ಜಯರಾಮಾಚಾರಿ
**
ನಾನು ಮೊದಲ ಸಲ ಅಣಬೆ ಕಂಡಿದ್ದು ಅಂದ್ರಳ್ಳಿಯಲ್ಲಿ, ಇವತ್ತಿಗೆ ಲೇಔಟಾಗಿರುವ ಅಂದ್ರಳ್ಳಿಯಲ್ಲಿ ನನ್ನ ದೊಡ್ಡಣ್ಣ ಸೈಟು ತೆಗೆದುಕೊಂಡಿದ್ದು ಹದಿಮೂರು ಸಾವಿರಕ್ಕೆ, ಮನೆ ಕಟ್ಟಿಸಲೆಂದೇ ಅವರು ಕೂಡಿಡುತ್ತಿದ್ದ ನೂರರ ನೋಟಿನ ಕಂತೆಯ ನೆನಪು ನನಗಿನ್ನೂ ಇದೆ, ಅದು ಭಯಂಕರ ಶ್ರಮದ ದುಡ್ಡು ಬೆಳಿಗ್ಗೆ ಐದು ಆರಕ್ಕೆ ಮನೆ ಬಿಟ್ಟರೆ ಮಧ್ಯರಾತ್ರಿಗೆ ಮನೆಗೆ ಬರ್ತಿದ್ದ ದೊಡ್ಡಣ್ಣ ಒಂದು ಸ್ವಂತ ಸೂರಿಗಾಗಿ ಕಷ್ಟಪಟ್ಟಿರುವುದು ಅಷ್ಟಿಷ್ಟಲ್ಲ.
ಕೊನೆಗೂ ಅಂದ್ರಳ್ಳಿಯೆಂಬ ಕೊಂಪೆಯಲ್ಲಿ ಸ್ವಂತ ಮನೆಯ ಪಾಯ ಎದ್ದಾಗ ಆ ಕಟ್ಟುತ್ತಿದ್ದ ಮನೆಯನ್ನು ಕಾಯಲು ಬೆಳಿಗ್ಗೆಯಲ್ಲ ನನ್ನ ಮೂರನೇ ಅಣ್ಣ ನೋಡಿಕೊಂಡರೆ, ಸಂಜೆಗೆ ನಾನು ನನ್ನವ್ವನ ನನ್ನ ಕೊನೆ ಅಣ್ಣ ಹೋಗಬೇಕಿತ್ತು. ನನಗೂ ಅಣ್ಣನಿಗೂ ಹದಿಹರೆಯದ ವಯಸ್ಸು ನಾವು ಕ್ರಿಕೆಟ್ಟು ಟೀವಿ ಅಕ್ಕನ ಮನೆಯಲ್ಲೇ ಸಂಜೆವರೆಗೂ ಇದ್ದು ಆಮೇಲೆ ಬೈದುಕೊಂಡು ಅಲ್ಲಿಗೆ ಹೋಗುವ ಹೊತ್ತಿಗೆ ಅವ್ವ ಅಲ್ಲಿರುತ್ತಿದ್ದಳು.
ಸೀಟು ಹಾಕದ ಗೋಡೆ ಎದ್ದ ಮನೆಯಲ್ಲಿ ಅವ್ವ ಮೂರು ಇಟ್ಟಿಗೆ ಇಟ್ಟು ಮನೆಯಿಂದ ತಂದ ಅಲ್ಯೂಮಿನಿಯಂ ಪಾತ್ರೇಲಿ ಹಾಲು ಕಾಯಿಸಿ ಟೀಪುಡಿ ಹಾಕಿ ಟೀ ಮಾಡುತ್ತಿದ್ದಳು, ಕೆಲವೊಮ್ಮೆ ಹುಳ್ಳಿಕಾಳು ಉರಿದರೆ, ಕೆಲವೊಮ್ಮೆ ಕಡಲೆಕಾಳು.ನಾವು ರಾತ್ರಿಯ ಹೊತ್ತಿಗೆ ಅಲ್ಲಿರುತ್ತಿದ್ದೆವು ಟೀವಿ ಕರೆಂಟು ಇಲ್ಲದ ಆ ಮನೆಯಲ್ಲಿ ಚಾಪೆ ಹಾಸಿಕೊಂಡು ಅವ್ವ ಹೇಳುವ ಕತೆಗಳಿಗೆ ಚಾಡಿಗಳಿಗೆ ಕಿವಿಯಾಗಿ ಮಲಗುತ್ತಿದ್ದೆವು.
——
ಮಳೆ ಬಿದ್ದ ಸಂಜೆಯಲ್ಲಿ ಆ ಮನೆಯ ಸ್ವಲ್ಪ ದೂರದ ಹುತ್ತದಲ್ಲಿ ಇಳಿ ಗುಡ್ಡದಲ್ಲಿ ಆಕಾಶದಿಂದ ಬಿದ್ದ ಗಂಧರ್ವಕನ್ಯೆಯರಂತೆ ಅಣಬೆಗಳು ಎದ್ದಿರುತ್ತಿದ್ದವು. ಕೆಲವು ಕಡೆಯಂತೂ ಎಷ್ಟು ದೊಡ್ಡ ಗುಚ್ಛವೆಂದರೆ ಈ ಕಾಲಕ್ಕೆ ಅದು ನೋಡಲು ಅಸಾಧ್ಯದಷ್ಟು. ಸಣ್ಣಣಬೆ ದುಂಡಣಬೆ ದೊಡ್ಡ ಛತ್ರಿ ಅಣಬೆ ಕಾರೇಕಾಯಿ ಗಾತ್ರದ ಗೋಲಿ ಅಣಬೆ ಹುಚ್ಚಣಬೆ ಹೀಗೆ ತರಹ ತರಹದವು.
ಅವ್ವ ತನ್ನ ಸೀರೆಯ ಮುಡಿಯಲ್ಲಿ ಸಿಕ್ಕ ಅಣಬೆಯನ್ನ ಕಿತ್ತು ಮಡಿಲಿಗಾಕಿಕೊಂಡು ಬರುತ್ತಿದ್ದಳು. ಅಣಬೆಗೆ ಕಬ್ಬಿಣ ತಾಕಿಸಿದರೆ ಅವು ಮಾಯವಾಗುತ್ತವೆ ಎನ್ನುತ್ತಿದ್ದಳು. ಆದರೂ ಸ್ವಲ್ಪ ದೂರದಲ್ಲಿದ್ದ ಕೆಲವು ಕಿಡಿಗೇಡಿಗಳು ಸಲಾಕೆಯಲ್ಲಿ ಅಗೆದು ಬಗೆದು ತೆಗೆದುಕೊಂಡ ಹೋಗ ಜಾಗದಲ್ಲಿ ಮತ್ತೆ ಅಣಬೆ ಹುಟ್ಟಿದ್ದೇ ನೋಡಿಲ್ಲ.
—
ಅವ್ವ ಆರಿಸಿ ತಂದ ಅಣಬೆಯನ್ನ ತೊಳೆದು ಮಣ್ಣನೆಲ್ಲ ಹೋಗಿಸಿ ಬಿಸಿ ಬಿಸಿ ಕೆಂಡಕ್ಕೆ ಸುರಿದೋ, ಪಾತ್ರೆಯಲ್ಲಿ ಉಪ್ಪು ಮೆಣಸು ಹಾಕಿ ಉರಿದೋ ನಮಗೆ ಕೊಡುತ್ತಿದ್ದಳು. ಎಂತ ರುಚಿಯದು ! ಕಮ್ಮಿ ಕಣ್ಣಿಗೆ ಬಿದ್ದ ಅಣಬೆಗಳು ನಾಲಗೆಯಲ್ಲಿ ಸ್ವರ್ಗವನ್ನೇ ಸೃಷ್ಟಿಸುತ್ತವೆ. ಹುಚ್ಚಣಬೆ ತಿನ್ನಬಾರದು ಎಂದು ಗಿಡ್ಡದ ಕಡ್ಡಿಯ ತೆಳು ಪರದೆಯ ಅಣಬೆ ತೋರಿಸುತ್ತಿದ್ದಳು. ಈಗನಿಸುತ್ತೆ ಅವೆಲ್ಲ ಮ್ಯಾಜಿಕ್ ಮಶ್ರೂಮ? ಹುಚ್ಚಲ್ಲ ಹಿಡಿತಾ ಇದ್ದಿದ್ದು ನಶೆ ಅನಿಸುತ್ತದೆ. ಹೆಂಗಸರಂತೂ ತಿನ್ನಲೇಬಾರದು ಎಂದು ಅವ್ವ ಹೇಳುತ್ತಿದ್ದಳು
—
ಅದೇನೋ ಟಾರು ಬಿದ್ದು ಅಲ್ಲಲ್ಲಿ ಬಿಲ್ಡಿಂಗುಗಳು ಎದ್ದ ಮೇಲೆ ಅಲ್ಲಿ ಅಣಬೆಗಳು ಹುಟ್ಟಲೇ ಇಲ್ಲ
—
ನೆನ್ನೆ ಮಶ್ರೂಮ್ ಪೆಪ್ಪರ್ ಡ್ರೈ ಮಾಡಿ ಚಪಾತಿಯಲ್ಲಿ ತಿಂದಾಗ ಇವೆಲ್ಲ ನೆನಪಾಯ್ತು.
0 ಪ್ರತಿಕ್ರಿಯೆಗಳು