’ಅವರ ಮಾತುಗಳನ್ನು ಕೇಳುವಾಗ 'ಕೇಳುವ ಸುಖ' ಸಿಗುತ್ತಿತ್ತು..’ – ಕೆ ಉಷಾ ಪಿ ರೈ

ಸಾಹಿತ್ಯಲೋಕದ ಸಂಶೋಧಕ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾಕ್ಟರ್ ಯು  ಆರ್

ಕೆ ಉಷಾ ಪಿ ರೈ

ಅನಂತಮೂರ್ತಿಯವರ ಬಗ್ಗೆ ಬರೆಯುವುದು ಸುಲಭದ ಕೆಲಸವಲ್ಲ. ನನ್ನಂಥವರಿಗೆ ಸ್ವಲ್ಪ ಸಾಹಸದ ಕೆಲಸವೇ. ಹಲವಾರು ಸಾಧನೆಗಳ ಸರದಾರನಾಗಿ ಜಗತ್ತಿಡೀ ಅಲೆದು, ಸಾಹಿತ್ಯದ ಎಲ್ಲ ಆಳಗಳನ್ನೂ ಬಗೆದು, ತನ್ನ ಚಿಂತನಾ ಸಾಮರ್ಥ್ಯದಿಂದ ಅದಕ್ಕೊಂದು ಹೊಸ ಭಾಷ್ಯ ಬರೆದು, ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿ ಒಬ್ಬ ಸಂವೇದನಾಶೀಲ ಬರಹಗಾರನಾಗಿ, ಉತ್ತಮ ವಾಗ್ಮಿಯಾಗಿ ಹಲವಾರು ಜವಾಬ್ದಾರಿಯುತ ಹುದ್ದೆಗಳ ಜೊತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮೆರೆದಿರುವ ಯು. ಆರ್ ಅನಂತಮೂರ್ತಿಯವರ ಬಗ್ಗೆ ಬರೆಯುವುದೆಂದರೆ ಲೇಖನಿ ತಡೆಯುತ್ತದೆ. ಶಬ್ಧಗಳು ಮುಷ್ಕರ ಹೂಡುತ್ತವೆ. ಅವರ ಕೃತಿಗಳ ಬಗ್ಗೆ ಬರೆಯುವವಷ್ಟು ಧೈರ್ಯ, ಶಕ್ತಿ ನನಗಿದೆಯೆಂದು ನಾನು ಎಣಿಸಿಲ್ಲ. ನನಗೆ ಅನಂತಮೂರ್ತಿಯವರ ಪರಿಚಯ ದೂರದಲ್ಲಿ ಹೊಳೆಯುವ ನಕ್ಷತ್ರವೊಂದನ್ನು ಕಂಡು ಅಚ್ಚರಿ ಪಡುವಷ್ಟೇ. “Twinkle twinkle little star How I wonder what you are; Up above the sky so high Like a diamond in the sky” ಎನ್ನುವ ಚಿಕ್ಕ ಮಕ್ಕಳ ಅಚ್ಚರಿಯೇ ನನ್ನದು ಕೂಡಾ. ಅವರನ್ನು ನಾನು ಅರಿತಿರುವುದು ಅವರ ಬರವಣಿಗೆಯ ಮೂಲಕವಷ್ಟೇ. ಅಲ್ಲೂ ಮಿತಿಗಳಿವೆ. ಅವರ ಭವ, ದಿವ್ಯಗಳಲ್ಲಿ ಇರುವ ಅವರ ಹುಡುಕಾಟಗಳು ಏನೆಂದು ನನಗರ್ಥವಾಗಿಲ್ಲ. ಅವರ ಕೆಲವು ಲೇಖನಗಳನ್ನು ಓದುವಾಗ ಅರ್ಥವಾಗದೆ ಪರೀಕ್ಷೆಗೆ ಹೋಗುವ ಮಕ್ಕಳಂತೆ ಏನೂ ಅರ್ಥವಾಗಿಲ್ಲವೆಂದು ಹೆದರಿದ್ದೂ ಇದೆ.
ಹಾಗಂತ ಅವರನ್ನು ನಾನು ಹತ್ತಿರದಿಂದ ನೋಡಿಯೇ ಇಲ್ಲ ಎನ್ನಲಾಗದು. ನಾನು ಅವರನ್ನು ಮೊದಲ ಬಾರಿಗೆ ಬೇಟಿಯಾದದ್ದು ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಮುಂಜಾನೆಯ ನಡಿಗೆಯ ಸಮಯದಲ್ಲಿ, ನಮ್ಮ ಮನೆಯ ಸಮೀಪದ ಒಂದು ಪಾರ್ಕ್ ನಲ್ಲಿ ನಡೆಯುತ್ತಿರುವಾಗ. ಅವರು ನಾನು ಎರಡು ಮೂರು ಬಾರಿ ಎದುರೆದುರಾದಾಗ, ಅವರ ಬಾವಚಿತ್ರಗಳನ್ನು ಅವರ ಪುಸ್ತಕದ ಕವರುಗಳಲ್ಲಿ, ಪೇಪರುಗಳಲ್ಲಿ ನೋಡಿದ್ದ ನೆನಪಿನಿಂದ, ಕುತೂಹಲ ತಡೆಯಲಾಗದೆ ಅವರನ್ನು ಕೇಳಿದ್ದೆ `ನೀವು ಡಾಕ್ಟರ್ ಯು. ಆರ್. ಅನಂತಮೂರ್ತಿಯವರಲ್ಲ?’ ಎಂದು. ಅವರು ಒಂದು ಕ್ಷಣ ಅಚ್ಚರಿಯಿಂದ ಮತ್ತು ಅವರ ಕ್ಷಕಿರಣ ನೋಟದಿಂದ ನನ್ನ ಮುಖವನ್ನೇ ನೋಡಿ `ಹೌದು ತಾವು?’ ಎಂದಾಗ ತುಂಬ ಸಂಕೋಚದಿಂದಲೇ ನನ್ನ ಪರಿಚಯವನ್ನು ಹೇಳಿಕೊಂಡಾಗ ಅವರು ನಗುತ್ತಾ `ನಿಮ್ಮನ್ನು ನೋಡುತ್ತಲೇ ಅಂದುಕೊಂಡೆ ನೀವು ದಕ್ಷಿಣ ಕನ್ನಡದವರಾಗಿರಬೇಕೆಂದು’. ಆಗ ಅವರು ಮಣಿಪಾಲದಲ್ಲಿದ್ದರು. ಅವರ ಮಗಳ ಮನೆ ಆ ಪಾರ್ಕ್ ನ ಸಮೀಪದಲ್ಲೇ ಇದ್ದುದರಿಂದ ಬೆಂಗಳೂರಿಗೆ ಬಂದಾಗ ಆ ಪಾರ್ಕ್ ಗೆ ಬೆಳಗ್ಗಿನ ನಡುಗೆಗೆ ಬರುತ್ತಿದ್ದರಂತೆ. ಆಮೇಲೆ ಕೆಲವು ಸಲ ಬೇರೆ ಬೇರೆ ಸಭೆಸಮಾರಂಭಗಳಲ್ಲಿ ಬೇಟಿಯಾದರೂ ನಮ್ಮ ಪರಿಚಯ ಇಷ್ಟೇ ಆಗಿತ್ತು. ನಾನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದಾಗ ಸಂಘದಿಂದ `ಭಾಷೆ ಮೀರಿದ ಭಾಂದವ್ಯ’ ಎನ್ನುವ ಕಾರ್ಯಕ್ರಮವನ್ನು ನಡೆಸಿದಾಗ ಮುಖ್ಯ ಅತಿಥಿಯಾಗಿ ಡಾ. ಯು. ಆರ್. ಅನಂತಮೂರ್ತಿಯವರನ್ನು ಆಹ್ವಾನಿಸಿದ್ದೆವು. ಆಗ ಅವರೂ ನಮ್ಮ ಮೊದಲ ಬೇಟಿಯನ್ನು ನೆನಪಿಸಿಕೊಂಡಾಗ ನನಗೆ ಅಚ್ಚರಿಯಾಗಿತ್ತು. ಆ ಒಂದು ನಿಮಿಷದ ಬೇಟಿಯನ್ನು ಅವರೂ ಮರೆತಿಲ್ಲವಲ್ಲ ಎಂದು ಖುಷಿಯೂ ಆಗಿತ್ತು. ಅದೇ ಸಂದರ್ಭದಲ್ಲಿ ಈ ಕಾರ್ಯಕ್ರಮ ನೋಡುವಾಗ ಇವರು ಏನೇನು ಮಾಡಬಲ್ಲರು ಎನ್ನುವ ಅಚ್ಚರಿಯುಂಟಾಗುತ್ತದೆ ಎನ್ನುವ ಕಾಂಪ್ಲಿಮೆಂಟ್ ಬೇರೆ ಕೊಟ್ಟಿದ್ದರು.
ಮತ್ತೊಮ್ಮೆ, 2005ರ ಪ್ರಾರಂಭದಲ್ಲಿ ಇರಬೇಕು, ತುಮಕೂರಿನಲ್ಲಿ ನಡೆದ ಒಂದು ಸಮಾರಂಭದಲ್ಲಿ ನಾವು ಒಂದೇ ವೇದಿಕೆಯಲ್ಲಿದ್ದೆವು. ಉಪ ಮುಖ್ಯಮಂತ್ರಿಯಾಗಿದ್ದ ಶ್ರೀ ಸಿದ್ದರಾಮಯ್ಯನವರಿಗೆ ದರೈಶ್ರೀ ಪ್ರಶಸ್ತಿಕೊಟ್ಟು ಸನ್ಮಾನಿಸಿದ ಸಂದರ್ಭ. ಶ್ರೀ ಸಿದ್ದರಾಮಯ್ಯನವರು ಉಡುಪಿ ಮಠದ ವಿರುದ್ಧ ಸಮರ ಸಾರಿ ಕನಕದಾಸ ಕುರುಬ ಎನ್ನುವುದನ್ನು ಸಾಧಿಸಿ ತೋರಿಸುತ್ತಿದ್ದ ಕಾಲ. ಈ ಸಂದರ್ಭದಲ್ಲಿ ನನಗನಿಸಿದ್ದನ್ನು ಸಿದ್ದರಾಮಯ್ಯನವರ ಮುಂದೆಯೇ ಹೇಳಿದ್ದೆ. ‘ನಾವೆಲ್ಲ ಮೂಲತಃ ಸರ್ವಧರ್ಮ ಸಹಿಷ್ಣುಗಳು. ವಿಶಾಲ ಮನೊಧರ್ಮದವರು. ಸರ್ವೇಜನಾ ಸುಖಿನೋ ಭವಂತು ಎನ್ನುವ ಸಂಸ್ಕೃತಿ ನಮ್ಮದು. 12ನೇ ಶತಮಾನದಲ್ಲಿಯೇ ಜಾತಿಮತವೆನ್ನುವ ಭಾವನೆಗಳನ್ನೇ ಅಳಿಸಿಹಾಕಲು ನೋಡಿದ ಬಸವಣ್ಣನ ಕ್ರಾಂತಿಯಿಂದ ಪ್ರೇರಿತರಾದವರು. ಗುಡಿ, ಮಸೀದಿ ಚರ್ಚುಗಳನ್ನು ಬಿಟ್ಟು ಹೊರಬನ್ನಿ ಎನ್ನುತ್ತಾ ವಿಶ್ವಪಥವನ್ನು ಸಾರಿದ ಕುವೆಂಪುರವರಿದ್ದ ಶತಮಾನದವರು, ಹೀಗಿರುವಾಗ ಕನಕದಾಸರನ್ನು ಬರೇ ಒಬ್ಬ ಕುರುಬನನ್ನಾಗಿ ನೋಡುವ ಚಿಕ್ಕ ಮನಸು ಯಾಕೆ? ಕನಕದಾಸರು ಒಬ್ಬ ಹಠವಾದಿ ಭಕ್ತನ ಸಂಕೇತ. ಶ್ರೇಣೀಕೃತ ಸಮಾಜವನ್ನು ಪ್ರಶ್ನಿಸಿದ ಧೈರ್ಯದ ಸಂಕೇತ. ಮಠದೊಳಗಿನ ದೇವರು ಎಲ್ಲರವನು ಎಂದು ಸಾಧಿಸಿ ತೋರಿದ ಅತ್ಮವಿಶ್ವಾಸದ ಸಂಕೇತ. ಉಡುಪಿಯವರಾದ ನಮಗೆ ಕನಕದಾಸರು ಒಬ್ಬ ಮಾನಸಿಕ ಸ್ಥೈರ್ಯದ ಆದರ್ಶವಲ್ಲದೆ ಇನ್ನೇನೂ ಅಲ್ಲ. ಕನಕದಾಸರನ್ನು ಹಾಗೇ ಇರಲು ಬಿಡುವುದೇ ಎಲ್ಲರಿಗೂ ಕ್ಷೇಮ.
ನಮಗೆ ಈ ಬ್ರಾಹ್ಮಣ ಶೂದ್ರ ಎನ್ನುವ ಜಾತಿಬೇಧದ ಘರ್ಷಣೆ ಬೇಕಾಗಿಲ್ಲ. ಎಲ್ಲರೂ ಒಂದೇ ಎಂದು ಮನುಷ್ಯ ಮನುಷ್ಯರನ್ನು ಗೌರವಿಸುವ, ಪ್ರೀತಿಸುವ, ಒಬ್ಬರಿಗೊಬ್ಬರ ನೋವು ನಲಿವುಗಳಿಗೆ ಸ್ಪಂಧಿಸುವ ಮಾನವೀಯ ಪಂಥಕ್ಕೆ ಸೇರಿದವರು ಬೇಕಾಗಿದ್ದಾರೆ. ಜೀವನವನ್ನು ಪ್ರೀತಿಸುವವರು, ಮಕ್ಕಳಲ್ಲಿ ಜೀವನ ಪ್ರೀತಿಯನ್ನು ತುಂಬಿಸುವವರು ಬೇಕಾಗಿದ್ದಾರೆ. ಸಿ. ಇ. ಟಿ ಗೊಂದಲ, ಒಂದಂಕಿ ಲಾಟರಿಯಂತಹ ಹಾಳು ಜೂಜು, ಹೆಜ್ಜೆ ಹೆಜ್ಜೆಗೂ ಜನರನ್ನು ಕಿತ್ತು ತಿನ್ನುವ ಲಂಚಗುಳಿತನ, ಕುಣಿದು ಕುಪ್ಪಳಿಸುವ ರಸ್ತೆ, ಇವುಗಳಿಂದೆಲ್ಲ ಮುಕ್ತಿ ದೊರಕಿಸುವ, ಜನರ ಭಾವನೆಗಳನ್ನು ಗೌರವಿಸುವ ರಾಜಕೀಯ ಹಾಗೂ ಧಾಮರ್ಿಕ ಮುಖಂಡರು ಬೇಕಾಗಿದ್ದಾರೆ. ಜನರ ತೊಂದರೆಗಳಿಗೆ ಸ್ಪಂಧಿಸುವ ಪೋಲೀಸು ಅಧಿಕಾರಿಗಳು ಬೇಕಾಗಿದ್ದಾರೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿದವರಿಗೆ ಸರಿಯಾದ ಬುದ್ಧಿಕಲಿಸುವ ನ್ಯಾಯಾದೀಶರು ಬೇಕಾಗಿದ್ದಾರೆ. ಜನರಲ್ಲಿ ಹೆಚ್ಚುತ್ತಿರುವ ಜಾತೀಯ ಮತೀಯ ಮೌಢ್ಯಗಳನ್ನು ಹೊಡೆದೋಡಿಸುವಂತಹ ಬುದ್ಧಿಜೀವಿಗಳು ಬೇಕಾಗಿದ್ದಾರೆ. ಇಂತಹ ಒಂದು ಸಾಮಾಜಿಕ ರಾಜಕೀಯ ಪರಿಸರ ನಿಮಾಣವಾಗುವುದನ್ನು ನಾವೆಲ್ಲರೂ ಕಾಯುತ್ತಿದ್ದೇವೆ. ನಮ್ಮ ಕಾಲದಲ್ಲಿ ಆಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಮಕ್ಕಳು ನೆಮ್ಮದಿಯಿಂದಿರಲು ಇಂತಹ ಸಮಾಜದ ನಿರ್ಮಾಣ ಆಗಲೇ ಬೇಕು.’ ಎಂದಿದ್ದೆ. ಆಗ ಅಲ್ಲಿದ್ದ ನಿರೂಪಕಿಯೊಬ್ಬರು ನನ್ನ ವಿರುದ್ಧ ಬಹಳ ಖಾರವಾಗಿ ಮಾತಾಡಿದ್ದರು. ಸನ್ಮಾನ್ಯ ಅನಂತಮೂರ್ತಿಯವರು ತಮ್ಮ ಭಾಷಣದಲ್ಲಿ ‘ಉಷಾಅವರು ಒಬ್ಬ ಸಾಮಾಜಿಕ ಕಳಕಳಿಯುಳ್ಳ ಮಾತೃಹೃದಯದ ವ್ಯಥೆಯಿಂದ ಮಾತಾಡಿದ್ದಾರೆ. ಅವರು ಹೇಳಿದುದರಲ್ಲಿ ಏನೂ ತಪ್ಪಿಲ್ಲ. ಯಾರೂ ಸಿಟ್ಟಾಗುವುದು ಸರಿಯಲ್ಲ.’ ಎಂದು ನನ್ನ ಪರವಾಗಿ ಮಾತಾಡಿದ್ದರು.
ಹಾಗೇ 2007ರಲ್ಲಿ ನನ್ನ ಮರುಹುಟ್ಟಿನ ಮೊದಲ ಚಿತ್ರಕಲಾ ಪ್ರದರ್ಶನಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಆಗಲೂ ತುಂಬಾ ಪ್ರೀತಿಯಿಂದ ಅಭಿಮಾನದಿಂದ ಮಾತಾಡಿದ್ದರು. ಈ ಎಲ್ಲ ನೆನಪುಗಳೇ ಹೃದಯಕ್ಕೆ ಹತ್ತಿರವಾದವುಗಳು.
ಡಾ. ಯು. ಆರ್. ಅನಂತಮೂರ್ತಿಯವರ ಕಥೆ, ಕಾದಂಬರಿ, ಕವನ, ವಿಮಶರ್ಾ ಲೇಖನಗಳು, ವೈಚಾರಿಕ ಲೇಖನಗಳು ಎಲ್ಲವನ್ನೂ ಆಸಕ್ತಿಯಿಂದ ಓದುವಾಗ ಎಷ್ಟೋ ಬಾರಿ ಅವರ ಬರಹದ ಆಳವನ್ನು ತಿಳಿಯಲು ಸಾಧ್ಯವಾಗಿಲ್ಲ ಎಂದು ಅನಿಸುತ್ತಿದ್ದರೂ ಅವರು ಅವರ ಬರಹಗಳಲ್ಲಿ ನಡೆಸುವ ಜೀವನದ ಶೋಧವನ್ನು, ಹುಡುಕಾಟವನ್ನು ಸೋಜಿಗ ಪಡುತ್ತಲೇ ಇಷ್ಟಪಡುತ್ತಿದ್ದೆ. ಅವರ ನಾಯಕರು ಮಾಡಿಕೊಳ್ಳುವ ಸ್ವವಿಮಶರ್ೆ, ತನ್ನತನವನ್ನು ಕಂಡುಕೊಳ್ಳುವ ಪ್ರಯತ್ನ ಬಹಳ ಇಷ್ಟವಾಗುತ್ತಿತ್ತು. ಅವರ ಸಣ್ಣಕಥೆಗಳಲ್ಲಿ ಇರುವ ಕ್ಯಾನ್ವಾಸಿನ ವಿಸ್ತಾರ ಬೆರಗು ಹುಟ್ಟಿಸುತ್ತಿತ್ತು.
ಅವರ ಅಭಿನಂದನಾ ಗ್ರಂಥಕ್ಕಾಗಿ ಲೇಖನ ಬರೆಯುವಾಗ ಇನ್ನೊಮ್ಮೆ ನನಗೆ ಬಹಳ ಇಷ್ಟವಾಗಿದ್ದ ಅವರ ‘ಭಾರತೀಪುರ’ ಮತ್ತು ‘ಸಂಸ್ಕಾರ’ ಎರಡು ಕಾದಂಬರಿಗಳನ್ನು ಪುನಃ ಓದಿದ್ದೆ. ಇವೆರಡರಲ್ಲಿ ಆರಿಸಬೇಕೆಂದರೆ ಭಾರತೀಪುರ ನನಗೆ ಬಹಳ ಇಷ್ಟವಾದ ಕಾದಂಬರಿ. ಅದನ್ನೋದುತ್ತಾ ಜಗನ್ನಾಥನ ಪಾತ್ರದಲ್ಲಿ ಅನಂತಮೂರ್ತಿಯವರೇ ಇದ್ದಾರೇನೋ ಅನಿಸಿತ್ತು.
‘ಭಾರತೀಪುರ’ ಸ್ವಾತಂತ್ರ್ಯ ಪೂರ್ವದ ಕಥೆ. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಎಲ್ಲ ಯುವ ಮನಸ್ಸುಗಳು ಹರಿಜನೋದ್ಧಾರದ ಹುಚ್ಚು ಹಚ್ಚಿಕೊಂಡ ಕಾಲದ ಕಥೆ. ಅವರ ಈ ಎರಡೂ ಕಾದಂಬರಿಗಳಲ್ಲಿ ಕಥೆಯ ಹಂದರ ಚಿಕ್ಕದು. ಒಂದು ಸಣ್ಣ ಕಥೆಯಷ್ಟು. ಆದರೆ ಅಲ್ಲಿ ನಡೆಯುವ ಸ್ವವಿಮರ್ಶೆಗಳು, ತನ್ನತನದ ಹುಡುಕಾಟ, ನೈತಿಕ ಅಧಪತನಗಳು, ತಲೆತಲಾಂತರದಿಂದ ನಂಬಿಕೊಂಡು ಬಂದ ನಂಬಿಕೆಗಳ ನಾಶಗಳು, ಮಾನಸಿಕ ತುಮುಲಗಳು, ಬದಲಾವಣೆ ತರಬೇಕೆನ್ನುವ ತವಕಗಳು, ಆಸ್ತಿಕತೆ ನಾಸ್ತಿಕತೆಯ ಘರ್ಷಣೆಗಳು, ಹಳ್ಳಿಜೀವನದ ಇಂಚು ಇಂಚನ್ನು ಬಗೆದಿಟ್ಟ ರೀತಿ, ಓದುಗರನ್ನು ಇನ್ನೊಂದೇ ಲೋಕಕ್ಕೆ ತೆಗೆದುಕೊಂಡು ಹೋಗುತ್ತವೆ. ಒಂದು ರೀತಿಯ ಮೈಮರೆತ ಉಂಟಾಗುತ್ತದೆ. ಇಂಗ್ಲೆಂಡ್ಗೆ ಕಲಿಯಲು ಹೋಗಿದ್ದ ಜಗನ್ನಾಥ ಅಲ್ಲಿ ಮಾರ್ಕ್ಸ್, ರಸೆಲ್ಲರ ಕ್ರಾಂತಿಕಾರಕ ಯೋಚನೆಗಳಿಂದ ಪ್ರಭಾವಿತನಾಗಿ ಅಲ್ಲಿಯ ಹುಡುಗಿಯೊಬ್ಬಳನ್ನು ಪ್ರೀತಿಸಿ ಅವಳೊಡನೆ ಹೆಂಡತಿಯಂತೆ ಬಾಳಿದರೂ ಅವಳನ್ನು ಮದುವೆಯಾಗಿ ತನ್ನೂರಿಗೆ ಕರೆದು ತರುವ ಧೈರ್ಯಸಾಲದೆ, ಕ್ರಮೇಣ ಅವಳ ಮೇಲಿನ ಪ್ರೀತಿಯ ಉತ್ಕಟತೆಯನ್ನೂ ಕಳಕೊಂಡು, ಓದನ್ನೂ ಸಂಪೂರ್ಣಗೊಳಿಸದೆ ಭಾರತೀಪುರಕ್ಕೆ ಹಿಂತಿರುಗಿ ಅಲ್ಲಿಯ ಸಂಪ್ರದಾಯಸ್ಥ ಪರಿಸರದಲ್ಲಿ ತನ್ನ ಬ್ರಾಹ್ಮಣ್ಯವನ್ನೇ ದಿಕ್ಕರಿಸಿ, ಅಲ್ಲಿಯ ಜನರನ್ನು ಸಂಪೂರ್ಣವಾಗಿ ಆವರಿಸಿದ್ದ ದೇವರು ಮಂಜುನಾಥನನ್ನು ಹಾಗೂ ಕೆಳವರ್ಗದವರನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡಿದ್ದ ದೈವ ಭೂತರಾಯನನ್ನು ನಾಶ ಮಾಡದ ಹೊರತು ಜನರಲ್ಲಿ ಸೃಜನಶೀಲತೆ ಹುಟ್ಟದು ಹಳ್ಳಿಯ ಉದ್ಧಾರವಾಗದು ಎನ್ನುವ ವಾದಕ್ಕೆ ಕಟ್ಟು ಬಿದ್ದು ಅದನ್ನು ಸಾಧಿಸಲು ಹೋರಾಡಿದ ಯುವಕ ಭಾರತೀಪುರದ ನಾಯಕ. ಅವನಿಗೆ ಬೇಕಾದದ್ದು ಬದಲಾವಣೆ. ಜಗನ್ನಾಥನ ಮಾತಿನಲ್ಲೇ ಹೇಳುವುದಾದರೆ ಚರಿತ್ರೆಗೆ ಸೇರುವ, ಸೇರಿಸುವ ಕ್ರಿಯೆ. ಸೀಳಿಹೊರಕ್ಕೆ ಬರುವ, ಕಾಲಕ್ಕೆ ಜವಾಬ್ದಾರನಾಗುವ ಕ್ರಿಯೆ. ಮತ್ತೆ ಎಳೆಬಿಸಿಲಿನಲ್ಲಿ ಹೊಸಬನಾಗುವ, ಹೂವಾಗುವ, ಮಿಡಿಯಾಗುವ ಕ್ರಿಯೆ.!
ಭಾರತೀಪುರದ ಮುಖ್ಯ ಎಳೆ ಬದಲಾವಣೆಯ ತುಡಿತ. ಅಲ್ಲಿಯ ನಾಯಕನಿಗೆ ತಾನೂ ಬದಲಾಗಬೇಕು ತನ್ನ ಸುತ್ತಲಿನವರೂ ಬದಲಾಗಬೇಕು ಎನ್ನುವ ಹಠ. ಶತಮಾನಗಳಿಂದ ಕೊಳೆಸೇರಿ, ಮಂಜುನಾಥನ ಆಳ್ವಿಕೆಗೆ, ಭೂತರಾಯನ ದಬ್ಬಾಳಿಕೆಗೆ ಒಳಗಾಗಿ ಬದುಕುತ್ತಿರುವ ಸಮಾಜವನ್ನು, ಜನರನ್ನು ಬಡಿದೆಬ್ಬಿಸಬೇಕು ಎನ್ನುವ ಛಲ. ಹೊಲೆಯರಿಗೂ ಎಲ್ಲರ ಹಾಗೆ ದೇವಸ್ಥಾನಕ್ಕೆ ಹೋಗುವ, ಬ್ರಾಹ್ಮಣರೊಡನೆ ಬೆರೆಯುವ ಅವಕಾಶ ಸಿಗಬೇಕು ಎನ್ನುವ ಮಾನವೀಯ ಕಳಕಳಿ. ಅದಕ್ಕಾಗಿ ಜಗನ್ನಾಥ ತನ್ನನ್ನು ಬದಲಾಯಿಸಿಕೊಳ್ಳುತ್ತಾ ಈ ಬದಲಾವಣೆಯ ಕ್ರಿಯೆಗೆ ಒಳಗಾಗುತ್ತಾನೆ. ಆದರೆ ರಾಷ್ಟ್ರಾಧಕ್ಷರೂ ನಂಬುವ ಮಂಜುನಾಥನನ್ನು ಜನರಿಂದ ದೂರಮಾಡುವ ಕೆಲಸ ಅಷ್ಟು ಸುಲಭವಿಲ್ಲ ಎನ್ನುವುದೂ ಅವನಿಗೆ ಗೊತ್ತು. ಅವನಿಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ಅವನು ಬಯಸುವ ಸಮಾಜ ಸುಧಾರಣೆ ಜನರ ಒಳಿತಿಗಾಗಿ. ಮುಖ್ಯವಾಗಿ ಹರಿಜನರ ಉದ್ಧಾರಕ್ಕಾಗಿ. ಈ ಬದಲಾವಣೆಯ ಪ್ರಕ್ರಿಯೆಗೆ ರಾಜಕೀಯ ಬಣ್ಣ ಬಳೆಯುವ ರಾಜಕೀಯ ವ್ಯಕ್ತಿಗಳನ್ನು ಕಂಡರೆ ಅವನಿಗೆ ಇಷ್ಟವಿಲ್ಲ.

