ಅರುಣಾ ರಾವ್‌ ‘ಸೆಲ್ಫಿ’…

ಅರುಣಾ ರಾವ್‌

ಇಂದಿನ ಯುಗದಲ್ಲಿ ಎಲ್ಲಿ ನೋಡಿದರೂ ಮೊಬೈಲುಗಳದೇ ಹಾವಳಿ. ಕರೆ ಸ್ವೀಕಾರಕ್ಕೆ, ಕರೆ ಮಾಡುವುದಕ್ಕಷ್ಟೇ ಸೀಮಿತವಾಗಿದ್ದ ಮೊಬೈಲುಗಳು ಕಾಲಾನುಕ್ರಮದಲ್ಲಿ ಹಲವಾರು ಬದಲಾವಣೆಗಳಿಗೊಳಗಾಗಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ. ಏನಿದು! ಮೊಬೈಲ್‌ ಪುರಾಣಾನಾ ಅಂತ ಹುಬ್ಬೇರಿಸಬೇಡಿ. 

ಈಗ ನಾನು ಹೇಳ ಹೊರಟಿರುವುದು ಮೊಬೈಲ್ ಪುರಾಣವನ್ನಂತೂ ಅಲ್ಲ, ಮೊಬೈಲ್‌ ಎಂಬ ಮಹಾಕಾವ್ಯದಲ್ಲಿರುವ ಹಲವಾರು ಖಾಂಡಗಳಲ್ಲಿ ಪ್ರಮುಖವಾದ ಸೆಲ್ಫಿ ಖಾಂಡ. ಹೌದು, ಸೆಲ್ಫಿ ಅಂದರೆ ಸ್ವತಃ ಫೋಟೋ ಕ್ಲಿಕ್ಕಿಸಿಕೊಳ್ಳುವುದು. ಈಗ ಅದರದೇ ಯುಗ, ಅದರದೇ ಹವಾ ಎಂದರೆ ತಪ್ಪಾಗಲಾರದು. ನನಗೆ ಇತ್ತೀಚೆಗಷ್ಟೇ ಪಿತ್ತಕೋಶದ ತೊಂದರೆಯುಂಟಾಗಿ, ಅದನ್ನು ತೆಗೆಯದೆ ಬೇರೆ ಮಾರ್ಗವಿಲ್ಲವೆಂದು ನನ್ನನ್ನು ಪರೀಕ್ಷಿಸಿದ ವೈದ್ಯರು ಹೇಳಿದಾಗ ನನಗೆ ಜೀವವೇ ಬಾಯಿಗೆ ಬಂದಂತಾಯಿತು. 

ಸರಿ, ಇನ್ನೇನು ತಾನೇ ಮಾಡಲು ಸಾಧ್ಯ? ದೇವರ ಮೇಲೆ ಭಾರ ಹಾಕಿ, ಶಸ್ತ್ರ ಚಿಕಿತ್ಸೆಗಾಗಿ ವೈದ್ಯರು ನಿಗಧಿ ಪಡಿಸಿದ ದಿನದಂದು ಆಸ್ಪತ್ರೆಗೆ ದಾಖಲಾಗಲು ನನ್ನ ಪತಿರಾಯರ ಜೊತೆ ಹೊರಟೆ. ಅದೇನೋ ಕರೋನಾ ಆರ್ ಟಿಪಿಸಿಆರ್‌ ಪರೀಕ್ಷೆ ಮಾಡಿ ಅದು ನೆಗೆಟೀವ್‌ ಬಂದ ನಂತರವಷ್ಟೇ ದಾಖಲಾತಿ ಮಾಡಿಕೊಳ್ಳುವುದು ಎಂದಾಯಿತು. ಮುಸುಕುಧಾರಿಗಳಾದ ವೈದೈರೊಬ್ಬರು ನನ್ನ ಬಾಯಲ್ಲಿ ಹಾಗೂ ಮೂಗಿನ ಮೂಲಕ ಗಂಟಲು ಬಗಿಯುತ್ತಿದ್ದಾರೇನೋ ಎನ್ನುವಂತೆ ಮೂಗಿನಲ್ಲಿ ಒಂದು ಕಡ್ಡಿಯ ತರಹ ಇರುವ ಪರೀಕ್ಷಕವನ್ನು ತೂರಿಸಿ, ಇನ್ನೊಂದು ಗಂಟೆ ಕಾಯಬೇಕೆಂದರು. ಅದರ ಫಲಿತಾಂಶ ಬರುವ ವೇಳೆಗೆ ಎರಡು ಗಂಟೆಗಳೇ ಕಳೆದು ಹೋಯಿತು.

ನಿಮಿಷ ನಿಮಿಷಕ್ಕೂ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿತ್ತೇ ಹೊರತು ಇಳಿಮುಖವೇನೂ ಆಗಲಿಲ್ಲ. ಎಂಥಾ ದುರ್ಭೀಕ್ಷ ಕಾಲವಾದರೂ ಕಾಯಿಲೆಗಳಿಗೂ ರೋಗಿಗಳಿಗೂ ಕೊರತೆಯೇ ಇರುವುದಿಲ್ಲ ಅಲ್ಲವೇ? ನಾನು ಮತ್ತು ನನ್ನ ಪತಿರಾಯರು ಕರೋನಾ ಪರೀಕ್ಷೆಯ ಫಲಿತಾಂಶ ಬರುವವರೆಗೆ ಅಲ್ಲಿಯೇ ಇದ್ದ ಬೆಂಚಿನ ಮೇಲೆ ಕುಳಿತೆವು. ನಾನು ಮುಂದೆ ಅನುಭವಿಸಬೇಕಾದ ನೋವಿನ ನೆನಪಿನಲ್ಲಿ ಮುಳುಗಿ ಮ್ಲಾನ ವದನಳಾಗಿದ್ದೆ. ಜೊತೆಗೆ ನನ್ನ ತಾಯಿಯ ಮನೆಯಲ್ಲಿ ಬಿಟ್ಟು ಬಂದಿದ್ದ ನನ್ನ ಜೀವಕ್ಕೆ ಜೀವವಾಗಿದ್ದ ಮಗಳ ನೆನಪು ತೇಲಿ ಬಂದು, ಅವಳ ಮುಖ ನೋಡುವುದು ಇನ್ನೆಷ್ಟು ದಿನಗಳಾಗಬಹುದೋ ಎಂದು  ದುಃಖ ಉಮ್ಮಳಿಸಿದಂತಾಯಿತು.

ನನ್ನವರು ನನ್ನ ಮನಸ್ಸನ್ನು ಬಲ್ಲವರಂತೆ ನನ್ನ ಕೈ ಮೇಲೆ ತಮ್ಮ ಕೈಯನ್ನಿರಿಸಿ, ಧೈರ್ಯ ತುಂಬುವ ರೀತಿಯಲ್ಲಿ ಮೃದುವಾಗಿ ಒತ್ತಿದರು. ಬಲವಂತದ ನಗುವೊಂದನ್ನು ಮುಖದ ಮೇಲೆ ತಂದುಕೊಂಡು, ಇನ್ನು ಆಸ್ಪತ್ರೆಯಿಂದ ಯಾವಾಗ ಮರಳುತ್ತೇನೆಯೋ, ಮನೆಯ ಮುಖವನ್ನು ಎಂದು ನೋಡೇನೋ ಎಂದು ಆಲೋಚಿಸುತ್ತಾ ಕುಳಿತಿದ್ದ ನನಗೆ, ಆಸ್ಪತ್ರೆಯ ಆವರಣದಲ್ಲಿ ಗಲಭೆ ಕೇಳಿಸಿದಂತಾಗಿ, ‘ಅದೇನು’ ಎನ್ನುವ ಕುತೂಹಲ ತಾಳಿದೆ. ಇವರಿಗೂ ಅದು ಕೇಳಿಸಿತೇನೋ, ‘ನಾನು ಹೋಗಿ ನೋಡಿ ಬರುತ್ತೇನೆ ನೀನಿಲ್ಲೇ ಕುಳಿತಿರು’ ಎನ್ನುತ್ತಾ, ಗದ್ದಲ ಕೇಳಿ ಬರುತ್ತಿದ್ದ ಕಡೆಗೆ ದಡಬಡಿಸಿ ನಡೆದರು.  

