಾಗುತ್ತದೆ.
ಮರುಭೂಮಿಯಿಂದ ತಪ್ಪಿಸಿಕೊಳ್ಳುವ ದೃಶ್ಯಗಳನ್ನು ಸ್ವಲ್ಪ ಕಡಿತಗೊಳಿಸಿದ್ದರೆ ಸಿನೆಮಾಕ್ಕೆ ಮತ್ತಷ್ಟು ವೇಗ ಸಿಗುತ್ತಿತ್ತು. ಎ ಆರ್ ರೆಹಮಾನ್ ರ ಹಿನ್ನೆಲೆ ಸಂಗೀತ ಚಿತ್ರದ ಭಾವ ತೀವ್ರತೆಯನ್ನು ಕೆಲವು ಕಡೆ ಇಮ್ಮಡಿಗೊಳಿಸಿದೆ. ಹಾಡುಗಳನ್ನು ಎಷ್ಟು ಬೇಕೋ ಅಷ್ಟು, ಎಲ್ಲಿ ಬೇಕೋ ಅಲ್ಲಿ ಮಾತ್ರ ಸೇರಿಸಿರುವುದು ನಿರ್ದೇಶಕರ ಕಲಾಕುಸುರಿಗೆ ಸಾಕ್ಷಿ. ನಾನು ನೆಟ್ ಫ್ಲಿಕ್ಸ್ ನ್ನು ಟಿವಿಗೆ ಕನೆಕ್ಟ್ ಮಾಡಿ ಸಿನೆಮಾವನ್ನು ನೋಡುತ್ತಿದ್ದೆ. ಮನೆಯವರೆಲ್ಲರೂ ಹತ್ತು ಹದಿನೈದು ನಿಮಿಷ ಈ ಸಿನೆಮಾವನ್ನು ನೋಡಿ, ಬೋರ್ ಆಗುತ್ತಿದೆ ಎನ್ನುತ್ತಿದ್ದವರು, ಒಂದರ್ಧ ಗಂಟೆಯ ನಂತರ ಬಿಟ್ಟೂ ಬಿಡದಂತೆ ಈ ಸಿನಿಮಾದೊಳಗೆ ಮುಳುಗಿಬಿಟ್ಟರು. ನಜೀಬ್ ದುಬೈ ವಿಮಾನ ನಿಲ್ದಾಣದಿಂದ ತವರಿಗೆ ತೆರಳುವಾಗ ಮನೆಯವರೆಲ್ಲರ ಮನಸ್ಸು ಹಗುರಾದಂತೆ, ತಮ್ಮವನೇ ಒಬ್ಬ ಬರುತ್ತಿರುವಂತೆ ಅನ್ನಿಸಿದ್ದು, ಈ ಚಿತ್ರದ ಸತ್ವಕ್ಕೆ ಸಾಕ್ಷಿ. ದೂರದ ದೇಶಗಳಿಗೆ ಹೋಗುವ ಮುನ್ನ ಎಚ್ಚರಿಕೆಯ ಅಗತ್ಯತೆ, ದಾರಿ ತಪ್ಪಿದರೆ ಆಗಬಹುದಾದ ಅನಾಹುತವನ್ನು ಆಡುಜೀವಿತಂ ಸಾರಿ ಹೇಳಿದೆ. ಚಿತ್ರ ಮುಗಿದ ನಂತರ ನನ್ನ ಮನಸ್ಸಿಗೆ ಹೊಳೆದ ಮೊದಲ ಸಾಲು “ಇಲ್ಲೇ ಸ್ವರ್ಗ, ಇಲ್ಲೇ ನರಕ”.
0 ಪ್ರತಿಕ್ರಿಯೆಗಳು