ಆಡಿದ್ದೇ ಆಟ; ಮಾಡಿದ್ದೇ ಕಾನೂನು – ಜಿಯೊ ಮೇರೇ ಲಾಲ್!

ಈ ಕಂತಿನೊಂದಿಗೆ ಎರಡು ವರ್ಷಗಳ ಕಾಲ ‘ಅವಧಿ’ಯಲ್ಲಿ ಸಾಗಿಬಂದ “ನುಣ್ನನ್ನಬೆಟ್ಟ” ದ ಯಾನ ಕೊನೆಗೊಳ್ಳುತ್ತಿದೆ.

ಪ್ರತೀವಾರ ಕಡ್ಡಾಯವಾಗಿ ಒಂದಿಷ್ಟು ಓದುವುದಕ್ಕೆ ಅವಕಾಶ ಮಾಡಿಕೊಟ್ಟ ಈ ಬರಹಗಳು ‘ಮಾತುಗಳನ್ನು ಆಡಲೇಬೇಕಾಗಿದ್ದ ಕೇಡುಗಾಲ’ದಲ್ಲೇ ಒದಗಿಬಂದದ್ದು ನನ್ನ ಅದ್ರಷ್ಟ.

ಅಂಕಣದ ಎಲ್ಲ ಓದುಗರಿಗೆ, ಪ್ರತಿಕ್ರಿಯಿಸಿದವರಿಗೆ ನಾನು ಋಣಿ. ಅವಕಾಶ ಮಾಡಿಕೊಟ್ಟ ಗೆಳೆಯ ಜಿ ಎನ್ ಮೋಹನ್ ಮತ್ತವರ ‘ಕ್ರೇಝಿ ಫ್ರಾಗ್ ಮೀಡಿಯಾ’ ಬಳಗಕ್ಕೂ ವಂದನೆಗಳು.

————-

ಕಾನೂನು ಎಷ್ಟೇ “ನೇರ”ವಾಗಿ ಇದ್ದರೂ, ಅದನ್ನು ಪಾಲಿಸುವವರು “ಟೇಡಾ” ಇದ್ದರೆ, ಆ ಕಾನೂನುಗಳು ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬುದು ಮತ್ತೆ ಮತ್ತೆ ಸಾಬೀತಾಗತೊಡಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಹಠಾತ್ ಆಗಿ ಉದ್ದವಾಗತೊಡಗಿರುವ ಈ ಊಟಕ್ಕಿಲ್ಲದ ಉಪ್ಪಿನಕಾಯಿಗಳ ಪಟ್ಟಿಗೆ ಹೊಸದೊಂದು “ಉಪ್ಪಾಡ್” ಸೇರಿಸುತ್ತಿದ್ದೇನೆ.

ಕಳೆದ ಒಂದು ವಾರದಲ್ಲಿ ದೇಶದ ಈತನಕದ ಎರಡು ದಿಗ್ಗಜ ಟೆಲಿಕಾಂ ಕಂಪನಿಗಳು ತಮ್ಮ ವಹಿವಾಟನ್ನು ಪ್ರಕಟಿಸಿ ನಷ್ಟದಲ್ಲಿದ್ದೇವೆ ಎಂದು ಸಾರಿವೆ.

* ಕಳೆದ 15 ವರ್ಷಗಳಿಂದ ಸತತ ಲಾಭದಲ್ಲಿದ್ದ ಭಾರ್ತಿ ಏರ್ಟೆಲ್ ಸಂಸ್ಥೆ ಮಾರ್ಚ್ 31, 2018ಕ್ಕೆ ಅಂತ್ಯಗೊಂಡ ತ್ರೈಮಾಸಿಕಕ್ಕೆ 652.30ಕೋಟಿ ರೂಪಾಯಿಗಳ ನಷ್ಟ ಘೋಷಿಸಿದೆ.

* ಶನಿವಾರ ಐಡಿಯಾ ಸೆಲ್ಯುಲರ್ ಸಂಸ್ಥೆ ತನ್ನ ನಷ್ಟ ಮಾರ್ಚ್ 31, 2018ಕ್ಕೆ ಅಂತ್ಯಗೊಂಡ ತ್ರೈಮಾಸಿಕಕ್ಕೆ ಮೂರು ಪಟ್ಟು ಏರಿ,  930.6 ಕೋಟಿರೂ.ಗಳಷ್ಟಾಗಿದೆ ಎಂದು ಪ್ರಕಟಿಸಿದೆ.

* ಈಗಾಗಲೇ ತೀವ್ರ ನಷ್ಟ ಅನುಭವಿಸಿರುವ ವಡಾಫೋನ್, ಐಡಿಯಾ ಸೆಲ್ಯುಲರ್ ಜೊತೆ ವಿಲೀನಗೊಳ್ಳಲು ಮಾತುಕತೆಗಳಲ್ಲಿ ನಿರತವಾಗಿದೆ.

ಆದರೆ,

ರಿಲಯನ್ಸ್ ಬಳಗದ ಜಿಯೋ ಮಾತ್ರ ಬೇರೆಯೇ ಕಥೆ ಹೇಳುತ್ತಿದೆ. ಅದು ಮಾರ್ಚ್ 31, 2018ಕ್ಕೆ ಅಂತ್ಯಗೊಂಡ ತ್ರೈಮಾಸಿಕಕ್ಕೆ 510 ಕೋಟಿ ರೂ. ಗಳ ಲಾಭ ಪ್ರಕಟಿಸಿದೆ!

ಕೇವಲ ವ್ಯಾಪಾರಸ್ಥರ ಪೈಪೋಟಿಯೇ?

ಇಂದು ಇಡಿಯ ಟೆಲಿಕಾಂ ಮಾರುಕಟ್ಟೆ ಕಂಗೆಟ್ಟಿದೆ. ಏರುತ್ತಿರುವ ನಷ್ಟ, ಹೆಚ್ಚುತ್ತಿರುವ ಸಾಲದ ಹೊರೆ, ಬೆಲೆ ಕಡಿತದ ಯುದ್ಧ, ಇಳಿಯುತ್ತಿರುವ ಆದಾಯ, ಅವೈಚಾರಿಕ ಸ್ಪೆಕ್ಟ್ರಂ ವೆಚ್ಚ, ಐಟಿಆರ್ (international termination rates) ನೀತಿಯಲ್ಲಿ ಫೆಬ್ರವರಿಯಲ್ಲಿ ಆದ ಬದಲಾವಣೆಗಳು ಒಟ್ಟಾಗಿ  ಎಲ್ಲ ಟೆಲಿಕಾಂ ಕಂಪನಿಗಳನ್ನು ಕಾಡುತ್ತಿದ್ದರೆ, ಈಗಿರುವ ಆ ಎಲ್ಲ ಕಂಪನಿಗಳಿಗೆ ಮಾತ್ರವಲ್ಲದೇ ಮುಂದೆ ಕೂಡ ಯಾರೂ ಸ್ಪರ್ಧಿಗಳು ಹುಟ್ಟದಂತೆ ಬೆಲೆ ಇಳಿಸಿ ಕುಳಿತಿರುವ ಅಂಬಾನಿ ಬಳಗದ “ಜಿಯೊ” ಮಾತ್ರ ಲಾಭದಲ್ಲಿದೆ.

ಇಂದು ಜಗತ್ತಿನ ಎರಡನೇ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆ ಆಗಿರುವ ಭಾರತ 2020ರ ಹೊತ್ತಿಗೆ 14ಲಕ್ಷ ಕೋಟಿ ರೂಪಾಯಿಗಳ  ಮಾರುಕಟ್ಟೆ ಆಗಲಿದ್ದು 50 ಲಕ್ಷ ಮಂದಿಗೆ ಉದ್ಯೋಗ ನಿಡಲಿದೆಯಂತೆ. 2017ರಲ್ಲಿ ಮಾಸಿಕ ಜಿಬಿ ಇದ್ದ ಡೇಟಾ ಬಳಕೆ, 2023ರ ಹೊತ್ತಿಗೆ ಮಾಸಿಕ 18ಜಿಬಿ ಆಗಲಿದೆ ಎಂದು ಅಧ್ಯಯನಗಳು ಬೊಟ್ಟುಮಾಡುತ್ತಿವೆ.

