ಅವರು ಹೇಗಿರುತ್ತಾರೆ ಮಹಾತ್ಮರು..?

ಜಿ ಎನ್ ಮೋಹನ್

**

ಖ್ಯಾತ ಸಮಾಜ ವಿಜ್ಞಾನಿ ಡಾ ಪ್ರಕಾಶ ಭಟ್ ಅವರ ಹೊಸ ಕೃತಿ ‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ.’

ಈ ಕೃತಿಯನ್ನು ‘ಬಹುರೂಪಿ’ ಪ್ರಕಟಿಸಿದೆ.

ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರು ಈ ಕೃತಿಗೆ ಬರೆದ ಮಾತುಗಳು ಇಲ್ಲಿದೆ.

**

ಅವರು ಹೇಗಿರುತ್ತಾರೆ ಮಹಾತ್ಮರು?

ದಾರ್ಶನಿಕರು, ಸಂತರು..?

ಎಂದು ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ನಾನು ಗಾಂಧಿಯನ್ನು ನೋಡಿಲ್ಲ, ಅಂಬೇಡ್ಕರ್ ಅವರನ್ನೂ ನೋಡಿಲ್ಲ, ಅಂತೆಯೇ ನೋಡಲೇಬೇಕಾಗಿದ್ದ ಹಲವರನ್ನು. ಆದರೆ ಮಹಾತ್ಮರ ಪ್ರಭಾವ ಹೇಗಿರಬಹುದು? ಎನ್ನುವುದಕ್ಕೆ ನನ್ನ ಬಳಿ ಉತ್ತರವಿದೆ, ಉದಾಹರಣೆಯಿದೆ. ನೀವು ಈಗ ಈ ಕ್ಷಣದಲ್ಲಿ ಆ ಪ್ರಶ್ನೆ ಕೇಳಿದರೂ ನಾನು ಸುಲಭವಾಗಿ ಉತ್ತರಕನ್ನಡದ ಕಡಲತಡಿಯ ಹಳ್ಳಿ ಹೊಲನಗದ್ದೆಯಿಂದ ಎದ್ದು ಬಂದ ಡಾ ಪ್ರಕಾಶ ಭಟ್ ಅವರನ್ನು ತೋರಿಸಿಬಿಡುತ್ತೇನೆ.

ನಾನು ಮತ್ತೆ ಮತ್ತೆ ಎಚ್ ನಾಗವೇಣಿ ಅವರ ‘ಗಾಂಧಿ ಬಂದ’ ಕೃತಿಯತ್ತ ಮರಳಲೇಬೇಕಿದೆ. ಆಗ ‘ಕನ್ನಡ ಜಿಲ್ಲೆ’ ಎನಿಸಿದ್ದ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡವನ್ನು ಒಳಗೊಂಡಿದ್ದ ಜಿಲ್ಲೆಗೆ ಗಾಂಧಿ ಬರುವುದಿರುತ್ತದೆ. ಗಾಂಧಿ ಬಂದು ಪರಿವರ್ತನೆ ಆದರೆ ಅದು ಸಹಜ. ಆದರೆ ಗಾಂಧಿ ಬರುತ್ತಾರಂತೆ ಎಂದು ಊರಿಗೆ ಊರುಗಳೇ ಗಾಂಧಿಯಂತಾಗಿಬಿಡುವ ಕಥನ ಇದೆಯಲ್ಲಾ ಅದು ಅನ್ವಯವಾಗುವುದು ಪ್ರಕಾಶ ಭಟ್ಟರಿಗೆ. ಪಶು ವೈದ್ಯ ಓದಿದ ಡಾ. ಪ್ರಕಾಶ ಭಟ್ ಅವರು ತಾನು ಸರ್ಕಾರಿ ಹುದ್ದೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿ ಹಳ್ಳಿಗಳನ್ನು ಕಟ್ಟುವ ಕೆಲಸದ ಕಡೆ ಹೊರಳಿಬಿಡುತ್ತಾರೆ. ಗಾಂಧೀಜಿಯವರ ಬಳಿ ಇದ್ದ ಮಣಿಭಾಯಿಯವರನ್ನು ಗಾಂಧೀಜಿ ಕೇಳುತ್ತಾರೆ- ಭಾರತ ಯಾಕೆ ಬಡವಾಗಿದೆ? ಗಾಂಧೀಜಿಯವರೇ ಉತ್ತರಿಸುತ್ತಾರೆ- ಏಕೆಂದರೆ ಭಾರತದ ಹಳ್ಳಿಗಳು ಬಡವಾಗಿವೆ. ಗಾಂಧೀಜಿಯವರ ಶಿಷ್ಯತ್ವ ಪಡೆದ ಮಣಿಬಾಯಿಯವರು ಡಾ ಪ್ರಕಾಶ ಭಟ್ ಅವರ ಮುಂದೆ ಕೂತು ಕ್ಯಾಂಪಸ್ ಸಂದರ್ಶನದಲ್ಲಿ ಇದನ್ನು ಹೇಳಿದ್ದರು.