ಜಗನ್ನಾಥ ಶ್ರೀಮಂತಿಕೆಯಲ್ಲಿ, ಮಂಜುನಾಥನನ್ನು ನಂಬಿಕೊ0ಡೇ ಬೆಳೆದ ಹುಡುಗ. ಮಂಜುನಾಥ ದೇವಸ್ಥಾನದ ಧರ್ಮದರ್ಶಿಗಳ ಮಗ. ಮುಂದೆ ಅವನೇ ಧರ್ಮದರ್ಶಿಯಾಗಬೇಕಾದವನು. ಮಂಜುನಾಥನೇ ಬೇಡವೆನ್ನುವ ಅವನಿಗೆ ಈ ಪಟ್ಟದಲ್ಲಿ ಆಸಕ್ತಿಯಿಲ್ಲ. ಎಲ್ಲವನ್ನೂ ಭೂತಕನ್ನಡಿಯಲ್ಲಿಯೇ ನೋಡಿಕೊಂಡು ಬೆಳೆದ ತನ್ನ ವ್ಯಕ್ತಿತ್ವ ನಿಜವಾದುದಲ್ಲ ಎಂದು ಅನಿಸಿದಾಗ ಅವನಿಗೇ ಅಸಹ್ಯವಾಗುತ್ತದೆ. ತನ್ನನ್ನು ತಿದ್ದಿಕೊಳ್ಳಬಯಸುವ ಅವನಿಗೆ ತನ್ನ ವ್ಯಕ್ತಿತ್ವಕ್ಕೊಂದು ವಿಶಿಷ್ಟತೆ ಬರಬೇಕಾದರೆ ವಂಶಪಾರಂಪರ್ಯವಾಗಿ ಇಷ್ಟರವರೆಗೆ ತನ್ನದಾಗಿದ್ದ ಎಲ್ಲವನ್ನೂ ಧಿಕ್ಕರಿಸಬೇಕು ಎಂದೆನಿಸಿದಾಗ ಧರ್ಮದರ್ಶಿತ್ವದ ಗೌರವಯುತ ಹುದ್ದೆಯನ್ನು ಅವನು ಮೊದಲು ದಿಕ್ಕರಿಸುತ್ತಾನೆ. ಬೇರೆಯವರಲ್ಲಿ ಬದಲಾವಣೆ ಬಯಸುವವನು ಮೊದಲು ತನ್ನಲ್ಲಿ ಬದಲಾವಣೆ ತರಬೇಕೆನ್ನುವ ಉತ್ಕಟತೆಯಿಂದ ಜನಿವಾರವನ್ನು ತೆಗೆದು ಬಿಸಾಡಿ ತನ್ನ ಬ್ರಾಹ್ಮಣ್ಯವನ್ನೇ ದಿಕ್ಕರಿಸುತ್ತಾನೆ. ದೇವಸ್ಥಾನದ ಒಳಗೆ ಹರಿಜನರನ್ನು ಕರೆದುಕೊಂಡು ಹೋಗುವ ಮೊದಲು ತನ್ನ ಮನೆಯಲ್ಲಿರುವ ಸಾಲಿಗ್ರಾಮವನ್ನು ಅವರಿಂದ ಮುಟ್ಟಿಸಬೇಕು ಆಗಲೇ ತನಗೆ ಅವರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ನೈತಿಕ ಸ್ವಾತಂತ್ರ್ಯ ಸಿಕ್ಕಂತೆ ಎನ್ನುವ ದೃಢತೆಯಿಂದ ತಲೆತಲಾಂತರಗಳಿಂದ ಪೂಜಿಸಿಕೊಂಡು ಬಂದಿದ್ದ ಸಾಲಿಗ್ರಾಮವನ್ನು ಹರಿಜನರಿಂದ ಒತ್ತಾಯ ಪೂರ್ವಕವಾಗಿಯಾದರೂ ಮುಟ್ಟಿಸುತ್ತಾನೆ. ಅದರಿಂದಾಗಿ ತನ್ನ ಪ್ರೀತಿಯ ಚಿಕ್ಕಿಯನ್ನು ಇಡೀ ಬ್ರಾಹ್ಮಣ ಸಮುದಾಯವನ್ನು, ಸಮಾಜವನ್ನು ಎದುರು ಹಾಕಿಕೊಳ್ಳುತ್ತಾನೆ. ಇಷ್ಟೆಲ್ಲ ಮಾಡಿದರೂ ಅವನು ಯಾರಿಗಾಗಿ ಶ್ರಮಿಸುತ್ತಾನೋ ಅವರಲ್ಲಿಯೇ ಅವರ ಮಿತಿಗಳನ್ನು ಮೀರಿ ಬೆಳೆಯುವ ಆಸಕ್ತಿ ಕಾಣದಾಗ ಸೋಲು ಅನುಭವಿಸುತ್ತಾನೆ. ತನ್ನಲ್ಲಿ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ತುಂಬಿದ್ದ ಶ್ರೀಪತಿರಾಯರು ತನ್ನ ಬದಲಾಣೆಯ ಹೋರಾಟವನ್ನು ತಣ್ಣಗಾಗಿ ನೋಡಿದಾಗ ಸ್ವವಿಮರ್ಶೆಗೂ ಒಳಗಾಗುತ್ತಾನೆ.
ಎಲ್ಲವನ್ನೂ ಧಿಕ್ಕರಿಸಿ ಹೋರಾಡಿದ ಜಗನ್ನಾಥನ ಅಂತಃಸತ್ವವನ್ನು ಕೆಣಕುವುದು ಒ0ದು ಅನಾಮದೇಯ ಪತ್ರ. ತಾನು ತುಂಬಾ ಪ್ರೀತಿಸಿದ್ದ ತಾಯಿಯ ನೈತಿಕತೆಯನ್ನು ಸಂಶಯಿಸುವ ಅನಿವಾರ್ಯತೆಯನ್ನು ತಂದೊಡ್ಡಿದ ಪತ್ರ. ತಾಯಿಯಯ ಅಪವಿತ್ರತೆಯನ್ನೇ ಸಹಿಸದ ತನಗೆ ದೇವಸ್ಥಾನದ ಪಾವಿತ್ರ್ಯ ಕೆಡಿಸುವ ಹಕ್ಕು ಇದೆಯೇ ಎನ್ನುವ ಜಿಜ್ಞಾಸೆ ಅವನನ್ನು ಅಧೀರನನ್ನಾಗಿ ಮಾಡುತ್ತದೆ. ಇಲ್ಲಿ ಅವನು ಒಳಗೊಳ್ಳುವ ಮಾನಸಿಕ ತುಮುಲ ಓದುಗರ ಮನಸಿನೊಳಗೆ ಇಳಿಯುತ್ತದೆ. ಹಾಗೇ ಈ ಪುಸ್ತಕದಲ್ಲಿ ಎರಡು ಘಟನೆಗಳು ಮನಸನ್ನು ತುಂಬಾ ತಟ್ಟುತ್ತವೆ. ಒಂದು ಅವನು ಹರಿಜನರಿ0ದ ಸಾಲಿಗ್ರಾಮವನ್ನು ಮುಟ್ಟಿಸುವ ಕ್ರಿಯೆ. ಅವನು ಎಷ್ಟು ಹೇಳಿದರೂ ಸಾಲಿಗ್ರಾಮವನ್ನು ಮುಟ್ಟಲು ಹೆದರಿದ ಹರಿಜನರನ್ನು ಹೆದರಿಸಿ ಈ ಕಾರ್ಯ ಮಾಡಿಸುತ್ತಾನಾದರೂ ಮಾನಸಿಕವಾಗ ಅವನು ಸೋಲನ್ನು ಅನುಭವಿಸುತ್ತಾನೆ. ತನ್ನ ನಿಲುವುಗಳನ್ನು ಪ್ರಶ್ನಿಸಿಕೊಳ್ಳುವ ಹಂತಕ್ಕೆ ತಲಪುತ್ತಾನೆ. ಹಾಗೇ ಕೊನೆಗೆ ದೇವಸ್ಥಾನಕ್ಕೆ ಹರಿಜನರನ್ನು ಹೊಕ್ಕಿಸುವ ಪ್ರಯತ್ನ ನಡೆಸಿದಾಗಲೂ ಗರ್ಭಗುಡಿಯಲ್ಲಿ ದೇವರಿಲ್ಲದೆ ಶೂನ್ಯತೆಗೆ ಒಳಗಾಗುತ್ತಾನೆ. ಇಲ್ಲಿ ಚಿಕ್ಕದಾಗಿ ವೀಕ್ ಪಾತ್ರವೆನಿಸಿದರೂ ಮನಸ್ಸಿನಲ್ಲಿ ನಿಲ್ಲುವ ಪಾತ್ರ ಗಣೇಶನದ್ದು. ತನ್ನದೇ ರೀತಿಯಲ್ಲಿ ಜಗನ್ನಾಥನ ಹೋರಾಟಕ್ಕೆ ಬೆಂಬಲ ನೀಡುವ, ಕೊನೆಯಲ್ಲಿ ದೇವಸ್ಥಾನದ ಮುಂದಿನ ಅರ್ಚಕನಾಗಬೇಕಿದ್ದ ಅವನು ದೇವರನ್ನು ಗರ್ಭಗುಡಿಯಿಂದ ಕಿತ್ತೊಯ್ದು ಪಾಪನಾಶಿನಿಯಲ್ಲಿ ವಿಸಜರ್ಿಸುವ ಕ್ರಿಯೆ ಅವನು ತೋರಿದ ದೈರ್ಯಕ್ಕಾಗಿ ಅಚ್ಚರಿ ಹುಟ್ಟಿಸುತ್ತದೆ. ಆದರೆ ಅಲ್ಲೂ ವ್ಯಕ್ತವಾದದ್ದು ದೇವರು ಅಪವಿತ್ರವಾಗುವುದು ಪವಾಡದ ಮೂಲಕ ತಪ್ಪಿಹೋಯಿತೆನ್ನುವ ಮೂಢ ನಂಬುಗೆ. ಬದಲಾವಣೆ ಅವರವರಲ್ಲಿಯೇ ಅವರ ಮನಸಿನಲ್ಲಿಯೇ ಆಗದೆ ಇದ್ದರೆ ಯಾರಿಂದಲೂ ಬದಲಾವಣೆ ತರುವುದು ಸಾಧ್ಯವಿಲ್ಲ ಎನ್ನುವ ಸತ್ಯ.
ಸಂಸ್ಕಾರದಲ್ಲೂ ಕಾಣುವುದು ಊರಿಗೆ ಬಂದ ಪ್ಲೇಗಿನಿಂದ ಊರಿನ ನಾಶ, ಸನ್ಯಾಸಿಗೆ ಉಂಟಾದ ಕಾಮೋದ್ರೇಕದಿಂದ ಎಲ್ಲರೂ ಗೌರವಿಸುವ ಪ್ರಾಣೇಶಾಚಾರ್ಯರ ನೈತಿಕತೆಯ, ಪಾವಿತ್ರ್ಯದ ನಾಶ, ಒಪ್ಪಿತ ಮೌಲ್ಯಗಳ ನಾಶ, ನಂಬುಗೆಗಳ ನಾಶ, ತಪೋಭ್ರಷ್ಟತೆ, ಪಶ್ಚಾತ್ತಾಪ, ಪಶ್ಚಾತ್ತಾಪವನ್ನು ಮೀರಿ ತಾನೇ ತಾನಾಗಬೇಕೆನ್ನುವ ತವಕ. ಸಂಸ್ಕಾರ ಜೀವನ ವೈಫಲ್ಯತೆಗಳ ಕಥೆ. ಆತ್ಮವಿಮರ್ಶೆಯ ಕಥೆ. ಬೇಕಾದಂತೆ ಬದುಕುವುದೇ ಸತ್ಯ ಎನ್ನುವ ವಾದ ಇಲ್ಲಿ ಕಾಣುತ್ತದೆ.
ಎರಡೂ ಕಾದಂಬರಿಗಳಲ್ಲಿ ಈ ಜೀವನದ ವೈಫಲ್ಯತೆಗಳನ್ನು ಡಾ. ಯು. ಆರ್ ಅನಂತಮೂರ್ತಿಯವರು ಬದುಕಿನ ಸಾಧ್ಯಾಸಾಧ್ಯತೆಗಳ ಒಳಹೊಕ್ಕು ತನ್ನದೇ ಆದ ಚಿಂತನ ಮಂಥನಗಳ ಒರೆಗೆ ಹಚ್ಚಿ ಪ್ರಸ್ತುತ ಪಡಿಸಿರುವ ಕಥನ ಕಲೆ, ಅಲ್ಲಿ ವ್ಯಕ್ತವಾಗುವ ಎಲ್ಲವನ್ನೂ ಮೀರಿ ಜೀವಿಸಬೇಕೆನ್ನುವ ತುಡಿತ ನನ್ನಲ್ಲಿ ಬೆರಗು ಹುಟ್ಟಿಸಿದೆ. ಅವರ ಹುಡುಕಾಟದ ಒಂದು ತೀವ್ರವಾದ ಭಾವ ಕಾಮುಕತೆ. ಯಾವುದನ್ನೂ ಕಾಮುಕತೆಯಷ್ಟೇ ತೀವ್ರವಾಗಿ ನೋಡದ ಹೊರತು ಜೀವನದ ಒಳಹೋಗುವುದು ಕಷ್ಟ ಎನ್ನುವ ನಂಬುಗೆಯನ್ನು ಅವರ ಕಾದಂಬರಿಗಳಲ್ಲಿ ಕಾಣಬಹುದು.
ಅನಂತಮೂರ್ತಿಯವರ ಕಾದಂಬರಿಗಳಲ್ಲಿ ಎಲ್ಲೂ ಒಂದು ಗಟ್ಟಿಯಾದ ಸ್ತ್ರೀಪಾತ್ರ ಮೂಡಿಬಂದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಅವರ ಯಾವ ಸ್ತ್ರೀ ಪಾತ್ರಗಳೂ ಓದುಗರ ಮನದಲ್ಲಿ ಮನೆಮಾಡಿ ನಿಲ್ಲುವುದಿಲ್ಲ. ನಾಯಕರನ್ನು ಕಾಮೋದ್ರೇಕಕ್ಕೆ ಒಳಪಡಿಸುವಷ್ಟಕ್ಕೆ ನಿಂತುಹೋಗುತ್ತವೆ. ಇದು ಪುರುಷಪ್ರಾಧಾನ್ಯದ ಸಂಕೇತವೋ ಅಥವಾ ಹೆಣ್ಣಿನ ಮನದ ತುಡಿತಗಳು, ಹಂಬಲಗಳು ಅವರನ್ನು ಕಾಡಿಲ್ಲವೋ ಎನ್ನುವ ಪ್ರಶ್ನೆಯನ್ನು ಅವರ ಕಾದಂಬರಿಗಳನ್ನು ಓದಿದಾಗಲೆಲ್ಲಾ ನನ್ನ ಮುಂದೆ ನಿಲ್ಲಿಸಿದೆ.
ಇವಿಷ್ಟು ಭಾರತೀಪುರ ಹಾಗೂ ಸಂಸ್ಕಾರ ಕಾದಂಬರಿಗಳನ್ನು ಮೂರನೇ ಬಾರಿಗೆ ಓದಿದಾಗ ನನಗನಿಸಿದ್ದು, ನಾನು ವಿಮರ್ಶಕಿಯಲ್ಲವಾದುದರಿಂದ ಯಾವ ರೀತಿಯ ವಿಶ್ಲೇಷಣೆಯೂ ಇಲ್ಲಿಲ್ಲ. ನನಗನಿಸಿದ್ದನ್ನು ಇಲ್ಲಿ ಉಲ್ಲೇಖಿಸಿರುವೆನಷ್ಟೇ.
ಘಟಶಾದ್ಢ, ಬರ, ಸೂರ್ಯನಕುದುರೆ ನನಗಿಷ್ಟವಾದ ಕಥೆಗಳು. ಡಾ. ಯು. ಆರ್. ಅನಂತಮೂತರ್ಿಯವರ `ಮಿಥುನ’ ಕವನ ಸಂಕಲನದ ಒಂದು ಕವನ ನನಗೆ ಬಹಳ ಇಷ್ಟವಾಗಿತ್ತು. ಆರ್ಚ್ಬಾಲ್ಡ್ ಮ್ಯಾಕ್ಲೀಶ್ ಎನ್ನುವ ಕವಿತೆಯ ನಾಲ್ಕೇ ಸಾಲುಗಳು ಹೀಗಿವೆ-
`ಪದ್ಯ ಪದವಿಲ್ಲದಿರಬೇಕು
ಹೆಜ್ಜೆಗುರುತು ಇಲ್ಲದ ಪಕ್ಷಿ ಹಾರುವಂತೆ
ಕಾಲದಲ್ಲಿ ಸ್ತಬ್ಧ ಎನ್ನಿಸಬೇಕು
ಏರುವ ಚಂದ್ರನಂತೆ
ಹೇಳಕೂಡದು
ಇರಬೇಕು`
ಈ ಸಾಲುಗಳು ನನಗೆ ಆಪ್ತವೆನಿಸಿ ಯಾವಾಗಲೂ ಕಾಡುತ್ತಿರುತ್ತವೆ. ಹೇಳಬೇಕಿರುವುದನ್ನು ಹೇಳದಿರುವುದರಲ್ಲಿಯೇ ಹೆಚ್ಚು ಅರ್ಥವಿದೆಯೆಂದು ನನಗೂ ಯಾವಾಗಲೂ ಅನಿಸುತ್ತಿರುತ್ತದೆ. ಅದಕ್ಕಾಗಿಯೇ ಈ ಕವನ ನನಗೆ ಇಷ್ಟವಾಗಿರಬಹುದು.
ಡಾ. ಯು ಆರ್ ಅನಂತಮೂರ್ತಿಯವರು ಈ ಕಾಲದ ಒಬ್ಬ ಶ್ರೇಷ್ಟ ಚಿಂತಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಚಿಂತನೆಗಳೇ ಅವರನ್ನು ಇಷ್ಟು ಎತ್ತರಕ್ಕೆ ಏರಿಸಿರುವುದು, ಜಗದ್ವಿಖ್ಯಾತರನ್ನಾಗಿ ಮಾಡಿರುವುದು ಎನ್ನುವ ಮಾತೂ ಅತಿಶಯೋಕ್ತಿಯಲ್ಲ. ಅವರ ಮಾತುಗಳನ್ನು ಕೇಳುವುದೇ ಒಂದು ವಿಶಿಷ್ಟ ಅನುಭವ. ಅವರ ಮಾತುಗಳನ್ನು ಕೇಳುವಾಗ ‘ಕೇಳುವ ಸುಖ’ ಸಿಗುತ್ತಿತ್ತು. ಯಾವುದೇ ವಿಷಯದ ಬಗ್ಗೆ ಅದು ಚಿಕ್ಕ ವಿಷಯವೇ ಆಗಿರಲಿ ಅದನ್ನು ಸಾರ್ವತ್ರಿಕಗೊಳಿಸಿ ಮಾತಾಡುವ ಕಲೆ ಅವರಿಗೆ ಸಿದ್ದಿಸಿತ್ತು. ಅವರ ಹಾಗೆ ಮಾತಾಡುವವರು ಬಹಳ ವಿರಳ. ಏನೇ ವಿವಾದಗಳಿರಲಿ ಅವರಿಗೆ ಸರಿ ಸಮಾನರಾದ ಚಿಂತಕರು ಸಾಹಿತ್ಯ ಲೋಕದಲ್ಲಿ ಇನ್ನೊಬ್ಬರಿಲ್ಲ ಎನ್ನುವುದೂ ಸತ್ಯ.
ಸನ್ಮಾನ್ಯ ಡಾ. ಯು ಆರ್ ಅನಂತಮೂರ್ತಿಯವರು ಇನ್ನು ಇಲ್ಲ ಎನ್ನುವುದು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಮಾತ್ರವಲ್ಲ ಭಾರತೀಯ ಸಾಹಿತ್ಯ ಜಗತ್ತಿನಲ್ಲಿಯೇ ಒಂದು ದೊಡ್ಡ ಶೂನ್ಯವನ್ನು ಉಂಟು ಮಾಡಿದೆ. ಆ ಶೂನ್ಯವನ್ನು ಯಾರಿಂದಲೂ ತುಂಬಲಾಗದು. ಅವರಂತೆ ಇನ್ನೊಬ್ಬರಿಲ್ಲ. ಅವರಂತೆ ಆಗುವುದು ಯಾರಿಗೂ ಸಾಧ್ಯವೂ ಇಲ್ಲ. ಅವರಷ್ಟು ತೀಕ್ಷ್ಣವಾಗಿ ಯೋಚಿಸುವ, ಪ್ರಸ್ತುತ ಸಮಸ್ಯೆಗಳಿಗೆ ಸ್ಪಂಧಿಸುವ ಇನ್ನೊಬ್ಬ ಲೇಖಕನಿಲ್ಲ. ಯಾವ ಹಿಂಜರಿಕೆಯೂ ಇಲ್ಲದೆ ಸಾಮಾಜಿಕ ಆಗುಹೋಗುಗಳಿಗೆ ತಮ್ಮ ವಿರೋಧವನ್ನು ವ್ಯಕ್ತ ಪಡಿಸುವ ದಿಟ್ಟ ನಿಲುವಿನ ವಿಚಾರವಾದಿ, ‘ಸಂಸ್ಕಾರ’, ‘ಭಾರತೀಪುರ’, ‘ಅವಸ್ಥೆ’ಯಂತಹ ಕಾದಂಬರಿಗಳನ್ನು, ‘ಘಟಶ್ರಾದ್ಧ’, ‘ಬರ’, ‘ಸೂರ್ಯನ ಕುದುರೆ’ಯಂತಹ ಸಣ್ಣ ಕಥೆಗಳನ್ನು, ಓದುಗರನ್ನು ಚಿಂತನೆಗೆ ಹಚ್ಚುತ್ತಿದ್ದ ವೈಚಾರಿಕ ಲೇಖನಗಳನ್ನು ಕೊಟ್ಟ ಅತ್ಯುತ್ತಮ ಬರಹಗಾರ, ತನಗೆ ಸರಿಯನಿಸದ್ದನ್ನು ಯಾರಿಗೂ ಅಂಜದೆ ಹೇಳಿಯೇ ಬಿಡುವ ಧೈರ್ಯವಂತ, ತಾನು ಹೇಳಿದ್ದು ತಪ್ಪೆನಿಸಿದರೆ ಅದನ್ನು ಅಷ್ಟೇ ಸಹಜವಾಗಿ ತಿದ್ದಿಕೊಳ್ಳಬಯಸುವ ಸ್ಥೈರ್ಯವಂತ, ತನ್ನನ್ನು ದೂಷಿಸುವವರನ್ನೂ ಸ್ನೇಹದಿಂದ ಕಾಣುತ್ತಿದ್ದ ಹೃದಯವಂತ, ಕಿರಿಯರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಸ್ನೇಹಮಯಿ, ಅಪರಿಚಿತ ಓದುಗರನ್ನೂ ತಮ್ಮ ಚಿಂತನೆಗಳ ಮೂಲಕ ಕಾಡುವ ಡಾ. ಯು ಆರ್ ಅನಂತಮೂರ್ತಿಯವರು ಇನ್ನಿಲ್ಲ ಎನ್ನುವುದು ಎಲ್ಲ ಕನ್ನಡದ ಮನಸುಗಳನ್ನು ಭಾರವಾಗಿಸಿದೆ. ನೋವಿಗೀಡು ಮಾಡಿದೆ. ಸಾವು ಅನಿವಾರ್ಯ. ಅದರಿಂದಾಗಿರುವ ನಷ್ಟವೂ ಭರಿಸಲಾಗದ್ದು. ಅನಂತಮೂರ್ತಿಯವರು ಅನಂತದಲ್ಲಿ ಲೀನವಾದರೂ ಅವರು ಬಿಟ್ಟು ಹೋಗಿರುವ ಸಾಹಿತ್ಯ ಅನಂತಕಾಲದವರೆಗೆ ಇದ್ದೇ ಇರುತ್ತೆ. ಸರಿಯಾದ ಮನಸಿನಿಂದ ಓದಿ ಅರ್ಥಮಾಡಿಕೊಳ್ಳುವ ಓದುಗರು ಬೇಕು ಅಷ್ಟೇ.
ಕಳೆದ ಆರು ತಿಂಗಳಿಂದ ಅವರನ್ನೊಮ್ಮೆ ನೋಡಿ ಬರಬೇಕು. ಅವರ ಮಾತುಗಳನ್ನು ಕೇಳಬೇಕು ಎಂದು ಯೋಚಿಸುತ್ತಲೇ ಇದ್ದೆ. ಆದರೆ ನನ್ನದೇ ಕೆಲವು ಅನಾನುಕೂಲತೆಗಳಿಂದ ಹೋಗಲಾಗಿಲ್ಲ ಎನ್ನುವ ನೋವು ಉಳಿದೇ ಬಿಟ್ಟಿತು. ಆ ನೋವಿನಿಂದಲೇ ಈ ಮೂಲಕ ಸನ್ಮಾನ್ಯ ಯು. ಆರ್ ಅನಂತಮೂತರ್ಿಯವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತಾ ಮನತುಂಬಿದ ಶೃದ್ದಾಂಜಲಿ ಸಮರ್ಪಿಸುತ್ತಿದ್ದೇನೆ.

‍ಲೇಖಕರು G

August 24, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

 1. B H Giridhar Shetty

  Ushakka I think it seems that you some what hate the word “Criticism” while placing your observation on U R A’s Sanskara,Bharatipura,for that matter Ghatashradda.Your observations according to me 100% correct as per my limited knowledge in literature.As you told only women are helpless in male dominated world.That too we thought Brhamins are upper cast and knowledgeable in all aspects then.Ill treatements to women were more than any other community then.In “Sanskara” and “Ghatashradda” they ill treated a low cast woman and their one cast woman in the other respectively.When these were made as films people came to know how cruel this cast is.
  When great thinkers like,Ananth Murthy,Girish Karnad,B V Karanth and others came out openly against their own relegion they faced the criticism and enimity from their own community.
  I heard some of the Brahmins of kannada Film society Delhi in 70’s asked B V Karanth”Why you some people do film against Brahmin community only is it for getting national award and publicity”.He replied “Because I am a Brahmin” what others know about it.
  These type of thinking made them most criticised persons by the limited knowledge people.This is the irony.

  ಪ್ರತಿಕ್ರಿಯೆ
 2. s.dinni

  URA is a well read scholor, intellectual and a good speaker. I had few opportunity to listen and little sharing at Rishi valley school and else where, where he shared his views on J.Krishnammurti many times. Unfortunately this is not known to the world outside. But he avoided to share his thoughts about JK at public meetings which is totally unfair and not wise. JK destabalises everything and go to the root of problem which too many is not digestable. I too send him some material with request to comment, with the intention to send many young people particularly those interested in literarture. I am told he read it as i talked to Nagaraj 15/20 times. Somehow the meeting could not take place. It is only about 4/6 months.
  My love and interest to take JK views to wider public failed and i felt disappointed. That is all.
  Yes. people like him are very much essential for our society.
  His funeral ceremony with all traditional methods is total mismatch and do not go well with his writings and teachings. It is not at all good event and practice. Let his soul rest in peace. My email is- [email protected]

  ಪ್ರತಿಕ್ರಿಯೆ
 3. ಅಪರ್ಣ ರಾವ್

  ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ಚೆನ್ನಾಗಿ ಮೂಡಿಬಂದಿದೆ ಮೇಡಂ.

  ಪ್ರತಿಕ್ರಿಯೆ
 4. Prabhakara alva k

  A good article about the personality of Late U R Ananthamurthy Sir and a brief account on the subject matter of some of his great works of literature. I enjoyed it.

  ಪ್ರತಿಕ್ರಿಯೆ
 5. Anonymous

  ಉಷಾ ಮೇಡಂ, ನಿಮ್ಮ ಬರಹದ ಮೂಲಕ ನನಗೆ ಕೆಲವು ಹೊಸ ವಿಷಯಗಳನ್ನು ತಿಳಿದಂತಾಯಿತು ಮತ್ತು ಕೆಲವು ಹಳೆಯ ನೆನಪುಗಳು ಮರುಕಳಿಸಿದವು. ದಿವಂಗತ ಸಾಹಿತಿ ಯು.ಆರ್. ಅನಂತ ಮೂರ್ತಿಯವರ ಎಲ್ಲಾ ಕೃತಿಗಳನ್ನು ನಾನು ಓದಿಲ್ಲ. ಆದರೆ ನಾನು ಓರ್ವ ಸಾಹಿತ್ಯ ತರಗತಿಯ ವಿದ್ಯಾರ್ಥಿನಿಯಾಗಿ,ಕನ್ನಡ ಪ್ರಾಧ್ಯಾಪಕರು ಒತ್ತಾಯ ಮಾಡಿ ರಜೆಯಲ್ಲಿ ಓದಲೇಬೇಕೆಂದು ನೀಡಿದ್ದ ಕೆಲವು ಪುಸ್ತಕಗಳಲ್ಲಿ ಅನಂತ ಮೂರ್ತಿಯವರ ” ಅವಸ್ಥೆ ” ಮೊದಲಾದ ಕೃತಿಗಳಿದ್ದವು. ಇಷ್ಟವಾಗಿದ್ದ ಗೋ.ಕೃ.ಅಡಿಗರ, ಬೇಂದ್ರೆಯವರ ಮತ್ತು ಕೆಲವು ವಿಮರ್ಶೆಯ ಪುಸ್ತಕಗಳನ್ನು ಓದಿದ್ದೆ.ಆದರೆ ಅನಂತ ಮೂರ್ತಿಯವರ ಪುಸ್ತಕಗಳನ್ನು ಓದಲು ಯಾಕೋ ಭಯವಾಗಿತ್ತು.ಅದು ಸುಲಭವಾಗಿ ಅರ್ಥವಾಗಲಾರದೆಂದು ಅಂದುಕೊಂಡಿದ್ದೆ. ರಾಜಕೀಯ ವಿಚಾರಗಳಿರುವ ಕಾರಣ ಓದಿರಲಿಲ್ಲ.ಪುಸ್ತಕ ಹಿಂದಿರುಗಿಸುವಾಗ ಪ್ರಾಮಾಣಿಕವಾಗಿ ಇದೊಂದು ಓದಲಿಲ್ಲವೆಂದಾಗ ನಾನು ಉತ್ತಮ ಸಾಹಿತ್ಯ ರಚನೆಯಿಂದ ನಿಜವಾಗಿ ವಂಚಿತಳಾದಂತೆ ಎಂದು ಪುನ: ಓದಲು ನೀಡಿದ್ದರು. ಯಾವ ಉದ್ದೇಶದಿಂದ ಅಂತಹ ಕೃತಿಗಳನ್ನು ಓದಬೇಕು ಎಂದು ತಿಳಿಸಿದ್ದರು.ಹೇಗೋ ಓದಿ ಮುಗಿಸಿದ್ದೆ. ಅವರದ್ದು ಬಹಳ ಪರಿಣಾಮಕಾರಿ ಬರವಣಿಗೆ ಅನ್ನಿಸಿತ್ತು.ಯಾಕೆಂದರೆ ಬಹಳ ದಿವಸ ಆ ಗುಂಗಿನಿಂದ ಹೊರಬರಲಾಗಿರಲಿಲ್ಲ. ಇಂದಿಗೂ ಪ್ರಸ್ತುತವೆನಿಸುವ ಅವರ ಕೃತಿಗಳನ್ನು ನಂತರದ ದಿನಗಳಲ್ಲಿ ಓದಿದ್ದೇನೆ. ಅನಂತಮೂರ್ತಿಯವರ ಕೃತಿಗಳ ಬಗ್ಗೆ ನಿಮ್ಮ ಅನಿಸಿಕೆ ಹಿಡಿಸಿತು.ನಾನು ಅನಂತ ಮೂರ್ತಿಯವರನ್ನು ಭೇಟಿಯಾಗಿರಲಿಲ್ಲ. ಅವರ ವಿಚಾರಧಾರೆಗಳ ಬಗ್ಗೆ ಆತ್ಮೀಯರೊಂದಿಗೆ ಚರ್ಚಿಸುತ್ತಿದ್ದೆ.ಚೆನ್ನಾಗಿ ಬರೆದಿದ್ದೀರಿ.ಧನ್ಯವಾದಗಳು.

  ಪ್ರತಿಕ್ರಿಯೆ
 6. ಮಮತಾ ದೇವ

  ಉಷಾ ಮೇಡಂ, ನಿಮ್ಮ ಬರಹದ ಮೂಲಕ ನನಗೆ ಕೆಲವು ಹೊಸ ವಿಷಯಗಳನ್ನು ತಿಳಿದಂತಾಯಿತು ಮತ್ತು ಕೆಲವು ಹಳೆಯ ನೆನಪುಗಳು ಮರುಕಳಿಸಿದವು. ದಿವಂಗತ ಸಾಹಿತಿ ಯು.ಆರ್. ಅನಂತ ಮೂರ್ತಿಯವರ ಎಲ್ಲಾ ಕೃತಿಗಳನ್ನು ನಾನು ಓದಿಲ್ಲ. ಆದರೆ ನಾನು ಪದವಿ ಪೂರ್ವ ತರಗತಿಯಲ್ಲಿರುವಾಗ , ಸಾಹಿತ್ಯ ತರಗತಿಯ ವಿದ್ಯಾರ್ಥಿನಿಯಾಗಿ,ಕನ್ನಡ ಪ್ರಾಧ್ಯಾಪಕರು ಒತ್ತಾಯ ಮಾಡಿ ರಜೆಯಲ್ಲಿ ಓದಲೇಬೇಕೆಂದು ನೀಡಿದ್ದ ಕೆಲವು ಪುಸ್ತಕಗಳಲ್ಲಿ ಅನಂತ ಮೂರ್ತಿಯವರ ” ಅವಸ್ಥೆ ” ಮೊದಲಾದ ಕೃತಿಗಳಿದ್ದವು. ಇಷ್ಟವಾಗಿದ್ದ ಗೋ.ಕೃ.ಅಡಿಗರ, ಬೇಂದ್ರೆಯವರ ಮತ್ತು ಕೆಲವು ವಿಮರ್ಶೆಯ ಪುಸ್ತಕಗಳನ್ನು ಓದಿದ್ದೆ.ಆದರೆ ಅನಂತ ಮೂರ್ತಿಯವರ ಪುಸ್ತಕಗಳನ್ನು ಓದಲು ಯಾಕೋ ಭಯವಾಗಿತ್ತು.ಅದು ಸುಲಭವಾಗಿ ಅರ್ಥವಾಗಲಾರದೆಂದು ಅಂದುಕೊಂಡಿದ್ದೆ. ರಾಜಕೀಯ ವಿಚಾರಗಳಿರುವ ಕಾರಣ ಓದಿರಲಿಲ್ಲ.ಪುಸ್ತಕ ಹಿಂದಿರುಗಿಸುವಾಗ ಪ್ರಾಮಾಣಿಕವಾಗಿ ಇದೊಂದು ಓದಲಿಲ್ಲವೆಂದಾಗ ನಾನು ಉತ್ತಮ ಸಾಹಿತ್ಯ ರಚನೆಯಿಂದ ನಿಜವಾಗಿ ವಂಚಿತಳಾದಂತೆ ಎಂದು ಪುನ: ಓದಲು ನೀಡಿದ್ದರು. ಯಾವ ಉದ್ದೇಶದಿಂದ ಅಂತಹ ಕೃತಿಗಳನ್ನು ಓದಬೇಕು ಎಂದು ತಿಳಿಸಿದ್ದರು.ಹೇಗೋ ಓದಿ ಮುಗಿಸಿದ್ದೆ. ಅವರದ್ದು ಬಹಳ ಪರಿಣಾಮಕಾರಿ ಬರವಣಿಗೆ ಅನ್ನಿಸಿತ್ತು.ಯಾಕೆಂದರೆ ಬಹಳ ದಿವಸ ಆ ಗುಂಗಿನಿಂದ ಹೊರಬರಲಾಗಿರಲಿಲ್ಲ. ಇಂದಿಗೂ ಪ್ರಸ್ತುತವೆನಿಸುವ ಅವರ ಕೃತಿಗಳನ್ನು ನಂತರದ ದಿನಗಳಲ್ಲಿ ಓದಿದ್ದೇನೆ. ಅನಂತಮೂರ್ತಿಯವರ ಕೃತಿಗಳ ಬಗ್ಗೆ ನಿಮ್ಮ ಅನಿಸಿಕೆ ಹಿಡಿಸಿತು.ನಾನು ಅನಂತ ಮೂರ್ತಿಯವರನ್ನು ಭೇಟಿಯಾಗಿರಲಿಲ್ಲ. ಕೆಲವೊಂದು ಅವರ ವಿಚಾರಧಾರೆಗಳ ಬಗ್ಗೆ ಅನಂತ ಮೂರ್ತಿಯವರ ಆತ್ಮೀಯ ಸ್ನೇಹಿತರಾಗಿದ್ದ ರಾಮಚಂದ್ರ ದೇವರೊಂದಿಗೆ ಕೆಲವೊಮ್ಮೆ ಚರ್ಚಿಸಿದ್ದೆ. ಚೆನ್ನಾಗಿ ಬರೆದಿದ್ದೀರಿ.ಧನ್ಯವಾದಗಳು.

  ಪ್ರತಿಕ್ರಿಯೆ
 7. ಲಕ್ಷ್ಮೀಕಾಂತ ಇಟ್ನಾಳ

  ಸುಂದರ ಬರಹ. ತುಂಬ ಆಪ್ತತೆಯೊಂದಿಗೆ ಹಲವಾರು ವಿವರಗಳನ್ನು ನೀಡಿತು. ಇಂತಹ ಚಿಂತಕರೊಬ್ಬರನ್ನು ಕಳೆದುಕೊಂಡು ನಾಡು ನಿಜಕ್ಕೂ ಬಡವಾಗಿದೆ.

  ಪ್ರತಿಕ್ರಿಯೆ
 8. Anand c. Hegde

  ನುಡಿ ನಮನ
  ತನ್ನ ಅನಾರೋಗ್ಯದ ನಡುವೆಯೂ
  ಸಮಾಜಕ್ಕೆ ಕೊಡಲು ಹೊರಟಿದ್ದ
  ಚುಚ್ಚುಮದ್ದು….
  ತಿನ್ನಬೇಕಾಯಿತು ಹಲವು ಮಾತುಗಳ ಗುದ್ದು
  ಅಂಥ ಸ್ತಿತಿಯಲ್ಲೂ, ಬಿದ್ದು ಹೊರಳಾಡಲಿಲ್ಲ
  ಎದ್ದು ಹೊರಡಲು ಇಲ್ಲ
  ಛಲದಿಂದ ನಿಂತಿದ್ದ ಅನಂತ
  ಬಿಡದೆಯೆ ಹಿಡಿದ ಸಿದ್ದಾಂತ….
  ಶಿಲ್ಪಿ ಮೂರ್ತಿ ಕೆತ್ತಿದರೆ
  ಈ ಮೂರ್ತಿ ವ್ಯವಸ್ಥೆ ಕೆತ್ತಲು ಹೊರಟ
  ಅನಿಸಿಕೊಂಡ ಒರಟ…
  ದೇಹವಾಗಿರಬಹುದು ಪ್ರಕೃತಿಯಲ್ಲಿ ಲೀನ
  ಪ್ರಾಣ ಹೊರಟಿರ ಬಹುದು ದೂರ ತೀರ ಯಾನ
  ಆದರೂ ಸುಲಭಕ್ಕೆ ಸಾಯುವವನಲ್ಲ ಈ ಆಸಾಮಿ…
  ಬದುಕಿಯೇ ಇರುತ್ತಾನೆ… ಶತ ಶತಮಾನಗಳ ತನಕ
  ಆಡಿಹೋದ ನುಡಿಗಳಲ್ಲಿ,
  ತೋರಿಹೋದ ನಡೆಗಳಲ್ಲಿ,
  ಬರವ ನೀಗಿಸುವಂತೆ ಬರೆದ ಬರವಣಿಗೆಯಲ್ಲಿ
  ಅಭಿಮಾನಿಗಳ ಮನೋರಥದ ಮೆರವಣಿಗೆಯಲ್ಲಿ
  ಆದರೂ…
  ಎಂಭತ್ತೆರಡರ ಯೌವನಿಗ.. ಬಂದಿರಲಿಲ್ಲ ಮುಪ್ಪು
  ದೇಶ ಬಿಡುತ್ತೇನೆ ಅಂದವ.. ದೇಹ ಬಿಟ್ಟಿದ್ದು ತಪ್ಪು.
  ———- ೦———
  ಆನಂದ ಸಿ.ಹೆಗಡೆ- ೯೮೮೬೮೦೮೭೪೫

  ಪ್ರತಿಕ್ರಿಯೆ
 9. Usha Rai

  ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: