ಅಲ್ಲಿ ಸಂಜೆಯಾಗುತ್ತಿದ್ದಂತೆ ಬೆಳಕು ಚಿಮ್ಮುತ್ತದೆ. ರಘುಪತಿ ರಾಘವ ರಾಜಾರಾಮ್ ಕೇಳುತ್ತದೆ..
ಒಂದು ಕ್ಷಣ ಅಲ್ಲಿಗೆ ತಪ್ಪಿ ಹೆಜ್ಜೆ ಹಾಕಿದವರೂ ಮೂಕವಿಸ್ಮಿತರಾಗಿ ಅಲ್ಲಿ ನಿಲ್ಲದೆ ಹೋದರೆ ಕೇಳಿ
ಅದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಚೇರಿ.
ಸರ್ಕಾರಿ ಕಚೇರಿ ಇನ್ನು ಹೇಗಿರುತ್ತದೆ ಎಂದು ಬಲವಾಗಿ ನಂಬಿರುವವರ ಮಾತೇ ಸುಳ್ಳು ಮಾಡಿ ಹಾಕುತ್ತದೆ ಈ ಕಚೇರಿ
‘ಇನ್ನಿನಿಸು ದಿನ ಮಹಾತ್ಮ ನೀ ಬದುಕಬೇಕಿತ್ತು..’ ಎಂದು ಹಂಬಲಿಸಿದ್ದರು ಕವಿ ಗೋವಿಂದ ಪೈ
‘ಅವರು ಬದುಕಿದ್ದಾರೆ, ಇನ್ನೂ..’ ಎಂದೇ ಅನಿಸಿಬಿಡಬೇಕು ಹಾಗೆ ವಾರ್ತಾ ಇಲಾಖೆ ಗಾಂಧಿಗೆ ಜೀವ ಕೊಟ್ಟಿದೆ.
ಅದು ಒಂದು ಪುಟ್ಟ ಅಂಗಳ
ಗಾಂಧಿ ಅಂಗಳ
ಅಲ್ಲಿ ಗಾಂಧಿ, ಹರಿಜನ ಪತ್ರಿಕೆ, ಸಂದೇಶ ಅಷ್ಟು ಮಾತ್ರವಲ್ಲ ಗಾಂಧಿ ಬೆಳಕೂ ಸಹಾ ಇದೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರ ಕಲ್ಪನೆಯ ಕೂಸು ಇದು
ಈ ಅಂಗಳಕ್ಕೆ ಕಾಲಿಟ್ಟರೆ ನಮ್ಮ ಮನಸ್ಸೂ ಆ ರಘುಪತಿ ರಾಘವದಲ್ಲಿ ಮುಳುಗೇಳುತ್ತದೆ
ಎನ್ ಆರ್ ವಿಶುಕುಮಾರ್ ಹೀಗೆನ್ನುತ್ತಾರೆ-
ಇದು ಬೆಂಗಳೂರಿನ ವಾರ್ತಾ ಇಲಾಖೆಯ ಕೇಂದ್ರ ಕಚೇರಿಯ ಆವರಣದಲ್ಲಿ ಖಾಲಿಯಾಗಿದ್ದ ಜಾಗದಲ್ಲಿ ಇಲಾಖೆಯ ಸಹೋದ್ಯೋಗಿಗಳ ಜೊತೆ ಸಮಾಲೋಚಿಸಿ ರೂಪಿಸಿದ ಗಾಂಧಿ ಆಂಗಳ.
ಪ್ರತಿನಿತ್ಯ ಬೆಳಿಗ್ಗೆ ಕಚೇರಿ ಆರಂಭಕ್ಕೆ ಮುನ್ನ 9.30 ರಿಂದ 10.30 ರವರೆಗೆ ಮತ್ತು ಸಂಜೆ ಕಚೇರಿ ಮುಚ್ಚುವುದಕ್ಕೆ ಮುನ್ನ ಸಂಜೆ 5 ರಿಂದ 6 ರವರೆಗೆ ಧ್ವನಿ ಮುದ್ರಿತ ಗಾಂಧಿಪ್ರಿಯ ಭಜನೆ , ಹಾಡುಗಳನ್ನು ಇಲ್ಲಿ ಹಾಕುತ್ತೇವೆ.
ಕಳೆದ ಅಕ್ಟೋಬರ್ 2 ರಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಈ ಗಾಂಧಿ ಅಂಗಳವನ್ನು ಉದ್ಘಾಟಿಸಿದರು.
ಇದು ಈಗ ನಮ್ಮ ಇಲಾಖೆಯ ಹೆಮ್ಮೆಯ ಅಂಗಳವಾಗಿದೆ.ನಮ್ಮ ಕಚೇರಿಗೆ ಆಗಮಿಸುವ ಎಲ್ಲರ ಮೆಚ್ಚುಗೆಯ ಅಂಗಳವೂ ಆಗಿದೆ.
ನಮ್ಮ ಇಲಾಖೆಯ ಸಹೋದ್ಯೋಗಿಗಳ ಸಲಹೆ ಸಹಕಾರಗಳಿಂದ ರೂಪಿತವಾಗಿರುವ ಇದರ ಕೀರ್ತಿ ಅವರೆಲ್ಲರಿಗೂ ಸಲ್ಲುತ್ತದೆ.
ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪರ ಪ್ರತಿರೂಪಿ ಸಂಸ್ಥೆ ಇದನ್ನು ವಿನ್ಯಾಸಗೊಳಿಸಿ ನಿರ್ಮಿಸಿದೆ.
ಆರ್ ಜಿ ಹಳ್ಳಿ ನಾಗರಾಜ್ ಮೆಚ್ಚುಗೆ-
ನೆರಳು ಬೆಳಕಿನ ಸಂಯೋಜನೆ ಚೆನ್ನಾಗಿದೆ. ಗಮನ ಸೆಳೆಯುತ್ತದೆ.
ಡಿ ಉಮಾಪತಿ ಹೀಗನ್ನುತ್ತಾರೆ –
ನೋಡಿದೆ..ಹಿಡಿಸಿತು…ಸರ್ಕಾರಿ ವಾತಾವರಣದಲ್ಲೊಂದು ವಿರಳ ಪ್ರಯೋಗ
ಹೀಗೂ ಉಂಟೇ ಎಂದು ಉದ್ಗರಿಸಬೇಕಾದ್ದು ಇಂಥದನ್ನೋದಿ, ನೋಡಿ, ಕೇಳಿ!. ಸರ್ಕಾರಿ ಕಛೇರಿಯಲ್ಲಿ ಗಾಂಧಿ ಅಂಗಳ ತಯಾರಾಗಿದೆ ಎನ್ನುವುದೇ ಮನಸ್ಸನ್ನು ಪುಳಕಗೊಳಿಸುತ್ತದೆ. ಅಧಿಕಾರಿ ಒಬ್ಬರ ವಿಷನ್ ಎಂತಹ ಬದಲಾವಣೆ ತರಬಲ್ಲುದು !!