ದೀಕ್ಷಿತ್ ನಾಯರ್
**
(ಮಲಯಾಳಂ ಕವಿತೆಯೊಂದರ ಸ್ಫೂರ್ತಿ)
ಕವಿತೆಯಿಲ್ಲದೆ ಬದುಕಬಹುದಾ?
ಕವಿತೆಯಿಲ್ಲದೆ ಮೊಲೆಯುಣ್ಣುವ ಕೂಸು ನಗುವುದಿಲ್ಲ
ಹಟ್ಟಿಯೊಳಗಿನ ಹಸುವಿನ ಕೆಚ್ಚಲಿನಲ್ಲಿ ಹಾಲು ಸ್ವರ ಬಿಡುವುದಿಲ್ಲ
ಬೃಂದಾವನದ ಕೃಷ್ಣ ತುಳಸಿ ಅರಳುವುದಿಲ್ಲ
ಒಲೆಯ ಮೇಲಿನ ರೊಟ್ಟಿ ಬೇಯುವುದಿಲ್ಲ;
ಕವಿತೆಯಿಲ್ಲದೆ ಬದುಕಬಹುದಾ?
ಕವಿತೆಯಿಲ್ಲದೆ ಬದುಕಬಹುದಾ?
ಕವಿತೆಯಿಲ್ಲದೆ ಪ್ರೀತಿ ಹುಟ್ಟುವುದಿಲ್ಲ
‘ಅವಳನ್ನು’ ನೋಡಿಯೂ ನಮ್ಮೊಳಗಿನ ಪ್ರೇಮಿ ನೆಟ್ಟಗಾಗುವುದಿಲ್ಲ
ಸರಿ ರಾತ್ರಿಗಳಲ್ಲಿ ರಸಿಕತೆಯ ಕನಸುಗಳು ಬೀಳುವುದಿಲ್ಲ
ನಮ್ಮ ಮೈಬಯಕೆ ತೀರುವುದಿಲ್ಲ;
ಕವಿತೆಯಿಲ್ಲದೆ ಬದುಕಬಹುದಾ?
ಕವಿತೆಯಿಲ್ಲದೆ ಬದುಕಬಹುದಾ?
ಕವಿತೆಯಿಲ್ಲದೆ ಎಂದೋ ಸತ್ತ
ಅಪ್ಪನನ್ನು ಮರೆಯಲಾಗುವುದಿಲ್ಲ
ಸರೀಕರ ಎದುರು ಕೂಳಿಗಾಗಿ ಸೆರಗೊಡ್ಡಿ ಗೋಳಿಟ್ಟ ಅವ್ವನ ಚಿತ್ರ
ಕಣ್ಣುಗಳಿಂದ ಕದಡುವುದಿಲ್ಲ
ನಮ್ಮನ್ನು ಅಲ್ಲಾಡಿಸುವ ನೂರಾರು
ಎದೆಗುದಿಗಳು ದೂರವಾಗುವುದಿಲ್ಲ
‘ಬದುಕುಳಿಯುವ’ ಜೀವ ಚೈತನ್ಯ ಉಳಿಯುವುದಿಲ್ಲ;
ಕವಿತೆಯಿಲ್ಲದೆ ಬದುಕಬಹುದಾ?
0 ಪ್ರತಿಕ್ರಿಯೆಗಳು