ಇಂತಹದೊಂದು ಹುಲುಸಾದ ಮಾರುಕಟ್ಟೆಯನ್ನು ಇಷ್ಟೊಂದು ದೊಡ್ಡ ದೇಶದಲ್ಲಿ ಒಂದು ಉದ್ಯಮದ ಕೈಗೆ ಹರಿವಾಣದಲ್ಲಿಟ್ಟು ಅರ್ಪಿಸಲು ಹೊರಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು ನೀತಿ ನಿರ್ಮಾಪಕರ ಹಸ್ತಕ್ಷೇಪ ಇಲ್ಲದ, ಕೇವಲ ವ್ಯಾಪಾರಿಗಳ ನಡುವಿನ ಮಾರುಕಟ್ಟೆ ಕಲಹ ಅಲ್ಲ ಎಂಬುದಕ್ಕೆ ಹಲವು ಸೂಚನೆಗಳು ಸಿಗುತ್ತವೆ.

ಅದರಲ್ಲಿ ಮಹತ್ವದ್ದು, ಕಾಂಪಿಟಿಷನ್ ಕಾಯಿದೆಯಡಿ ಭಾರ್ತಿ ಏರ್ಟೆಲ್ ಸಂಸ್ಥೆಯು ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾಕ್ಕೆ ಸಲ್ಲಿಸಿದ ದೂರು ಅರ್ಜಿ ತಿರಸ್ಕ್ರತವಾದದ್ದು!

ಈ MRTP  ಕಾಯಿದೆ 1969 ಅಂದರೆ, Monopolies and Restrictive Trade Practices Act ಅಸ್ಥಿತ್ವಕ್ಕೆ ಬಂದದ್ದು ವ್ಯವಹಾರಗಳಲ್ಲಿ ಏಕಸ್ವಾಮ್ಯ ಮತ್ತು ಅನೈತಿಕ ವ್ಯಾಪಾರಗಳನ್ನು ತಡೆಯಲು. 2003ರಲ್ಲಿ ಈ ಕಾಯಿದೆಯ ಜಾಗದಲ್ಲಿ ಕಾಂಪಿಟಿಷನ್ ಕಾಯಿದೆ ಬಂತು ಮತ್ತು 2007ರಲ್ಲಿ ಅದು ತಿದ್ದುಪಡಿಯೂ ಆಯಿತು. ಇಂತಹದೊಂದು ಕಾಯಿದೆ ಇದ್ದೂ ಕೂಡ, ಎಲ್ಲ ಸಹವ್ಯಾಪಾರಿಗಳನ್ನು ದಿಂಡುರುಳಿಸಿ ತಾನು ಮಾತ್ರ ಮಾರುಕಟ್ಟೆಯಲ್ಲಿ ಉಳಿಯಲು ರಿಲಯನ್ಸ್ ಬಳಗಕ್ಕೆ ಸಾಧ್ಯ ಆದದ್ದು ಹೇಗೆ?

ರಿಲಯನ್ಸ್ ಜಿಯೊ ಕಥೆ

2016ಸೆಪ್ಟಂಬರ್ 5ರಂದು ಮಾರುಕಟ್ಟೆಗೆ ಜಿಗಿದ ರಿಲಯನ್ಸ್ ಜಿಯೊ, ತನ್ನ ಗ್ರಾಹಕರಿಗೆ ಉಚಿತ ಡೇಟಾ ಮತ್ತು ಧ್ವನಿ ಕರೆಗಳ ಆಮಿಷ ನೀಡಿತ್ತು. ಮಾರುಕಟ್ಟೆಯ ಮೇಲೆ ಈ ಆಮಿಷ ಎಷ್ಟು ಪ್ರಭಾವ ಬೀರಿತೆಂದರೆ, 2017ಡಿಸೆಂಬರ್ ವೇಳೆಗೆ 16ಕೋಟಿ ಜಿಯೊ ಬಳಕೆದಾರರು ಹುಟ್ಟಿಕೊಂಡಿದ್ದರು. ರಿಲಯನ್ಸ್ ಜಿಯೊ ಅಂದಿನಿಂದ ಇಂದಿಗೂ ನೈತಿಕ ಸ್ಪರ್ಧೆ ನೀಡಿಲ್ಲ ಎಂಬುದಕ್ಕೆ ಹಲವು ನಿರ್ದಿಷ್ಟ ಸೂಚನೆಗಳು ಸಿಗುತ್ತವೆ.