ನಾನು ಕುಳಿತಿದ್ದ ಸ್ಥಳಕ್ಕೆ ಆಸ್ಪತ್ರೆಯ ಆವರಣದಲ್ಲಿ ಕಾರೊಂದು ನಿಂತದ್ದು, ಅದರ ಸುತ್ತಲೂ ಜನ ಮುತ್ತುವರೆದಿದ್ದುದ್ದು ಕಾಣುತ್ತಿತ್ತು. ಆದರೆ ಅಲ್ಲಿ ಏನು ನಡೆಯುತ್ತಿದೆಯೆಂದು ತಿಳಿಯುತ್ತಿರಲಿಲ್ಲ. ಸುಮಾರು ಆರೇಳು ನಿಮಿಷಗಳೇ ಕಳೆದು ಹೋದವು. ನನಗೆ ಆ ಕಡೆಗೆ ಕೊರಳು ಕೊಂಕಿಸಿ ನೋಡಿ ನೋಡಿ ಸಾಕಾಗಿ, ಅದೇನೆಂದು ನೋಡಿಬರೋಣವೆಂದು ನನ್ನ ಸ್ಥಳವನ್ನು ಬಿಟ್ಟೇಳುವಷ್ಟರಲ್ಲಿ ಕನ್ನಡದ ಕಿರುತೆರೆಯ ನಟರೊಬ್ಬರ ಮುಖ ಕೊಂಚ ಕಂಡಿತು. ಇದೋ ವಿಷಯ ಎಂದುಕೊಂಡು ಎದ್ದು ಹೋಗುವ ಆಲೋಚನೆಯನ್ನು ತೊರೆದು ಮತ್ತೆ ಸ್ವಸ್ಥಾನದಲ್ಲಿ ಪ್ರತಿಷ್ಠಿತಳಾದೆ.

ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ಸ್ವಲ್ಪ ಪೆಟ್ಟಾಗಿ ಅವರನ್ನು ಇಲ್ಲಿಗೆ ಕರೆತರಲಾಗಿದೆ ಎಂದು ಅಲ್ಲಿನ ಸಿಬ್ಬಂದಿ ಮಾತನಾಡಿಕೊಳ್ಳುತ್ತಿರುವುದು ಅಸ್ಪಷ್ಟವಾಗಿ ಕಿವಿಗೆ ಬಿತ್ತು. ಅವರನ್ನು ಕಂಡೊಡನೆ ಆಸ್ಪತ್ರೆಯ ಆವರಣದಲ್ಲಿದ್ದವರು ಬೆಲ್ಲಕ್ಕೆ ಇರುವೆ ಮುತ್ತುವಂತೆ ಅವರನ್ನು ಮುತ್ತಿಕೊಂಡಿದ್ದರು.  ‘ಸರ್‌ ಒಂದೇ ಒಂದು ಸೆಲ್ಫಿ, ಸರ್‌ ಪ್ಲೀಸ್‌ ಇನ್ನೊಂದು’ ಎನ್ನುತ್ತಾ, ಆ ನಟನ ನೋವು, ಅದರ ತೀವ್ರತೆ, ಅವರಿದ್ದ  ಪರಿಸ್ಥಿತಿಗಳೊಂದನ್ನೂ ಲೆಕ್ಕಿಸದೆ, ಸೆಲ್ಫಿಯ ಮೇಲೆ ಸೆಲ್ಫಿಯನ್ನು ತೆಗೆದುಕೊಳ್ಳತೊಡಗಿದ್ದರು. ನಟರ ಸಂಗಡ ಬಂದಿದ್ದವರು ‘ಇವರನ್ನು ಡಾಕ್ಟರಿಗೆ ತೋರಿಸಬೇಕು ದಯವಿಟ್ಟು ಜಾಗ ಬಿಡಿ’ ಎಂದು ಕೇಳಿಕೊಳ್ಳುತ್ತಿದ್ದ ಧ್ವನಿ ಯಾರ ಕಿವಿಗೂ ಬಿದ್ದಂತೆ ತೋರಲಿಲ್ಲ. ‘ಜನಮರುಳೋ ಜಾತ್ರೆ ಮರುಳೋ’ ಎನ್ನುವಂತೆ ಆಸ್ಪತ್ರೆಯ ಆವರಣ ಅಕ್ಷರಸಹಃ ಜಾತ್ರೆಯಾಗಿ ಹೋಯಿತು. 

ಕೊನೆಗೂ ಆಸ್ಪತ್ರೆಯ ಸಿಬ್ಬಂದಿ ಆ ಜನಸಾಗರವನ್ನು ಬೇಧಿಸಿಕೊಂಡು ನಟನ ಬಳಿ ತಲುಪಿ, ಅವರನ್ನು ಗಾಲಿಗಳ ಕುರ್ಚಿಯನ್ನು ಮೇಲೆ ಕೂರಿಸಿಕೊಂಡು ಜನರ ಮಧ್ಯೆ ಜಾಗ ಮಾಡಿಕೊಳ್ಳುತ್ತಾ ವೇಗವಾಗಿ ತಳ್ಳಿಕೊಂಡು ಚಿಕಿತ್ಸಾ ಕೊಠಡಿಯತ್ತ ಸಾಗಿದರು. ಅಲ್ಲಿ ನೆರೆದಿದ್ದ ಜನರೆಲ್ಲ ಒಬ್ಬೊಬ್ಬರಾಗಿ ಚದುರಿ, ತಾವು ಮೊದಲಿದ್ದ ಸ್ಥಳಗಳಲ್ಲಿ ಆಸೀನರಾಗುತ್ತಾ, ಆ ನಟನ ಜೊತೆ ತಾವು ತೆಗೆಸಿಕೊಂಡ ಫೋಟೋಗಳನ್ನು ವಾಟ್ಸ್ಯಾಪ್ ಸ್ಟೇಟಸ್‌, ಇನ್ಸ್ಟಾಗ್ರಾಂ, ಫೇಸ್‌ ಬುಕ್ಕುಗಳಲ್ಲಿ ಅಪ್‌ ಲೋಡ್‌ ಮಾಡುವುದರಲ್ಲಿ ತಲ್ಲೀನವಾದರು. ಅಲ್ಲಿಯೇ ಕುಳಿತು ಇದೆಲ್ಲವನ್ನು ಗಮನಿಸುತ್ತಿದ್ದ ನನಗೆ, ‘ಏನು ಜನರೋ ಇವರು? ಬಾವಿಯಲ್ಲಿ ಬಿದ್ದವರನ್ನು ಕೂಡ ಕಾಪಾಡುವ ಬದಲು ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುತ್ತಾರೋ ಏನೋ’ ಎಂದು ಜಿಗುಪ್ಸೆಯಾಯಿತು.

ಇವುಗಳೆಲ್ಲದರ ಮಧ್ಯೆ ನನ್ನ ಪತಿರಾಯರು ಯಾವಾಗ ಬಂದು ನನ್ನ ಬಳಿ ಕುಳಿತು ಬಿಟ್ಟರೋ ಗೊತ್ತೇ ಆಗಲಿಲ್ಲ.. ಅಷ್ಟರಲ್ಲಿ ಈಶಾನ್ಯ ರಾಜ್ಯದ ಪುಟಾಣಿ ಚೀನೀ ಕಂಗಳ ಚಲುವೆಯೊಬ್ಬಳು, ‘ಪ್ರೊಸೀಜರ್‌ ಫಿನಿಷ್ಡ್‌, ಯು ಗಾಟ್‌ ನೆಗೆಟಿವ್‌ ರಿಪೋರ್ಟ್‌, ಕಮ್‌ ಐ ವಿಲ್‌ ಟೇಕ್‌ ಯು ಟು ದ ವಾರ್ಡ್‌’ ಎಂದು ತನ್ನ ಸಣ್ಣ ನಡುವನ್ನು ಬಳುಕಿಸುತ್ತಾ ಮುಂದೆ ನಡೆದಳು. ನಮ್ಮೆಜಮಾನರು ಹೊರಡೋಣವೇ ಎನ್ನುವಂತೆ ನನ್ನ ಮುಖ ನೋಡಿದಾಗ, ನಾನು ಯಾಂತ್ರಿಕವಾಗಿ ಆ ಸುಂದರಿಯನ್ನು ಹಿಂಬಾಲಿಸಿದೆ. ಕಾರಿಡಾರಿನಲ್ಲಿ ನಡೆಯುತ್ತಿರಬೇಕಾದರೂ ಮನುಷ್ಯನ ಸ್ಥಿತಿಗತಿಗಳನ್ನೂ ಲೆಕ್ಕಿಸದೆ ಫೋಟೋ ತೆಗೆದುಕೊಳ್ಳತ್ತಿದ್ದ ಜನರ ಚಿತ್ರಣವೇ ನನ್ನ ಕಣ್ಣ ಮುಂದೆ ಸುಳಿದಾಡುತ್ತಿದ್ದರು.

ನನ್ನ ವಾರ್ಡ್‌ ಗೆ ತಲುಪಿ, ಅವರು ನೀಡಿದ ಉಡುಪನ್ನು ಧರಿಸಿ ಬಂದ ಮೇಲೆ ಗ್ಲೂಕೋಸಿನ ಬಾಟಲಿಯೊಂದನ್ನು ನನಗೆ ಏರಿಸಿ, ‘ಡಾಕ್ಟರ್‌ ವಿಲ್‌ ಕಮ್‌ ಇನ್‌ ದ ಇವ್ನಿಂಗ್’ ಎಂದು ಹೇಳಿ ಮುಗುಳ್ನಕ್ಕು ಅವಳು ಅಲ್ಲಿಂದ ನಿರ್ಗಮಿಸಿದಳು. ಯಾವಾಗಲೂ ಎಡೆಬಿಡದೆ ಮಾತನಾಡುವ ನಾನು ಈಗ ಮೌನವಾಗಿದ್ದುದ್ದನ್ನು ಗಮನಿಸಿದ ಇವರು, ‘ಹೆದರಬೇಡ ಎಲ್ಲಾ ಸರಿಹೋಗುತ್ತೆ, ಇನ್ನೊಂದು ವಾರದಲ್ಲಿ ಮನೆಗೆ ಹೋಗಿರುತ್ತೇವೆ. ಆಮೇಲೆ ನಿನ್ನ ಕಥೆ, ಪುರಾಣಗಳ ಬರವಣಿಗೆ ಮುಂದುವರಿಸಬಹುದು’ ಎಂದು ತಮಾಷೆ ಮಾಡಿದರು.

ಆಗ ನಾನು ‘ಅಲ್ಲಾರೀ, ನಾನು ಯೋಚನೆ ಮಾಡುತ್ತಿರುವುದು ಅದಲ್ಲ. ಪಾಪ ಆ ವ್ಯಕ್ತಿಗೆ ಎಷ್ಟು ನೋವಾಗಿದ್ದರೆ ಆತ ಆಸ್ಪತ್ರೆಗೆ ಬರುತ್ತಾನೆ? ಅದನ್ನು ಸ್ವಲ್ಪವೂ ಅರ್ಥ ಮಾಡಿಕೊಳ್ಳದೆ ಈ ಜನ ಹೇಗೆ ಸೆಲ್ಫಿಗಳಿಗೆ ಮುಗಿ ಬಿದ್ದಿದ್ರು ನೋಡಿ, ಅದನ್ನೇ ಆಲೋಚಿಸುತ್ತಾ ಇದ್ದೆ…’ ಅದ್ಸರಿ, ಗಲಾಟೆ ನೋಡಿಕೊಂಡು ಬರ್ತೀನಿ ಅಂತ ಹೇಳಿ ಹೋದ ನೀವು ಎಲ್ಲಿ ಮಾಯವಾಗಿಬಿಟ್ಟಿರಿ?’ ಎಂದು ಅವರನ್ನು ಪ್ರಶ್ನಾರ್ಥಕವಾಗಿ ನೋಡಿದೆ. 

ಈಗ ಅವರ ಮುಖದಲ್ಲಿ ಒಂದು ರೀತಿಯ ಮುಜುಗರ ಕಂಡಿತು. ಆದರೂ ತಮ್ಮನ್ನು ತಾವು ಸಂಭಾಳಿಸಿಕೊಂಡು,’ ಅದೇ ನೋಡಿ ಬರೋಣ ಅಂತಾ ಹೋದೆ. ಅಲ್ಲಿ ಎಲ್ಲರೂ ಆ ನಟನ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರಲ್ಲಾ, ನಾನೂ ಒಂದು ಸೆಲ್ಫಿ ತಗೊಂಡೇ ಬಿಟ್ಟೆ. ನಮ್ಮಮ್ಮ ಅವರ ಸೀರಿಯಲ್‌ ನೋಡತಾರಲ್ಲಾ, ಅವರ ಜೊತೆ ನಾನು ಫೋಟೋ ತೆಗೆದುಕೊಂಡಿರುವುದನ್ನು ನೋಡಿದ್ರೆ ತುಂಬಾ ಖುಷಿ ಪಡ್ತಾರೆ. ಒಂದು ನಿಮಿಷ, ಅಮ್ಮನಿಗೆ ಈ ಫೋಟೋ ಫಾರ್ವರ್ಡ್‌ ಮಾಡಿಬಿಡ್ತೀನಿ’ ಎನ್ನುತ್ತಾ ತಮ್ಮ ಪ್ಯಾಂಟಿನ ಜೇಬಿಗೆ ಕೈ ಹಾಕಿ ಮೊಬೈಲ್‌ ಹೊರಗೆಳೆಯುತ್ತಿದ್ದಾಗ ನಾನು ಮೂಕಳಾಗಿ ಹೋದೆ.. 

‍ಲೇಖಕರು Admin

January 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: