ಅಶ್ವಿನಿ
**
ಪತ್ರಿಕೋದ್ಯಮ ಪ್ರಾಧ್ಯಾಪಕರಾದ ಅಶ್ವಿನಿ ಅವರು ತಾವು ನೋಡಿದ ನಾಟದ ಕುರಿತು ಬರೆದ ಬರಹ ಇಲ್ಲಿದೆ.
ನಾಟಕ: ಸ್ಥಾವರವೂ ಜಂಗಮ
ಮೂಲ ಕಥೆ: ಮಂಜುನಾಥ ಲತಾ
ರಂಗರೂಪ: ನಟನ ಮಂಜು
ನಿರ್ದೇಶನ: ಮಂಡ್ಯ ರಮೇಶ್
**
‘ಸ್ಥಾವರವೂ ಜಂಗಮ’ ಎಂಬ ಹೆಸರನ್ನು ಕೇಳಿದಾಗ ನನ್ನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು. ಇದು ಮೈಸೂರಿನ ನಟನ ರಂಗ ತಂಡವು ಭಾನುವಾರ ಪ್ರದರ್ಶಿಸಿದ ನಾಟಕ. ‘ಸ್ಥಾವರವೂ ಜಂಗಮ ಆಗುವುದು ಹೇಗೆ, ನಾಟಕ ಯಾವ ವಿಷಯದ ಕುರಿತು ಇರಬಹುದು ಹೇಗೆ ಪ್ರಸ್ತುತಪಡಿಸಿರಬಹುದು ಎಂಬ ಕುತೂಹಲ ಹೆಸರು ಕೇಳಿದಾಕ್ಷಣ ಹುಟ್ಟಿಕೊಂಡಿದ್ದು ಸತ್ಯ. ಅಂದು ಸಂಜೆ ತಪ್ಪದೇ ನಾಟಕ ನೋಡಲೇಬೇಕು ಎಂದು ನಿರ್ಧರಿಸಿ ಕುಟುಂಬದವರೆಲ್ಲ ಒಟ್ಟಾಗಿ ಹೋಗಿ ನಾಟಕ ನೋಡಿ ಬಂದೆವು. ಖಂಡಿತವಾಗಿಯೂ ನಾಟಕ ನಿರಾಸೆಯನ್ನು ಉಂಟು ಮಾಡಲಿಲ್ಲ ಎನ್ನುವುದನ್ನು ಖುಷಿಯಿಂದ ಹೇಳಬಯಸುತ್ತೇನೆ. ‘ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ’ ಎಂಬ ಸಂದೇಶವನ್ನು ರಾಷ್ಟ್ರಕವಿ ಕುವೆಂಪು ಅವರು ಎಂದೋ ನೀಡಿದ್ದರೂ ಇಂದಿಗೂ ನಾವದನ್ನು ಸಾಧಿಸಲು ಸಾಧ್ಯವೇ ಆಗಿಲ್ಲ. ಆ ನಿಟ್ಟಿನಲ್ಲಿ ಜನರ ಪ್ರಜ್ಞೆಯನ್ನು ಬಡಿದೆಬ್ಬಿಸುವ ಪ್ರಯತ್ನ ನಟನ ಪ್ರಸ್ತುತಪಡಿಸಿರುವ ಈ ನಾಟಕ ‘ಸ್ಥಾವರವೂ ಜಂಗಮ’ ನಾಟಕವು ನಮ್ಮ ನಿಮ್ಮೆಲ್ಲರ ಕಥೆ. ನಮ್ಮ ಸಮಾಜದ ಕಥೆ. ಜಗತ್ತಿನ ಕಥೆ.
ಮನುಷ್ಯ, ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನ ಪ್ರತಿ ದಿನ ಮಾಡುತ್ತಿದ್ದರೂ, ಕೃತಕ ಬುದ್ಧಿಮತ್ತೆಯ ಪ್ರಪಂಚವನ್ನೇ ಸೃಷ್ಟಿಸಿದ್ದರೂ ಅವನ ಮೂಲ ಗುಣ ಅಷ್ಟು ಸುಲಭದಲ್ಲಿ ಬಿಟ್ಟು ಹೋಗುವಂತದ್ದಲ್ಲ. ಎಷ್ಟೇ ವಿದ್ಯಾವಂತರಾದರೂ, ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ವರ್ಗ, ಜಾತಿ ಧರ್ಮಗಳ ಹಿಡಿತದಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಲು ಮನುಷ್ಯನಿಗೆ ಸಾಧ್ಯವಾಗಿಲ್ಲ. ಮನುಷ್ಯನನ್ನು ಕೇವಲ ಮನುಷ್ಯನನ್ನಾಗಿ ಕಾಣದೆ, ಜಾತಿ ಧರ್ಮಗಳ ವರ್ಗಗಳ ಮೂಲಕ ಗುರುತಿಸುವ, ತನ್ನ ವರ್ಗವೇ ಶ್ರೇಷ್ಠ ಎಂಬ ಭಾವನೆಯನ್ನ ಇಂದಿಗೂ ಹೊತ್ತು ತಿರುಗುವ ಮನುಷ್ಯನ ಗುಣವನ್ನು ನಾಟಕ ಅದ್ಭುತವಾಗಿ ಬಿಂಬಿಸುತ್ತದೆ. ಊರಿನ ಮಧ್ಯದಲ್ಲಿ ಧುತ್ತೆಂದು ಪ್ರತ್ಯಕ್ಷವಾಗಿ ಬಿಡುವ ಒಂದು ಬಿಳಿಯ ಬಂಡೆ ಕಲ್ಲಿನ ಸುತ್ತ ಕಥೆ ಸಾಗುತ್ತದೆ. ಆ ಕಲ್ಲಿನಲ್ಲಿ ಯಾರ ಮೂರ್ತಿಯನ್ನು ಕೆತ್ತಬೇಕು ಎಂದು ಪ್ರಾರಂಭವಾಗುವ ಚರ್ಚೆ ಊರನ್ನು ಹೇಗೆ ವಿಂಗಡಿಸುತ್ತಾ ಹೋಗುತ್ತದೆ ಎನ್ನುವುದನ್ನು ನಾಟಕ ಅದ್ಭುತವಾಗಿ ಕಟ್ಟಿಕೊಡುತ್ತದೆ. ಪ್ರತಿ ಜಾತಿಯ ಜನರು ತಮ್ಮ ನಾಯಕನ ಮೂರ್ತಿಯನ್ನೇ, ತಮ್ಮ ದೇವರ ಮೂರ್ತಿಯನ್ನೇ ಕೆತ್ತಬೇಕು ಎಂಬ ಪಣತೊಟ್ಟು ಅದಕ್ಕಾಗಿ ನಡೆಸುವ ಹರಸಾಹಸ ನಾಟಕದ ವಸ್ತು ವಿಷಯ.
ಹಿಮಾಲಯದಿಂದ ಬಂದ ಸ್ವಾಮೀಜಿಗಳು ಯಾರ ಮೂರ್ತಿಯನ್ನಾದರೂ ಕೆತ್ತ ಬಹುದು ಮತ್ತು ಅದನ್ನು ನಾವು ಸ್ವೀಕರಿಸಬೇಕು ಎಂದು ನಿರ್ಧಾರಕ್ಕೆ, ಊರ ಜನರು ಬರುತ್ತಾರೆ. ಹಾಗಾದರೆ ಹಿಮಾಲಯದ ಸ್ವಾಮೀಜಿ ಕೆತ್ತಿದ ಮೂರ್ತಿ ಯಾರದ್ದು? ಊರಿನವರೆಲ್ಲರನ್ನು ಒಪ್ಪಿಸುವಂತಹ ಮೂರ್ತಿ ಕೆತ್ತಲು ಸಾಧ್ಯವಾಗುತ್ತದೆಯೇ ಎಂಬುದನ್ನು ಅರಿಯಲು ನೀವು ನಾಟಕವನ್ನು ನೋಡಬೇಕು. ಇಡೀ ನಾಟಕದ ಶಕ್ತಿ ಇಷ್ಟು ಕ್ಲಿಷ್ಟವಾದ ಮತ್ತು ಗಹನವಾದ ವಿಷಯವನ್ನು ಪ್ರಸ್ತುತಪಡಿಸಿರುವ ಶೈಲಿಯಲ್ಲಿದೆ. ಮಂಜುನಾಥ ಲತಾ ಅವರ ಮೂಲ ಕಥೆಯನ್ನು ರಂಗರೂಪಕ್ಕೆ ತಂದಿದ್ದಾರೆ ನಟನ ಮಂಜು. ವಿಡಂಬನೆಯ ಶೈಲಿಯನ್ನು ಆಯ್ಕೆ ಮಾಡಿಕೊಂಡು ಅದರ ಮೂಲಕ ಬಹಳ ಅಚ್ಚುಕಟ್ಟಾಗಿ ವಿಷಯವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸ್ಯದ ಶೈಲಿ ಈ ನಾಟಕಕ್ಕೆ ಹೆಚ್ಚು ಸೂಕ್ತ ಎಂದು ನನಗೂ ಅನ್ನಿಸುತ್ತದೆ. ಇಡೀ ನಾಟಕದುದ್ದಕ್ಕೂ ನಗೆಯ ಕಡಲಿನಲ್ಲಿ ತೇಲಿದ ಪ್ರೇಕ್ಷಕರು ನಾಟಕದ ಕೊನೆಯ ಹಂತದಲ್ಲಿ ಮೌನಕ್ಕೆ ಜಾರಿ ಆತ್ಮಾವಲೋಕನ ಮಾಡಿಕೊಳ್ಳುವಂಥದ್ದನ್ನು ನಾವು ಕಾಣಬಹುದಾಗಿತ್ತು. ಇದು ನಾಟಕದ ಯಶಸ್ಸು. ಗಹನವಾದ ಈ ವಿಷಯವನ್ನು ಕ್ಲಿಷ್ಟಕರವಾದ ಶೈಲಿಯಲ್ಲೋ ಅಥವಾ ವಿಮರ್ಶಾತ್ಮಕ ಶೈಲಿಯಲ್ಲೋ ಪ್ರಸ್ತುತಪಡಿಸಿದ್ದರೆ ಜನರನ್ನು ಅದು ಇಷ್ಟು ಯಶಸ್ವಿಯಾಗಿ ತಲುಪುತ್ತಿರಲಿಲ್ಲವೆನಿಸುತ್ತದೆ.
ನಾಟಕದ ನಿರ್ದೇಶನದ ಜವಾಬ್ದಾರಿ ಮಂಡ್ಯ ರಮೇಶ್ ಅವರದ್ದು. ರಂಗಭೂಮಿಗೆ ತಮ್ಮನ್ನೇ ಅರ್ಪಿಸಿಕೊಂಡಿರುವ ರಮೇಶ ಅವರ ಮತ್ತೊಂದು ಅದ್ಭುತವಾದ ಕೊಡುಗೆ ಈ ನಾಟಕ. ಇಂದಿನ ಸಮಾಜಕ್ಕೆ ಅವಶ್ಯಕ ಎನಿಸುವ, ಸಮ ಸಮಾಜವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಏನೆಂದು ಅರಿತುಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ. ಜಾತಿ, ವರ್ಗ, ಧರ್ಮ ರಹಿತವಾದ ಸಮಾನತೆಯ – ಮಾನವೀಯ ಸಮಾಜವನ್ನು ಸೃಷ್ಟಿಸುವಲ್ಲಿ ಜನರ ಚಿತ್ತ ಹೊರಳಬೇಕಾಗಿರುವ ಈ ಸಂದರ್ಭದಲ್ಲಿ ಇಂತಹ ನಾಟಕ ಮನೋರಂಜನೆಯ ಮೂಲಕ ಅದನ್ನು ಅನಾಯಾಸವಾಗಿ ಮಾಡಿಬಿಡುತ್ತದೆ ಎನ್ನುವುದು ನಾನು ಕಂಡುಕೊಂಡಿರುವ ಸತ್ಯ. ಎಲ್ಲ ದೇವರೂ ಒಂದೇ ಆದರೆ ದೇವರ ಹೆಸರಿನಲ್ಲಿ ಮನುಷ್ಯರು ಹೇಗೆ ತಮ್ಮ ನಡುವೆ ಗೋಡೆ ಕಟ್ಟಿಕೊಳ್ಳುತ್ತಿದ್ದಾರೆ, ದೇವರಿಗಾಗಿ ನಡೆಸುವ ಹೊಡೆದಾಟ, ಹುಡುಕಾಟವನ್ನು ರಂಗದ ಮೇಲೆ ಮನಮುಟ್ಟುವಂತೆ ಕಟ್ಟಿಕೊಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಜಿ.ಎಸ್ ಶಿವರುದ್ರಪ್ಪನವರ ‘ಎಲ್ಲೋ ಹುಡುಕಿದೆ ಇಲ್ಲದ ದೇವರ ‘ ಹಾಡಿನ ಮೂಲಕ ನಾಟಕ ಪರಿಣಾಮಕಾರಿಯಾಗಿ ಮುಕ್ತಾಯಗೊಳ್ಳುತ್ತದೆ. ಚಾಮರಾಜನಗರ ಕೊಳ್ಳೇಗಾಲದ ಭಾಷೆಯ ಶೈಲಿಯನ್ನು ನಾಟಕದಲ್ಲಿ ಬಳಸಿಕೊಳ್ಳಲಾಗಿದೆ. ಕಲಾವಿದರು ಬಹಳ ಸಹಜವಾಗಿ, ನೈಜವಾಗಿ ಈ ಶೈಲಿಯಲ್ಲಿ ಮಾತನಾಡಿದ್ದು ನಾಟಕದ ಯಶಸ್ಸಿಗೆ ಕಾರಣವಾಯಿತು. ಅಲ್ಲಿನ ಕನ್ನಡದ ಶೈಲಿಯನ್ನು ಕೇಳುವುದೇ ಸೊಗಸು. ನಮ್ಮ ಸಂಜೆಯನ್ನು ಒಂದು ಅದ್ಭುತವಾದ ಪ್ರಜ್ಞಾಪೂರ್ವಕವಾದ ನಾಟಕವನ್ನು ವೀಕ್ಷಿಸುವಲ್ಲಿ ಕಳೆದದ್ದು, ನನಗಂತೂ ಸಂತಸ ತಂದಂತಹ ವಿಷಯ.
ಇನ್ನು ನಟ ನಟಿಯರ ಬಗ್ಗೆ ಹೇಳುವುದಾದರೆ, ನಟನ ರಂಗ ತಂಡದಲ್ಲಿ ಒಂದು ವರ್ಷದ ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳು ಈ ನಾಟಕದಲ್ಲಿ ಪಾತ್ರವಹಿಸಿದ್ದು ವಿಶೇಷ. ಪ್ರತಿ ಕಲಾವಿದರು ಪಾತ್ರದ ಒಳಹೊಕ್ಕು ಅದ್ಭುತವಾಗಿ ಮನೋಜ್ಞವಾಗಿ ಅಭಿನಯಿಸಿದರು. ಹುಟ್ಟಿನಿಂದ ಕಿವಿ ಕೇಳದ, ಮಾತು ಬಾರದ ‘ಪ್ರಜ್ಞ’ ಎಂಬ ಮೈಸೂರಿನ ಹುಡುಗಿ ನಾಟಕದ ಪಾತ್ರಧಾರಿ. ಇವರು ನಟನ ಸೇರಿದ ನಂತರ ಮಾತನಾಡಲು ಸಾಧ್ಯವಾಗಿರುವುದು ಹಾಗೂ ವೇದಿಕೆಯ ಮೇಲೆ ಸಂಭಾಷಣೆಯನ್ನು ಹೇಳಲು ಸಾಧ್ಯವಾಗಿರುವುದು ರಂಗಭೂಮಿಯ ಶಕ್ತಿಯನ್ನು ಬಿಂಬಿಸುತ್ತದೆ. ಇದಕ್ಕೆ ಮಂಡ್ಯ ರಮೇಶ್ ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸಲೇಬೇಕು. ನಾಟಕಕ್ಕೆ ಗೀತ ಸಾಹಿತ್ಯ ಮನೋಜ್ ಅವರು ನೀಡಿದ್ದಾರೆ. ದಿಶಾ ರಮೇಶ್ ಅವರ ಕಂಠದಲ್ಲಿ ಹಾಡುಗಳು ಅದ್ಭುತವಾಗಿ ಮೂಡಿ ಬಂದಿರುವುದು ನಾಟಕದ ಯಶಸ್ಸಿಗೆ ಮತ್ತೊಂದು ಕಾರಣ. ನಾಟಕದ ಬೆಳಕಿನ ನಿರ್ವಹಣೆಯನ್ನು ಚೇತನ್ ಸಿಂಗಾನಲ್ಲೂರು ಅವರು ನಿರ್ವಹಿಸಿದ್ದು, ನಾಟಕದ ವಿನ್ಯಾಸದಲ್ಲಿ ಮೇಘ ಸಮೀರಾ ಅವರು ಕಾರ್ಯನಿರ್ವಹಿಸಿದ್ದಾರೆ. ಹೀಗೆ ಮತ್ತಷ್ಟು ಅರ್ಥಪೂರ್ಣವಾದ ಸಮಾಜ ಸ್ನೇಹಿ ನಾಟಕಗಳನ್ನು ನಟನ ನೀಡುತ್ತಿರಲಿ, ಅದನ್ನು ವೀಕ್ಷಿಸುವ ಭಾಗ್ಯ ನಮ್ಮದಾಗಲಿ.
0 ಪ್ರತಿಕ್ರಿಯೆಗಳು