೧. 2010ರಲ್ಲಿ ರಿಲಯನ್ಸ್ BWA/4G ಸ್ಪೆಕ್ಟ್ರಂ ಸ್ವಾಧೀನಪಡಿಸಿಕೊಂಡಿತು ಮತ್ತು ಸರಕಾರ ಅದಕ್ಕೂ ಹಿಂದಿನ ದಿನಾಂಕದಿಂದ (ರೆಟ್ರೊಸ್ಪೆಕ್ಟಿವ್ ಆಗಿ) ನಿಯಮಗಳನ್ನು ಬದಲಿಸಿದ್ದರಿಂದ ರಿಲಯನ್ಸ್ ಜಿಯೊಗೆ ಲಾಭ ಆಯಿತು. ಯಾಕೆಂದರೆ ಅದಕ್ಕೆ ಒಂದೇ ಸ್ಪೆಕ್ಟ್ರಂ ನಲ್ಲಿ ಡೇಟಾ ಮತ್ತು ಧ್ವನಿಕರೆ ಸೇವೆಗಳೆರಡನ್ನೂ ನೀಡುವುದು ಸಾಧ್ಯವಾಯಿತು.

೨. ರಿಲಯನ್ಸ್ ಜಿಯೊ ಡೇಟಾ ಕೇಂದ್ರಿತ ಸೇವೆ ಆಗಿದ್ದು, 4G ಸಾಮರ್ಥ್ಯ ಇರುವ ಮೊಬೈಲ್ ಸೆಟ್ ಗಳಲ್ಲಿ ಮಾತ್ರ ಲಭ್ಯ. ಹಾಗಾಗಿ ಮುಂದೊಂದು ದಿನಗ್ರಾಹಕರು ಉಚಿತ ಧ್ವನಿ ಕರೆ ಹೆಸರಲ್ಲಿ ಬೇರೆ ಸೇವಾದಾತರಿಗೆ ಹೋಲಿಸಿದರೆ ಜಿಯೊ ಸೇವೆಗಳಿಗೆ ಹೆಚ್ಚಿನ ಹಣ ಪಾವತಿ ಮಾಡಬೇಕಾಗಿ ಬರಬಹುದು

೩. ರಿಲಯನ್ಸ್ ಜಿಯೋ ಆರಂಭದಲ್ಲಿ ಪ್ರಕಟಿಸಿದ್ದ ಉಚಿತ ಸೇವೆಗಳು ವಾಸ್ತವದಲ್ಲಿ 2016, ಡಿಸೆಂಬರ್ 30ರಂದು ಅಂತ್ಯಗೊಳ್ಲಬೇಕಿತ್ತು. ಆದರೆ, ಜಿಯೊ ಪ್ರೈಮ್ ಸೇವೆ ದೊರಕುವ ತನಕವೂ ಅಂತಿಮ ದಿನಾಂಕವನ್ನು ವಿಸ್ತರಿಸುತ್ತಾ ಬರಲಾಯಿತು.

ವಾಸ್ತವ ಹೀಗಿದ್ದರೂ ಭಾರ್ತಿ ಏರ್ಟೆಲ್ ನಿಡಿದ ದೂರನ್ನು ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ (CCI) ವಿಚಿತ್ರ ಕಾನೂನು ತರ್ಕಗಳನ್ನು ಮುಂದೊಡ್ಡಿ ತಳ್ಳಿಹಾಕಿತು. ಆದರೆ, ವಾಸ್ತವ ವಾಸ್ತವವೇ ತಾನೇ? ಅದರ ಫಲವಾಗಿಯೇ ಇಂದು ದೇಶದ ಟೆಲಿಕಾಂ ಮಾರುಕಟ್ಟೆ ದಯನೀಯ ಸ್ಥಿತಿ ತಲುಪಿದೆ. ಅಲ್ಲಿ 7.7ಲಕ್ಷ ಕೊಟಿ ಬ್ಯಾಂಕ್ ಸಾಲಗಳು ಅಟಕಾಯಿಸಿಕೊಂಡಿದ್ದು, ಮುಂದೊಂದು ದಿನ ಏರ್ಟೆಲ್, ಐಡಿಯಾದಂತಹ ಸಂಸ್ಥೆಗಳೂ ವಿಜಯ ಮಲ್ಯ, ನೀರವ್ ಮೋದಿಯರ ಹಾದಿ ಹಿಡಿದರೆ ಅಚ್ಚರಿ ಇಲ್ಲ!

ಭಾರತ್ ನೆಟ್ ಎಂಬ ಇನ್ನೊಂದು ಗುಮ್ಮ!

ಈ ನಡುವೆ ಭಾರತ್ ನೆಟ್ ಎಂಬ ಸರ್ಕಾರಿ ಯೋಜನೆಯ ವೇಗ ಕೂಡ ಅದರ ಹಿಂದಿನ ಹುನ್ನಾರಗಳೇನು ಎಂದು ಹುಬ್ಬೇರಿಸುವಷ್ಟು ಜಬರ್ದಸ್ತಿದೆ. ದೇಶದ 2.5 ಲಕ್ಷ ಪಂಚಾಯತುಗಳಲ್ಲಿ ಮಾರ್ಚ್ 2019ರ ಒಳಗೆ ಆಪ್ಟಿಕಲ್ ಫೈಬರ್ ಜಾಲವನ್ನು ಹರಡುವ ಯೋಜನೆ ಇದು. 2017ನವೆಂಬರ್ ವೇಲೆಗಾಗಲೇ 103275 ಗ್ರಾಮಗಳಲ್ಲಿ ಎರಡೂವರೆ ಲಕ್ಷ ಕಿಮೀ ಕೇಬಲ್ ಅಳವಡಿಕೆ ಆಗಿದೆ. 2019ಮಾರ್ಚ್ ಗೆ ಮುನ್ನ ಇನ್ನೂ ಬಾಕಿ ಇರುವ 1.5ಲಕ್ಷ ಗ್ರಾಮಗಳಿಗೆ 30,920ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಪ್ಟಿಕಲ್ ಫೈಬರ್ ಸಂಪರ್ಕಜಾಲ ತಾಲುಪಿಸುವ ಕೆಲಸ ನಡೆಯುತ್ತಿದೆ.

ಮೇಲುನೋಟಕ್ಕೆ, ಇದರಲ್ಲಿ ತಪ್ಪೇನು ಅನ್ನಿಸಿದರೂ, ಹೊಟ್ತೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿನ ಮಲ್ಲಿಗೆಗೆ ಏಕೆ ಈಪಾಟಿ ತುರ್ತು ಮತು ಆದ್ಯತೆ ಎಂಬ ಪ್ರಶ್ನೆ ಏಳುತ್ತದೆ. ಇಂಟರ್ನೆಟ್-ಸಾಮಾಜಿಕ ಜಾಲತಾಣಗಳನ್ನೇ ಆಧರಿಸಿ ವ್ಯವಹರಿಸುತ್ತಿರುವ ಹಾಲಿ ಕೇಂದ್ರ ಸರ್ಕಾರ ಜಿಯೊದ ಉಚಿತ ಡೇಟಾ-ಧ್ವನಿಕರೆಗಳನ್ನು ತನ್ನ ಪ್ರಚಾರ-ತಲುಪುವಿಕೆಗಳಿಗೆ ವ್ಯಾಪಕವಾಗಿ ಬಳಸಿಕೊಂಡಿದೆ ಎಂಬುದರಲ್ಲಿ ಮುಚ್ಚುಮರೆಯೇನಿಲ್ಲ. ಹಲವು ವಿಧಾನಸಭಾ ಚುನಾವಣೆಗಳಲ್ಲಿ ಅವರ ಟ್ರಾಲ್ ಸೇನೆಯ ಅಬ್ಬರವನ್ನು ದೇಶ ಕಂಡಿದೆ.

ಈಗ 2019ರ ಚುನಾವಣೆಗೆ ಮುನ್ನ ದೇಶದ ಎಲ್ಲ ಗ್ರಾಮ ಪಂಚಾಯತುಗಳೂ ಇಂಟರ್ನೆಟ್ ಸಂಪರ್ಕ ಪಡೆಯಬೇಕೆಂಬ “ ವಾರ್ ಫೂಟಿಂಗ್” ಆದ್ಯತೆಗಳ ಪಟ್ಟಿಯಲ್ಲಿ ಅಷ್ಟು ಮೇಲೆ ಏಕಿದೆ ಎಂಬುದು ಸ್ವಲ್ಪ ಪ್ರಶ್ನಾರ್ಹ ಸಂಗತಿ. ಮೇಲಾಗಿ ಕೆಂಪುಕೋಟೆ ಸೇರಿದಂತೆ ಎಲ್ಲವನ್ನೂ ಭರದಿಂದ ಖಾಸಗೀಕರಣ ಮಾಡುತ್ತಿರುವ ಸರ್ಕಾರ ಈ ಒಂದು ವಿಷಯದಲ್ಲಿ “ಸರ್ಕಾರಿ” ಹಿಡಿತ ಏಕೆ ಇರಿಸಿಕೊಂಡಿದೆ, ಒಮ್ಮೆ ಡೇಟಾ ಸಂಪರ್ಕ ಆದ ಬಳಿಕ ಅದು ಹೇಗೆಲ್ಲ ಬಳಕೆ ಆಗಲಿದೆ ಎಂಬುದೆಲ್ಲ ಸಾರ್ವಜನಿಕವಾಗಿ ಚರ್ಚೆ ಆಗಬೇಕಾದ ಸಂಗತಿ. ಆದರೆ ಈ ಸಂಗತಿಗಳು ಮಾಧ್ಯಮಗಳ ಕಣ್ಣಿಗೆ ಬೀಳುತ್ತಿಲ್ಲ; ಬಿದ್ದರೂ ಸುದ್ದಿ ಆಗುತ್ತಿಲ್ಲ ಎಂಬುದು ಆಶ್ಚರ್ಯದ ವಿಷಯ.

ಹೆಚ್ಚುವರಿ ಓದಿಗಾಗಿ:

೧. ಪ್ರಿಡೇಟರಿ ಪ್ರೈಸಿಂಗ್ – ರಿಲಯನ್ಸ್ ಜಿಯೋ ಅಧ್ಯಯನ https://speakingthreads.org/ 2017/07/24/predatory-pricing- a-case-study-on-reliance-jio/

೨. ಫಿನಾನ್ಷಿಯಲ್ ಎಕ್ಸ್ ಪ್ರೆಸ್ ಸುದ್ದಿ: https://www.financialexpress. com/industry/reliance-jio-q4- results-why-mukesh-ambani-is- not-worried-despite-a-11-drop- in-average-revenue-per-user/ 1148989/

೩. ದಿ ನ್ಯೂಸ್ ಮಿನಿಟ್ ಸುದ್ದಿ: https://www.thenewsminute.com/ article/no-anti-competitive- practices-ril-and-reliance- jio-cci-rejects-airtel-s- complaint-63437

‍ಲೇಖಕರು avadhi

April 30, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಶಿವಶಂಕರ ಭಟ್ಟ

    Airtel ಕಂಪನಿಯ ನಷ್ಟಕ್ಕೆ ಕಾರಣ ಸ್ವತಃ Airtel ಹೊಣೆ. ತಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲವೆಂದು ಅವರು ಆಡಿದ ಆಟಕ್ಕೆ ಸರಿಯಾಗಿ ಪೆಟ್ಟು ತಿಂದಿದ್ದಾರೆ. ಇವತ್ತು Jio ನಾಳೆ ಮತ್ತೊಂದು. ಒಟ್ಟಿನಲ್ಲಿ ಗ್ರಾಹಕರಿಗೆ ಅನುಕೂಲವಾದರೆ ಸರಿ. ವ್ಯಾಪಾರದಲ್ಲಿ ಪೈಪೋಟಿ ಇರಬಾರದು ಎಂಬುದು ಸರಿಯೆ? ಇನ್ನು ಇತರ ಕಂಪನಿಗಳಿಗೆ ಸಾಲ ಕೊಟ್ಟ ಬ್ಯಾಂಕ್ ಗಳು ಈಗಲೇ ಜಾಗೃತರಾಗಬೇಕಾದ್ದು ಅವರ ಕರ್ತವ್ಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: