ಸಮಾಜಕ್ಕೆ ಬೆಳಕಾದ ವಿದ್ಯಾನಿಧಿ “ಶೆವೆಲಿಯರ್”: ಉಚ್ಚಿಲ್ ಕಣ್ಣಪ್ಪ ಅಲೋಶಿಯಸ್
ಶ್ಯಾಮಲಾ ಮಾಧವ
——
ದಕ್ಷಿಣಕನ್ನಡ ಜಿಲ್ಲಾ ವಿದ್ಯಾಧಿಕಾರಿಯಾಗಿದ್ದ ಉಚ್ಚಿಲ್ ಕಣ್ಣಪ್ಪ ಅಲೋಶಿಯಸ್ ಅವರು, ನಿಜ ಅರ್ಥದಲ್ಲಿ ವಿದ್ಯಾನಿಧಿ! ಮಂಗಳೂರ ವಿದ್ಯಾಕ್ಷೇತ್ರದಲ್ಲಿ ಹೆಸರಾಗಿ, ಸಮಾಜದ ಉನ್ನತಿಗೆ ಪರಿಪರಿಯಲ್ಲಿ ಶ್ರಮಿಸಿದ ಪ್ರಾತಃಸ್ಮರಣೀಯರು. ನಮ್ಮ ಊರು ಉಚ್ಚಿಲದ ನಾಡಿಗೆ ವಿದ್ಯೆಯ ಬೆಳಕನ್ನಿತ್ತ ಮನೆಯ ಮಗನಾಗಿ ಜನಿಸಿ ಬಂದವರು. ಸಾವಿರದ ಎಂಟ್ನೂರ ಎಂಬತ್ತೇಳರ ಜುಲೈ ಆರು ಉಚ್ಚಿಲ್ ಕಣ್ಣಪ್ಪನವರ ಜನ್ಮ ದಿನ.
ಸಂಬಂಧದಲ್ಲಿ ಅವರು, ನಮ್ಮಮ್ಮನ ತಂದೆಯ ಅಣ್ಣ – ಮೂರು ತಿಂಗಳ ಶೈಶವದಲ್ಲೇ ತಂದೆಯನ್ನು ಕಳಕೊಂಡ ನಮ್ಮಮ್ಮನಿಗೆ ಪ್ರೀತಿಯ ದೊಡ್ಡಪ್ಪ; ನಗರದ ಬೆಂದೂರ್ ಚರ್ಚ್‍ಗೆ ತಾಗಿಕೊಂಡಿರುವ ವಿಶಾಲ ಹಿತ್ತಿಲ ಮನೆ “ಸೀಗೆಬಲ್ಲೆ ಹೌಸ್”ನಲ್ಲಿ ನಮ್ಮ ಮುತ್ತಜ್ಜ ಮಂಜಪ್ಪ, ಅಜ್ಜಿ ಮಂಜಮ್ಮ ದಂಪತಿಗಳ ಒಂಬತ್ತು ಮಂದಿ ಮಕ್ಕಳ ದೊಡ್ಡ ಕುಟುಂಬದಲ್ಲಿ ಹುಟ್ಟಿ ಬಂದವರು. ಈ ದೊಡ್ಡ ಕುಟುಂಬವಲ್ಲದೆ ಶಾಲೆಯಿರದ ನಮ್ಮೂರು ಉಚ್ಚಿಲದಿಂದ ವಿದ್ಯಾಕಾಂಕ್ಷಿಗಳಾಗಿ ಅನೇಕ ಬಂಧುಗಳೂ ಬಂದು ನೆಲಸಿದ್ದ ಅಂದಿನ ಉಪ್ಪರಿಗೆ ಮನೆಯದು. ನಮ್ಮ ಮುತ್ತಜ್ಜ ತಮ್ಮ ಏಳುಮಂದಿ ಗಂಡುಮಕ್ಕಳನ್ನು ಪದವೀಧರರನ್ನಾಗಿಯೂ, ಅವರಲ್ಲಿ ಕೊನೆಯ ಮೂವರನ್ನು ಸ್ನಾತಕೋತ್ತರ ಪದವೀಧರರನ್ನಾಗಿಯೂ ಮಾಡುವಲ್ಲಿ ಸಫಲರಾಗಿದ್ದರು. ಸ್ವತಃ ಫೋರ್ತ್ ಫಾರ್ಮ್ ವರೆಗೆ ಕಲಿತಿದ್ದ ಅವರು, ಮಂಗಳೂರಿನ ನ್ಯಾಯಾಲಯದಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿನ ಬ್ರಿಟಿಶ್ ನ್ಯಾಯಾಧೀಶರ ಪ್ರಭಾವದಿಂದ ವಿದ್ಯೆಯ ಮಹತ್ವವರಿತು ತಮ್ಮೆಲ್ಲ ಮಕ್ಕಳಿಗೂ ಉನ್ನತ ವಿದ್ಯಾಭ್ಯಾಸದ ಅವಕಾಶವಿತ್ತರು. ಅವರ ಇಬ್ಬರು ಹೆಣ್ಣುಮಕ್ಕಳೂ ಸಮಗ್ರ ರಾಮಾಯಣ, ಮಹಾಭಾರತ ವಾಚನಗೈಯುವಲ್ಲಿ ಸಮರ್ಥರಿದ್ದರು. ಆ ಕಾಲಕ್ಕೇ ಅವರು ಲೈಟ್ ಹೌಸ್ ಹಿಲ್‍ನಲ್ಲಿನ ಲೇಡೀಸ್ ಕ್ಲಬ್‍ನ ಸದಸ್ಯೆಯರೂ ಆಗಿದ್ದರು. ‘ಉಚ್ಚಿಲದ ನಾಡಿಗೆ ವಿದ್ಯೆಯ ಬೆಳಕನ್ನಿತ್ತ ನಮ್ಮ ಮನೆ’, ಅಂದೆ. ಹೌದು, ಸಾವಿರದ ಒಂಬೈನೂರ ಹದಿನಾಲ್ಕರಿಂದ ಹತ್ತೊಂಬತ್ತು ಅವಧಿಯ ಪ್ರಥಮ ಮಹಾಯುಧ್ಧದ ದಳ್ಳುರಿಯ ಬೇಗೆಗೆ ಜನತೆ ಕಂಗೆಟ್ಟು ದಿಕ್ಕಾಣದಂತಾಗಿದ್ದ ದಿನಗಳವು. ನಾಡಿನ ಜನರು ದಾರಿದ್ರ್ಯದ ಸಂಕಷ್ಟದಿಂದ ಬಸವಳಿದಿದ್ದರು. ಹೊಟ್ಟೆಯ ಪಾಡಿಗಾಗಿ ಕೆಲಸವನ್ನರಸಿ ಮುಂಬೈ ತಲುಪಿ ಅಲ್ಲಿ ನೆಲಸಿದ್ದ ತಮ್ಮ ಪುರುಷರಿಂದ ಅಪರೂಪಕ್ಕೆ ಬರುತ್ತಿದ್ದ ಪತ್ರಗಳನ್ನು ಓದಿ ತಿಳಿಯ ತಕ್ಕ ವಿದ್ಯೆಯ ಗಂಧವೂ ಇರದ ಹೆಂಗಸರು, ಮಕ್ಕಳು. ಇಂಥ ಜನರ ಸಂಕಷ್ಟಕ್ಕೆ ನೊಂದು, ವಿದ್ಯೆಯೊಂದೇ ಅವರನ್ನು ಈ ದಾರಿದ್ರ್ಯದ ಕೂಪದಿಂದ ಮೇಲೆತ್ತ ಬಲ್ಲ ಸಾಧನ ಎಂದು ಮನಗಂಡು, ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾದವರು, ಮುತ್ತಜ್ಜ ಉಚ್ಚಿಲ ಮಂಜಪ್ಪ ಅವರು.
ಊರ ಜನರಿಗೆ ವಿದ್ಯೆಯನ್ನೀವ ಸಂಕಲ್ಪದಿಂದ ಉಚ್ಚಿಲದ ಕೋಟೆಯ ಬಳಿಯ ಬಸ್ತಿ ಪಡ್ಪು ಎಂಬಲ್ಲಿ ತಮ್ಮದಾಗಿದ್ದ ಕುಟುಂಬದ ಮನೆಯನ್ನು ಶಾಲೆ ನಡೆಸಲೆಂದು ಒದಗಿಸಿಕೊಟ್ಟರು, ಮುತ್ತಜ್ಜ ಉಚ್ಚಿಲ ಮಂಜಪ್ಪ. ವಿದ್ಯಾದಾನದ ಹಾದಿಯಲ್ಲಿ ಅವರಿಗೆ ಹೆಗಲೆಣೆಯಾಗಿ ನಿಂತವರು ಉದ್ಯಾವರ ಬೀಚ ಬೆಳ್ಚಪ್ಪಾಡರೆಂಬ ಹಿರಿಯರು. ಮುಂದೆ ಮಕ್ಕಳ ಸಂಖ್ಯೆ ಹೆಚ್ಚಿಕೊಂಡು ಶಾಲೆಗೆ ಸ್ಥಳ ಸಾಲದಾದಾಗ, ಊರ ನಡುಮಧ್ಯ ಅಂದಿನ ನೀಲೇಶ್ವರ ದಾಮೋದರ ತಂತ್ರಿಯವರಿಂದ ಶಾಲೆಗಾಗಿ ಸ್ಥಳವನ್ನು ದಾನವಾಗಿ ಪಡೆದು, ಉದಾರಿಗಳ ದೇಣಿಗೆಯಿಂದ, ಬೊಂಬಾಯಿಯಲ್ಲಿ ನೆಲಸಿದ್ದ ಊರವರು ಸಂಗ್ರಹಿಸಿ ಇತ್ತ ಧನ ಸಹಾಯದಿಂದ, ಊರವರ ಶ್ರಮದಾನದಿಂದ ಕಟ್ಟಿ ನಿಲಿಸಿದ (“ಉಚ್ಚಿಲ ಬೋವಿ ಪ್ರಾಥಮಿಕ”) ಶಾಲೆಯ ಸ್ಥಾಪನೆಯನ್ನು ಸಾಧ್ಯವಾಗಿಸಿದವರು, ತಂದೆ ಮಂಜಪ್ಪ ಮತ್ತು ಅವರ ಹಾದಿಯಲ್ಲಿ ನಡೆದ ಅವರ ಏಳು ಜನ ಸುಪುತ್ರರು. ಆ ಹಿರಿಯರು ಸ್ಥಾಪಿಸಿದ ಮಾದರಿ ಪಾಠಶಾಲಾ ಕಟ್ಟಡ ಹೊಂದಿದ ಈ ಶಾಲಾ ಸಂಸ್ಥೆಯ ಶತಮಾನೋತ್ಸವವು 2019ರ ನವೆಂಬರ್ ತಿಂಗಳಲ್ಲಿ ಕೋವಿಡ್ ಕಾಲಿರಿಸುವ ಎರಡು ತಿಂಗಳ ಮುನ್ನ ಅತ್ಯಂತ ಸಂಭ್ರಮದಿಂದ ಮೂರುದಿನಗಳ ಉತ್ಸವವಾಗಿ ನೆರವೇರಿದ ಸಂತಸ, ಧನ್ಯತಾಭಾವ ನಮ್ಮೆಲ್ಲರದು.
ಮುತ್ತಜ್ಜನ ಮಕ್ಕಳಲ್ಲಿ ದೇವಮ್ಮ, ಪೊನ್ನಮ್ಮ ಅವರ ಹೆಣ್ಣುಮಕ್ಕಳಾದರೆ, ಬಸಪ್ಪ, ಗುಡ್ಡಪ್ಪ, ಪರಮೇಶ್ವರ, ವೀರಪ್ಪ, ರಾಮಪ್ಪ, ಕಣ್ಣಪ್ಪ ಮತ್ತು ಕೃಷ್ಣಪ್ಪ ಗಂಡುಮಕ್ಕಳು. ಕೊನೆಯವರಾದ ಕೃಷ್ಣಪ್ಪ ನಮ್ಮಮ್ಮನ ತಂದೆ. ಸ್ವಾರಸ್ಯವೆಂದರೆ ಮೊದಲಿಗೆ ಕೃಷ್ಣಪ್ಪನೆಂದೇ ನಾಮಕರಣವಾಗಿದ್ದ ಮಗು ತುಂಬ ಬೆಳ್ಳಗೆ ಕೆಂಪುಕೆಂಪಾಗಿದ್ದರೆ, ಮತ್ತೆ ಬಂದ ತಮ್ಮ ಕೃಷ್ಣನಂತೆ ಶ್ಯಾಮಲ ವರ್ಣ ಹೊಂದಿದ್ದರು. ಹಾಗಾಗಿ ಅವರ ಹೆಸರುಗಳನ್ನು ಬದಲಾಯಿಸಿ ಅಣ್ಣ ಕಣ್ಣಪ್ಪನಾದರೆ ತಮ್ಮ ಕೃಷ್ಣಪ್ಪನಾದರು. ಈ ಏಳು ಗಂಡು ಮಕ್ಕಳಲ್ಲಿ ಮೂವರು ಮುಂದೆ ಕ್ರಿಸ್ತಾನುಯಾಯಿಗಳಾಗಿ ಪರಿವರ್ತಿತರಾದರು . ಅಜ್ಜ ಕಣ್ಣಪ್ಪನವರ ಬಗ್ಗೆ ಹೇಳುವಾಗ ಅವರು ಹುಟ್ಟಿ ಬೆಳೆದ ಮನೆ ಹಾಗೂ ಅವರ ಈ ಎಲ್ಲ ಸೋದರರ ಬಗೆಗೂ ಸ್ಥೂಲ ಪರಿಚಯ ಅಗತ್ಯ ಅನಿಸುತ್ತದೆ. ಬೆಂದೂರ್ ಚರ್ಚ್‍ಗೆ ತಾಗಿಕೊಂಡಿರುವ ವಿಶಾಲ ಹಿತ್ತಿಲ ಮನೆ ‘ಸೀಗೆಬಲ್ಲೆ ಹೌಸ್’ ಅವರ ಮನೆ.
ಸೀಗೆಯ ಬಲ್ಲೆಗಳೂ, ಮಾವು, ಹಲಸು, ಚಕ್ಕೋತ, ಚಿಕ್ಕು, ಸೀತಾಫಲ ಮುಂತಾದ ಹಣ್ಣಿನ ಮರಗಳೂ ಇದ್ದ ತಂಪಿನ ತಾಣವದು. ಮಕ್ಕಳು ಬೆಳೆದು, ಕೂಡುಕುಟುಂಬ ವಿಘಟಿತವಾಗಿ ಹೊಸ ಪೀಳಿಗೆಯು ರೂಪುಗೊಂಡಂತೆ, “ಬೆಲ್ಯೆಪರ” ಅರ್ಥಾತ್, “ದೊಡ್ಡಮನೆ” ಎಂದೇ ಕರೆಸಿಕೊಂಡಿದ್ದ ಆ ಮನೆಯಿದ್ದ ಸ್ಥಳದಲ್ಲಿ, ಈಗ ಹಲವು ಮನೆಗಳು ಎದ್ದು ನಿಂತಿವೆ. ಕಣ್ಣಪ್ಪ ಅವರ ಹಿರಿಯ ಅಣ್ಣ ಬಸಪ್ಪ ಪದವೀಧರರಾಗಿ ಆಹಾರ ಸರಬರಾಜು ಇಲಾಖೆಯಲ್ಲಿ ಸರಕಾರೀ ನೌಕರಿಯಲ್ಲಿದ್ದರು. ತಮ್ಮ ತಂದೆಯ ಬಳಿಕ ಉಚ್ಚಿಲ ಶಾಲೆಗಾಗಿ ತನುಮನದಿಂದ ದುಡಿದ ಅವರಿಗೆ ಮಕ್ಕಳಿರಲಿಲ್ಲ. ಎರಡನೆಯವರು ಅಣ್ಣ ಗುಡ್ಡಪ್ಪ. ಮನೆಪಕ್ಕದ ಬೆಂದೂರ್ ಚರ್ಚ್ ಹಾಗೂ ಅಲೋಶಿಯಸ್ ಸ್ಕೂಲ್ ಮತ್ತು ಚ್ಯಾಪಲ್ ಈ ಮಕ್ಕಳ ಮೇಲೆ ಬೀರಿದ ಪ್ರಭಾವ ಅಪಾರ. ಅಣ್ಣ ಗುಡ್ಡಪ್ಪ ಕ್ರೈಸ್ತ ಮತದಿಂದ ಪ್ರಭಾವಿತರಾಗಿ ಮತಾಂತರಗೊಂಡು ಕ್ರೈಸ್ತರಾಗಿ, ಮುಂದೆ ಪಾದ್ರಿಯಾಗಿ ಜೆಪ್ಪು ಸೆಮಿನರಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ಅಲ್ಲೇ ಕ್ರಿಸ್ತೈಕ್ಯರಾದರು.
ಮೂರನೆಯವರಾದ ಪರಮೇಶ್ವರರು ಎಕ್ಸೈಸ್ ಇನ್‍ಸ್ಪೆಕ್ಟರ್ ಆಗಿ ಬೆಂದೂರ್ ವೆಲ್ ಬಳಿಯ ತಮ್ಮ ನಿವಾಸ “ತುಳಸೀ ವಿಲಾಸ”ದಲ್ಲಿ ಬಹಳ ವೈಭವದಿಂದ ಬಾಳಿದವರು. ಕುದುರೆ ಸಾರೋಟಿನಲ್ಲಿ ಬಿಚ್ಚುಗತ್ತಿ ಭಟರೊಡನೆ ಕಂದಾಯ ವಸೂಲಿಗೆ ಹೋಗುತ್ತಿದ್ದ ಅವರ ವೈಭವದ ದಿನಗಳ ಬಗ್ಗೆ ನಮ್ಮ ಹಿರಿಯರಿಂದ ಕೇಳಿದ್ದೇವೆ. ಮೆಡಿಕಲ್, ಇಂಜಿನಿಯರಿಂಗ್, ವಕೀಲಿ ಕಲಿಯುತ್ತಿದ್ದ ಮೇಧಾವಿ ಗಂಡುಮಕ್ಕಳು, ಸ್ನಾತಕೋತ್ತರ ಪದವೀಧರರಾದ ಹೆಣ್ಣುಮಕ್ಕಳು. ಈ ಮಕ್ಕಳ ಬಗ್ಗೆ, `ಬಾರ್ನ್ ವಿದ್ ಅ ಸಿಲ್ವರ್ ಸ್ಪೂನ್’ ಎಂದು ಜನರು ಆಡಿಕೊಳ್ಳುತ್ತಿದ್ದಂತಹ ಸಿರಿ ಸಂಪತ್ತು ನೆಲಸಿದ ಮನೆ! ಅದೆಲ್ಲವೂ ನಶಿಸಿ ಹೋಗುವಂತೆ ಒಂದರ ಹಿಂದೊಂದು ಸಂಭವಿಸಿದ ಮೇಧಾವಿ ಮಕ್ಕಳ ಆಕಸ್ಮಿಕ ಮರಣಗಳು ಅವರಲ್ಲಿ ವೈರಾಗ್ಯವನ್ನು ತಂದಿಟ್ಟು, ಹೆಚ್ಚಿನ ಸಮಯವನ್ನು ಅವರು ಇಗರ್ಜಿಯಲ್ಲಿ ಪ್ರಾರ್ಥನೆಯಲ್ಲಿ ಕಳೆಯಲಾರಂಭಿಸಿದರು, ಕಡೆಗೆ ಮತಾಂತರಗೊಂಡು ಕ್ರೈಸ್ತರಾದರು. ಆದರೆ ನಿತ್ಯವೂ ನಿಷ್ಠೆಯಿಂದ ತುಳಸೀಪೂಜೆ ಮಾಡುತ್ತಿದ್ದ ತಮ್ಮ ಪತ್ನಿ ತುಳಸಿಯನ್ನು ಮಾತ್ರ ತಮ್ಮ ಹಾದಿಯಲ್ಲಿ ಒಯ್ಯುವಲ್ಲಿ ಅವರು ಸಫಲರಾಗಲಿಲ್ಲ. ತುಳಸೀ ವಿಲಾಸವೂ, ವಿದ್ಯಾಕಾಂಕ್ಷಿಗಳಾಗಿ ನಮ್ಮೂರು ಉಚ್ಚಿಲದಿಂದ ಬಂದು ಆಶ್ರಯ ಪಡೆದ ಜನರಿಂದ “ತುಳಸೀ ವಿಲಾಸ”ವೂ ತುಂಬಿ ತುಳುಕುತ್ತಿತ್ತು.
ಒಟ್ಟು ಇಪ್ಪತ್ತೈದು ಜನರಿದ್ದ ಮನೆಯಲ್ಲಿ ಮನೆಯೊಡತಿ ತುಳಸಿ, ಎಲ್ಲ ಇಪ್ಪತ್ತೈದು ಬಟ್ಟಲುಗಳಿಗೆ ಒಂದೇ ಪ್ರಮಾಣದಲ್ಲಿ ಬಡಿಸುತ್ತಿದ್ದ ಕೌತುಕವನ್ನು ಅಲ್ಲೇ ನೆಲಸಿದ್ದ ನಮ್ಮಮ್ಮ, ನನ್ನ ಚಿಕ್ಕಪ್ಪ ಬಣ್ಣಿಸುವುದನ್ನು ಕೇಳಿದ್ದೇವೆ. ಮನೆಯೊಡತಿ ನಮ್ಮ ತಂದೆಯ ಸೋದರತ್ತೆಯಾದ್ದರಿಂದ ನಮ್ಮ ಚಿಕ್ಕಪ್ಪನೂ ವಿದ್ಯೆಗಾಗಿ ಅಲ್ಲಿದ್ದರು. ಶೈಶವದಲ್ಲೇ ತಂದೆಯನ್ನು ಕಳಕೊಂಡ ನಮ್ಮಮ್ಮ, ಮೊದಲ ಆರು ವರ್ಷ “ಸೀಗೆಬಲ್ಲೆ ಹೌಸ್”ನ ಸೋದರತ್ತೆ ಮನೆಯಲ್ಲಿ ಕಳೆದ ಬಳಿಕ, ಮುಂದಿನ ಆರು ವರ್ಷ “ತುಳಸೀ ವಿಲಾಸ”ದಲ್ಲೂ, ನಂತರದ ಆರು ವರ್ಷ “ಮಾಧವ ವಿಲಾಸ”ದ ಸಣ್ಣ ಸೋದರತ್ತೆಯ ಮನೆಯಲ್ಲೂ ಕಳೆದರು. ನಮ್ಮ ಸಣ್ಣ ಚಿಕ್ಕಪ್ಪ ಮತ್ತು ಸೋದರತ್ತೆ ಸೈಂಟ್ ಆಗ್ನಿಸ್ ಶಾಲೆಯ ಎದುರುಗಡೆ ಕಲೆಕ್ಟರ್ ಬಂಗ್ಲೆಯತ್ತ ಹೋಗುವ ದಾರಿಯಲ್ಲಿನ ತಮ್ಮ ದೊಡ್ಡಮ್ಮನ ತುಂಬಿದ ಮನೆ, “ಚಂಪಕ ವಿಲಾಸ”ದಲ್ಲಿ ವಿದ್ಯೆಗಾಗಿ ಆಶ್ರಯ ಪಡೆದಿದ್ದರು. ಇಂದು “ಚಂಪಕ ವಿಲಾಸ”ವೂ ಅಳಿದು ಇತಿಹಾಸ ಸೇರಿದೆ. “ತುಳಸೀ ವಿಲಾಸ”ದ ಅಳಿದುಳಿದ ಮಕ್ಕಳಲ್ಲಿ ಅಪ್ರತಿಮ ಮೇಧಾವಿ ಇಂಜಿನಿಯರ್ ಆಗಿದ್ದ ನಮ್ಮ ಎಂಜಿನಿಯರ್ ಅಂಕ್‍ಲ್ ನಾರಾಯಣ ಅಂಕ್‍ಲ್ ತಮ್ಮ ಕ್ಷೇತ್ರದಲ್ಲಿ ಹೆಸರಾದವರು. ಇಂಜಿನಿಯರಿಂಗ್‍ನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದ ಪ್ರತಿಭಾವಂತರು.
ನೇತ್ರಾವತಿ ನದಿ ಸೇತುವೆ ನಿರ್ಮಾಣದಲ್ಲಿ ಅಡಚಣೆ ಬಂದು, ಸೇತುವೆ ನಿಲ್ಲದಾಗ, ಅಸೌಖ್ಯದಿಂದಿದ್ದ ಅವರನ್ನು ಕರೆದೊಯ್ದು ಅವರ ಮಾರ್ಗದರ್ಶನ ಪಡೆಯಲಾಗಿತ್ತು; ಮತ್ತು ಸೇತುವೆ ನಿರ್ಮಾಣ ಸಾಧ್ಯವಾಯ್ತು! ಹ್ಯಾಟು ಬೂಟು ಧರಿಸಿ, ವಾಕಿಂಗ್ ಸ್ಟಿಕ್ ಹಿಡಿದು ಬರುತ್ತಿದ್ದ ಅವರು ನಮಗೆ ಮಕ್ಕಳಿಗೆ “ಹ್ಯಾಟು, ಬೂಟು ಮಾಮ”ನಾಗಿದ್ದರು. ಆ ಕಾಲದಲ್ಲಿ ಮಂಗಳೂರಿನಲ್ಲಿ ಪ್ರಥಮ ಮೋಟರ್ ಬೈಕ್ ಹೊಂದಿದ್ದವರು. ಕನ್ನಂಬಾಡಿ ಕಟ್ಟೆಯ ನಿರ್ಮಾಣದಲ್ಲಿ ಸರ್. ವಿಶ್ವೇಶ್ವರಯ್ಯ ಅವರ ಸಹವರ್ತಿಯಾಗಿದ್ದವರು ಎಂದರೆ ಅವರ ಸಾಧನೆಯೇನೆಂದು ತಿಳಿಯುವುದು. ನನ್ನ ತಂಗಿ ಒಮ್ಮೆ ತನಗೆ ಉಪಪಠ್ಯವಾಗಿದ್ದ ‘ಸೈಲಾಸ್ ಮಾರ್ನರ್’ ಕೃತಿಯ ಸಾರಸಂಗ್ರಹಕ್ಕಾಗಿ ಕೇಳಿದಾಗ, ಪುಸ್ತಕದ ಮೇಲೆ ಐದು ನಿಮಿಷ ಕಣ್ಣಾಡಿಸಿ, ಬಳಿಕ ನೇರವಾಗಿ ಡಿಕ್ಟೇಟ್ ಮಾಡುತ್ತಾ ಹೋದವರು. ಅವರ ಸೋದರಿ, ನಮ್ಮ ಆಂಟಿ ಲಕ್ಷ್ಮಿ ಮದರಾಸ್ ಯೂನಿವರ್ಸಿಟಿಯಿಂದ ಇಂಗ್ಲಿಷ್ ಎಂ.ಎ. ಯಲ್ಲಿ ಗೋಲ್ಡ್ ಮೆಡ್‍ಲ್ ಪಡೆದವರು. ಇನ್ನೋರ್ವ ಸೋದರಿ ಆಂಟಿ ಯಶೋದಾ ಸೈಂಟ್ ಆಗ್ನಿಸ್ ಕಾಲೇಜಿನಲ್ಲಿ ಫ್ರೆಂಚ್ ಲೆಕ್ಚರರ್ ಆಗಿದ್ದರು. ಲೈಟ್ ಹೌಸ್ ಹಿಲ್ ಬುಡದಲ್ಲಿ ಜ್ಯೋತಿ ಸರ್ಕ್‍ಲ್ ಮೇಲಿನ ಮಹಿಳಾ ಸಮಾಜದಲ್ಲಿ ಶೀ ವಾಸ್ ಅ ಪ್ರಾಮಿನೆಂಟ್ ಫಿಗರ್! ನಮಗೆ ಬುಧ್ಧಿ ತಿಳಿವ ಕಾಲಕ್ಕೆ “ತುಳಸೀ ವಿಲಾಸ”ದಲ್ಲಿ ವಾಸಿಸುತ್ತಿದ್ದವರು, ಆಂಟಿ ಯಶೋದಾ ಮತ್ತು ಪಂಚ ಪಾಂಡವರೆಂದು ಕರೆಸಿಕೊಳ್ಳುತ್ತಿದ್ದ ಅವರ ಐವರು ಗಂಡು ಮಕ್ಕಳು. ಅವರಾರೂ ಇಂದು ಬದುಕಿ ಉಳಿದಿಲ್ಲ.
‘ತುಳಸೀ ವಿಲಾಸ’ದ ಪಕ್ಕದಲ್ಲೇ ಅಜ್ಜ ಕಣ್ಣಪ್ಪ ಅವರ ಇನ್ನೋರ್ವ ಸೋದರ ವೀರಪ್ಪ ಅವರ ವಿಶಾಲ ಹಿತ್ತಿಲ ನಿವಾಸ `ಲೇನ್ ಕಾಟೇಜ್.’ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಅವರು, ನೀಲೇಶ್ವರ ದಾಮೋದರ ತಂತ್ರಿ ಅವರಿಂದ ಊರ ಶಾಲೆಗಾಗಿ ನಿವೇಶನವನ್ನು ಕೋರಿ ದಾನವಾಗಿ ಪಡೆದವರು. ವೀರಪ್ಪ ಅವರ ಹತ್ತು ಮಕ್ಕಳ ದೊಡ್ಡ ಕುಟುಂಬ ನೆಲಸಿದ್ದ ಮನೆ ‘ಲೇನ್ ಕಾಟೇಜ್’. ಅದರ ಪಕ್ಕದಲ್ಲೇ ಓಣಿಯಾಚೆ ಇಳಿಜಾರಿನಲ್ಲಿತ್ತು, ನಮ್ಮ ಎಂಜಿನಿಯರ್ ಅಂಕ್‍ಲ್ ನಿವಾಸ `ಪುಷ್ಪ ವಿಹಾರ’. ‘ತುಳಸೀ ವಿಲಾಸ’ದಂತೆಯೇ ಪುಷ್ಪ ವಿಹಾರವೂ ಇಂದು ಅಸ್ತಿತ್ವದಲ್ಲಿರದೆ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ. ಕಣ್ಣಪ್ಪ ಅವರ ಹಿರಿಯ ಸೋದರಿ ದೇವಮ್ಮ ‘ಸೀಗೆ ಬಲ್ಲೆ ಹೌಸ್’ನ ಒಡತಿಯಾಗಿದ್ದರೆ, ಕಿರಿಯ ಸೋದರಿ ಪೊನ್ನಮ್ಮ ಅವರ ಮನೆ `ಮಾಧವ ವಿಲಾಸ’ ಬೆಂದೂರ್‍ನಲ್ಲಿ ಈಗಿನ ಎಸ್.ಸಿ.ಎಸ್. ಹಾಸ್ಪಿಟಲ್ ಪಕ್ಕದಲ್ಲಿದ್ದು, ಊರಿನಿಂದ ಬಂದ ವಿದ್ಯಾಕಾಂಕ್ಷಿಗಳಿಗೆ ಅದೂ ಆಶ್ರಯ ತಾಣವಾಗಿತ್ತು. ಇಂದು ಅದೂ ಅಳಿದು ಹೋಗಿ ನೆನಪು ಮಾತ್ರವಾಗಿದೆ.
“ರಾವ್ ಬಹದ್ದೂರ್” ಬಿರುದಾಂಕಿತ ಅಜ್ಜ ರಾಮಪ್ಪ ಅವರು, ಅಲೋಶಿಯಸ್ ಕಣ್ಣಪ್ಪ ಅವರ ಮತ್ತೋರ್ವ ಸೋದರ. ಮದರಾಸಿನ ಸೆಶನ್ಸ್ ಕೋರ್ಟ್ ಜಜ್ ಆಗಿದ್ದು, ನಮ್ಮೂರ ಶಾಲೆ ಹಾಗೂ ಸಮಾಜದ ಅಭಿವೃಧ್ಧಿಗೆ ಮಹತ್ತರ ಕೊಡುಗೆ ನೀಡಿದವರು. ಸೇಲಂ, ಏರ್‍ಕಾಡ್, ಮದರಾಸ್‍ಗಳಲ್ಲಿ ವೃತ್ತಿನಿರತರಾಗಿದ್ದಾಗ ಅಲ್ಲಿ ಫಲಪುಷ್ಪ ಭರಿತ ವಿಶಾಲ ಎಸ್ಟೇಟ್‍ಗಳನ್ನು ಹೊಂದಿದ್ದವರು. ಸಮಾಜಸೇವಾನಿರತರು. ತಮ್ಮ ಸೇವೆಗೆ ಮನ್ನಣೆಯಾಗಿ ಅಂದಿನ ವೈಸರಾಯ್ ಅವರಿಂದ “ರಾವ್ ಬಹದ್ದೂರ್” ಬಿರುದಾಂಕಿತರಾದವರು. ಅವರ ಬೆನ್ನಿಗೆ ಬಂದವರೇ, ಅಜ್ಜ ಕಣ್ಣಪ್ಪ.
ನಾವು ಮಕ್ಕಳ ಪಾಲಿಗೆ ಕಣ್ಣಪ್ಪ “ಕನ್ನಾಟಿ ಅಜ್ಜ” ಆಗಿದ್ದರು. ನಮ್ಮ ಭಾಷೆಯಲ್ಲಿ “ಕನ್ನಾಟಿ” ಎಂದರೆ “ಕನ್ನಡಕ”. ಅಜ್ಜ ದಪ್ಪ ಗಾಜಿನ ಕನ್ನಡಕ ಧರಿಸುತ್ತಿದ್ದುದರಿಂದ ಅವರು ನಮ್ಮ ಪಾಲಿಗೆ ಕನ್ನಾಟಿ ಅಜ್ಜ. ಅಮ್ಮನ ಉಳಿದ ದೊಡ್ಡಪ್ಪಂದಿರೆಲ್ಲ ಅಳಿದು, ಪ್ರಿಯರಾದ ಜಜ್ ದೊಡ್ಡಪ್ಪ ದೂರ ಮದರಾಸಿನಲ್ಲಿದ್ದುದರಿಂದ ತನ್ನ ತಂದೆಯ ಕಡೆಯಿಂದ ಕನ್ನಾಟಿ ದೊಡ್ಡಪ್ಪನೇ ಅಮ್ಮನಿಗೆ ಇಷ್ಟ ಬಂಧುವಾಗಿದ್ದರು. ಜ್ಯೋತಿ ಲೇನ್‍ನಲ್ಲಿ ಈಗಿನ ಪಿ.ಎಸ್.ಆರ್.ಗೆ ಎದುರಾಗಿರುವ ಚಿಕ್ಕ ಓಣಿಯೊಳಗೆ ಅವರ ನಿವಾಸ, ನಮ್ಮ ಪ್ರೀತಿಯ “ಆಲ್ಡೇಲ್”. ಸೈಂಟ್ ಅಲೋಶಿಯಸ್ ಕಾಲೇಜ್‍ನಲ್ಲಿ ಮೇಧಾವಿ ವಿದ್ಯಾರ್ಥಿಯಾಗಿದ್ದ ತರುಣ ಕಣ್ಣಪ್ಪ, ಬಿ.ಎ. ಪದವಿ ಪರೀಕ್ಷೆಯಲ್ಲಿ ಲ್ಯಾಟಿನ್ ಮತ್ತು ಗಣಿತದಲ್ಲಿ ರ್ಯಾಂಕ್ ಗಳಿಸಿದವರು. ಅಲೋಶಿಯಸ್ ಕಾಲೇಜಿನ ಪ್ರಥಮ ರ್ಯಾಂಕ್ ಹೋಲ್ಡರ್, ಅವರು. ಅಲ್ಲೇ “ಇಂಗ್ಲಿಷ್” ಪ್ರಾಧ್ಯಾಪಕರಾಗಿ ಸೇರಿಕೊಂಡು, ವೃತ್ತಿ ನಿರತರಾದ ಸ್ವಲ್ಪ ಸಮಯದಲ್ಲೇ ಕ್ರೈಸ್ತ ಧರ್ಮವನ್ನು ಸ್ವೀಕರಿಸಿ ಕ್ರೈಸ್ತರಾದರು. ಮನೆಯ ಪಕ್ಕದಲ್ಲೇ ಇದ್ದ ಬೆಂದೂರ್ ಚರ್ಚ್ ಮತ್ತು ಕಾಲೇಜ್‍ನಲ್ಲಿ ಐಚ್ಛಿಕ ಪಠ್ಯವಾಗಿದ್ದ ಬೈಬ್‍ಲ್ ಮತ್ತು ಲ್ಯಾಟಿನ್ ಅವರ ಮೇಲೆ ಬೀರಿದ ಪ್ರಭಾವ ಅಪಾರ. ರ್ಯಾಂಕ್ ವಿಜೇತ ಹಿಂದೂ ಯುವಕ ಹೀಗೆ ಮತಾಂತರವಾದುದನ್ನು ಸಹಿಸದೆ ನಗರದಲ್ಲಿ ಸಣ್ಣ ಮಟ್ಟಿನ ಮತೀಯ ಗಲಭೆ ಎದ್ದಿತೆಂದು ಕೇಳಿದ್ದೇವೆ. ಅದೇ ಕಾರಣದಿಂದ ಅವರು ನಗರದಿಂದ ಹೊರಗೆ ಮೂರು ತಿಂಗಳ ಕಾಲ ಬೆಳಗಾವಿಯಲ್ಲಿ ಅಜ್ಞಾತವಾಸದಲ್ಲಿ ಇರಬೇಕಾಗಿ ಬಂದಿತಂತೆ. ಮುಂದೆ ಮದರಾಸ್‍ನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ಎಮ್.ಎ., ಎಲ್.ಟಿ. ಪದವಿ ಗಳಿಸಿ, ಮದರಾಸ್ ಪ್ರಾಂತ್ಯದ ವಿವಿಧ ಕಾಲೇಜ್‍ಗಳಲ್ಲಿ ಪ್ರಾಧ್ಯಾಪಕರಾಗಿ ವೃತ್ತಿನಿರತರಾದರು. ಕೊನೆಗೆ ಮಂಗಳೂರಿನ ಸರಕಾರೀ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು. ನಾವು ಮಕ್ಕಳು ಅವರ ಸಂಪರ್ಕಕ್ಕೆ ಬರುವ ವೇಳೆಗೆ ಅವರು ಸೌತ್ ಕೆನರಾ ಜಿಲ್ಲಾ ವಿದ್ಯಾಧಿಕಾರಿ – ಡಿ.ಇ.ಒ. ಆಗಿ ಖ್ಯಾತರಾಗಿದ್ದರು.
ಮದುವೆಯಾಗಿ ಗೃಹಸ್ಥನಾಗಬೇಕೆಂಬ ತನ್ನಮ್ಮನ ಒತ್ತಾಯಕ್ಕೆ ಮಣಿದು ಕಣ್ಣಪ್ಪನವರು ಕ್ರೈಸ್ತ ಹುಡುಗಿಯನ್ನೇ ಮದುವೆಯಾದರು. ನಾಲ್ಕು ಹೆಣ್ಣು, ಎರಡು ಗಂಡು ಮಕ್ಕಳ ಸುಖೀ ಸಂಸಾರ, ಅವರದು. ನಾಲ್ವರು ಹೆಣ್ಮಕ್ಕಳೂ ವಿದ್ಯಾರತ್ನಗಳಂತಿದ್ದರೆ ಗಂಡು ಮಕ್ಕಳು ವಿದ್ಯೆಯಲ್ಲಿ ಪ್ರಾವೀಣ್ಯ ಪಡೆಯದ ಕೊರಗು ಅವರಿಗಿತ್ತು. ಹಿರಿಯ ಮಗ ಆರ್ಥರ್ ಫಿಸಿಕಲ್ ಟ್ರೈನಿಂಗ್ ಇನಸ್ಟ್ರಕ್ಟರ್ ಆಗಿದ್ದರೆ, ಕಿರಿಯ ಮಗ ಎರಿಕ್ ಬೊಂಬಾಯಿಯ ಬೆಸ್ಟ್ ಕಂಪೆನಿಯಲ್ಲಿ ನೌಕರಿಯಲ್ಲಿದ್ದರು. ಇಬ್ಬರೂ ಜೀವನ ಸಂಧ್ಯೆಗೆ ಮುನ್ನವೇ ನಮೆಲ್ಲರನ್ನೂ ಅಗಲಿದ್ದಾರೆ. ಹಿರಿಯ ಮಗಳು ಗ್ಲಾಡೀಸ್ ‘ನನ್’ ಆಗಿ ‘ಸಿಸ್ಟರ್ ಆಂಟೊನೆಟ್’ ಎಂದು ಹೆಸರಾಂತು, ಮದರಾಸಿನ ಸೈಂಟ್ ಮೇರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದರು. ನಿವೃತ್ತಿಯ ಬಳಿಕ ಅಲ್ಲೇ ಬಡವರ, ಅನಾಥರ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ವೃಧ್ಧಾಪ್ಯದಲ್ಲಿ ಅಲ್ಲೇ ಕ್ರಿಸ್ತೈಕ್ಯರಾದರು. ಅವರ ತಂಗಿ ಆಂಟ್ ಐರಿನ್ ಕೂಡಾ ‘ನನ್’ ಆಗಿ, “ಮದರ್ ಬೀಟ್ರಿಸ್”ಆಗಿ, ಲೇಡಿಹಿಲ್ ಸ್ಕೂಲ್‍ನಲ್ಲಿ ‘ಮದರ್ ಸುಪೀರಿಯರ್’ ಆಗಿದ್ದು, ನಗರದ ವಿದ್ಯಾಕ್ಷೇತ್ರದಲ್ಲಿ ಸುಪರಿಚಿತರಾಗಿದ್ದವರು. ಸೌಮ್ಯ ಸ್ವಭಾವ, ಮೃದು ಹಾಸದ ಸೌಜನ್ಯಶೀಲೆ ಮದರ್ ಬೀಟ್ರಿಸ್ ಸೈಂಟ್ ಎಂದೇ ಪರಿಗಣಿಸಲ್ಪಟ್ಟಿದ್ದರು. ಅವರಿಗೆ ಮರಣಾನಂತರ ಸೈಂಟ್‍ಹುಡ್ ಪ್ರದಾನಿಸಲ್ಪಡಬಹುದು ಎಂಬ ನಿರೀಕ್ಷೆಯೂ ಎಲ್ಲರದಾಗಿತ್ತು. ಹಾಸಿಗೆ ಹಿಡಿದಿದ್ದ ಕೊನೆಯ ದಿನಗಳಲ್ಲೂ ಅವರ ಮುಖದ ಸೌಮ್ಯ ಸಿಹಿ ನಗು, ದಿವ್ಯ ತೇಜಸ್ಸು ಮಾಸಿರಲಿಲ್ಲ. ಕ್ರಿಸ್ಮಸ್‍ಗೆ ಸ್ವಲ್ಪ ಮುನ್ನ ಎರಡು ಸಾವಿರದ ಹತ್ತು ನವೆಂಬರ್ ಹತ್ತರಂದು ಅವರು ಬಲು ಶಾಂತರಾಗಿ ಕ್ರಿಸ್ತೈಕ್ಯರಾದರು. ಮೂರನೇ ಮಗಳು ಲೀನಾ ಅಲೋಶಿಯಸ್, ನಗರದ ಗವರ್ನ್‍ಮೆಂಟ್ ಕಾಲೇಜ್‍ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಸೇವೆ ಸಲಿಸಿ ನಿವೃತ್ತರಾದವರು. ಅವರ ತಂಗಿ ಫ್ಲೇವಿ ಅಲೋಶಿಯಸ್ ದೆಹಲಿಯ ‘ಸೈಂಟ್ ಆಕ್ಸಿಲಿಯನ್ ಸ್ಕೂಲ್’ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದು ನಿವೃತ್ತರಾಗಿ, ನಗರಕ್ಕೆ ಮರಳಿ ಅಕ್ಕನಿಗೆ ಜೊತೆಯಾದವರು. ಇಂಗ್ಲಿಷ್ ಸಾಹಿತ್ಯದ ಎನ್ಸೈಕ್ಲೊಪೀಡಿಯಾದಂತೆ ಇದ್ದ ಆಂಟ್ ಲೀನಾ ಹಾಗೂ ಅವರಿಗೆ ತಕ್ಕ ಜೊತೆಯಾದ ಆಂಟ್ ಫ್ಲೇವಿ!
ಇಂಗ್ಲಿಷ್ ಸಾಹಿತ್ಯದಲ್ಲಿ ನನ್ನ ಅಭಿರುಚಿ ಹೆಚ್ಚಲು ಮುಖ್ಯ ಕಾರಣರು ಆಲ್ಡೇಲ್‍ನ ಈ ಪ್ರಾತಃಸ್ಮರಣೀಯ ಬಂಧುಗಳು. ಪಿ.ಯು.ಸಿ.ಯಲ್ಲಿ ನಮಗೆ ಉಪಪಠ್ಯವಾಗಿದ್ದ ‘ಡೇವಿಡ್ ಕಾಪರ್‍ಫೀಲ್ಡ್’ಹಾಗೂ ‘ಒಥೆಲೋ’ಕೃತಿಗಳ ಅಧ್ಯಯನದಲ್ಲಿ ನೋಟ್ಸ್ ಮಾಡಿಕೊಳ್ಳಲೆಂದು ನಾನು ಅಜ್ಜ ಕಣ್ಣಪ್ಪ ಅವರ ಸಹಾಯ ಪಡೆಯಲು ಹೋಗಿದ್ದೆ. ಗ್ಲೂಕೋಮಾದಿಂದ ಅಜ್ಜನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಆದರೂ ಅವರು ನನಗೆ ಪಾಠ ಮಾಡಿ, ನೋಟ್ಸ್ ಬರೆದು ಕೊಡುವಂತೆ ಮಗಳು ಲೀನಾಗೆ ಹೇಳಿದರು. ಆಂಟಿಯರು ಲೀನಾ, ಫ್ಲೇವಿ ಬರೆದಿತ್ತ ಆ ನೋಟ್ಸ್ ನನ್ನನ್ನು ಪ್ರಭಾವಿಸಿ ಇಂಗ್ಲಿಷ್ ವಿಶ್ವಸಾಹಿತ್ಯದ ಬಗ್ಗೆ ನನ್ನಲ್ಲಿ ಅಭಿರುಚಿ ಹೆಚ್ಚಿಕೊಳ್ಳುವಂತೆ ಮಾಡಿತು. ಕಾಲೇಜ್‍ನಲ್ಲಿ ತಮಗೆ ‘ಡೇವಿಡ್ ಕಾಪರ್‍ಫೀಲ್ಡ್’ ಕೃತಿಯನ್ನು ಪಾಠ ಮಾಡಿದ ಗುರುಗಳು ಕಣ್ಣಪ್ಪ ಅಲೋಶಿಯಸ್ ಗೆ, ಶಿಷ್ಯ ಎ. ಸುಬ್ಬಯ್ಯ ಅವರು ಸಲ್ಲಿಸಿದ ಪ್ರೀತಿಯ ಗುರುದಕ್ಷಿಣೆ, ಅವರು ರಚಿಸಿದ “ಡೇವಿಡ್ ಕಾಪರ್‍ಫೀಲ್ಡ್’ನ ಕನ್ನಡಾನುವಾದ. ತಮ್ಮ ಗುರುಗಳಿಗೆ ಅವರು ಸಮರ್ಪಿಸಿದ ಈ ಕೃತಿಯ ಪ್ರತಿಯನ್ನು ಅಜ್ಜ ನಮ್ಮಣ್ಣನಿಗೆ ಕೊಡುಗೆಯಾಗಿ ನೀಡಿದ್ದು, ಅದು ನಮ್ಮ ಪುಸ್ತಕ ಸಂಪತ್ತಿನಲ್ಲಿ ಒಂದಾಗಿದೆ. ವರ್ಷಗಳ ಬಳಿಕ ನಾನು ಮಾರ್ಗರೆಟ್ ಮಿಶೆಲ್‍ಳ ಜಗದ್ವಿಖ್ಯಾತ ವಿಶ್ವಸಾಹಿತ್ಯ ಕೃತಿ `ಗಾನ್ ವಿತ್ ದ ವಿಂಡ್’ನ ಆನುವಾದದಲ್ಲಿ ತೊಡಗಿದ ಸಮಯ. ಕೃತಿಯಲ್ಲಿ ಯುಧ್ಧಭೂಮಿಯಿಂದ ಟಾರಾಗೆ ಮರಳುವ ಮಾರ್ಗಮಧ್ಯೆ ಹೊತ್ತಿ ಉರಿವ ನಗರಿಯಲ್ಲಿ ರೆಟ್ ಬಟ್ಲರ್ ಸ್ಕಾರ್ಲೆಟ್‍ಳನ್ನು ಪರಿತ್ಯಜಿಸಿ ಯುಧ್ಧಕ್ಕೆ ಹೊರಟು ನಿಂತಾಗ ಉಧ್ಧರಿಸಿದ ವಾಕ್ಯ “ಐ ಕುಡ್ ನಾಟ್ ಲವ್ ದೀ ಡಿಯರ್ ಸೋ ಮಚ್, ಲವ್ಡ್ ಐ ನಾಟ್ ಆನರ್ ಮೋರ್!” (I could not love thee, dear, so much, Loved I not Honour more)
ಇದು ಯಾರು ಯಾರಿಗೆ ಹೇಳಿದ್ದೆಂದು ತಿಳಿಯಲು ಆಂಟಿಗೆ ಪತ್ರ ಬರೆದು ಕೇಳಿದ್ದೆ. ಕೂಡಲೇ ಅದು `To Lucasta, ಗೋಯಿಂಗ್ ಟು ದ ವಾರ್ಸ್’ ಕವನದಲ್ಲಿ ಲಾರ್ಡ್ ರಿಚರ್ಡ್ ಲವ್‍ಲೇಸ್ ತನ್ನ ಲೇಡಿಲವ್ ಲುಕಾಸ್ಟಾಗೆ ಹೇಳಿದ ಮಾತು, ಎಂದು ಆಂಟಿ ಉತ್ತರಿಸಿದ ಪತ್ರ ಈಗಲೂ ನನ್ನ ಅಮೂಲ್ಯ ಪತ್ರ ಸಂಪತ್ತಿನಲ್ಲಿ ಒಂದಾಗಿದೆ. ಮುಂದಿನ ವಿಶ್ವಸಾಹಿತ್ಯ ಕೃತಿಗಳ ನನ್ನೆಲ್ಲ ಅನುವಾದಗಳನ್ನೂ- ಕನ್ನಡ ಓದಲರಿಯದಿದ್ದರೂ- ಪ್ರೀತಿಯಿಂದ ಕೈಗೆತ್ತಿಕೊಂಡು ಹರಸಿದವರು, ಆಂಟಿ ಲೀನಾ, “ಇಂಗ್ಲಿಷ್ ಸಾಹಿತ್ಯದ ಎನ್‍ಸೈಕ್ಲೊಪೀಡಿಯಾ” ಅಂದೆ. ಆದರೆ ತನ್ನ ತಂದೆ ಅಲೋಶಿಯಸ್ ಕಣ್ಣಪ್ಪನವರಂತೇ ಗ್ಲುಕೋಮಾದಿಂದ ಮಂದವಾಗುತ್ತಾ ಬಂದಿದ್ದ ಅವರ ಕಣ್ಣ ದೃಷ್ಟಿ ಕೊನೆಯ ವರ್ಷಗಳಲ್ಲಿ ಸಂಪೂರ್ಣ ನಶಿಸಿ ಹೋದುದು ನನ್ನ ಮನಕ್ಕೆ ತುಂಬ ನೋವಿತ್ತಿತ್ತು. ಇಂಗ್ಲಿಷ್ ವಿದ್ಯಾರ್ಥಿಗಳಿಗೆ, ನನ್ನಂತಹ ಆಸಕ್ತರಿಗೆ ಸಾಹಿತ್ಯದ ಬೆಳಕಾಗಿದ್ದ ಅವರು ಕತ್ತಲಲ್ಲಿ ಉಳಿಯಬೇಕಾದುದು ವಿಧಿ ವಿಪರ್ಯಾಸ ಎನ್ನಬೇಕು.
ಎರಡು ವರ್ಷದ ಹಿಂದೆ ನಮ್ಮನ್ನಗಲಿದ ಪ್ರೊ. ಕೇಶವ್ ಉಚ್ಚಿಲ್ ಅವರೂ ತಮ್ಮ ಈ ಗೌರವಾನ್ವಿತ, ಪ್ರಿಯ ಪ್ರಾಧ್ಯಾಪಕಿಯನ್ನು ಕಾಣಲೆಂದು ಈಗೈದು ವರ್ಷಗಳ ಹಿಂದೆ ನನ್ನೊಡನೆ ಆಲ್ಡೇಲ್‍ಗೆ ಬಂದು ಭೇಟಿಯಾಗಿ ಧನ್ಯರಾಗಿದ್ದರು. ತಮ್ಮ ನಯವಿನಯ, ಸೌಮ್ಯ ಮೆಲುನಗು, ಹಿತಕರ ಸೌಮ್ಯನುಡಿಗಳ ಪಾವನಚರಿತೆ, ನನ್ನ ಆಂಟಿ ಲೀನಾ. ಕಳೆದ ವರ್ಷ ಒಂದು ಬೆಳಗಿನಲ್ಲಿ ಸುಖ ಮರಣವನ್ನಪ್ಪಿದ ಆಂಟ್ ಫ್ಲೇವಿ ಅವರ ಬೆನ್ನಿಗೇ ಕೆಲವೇ ತಿಂಗಳಲ್ಲಿ ಆಂಟ್ ಲೀನಾ ಕೂಡಾ ತಮ್ಮ 94ರ ಪ್ರಾಯದಲ್ಲಿ ನಮ್ಮನ್ನಗಲಿ ಕ್ರಿಸ್ತೈಕ್ಯರಾದರು. ಈ ಎಲ್ಲ ಹಿರಿಯರ ಸೇವೆಗೈದು ಪ್ರೀತಿಯಿಂದ ಅವರನ್ನು ನೋಡಿಕೊಂಡ ಅವರ ಸೋದರ ಸೊಸೆ, ನಮ್ಮ ಪ್ರಿಯ ‘ಗ್ಲಾಡಿ’, ಆರ್ಥರ್ ಅಂಕ್‍ಲ್-ಹಿಲ್ಡಾ ಆಂಟಿಯ ಮಗಳು, ಪದವು ಪಾಂಪೆ ಹೈಸ್ಕೂಲ್‍ನಲ್ಲಿ ಪ್ರಾಂಶುಪಾಲೆಯಾಗಿದ್ದು ಇದೀಗ ನಿವೃತ್ತರಾಗಿ ಇಲ್ಲಿದ್ದಾರೆ. ಸೈಂಟ್ ಅಲೋಶಿಯಸ್ ಕಾಲೇಜ್ ಕಟ್ಟಡ ಹಾಗೂ ಫಾ. ಮುಲ್ಲರ್ಸ್ ಸೇವಾಸ್ಪತ್ರೆಯ ಕಟ್ಟಡಗಳ ಸ್ಥಾಪಕ ಹಾಗೂ ಪೋಷಕರ ಹೆಸರುಗಳ ಯಾದಿಯಲ್ಲಿ ಅಜ್ಜ ಅಲೋಶಿಯಸ್ ಕಣ್ಣಪ್ಪ ಅವರ ಹೆಸರು ಬೆಳಗುತ್ತಿದೆ. ನಮ್ಮೂರ ಶಾಲೆಗಾಗಿ ಸರಕಾರದ ಖಾಯಂ ಮಂಜೂರಾತಿ ದೊರಕಿಸಿಕೊಟ್ಟವರು, ಅಜ್ಜ ಕಣ್ಣಪ್ಪ ಅಲೋಶಿಯಸ್ ಅವರು. ಸಮಾಜಕ್ಕೆ ಸಲ್ಲಿಸಿದ ಸೇವೆಗಾಗಿ ಅಂದಿನ ಪೋಪ್ ಅವರು, ಶೆವೆಲಿಯರ್ ಎಂಬ ಅಭಿದಾನದೊಂದಿಗೆ “ನೈಟ್ ಆಫ್ ಸೈಂಟ್ ಗ್ರೆಗರಿ”ಪದವಿಯನ್ನಿತ್ತು ಅವರನ್ನು ಸನ್ಮಾನಿಸಿದ್ದರು.
ಜಿಲ್ಲಾ ವಿದ್ಯಾಧಿಕಾರಿಯಾಗಿದ್ದ ಅವರು, ಶಿಸ್ತಿನ ಮೂರ್ತಿಯಾಗಿದ್ದು, ಖಾಕಿ ಚಡ್ಡಿ, ಬಿಳಿ ಶರ್ಟ್, ಬಿಳಿ ಸಾಕ್ಸ್, ಬ್ರಿಟಿಶ್ ಹ್ಯಾಟ್ ಧರಿಸುತ್ತಿದ್ದರು. ಫಾದರ್ ಮುಲ್ಲರ್ಸ್ ಸೇವಾಸ್ಪತ್ರೆಯ ಆಡಳಿತ ಸಮಿತಿಯ ಸದಸ್ಯರಾಗಿ, ಮಂಗಳೂರು ಹಾಲು ಮಾರಾಟ ಫೆಡರೇಶನ್‍ನ ಸ್ಥಾಪಕಾಧ್ಯಕ್ಷರಾಗಿ, ಎಂ.ಸಿ.ಸಿ. ಬ್ಯಾಂಕ್‍ನ ನಿರ್ದೇಶಕರಾಗಿ, ಕೆಥೋಲಿಕ್ ಕ್ಲಬ್‍ನ ಆಡಳಿತಗಾರರಾಗಿ, ಹತ್ತು ಹಲವು ಸಂಸ್ಥೆಗಳಲ್ಲಿ ದುಡಿದವರವರು. `ದ ಮ್ಯಾಂಗಲೋರಿಯನ್’ ಇಂಗ್ಲಿಷ್ ದಿನಪತ್ರಿಕೆಯನ್ನು ಆರಂಭಿಸಿದವರು. ನಗರದಲ್ಲಿ ಕಲಿಯುವ ಉಚ್ಚಿಲದ ಬಂಧುಗಳಿಗಾಗಿ ಫಳ್ನೀರ್‍ನ ಹೈಲ್ಯಾಂಡ್ಸ್‍ನಲ್ಲಿ ಹಾಸ್ಟೆಲ್ ಒಂದನ್ನು ಅವರು ಸ್ಥಾಪಿಸಿದ್ದರು. ಅಲ್ಲಿಂದಾಗಿ ಹೋಗುವಾಗಲೆಲ್ಲ ನಾವು ಮಕ್ಕಳು, ಅದನ್ನು ‘ಕನ್ನಾಟಿ ಅಜ್ಜನ ಹಾಸ್ಟೆಲ್’ಅನ್ನುತ್ತಿದ್ದೆವು. ಅಜ್ಜಂದಿರಾದಿಯಾಗಿ ಆ ಹಿರಿಯ ಪರಂಪರೆಯ ನಡೆನುಡಿ, ಆಚಾರ ವಿಚಾರಗಳು ಎಷ್ಟೊಂದು ಉದಾತ್ತವೂ, ಶ್ರೇಷ್ಠವೂ, ಅನುಕರಣೀಯವೂ ಆಗಿದ್ದವು! ಮನೆಯಲ್ಲಾಗಲೀ, ರಸ್ತೆಯಲ್ಲಾಗಲೀ, ಎಲ್ಲಾದರೂ ಸಮಾರಂಭಗಳಲ್ಲಾಗಲೀ ಭೇಟಿಯಾಗಿ ಮಾತನಾಡುತ್ತಿದ್ದ ಅವರ ದನಿಯಲ್ಲಿ ಎಂತಹ ಗಾಂಭೀರ್ಯ, ಘನತೆ, ಗೌರವಾದರ ಇರುತ್ತಿತ್ತು! ಭಾಷೆಯಲ್ಲಿ ಎಂತಹ ಸಮ್ಮೋಹಕ ಶಕ್ತಿಯಿತ್ತು! ಸಚ್ಚಾರಿತ್ರ್ಯ, ಸನ್ನಡತೆಯ ದಾರಿದೀಪಗಳಾದ ಹಿರಿಯ ಪರಂಪರೆಯದು! ದೃಷ್ಟಿ ಮಂದವಾಗಿದ್ದ ಅಜ್ಜನ ಕೊನೆಯ ದಿನಗಳಲ್ಲಿ ಅವರ ಕಣ್ಣು ಹಾಗೂ ಊರುಗೋಲಾಗಿದ್ದವರು, ನಮ್ಮಣ್ಣ ಮೋಹನ್. ಅವರಿಗೆ ಬಂದ ಪತ್ರಗಳನ್ನು ಓದಲೂ, ಉತ್ತರಿಸಲೂ ನೆರವಾಗುತ್ತಿದ್ದ ಅಣ್ಣ, ಹೊರಗೆ ಹೋಗಬೇಕಾದಾಗಲೆಲ್ಲ ಅಜ್ಜನಿಗೆ ಊರುಗೋಲಿನಂತಿದ್ದ. ಗಾಂಧೀಜಿ ಹುತಾತ್ಮರಾದಂದೇ ಹುಟ್ಟಿದ ನಮ್ಮಣ್ಣನನ್ನು ಅಜ್ಜ ತಮಾಷೆಗೆ “ಗಾಂಧಿ”ಎಂದೂ ಕರೆಯುವುದಿತ್ತು. ಅವರ ವೃಧ್ಧಾಪ್ಯದಲ್ಲಿನ ತನ್ನ ಸಹಚರ್ಯದ ಬಗ್ಗೆ ಅಣ್ಣನ ಬಾಯಿಂದಲೇ ಕೇಳುವುದು ಹೆಚ್ಚು ಸಮರ್ಪಕ.
ಸಾವಿರದ ಒಂಬೈನೂರ ಅರ್ವತ್ತೇಳರ ಜುಲೈ ಆರು, ಅವರ ಹುಟ್ಟುಹಬ್ಬದಂದು ವಿಶ್ ಮಾಡಿ ಬ್ಲೆಸ್ಸಿಂಗ್ಸ್ ಪಡೆಯಲೆಂದು ಬಂದ ನಮ್ಮಣ್ಣನೊಡನೆ ಅದೇ ತನ್ನ ಕೊನೆಯ ಹುಟ್ಟುಹಬ್ಬ ಎಂದು ಅಜ್ಜ ಅಂದಾಗ ನೊಂದುಕೊಂಡ ಅಣ್ಣನಿಗೆ, “ಚಿಂತಿಸಬೇಡ, ನಿನ್ನ ಹುಟ್ಟುಹಬ್ಬದ ವರೆಗೆ ಖಂಡಿತ ಇರುವೆ”, ಎಂದು ಭಾಷೆಯಿತ್ತರು, ಅಜ್ಜ. ಅಂತೆಯೇ ಮಾತಿತ್ತಂತೆ ಅಣ್ಣನ ಹುಟ್ಟುಹಬ್ಬದ ವರೆಗೆ ಬದುಕಿ ಉಳಿದರವರು! ಡಿಸೆಂಬರ್ ತಿಂಗಳ ಒಂದಿನ, ಕಿಟಿಕಿಯ ಹೊರಗೆ ನೋಡುತ್ತಾ, ಮಗಳೊಡನೆ, “ನೋಡು, ತಮ್ಮ ಕೃಷ್ಣಪ್ಪ ಅಲ್ಲಿ ನನ್ನನ್ನು ಕರೆಯುತ್ತಿದ್ದಾನೆ”, ಎಂದಿದ್ದರು. ತಮ್ಮ ಪ್ರೀತಿಯ ಆ ಸೋದರ – ನಮ್ಮಜ್ಜನ ಬಗ್ಗೆ – ನಮಗೆ ಇನಿತಾದರೂ ತಿಳಿಯುವಂತಾದುದು ಅಜ್ಜ ಕಣ್ಣಪ್ಪ ಅವರಿಂದಲೇ. ಇಪ್ಪತ್ತೇಳರ ಎಳೆಹರೆಯದಲ್ಲೇ ಅಸಿಸ್ಟೆಂಟ್ ಕಮಿಶನರ್ ಆಗಿ ಭಡ್ತಿ ಹೊಂದಿ, ಆ ಸ್ಥಾನವನ್ನಲಂಕರಿಸುವ ಮುನ್ನವೇ ಹೃದಯಾಘಾತದಿಂದ ಮರಣವನ್ನಪ್ಪಿದ ತನ್ನ ಈ ತಮ್ಮ, ಬದುಕಿದ್ದಿದ್ದರೆ ತಮ್ಮೆಲ್ಲರಿಗಿಂತಲೂ ಉಚ್ಛ್ರಾಯಕ್ಕೇರುತ್ತಿದ್ದುದು ಖಂಡಿತ, ಎನ್ನುತ್ತಿದ್ದರು,
ಅಜ್ಜ ಕಣ್ಣಪ್ಪ. ಕ್ರಿಕೆಟ್ ಆಟದಲ್ಲಿ ವೇಗದ ಬೌಲರ್ ಆಗಿದ್ದ ಅವರು, ಅಲೋಶಿಯಸ್ ಕಾಲೇಜಿನಲ್ಲಿ ನಡೆದೊಂದು ಮ್ಯಾಚ್‍ನಲ್ಲಿ ತಾನೆಸೆದ ಬಾಲ್, ಬ್ಯಾಟ್ಸ್‍ಮ್ಯಾನ್ ಹೊಡೆತಕ್ಕೆ ತನ್ನೆದೆಗೇ ಬಂದು ಹೊಡೆದಾಗ ಎದೆಯಲ್ಲಿ ರಕ್ತ ಹೆಪ್ಪುಗಟ್ಟಿ ಸಮಸ್ಯೆಯಾದುದು; ಮುಂದೆ ಅಸಿಸ್ಟೆಂಟ್ ಕಮಿಶನರ್ ಆಗಿ ಭಡ್ತಿ ಹೊಂದಿದ ಸಂತೋಷಕೂಟದ ಕುದುರೆ ಸವಾರಿಯಲ್ಲಿ ಆ ಹೃದಯದ ಮೇಲೆ ಬಿದ್ದ ಒತ್ತಡದಿಂದ ಹೃದಯಾಘಾತ ಸಂಭವಿಸಿದ್ದು, ಇದೆಲ್ಲವೂ ಅಜ್ಜ ಕಣ್ಣಪ್ಪ ಅವರಿಂದಲೇ ನಮಗೆ ತಿಳಿದು ಬಂದುದು. ಜನವರಿ ಮೂವತ್ತು ತನ್ನ ಹುಟ್ಟುಹಬ್ಬದಂದು ನಮ್ಮಣ್ಣ ಅಮ್ಮನೊಡನೆ ಅಜ್ಜನ ಆಶೀರ್ವಾದಕ್ಕಾಗಿ ಬಳಿಸಾರಿದಾಗ, ಒಡನಿದ್ದ ‘ಲೇನ್ ಕಾಟೇಜ್’ಅಣ್ಣನ ಮಗ ಡಾ. ರಾಧಾಕೃಷ್ಣ ಅವರೊಡನೆ ಎಂದಿನಂತೆ ತಮಾಷೆಯಾಗಿ “ಓ, ಗಾಂಧಿ ಹ್ಯಾಸ್ ಕಮ್!” ಎಂದಿದ್ದರು, ಅಜ್ಜ. ಅವರ ಅಂತ್ಯ ಸಮೀಪಿಸಿತ್ತು. ಆ ಸಾವಿರದ ಒಂಬೈನೂರ ಅರ್ವತ್ತೆಂಟರ ಫೆಬ್ರವರಿ ಒಂದರ ರಾತ್ರಿಯ ಆ ಕೊನೆಯ ಕ್ಷಣಗಳ ಬಗ್ಗೆ ಪ್ರತ್ಯಕ್ಷದರ್ಶಿಯಾಗಿದ್ದ ನಮ್ಮಣ್ಣನಿಂದಲೇ ಕೇಳೋಣ. “ಶರಣರ ಗುಣವನ್ನು ಮರಣದಲ್ಲಿ ಕಾಣು”ಎಂಬಂತೆ ಇಚ್ಛಾಮರಣಿಯಾಗಿ ಕ್ರಿಸ್ತೈಕ್ಯರಾದ ಶ್ರೇಷ್ಠರು, ನಮ್ಮಜ್ಜ ಶೆವಲಿಯರ್ ಕಣ್ಣಪ್ಪ ಅಲೋಶಿಯಸ್. ಕುಟುಂಬ ವತ್ಸಲರಾಗಿ, ವಿದ್ಯಾರ್ಥಿಗಳಿಗೆ, ನಮ್ಮಂಥ ಎಳೆಯರಿಗೆ, ಸಮಾಜಕ್ಕೆ ಬೆಳಕಾಗಿ ಬಾಳಿದ ಆ ದಿವ್ಯ ಚೇತನಕ್ಕೆ ನನ್ನ ಹೃತ್ಪೂರ್ಣ ನಮನ!
0 ಪ್ರತಿಕ್ರಿಯೆಗಳು