ಉತ್ತರ ಕನ್ನಡದಲ್ಲಿ ಯಕ್ಷಗಾನ ಹೇಳಿಕೊಡುವುದನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಪ್ರಕಾಶ ಭಟ್ಟರು ಮಹಾತ್ಮರ ಹಾದಿಯಲ್ಲಿ ನಡೆದೆಬಿಟ್ಟರು. ಅದರ ಫಲ ಇಂದು 75 ಹಳ್ಳಿಗಳ ಮುಖದಲ್ಲಿ ಸಂತಸದ ಬುಗ್ಗೆಯಿದೆ. ತಮ್ಮ ಅಭಿವೃದ್ಧಿಯನ್ನು ತಾವೇ ಮಾಡಿಕೊಳ್ಳುವ ಹುಮ್ಮಸ್ಸನ್ನು ಇಲ್ಲಿಯ ಸುಮಾರು 7 ಸಾವಿರಕ್ಕೂ ಹೆಚ್ಚು ಕುಟುಂಬಗಳು ಗಳಿಸಿವೆ. 5 ಸಾವಿರಕ್ಕೂ ಹೆಚ್ಚು ಕುಟುಂಬಗಳ ಬದುಕು ಬದಲಾಗಿದೆ. ಇಷ್ಟು ಮಾತ್ರವಲ್ಲ ಇಡೀ ರಾಜ್ಯಕ್ಕೆ ಹೇಗೆ ಬರಗಾಲವನ್ನು ಒದ್ದು ಓಡಿಸಬೇಕೆಂಬ ಮಾದರಿಯನ್ನು ಹಾಕಿಕೊಟ್ಟಿದ್ದಾರೆ.

‘ಯಾತಕ್ಕೆ ಮಳೆ ಹೋದವೋ

ಶಿವ ಶಿವ ಲೋಕ ತಲ್ಲಣಿಸುತಾವೊ’

ಎಂದು ತತ್ತರಿಸಿಹೋಗಿದ್ದ ರೈತರಿಗೆ ಇದು ಮಾದರಿ ಪರಿಹಾರವಾಗಿದೆ. ಇದರ ಭಾಗವಾಗಿಯೇ 20 ಲಕ್ಷಕ್ಕೂ ಹೆಚ್ಚು ಮರಗಳು ನೆಡಲ್ಪಟ್ಟಿವೆ. 50 ಕೋಟಿ ಲೀಟರ್ ನೀರನ್ನು ಸಂಗ್ರಹಿಸಲಾಗಿದೆ. ಉಸಿರುಗಟ್ಟಿಸುತ್ತಿದ್ದ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿದ್ದ ಸಾವಿರಾರು ಹಳ್ಳಿಗಳ ಅಡುಗೆ ಮನೆ ಇಂದು ಹೊಗೆರಹಿತವಾಗಿದೆ. ಹಿತ್ತಲಲ್ಲಿ ಮನೆಯ ತ್ಯಾಜ್ಯವೇ ಗೊಬ್ಬರವಾಗಿ ಬದಲಾಗಿದೆ. ಅಷ್ಟೇ ಅಲ್ಲ, ಶೌಚಾಲಯ ಎನ್ನುವ ಕಲ್ಪನೆಯೇ ಇಲ್ಲದ ಹಳ್ಳಿಗಳಲ್ಲಿ ಈಗ ಬೆಳಗು ಯಾತನಾಮಯವಲ್ಲ. ನನಗೆ ಗೊತ್ತು, ಇದನ್ನು ಬರೆಯುವಾಗ ಡಾ ಪ್ರಕಾಶ ಭಟ್ಟರ ಮುಖ್ಯ ಗಂಟಿಕ್ಕಿರುತ್ತದೆ ಎಂದು. ಕಾರಣ ಅವರಿಗೆ ‘ನಾವು’ ಎನ್ನುವುದು ಗೊತ್ತೇ ಹೊರತು ‘ನಾನು‘ ಎನ್ನುವುದು ಅಲ್ಲ.

ಅವರು ಮೊದಲು ಬೋಧಿಸುವ ಸೂತ್ರವೆ ಅದು. ಎಲ್ಲರನ್ನೂ ಒಳಗೊಳ್ಳಿ ಹಾಗಾಗಬೇಕಾದರೆ ‘ನಾನು’ ಎನ್ನುವುದನ್ನು ತೊಡೆದು ಹಾಕಿ ಎಂದು. ಅದು ಎಷ್ಟು ಅವರೊಳಗೇ ಆಳವಾಗಿ ಬೇರೂರಿತ್ತು ಎಂದರೆ ಅವರು ನಡೆಸುತ್ತಿದ್ದ ಮಹಿಳಾ ಸಂಘಗಳ ಸಭೆಯಲ್ಲಿ ಅವರು ‘ನಾವು ಮಹಿಳೆಯರು ಇದ್ದೇವಲ್ಲ..’ ಎಂದೇ ಮಾತನಾಡುತ್ತಿದ್ದರು. ಹಾಗೂ ಅಲ್ಲಿನ ಹೆಂಗಸರು ಅದು ಹೌದು ಎಂದು ಅವರನ್ನು ತಮ್ಮಂತೆ ಒಪ್ಪಿಕೊಂಡಿದ್ದರು. ಡಾ ಪ್ರಕಾಶ ಭಟ್ ಅವರು ಈ ಎಲ್ಲವನ್ನೂ ಸಾಧಿಸಿದ್ದು ಮಣೀಭಾಯಿಯವರು ಕನಸಿದ ‘ಬೈಫ್’ ಸಂಸ್ಥೆಯ ಮೂಲಕ. ತಳ ಕಾಣುವಂತೆ ಪಾಯಿಖಾನೆಯ ಬಕೆಟ್ ತೊಳೆಯಬೇಕು ಎಂದು ಗಾಂಧಿಯ ಆಶ್ರಮದಲ್ಲಿ ಕಲಿತಿದ್ದ ಮಣಿಬಾಯಿಯವರ ಬೈಫ್ ನಿಂದ. ‘ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ’ ಹಳ್ಳಿಗಳನ್ನು ಕಟ್ಟಿದವರಿಗೇ ಗೊತ್ತು. ಅದು ಬೇರೆಯವರಿಗೂ ಒಂದಿಷ್ಟು ಗೊತ್ತಾಗಲಿ ಎನ್ನುವ ಕಾರಣಕ್ಕೆ ಈ ಪುಸ್ತಕ.

‘ಮೀಸೆ ಇದ್ದವರೇ ದೊಡ್ಡವರು, ಅನುಕೂಲಸ್ಥರು’ ಎಂದು ಭಾವಿಸುತ್ತಿದ್ದ, ಅಭಿವೃದ್ದಿಯ ಸಂಕೇತ ಎಂದುಕೊಂಡಿದ್ದ ಜನರನ್ನು, ಕುಂಬಳಕಾಯಿ ಬೇಯಿಸಿ ತಿನ್ನುತ್ತಿದ್ದ ಕಾಲದಿಂದ ಅವರ ಕೈ ಹಿಡಿದು ಅವರು ಬೇರೆ ಊರುಗಳಿಗೂ ಹಾಲು ಹಂಚುವ, ಬೆಳೆದದ್ದನ್ನು ಮಾರುವವರೆಗೆ ಕರೆದುಕೊಂಡು ಬಂದ ಕಥೆ ಇದು. ಡಾ ಪ್ರಕಾಶ್ ಭಟ್ ಅವರು ಕೇಳುತ್ತಾರೆ. ಒಂದು ಕಿಲೋ ಜೋಳ ಎಂದರೆ ಎಷ್ಟು? ಆಗ ರೈತರು ತಟ್ಟಂತ ಕೊಡುವ ಉತ್ತರ ಇಷ್ಟು ರೂಪಾಯಿ ಅಂತ. ಬಿಡದೆ ಮತ್ತೆ ಕೇಳಿದಾಗ ಹೊರಡುವ ಉತ್ತರ ಇಪ್ಪತ್ತು ರೊಟ್ಟಿ, ಇನ್ನೂ ಮುಂದುವರಿದಾಗ ಹೇಳುವ ಉತ್ತರ ‘ಒಂದು ಕುಟುಂಬದ ಒಂದು ದಿನದ ಊಟ’ ಕೃಷಿ ಮಾರುಕಟ್ಟೆಯ ಹಿಡಿತ, ಜಾಗತೀಕರಣದ ಅಬ್ಬರ ತಿನ್ನುವ ರೊಟ್ಟಿಯನ್ನು ಸದ್ದು ಮಾಡುವ ಹಣವಾಗಿ ಬದಲಿಸಿಬಿಟ್ಟಿರುವುದನ್ನು ಪ್ರಕಾಶ್ ಭಟ್ ನಿಟ್ಟುಸಿರಿಟ್ಟು ನೋಡುತ್ತಾರೆ. ಆದರೆ ಸುಮ್ಮನೆ ಕೂರುವುದಿಲ್ಲ ‘ನೇಗಿಲು ಸುಖವಾಗಿ ಉಳಲಿ’ ಎನ್ನುವ ಪಾಠವನ್ನು ಕಲಿಸುತ್ತಾರೆ.

ಆದರೂ ಪ್ರಕಾಶ್ ಭಟ್ ಅವರು ನಿಟ್ಟುಸಿರಿಡುತ್ತಲೇ ಇದ್ದಾರೆ- “ಸಾಫ್ಟ್ ವೇರ್ ಉದ್ಯಮವೇ ನಮ್ಮ ದೇಶವನ್ನು ಸಾಕುತ್ತಿದೆ” ಎನ್ನುವ ಭ್ರಮೆಯನ್ನು ಹುಟ್ಟು ಹಾಕಿರುವ ಬಗ್ಗೆ. ಕೃಷಿ ಅಲ್ಲ, ಸಾಫ್ಟ್ ವೇರ್ ಉದ್ಯಮ ದೇಶವನ್ನು ಸಾಕುತ್ತಿದೆ ಎನ್ನುವ ಬಗ್ಗೆ. ಸಫಲತೆ ಎಂದರೆ ಹೆಚ್ಚು ಸಂಬಳ ಅಲ್ಲ ಎನ್ನುವ ಮಾತನ್ನು ಪ್ರಕಾಶ್ ಭಟ್ ಮತ್ತೆ ಮತ್ತೆ ಹೇಳುತ್ತಾರೆ. “ಭಾರತೀಯರೊಬ್ಬರು ವಿದೇಶದ ಕಂಪನಿಯೊಂದರ ಸಿಇಒ ಆಗುವುದು ಬಹು ದೊಡ್ಡ ಸುದ್ದಿ. ಇಡೀ ದೇಶ ಅದರಿಂದ ಧನ್ಯವಾಯ್ತು ಎನ್ನುವಂತೆ ಮಾಧ್ಯಮಗಳು ಬಿಂಬಿಸುತ್ತಿರುವ ದಿನಗಳಲ್ಲಿ ಧನ್ಯವಾದರಹಿತ, ಗ್ಲಾಮರ್ ಇಲ್ಲದ ಕೆಲಸ ಮಾಡಲು ಯುವಕ ಯುವತಿಯರನ್ನು ಪ್ರೇರೇಪಿಸುವುದು ಹೇಗೆ?” ಎಂದು ಪ್ರಶ್ನಿಸುತ್ತಾರೆ.

ಈ ಪುಸ್ತಕ ಎತ್ತುವ ಪ್ರಶ್ನೆ ನಿಮ್ಮೊಳಗೂ ಸದಾ ಆಡುತ್ತಲಿರಲಿ.

‍ಲೇಖಕರು Admin MM

June 9, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: