ಅವಿನಾಶ್ ಎಚ್ ಎಸ್ ಓದಿದ ‘ನೀನ್ಯಾರಿಗಲ್ಲದವಳು’

ಅವಿನಾಶ್ ಎಚ್ ಎಸ್

ಎರಡು ಹೆಣ್ಣು, ಒಂದು ಗಂಡು ಮಗುವಿನ ನಂತರ ಆ‌ ಬಡ ದಂಪತಿಗೆ ನಾಲ್ಕನೆಯದು ಹೆಣ್ಣಾಯಿತು. ಅಪ್ಪನಿಗೆ ತೀರ ಬೇಸರ. ಮಗುವನ್ನು ನೋಡಲು ಆಸಕ್ತಿ ಇಲ್ಲ. ಹೆಸರು ಇಡುವ‌ ಪ್ರಯತ್ನವೂ ಆಗಲಿಲ್ಲ. ಸಿಕ್ಕ ಸಿಕ್ಕ ಹೆಸರಲ್ಲಿ ಆ ಮಗುವನ್ನು ಕರೆಯುತ್ತಿದ್ದರು.

ಒಮ್ಮೆ ಆ ಮಗುವನ್ನು ಒಲೆಯ ಮುಂದೆ ಮಲಗಿಸಿ, ಅಮ್ಮ ಹೊರಗೆ ಹೋಗಿದ್ದಳು. ಒಲೆಯಲ್ಲಿ ಸುಡಲೆಂದು ಹಾಕಿದ್ದ ಹಲಸಿನ ಬೀಜ ಸಿಡಿದಾಗ ಕೆಂಡ ಚಿಮ್ಮಿ ಆ‌ ಮಗುವಿನ ಮೈ‌ ಮೇಲೆ ಬಿದ್ದಿತ್ತು. ಅದಕ್ಕೆ‌ ಸರಿಯಾದ ಚಿಕಿತ್ಸೆಯಾಗದ ಸೆಪ್ಟಿಕ್ ಆಗಿ ಗಾಯ ರಣವಾಗಿತ್ತು. ಆಗ‌ ಅಚ್ಚರಡಿ ಎಸ್ಟೇಟಿನ ಮಾಲಕಿ, ಬ್ರಿಟೀಷರ ಹೆಣ್ಣುಮಗಳಾದ‌ ಮೀಸಿಯಮ್ಮನ ಕಾಳಜಿಯಿಂದ ಮಗುವಿಗೆ ಚಿಕಿತ್ಸೆ ದೊರೆತು ಆ ಮಗು ಬದುಕಿಕೊಂಡಿತು.
ಹೀಗೆ ಬದುಕಿಕೊಂಡ ಆ ಹೆಣ್ಣು ಮಗು ಚೂಟಿಯಾಗಿದ್ದಳು. ಆ ಚುರುಕು ಹುಡುಗಿಯನ್ನ ಕಂಡ ಸರ್ಕಾರಿ ಶಾಲೆಯ ಮಾಸ್ತರ್ ಶಾಲೆಗೆ ಕರೆದೋಯ್ದರು. ನಿನ್ನೆಸರೇನು ಅಂದಾಗ, ಊರಿನವರೆಲ್ಲಾ ಕರೆಯುತ್ತಿದ್ದ‌ ಮೋಟು, ಮೋಟಿ ಹೆಸರು ಹೇಳಿತು ಮಗು. ಆಗ, ಮೇಷ್ಟ್ರು ಇಟ್ಟ ಹೆಸರೇ ಮೋಟಮ್ಮ. ಆದರೆ ಮುಂದೆ ಓದಲು ಹೋದಂತೆಲ್ಲಾ ಆಕೆಗೆ ಆ ಹೆಸರೇ ಇಷ್ಟವಾಗದೆ ಅಟೆಂಡೆನ್ಸ್ ಕೂಗಿದಾಗ ಪ್ರೆಸೆಂಟ್ ಹೇಳಲು ಹಿಂಜರಿಯುತ್ತಿದ್ದಳು.

ಪೋಷಕರ ನಿರ್ಲಕ್ಷ್ಯ, ಬಡತನದಿಂದ ಬಾಲ್ಯ ಕಳೆದ ಮೋಟಮ್ಮ ಮುಂದೆ ಇಡೀ ಕುಟುಂಬ, ಊರಿನ ನೆಚ್ಚಿನ ಮಗಳಾಗಿ ಬೆಳೆದಳು. ಐರನ್ ಲೇಡಿ ಇಂದಿರಾಗಾಂಧಿ ಅವರಿಗೂ ಆಪ್ತರಾದ ಮೋಟಮ್ಮನವರ ಮದುವೆಗೆ ಇಂದಿರಾಗಾಂಧಿ ಬಂದು ಐದು ತಾಸಿಗೂ ಹೆಚ್ಚು ಕಾಲ ಮದುವೆ ಮನೆಯಲ್ಲಿ ಓಡಾಡಿದ್ದರು.
ಇಂಥ ಮೋಟಮ್ಮನವರು ವಿಧಾನಪರಿಷತ್ ಸದಸ್ಯರಾದಾಗ ಹತ್ತಿರದಿಂದ ಪರಿಚಯವಾಯಿತು. ಬಳ್ಳಾರಿ ಪಾದಯಾತ್ರೆಯಲ್ಲಿ ಅವರ ಉತ್ಸಾಹದ ಪರಿಚಯವಾಗಿತ್ತು.

ನಾನು ಪಬ್ಲಿಕ್‌ ಟಿವಿಯಲ್ಲಿದ್ದಾಗ ನಾನು ನನ್ನ ಸ್ಟೈಲು ಎನ್ನೋ ಪ್ರೋಗ್ರಾಂ ಮಾಡ್ತಾ ಇದ್ವಿ. ನಮ್ ರಿಪೋರ್ಟರ್ ರಕ್ಷಾ, ರಾಜಕಾರಣಿಗಳ ರಾಜಕೀಯೇತರ ಬದುಕಿನ ಅನಾವರಣ ಮಾಡ್ತಿದ್ದರು. ಆ ಕಾರ್ಯಕ್ರಮಕ್ಕಾಗಿ ಮೋಟಮ್ಮನವರ ಸಂದರ್ಶನ ಮುಗಿಸಿಕೊಂಡು ಬಂದ ರಕ್ಷಾ ಮೋಟಮ್ಮನವರು ಹೇಳಿದ ಬದುಕಿನ ಕತೆಯ ಬಗ್ಗೆ ಆಗಾಗ ಹೈಲೈಟ್ಸ್ ಹೇಳ್ತಿದ್ಲು.

ಮೋಟಮ್ಮ ಅವರ ಅನ್ ಎಡಿಟ್ ಮಾತುಗಳನ್ನು ಪೂರ್ತಿ ಕೇಳಿಸಿಕೊಂಡು ಅರೆ… ಬರೆದರೆ ಒಳ್ಳೆ ಪುಸ್ತಕವಾಗುತ್ತಲ್ಲ ಅಂದ್ಕೊಂಡಿದ್ದೆ. ಅದೀಗ ನಿಜವಾಗಿದೆ‌ ಬಿದಿರು ನೀನಾರಿಗಲ್ಲಾದವಳು ಹೆಸರಲ್ಲಿ Veeranna Kammar ವೀರಣ್ಣ ಕಮ್ಮಾರರು ಮೋಟಮ್ಮನವರ ಆತ್ಮಕತೆ ಬರಹ ರೂಪಕ್ಕೆ ತಂದಿದ್ದಾರೆ.

ಮೋಟಮ್ಮನವರ ಬಡತನದ ಬಾಲ್ಯದ ದಿನಗಳ ಕತೆ ಕಣ್ಣಂಚಲ್ಲಿ‌ ನೀರು ತರಿಸುವುದುಂಟು.

ಇಂದಿರಾಗಾಂಧಿ ಜೊತೆ ಓಡಾಡಿದ ಮಾತ್ರಕ್ಕೆ ಮೋಟಮ್ಮ ಎಲ್ಲಾ ಅಧಿಕಾರ ಪಡ್ಕೊಂಡ್ರು ಅನ್ನೋ ಮಾತನ್ನು ನಾನು ನಂಬಿಕೊಂಡಿದ್ದೆ. ಆದರೆ ಇಡೀ ಪುಸ್ತಕ ಓದಿದ ನಂತರ ಅವರ ಬಗೆಗಿನ ಅಭಿಪ್ರಾಯ ಬದಲಾಗಿದೆ. ಈವರೆಗೆ ಏಳು ಎಲೆಕ್ಷನ್ ನಲ್ಲಿ ಸ್ಪರ್ಧಿಸಿ, ಮೂರು ಬಾರಿ ಶಾಸಕಿಯಾದ ಮೋಟಮ್ಮನವರಿಗೆ 2010 ರ ನಂತರ ಚುನಾವಣಾ ರಾಜಕೀಯ ಆಘಾತ ಮಾಡಿರುವುದಂತು ನಿಜ.

ಮಹಿಳಾ ಸಚಿವರಾಗಿ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದ ಖ್ಯಾತಿ ಮೋಟಮ್ಮನವರದು. ಸ್ತ್ರೀ ಶಕ್ತಿ ಸಂಘಗಳು ತಮ್ಮ ರಾಜಕೀಯ ಶಕ್ತಿ ಹೆಚ್ಚಿಸುತ್ತದೆ ಎಂಬ ಅವರ ಆಸೆ ಅವರ ಪಾಲಿಗೆ ನಿಜವಾಗಲಿಲ್ಲ. ಆದರೆ ಉಳ್ಳವರ ರಾಜಕೀಯ ದಾಳವಾದದ್ದನ್ನು ವಿಷದವಾಗಿ ವಿವರಿಸಿದ್ದಾರೆ. ತಮ್ಮ ತಪ್ಪುಗಳನ್ನು ಅಷ್ಟೇ ಮುಗ್ಧವಾಗಿಯೂ ಹೇಳಿಕೊಂಡಿದ್ದಾರೆ.

ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾದರು ಸಾಹಿತ್ಯದ ಬಗೆಗೆ ಇಲ್ಲದ ಆಸಕ್ತಿಯನ್ನು ಪ್ರಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಕ್ಷೇತ್ರದಲ್ಲಿದ್ದ ಪೂರ್ಣಚಂದ್ರ ತೇಜಸ್ವಿ ಜೊತೆಗಿನ ಒಡನಾಟದ ಘಟನೆಗಳು ತುಂಬಾ ಆಪ್ತವಾಗಿ, ಪ್ರಾಮಾಣಿಕವಾಗಿ ಮೂಡಿ ಬಂದಿವೆ.

ರಾಜಕಾರಣಕ್ಕೆ‌ ತಂದ ಡಿ.ಬಿ ಚಂದ್ರೇಗೌಡರು, ರಾಜಕೀಯದಲ್ಲಿ ದೊಡ್ಡ ದೊಡ್ಡ ಅವಕಾಶ ನೀಡಿದ ಎಸ್.ಎಂ ಕೃಷ್ಣ, ಎಲ್ಲಕ್ಕೂ ಬೆನ್ನೆಲುಬಾಗಿ ನಿಂತಿದ್ದ ಗಾಂಧಿ ಕುಟುಂಬವನ್ನು ವಿನಮ್ರಮವಾಗಿ ಸ್ಮರಿಸಿದ್ದಾರೆ.

ಬದಲಾದ ರಾಜಕಾರಣ ವ್ಯವಸ್ಥೆ ತಮಗೆ ಒಗ್ಗದ್ದನ್ನು, ಜಾತಿ ರಾಜಕಾರಣದ ಹಲವು ಮುಖಗಳ ಅನಾವರಣ ಇದರಲ್ಲಿದೆ. ಆತ್ಮಕತೆಗಳೆಂದರೆ ಬರೀ ತಮ್ಮ ಪಾಸಿಟಿವ್ ಕತೆ ಮಾತ್ರ ಇರುವ ಆತ್ಮರತಿಯ ಕತೆಗಳು ಎಂಬುದು ಇದರಲ್ಲಿ ಸ್ವಲ್ಪ‌ ಸುಳ್ಳಾಗಿ‌ ಇದು ಆತ್ಮಾವಲೋಕನದ ಆತ್ಮಕತೆ‌ ಎನಿಸುತ್ತದೆ.

ರಾಜಕಾರಣದ ಸಂಧ್ಯಾಕಾಲದಲ್ಲಿರುವ ಮೋಟಮ್ಮನವರು ಮೊನ್ನೆ ರಾಹುಲ್ ಗಾಂಧಿಯ ಭಾರತ್‌ಜೋಡೋ ಯಾತ್ರೆಯಲ್ಲಿ ದೊಡ್ಡ ಹೆಜ್ಜೆ ಹಾಕುವುದು ಕಂಡಾಗ ಅಬ್ಬಾ ಏನ್ ಉತ್ಸಾಹ ಇವರಿಗೆ‌ ಅನ್ನಿಸಿ ಪುಸ್ತಕ ಕೈಗೆತ್ತಿಕೊಂಡವನಿಗೆ ಮೋಸವಾಗಲಿಲ್ಲ. ವೀರಣ್ಣ ಕಮ್ಮಾರರ ನಿರೂಪಣಾ ಶೈಲಿ ಸಲೀಸಾಗಿ ಓದಿಕೊಳ್ಳುವಂತೆ ಮಾಡುತ್ತದೆ.

ಮೋಟಮ್ಮನವರ ಹಾಸ್ಯಪ್ರಜ್ಞೆ ಆತ್ಮಕತೆಯಲ್ಲೂ ಎದ್ದು ಕಾಣುತ್ತದೆ. ಅಯ್ಯೋ ಕಷ್ಟವೇ… ನಾನು ಗೆದ್ದೇನಾ ಎಂದು ಪ್ರಶ್ನಿಸಿಕೊಳ್ಳುವವರಿಗೆ ಸ್ಪೂರ್ತಿದಾಯಕ ಜೀವನಗಾಥೆ ಮೋಟಮ್ಮನವರದು. ಅಂದಹಾಗೆ ಮೋಟಮ್ಮನವರು ನಮ್ಮ ಜಿಲ್ಲೆಯ ಸೋಸೆ. ನನ್ನೂರು ಹನಕೆರೆಗೆ ಸಮೀಪ ಇರುವ‌ ಕೀಲಾರದ ವೆಂಕಟರಾಮು ಅವರ ಪತ್ನಿ ಎಂಬುದು ಆತ್ಮಕತೆಯಿಂದಷ್ಟೇ ತಿಳಿದುಕೊಂಡೆ. ಆತ್ಮಕತೆಗಳನ್ನು ಓದುವ ಖಯಾಲಿ ಇದ್ದವರಿಗೆ ಒಳ್ಳೆ ಪುಸ್ತಕ.

‍ಲೇಖಕರು Admin

November 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: