ಅರಬಗಟ್ಟೆ ಅಣ್ಣಪ್ಪ ಕಥೆ- ಅನ್ನ…

ಅರಬಗಟ್ಟೆ ಅಣ್ಣಪ್ಪ

ಇನ್ನೇನು ಬರಲಿರುವ ಅನ್ನಬೋನದಲ್ಲಿ ರಾಜುವಿನ ಬಹುದಿನದ ಆಸೆ ಈಡೇರುವುದರಲ್ಲಿತ್ತು. ಅನ್ನವನ್ನು ಬಚ್ಚಿಡುವುದು ಹೇಗೆಂಬುದು ಮಾತ್ರ ಅವನಿಗೆ ತಲೆನೋವಾಗಿತ್ತು. ರಾಜುವಿನ ಅವ್ವ ಚೆನ್ನಮ್ಮಳ ಶ್ರಮ ಹೇಳ ತೀರದ್ದು. ಅದಕ್ಕಾಗಿ ಸತತ ಆರು ತಿಂಗಳಿನಿಂದ ಸೊಸೈಟಿಯಲ್ಲಿ ಸಿಗುವ ನಾಲ್ಕು ಕೆಜಿ ಅಕ್ಕಿಯಲ್ಲಿ ಒಂದೂ ಮುಕ್ಕಾಗದಂತೆ ಜತನ ಮಾಡಿಕೊಂಡಿಟ್ಟುಕೊಂಡಿದ್ದಳು. ಚೆನ್ನಮ್ಮಳ ಮಗನಿಗಿದು ಗಂಟಲು ಬಿಗಿದಿಡುವ ಸ್ಥಿತಿಯನ್ನೊದಗಿಸಿತ್ತು. ಆದರೂ ಬೋನದ ದಿನದ ತರಹೇವಾರಿ ಅನ್ನದ ಹೆಸರುಗಳನ್ನು ಕೇಳಿಯೇ ಗಪ್ಚುಪ್ಪೆನ್ನದೆ ಸುಮ್ಮನಿದ್ದ. ಚಿತ್ರಾನ್ನ, ಅಕ್ಕಿಪಾಯಸ, ಹುಳಿಯೋಗರೆ, ಕೆಂಬಾತು, ತಂಬಾತು…. ಅನ್ನಗಳೆಲ್ಲ ಕಿವಿಯೊಳಗೆ ಮೋಡದುಂಬಿ ನೆಲನಾಲಗೆಗೆ ತಂಪೆರುಯುತಿದ್ದವು.

ಮಗ ರಾಜುವಿಗೆ ತಾಯಿ ಚೆನ್ನಮ್ಮಳ ಮೇಲೆ ವಿಪರೀತ ಕೋಪವಿತ್ತು. ಅದೊಂದು ಸಿಂಧೂ ನಾಗರೀಕತೆಯಿಂದಿರುವ ಸಿಡುಕು. ‘ಹುಟ್ಟಿದಂದಿನಿಂದ ನಮ್ಮ ಬಡತನಕ್ಕೆಲ್ಲ ಇವಳೇ ಕಾರಣ! ಅಷ್ಟು ಪ್ರೀತಿಸುವ ಅಪ್ಪನು ನಮ್ಮೆನ್ನೆಲ್ಲ ಬಿಟ್ಟು ಹೋಗಲು ಇವಳ ಒಣಕಲು ಅಡುಗೆಯೇ ಸಾಕು!’. ಯಾವಾಗಲೂ ಅವವೇ ಕಡಕಲು ರೊಟ್ಟಿ, ಬಳಕಲು ಮುದ್ದೆಗಳದೇ ಕಾರುಬಾರು. ರೊಟ್ಟಿಗಿಷ್ಟು ಕುರುಶೆಣ್ಣಿ ಚಟ್ನಿ, ಮೆಂತ್ಯೆಚಟ್ನಿ, ಶೇಂಗಾ ಪುಡಿ, ಕುಟ್ಹಿಂಡಿ, ಪುಡ್ಚಟ್ನಿ…. ಆಗಾಗ ಜುಮುಕಿ, ಬಜ್ಜಿ, ಬೇಯ್ಸಿಚಟ್ನಿ! ಮುದ್ದೆಗಾದರೆ ಮತ್ತದೇ ಉತ್ಗ, ತಂಬ್ಳೆ, ಹಸೆಂಬ್ರಾ, ಸೀಪಲ್ಯ, ಹಸೆಸಾರು! ಅಪರೂಪಕ್ಕಾದರೂ ಸರಿಯೇ ಕೊಬ್ಬರಿ, ಒಗ್ಗರಣೆಯನ್ನೇ ಕಾಣದ ಮತ್ತಷ್ಟು ತಿಂಬೋಣಗಳು.. ಗಾರಿಗೆ, ಕಿಲಾಸ, ಕರಿಕಡುಬು, ಹೋಳಿಗೆ, ಸಂಡಿಗೆ ಹುಗ್ಗಿ, ಗೋಧಿ ಹುಗ್ಗಿ…. ‘ಹೀಗೆ ನಮ್ಮ ಬಡತನದ ಬಾವುಟಕ್ಕೆ ನೂರಾರು ನಕ್ಷತ್ರಗಳು! ಊರಿಗೆಲ್ಲ ಕಾಣುವಂತೆ ಅವ್ವ ಮತ್ತೆ ಮತ್ತೆ ಇವುಗಳನ್ನೇ ಹಾರಿಸಿದ್ದು ನಮಗೆ ಬಹುದೊಡ್ಡ ನಾಚಿಗೆಯ ಸಂಗತಿ. ನಮ್ಮ ಅಡುಗೆಯ ಪಟ್ಟಿಯಲ್ಲಿ ಸೂರ್ಯತೇಜದಂಥ ‘ಅನ್ನ’ವೇ ಇಲ್ಲದ್ದು ನಮ್ಮ ಮಹಾಬಡತನಕ್ಕೆ ಮೂಲಕಾರಣ’ ಎಂಬುದು ರಾಜುವಿನ ಬಹುದೊಡ್ಡ ಕೊರಗು.

‘ನಮ್ಮೀ ಬಡತನಕ್ಕೆ ಚಿತ್ರವೈಚಿತ್ರ್ಯ ಅಡುಗೆಯ ಸಾಲೇ ಕಾರಣ..’ವೆಂಬುದು ರಾಜುವನ್ನು ದ್ವೇಷಕ್ಕೆ ತಿರುಗಿಸಿತ್ತು. ಅನ್ನಬೋನದ ದಿನ ಅನ್ನವನ್ನೇ ತಿನ್ನುವ ಹಠಕ್ಕೆ ಬಿದ್ದು ಮಾಡಿಟ್ಟಿದ್ದ ರೊಟ್ಟಿಗಳನ್ನು ಹದಿನೈದು ದಿನಗಳಿಂದ ಮುಟ್ಟಿರಲಿಲ್ಲ. ದಿನಗಳೆದಂತೆ ರೊಟ್ಟಿಗಳು ಒಣಗಿ ಮುರುಟಿ ಹಬ್ಬದ ಮಾರನೆಯ ದಿನಕ್ಕಾಗಿ ಕಾದುಕುಳಿತ ಕಾಡತೂಸುಗಳಂತಾಗಿದ್ದವು. ತಾಯಿ ಚೆನ್ನಮ್ಮಳಂತೂ ‘ಇವ ತಿನ್ನದಿದ್ದರೆ… ಅಜ್ಜಿ ಜುಟ್ಟು ಕೊತ್ತಂಬರಿ ಕಟ್ಟು… ಹಬ್ಬ ಕಳೆಯಲಿ ಮತ್ತಿವೇ ಗತಿ’ ಎಂದುಕೊಂಡು ಬುಸುಗುಡುತ್ತಲೇ ಇದ್ದಳು. ಅನ್ನಬೋನದ ಮಾರನೆಯ ದಿನಕ್ಕಾಗಿಯೇ ಕಾದುಕುಳಿತು ಅಣಕಿಸುತ್ತಿರುವ ರೊಟ್ಟಿ ಸುರುಳಿಯ ಚಕ್ಕೆಗಳನ್ನು ಎಲ್ಲಾದರು ಎಸೆದು ಬಿಡುವ ಯೋಚನೆ ಬಂದಿತಾದರೂ ಅವ್ವಳ ಪೆಟ್ಟಿನ ರುಚಿಗೆ ಮುಗುಮ್ಮಾಗಿರಬೇಕಾಯಿತು. ಇನ್ನೇನು ಬರಲಿರುವ ಅನ್ನವುಣ್ಣುವ ಸಂಭ್ರಮವೇನಾದರೂ ತಪ್ಪಿ ಹೋದೀತೆಂದೂ ಬಗೆದು ತೆಪ್ಪಗಿರಬೇಕಾಯಿತು.

ಬಂಧುಬಳಗಗಳಲ್ಲಿ ರಾಜುವಿನ ಮನೆಯಲ್ಲಿ ಮಾತ್ರ ಇಂಥ ಸಂಕಷ್ಟಗಳಿದ್ದವು ಬಿಟ್ಟರೆ, ಉಳಿದೆಲ್ಲರು ಅನುಕೂಲಸ್ಥರೇ ಆಗಿದ್ದರು. ಪೌರುಷವಾಗಿ ಬತ್ತದೆನೆಗಳಂತೆ ತೊನೆಯುತಿದ್ದರೂ ಕೂಡ. ರಾಜುವಿನ ಪರಿಸರ ಮಳೆ ಕಂಡ ಬೆಳೆಯ ಅತಂತ್ರತೆ. ಆದರೆ ವೈವಿಧ್ಯಗಳಿಗೆ ಕೊರತೆಗಳಿರಲಿಲ್ಲ. ಅದೇನೋ ಭಗೀರಥರಂತೆ ಗಂಗೆಯನ್ನು ತಂದು ಅಕ್ಕಿಯೊಂದನ್ನಷ್ಟೇ ಬೆಳೆಯುವ ಬಂಧುಗಳ ಮುಂದೆ ಅಹಲ್ಯೆಯಂತೆ ಮಳೆರಾಮನಿಗೆ ಕಾದು ಕುಳಿತ ನಿಸ್ತೇಜತೆಯ ಮೂರ್ತಿಯಾಗಿ ಎರೆಹೊಲದೆಂಟೆಗಳು ಅಣಕಿಸುತಿದ್ದವು. ಅನ್ನಬೋನ ಹತ್ತಿರವಾಗುತ್ತಿದ್ದಂತೆ ರಾಜುವಿನ ತಳಮಳಗಳ ಒಂದೆರಡಲ್ಲ. ಅನ್ನವನ್ನೇ ಉಂಡೂ ಉಂಡು ಸಾಕಷ್ಟು ಸರ್ವಿಸ್ಸಿರುವ ಮಂದಿ ಅಂದೆನಗೆ ಅನ್ನ ಉಳಿಸುತ್ತಾರೋ ಇಲ್ಲವೋ ಎಂಬ ದಿಗಿಲು. ಅನ್ನವನ್ನು ಬಚ್ಚಿಡಲಾದೀತೆ? ಅದೂ ಔತಣಕ್ಕೆಂದು ಬಸಿದ ಅನ್ನ. ನೆಂಟರೂರುಗಳಿಗೆ ಅನ್ನವುಣಲೆಂದೇ ಹೋಗುತಿದ್ದಾಗ ‘ಬರಗೆಟ್ಟ ಮಕ್ಕಳಿವು, ಎಲ್ಲಾ ಖಾಲಿ ಮಾಡಿಬಿಡುತ್ತವೆಂದು’ ಬೀರುವಿನೊಳಗೆ ಬಚ್ಚಿಡುತ್ತಿದ್ದ ಸೇಡನ್ನು ತೀರಿಸಿಕೊಳ್ಳಲು ಅವಕಾಶವಾದರೆ… ಹೀಗೆ ಹದಿನೈದಿಪ್ಪತ್ತು ದಿನಗಳಿಂದ ಹಸಿದು ಕೂತಿರುವ ಕುಂಭಕರ್ಣದ ಹೊಟ್ಟೆಗಿದು ಸಾಕಾಗುತ್ತದೋ ಇಲ್ಲವೋ ಎಂದು ಹುತ್ತಗಟ್ಟಿತ್ತು. ಕೊನೆಗೆ ಒಂದು ಬೊಗಸೆಯಷ್ಟಾದರೂ ಉಳಿಸುತ್ತಾರೋ ಇಲ್ಲವೋ ಎಂದು ಬಾಲಸುಟ್ಟ ಬೆಕ್ಕಿನಂತೆ ತವಕಿಸುವುದೇ ಆಯಿತು.

ಮೊದಲೇ ದಡೂತಿ ಮಂದಿ ಸಹವಾಸ ಒಳ್ಳೆಯದಲ್ಲವೆಂದು ಒಂದು ಹಿಡಿಯಷ್ಟಾದರೂ ಬಚ್ಚಿಡಲು ಜೀವ ಹಾತೊರೆಯುತ್ತಿತ್ತು. ಆದರೆ ಪಾಪವದು! ನಮ್ಮನೆಯದೇ ಅನ್ನಬೋನ ಬೇರೆ. ಬಸಿದನ್ನವನ್ನು ತೆರೆದ ಈಚಲಚಾಪೆಗಳಲ್ಲಿ ಹರವಿ ಸತ್ಕರಿಸಬೇಕು. ಅಷ್ಟಲ್ಲದೆ ಆ ಪ್ರಮಾಣದ ಅನ್ನವನ್ನು ಬಚ್ಚಿಡುವುದೂ ಅಸಾಧ್ಯವಿತ್ತು. ಮಗನ ಈ ಬಿಳಿಹೆಂಡತಿಯಂಥ ಅನ್ನಕಾಮಕ್ಕೆ ತಹತಹಿಸುವುದನ್ನು ನೋಡಿ ತಾಯಿ ಚೆನ್ನಮ್ಮ ಬೇಸತ್ತು ಹೋಗಿದ್ದಳು. ಹುಟ್ಟಿದಾಗಿನಿಂದ ಅನ್ನದ್ದೊಂದೇ ಧ್ಯಾನ. ಅವಳ್ಯಾವಳೋ ಮಾಯಗಾತಿಯ ಸೆರಗು ಹಿಡಿದು ಹೋದ ಗಂಡ, ಓದು ಬಿಟ್ಟು ತಿನ್ನುವುದೇ ಬದುಕಿನ ಗುರಿಯೆಂದುಕೊಂಡಿರುವ ಮಗ, ಇದ್ದ ಗುಡಿಸಲನ್ನು ಮನೆಯಾಗಿಸಿಕೊಳ್ಳುವಲ್ಲಿನ ಸೋಲು ಚೆನ್ನಮ್ಮಳನ್ನು ಬಹುವಾಗಿ ಕಾಡಿದ್ದವು. ಪರಿಹಾರಕ್ಕಾಗಿ ಸ್ವಾಮೇರು ಹೇಳಿದ ಈ ಅನ್ನಬೋನವೆಂಬ ಉರುಳು! ‘ನಮ್ದು ಅಂಕ್ಲೇ ಆಗಿರ‌್ಬೋದು, ಮಳೆ ಕಂಡ ಬೆಳೆನೆ… ನಮ್ ಭೂಮಿಸತ್ವ ಆ ಗದ್ದೆಸೀಮೆ ಅನ್ನದಾಗೆಲ್ಲಿದ್ದಾತು..’ ಒಂದೇ ಒಂದು ಅನ್ನಸಂಭ್ರಮೆಗೆ ಮಗ ಹುಚ್ಚನಂತಾಗಿರುವುದಕ್ಕೆ ರೋಸಿ ಹೋಗಿದ್ದಳು. ‘ಮುಗಿಲಿ… ಅದೇನ್ ದಿಕ್ಕು ನಾ ನೋಡ್ತೀನಿ…ಬುಟ್ಟಿ ಸಮೇತ ರೊಟ್ಟಿ ತಿನ್ಲಿಲ್ಲಾ… ನಾನು ಬೆನ್ಕಪ್ಪನ್ ಮಗಳೇ ಅಲ್ಲ..ಅನ್ಕೋತಿನಿ.. ಅಪ್ಪನ ಚಾಳಿ ತಿನ್ನೋ ಅನ್ನದಾಗೆ ಬಂದು ಕೂತತಿ… ಮುರಿದೇ ಬಿಡಲ್ಲ ನಾನಿದನ್ನ… ಕಳಿಲಿ ಇದೊಂದು…’ ವಟಗುಟ್ಟುತ್ತಲೇ ಅನ್ನಬೋನಕ್ಕೆ ಬೇಕಿದ್ದ ಸೌದೆ ಒಟ್ಟುತಿದ್ದಳು.

ಮಗ ಉಣ್ಣುವ ಆಸೆಗೆ ಬಿದ್ದು ಅದೂ ಸಣ್ಣಕ್ಕಿಯಲ್ಲ ಮತ್ತೊಂದಲ್ಲ ಈ ಸೊಸೈಟಿ ಅಕ್ಕಿಯಾಸೆಗೆ ಬಿದ್ದು ಹೊರಳಾಡುತ್ತಿರುವುದು ತಾಯಿ ಚೆನ್ನಮ್ಮಳಿಗೆ ಸಂಕಟವಾಗಿ ನಾನೇನು ಕಮ್ಮಿಯೆಂಬಂತೆ ಬುಟ್ಟಿಯಲಿ ರೊಟ್ಟಿಗಳು ಹೆಚ್ಚಾಗಲು ಮತ್ತಷ್ಟು ಇಂಬಾದಳು. ಕಲಿತದ್ದೊಂದು ಅಡಕೆ ಎಲೆ ತಂಬೂಲದ ರುಚಿಯೊಂದಷ್ಟೆ ಸಾಕಿತ್ತವಳಿಗೆ. ನರನಾಡಿಗಳು ಸೆಟೆದು ಲಟಿಕೆ ಬಂದು ಇನ್ನೇನು ಬಟ್ಟಿಯೊಂದು ಬಿದ್ದು ಒದ್ದಾಡಬೇಕು ಆ ಮಟ್ಟಿಗೆ ರೊಟ್ಟಿ ತಟ್ಟಿ ಮುದ್ದೆ ಮಾಡಿಟ್ಟರೂ ಬೆರಳಿನ ಮೂರುಗೆರೆಯಷ್ಟು ನೀರು ಹಾಕಿಸಿಕೊಂಡು ತನಗೆ ತಾನೆ ಬೆಂದು ಬೆವರುವ ಅಕ್ಕಿ ಇವಳೆಲ್ಲ ಶ್ರಮವನ್ನೀಗ ಅಣಕಿಸುತ್ತಿತ್ತು. ಇದು ಸೆಳೆತವಷ್ಟೆ… ಬೋನದ ದಿನ ಮಗನನ್ನು ಮೊದಲ ಪಂಕ್ತಿಗೇ ಕೂರಿಸಿ ಚಟ ಮುರಿಯುವಂತೆ ನಿವಾಳಿಸಬೇಕೆಂದುಕೊಂಡಳು ಚೆನ್ನಮ್ಮ.

ಬಂಧುಬಳಗವೆಲ್ಲ ಬಾರದಿದ್ದರೇ ಒಳಿತೇನೋ ಎಂದುಕೊಂಡಿದ್ದ ರಾಜುವಿಗೆ ದೇವರು ಕೈ ಹಿಡಿಯಲಿಲ್ಲ. ಅನ್ನಬೋನದ ದಿನ ಯಾವ ಕಷ್ಟದಲ್ಲೂ ಬಾರದ ಸುಖವನ್ನೂ ವಿಚಾರಿಸದವರೆಲ್ಲ ಜಮಾಯಿಸಿ ಆಗಿತ್ತು. ಸಾಲುಸಾಲು ಕಾರು! ಗುಡಿಯ ಮುಂದೆ ಹಸಿದ ಬಂಡಿಯಂತೆ! ರಾಜುವಿಗೆ ಭಯ ತರಿಸಿತ್ತು. ದೇವರ ಕೋರೂಟವೆಲ್ಲ ಮುಗಿದ ಕೂಡಲೆ ಸ್ವಾಮೇರ ಪಂಕ್ತಿಗೂ ಅವಕಾಶ ಕೊಡದೆ ಬೋನದೆಡೆಗೆ ನೆಂಟರು ದಾಂಗುಡಿಯಿಡುತ್ತಾರೆ. ಉಣ್ಣುವ ಜಾಗದ ಮುಂದಿನ ಗುಡಿಸಲ ಮೂಲೆಯಲ್ಲಿದ್ದ ಕಡಕಲು ರೊಟ್ಟಿಗಳ ದರ್ಶನವಾಗಿದ್ದೇ ತಡ…. ಹೂವಿಗೆ ಜೇನು ಮುತ್ತುವಂತೆ. … ರಿಯಾಯಿತಿಯ ಸೀರೆಮೇಳಕ್ಕೆ ನುಗ್ಗುವ ಹೆಂಗಳೆಯರಂತೆ… ಹೊಸದೊಂದು ಆಟಕ್ಕೆ ಓಡಿ ಬರುವ ಮಕ್ಕಳಂತೆ ನೆಂಟರಿಷ್ಟರೆಲ್ಲ ಆ ರೊಟ್ಟಿಯ ಬುಟ್ಟಿಗೆ ಮುತ್ತಿಕೊಳ್ಳುತ್ತಾರೆ. ಸುತ್ತಲೂ ಇರುವೆಯಂತೆ ಸೇರಿದ ಮಂದಿ ಆ ಕಡಕಲು ರೊಟ್ಟಿಗಳನ್ನು ಆನೆಗಳಂತೆ ಮೆಲ್ಲತೊಡಗುತ್ತಾರೆ. ಸಧ್ಯ ರೊಟ್ಟಿಯ ಬುಟ್ಟಿಯನ್ನುಳಿಸಿದ್ದೇ ಹೆಚ್ಚು. ”ರೊಟ್ಟಿ ತಿನ್ನದೆ ಅದೆಷ್ಟು ದಿನಗಳಾಗಿದ್ದವು. ಅದರಲ್ಲೂ ಈ ಕಟಗಲು ರೊಟ್ಟಿಗಳೆಂದರೆ ಅಮೃತಕ್ಕೆ ಸಮಾನ”ವೆಂದು ಸವಿದದ್ದೇ ಬಂತು. ಗಂಡಸರಂತೂ ‘ನಮ್ಮನೆ ಮೂದೇವಿಗಳೂ ಇದ್ದಾವೆ? ಅನ್ನ ಬಸಿಯೋದೊಂದೇ ಗೊತ್ತು. ರೊಟ್ಟಿ ತಟ್ಟೊ ಮುಖಗಳೆ ಅವು…ಎರಡು ಹನಿ ಬೆವರು ಬಿದ್ದರೆ ಸಾಕು… ಉಸ್ಸೆಂದು ಕೂರುತ್ತವೆ’. ಇನ್ನು ಹೆಂಗಳೆಯರಂತೂ ‘ಬಯಲಸೀಮೆಯಲ್ಲಿ ಎರಡು ಗುಂಟೆ ಜಮೀನು ಹಿಡಿದು ಬಿಳ್ಜೋಳ ಬೆಳೆದು.. ಬಿಸಿಲಲ್ಲಿ ಬೆಂದು ಚೀಲ ತುಂಬೋ ತೋಳುಗಳ ಇವು… ಏನಿದ್ರೂ ಕೂಲಿನೋ ಗುತ್ತಿಗೇನೋ ಕೊಟ್ಟು ಮೀಸೆ ತಿರುವುತ್ತವಷ್ಟೆ..ಬರೀ ತಿನ್ನೋಕಾಗಿ ಇದ್ನೆಲ್ಲ ಮಾಡಾದೂ ಅಷ್ಟಕ್ಕಷ್ಟೆ’… ಹೀಗೆ ಮಾತು ತುತ್ತು ಎರಡೂ ಸೇರಿ ನೆಂಚಿಕೊಳ್ಳಲಿಲ್ಲದಿದ್ದರೂ ರೊಟ್ಟಿ ಖಾಲಿಯಾದವು. ಕುರುಶೆಣ್ಣಿ ಪುಡಿ, ಉಪ್ಪು, ಒಂದಿಷ್ಟು ಖಾರಪುಡಿ ಹಾಕಿಕೊಂಡು ಸ್ವಲ್ಪ ನೀರು ಚಿಮುಕಿಸಿಕೊಂಡು ದೇವರ ಪ್ರಸಾದವೆಂಬಂತೆ ಕಬಳಿಸಿ ಬಿಡುತ್ತಾರೆ. ‘ಹೀಗೆಲ್ಲ ತಿನ್ನೋ ಮಂದಿ ಈಗೀಗ ಎರಡು ತಿನ್ನೋ ಕಾಳೂ ಬೆಳೆಯೋಕಾಗದೆ ದುಡ್ಡಿನ ಹಿಂದೆ ಬಿದ್ದು ಅಡಕೆ ಮಾಡೋಕೊಂಟಾವ್ರಂತೆ..’ ಎಂದು ಕಂಡವರ ಮೂದಲಿಕೆಗೊಳಗಾದರೂ ಅದರ ಪರಿವಿಲ್ಲದೆ ತಮ್ಮ ಚಿಂತೆ ಬೊಂತೆಯಲ್ಲೇ ಮುಳುಗಿದ್ದರು.

ತಾಯಿ ಚೆನ್ನಮ್ಮಳಿಗೆ ದಿಗಿಲು, ಮಗ ರಾಜುವಿಗೆ ಖುಷಿಯ ಹೊನಲು. ‘ಅನ್ನದ ರಾಶಿಯೇ ನನ್ನದು! ಅದೆಷ್ಟು ಸವಿಯಬಹುದು!? ದಿನಗಳೇಕೆ ಇಂದೇ ಎಲ್ಲವನು ಸವಿದು ಬಿಡುವೆ! ನೆಂಟರನ್ನೂ ದೇವರೇ ನನಗಾಗಿ ಕಳುಹಿಸಿದ್ದಾನೆ’. ಚೆನ್ನಮ್ಮಳಿಗೆ ಅನ್ನಬೋನದಲ್ಲಿ ಒಂದಗಳನ್ನೂ ಉಳಿಸದಂತೆ ನೇಮವನ್ನು ಪೂರ್ಣಗೊಳಿಸುವ ತವಕ…. ‘ಇದ್ದ ಬದ್ದ ಅಕ್ಕಿಯನ್ನೆಲ್ಲ ಬಸಿದು ಈಚಲು ಚಾಪೆಗೆ ಹರಡಿಯಾಗಿದೆ. ಆದರೆ ಬಂದ ನೆಂಟರೆಲ್ಲ ರೊಟ್ಟಿಗೆ ಮುತ್ತಿಗೊಂಡು ನಮ್ಮ ಭಾಗ್ಯಕ್ಕೇ ಅಡಚಣೆಯಾಗಿದ್ದಾರೆ. ಈ ಕೂಸು ನೋಡಿದರೆ ಅದಕ್ಕೆ ಖುಷಿಪಟ್ಟು ಎಲ್ಲ ತಿಂದು ಬಿಡುವ ನಾಟಕವಾಡುತ್ತಿದೆ. ಇದಕ್ಕೆಲ್ಲೋ ಭ್ರಾಂತು…’ ಮಗನ ಮೇಲೆ ಅಸಹನೀಯ ಕೋಪವೇಳುತ್ತದೆ. ಹೇಗಾದರೂ ಮಾಡಿ ಬಂದ ನೆಂಟರನ್ನು ಅನ್ನದೆಡೆ ತಿರುಗಿಸಲು ಇನ್ನಿಲ್ಲದಂತೆ ಮಾತಿಗಿಳಿಯುತ್ತಾಳೆ… ಅವರೋ ಮುರುಟಿಕೊಂಡ ಆ ಕಾಡತೂಸಿನಂಥ ರೊಟ್ಟಿಗಳನ್ನು ತಮ್ಮ ಹೊಟ್ಟೆ ಕೋಟೆಯೊಳಗಿಳಿಸಿಕೊಂಡು ಕೆನೆಯುತ್ತಿದ್ದಾರೆ. ರಾಜುವಿಗೆ ದಿಗಿಲು ಇವರೆಲ್ಲ ತಮ್ಮ ಮನ ಬದಲಾಯಿಸಿ ಅನ್ನದೆಡೆ ಬಂದರೇನು ಗತಿ? ಲಕ್ಷ್ಯವಿಟ್ಟು ಅವರನ್ನು ಗಮನಿಸ ತೊಡಗುತ್ತಾನೆ.

ಕೆಲವೇ ನಿಮಿಷಗಳ ಮಾತು ಕೇಳಿಯೇ ರಾಜುವಿನ ಹೃದಯ ಒಡೆಯುವುದೊಂದು ಬಾಕಿ. ಅಷ್ಟೊಂದು ಎರಕ ಒಯ್ದ ಮಾತುಗಳು…’ನಮ್ಮ ಡಾಕ್ಟರ್ ಹೇಳುತ್ತಾರೆ ..ಅನ್ನವೊಂದು ಬಿಳಿ ವಿಷ… ಅನ್ನವುಣ್ಣುವುದೇ ರೋಗಕ್ಕೆ ಕಾರಣ… ಅವನೊಬ್ಬನಿದ್ದ ಅನ್ನ ತಿಂದೇ ಸತ‌್ತ, ಹೇಳಿದರೆ ಕೇಳಲಿಲ್ಲ… ಅನ್ನ ತಿನ್ನು; ಆಸ್ಪತ್ರೆ ಸೇರು… ರೊಟ್ಟಿ ತಿನ್ನು; ಗಟ್ಟಿಯಾಗು… ಅನ್ನ ವಿಷ; ರೊಟ್ಟಿ ಪೀಯೂಷ….. ಅದು ಬಂದು ಇವರದ್ದು ಸೊಸೈಟಿ ಅಕ್ಕಿ ಬೇರೆ… ತಿನ್ನೋಕಿಂತ, ಸೂಸೈಡೇ ಗತಿ… ನಮ್ಮ ಮನೆಯಲ್ಲಿದನ್ನು ನಾಯಿಯೂ ಮುಟ್ಟೋಲ್ಲ…’ ಅನ್ನದ ರಾಶಿಯ ಹಿಮದೆದುರು ಕೂತಿದ್ದ ರಾಜುವಿಗೆ ನಾಭಿಯಿಂದೆದ್ದ ಜ್ವಾಲಾಮುಖಿಯ ದಿಗಿಲು. ಎದ್ದವನೆ ದೇವರ ಮುಂದೆ ಕೂತಿದ್ದ ಅವ್ವಳ ಕಾಲಿಗೆ ಬಿದ್ದು ದೊಡ್ಡವೆರಡು ಚೊಂಬು ನೀರು ಕುಡಿದು ಹೋಗಿ ಮಲಗಿ ಬಿಡುತ್ತಾನೆ. ಎಂದೂ ತೋರದ ಈ ವಿನಯ ಕಂಡು ಅವ್ವಳಿಗೆ ಕೋಪ ಕೆರಳುತ್ತದೆ. ಯಾವ ಪುರುಷಾರ್ಥಕ್ಕೆ ನಾನಿದನ್ನು ಮಾಡಬೇಕಿತ್ತು… ಒಂದು ತುತ್ತೂ ತಿನ್ನದೆ ಮಗನೂ ಕೈ ಬಿಟ್ಟ’ ಗೋಳಾಡುತ್ತಾಳೆ. ‘ರಾತ್ರಿ ಹಸಿವಾದರೆ ನಾಯಿಯಂತೆ ತಾನೇ ಎದ್ದು ತಿಂತಾನೆ.. ಬಿದ್ಕೊಳ್ಳಿ ಬೇವರ್ಸಿ ದಂಡಪಿಂಡ… ‘ ಎಂದವಳೇ ಕಂಬಕ್ಕೊರಗಿಕೊಳ್ಳುತ್ತಾಳೆ. ದೇವರ ದೀಪ ಮಂಕಾಗ ತೊಡಗುತ್ತದೆ.

ಮುಂಜಾನೆಗೇ ರಾಜುವಿಗೆ ಹಂಡೆಯಷ್ಟು ಹಸಿವು. ತನಗೇನಾದರೂ ಸಿಕ್ಕರೀಗ ತಿನ್ನಲಾಗುತ್ತದೋ ಇಲ್ಲವೋ ಎಂಬಷ್ಟು ಚಡಪಡಿಸುತ್ತಿರುತ್ತಾನೆ. ‘ಅನ್ನವೋ ರೊಟ್ಟಿಯೋ ಎಲ್ಲವೂ ದೇವರಂಥ ಅವ್ವಳ ಪ್ರಸಾದ ತಾನೆ?’ ಎಂದುಕೊಂಡು ಮೆಲ್ಲನೆ ಹೆಜ್ಜೆಗಳನೇರಿಸುತ್ತಾನೆ. ತಾಯಿಯ ಕಣ್ಣಾಲಿಗಳು ನೆರೆ ಇಳಿದ ಕೆರೆಯಂತಾಗಿರುತ್ತವೆ. ಮಗ ರಾಜು ತನ್ನೆಲ್ಲ ಚೈತನ್ಯ ತುಂಬಿಕೊಂಡು ಹಸಿದು ಕೂರುತ್ತಾನೆ. ಆದರೇನು ಮಾಡುವುದು… ‘ಅನ್ನ ಹಳಸಿತ್ತು-ರೊಟ್ಟಿ ಬಳಿದಿತ್ತು’.

‍ಲೇಖಕರು Admin

October 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: