ಅಯ್ಯಯ್ಯೋ ‘ಏಲಿಯನ್ಸ್‘  

 ಪಾಲಹಳ್ಳಿ ವಿಶ್ವನಾಥ್
ಏಲಿಯನ್ಸ್ ಇದ್ದಾರೆಯೇ? ಇದ್ದರೆ, ಅವರು ಎಲ್ಲಿದ್ದಾರೆ? ಇಲ್ಲಿ ಏಕೆ ಬಂದಿಲ್ಲ?
ವಿಜ್ಞಾನದಲ್ಲಿ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳಿಲ್ಲದಿದ್ದರೂ, ದಶಕಗಳ ಹಿಂದೆಯೇ ವೈಜ್ಞಾನಿಕ ಕಲ್ಪನಾ ಚಲನಚಿತ್ರಗಳು ಈ ಪ್ರಶ್ನೆಗಳಿಗೆ ತನ್ನದೇ ಉತ್ತರವನ್ನು ಕೊಟ್ಟುಕೊಂಡು ನಮಗೆ ಏಲಿಯನ್ಸರ ಪರಿಚಯ ಮಾಡಿಸಿತ್ತು.
ಸ್ಪೇಸ್ ಆಡಿಸ್ಸಿ-೨೦೦೧ (Space Odyssey -2001)
೧೯೬೮. ಚಳಿಗಾಲ ಮುಗಿದಿತ್ತು. ಮಿಶಿಗನ್ ವಿಶ್ವ ವಿದ್ಯಾಲಯದ ಆನ್ ಆರ್ಬರ್ ನಲ್ಲಿ ಓದುತ್ತಿದ್ದ ನಾವು ಕೆಲವು ಗೆಳೆಯರು ಒಂದು ಹೊಸ ಸಿನೆಮಾ ನೋಡಲು ೪೦ ಮೈಲಿ ದೂರದ ಡಟ್ರಾಯಿಟ್ ನಗರಕ್ಕೆ ಹೋಗಿದ್ದೆವು. ಬಹಳ ಹೊಸ ತರಹದ ಸಿನೆಮಾ ಎಂದು ಆಗಲೇ ಬಹಳ ಹೆಸರು ಗಳಿಸಿತ್ತು. ಟಿವಿ ನೋಡುವವರು ಹೆಚ್ಚಾಗುತ್ತ ಸಿನೆಮಾ ನೋಡುವವರು ಕಡಿಮೆಯಾಗುತ್ತಿದ್ದನ್ನು ಎದುರಿಸಲು ಸಿನೆಮಾ ನಿರ್ಮಾಪಕರು ಹೊಸ ಹೊಸ ಆಲೋಚನೆಗಳನ್ನು ಮಾಡಬೇಕಾಗಿತ್ತು. ದೊಡ್ಡ ತೆರೆಗೆ ಸ್ವಾಭಾವಿಕವಾಗಿ ಹೆಚ್ಚು ಜನರನ್ನು ಸೆಳೆಯುವ ಸಾಮರ್ಥ್ಯವಿತ್ತು. ಅದರ ಜೊತೆ ವಿಶೇಷ ತಂತ್ರ ಜ್ಞಾನವೂ ಸೇರಿಬಿಟ್ಟರೆ! ಅಂತಹ ಥಿಯೇಟರು ನಮ್ಮ ಪುಟ್ಟ ಆನ್ ಆರ್ಬರಿನಲ್ಲಿ ಇರಲಿಲ್ಲ. ಇಷ್ಟೇ ಆಗಿದ್ದರೆ ನಾವು ಡೆಟ್ರಾಯಿಟ್ ಗೆ ಹೋಗುತ್ತಿರಲಿಲ್ಲವೋ ಏನೋ!
ನಾವು ಹೋಗಲಿರುವ ಸಿನೆಮಾದ ಕಿರೀಟದಲ್ಲಿ ಇನ್ನೂ ಬೇರೆ ಬೇರೆ ಪುಕ್ಕಗಳಿದ್ದವು. ಆಗ ಇನ್ನೂ ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಿರಲಿಲ್ಲ. ಎಂದು ಇಡುತ್ತಾನೋ ಅದೂ ಗೊತ್ತಿರಲಿಲ್ಲ. ಅಧ್ಯಕ್ಷ ಜಾನ್ ಕೆನೆಡಿ ೧೯೬೧ರಲ್ಲಿ ಆ ದಶಕದೊಳಗೆ ಅಮೆರಿಕನ್ನರನ್ನು ಚಂದ್ರನಲ್ಲಿಗೆ ಕಳಿಸುತ್ತೇವೆ ಎ೦ದು ಅಪೊಲೊ ಯೋಜನೆಯ ಘೋಷಣೆ ಮಾಡಿದ್ದರು. ಹಿಂದಿನ ವರ್ಷವೇ ಅಮೆರಿಕದ ಆಪೋಲೋ-೧ ಪರೀಕ್ಷೆಗಳಲ್ಲಿ ಐದು ನಾವಿಕರು ಸುಟ್ಟು ಹೋಗಿದ್ದರು. ಆದರೂ ಆಪೋಲೋ ಯೋಜನೆ ತಡೆ ಇಲ್ಲದೆ ಮುಂದೆ ಹೋಗುತ್ತಿತ್ತು ಕೂಡ. ಈ ಚಿತ್ರದಲ್ಲಿ ಬಾಹ್ಯಾಕಾಶ ಸಾಹಸ, ಅ೦ತ್ರರ್ ಗ್ರಹ ಪ್ರಯಾಣ ಇತ್ಯಾದಿ ನೋಡಬಹುದೆ೦ದು ಮೊದಲೇ ಪ್ರಚಾರವಿತ್ತು ಅದಲ್ಲದೆ ಈ ಸಿನೆಮಾ ಖ್ಯಾತ ವೈಜ್ಞಾನಿಕ ಕಲ್ಪನಾ ಲೇಖಕ ಆರ್ಥರ್ ಕ್ಲಾರ್ಕ್ (೧೯೧೭-೨೦೧೮) ಬರೆದಿದ್ದ ಪುಸ್ತಕವನ್ನು ಆಧರಿಸಿ ತಯಾರಾಗಿತ್ತು.
ಆಗಲೇ ಕ್ಲಾರ್ಕ್, ಐಸಾಕ್ ಅಸೀಮೋವ ಮತ್ತು ರಾಬರ್ಟ್ ಹೈನಲೈನರ ಜೊತೆ ವೈಜ್ಞಾನಿಕ ಕಲ್ಪನಾ ಸಾಹಿತ್ಯದ ತ್ರಿಮೂರ್ತಿಗಳಲ್ಲಿ ಒಬ್ಬರೆಂದು ಹೆಸರು ಪಡೆದಿದ್ದರು. ೧೯೪೫ರಲ್ಲೇ ಕೃತಕ ಭೂಸ್ಥಿರ ಉಪಗ್ರಹಗಳ ಬಗ್ಗೆ ಸಂಶೋಧನೆ ನಡೆಸಿ ಶೈಕ್ಷಣಿಕ ವಿಜ್ಞಾನ ಜಗತ್ತಿನಲ್ಲೂ ಹೆಸರು ಮಾಡಿದ್ದರು (ಇಂತಹ ಉಪಗ್ರಹಗಳಿಂದಲೇ ಸಂಪರ್ಕ ಕ್ರಾಂತಿ ಸಾಧ್ಯವಾಯಿತು). ದೊಡ್ಡ ನಟ, ನಟಿ? ಮಾರ್ಲನ್ ಬ್ರಾಂಡೊ? ಇಲ್ಲ. ಆದರೆ ಸಾಮರ್ಥ್ಯ ಇರುವ ನಿರ್ದೇಶಕರಿದ್ದರು. ಅವರು ಆಗಲೇ ಹಲವು ಪ್ರಸಿದ್ಧಿಯಾದ ಸಿನೆಮಾಗಳ ನಿರ್ದೇಶಕ ಸ್ಟಾನ್ಲೀ ಕ್ಯುಬ್ರಿಕ್. (೧೯೨೮-೧೯೯೯).  ಸ್ಪಾರ್ಟಕಸ್, ಡಾಕ್ಟರ್ ಸ್ಟ್ರೇಂಜ್ ಲವ್, ಲೊಲಿತಾ ಇತ್ಯಾದಿ ಸಿನೆಮಾಗಳನ್ನು ತಯಾರಿಸಿದ್ದರು. ತಾನು ಮಾಡುವ ಎಲ್ಲ ಕೆಲಸಗಳಲ್ಲೂ ಪರಿಪೂರ್ಣತೆ ಇರಬೇಕೆಂದು ಚಿತ್ರ ನಿರ್ಮಾಣದಲ್ಲಿ ತನ್ನದೇ ಮಟ್ಟಗಳನ್ನು ಇಟ್ಟುಕೊಂಡು ಅವುಗಳನ್ನು ಏರಲು ಪ್ರಯತ್ನಿಸುತ್ತಿದ್ದ ವ್ಯಕ್ತಿ!
ಗ್ರೀಕ ಮಹಾಕವಿ ಹೋಮರನ ಆಡೆಸ್ಸಿ (ಕೆಲವರು ಓಡೆಸ್ಸಿ ಎನ್ನುತ್ತಾರೆ) ನಾಯಕ ಆಡೆಸ್ಸಿಯಸ್ ನ (ಯೂಲಿಸಿಸ್) ಪ್ರಯಾಣವನ್ನು ವಿವರಿಸುತ್ತದೆ; ಟ್ರಾಯ್ ಯುದ್ಧದ ನಂತರ ಅವನು ವಾಪಸ್ಸು ತನ್ನ ಊರು ಇಥಕಾ ಸೇರುವ ತನಕ ಅವನ ಸಾಹಸಗಾಥೆ ಹೋಮರನ ಪುಸ್ತಕದ ಕಥಾವಸ್ತು. ಅದೇ ಧಾಟಿಯಲ್ಲಿ ಈ ಚಿತ್ರ ಬಾಹ್ಯಾಕಾಶದಲ್ಲಿನ ಸಾಹಸವೊದನ್ನು ತೋರಿಸುತ್ತದೆ ಎಂಬ ನಿರೀಕ್ಷೆಯನ್ನು ಈ ಚಿತ್ರದ ಶೀರ್ಷಿಕೆ ಕೊಟ್ಟಿತ್ತು. ಚಿತ್ರ ಮಂದಿರವೇನೋ ದೊಡ್ಡದಿತ್ತು, ಕೆಲವು ಮುಂಬಯಿ ಚಿತ್ರರಮಂದಿರಗಳ ತರಹ. ಸಿನೆಮಾ ಪ್ರಾರಂಭದಲ್ಲಿಯೇ ಭರ್ಜರಿ ಸಂಗೀತ. ವಿಶ್ವ ಸೃಷ್ಟಿಯ ಮೊದಲ ಕ್ಷಣಗಳಲ್ಲಿ ಇಂತಹ ಸಂಗೀತವೇ ಇದ್ದಿತೋ ಏನೋ! ಆನಂತರ ತಿಳಿಯಿತು ಅದು ರಿಚರ್ಡ್ ಸ್ಟ್ರಾಸ್ ಎಂಬುವವರ ‘ದಸ್ ಸ್ಪೇಕ ಜರಾತುಷ್ಟ್ರ (Thus spake Zarathustra)’ ರಚನೆ ಎಂದು. ಖ್ಯಾತ ತತ್ವ ಶಾಸ್ತ್ರಜ್ಞ ನೀಟ್ಶೆಯ ಪುಸ್ತಕದ ಶೀರ್ಷಿಕೆ; ಪುಸ್ತಕದಲ್ಲಿ ಅವನು ಇಂದಿನ ಜಗತ್ತನ್ನು ಮೆಟ್ಟಿ ಮೇಲೆ ಹೋಗಬೇಕಾಗಿದ್ದ ಓವರಮ್ಯಾನ್/ಸೂಪರಮ್ಯಾನ್ ಬಗ್ಗೆ ಬರೆಯುತ್ತಾನೆ.
ಆ ಸಂಗೀತದ ಅಮಲು ಕಡಿಮೆಯಾಗುತ್ತ ಮೊದಲನೆಯ ದೃಶ್ಯ ೪ ಮಿಲಿಯ ವರ್ಷಗಳ ಹಿಂದೆ ವಿಕಾಸ ನಡೆದು ಆದಿ ಮಾನವರ ಘಟ್ಟಕ್ಕೆ ಬಂದಿದೆ. ಇನ್ನೂ ಕಾಡುಪ್ರಾಣಿಗಳ ಜೊತೆ ಕಾದಾಡುತ್ತಾ ಸಾಯುತ್ತಾ, ಸಾಯಿಸುತ್ತಾ ಇರುವ ದಿನಗಳು. ಅಲ್ಲಿ ಅಂತಹವರ ಗುಂಪೊಂದು ಒ೦ದು ನೀರಿನ ಹೊಂಡದ ಸುತ್ತ ನೆರೆದಿವೆ. ಅವು ನೀರು ಕುಡಿಯುತ್ತಿದ್ದಾಗ ಇನ್ನೊಂದು ಗುಂಪು  ಬಂದು ಜಗಳವಾಡಿ ಮೊದಲ ಗುಂಪನ್ನು ಓಡಿಸುತ್ತೆ. ಹಾಗೆ ನೀರು ಕುಡಿದು ಅಲ್ಲಿಯೇ ಮಲಗುತ್ತವೆ. ಬೆಳಗಾಗುತ್ತ ಒಬ್ಬ ನಿಧಾನವಾಗಿ ತನ್ನ ಕಣ್ಣು ತೆರೆಯುತ್ತಾನೆ. ಒ೦ದು ಎತ್ತರದ, ಅಗಲದ ನುಣುಪಾದ ಹಾಸುಗಲ್ಲಿನ ಆಕಾರದ ಕಪ್ಪು ಶಿಲೆ ಕಾಣಿಸುತ್ತದೆ. ಅಲ್ಲಿ ಅದನ್ನು ಬಿಟ್ಟು ಹೋದವರು ಯಾರೋ ಗೊತ್ತಿಲ್ಲ. (ನಮಗಿಂತ ಹೆಚ್ಚು ತಂತ್ರಜ್ಞಾನ  ಹೊಂದಿರುವ ಮತ್ತು ಭೂಮಿಯ ಮೇಲೆ ಕಣ್ಣಿಟ್ಟಿರುವ ನಾಗರೀಕತೆ?)   ಅದನ್ನು ನೋಡಿ ಅವನಿಗೆ ಭಯವಾದರೂ ನಿಧಾನವಾಗಿ ಕುತೂಹಲ ಹುಟ್ಟುತ್ತದೆ. ಅವರಲ್ಲಿ ಒಬ್ಬ ಅದನ್ನು ಮುಟ್ಟುತ್ತಾನೆ. ತಕ್ಷಣ ಅವನಿಗೆ ಬೆಂಕಿ ಮಾಡುದವ ವಿಧಾನ ತಿಳಿಯುತ್ತದೆ. ಹಾಗೆಯೇ ಉಪಕರಣಗಳನ್ನು, ಆಯುಧಗಳನ್ನು ತಯಾರಿಸುತ್ತಾನೆ. ಪ್ರಾಣಿಗಳ ಮೇಲೆ ಅಧಿಪತ್ಯ ಬರುತ್ತದೆ, ನಾಗರೀಕತೆ ಬೆಳೆಯುತ್ತದೆ.

ಇಸವಿ ೨೦೦೧.  ಮಾನವ ಜೀವನದಲ್ಲಿ ಪ್ರಗತಿಯಾಗಿ ಅವನು  ಚಂದ್ರನಿಗೆ ಹೋಗಿಬರುವ ಘಟ್ಟವನ್ನು ಮುಟ್ಟಿದ್ದಾನೆ. ಅಲ್ಲಿ ವಾಸ ಮಾಡಲು ಕೂಡ ಕಲಿತಿರುತ್ತಾನೆ. ಇದ್ದಕ್ಕಿದ್ದ ಹಾಗೆ ಅಲ್ಲಿಯ ಒಂದು ಅಗಾಧ ಗುಳಿಯಲ್ಲಿ ಗುರುತ್ವದ ಏರು ಪೇರು ಕಾಣಿಸುತ್ತದೆ. ಅಲ್ಲಿ ಹೋಗಿ ನೋಡಿದರೆ ಹೊಳೆಯುವ ದೊಡ್ಡ ಕರಿಯ ಹಾಸುಗಲ್ಲಿನ ಆಕಾರದ ಶಿಲೆ ಕಾಣಿಸ್ಕೊಳ್ಳುತ್ತದೆ. ಮನುಷ್ಯ ತನ್ನ ಜೀವನದಲ್ಲಿ  ಒಂದೊಂದು ಮುಖ್ಯ ಘಟ್ಟ ತಲುಪಿದಾಗ ಈ ಶಿಲೆ ಕಾಣಿಸಿಕೊಳ್ಳುತ್ತದೆ! ಅದು ಗುರುಗ್ರಹದಿಂದ ಬಂದಿರಬಹುದೋ ಎನೋ ಎಂದು ಅಲ್ಲಿಗೂ ಹೋಗುವ ಯೋಚನೆ ಮಾಡುತ್ತನೆ ಈ ಗುರುಗ್ರಹದ ಪ್ರಯಾಣಕ್ಕೆ ಇಬ್ಬರು ಮನುಷ್ಯರು (ಬೋಮನ್ ಮತ್ತು ಪೂಲ್) ಮತ್ತು ಒ೦ದು ಕಂಪ್ಯೂಟರ್ – ಹೆಸರು ಹಾಲ್ – ಹೋಗುತ್ತಾರೆ. ನೌಕೆಯನ್ನು ನಡೆಸುವ ಜವಾಬ್ದಾರಿ ಹಾಲ್ ಗೆ ಕೊಟ್ಟಿರುತ್ತಾರೆ. ಆದರೆ ಹಲವಾರು ಕಾರಣಗಳಿಂದಾಗಿ ಮನುಷ್ಯರಿಗೂ ಕಂಪ್ಯೂಟರಿಗೂ ವೈಮನಸ್ಯ ಶುರುವಾಗುತ್ತೆ. ಹಾಲ್ ತಾನು ಮಾಡಿದ ಒಂದು ದೊಡ್ಡ ತಪ್ಪನ್ನು ಒಪ್ಪಿಕೊಳುವುದಿಲ್ಲ. ಅವನನ್ನು ನಿಷ್ಕ್ರಿಯೆ ಮಾಡುವ ಯೋಚನೆಯನ್ನು ಹಾಲ್ ಗ್ರಹಿಸುತ್ತದೆ ಮತ್ತು ಸಹ ನಾವಿಕ ಪೂಲ್ ನನ್ನು ಕೊಲೆ ಮಾಡುತ್ತದೆ. ನ೦ತರ ಬೋಮನ್ ಹೇಗೋ ಯಂತ್ರಕ್ಕೆ ವಿದ್ಯುತ್ ಹೋಗದಂತೆ ಮಾಡಿ ಹಾಲ್ ಅನ್ನು ನಿಷ್ಕ್ರಿಯೆ ಮಾಡುತ್ತಾನೆ. ಹಾಗೆಯೇ ಪ್ರಯಾಣ ಮುಂದುವರಿಯುತ್ತದೆ. ಗುರುಗ್ರಹದಲ್ಲೂ ಅವನಿಗೆ ಹೊಸ ಅನುಭವಗಳು ಎದುರಾಗುತ್ತವೆ. ಚಿತ್ರದ ಕೊನೆಯಾಗುತ್ತ ಮತ್ತೆ ಕಪು ಶಿಲೆ ಕಾಣಿಸ್ಕೊಳ್ಳುತ್ತದೆ.
ಸುಮಾರು ಎರಡು ಮುಕ್ಕಾಲು ಗಂಟೆ ನಡೆಯುವ ಮತ್ತು ಮೊದಲು ೩೦ ನಿಮಿಷ ಯಾವ ಸಂಭಾಷಣೆಯೂ ಇಲ್ಲದ ಈ ಸಿನೆಮಾವನ್ನು ಕೆಲವರು ಮಹಾ ಬೋರ್ ಎಂದು ವರ್ಣಿಸಿದ್ದಾರೆ. ಅದಲ್ಲದೆ ಅಂದಿನವರಿಗೂ (ಅಂದರೆ ನನ್ನಂತಹವರಿಗೂ) ಸ್ವಲ್ಪ ನಿಧಾನವೆ ಎನ್ನಿಸಿದ ಸಿನೆಮಾವಿದು. ಚಿತ್ರದ ಹಲವಾರು ಭಾಗಗಳಲ್ಲಿ ಒಳ್ಳೆಯ ಪಾಶಿಮಾತ್ಯ ಅಭಿಜಾತ ಸಂಗೀತವಿದೆ. ನನಗೆ ಆಗ ಅದರ ಪರಿಚಯ ಸ್ವಲ್ಪ ಮಾತ್ರ ಇತ್ತಾದರೂ ಸಂಗೀತ  ಕೇಳುವುದೇ ಒಳ್ಳೆಯ ಅನುಭವವಾಗಿತ್ತು. ನಿರ್ದೇಶಕರು ಸಂಗೀತದ ಬಗ್ಗೆಯೂ ಬಹಳ ಮುತುವರ್ಜಿ ವಹಿಸಿದ್ದರು ಎಂದು ಅನಂತರ  ಓದಿದ್ದೆ.
ಚಿತ್ರದ್ದ ಇನ್ನೊಂದು ಮುಖ್ಯ ವಿಷಯವೆಂದರೆ ಅದು ಕ್ಯುಬ್ರಿಕ್ ಮತ್ತು ಕ್ಲಾರ್ಕ್ ಇದರಲ್ಲಿ ಮನುಷ್ಯ ಮತ್ತು ಯಂತ್ರಗಳ(ಕಂಪ್ಯೂಟರ್) ಸಂಬಂಧದ ಬಗ್ಗೆ ಒಂದು ಸ್ವಾರಸ್ಯಕರ ವ್ಯಾಖ್ಯೆಯನ್ನೇ ಬರೆದಿದ್ದಾರೆ. ಕಂಪ್ಯೂಟರ್ ಹಾಲ್ ಮೊದಲು ಸಮರ್ಪಕವಾಗಿಯೇ ಕೆಲಸ ಮಾಡುತ್ತಿರುತ್ತೆ. ಅದರ ಮೇಲೆ ಹೆಚ್ಚು ಜವಾಬ್ದಾರಿಗಳನ್ನು ವಹಿಸಿದಾಗ ಅದಕ್ಕೆ ಗೊಂದಲಗಳು ಪ್ರಾರಂಭವಾಗುತ್ತವೆ. ಮಧ್ಯೆ ಅದಕ್ಕೆ ಏನೋ ಸಂಶಯಗಳು ಬರುತ್ತೆ ಮತ್ತು ಸೇಡಿನ ವಿಷಯದಲ್ಲಿ ಆದರ ಕರ್ತೃ ಮಾನವನ ತರಹವೆ ವರ್ತಿಸಿ ಸಹ ಪ್ರಯಾಣಿಕನನ್ನು ಕೊಲೆ ಮಾಡುತ್ತದೆ. ಯಂತ್ರಗಳನ್ನು ಎಷ್ಟೋ ಅಷ್ಟರಲ್ಲಿ ಇಡಬೇಕು ಎನ್ನುವ ಸಂದೇಶವಿರುವ ಹಾಗಿದೆ!
ತಂತ್ರಜ್ಞಾನದ ಉಪಯೋಗದ ಬಗ್ಗೆ ಕ್ಯುಬ್ರಿಕ್ ಬಹಳ ಹುಶಾರಾಗಿ ನಡೆದುಕೊಳ್ಳಬೇಕಿತ್ತು. ಕಲ್ಪನೆ ಅಗತ್ಯವಾಗಿತ್ತು ಆದರೆ ಆದಷ್ಟೂ ವಾಸ್ತವಿಕೆಯ ಗಡಿಯನ್ನು ದಾಟದಂತೆ ನೋಡಿಕೊಳ್ಳಬೇಕಿತ್ತು. ಅದಲ್ಲದೆ ನ್ಯಾಸಾ ಯೋಜನೆಗಳಿಗಿಂತ ವೇಗವಾಗಿ ಸಿನೆಮಾ ಜನರನ್ನು ತಲುಪಬೇಕಿತ್ತು. ಇಲ್ಲದಿದ್ದಲಿ ಮಾಮೂಲಿ ಸಿನೆಮಾ ಎಂಬ ಧೋರಣೆ ಬರಬಹುದು ಎಂಬ ಯೋಚನೆ ಅವರಿಗಿತ್ತು.  ಸಿನೆಮಾ ಬಿಡುಗಡೆಯಾದಾಗ ತಂತ್ರಜ್ಞಾನದ ಬಳಕೆಯ ಬಗ್ಗೆ ಅವರಿಗೆ ಬಹಳ ಹೊಗಳಿಕೆ ಸಿಕ್ಕಿತು. ಕಡೆಯಲ್ಲಿ ಅಮೆರಿಕಾದಲ್ಲಿ ಈ ಸಿನೆಮಾ ಆ ವರ್ಷದಲ್ಲಿ ಗಳಿಸಿದಷ್ಟು ಹಣವನ್ನು ಇತರ ಯಾವ ಸಿನೆಮಾವೂ ಗಳಿಸಲಿಲ್ಲವಂತೆ. ಕ್ಯುಬ್ರಿಕ್ ರ ಪ್ರಕಾರ “ಮೂಲತಃ ಈ ಚಿತ್ರ ಒಂದು ಚಕ್ಷುಗಳಿಗೆ ಸಿಗುವ ಮೌಖಿಕ ಅನುಭವ – ಸಂಗೀತ ಅಥವಾ ಚಿತ್ರಕಲೆಯಂತೆ ವೀಕ್ಷಕನನ್ನು ಪ್ರಜ್ಞೆಯ ಆಂತರಿಕ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ.”
ಬಾಹ್ಯಾಕಾಶ ಚಿತ್ರವಾದರೂ ಇಲ್ಲಿ ನಮಗೆ ಯಾವ ಏಲಿಯನ್ಸ್  ಕಾಣುವುದಿಲ್ಲ; ಅವುಗಳ ಕೈವಾಡ ಮಾತ್ರ! ಅವರನ್ನುತೋರಿಸುವ ಯೋಚನೆ ಮೊದಲು ನಿರ್ದೆಶಕರಿಗೆ ಇತ್ತಂತೆ. ಅದರೆ ಅವು ಯಾವ ತರಹ ಇರಬಹುದು ಎ೦ದೆಲ್ಲಾ ಗೊಂದಲಗಳಾದಾಗ ಸಲಹಗಾರರಾಗಿದ್ದ ಕಾರ್ಲ್ ಸಾಗನ್ ಕ್ಯುಬ್ರಿಕ್ ರಿಗೆ ಆ ಯೋಚನೆಯನ್ನು ಕೈ ಬಿಡಲು ಹೇಳಿದರಂತೆ. ಇಲ್ಲಿ ಏಲಿಯನ್ಸ್ ರನ್ನು ಪ್ರತಿನಿಧಿಸುವುದು  ಆ ಕಪ್ಪು ಹಾಸುಗಲ್ಲು. ಬೇರೆ ನಾಗರೀಕತೆ ನಮ್ಮ ಮೇಲೆ ಪ್ರಭಾವ ಬೀರಿತೆಂಬುದನ್ನು ಕ್ಯುಬ್ರಿಕ್  ಮತ್ತು ಕ್ಲಾರ್ಕ್ ನಂಬಿರಲಿಕ್ಕಿಲ್ಲ. ಆದರೆ ಅದನ್ನು ನಿಜವಾಗಿಯೂ ನಂಬುವವರು ಬಹಳ ಜನ ಹಿಂದೆಯೂ ಇದ್ದರು ಈಗಲೂ ಇದ್ದಾರೆ.
ವಾನ್ ಡನಿಕಿನ್ (೧೯೩೫- ) ಎಂಬ ವ್ಯಕ್ತಿ ಈ ವಿಷಯದ ಬಗ್ಗೆ ೧೯೬೮ರಲ್ಲಿ ‘ದ ಚಾರಿಯಟ್ಸ್ ಆಫ್ ದ ಗಾಡ್ಸ್’ (ದೇವತೆಗಳ ವಾಹನಗಳು) ಬರೆದರು. ಈ ಪುಸ್ತಕದ  ಪ್ರಕಾರ ಈಜಿಪ್ಟಿನ ಪಿರಮಿಡ್ಡುಗಳು, ಈಸ್ಟರ್ ದ್ವೀಪದ ಅಗಾಧ ಪ್ರತಿಮೆಗಳು, ನಮ್ಮ ಎಲ್ಲೋರಾ ಇತ್ಯಾದಿಗಳಿಗೆ ಕಾರಣ ಮಾನವನಲ್ಲ; ಹೊರ ಗ್ರಹಗಳಿಂದ, ಅಂತರ್ ನಕ್ಷತ್ರ ಯಾನ ಕಲಿತ ನಮಗಿಂತ ಬುದ್ಧಿವಂತ ಜನ, ಈ ಸ್ಮಾರಕಗಳನ್ನು ನಿರ್ಮಿಸಿ ಹೋಗಿದ್ದಾರಂತೆ! ಈ ವಿಚಿತ್ರ ಅಭಿಪಾಯಗಳನ್ನು ಹೊಂದಿದ್ದರೂ ಈ ಪುಸ್ತಕ ಬಹಳ ಖ್ಯಾತಿ ಗಳಿಸಿತು ಮತ್ತು ಈಗಲೂ ಬಹಳ ಜನ ಓದುತ್ತಾರಂತೆ. ಮಾನವನ ಸಾಮರ್ಥ್ಯವನ್ನು ಇಂತಹ ನಂಬಿಕೆಗಳು ಅಲ್ಲಗಳೆಯುತ್ತವೆ. ಕಾರ್ಲ್ ಸಾಗನ್ ಈ ಪುಸ್ತಕದ ಬಗ್ಗೆ  ಹೀಗೆ ಹೇಳಿದ್ದರು “ಇಂತಹ ಯೋಚನೆಗಳು ಜನರನ್ನು ಆಕರ್ಷಿಸುತ್ತಿರುವುದು ನಿರಾಶೆಯನ್ನು ಉಂಟು ಮಾಡುತ್ತದೆ. ಬಹಳ ತಪ್ಪುಗಳಿರುವ ಪುಸ್ತಕವಿದು” ಏನೇ ಆಗಲಿ, ವಾನ್ ಡಾನಿಕೆನ್ ಪುಸ್ತಕಗಳನ್ನು ಬರೆಯುತ್ತಲೇ ಹೋದರು, ಜನ ಓದುತ್ತಲೇ ಹೋದರು! ಸಾಗನ್ ಹೇಳಿದಂತೆ ಈ ನಂಬಿಕೆಗಳು ಜನರಲ್ಲಿ ಇನ್ನೂ ಇರುವುದು ಶೋಚನೀಯ.
ನಮಗೆ ಸಾಧ್ಯವಾಗುವ ವೇಗವನ್ನು ಅತಿ ಹೆಚ್ಚು (೧೦ರಷ್ಟು?) ಮಾಡಿಕೊಂಡರೂ ಹತ್ತಿರದ ಆಲ್ಫ ಸೆಂಟೋರಿ ನಕ್ಷತ್ರಕ್ಕೆ ಹೋಗಲು ನಮಗೆ ಎಪ್ಪತ್ತು ಸಾವಿರ- ಒಂದು ಲಕ್ಷ ವರ್ಷಗಳು ಬೇಕಾಗಬಹುದು. ಇದಕ್ಕೆ ಇಂಧನವನ್ನು ಹೇಗೆ ಪೂರೈಸುವುದು? ಅಂತಹ ನೌಕೆಯನ್ನು ನಾವು ಹೇಗೆ ನಿರ್ಮಿಸುವುದು? ಮತ್ತೆ ನಾವು ಬದುಕುವುದು ೧೦೦-೧೨೦ ವರ್ಷಗಳು ಮಾತ್ರ. ಆದ್ದರಿಂದ ನಾವು ಬೇರೆ ಗ್ರಹಗಳಿಗೆ ಹೋಗುವುದು ಈಗ ಅಸಾಧ್ಯ. ಇದೇ ರೀತಿ ಏಲಿಯನ್ಸ್ ಇದ್ದರೂ ಅವರೂ ಇದೇ ಭೌತವಿಜ್ಞಾನದ ನಿಯಮಗಳನ್ನು ಪಾಲಿಸಬೇಕಾದ್ದರಿಂದ ಇವೇ ಸಮಸ್ಯೆಗಳು ಇರುತ್ತವೆ. ಆದ್ದರಿಂದ ನಾವು ಅಲ್ಲಿಗೆ ಹೋಗುವುದಾಗಲೀ ಅವರು ಇಲ್ಲಿಗೆ ಬರುವುದಾಗಲೀ ಈಗ ಅಸಾಧ್ಯ. ಆದ್ದರಿಂದ ನಮಗೆ ಇರುವುದು ಒಂದೇ ದಾರಿ ರೇಡಿಯೊ ತರಂಗಗಳನ್ನು ಕಳಿಸಿ ವಾಪಸ್ಸು ಅವುಗಳಿಗಾಗಿ ಕಾಯುವುದು. ಅಂದರೆ ರೇಡಿಯೊ ಸಂಪರ್ಕವೊವೊಂದೇ ಸಾಧ್ಯ. ಉದಾಹರಣೆಗೆ ಪಕ್ಕದ ನಾಲ್ಕು ಜ್ಯೋತಿರ್ವರ್ಷ ದೂರ ಇರುವ ಆಲ್ಫ ಸೆಂಟೋರಿಯ ಗ್ರಹಕ್ಕೆ ರೇಡಿಯೊ ತರಂಗಗಳಲ್ಲಿ ಸಂದೇಶ ಕಳಿಸಿ ಅಲ್ಲಿ ಯಾರಾದರೂ ಇದ್ದು ಉತ್ತರಿಸಿದ್ದರೆ ಅದು ನಮ್ಮನ್ನು ಸೇರಬೇಕಾದರೆ ಒಟ್ಟು ೮ ವರ್ಷ. ಮತ್ತೊಂದು ರೀತಿ? ಕಲ್ಪನಾ ಸಾಮ್ರಾಜ್ಯದಲ್ಲಿ ವಿಹರಿಸಬಹುದಷ್ಟೆ!
ಏಲಿಯನ್ಸ್
ಅಮೆರಿಕದಲ್ಲಿ ೧೯೪೭ರಲ್ಲಿ ನ್ಯೂ ಮೆಕ್ಸಿಕೊ ಪ್ರಾಂತ್ಯದ ರಾಸ್ವೆಲ್ ಎಂಬ ಊರಿನ ಬಳಿ ಒಂದು ಬಾಹ್ಯಾಕಾಶ ನೌಕೆಯ ಅಪಘಾತವಾಯಿತು ಎಂಬ ಸುದ್ದಿ ಹರಡಿ ಅದಕ್ಕೆ ಅಲ್ಲಿಯ ಮಿಲಿಟರಿಯವರೂ ಪ್ರಾಶಸ್ತ್ಯ ಕೊಟ್ಟಿದ್ದಕ್ಕೋ ಏನೋ ಹಾರುವ ತಟ್ಟೆಗಳ ಪ್ರಾಮುಖ್ಯತೆ ಹೆಚ್ಚಾಯಿತು. ಕೆನೆತ್ ಆರ್ನಾಡ್ ಎಂಬ ವಿಮಾನ ಚಾಲಕರು “ನಾನು ಹಲವಾರು ಹಾರಾಡುವ ತಟ್ಟೆಗಳನ್ನು ವೀಕ್ಷಿಸಿದ್ದೆ“ ಎಂದಿದ್ದೂ  ಮುಖ್ಯವಾಯಿತು. ಅಂದಿನಿಂದ ಇಂದಿನವರೆಗೆ ಹಾರಾಡುವ ತಟ್ಟೆಗಳ ಬಗ್ಗೆ ಲಕ್ಷಗಟ್ಟಲೆ ಸುದ್ದಿಗಳು ಬಂದಿವೆ, ಬರುತ್ತಲೆ ಇರುತ್ತವೆ. ಇವುಗಳಲ್ಲಿ ಹೆಚ್ಚಿನವು ತಪ್ಪಾಗಿ ಗುರುತಿಸಲ್ಪಟ್ಟಿವೆ ಎಂಬುದು ಅನೇಕ  ವಿಜ್ಞಾನಿಗಳ ನಂಬಿಕೆ. ಕೆಲವು ಮೋಡಗಳು ಹಾರಾಡುವ ತಟ್ಟೆಯ ಆಕಾರವನ್ನೇ ಹೊಂದಿರುವುದನ್ನು ವಿಜ್ಞಾನಿಗಳು ತೋರಿಸಿದ್ದಾರೆ. ಅದಲ್ಲದೆ ವಿಮಾನ, ಉಪಗ್ರಹಗಳು ಮತ್ತು ಉಲ್ಕೆಗಳು, ಖಗೋಳದ ಇತರ ಪ್ರಕಾಶಮಾನ ಕಾಯಗಳು ಕೂಡ ಒ೦ದೊ೦ದು ಸಮಯದಲ್ಲಿ ಹಾರುವ ತಟ್ಟೆಗಳ ತರಹವೆ ಕಾಣಿಸಿರಬಹುದು. ಬೇಕು ಬೇಕೆಂದು ಮೋಸದ ವರದಿಗಳೂ ಇವೆ. ಆದರೆ ಸುಮಾರು ಶೇ.೧೦ ಅವಲೋಕನಗಳಿಗೆ ಸರಿಯಾದ ಕಾರಣಗಳು ಸಿಗುತ್ತಿಲ್ಲ ಎಂದು ಹೇಳುತ್ತಾರೆ. ಆದರೆ, ಹೆಚ್ಚು ಮಾಹಿತಿ ಇದ್ದಲ್ಲಿ ಇವಕ್ಕೂ ಅತಿಶಯದ ವಿವರಣೆಗಳು ಬೇಕಾಗುವುದಿಲ್ಲ ಎಂದು ವಿಜ್ಞಾನಿಗಳ  ನಂಬಿಕೆ.
ಸ್ಪೇಸ್-೨೦೦೧ ಅಮೆರಿಕದಲ್ಲಿ ಮೊದಲ ಬಾರಿ ಪ್ರದರ್ಶನವಾಗುತ್ತಿದ್ದಾಗ ಅಲ್ಲಿಯ ಒಹಾಯೊ ಪ್ರಾ೦ತ್ಯದ ಸಿನ್ ಸಿನಾಟಿ ನಗರದಲ್ಲಿ ಹುಟ್ಟಿದ ಯುವಕನೊಬ್ಬನ ಮೇಲೆ ಆ ಚಿತ್ರ ಬಹಳ ಪ್ರಭಾವವನ್ನು ಉಂಟು ಮಾಡಿರಬೇಕು. ಅವರೇ ಸ್ಟೀವನ್ ಸ್ಪೀಲ್ಬರ್ಗ್ (೧೯೪೬-). ಇಂದು ಹಾಲಿವುಡ್ ನಿರ್ದೇಶಕರ ಪಟ್ಟಿಯಲ್ಲಿ  ಇವರದ್ದು ಮೊದಲನೆಯ ಹೆಸರು. ವಿವಿಧ ವಿಷಯಗಳ ಬಗ್ಗೆ ಚಿತ್ರಗಳನ್ನು ನಿರ್ದೇಶಿಸಿರುವ  ಸ್ಟೀವನ್ ಏಲಿಯನ್ಸ್ ಬಗ್ಗೆ ಎರಡು ಖ್ಯಾತ ಸಿನೆಮಾಗಳನ್ನು ನಿರ್ದೇಶಿಸಿದರು. ಆ ಚಿತ್ರಗಳು: ಮೂರನೆಯ ವಿಧದ ಸಂಪರ್ಕ (ಕ್ಲೋಸ್ ಎನ್ ಕೌಂಟರ್ಸ್ ಆಫ್ ಫ಼ದ ಥಿರ್ಡ್  ಕೈಂಡ್ – Close encounters opf the third kind ) ಮತ್ತು ಇ. ಟಿ (ಎಕ್ಸ್ಟ್ರಾ ಟೆರೆಸ್ಟ್ರಿಅಲ್ – ET)  ‘‘(ಯು.ಎಫ್.ಒ. ಶಬ್ದಕೋಶದ ಪ್ರಕಾರ: ಹಾರುವ ತಟ್ಟೆ ಗಳನ್ನು/ಏಲಿಯನ್ಸ್ ಎಲ್ಲಾದರೂ ಕಂಡರೆ  ಅದು ಮೊದಲನೆಯ ವಿಧ; ಅದರಿಂದ ಯಾವ ರೀತಿಯಲ್ಲಿಯಾದರೂ ಪ್ರಭಾವಿತರಾದರೆ ಅದು ೨ನೆಯ ವಿಧ, ಆದರೆ ಏಲಿಯನ್ಸ್ ರನ್ನು ಸಂಧಿಸಿದರೆ ಅಥವಾ ಬಹಳ ಹತ್ತಿರ ನೋಡಿದರೆ  ಅದು ಮೂರನೆಯ ವಿಧ – ಬಹಳ  ಹತ್ತಿರದ ಸಂಪರ್ಕ)
ಕಥಾವಸ್ತು ಸ್ವಲ್ಪ ಹೀಗಿದೆ:
ಮೂರನೆಯ ವಿಧದ  ಸಂಪರ್ಕ(1977): ಫ್ರೆಂಚ್ ವಿಜ್ಞಾನಿಯೊಬ್ಬ ಮೆಕ್ಸಿಕೊವಿನ ಮರಭೂಮಿಯಲ್ಲಿ 30 ವರುಷಗಳ ಹಿಂದೆ ಕಾಣೆಯಾಗಿದ್ದ ವಿಮಾನಗಳನ್ನು ನೋಡುತ್ತಾನೆ; ಆದರೆ ಎಲ್ಲೂ ಚಾಲಕರು ಕಾಣಿಸುವುದಿಲ್ಲ. ಅಮೆರಿಕದ ಇಂಡಿಯಾನ ಪ್ರಾಂತ್ಯದಲ್ಲಿ ಎರಡು ಹಾರಾಡುವ ತಟ್ಟೆಗಳು ಒಂದು ವಿಮಾನವನ್ನು ನಾಶ ಮಾಡಲು ಪ್ರಯತ್ನಿಸುತ್ತವೆ. ಮುನ್ಸಿ ಎಂಬ ಊರಿನಲ್ಲಿ ಈ ತಟ್ಟೆಗಳಿಂದಾಗಿ  ಅಲ್ಲಿಯ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಾಸಗಳಾಗುತ್ತವೆ. ಆ ಸಮಯದಲ್ಲಿ ವಿದ್ಯುತ್ ರಿಪೇರಿ ಮಾಡುತ್ತಿರುವ ರಾಯ್ ಎಂಬ ವ್ಯಕ್ತಿ ಅವುಗಳನ್ನು ನೋಡುತ್ತಾನೆ ಹಾಗು ಒಂದು ನೌಕೆ  ಹತ್ತಿರ ಬಂದು ಅವನ ಮುಖದ ಒಂದು ಭಾಗ ಸುಡುತ್ತದೆ. ಹಾಗೆಯೇ ಜಿಲಿಯನ್ ಎಂಬ ಮಹಿಳೆಯ ಮನೆಯಲ್ಲೂ ಅವುಗಳ ಪ್ರಭಾವ ಕಾಣಿಸುತ್ತದೆ.
ಹೊರಗೆ ಬಂದಾಗ ಜಿಲಿಯನ್ ಮತ್ತು ಅವಳ ಪುಟ್ಟ ಮಗು ಕೂಡ ಹಾರಾಡುವ ತಟ್ಟೆಗಳನ್ನು ನೋಡುತ್ತಾರೆ. ರಾಯ್ ಮತ್ತು ಜಿಲಿಯನ್ ರ ಮನಸಿನಲ್ಲಿ ಒಂದು ಪರ್ವತ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಜಿಲಿಯನ್ ಅದನ್ನು ಚಿತ್ರಿಸುತ್ತಾಳೆ ಮತ್ತು ರಾಯ್ ತನ್ನ ಮನೆಯಲ್ಲಿ ಒಂದು ಶಿಲ್ಪವನ್ನೆ ರಚಿಸುತ್ತಾನೆ. ಒಂದು ದಿನ ಯಾರೋ ಬಂದು ಜಿಲಿಯನ್ ಳ ಮಗುವನ್ನು ಎತ್ತಿಕೊಂಡು ಹೋಗಿ ಬಿಡುತ್ತಾರೆ. ಇದರ ಮಧ್ಯೆ ಭಾರತದ ಧರ್ಮಶಾಲಾದಲ್ಲಿನ ಬೌದ್ಧ  ಸನ್ಯಾಸಿಗಳಿಗೆ ಒಂದು ವಿಚಿತ್ರ ಶಬ್ದ ಕೇಳಿಸುತ್ತಲೇ ಇರುತ್ತದೆ. ಅದನ್ನು ದಾಖಲು ಮಾಡಿಕೊಂಡ ಅಮೆರಿಕದ ರಕ್ಷಣಾಪಡೆ ಅದು ಏಲಿಯನ್ಸ್ ಬಂದು ಇಳಿಯವ ಸ್ಥಳದ ಅಕ್ಷಾಂಶ ರೇಖಾಂಶಗಳನ್ನು ತಿಳಿಸುತ್ತದೆ ಎಂದು ಕಂಡುಹಿಡಿಯುತ್ತಾರೆ.
ಆ ಜಾಗ ಅಮೆರಿಕದ ವ್ಯೋಮಿಂಗ್ ಪ್ರಾಂತ್ಯದಲ್ಲಿನ ಡೆವಿಲ್ಸ್ ಪರ್ವತ. ಅಮೆರಿಕದ ಮಿಲಿಟರಿಯವರು ಯಾವುದೋ ಸುಳ್ಳು ಸುದ್ದಿ ಹೊರಡಿಸಿ ಆ ಪರ್ವತದ ಸುತ್ತ ಮುತ್ತ ಜನರನ್ನು ಬೇರೆ ಕಡೆ ಕಳಿಸಿ ಬಿಡುತ್ತಾರೆ. ಆದರೆ ರಾಯ್ ಮತ್ತು ಜಿಲಿಯನ್ ಹೇಗೋ ಪರ್ವತದ ಹತ್ತಿರ ಹೋಗುತ್ತಾರೆ. ಆಗ ಅಲ್ಲಿ ಒ೦ದು ಹಾರುವ ತಟ್ಟೆಯ ರೂಪದ ಬೃಹತ್ ಆಕಾರದ ಬಾಹ್ಯಾಕಾಶ ನೌಕೆ ಬಂದು ಇಳಿಯುತ್ತದೆ. ಅದರ ಬಾಗಿಲು ತೆರೆದಾಗ ಹಲವಾರು ಮಾನವರು ಹೊರ ಬರುತ್ತಾರೆ. ಇವರು ಹಿಂದೆ ತಪ್ಪಿಸಿಕೊಂಡಿದ್ದವರು; ಇವರ ಜೊತೆ ಜಿಲಿಯನ್ ಳ ಮಗುವೂ ಹೊರ ಬರುತ್ತದೆ. ರಾಯ್ ಸಂತೊಷದಿಂದ ಆ ನೌಕೆಯ ಒಳಗೆ ಹೋಗುತ್ತಾನೆ. ಏಲಿಯನ್ ಒಂದು ಹೊರ ಬರುತ್ತದೆ. ಸನ್ನೆ ಭಾಷೆಯಲ್ಲಿ ಮಾತಾಡಿ ವಾಪಸ್ಸು ಹೋದಾಗ ನೌಕೆಯ ಬಾಗಿಲು ಮುಚ್ಚಿ ಹಾರಿ ಹೋಗುತ್ತದೆ. ಫ್ರಾನ್ಸಿನ ಖ್ಯಾತ ನಿರ್ದೇಶಕ ಫ್ರಾನ್ಸ್ವಾ ಟ್ರುಫೊ ಇದರಲ್ಲಿ ಪಾತ್ರವಹಿಸಿದ್ದು ಈ ಚಿತ್ರದ ಮತ್ತೊಂದು ವಿಶೇಷ!

ಇ.ಟಿ (ಹೊರಗ್ರಹಜೀವಿ) (1982):
ಭೂಮಿಯಲ್ಲಿನ ಸಸ್ಯಗಳನ್ನು ಸಂಗ್ರಹಿಸಲು ಬಂದಿದ್ದ ಒಂದು ಅನ್ಯಗ್ರಹ ವಿಜ್ಞಾನಿಗಳ ಗುಂಪು ಬಾಹ್ಯಾಕಾಶ ನೌಕೆಯಿಂದ ಹೊರಬಂದು ಕಾಡಿನಲ್ಲಿ ಓಡಾಡಿ ವಾಪಸ್ಸು ಹೋಗುವಾಗ ಒಬ್ಬ ಏಲಿಯನ್ ಹಿಂದುಳಿದು ಬಿಡುತ್ತದೆ. ಅದು (‘ಅದರ ಮುಖ ಅದರ ತಾಯಿಗೆ ಮಾತ್ರ ಇಷ್ಟವಾಗಿದ್ದಿರಬಹುದು’ ಎಂದು ನಿರ್ದೇಶಕರ ಅಂಬೋಣ!)  ಹಾಗೇ ಓಡಾಡುತ್ತಾ ಕ್ಯಾಲಿಫೋರ್ನಿಯದ ಒಂದು ಚಿಕ್ಕ ಊರಿನ ಬಳಿ ಬಂದು ಮನೆಯೊಂದರ ಕಾರು ಶೆಡ್ಡಿನಲ್ಲಿ ಅವಿತುಕೊಳ್ಳುತ್ತದೆ. ಅದನ್ನು ಪತ್ತೆಹಚ್ಚಿದ ಮನೆಯ ಮಕ್ಕಳು (ಹುಡುಗ ಎಲಿಯಟ್, ಹುಡುಗಿ ಗರ್ಟಿ) ಪುಟ್ಟ ಹುಡುಗನ ತರಹ ಕಾಣುವ ಆ ಜೀವಿಯನ್ನು ಗೆಳೆಯನ್ನನ್ನಾಗಿ ಮಾಡಿಕೊಳ್ಳುತ್ತವೆ. ಅದು ನಿಧಾನವಾಗಿ ಇಂಗ್ಲಿಷ್ ಭಾಷೆಯನ್ನು ಕೂಡ ಕಲಿತು ತನ್ನನ್ನು ಇ.ಟಿ. (ಎಕ್ಸಟ್ರಾ–ಟೆರೆಸ್ಟ್ರಿಯಲ್) ಎಂದೂ ಕರೆದುಕೊಳ್ಳುತ್ತದೆ. ಅ
ದಕ್ಕೂ ಹುಡುಗನಿಗೂ ಒಂದು ರೀತಿಯ ಭ್ರಾತತ್ವ ಉಂಟಾಗಿ ಅದಕ್ಕೆ ಏನಾಗುತ್ತೋ ಅವನಿಗೂ ಅದೇ ರೀತಿ ಆಗುತ್ತದೆ; ಏನೋ ಎಡವಟ್ಟಾಗಿ ಅದು ಕುಡಿದರೆ ಹುಡುಗನೂ ಕುಡಿದವರ ತರಹ ಆಡುತ್ತಾನೆ! ಹಸನ್ಮುಖಿಯಾದ ಈ ಏಲಿಯನ್ ಜೀವನ್ಮುಖಿ ಕೂಡ: ಒಂದು ಬಾಡಿದ ಹೂವನ್ನು ಮುಟ್ಟಿದರೆ ಅದು ಮತ್ತೆ ಅರಳುತ್ತದೆ, ಗಾಯಗಳನ್ನು ಮುಟ್ಟಿಯೇ ವಾಸಿ ಮಾಡುತ್ತದೆ ಇತ್ಯಾದಿ. ಹಾಗೇ ಒಂದು ದಿನ ಹುಡುಗ ಇಟಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ಅದು ವಾಸಿಸುವ ಗ್ರಹಕ್ಕೆ ಸಂದೇಶ ಕಳಿಸುತ್ತಾರೆ. ಹೀಗಿರುವಾಗ ಇಟಿಗೆ ಖಾಯಿಲೆಯಿಂದ ಸಾಯುವ ಸ್ಥಿತಿ ಬರುತ್ತದೆ. ಅದರ ಜೊತೆ ಹುಡುಗನ ಸ್ಥಿತಿಯೂ ಚಿಂತಾಜನಕವಾಗುತ್ತದೆ. ಸರ್ಕಾರದವರಿಗೆ ಮೊದಲಿಂದಲೂ ಅನುಮಾನಗಳು ಇದ್ದು ಅವರಿಬ್ಬರನ್ನೂ ಎತ್ತಿಕೊಂಡು ಹೋಗಿ ಇಟಿ ಮೇಲೆ ಪರೀಕ್ಷೆಗಳನ್ನು ನಡೆಸುತ್ತಿರುತ್ತಾರೆ. ಸಾಯುವುದರಲ್ಲಿದ್ದ ಇಟಿ ತನ್ನ ನೌಕೆ ವಾಪಸ್ಸು ಬರುವುದು ತಿಳಿದು ಗುಣಮುಖವಾಗುತ್ತದೆ. ಕೊನೆಯಲ್ಲಿ ಸರಕಾರದ ಕಾವಲಿನಿಂದ ಅದನ್ನು ಹೇಗೋ ಬಿಡಿಸಿಕೊಂಡು ಸೈಕಲ್ಲಿನ ಮೆಲೆ ಕೂರಿಸಿಕೊಂಡು ಮಕ್ಕಳು ಕಾಡಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಇಟಿಯ ನೌಕೆ ಬಂದು ಅದನ್ನು ವಾಪಸ್ಸು ಕರೆದುಕೊಂಡು ಹೋಗುತ್ತದೆ. ಚಿತ್ರದಲ್ಲಿ ಪುಟ್ಟ ಹುಡುಗಿಯ ಪಾತ್ರವನ್ನು ಅಭಿನಯಿಸಿದ್ದು ಇಂದು 45ರ ಹರೆಯದ ಹಾಲಿವುಡ್ ನ ಖ್ಯಾತ ತಾರೆ ಡ್ರೂ ಬ್ಯಾರಿಮೂರ್. (ಕೆಲವು ವರ್ಷಗಳ ಹಿಂದೆ ಬಂದ ‘ಕೋಯಿ ಮಿಲ್ ಗಯ’ ಹಿಂದಿ ಚಿತ್ರ ಸ್ವಲ್ಪ ಹೀಗೆಯೇ ಇದ್ದಿತು).
ಸ್ಟೀವನ್ ಸ್ಪೀಲ್ಬರ್ಗ್ ರ ಈ ಸಿನೆಮಾ ಬಹಳ ಮೆಚ್ಚುಗೆಯನ್ನು ಗಳಿಸಿದರೂ ವಿವಾದಗಳನ್ನೂ ಹುಟ್ಟಿಸಿತು. ಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಆಗಾಗ್ಗೆ ವೈಜ್ಞಾನಿಕ ಕಲ್ಪನಾ ಕಥೆಗಳನ್ನು  ರಚಿಸುತ್ತಿದ್ದು ೧೯೬೨ರಲ್ಲಿ ಏಲಿಯನ್ ಎಂಬ ಒಂದು ಕಥೆಯನ್ನು ತಮ್ಮ ಸಂದೇಶ (ಮಕ್ಕಳ ಪತ್ರಿಕೆ )ದಲ್ಲಿ ಪ್ರಕಟಿಸಿದ್ದರು. ಇದರಲ್ಲಿ ಒಬ್ಬ ಏಲಿಯನ್ ಗ್ರಾಮೀಣ ಬಂಗಾಲದಲ್ಲಿ ಬಂದಿಳಿಯುತ್ತಾನೆ. ಒಬ್ಬ ಹುಡುಗನ ಜೊತೆ ಗೆಳೆತನ ಬೆಳೆಸುತ್ತಾನೆ. ಮತ್ತು ಇರುವಷ್ಟು ದಿನ ಹಳ್ಳಿಯ ಜನರ ಜೊತೆ ತಮಾಷೆ ಮಾಡುತ್ತಾ ಇರುತ್ತಾನೆ. ಆ ಕಥೆಯ ಒಂದು ದೃಶ್ಯದಲ್ಲಿ ಅವನು ಒಂದು ಸಸಿಯ ಮೆಲೆ ಕೈ ಓಡಿಸಿದಾಗ ಹೂಗಳು ಅರಳುತ್ತವೆ. ಈ ಕಥೆಯನ್ನು ಅವರ ಗೆಳೆಯ ಆರ್ಥರ್ ಕ್ಲಾರ್ಕ್ ಗೆ ತೋರಿಸಿದಾಗ ಅವರು ಹಾಲಿವುಡ್ ನಲ್ಲಿ ಸಿನೆಮಾ ಮಾಡುವ ಯೋಚನೆಯನ್ನು ರೇ ರವರಿಗೆ ಕೊಟ್ಟರಂತೆ.
ಕೊಲಂಬಿಯಾ ಸಿನೆಮಾ ಕಂಪನಿಗೂ ಇದು ಇಷ್ಷ್ಟವಾಗಿ ಖ್ಯಾತ ನಟ ಮಾರ್ಲನ್ ಬ್ರಾಂಡೊ ಮತ್ತು ಹಾಸ್ಯ ನಟ ಪೀಟರ್ ಸೆಲ್ಲರ್ಸ ರನ್ನೂ ಸೇರಿಸಿಕೊಳ್ಳಬೇಕೆಂಬ ಯೋಚನೆ ಇದ್ದಿತಂತೆ. ಆದರೆ ಅದು ಏತಕ್ಕೋ ಕೈಗೂಡಲಿಲ್ಲ. ಇದರ ಮಧ್ಯೆ ಅವರ ಕಥೆಯ ಪ್ರತಿಗಳು ಹಾಲಿವುಡ್ ನಲ್ಲಿ ಓಡಾಡುತ್ತಿದ್ದವಂತೆ. ಸ್ಪೀಲ್ಬರ್ಗ್ ರ ಸಿನೆಮಾ ಬಿಡುಗಡೆಯಾದ ಮೇಲೆ ಅದನ್ನು ನೋಡಿದ ಸತ್ಯಜಿತ್ ರೇ ಸ್ಪೀಲ್ಬರ್ಗ್ ರು ಇ.ಟಿ. ಚಿತ್ರದ ಕಥಾವಸ್ತುವನ್ನು ನನ್ನ ಕಥೆ ‘ಏಲಿಯನ್‘ ನಿಂದ ತೆಗೆದುಕೊಂಡಿದ್ದಾರೆ ಎಂದು ಆಪಾದನೆ ಮಾಡಿದಾಗ ಸ್ಪೀಲ್ಬರ್ಗ್ ಅದನ್ನು ಅಲ್ಲಗಳೆದರಂತೆ. ಆದರೂ ಹಾಲಿವುಡ್ ನಲ್ಲಿ ಖ್ಯಾತ ನಿರ್ದೇಶಕ ಮಾರ್ಟಿನ್ ಸ್ಕೋರ್ಸೆಸೆ ಮತ್ತು ಹಲವರು ಸತ್ಯಜಿತ್ ರೇ ಪರ ಇದ್ದರಂತೆ. “ಹೋಗಲಿ, ಸ್ಪೀಲ್ಬರ್ಗ್ ಒಳ್ಳೆಯ ನಿರ್ದೇಶಕರು” ಎನ್ನುವ ಮನೋಭಾವದಿಂದ ಸತ್ಯಜಿತ್ ರೇ ಈ ಪ್ರಕರಣವನ್ನು ಅಲ್ಲಿಗೇ ಬಿಟ್ಟರಂತೆ.
ಈ ಎರಡು ಚಿತ್ರಗಳಲ್ಲೂ ಸ್ಪೀಲ್ಬರ್ಗ್ ಏಲಿಯನ್ ರನ್ನು ಒಳ್ಳೆಯ ಗುಣಗಳುಳ್ಳವರ ತರಹ ತೋರಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಏಲಿಯನ್ಸ ಆಕ್ರಮಣಕಾರಿಗಳಾಗಿದ್ದು ಕೊಲಂಬಸ್ ಅಮೆರಿಕದ ಮೂಲವಾಸಿಗಳನ್ನು ನಡೆಸಿಕೊಂಡಂತೆ ನಮ್ಮಸಂಸ್ಕೃತಿಯನ್ನು ನಾಶ ಮಾಡಬಹುದು ಎಂದು ಹೇಳಿದ್ದರು. ನಾವು ಎಲ್ಲವನ್ನೂ ಮಾನವ ದೃಷ್ಟಿಯಿಂದ ನೋಡುತ್ತೇವಾದ್ದರಿಂದ ಒಳ್ಳೆಯದು, ಕೆಟ್ಟದು ಎಂಬ ಗುಣವಾಚಕಗಳನ್ನು ಬಳಸುತ್ತೇವೆ. ಏಲಿಯನ್ಸ ದೃಷ್ಟಿಯಲ್ಲಿ ಇವಕ್ಕೆ ಏನು ಅರ್ಥವಿರುತ್ತದೋ ತಿಳಿಯದು!
ಇವೆಲ್ಲ ನಡೆದು ೪೦-೫೦ ವರ್ಷಗಳು ಕಳೆದಿವೆ. ಅಂದಿನಿಂದ ಹಾಲಿವುಡ್ ನಲ್ಲಿ ಬಾಹ್ಯಾಕಾಶ ಸಿನೆಮಾಗಳು ಬಹಳ ಬಂದಿವೆ. ತಂತ್ರಜ್ಞಾನವೂ ಹೆಚ್ಚಾಗಿ ಹೊಸಹೊಸ ಆಲೋಚನೆಗಳನ್ನು ಒಳಗೊಂಡಿವೆ.
ಇಲ್ಲಿ ಕೆಲವನ್ನು ಮಾತ್ರ ಹೆಸರಿಸೋಣ:
೧) ಕಾಂಟಾಕ್ಟ್ (೧೯೯೭) – ಹೊರ ನಾಗರೀಕತೆಯೊಂದು ನಮ್ಮನ್ನು ಸಂಪರ್ಕಿಸಲು ನೋಡುತ್ತಿರುವುದು; ಅಲ್ಲಿಂದ ಭೂಮಿಗೆ ದೊರೆತ ಸಿಗ್ನಲ್ ಗಳಲ್ಲಿ 1936ರಲ್ಲಿ ಮಾಡಿದ ಹಿಟ್ಲರನ ಭಾಷಣ ಕಾಣಿಸುತ್ತದೆ! ಅಂದರೆ ಅವರಿಗೆ ಭಾಷಣ ಸಿಕ್ಕಿ ಅವರು ಅದನ್ನು ವಾಪಸ್ಸು ಕಳಿಸುತ್ತಿದ್ದಾರೆ!
೨) ಡೀಪ್ ಇಂಪಾಕ್ಟ್ (೧೯೯೮) – ಭೂಮಿಯ ಕಡೆ ಬರುತ್ತಿರುವ ಧೂಮಕೇತುವನ್ನು ಬಾಂಬ್ ಹಾಕಿ ಒಡೆಯುವ ಯೋಚನೆ; ಅದು ನಡೆಯದಿದ್ದಾಗ ನೌಕೆಯನ್ನೇ ಆಕಾಶ ಕಾಯಕ್ಕೆ ಡಿಕ್ಕಿ ಹೊಡೆಸುವುದು
೩) ಗ್ರಾವಿಟಿ (೨೦೧೩) – ಬಾಹ್ಯಾಕಾಶ ನಾವಿಕಳೊಬ್ಬಳು ಶೂನ್ಯ ಗುರುತ್ವದಲ್ಲಿ ನೌಕೆಯ ಹೊರಗೆ ಬಹಳ ಸಮಯ ಇರಬೇಕಾಗುತ್ತದೆ
೪) ಇಂಟರ್ ಸ್ಟೆಲ್ಲಾರ್ (೨೦೧೪) – ಭೂಮಿಯನ್ನು ಬಿಟ್ಟು ಹೋಗಬೇಕಾದಾಗ ವರ್ಮ್ ಹೋಲ್ (ಎರಡು ದೂರದ ಗ್ಯಾಲಕ್ಸಿಗಳ ಮಧ್ಯೆ ಅಗಾಧ ದೂರವಿದ್ದರೂ ಒಂದು ಸುರಂಗದ ಮೂಲಕ ಬೇಗ ಪ್ರಯಾಣ ಮಾಡಬಹುದು) ಬಳಸುವುದು
೫) ಮಾರ್ಶಿಯನ್ (೨೦೧೫) ಮಂಗಳದ ಮೆಲೆ ಮಾನವನೊಬ್ಬ ಜೀವಿಸಲು ಕಲಿಯುವುದು.
೬) ಸ್ಟಾರ್ ವಾರ್ಸ್ (೧೯೭೭-೨೦೧೯) – ಬಹಳ ಖ್ಯಾತ ಬಾಹ್ಯಾಕಾಶ ಸಿನೆಮಾ ಸರಣಿ: ೧೯೭೭ರಲ್ಲಿ ಖ್ಯಾತ ನಿರ್ದೇಶಕ ಜಾರ್ಜ್ ಲೂಯಿಸ್ ನ ಮೊದಲ ಚಿತ್ರ ೧೯೭೭ರಲ್ಲಿ ಹೊರ ಬಂದಿತು;  ಅನಂತರ ಏಳು ಚಿತ್ರಗಳು ಬಂದಿವೆ. ಅಂತೂ ‘ಬಹಳ ಬಹಳ  ಹಿಂದೆ ಯಾವುದೋ ದೂರದ ಗ್ಯಾಲಕ್ಸಿ’ಯಲ್ಲಿ ಒಳ್ಳೆಯವರ ಮತ್ತು ಕೆಟ್ಟವರ ಮಧ್ಯೆ ಯುದ್ಧ ನಡೆಯುತ್ತಲೆ ಇರುತ್ತದೆ.
ಈ ಲೇಖನದ ಕೆಲವು ಭಾಗಗಳು ‘ಹೊಸತು’ ಪತ್ರಿಕೆಯಲ್ಲಿ ಹಿಂದೆ ಪ್ರಕಟವಾಗಿದ್ದು ಅಲ್ಲಿ ಇಲ್ಲಿ ವಿಸ್ತರಿಸಿದೆ.

‍ಲೇಖಕರು nalike

May 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: