ಅವರು ಕತ್ತಿ ಝಳಪಿಸಿದ್ದರು..

ಜಿ ಎನ್‌ ಮೋಹನ್

‘ತೂಗಾಡಿಸುತ್ತೇನೆ ನಿನ್ನನ್ನು ಮುಂದಿನ ಮರದಲ್ಲಿ ಬರಗಾಲ ಬಂದು ಒಣಗಿ ಸಾಯುವವರೆಗೆ..’

-‘ಮ್ಯಾಕ್ ಬೆತ್’ ನಾಟಕದಲ್ಲಿ ಮ್ಯಾಕ್ ಬೆತ್ ಆಡುವ ಮಾತುಗಳಿವು. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸನ್ನ ನಿರ್ದೇಶಿಸಿದ ರಾಮಚಂದ್ರದೇವರ ಅನುವಾದದ ನಾಟಕದಲ್ಲಿ ಜಿ ಕೆ ಗೋವಿಂದ ರಾವ್ ಮ್ಯಾಕ್ ಬೆತ್ ಆಗಿ ಈ ಸಾಲುಗಳನ್ನು ತಮ್ಮ ಕಂಚಿನ ಕಂಠದಿಂದ ಮೊಳಗಿಸುತ್ತಿದ್ದರೆ ನಮ್ಮೊಳಗೇ ಮಿಂಚಿನ ಸಂಚಾರ.

ಅವರು ಇದ್ದದ್ದೇ ಹಾಗೆ. ಮುಚ್ಚು ಮರೆ ಇಲ್ಲದೆಯೇ..
ಹಾಗಾಗಿಯೇ ಅವರದ್ದು ಕಟು ಮಾತು, ನೇರ, ಹರಿತ ನುಡಿ
ಅವರ ಶೈಲಿ ಥೇಟ್ ಹೇಗಿತ್ತೆಂದರೆ, ಸಮಾಜದ ನೆಮ್ಮದಿ ಹಾಳು ಮಾಡುವವರನ್ನು, ಮಾನವೀಯತೆ ಮರೆತವರನ್ನು ‘ಮುಂದಿನ ಬರಗಾಲ ಬಂದು ಒಣಗಿ ಸಾಯುವವರೆಗೆ ತೂಗಾಡಿಸಿಬಿಡುತ್ತೇನೆ’ ಎನ್ನುವಂತೆ.

ನಮ್ಮದೊಂದು ದೊಡ್ಡ ಬಳಗ ಎಸ ಎಫ್ ಐ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿತ್ತು. ಸಂಸ್ಥೆಗೆ ಹಣ ಸಂಗ್ರಹಿಸಲು ನಾವು ಯೋಚಿಸಿದ್ದು ‘ಸಮುದಾಯ’ ತಂಡದ ಇದೇ ಮ್ಯಾಕ್ ಬೆತ್ ಪ್ರದರ್ಶನವನ್ನು. ಆಗ ಅದು ಪದವಿ ತರಗತಿಗಳಿಗೆ ಪಠ್ಯವಾಗಿತ್ತು. ಹಾಗಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಷೋ ಏರ್ಪಡಿಸಿದ್ದೆವು.

ಹತ್ತಾರು ಕಾಲೇಜುಗಳ ವಿದ್ಯಾರ್ಥಿಗಳೇ ಪ್ರೇಕ್ಷಕರು. ಹೇಳಿ ಕೇಳಿ ಹದಿಹರಯದ ವಯಸು. ಹಾಗಾಗಿ ಇಡೀ ನಾಟಕದುದ್ದಕ್ಕೂ ಎಡಬಿಡದೆ ಗಲಾಟೆ ಮಾಡುತ್ತಲೇ ಇದ್ದರು. ಮ್ಯಾಕ್ ಬೆತ್ ಆಗಿದ್ದ ಜಿ ಕೆ ಗೋವಿಂದರಾವ್ ಸಮಾಧಾನ ಮಾಡಿಕೊಂಡದ್ದು ಎಷ್ಟು ಬಾರಿಯೋ. ಆದರೆ ಇನ್ನು ಆಗಲ್ಲ ಎಂದು ಗೊತ್ತಾದಾಗ ನಾಟಕ ಮಾಡುತ್ತಿದ್ದ ಅವರು ಮ್ಯಾಕ್ ಬೆತ್ ಬದಲು ರೋಷಾವೇಷದ ಜಿ ಕೆ ಗೋವಿಂದರಾವ್ ಆಗಿಬಿಟ್ಟರು.

ತಮ್ಮ ಕೈನಲ್ಲಿದ್ದ ಕತ್ತಿಯನ್ನು ಝಳಪಿಸುತ್ತ ತಮ್ಮದೇ ಶೈಲಿಯಲ್ಲಿ ‘ಸುಮ್ಮನೆ ನಾಟಕ ನೋಡಲಿಲ್ಲ ಅಂದ್ರೆ ಅಷ್ಟೇ..’ ಎಂದು ಥೇಟ್ ಮೇಷ್ಟ್ರ ರೀತಿಯಲ್ಲಿ ಗದರಿಕೊಂಡೇಬಿಟ್ಟರು. ವಿದ್ಯಾರ್ಥಿಗಳು ಶೇಕ್ಸ್ ಪಿಯರ್ ನ ಮ್ಯಾಕ್ ಬೆತ್ ಹೀಗೆ ನೇರಾನೇರ ನಮ್ಮ ವಿರುದ್ಧವೇ ಕತ್ತಿ ಝಳಪಿಸಿಬಿಡುತ್ತಾನೆ ಎಂದು ಖಂಡಿತಾ ಭಾವಿಸಿರಲಿಲ್ಲ. ಹಾಗಾಗಿ ಆಮೇಲೆ ನಾಟಕದುದ್ದಕ್ಕೂ ಸೈಲೆಂಟ್ ಆಗಿ ಕುಳಿತರು.

ಗೋವಿಂದರಾವ್ ತಮ್ಮ ಬದುಕಿನ ಉದ್ದಕ್ಕೂ ಇದೇ ದಿಟ್ಟತನವನ್ನು, ಆಕ್ರೋಶವನ್ನೂ, ಸಮಾಜವನ್ನು ಹಿಂದಕ್ಕೆ ಎಳೆಯುತ್ತಿದ್ದವರ ಬಗ್ಗೆ ಆಕ್ರೋಶವನ್ನು ಹೊರ ಹಾಕುತ್ತಲೇ ಬಂದರು. ಅದು ಒಂದು ಚಳವಳಿಯ ಶಕ್ತಿಯಾಗಿತ್ತು.

ಮೈಸೂರಿನಲ್ಲಿದ್ದ ರಾಮದಾಸ್ ಹೇಗೆ ಇಡೀ ರಾಜ್ಯದ ಚಳವಳಿಗೆ ನೇರವಾಗಿ, ಪರೋಕ್ಷವಾಗಿ ಒಂದು ಆಸರೆಯಾಗಿದ್ದರೋ ಹಾಗೆ ಜಿ ಕೆ ಗೋವಿಂದರಾವ್ ಕೂಡಾ. ಅವರಿಗೆ ಚಕ್ರವ್ಯೂಹ ಹೊಕ್ಕುವುದೂ ಗೊತ್ತಿತ್ತು. ಅಲ್ಲಿ ಸೆಣಸಿ ಹೊರಬರುವುದೂ ಗೊತ್ತಿತ್ತು. ಆ ಕಾರಣದಿಂದಾಗಿಯೇ ಜಿ ಕೆ ಜಿ ಇದ್ದಾರೆ ಎಂದರೆ ಚಳವಳಿಯ ಹಲವರಿಗೆ ಆನೆ ಬಲ ಬರುತ್ತಿತ್ತು. ಅವರು ನೋಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ಎಲ್ಲರಿಗೂ ಒಂದು ಶಕ್ತಿಯಾಗಿತ್ತು.

ನಾನು, ಗೋವಿಂದರಾವ್ ಇಬ್ಬರೂ ಅನೇಕ ಬಾರಿ ಕೈಕುಲುಕಿದ್ದೇವೆ, ವೇದಿಕೆ ಹಂಚಿಕೊಂಡಿದ್ದೇವೆ. ಇಬ್ಬರಿಗೂ ಚಳವಳಿ ಹೊರತಾಗಿ ಶೇಕ್ಸ್ ಪಿಯರ್ ಸಮಾನ ಆಸಕ್ತಿಯ ವಿಷಯವಾಗಿದ್ದ. ನಾನು ‘ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ’ ಕವನ ಸಂಕಲನ ಹೊರತಂದಿದ್ದೆ. ಅವರು ಶೇಕ್ಸ್ ಪಿಯರ್ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ಒಬ್ಬರಾಗಿದ್ದರು.

‘ರಂಗ ಶಂಕರ’ದಲ್ಲಿ ಜರುಗಿದ ಶೇಕ್ಸ್ ಪಿಯರ್ ನಾಟಕಗಳ ಹಬ್ಬ ಉದ್ಘಾಟನೆಯಲ್ಲಿ ನಾವಿಬ್ಬರೂ ಅತಿಥಿಗಳು. ಆ ದಿನ ಶೇಕ್ಸ್ ಪಿಯರ್ ಬಗ್ಗೆ ಅವರು ಕೊಟ್ಟ ಒಳನೋಟ ನನ್ನನ್ನು ದಂಗುಬಡಿಸಿತ್ತು. ಪಕ್ಕಾ ಒಬ್ಬ ವಿಧೇಯ ವಿದ್ಯಾರ್ಥಿಯಂತೆ ನಾನು ನೋಟ್ಸ್ ಮಾಡಿಕೊಳ್ಳುತ್ತಾ ಕೂತಿದ್ದೆ. ಹಾಗೆ ನೋಟ್ಸ್ ಮಾಡಿಕೊಳ್ಳುತ್ತಾ ಕುಳಿತ ಅದೆಷ್ಟೋ ಜನರನ್ನು ಬಿಟ್ಟು ಶೇಕ್ಸ್ ಪಿಯರ್ ನ ಜೊತೆ ಕೈಕುಲುಕಲೇನೋ ಎಂಬಂತೆ ಹೊರಟೇಬಿಟ್ಟರು.

‍ಲೇಖಕರು Admin

October 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: