ಅಮೆರಿಕದ ಸಾಲು ಸಾಲು ಹಬ್ಬಗಳು..

ಡಾ. ಡಿ ಮಂಗಳಾ ಪ್ರಿಯದರ್ಶಿನಿ

ದೊಡ್ಡ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯಿಲ್ಲದಿದ್ದರೂ, ಅಮೆರಿಕಾದಲ್ಲೂ ಸಾಕಷ್ಟು ಹಬ್ಬಗಳು. ಇನ್ನೇನಿಲ್ಲದಿದ್ದರೂ, ಪ್ರಕೃತಿಯ ಪಲ್ಲಟ, ವೈಪರೀತ್ಯಗಳನ್ನು ಹಾಡಿ ಹೊಗಳುವ, ಸಂಭ್ರಮಿಸುವ ಪ್ರವೃತ್ತಿ ಅಮೆರಿಕನ್ನರಿಗೆ. ಬದುಕಿನಲ್ಲಿ ಏನಾದರೂ ಸಂಭ್ರಮ, ಆಚರಣೆಗಳಿದ್ದೇ ಇರಬೇಕು. ಪ್ರತಿಯೊಂದು ಮನುಷ್ಯ ಸಂಬಂಧವನ್ನೂ ವೈಭವೀಕರಿಸಿ ಆಚರಿಸುತ್ತಾರೆ. ತಂದೆ ದಿನ, ತಾಯಿ ದಿನ, ಹಿರಿಯರ ದಿನ, ಮಗನ ದಿನ, ಮಗಳ ದಿನ, ಸ್ನೇಹಿತರ ದಿನ, ಪ್ರೇಮಿಗಳ ದಿನ – ಹೀಗೆ. ಇನ್ನು ಹಿರಿಯರಿಂದ ಬಳುವಳಿಯಾಗಿ ಬಂದ ಪರ್ವಗಳು ಬಂದರೆ ಸುಮ್ಮನಿರುತ್ತಾರೆಯೆ?

ಹೊಸ ವರ್ಷದಿಂದ ವರ್ಷಾಂತ್ಯದವರೆಗೂ ಇವರ ಪರ್ವ ಸಂಭ್ರಮ. ಸಾಮಾನ್ಯವಾಗಿ ಇವರ ಸಡಗರ ಈಸ್ಟರ್ ಹಬ್ಬವಾದ ನಂತರ ಆಗಸ್ಟ್ – ಸೆಪ್ಟೆಂಬರ್ ನಿಂದಲೇ ಪ್ರಾರಂಭ. ಪ್ರಕೃತಿ ಮಾತೆ ತನ್ನ ಬಣ್ಣ ಬದಲಾಯಿಸುತ್ತ ಕೇಸರಿ, ಕೆಂಪು, ಹಳದಿಯಾಗಿ ಎಲ್ಲ ಎಲೆ, ಹೂ, ಹಣ್ಣುಗಳನ್ನು ಕಳೆದುಕೊಂಡು ನಿರಾಭರಣೆಯಾದರೆ, ಅದು ಇವರಿಗೆ ಫಾಲ್ ಸಂಭ್ರಮ.

ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲೇ ಹೂ ಹಣ್ಣುಗಳ ಹಬ್ಬ ಪ್ರಾರಂಭ. ಅದು ಟ್ಯುಲಿಪ್, ಮೇರಿ ಗೋಲ್ಡ್, ಗುಲಾಬಿ, ಲ್ಯಾವೆಂಡರ್ ಪುಷ್ಪ ಪರ್ವಗಳು. ಇನ್ನು ಸುಮಾರು ಇದೇ ಕಾಲದಲ್ಲಿ ಚೆರ್ರಿ, ದ್ರಾಕ್ಷಿ, ಆಪಲ್, ಬ್ಲೂಬೆರಿ, ರಾಸ್ ಬೆರಿ, ಸ್ಟ್ರಾಬೆರಿ – ಹೀಗೆ ಫಲ ಸಂಭ್ರಮ. ತೋಟಗಳಿಗೆ ಹೋಗಿ ಬುಟ್ಟಿಗಿಷ್ಟು ಎಂದು ಹಣ ಪಾವತಿಸಿ ಫಲ, ಪುಷ್ಪಗಳನ್ನು ನೀವೇ ನಿಮ್ಮ ಕೈಯ್ಯಾರೆ ಬಿಡಿಸಿ ತರಬಹುದು. ತೋಟದಿಂದ ತಾಜಾ ತಂದದ್ದು, ಬೆಲೆ ಕಡಿಮೆ ಎಂದು ಭಾವಿಸುವಂತೆಯೇ ಇಲ್ಲ. ನೀವೇ ಕಿತ್ತುವ ತೋಟ ಸಂಭ್ರಮಕ್ಕೆ ದುಬಾರಿ ಪ್ರವೇಶ ಧನ ನೀಡಿ, ಕಿತ್ತುವ ಸುಖವನ್ನು ಆನಂದಿಸಬಹುದು.

ನಂತರವೇ ನಾನು ಕಂಡದ್ದು ‘ಕುಂಬಳ‘ ದ ಹಬ್ಬ. ಇದು ತುಂಬ ವಿಚಿತ್ರ ಎನ್ನಿಸಬಹುದೇನೋ? ಕುಂಬಳ ಕಾಯಿಗೂ ಹಬ್ಬವೆ? ಹೌದು, ಇದು ಸುಗ್ಗಿ ಸಂಭ್ರಮಕ್ಕೆ ಸೇರುವ ಹಬ್ಬ. ಸಾಮಾನ್ಯವಾಗಿ ನಗರದ ಹೊರ ಅಂಚಿನಲ್ಲಿ, ಪಟ್ಟಣದ ತಲೆ ಮೇಲೆ ಗುದ್ದಿದಂತಿರುವ ಪ್ರದೇಶಗಳಲ್ಲಿ ತೋಟ, ಹೊಲ ಗದ್ದೆಗಳನ್ನು ಕಾಣಬಹುದು. ಈ ಹೊಲಗಳಲ್ಲಿ ಕುಂಬಳ ಕಾಯಿ ಹಬ್ಬ. ಹೊಲದ ಪ್ರವೇಶಕ್ಕೂ ಪ್ರವೇಶ ಧನ. ಅಮೆರಿಕಾದಲ್ಲಿ ಏನೂ ಪುಗಸಟ್ಟೆಗೆ ಸಿಗದು. ಹೊಲ ಹೊಕ್ಕರೆ ಯಾವುದೋ ಮಾಯಾ ಲೋಕವನ್ನು ಹೊಕ್ಕಂತೆ. ಸಿಂಡ್ರೆಲ್ಲಾ ಕಥೆಯಲ್ಲಿ ದೇವತೆ ಅವಳಿಗೆ ತಯಾರು ಮಾಡಿಕೊಟ್ಟ ದೊಡ್ಡ ಕುಂಬಳ ಕಾಯಿ ರಥಕ್ಕೆ ಬಳಸಿದಂಥ ದೊಡ್ಡ ಕುಂಬಳಗಳು. ಮೊರದಗಲದ ಹಚ್ಚ ಹಸುರಿನ ಎಲೆಗಳ ನಡುವೆ ‘ತಾಯಿಗೆ ಮಗುವು ಭಾರವೆ?‘ ಎನ್ನುವಂತೆ ಭಾರವಾದ ಕೆಂಪು ಕುಂಬಳಗಳನ್ನು ಜತನವಾಗಿ ಕಂಕುಳಲ್ಲಿ ಹೊತ್ತು ಬೀಗುವ ಕುಂಬಳ ಮಾತೆ.

ಇವು ಸಿಹಿಗುಂಬಳಗಳೆ. ಒಂದೊಂದು ಕುಂಬಳ 20-30 ಕೆಜಿಗಳನ್ನು ತೂಗುವುದೂ ಉಂಟು. ಮಿಡಿ ಕುಂಬಳ, ಹಿರಿಗುಂಬಳ, ನಡುಗುಂಬಳ, ಸೊನೆಗುಂಬಳಗಳು – ಎಲ್ಲಿ ನೋಡಿದರೂ ಹೊಲದ ತುಂಬ ಕೇಸರಿ ಬಣ್ಣದ ಚೆಂಡಿನಂತಹ, ಹಂಡೆಯಂತಹ ಕುಂಬಳಗಳು. ಇನ್ನು ಇಲ್ಲಿ ಕುಂಬಳದೌತಣಗಳೂ ಉಂಟು. ಸಿಹಿ ಗುಂಬಳದಿಂದ ನಿಮ್ಮ ಮುಂದೆ ಬಿಸಿಬಿಸಿಯಾಗಿ ತಯಾರು ಮಾಡಿಕೊಡುವ ಸಿಹಿ ತಿನಿಸುಗಳು, ಕೇಕುಗಳು, ಹಲ್ವಗಳು.

ಕುಂಬಳ ಮೇಳಕ್ಕೆ ಹೋಗಿ ಹೊಟ್ಟೆ ತುಂಬ ಕುಂಬಳದಡುಗೆ ಉಂಡು ಮನೆ ಮಂದಿಯೆಲ್ಲ ಕೈ ತುಂಬ ಕುಂಬಳಗಳನ್ನು ಹೊತ್ತು ತರುತ್ತಾರೆ. ನಾನು ಈ ಕುಂಬಳ ಮೇಳಕ್ಕೆ ಹೋಗಿದ್ದಾಗ ಒಬ್ಬಬ್ಬೊರೂ ಇಪ್ಪತ್ತು-ಮೂವ್ವತ್ತು ಕುಂಬಳಗಳನ್ನು ರೈತ ಮಾಲೀಕ ಹೇಳಿದ ದರಕ್ಕೆ ದೂಸರಾ ಮಾತೆತ್ತದೆ ಚೌಕಾಸಿ (ಅಮೆರಿಕಾದಲ್ಲಿ ಈ ಪದದ ಬಳಕೆ ನಿಷಿದ್ಧ) ಮಾಡದೆ ಕಾರಿನ ಡಿಕ್ಕಿಯಲ್ಲಿ ತುಂಬುವುದನ್ನು ನೋಡಿದೆ. ಆಮೇಲೆ ತಿಳಿದಿದ್ದು, ಇದು ಅಡುಗೆಗಲ್ಲ, ಮನೆಯ ಸಿಂಗಾರಕ್ಕೆಂದು.

ಕುಂಬಳ ಹಬ್ಬದಲ್ಲಿ ಮನೆಯ ಮುಂದೆ ಕುಂಬಳ ಕಾಯನ್ನು ಕೊರೆದು, ಕಲಾತ್ಮಕವಾಗಿ ಕೆತ್ತನೆ ಮಾಡಿ ಕುಂಬಳಪ್ಪ, ಕುಂಬಳಮ್ಮರಿಗೆ ಕಣ್ಣು ಮೂಗು ಬರೆದು ಅದರೊಳಗೆ ದೀಪವಿಟ್ಟು ಮನೆಯ ಮುಂದೆ ನಮ್ಮೂರ ಹೊಲದ ‘ಬೆರಚಪ್ಪ‘ ಗಳ ಹಾಗೆ ದೃಷ್ಟಿಗೊಂಬೆಗಳನ್ನು ನಿಲ್ಲಿಸಿರುತ್ತಾರೆ. ಒಬ್ಬರ ಮನೆಯಲ್ಲಿ ಕುಂಬಳದ ಕಾಂಪೌಂಡು. ಮನೆ ಮೂರು ಸುತ್ತ ಶ್ರೇಣೀಕೃತವಾಗಿ ಕುಂಬಳ ಜೋಡಣೆ. ನನಗೆ ಇದನ್ನು ನೋಡುತ್ತಿದ್ದಂತೆ ಬಸವಣ್ಣನವರ ಮಾತುಗಳಿಂದ ನೊಂದು ಮುನಿಸಿಕೊಂಡ ಕಿನ್ನರ ಬೊಮ್ಮಯ್ಯಗಳ ಉಳ್ಳಿ ಭೋಜನದ ನೆನಪಾಯಿತು. ‘ಉಳ್ಳಿಯಿಂದಾದ ಮುನಿಸಂ ಉಳ್ಳಿಯಿಂದಲೇ ತೀರ್ಚೆಪೆವು‘ ಎಂದು ಬಸವಣ್ಣನವರು ಬೊಮ್ಮಿ ತಂದೆಗಳನ್ನು ಆಹ್ವಾನಿಸಿ, ಇಡೀ ಪಟ್ಟಣಕ್ಕ ತಳಿರು ತೋರಣಗಳಂತೆ ಉಳ್ಳಿ ಶೃಂಗಾರ ಮಾಡಿದ ನೆನಪಾಯಿತು.

ಇಲ್ಲಿ ಯಾರ ಮೇಲೂ ಸಿಟ್ಟಿಲ್ಲವಾದರೂ ಕುಂಬಳದ ಗೋಡೆಗಳು, ಬಾಗಿಲ ವಾಡಗಳು, ದೀಪ, ಹೂ ಹಣ್ಣುಗಳ ಕೆತ್ತನೆ, ಅಡುಗೆ – ಎಲ್ಲವೂ ಕುಂಬಳಮಯ. ಮನೆ ಮನೆಯ ಕುಂಬಳ ಶೃಂಗಾರ, ರೈತನ ಶ್ರಮಕ್ಕೆ ನೀಡಿದ ಅಭಿವಂದನೆಯಾಗಿತ್ತು. ಇಷ್ಟೆಲ್ಲ ಕುಂಬಳ ಬ್ರಹ್ಮಾಂಡವೇ ಮನೆ ಮುಂದೆ ವಾರಗಟ್ಟಲೆ ಬಿದ್ದಿದ್ದರೂ, ಆ ಶೃಂಗಾರವನ್ನು ನಾಶ ಪಡಿಸುವುದೇ ಆಗಲಿ, ಕದಿಯುವುದೇ ಆಗಲಿ ನಾನು ಕಾಣಲಿಲ್ಲ.

ಇದರ ಬೆನ್ನಲ್ಲೇ ಕಂಡು ಬರುವ ಹಬ್ಬ ’ಹಾಲೋವೀನ್‘. ಇದೊಂದು ರೀತಿಯಲ್ಲಿ ಸಂದ ಕುಟುಂಬದ ಹಿರಿಯರು, ದೇಶಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ ಹುತಾತ್ಮರ ಸ್ಮರಣೆಯ ಹಬ್ಬ. ಒಂದು ರೀತಿಯಲ್ಲಿ ಪ್ರೇತಾತ್ಮರ ಆರಾಧನೆಯೂ ಹೌದು. ಇದನ್ನು ಸಂಕೇತಿಸುವಂತೆ ಮನೆ ಮುಂದೆ ಮೂಳೆ ಮನುಷ್ಯರು, ಪಿಶಾಚಿ, ದೆವ್ವ, ಭೂತಗಳ ಪ್ರತಿಕೃತಿಯನ್ನು ಜೋಡಿಸಿರುತ್ತಾರೆ .

‘ಹಾಲೋವೀನ್‘, ‘ಆಲ್ ಸೈಂಟ್ ಈವ್‘ ಎಂಬ ಹೆಸರಿನಿಂದ ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಆಚರಿಸಲ್ಪಡುತ್ತದೆ. ಮುಖ್ಯವಾಗಿ ಚರ್ಚುಗಳಲ್ಲಿ ಕ್ರಿಸ್ತನಾಮ ಸ್ಮರಣೆ, ಉಪವಾಸ – ಇವು ಮುಖ್ಯ. ಇದು ‘ಹಾಲೋವೀನ್ ಈವ್ ‘ ಎಂದು ಅಕ್ಟೋಬರ್ 31ರಂದು ಆಚರಣೆಗೊಳ್ಳುತ್ತದೆ. ಇದನ್ನು ‘ಸಂತ ದಿನ‘ ಎಂದೂ ಕರೆಯುತ್ತಾರೆ. ಇದು ಮೂಲತಃ ಅಮೆರಿಕಾ ದೇಶದ ಹಬ್ಬವೇನಲ್ಲದಿದ್ದರೂ, ಬೇರೆ ದೇಶಗಳಿಂದ ಸ್ಫೂರ್ತಿಗೊಂಡು ತಮ್ಮದೇ ಎಂಬಂತೆ ಆಚರಿಸುವ ಹಬ್ಬವಾಗಿದೆ.

ಈಗ ಈ ಹಬ್ಬ ಮಕ್ಕಳ ಆಚರಣೆಯ ಹಬ್ಬವಾಗಿದೆ. ಮಕ್ಕಳು, ಹದಿ ಹರೆಯದವರು, ಯುವಕರು, ಚಿಕ್ಕ ಮಕ್ಕಳ ಪೋಷಕರಿಗಿದು ಸಂಭ್ರಮಾಚರಣೆ. ಮಕ್ಕಳು ತಮ್ಮ ಚಿತ್ರ – ವಿಚಿತ್ರ ವೇಷ – ಭೂಷಣಗಳಿಂದ ಅಲಂಕರಿಸಿಕೊಂಡು, ತಮ್ಮ ಮುಖ ಮರೆಸಿಕೊಂಡು ಮನೆ ಮನೆಯ ಬಾಗಿಲು ಬಡಿದು ಹೆದರಿಸಿ ‘ಟ್ರಿಕ್ಆರ್ ಟ್ರೀಟ್’ ಎಂದು ಕೂಗುತ್ತಾರೆ. ಮನೆಯವರು ಹೆದರಿದಂತೆ ನಟಿಸುತ್ತಾ ಅವರು ತಂದಿರುವ ಬುಟ್ಟಿಯೊಳಗೆ ಚಾಕಲೇಟ್, ಬೊಂಬೆಗಳು – ಮುಂತಾದ ಕೊಡುಗೆಗಳನ್ನು ನೀಡಿ ಆನಂದಿಸುತ್ತಾರೆ.

ಇನ್ನು ಯುವಕರು, ಹದಿ ಹರೆಯದವರು, ಶಾಲಾ ಕಾಲೇಜುಗಳಲ್ಲಿ ಇಂಥ ಪಾರ್ಟಿಗಳನ್ನು ಆಯೋಜಿಸಿ, ವಿವಿಧ ಭಯಾನಕ ವೇಷಗಳನ್ನು ಧರಿಸಿ ಸ್ನೇಹಿತರಿಗೆ ಸರ್ ಪ್ರೈಸ್ ಗಳನ್ನು ನೀಡುತ್ತಾರೆ. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿ ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಮೇಕಪ್ ಮಾಡಿಸಿಕೊಂಡು ಬರುವ ಹುಕಿಯೂ ಉಂಟು. ಡಿಸ್ನಿ ಲ್ಯಾಂಡ್ ಮುಂತಾದ ಮನರಂಜನಾ ತಾಣಗಳಲ್ಲಿ ‘ಹಾಲೋವೀನ್ ಹಾರರ್ ರಾತ್ರಿ’ಗಳನ್ನು ತುಂಬ ಅದ್ಧೂರಿಯಾಗಿ ಆಚರಿಸಿ ಗ್ರಾಹಕರ ಮನರಂಜನೆಗೆ ತಕ್ಕಂತೆ ಹಣ ವಸೂಲಿ ಮಾಡುವುದೂ ಉಂಟು. ಈ ನೆಪದಲ್ಲಿ ಪ್ರತಿ ವರ್ಷವೂ, ಪ್ರತಿಷ್ಠಿತ ಉಡುಪು ಕಂಪನಿಗಳು ಹೊಸ ಹೊಸ ವಿನ್ಯಾಸದ ಹಾಲೋವೀನ್ ದಿರುಸುಗಳನ್ನು ಮಾರುಕಟ್ಟೆಗೆ ತಂದು, ಕೋಟ್ಯಂತರ ಡಾಲರುಗಳ ಲಾಭದಾಯಕ ಉದ್ದಿಮೆಯಾಗಿ ಮಾಡಿಕೊಂಡು ಹುಲುಸಾಗಿ ಬೆಳೆಯುತ್ತಿರುವುದೂ ಉಂಟು.

ಇತ್ತೀಚೆಗೆ ಅಮೆರಿಕೆಯಲ್ಲಿ ಇಂಥ ಪಾರ್ಟಿಗಳು ತಮ್ಮ ಮೂಲ ಉದ್ದೇಶವನ್ನು ಕಳೆದುಕೊಂಡು ಅಸಭ್ಯತೆ, ಹಿಂಸೆ, ಕ್ರೌರ್ಯಗಳಿಗೆ ತಿರುಗುತ್ತಿದ್ದು, ಇಂಥ ಪಾರ್ಟಿಗಳ ಮೇಲೆ ಸಾಕಷ್ಟು ನಿಯಮಾವಳಿಗಳನ್ನು ಹೇರಲಾಗಿದೆ. ಸಂತರ, ಸಂದ ಪಿತೃ- ಪಿತಾಮಹರ ಸ್ಮರಣೆ, ಮನರಂಜನೆಯ ಮಹಾಪೂರವನ್ನೇ ಹರಿಸುತ್ತಿರುವುದು ಬದಲಾದ ಸಾಂಸ್ಕೃತಿಕ ಆಚರಣೆಯ ಸ್ವರೂಪದ ಉದಾಹರಣೆಯಾಗಿದೆ.

ಇನ್ನು ಇಡೀ ಅಮೆರಿಕಾ ಜನತೆ ಬಹಳ ಪ್ರೀತಿಯಿಂದ ನಿರೀಕ್ಷಿಸುವ ಹಬ್ಬ, ‘ಥ್ಯಾಂಕ್ಸ್ ಗಿವಿಂಗ್‘. ಇದು ಮನೆಮಂದಿಯನ್ನೆಲ್ಲ ಒಗ್ಗೂಡಿಸುವ ಹಬ್ಬ. ಇದಕ್ಕೆ ರಾಷ್ಟ್ರೀಯ ರಜೆಯುಂಟು. ನವೆಂಬರ್ ತಿಂಗಳ ನಾಲ್ಕನೆಯ ಗುರುವಾರ ಅಮೆರಿಕನ್ನರಿಗೆ ಸಡಗರ. ದೂರದಲ್ಲಿರುವ ಮಕ್ಕಳು – ಮರಿಗಳು, ನೆಂಟರಷ್ಟರು ಹಿರಿಯರನ್ನು ಕೂಡಿಕೊಳ್ಳಲು ಬರುತ್ತಾರೆ. ಈ ಹಬ್ಬ ಸಂತೋಷದ ಸಂಕೇತ. ಬದುಕಿರುವ, ತಮ್ಮ ಬಾಳನ್ನು ರೂಪಿಸಿದ ಹಿರಿಯರಿಗೆ ಗೌರವ, ಕೃತಜ್ಞತೆಗಳನ್ನರ್ಪಿಸುವ ಸಮಯ.

ಇದಕ್ಕೊಂದು ಇತಿಹಾಸವಿದೆ. 1620ರಲ್ಲಿ ‘ ಮೇ ಫ್ಲವರ್‘ ಎಂಬ ಹಡಗು ಕೆಲವು ಯಾತ್ರಿಕರನ್ನು ಮೆಸುಚೆಟ್ಸ್ ಗೆ ಹೊತ್ತು ತಂದಿತು. ಅವರು ಈಗ ‘ಪ್ಲೈಮತ್ ‘ ಎಂದು ಕರೆಯಲಾಗಿರುವ ನ್ಯೂಯಾರ್ಕ್ ನಿಂದ 380 ಕಿ ಮಿ ದೂರದಲ್ಲಿ ಹೊಸ ನೆಲೆಯಲ್ಲಿ ಬೀಡುಬಿಟ್ಟರು. ಈ ಜಾಗದಲ್ಲಿ ನವೆಂಬರ್ ತಿಂಗಳ ಕೊರೆಯುವ ಚಳಿ, ಹಿಮ ಗಾಳಿ. ತಿನ್ನಲು ಏನೂ ಇಲ್ಲದೆ ಉಪವಾಸದಿಂದ ಸಾಯುವ ಸ್ಥಿತಿ. ಅಲ್ಲೇ ಇದ್ದ ಸ್ಥಳೀಯ ಮೂಲ ನಿವಾಸಿಗಳಾದ ವಾಂಪನೋಗ್ ಬುಡಕಟ್ಟುವಾಸಿಗಳು, ಅವರಿಗೆ ಅನ್ನಾಹಾರ, ಬೆಚ್ಚನೆಯ ಸೂರು ನೀಡಿ ಸತ್ಕರಿಸಿದ್ದಷ್ಟೇ ಅಲ್ಲದೆ, ಹೊಸ ನೆಲೆಯಲ್ಲಿ ಬೆಳೆ ಬೆಳೆಯಲು ಸಹಕರಿಸಿದರು. ಮಾರನೆ ವರ್ಷ ಸಾಕಷ್ಟು ಫಸಲು ಬಂತು. ಆ ಸಂದರ್ಭದಲ್ಲಿಯೇ ಯಾತ್ರಿಗಳು ದೇವರನ್ನು ವಂದಿಸಿದ್ದೇ ಅಲ್ಲದೆ, ತಮ್ಮ ಕಷ್ಟ ಕಾಲದಲ್ಲಿ ನೆರವಾದ ಮೂಲ ನಿವಾಸಿಗಳನ್ನೂ ವಂದಿಸಿದರು.

ನೂರಾರು ಟರ್ಕೀ ಕೋಳಿಗಳನ್ನು ಬಳಸಿ ಅಡುಗೆ ಮಾಡಿದರು. ಇಂದಿಗೂ ಅಮೆರಿಕಾದಲ್ಲಿ ಥ್ಯಾಂಕ್ಸ್ ಗಿವಿಂಗ್ ಸಮಾರಂಭವಾದ ಮೇಲೆ ಒಂದೂ ಟರ್ಕೀ ಕೋಳಿ ಉಳಿದಿರುವುದಿಲ್ಲ. ಈ ಆಚರಣೆಯ ಬಗೆಗೆ ವಿರೋಧಾಭಾಸದ ಅಭಿಪ್ರಾಯಗಳಿರುವುದೂ ಉಂಟು. ಅಮೆರಿಕನ್ನರು ಈ ಸಮಾರಂಭವನ್ನು ಸಂಭ್ರಮಿಸಿದರೂ, ಮೂಲ ನಿವಾಸಿಗಳಾದ ‘ವ್ಯಾಂಪನೋಗ್ ‘ಬುಡಕಟ್ಟು ಜನಾಂಗ, ಇದನ್ನು ಪ್ರತಿಭಟಿಸಿ, ಆಚರಣೆಯನ್ನು ವಿರೋಧಿಸುತ್ತದೆ.

ಅಮೆರಿಕಾ ಚರಿತ್ರೆಯ ಪುಟಗಳಲ್ಲಿ ‘ಥ್ಯಾಂಕ್ಸ್ ಗಿವಿಂಗ್ ‘ ಆಚರಣೆಯ ಕಥೆಯನ್ನು ಬದಲಾಯಿಸಬೇಕು. ಅದು ಮೂಲ ನಿವಾಸಿಗಳ ನೆಲೆಯನ್ನು ಕಸಿದುಕೊಂಡು ಅವರನ್ನು ಅನಾಥರನ್ನನಾಗಿ ಮಾಡಿದ ನೋವಿನ ಕಥೆ, ಮೂಲ ನಿವಾಸಿಗಳನ್ನು ಗುಂಡಿಟ್ಟು ಕೊಂದು ರಕ್ತ ಪ್ರವಾಹ ಹರಿಸಿದ ಕಥೆ, ಎಂದು ಮೂಲ ನಿವಾಸಿಗಳ ಆಕ್ರೋಶ ಇದ್ದೇ ಇರುವಂತಹದು. ಆದರೆ, ಈ ನೆಪದಲ್ಲಿ ಅಮೆರಿಕಾದ್ಯಂತ ಮಕ್ಕಳು ಮರಿಗಳು ಮನೆಗೆ ಬರುವುದು, ಹಿರಿಯರನ್ನು ಕೂಡಿಕೊಳ್ಳುವುದು, ಕುಟುಂಬಗಳು ಒಂದಾಗಿ ಕೂಡಿ ಆನಂದಿಸುವುದು – ಇದಕ್ಕೆಲ್ಲ ಈ ಹಬ್ಬ ಒಂದು ಸಂಕೇತ.

ಈ ಬಾರಿ ಕೋವಿಡ್ ಸಂಕಷ್ಟದಲ್ಲಿ ಎಷ್ಟೊ ಜನ ಮನೆಗೆ ತೆರಳಲಾರದೆ, ಹಿರಿಯರನ್ನು ನೋಡಲಾರದೆ, ಕಣ್ಣೀರಿಟ್ಟಿದ್ದನ್ನು ಮೀಡಿಯಾಗಳು ಬಿತ್ತರಿಸುತ್ತಿದ್ದವು. ಅಮೆರಿಕಾದಲ್ಲಿ ಕೋವಿಡ್ ಸ್ಫೋಟಗೊಂಡಿರುವ ಕಾರಣ ಅಮೆರಿಕೆಯ ಹದಿನೆಂಟು ರಾಜ್ಯಗಳು ಟ್ರಾವೆಲ್ ಬ್ಯಾನ್ ಮಾಡಿವೆ. ‘ಇದೇ ನಿಮ್ಮ ಕೊನೆಯ ಥ್ಯಾಂಕ್ಸ್ ಗಿವಿಂಗ್ ಆಗ ಬಹುದು’ ಎಂದು ಎಚ್ಚರಿಕೆ ನೀಡಿದ್ದರೂ, ಮಿಲಿಯನ್ ಗಟ್ಟಲೆ ಜನ ವಿಮಾನಯಾನ ಮಾಡಿ ತಮ್ಮವರನ್ನು ಕೂಡಿಕೊಂಡಿದ್ದಾರೆ.

ಸರ್ಕಾರ ಸಂಕ್ರಮಣಾವಸ್ಥೆಯಲ್ಲಿದ್ದು, ಟ್ರಂಪ್ ಸರ್ಕಾರದಲ್ಲಿ ಜನ ಮಾಸ್ಕ್ ಅಭ್ಯಾಸ ಮಾಡಿಕೊಂಡಿಲ್ಲ. ಈಗ ಬೈಡನ್ ಸರ್ಕಾರ ಮಾಸ್ಕ್ ಕಡ್ಡಾಯ ಮಾಡುತ್ತಿದೆ. ಆದರೂ ಈ ವಿಚಾರದಲ್ಲಿ ಅಮೆರಿಕಾ ಜನತೆ ಖಚಿತತೆ ಇಲ್ಲದ ಎಡಬಿಡಂಗಿಗಳೆ. ಮಾಸ್ಕ್ ಗಳು ಅಷ್ಟು ಸುಲಭವಾಗಿ ಮಾರುಕಟ್ಟೆಗಳಲ್ಲಿ ಲಭ್ಯವೂ ಇಲ್ಲ. ಜನವರಿ ಇಪ್ಪತ್ತರಿಂದ ಇದಕ್ಕೆ ಕಠಿಣ ಪರಿಹಾರಗಳು ರೂಪುಗೊಳ್ಳಬೇಕಾಗಿದೆ. ಈ ಬಾರಿ ‘ಥ್ಯಾಂಕ್ಸ್ ಗಿವಿಂಗ್ ‘ ಕೋವಿಡ್ ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸಿರುವುದಂತೂ ನಿಜ.

‘ಥ್ಯಾಂಕ್ಸ್ ಗಿವಿಂಗ್‘ನ ಮಾರನೆಯ ಶುಕ್ರವಾರದ ದಿನ ಬರುವ ಸಂಭ್ರಮಾಚರಣೆಯೇ ‘ಕಪ್ಪು ಶುಕ್ರವಾರ‘, ’ಬ್ಲ್ಯಾಕ್ ಫ್ರೈಡೆ‘ ಇದಕ್ಕೆ ಯಾವುದೇ ಸಾಂಪ್ರಾಯಿಕ ಮಹತ್ವವೇನೂ ಇಲ್ಲ. ಇದಕ್ಕೆ ಸಾರ್ವತ್ರಿತ ರಜೆಯೂ ಇಲ್ಲ. ಬ್ಲ್ಯಾಕ್ ಫ್ರೈಡೇ, ಇದು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಕಾಣಿಸಿಕೊಂಡು 1975ರವರೆಗೆ ಫಿಲಿಡೆಲ್ಫಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದಿದು, ಕ್ರಮೇಣ ಇಡೀ ಅಮೆರಿಕಾದ್ಯಂತ ಜನಪ್ರಿಯವಾಯಿತು.

ಬಹಳಷ್ಟು ಅಮೆರಿಕನ್ನರು ಈ ದಿನವನ್ನು ಕ್ರಿಸ್ಮಸ್ ರಜಾದಿನಗಳ ನಾಂದಿ ಎಂದು ಭಾವಿಸುತ್ತಾರೆ. ಕ್ರಿಸ್ಮಸ್ ಗಾಗಿ ತಮ್ಮ ಬಂಧು ಬಾಂಧವರಿಗೆ, ಮನೆಗೆ ಸಾಮಾನು, ಉಡುಗೊರೆಗಳನ್ನು ಕೊಳ್ಳಲು ಪ್ರಾರಂಭಿಸುವ ದಿನವೂ ಹೌದು. 1869ರಲ್ಲಿ ವಾಲ್ ಸ್ಟ್ರೀಟ್ ನಲ್ಲಿ ಚಿನ್ನದ ಬೆಲೆ ಕುಸಿದು ಪಾತಾಳಕ್ಕಿಳಿದು ಚಿನ್ನದ ವ್ಯಾಪಾರಿಗಳು ನೀಲಾಂ ಆದ ಪ್ರಸಂಗವೂ ಇದರ ಹಿನ್ನೆಲೆಯಲ್ಲುಂಟು. ಆದ್ದರಿಂದಲೇ ಅದು ಬ್ಲ್ಯಾಕ್ ಫ್ರೈಡೇ ಆಯಿತು ಎನ್ನುವ ಕಥೆಯೂ ಉಂಟು.

ಈ ದಿನದ ಸಂಭ್ರಮವನ್ನು ಗ್ರಾಹಕ – ವ್ಯಾಪಾರಿಗಳ ಸಂಭ್ರಮ ಎನ್ನಬಹುದೇನೋ ?

ಇಡೀ ರಾತ್ರಿ ಅಮೆರಿಕನ್ನರು ಸುರಿಯುವ ಸೋನೆ ಮಂಜಿನಲ್ಲಿ ತಮಗೆ ಬೇಕಾದ ಅಂಗಡಿಗಳ ಮುಂದೆ ಟೆಂಟುಗಳನ್ನು ಹಾಕಿಕೊಂಡು ಬೆಚ್ಚನೆಯ ಬಟ್ಟೆ ಧರಿಸಿ, ದೇಹ ಬೆಚ್ಚಗಾಗಲು ವೈನ್, ಬ್ರಾಂಡಿಗಳನ್ನು ಸೇವಿಸಿ, ಅಂಗಡಿ ತೆರೆಯುವುದನ್ನೇ ನಿರೀಕ್ಷಿಸುತ್ತ ಮಕ್ಕಳು ಮರಿಗಳ ಸಮೇತ ಕ್ಯೂನಲ್ಲಿ ರಾತ್ರಿಯೆಲ್ಲ ಮಲಗಿರುವುದೂ ಉಂಟು. ಕಾರಣ, ಮೊದಲು ಬಂದವರಿಗೆ ಮೊದಲ ಆದ್ಯತೆ. ಸ್ಟಾಕುಗಳು ಮುಗಿದ ಮೇಲೆ ಆ ಸಾಮಾನುಗಳು ಅಲಭ್ಯ. ಕೆಲವು ಅಂಗಡಿಗಳು ಬೆಳಗಿನ ನಾಲ್ಕು ಗಂಟೆಗಳಿಗೆ ತೆರೆದರೆ, ಮತ್ತೆ ಕೆಲವು ಅಂಗಡಿಗಳು ಇಡೀ ರಾತ್ರಿ ಗ್ರಾಹಕರ ಸೇವೆಯಲ್ಲಿ ನಿರತವಾಗಿರುತ್ತದೆ. ಮೇಸಿ, ಜೆ ಸಿ ಪೆನ್ನಿ, ಟಾರ್ಗೆಟ್, ವಾಲ್ ಮಾರ್ಟ್, ಕಾಸ್ಟ್ಕೊ – ಮುಂತಾದ ಜನಪ್ರಿಯ ಅಂಗಡಿ ಮಳಿಗೆಗಳಿಗೆ ಜನ ಮುಗಿ ಬೀಳುತ್ತಾರೆ.

ಏಕಿಷ್ಟು ಸಂಭ್ರಮ ಖರೀದಿಸಲು ಎಂದರೆ, ಗ್ರಾಹಕರಿಗೆ ಅಂಗಡಿ ಮಾಲೀಕರು ತುಂಬ ಅಗ್ಗದ ಬೆಲೆಯಲ್ಲಿ ಮಾರಾಟ ಘೋಷಿಸಿರುತ್ತಾರೆ. ಕೆಲವೊಂದು ಜನಪ್ರಿಯ ದುಬಾರಿ ಬ್ರ್ಯಾಂಡಿನ ವಸ್ತುಗಳು, ಜನಪ್ರಿಯ ಅಂಗಡಿಗಳಲ್ಲಿ ಶೇ 60, 70ರಷ್ಟು ರಿಯಾಯಿತಿ ಘೋಷಿಸಿರುತ್ತದೆ. ಕೊಳ್ಳುಬಾಕ ಸಂಸ್ಕೃತಿಯ ಪ್ರತಿನಿಧಿಯಾದ ಗ್ರಾಹಕರು, ತಮಗೆ ಅಗತ್ಯವಿರಲಿ, ಇಲ್ಲದಿರಲಿ, ಸುಲಭ ಬೆಲೆಯಲ್ಲಿ ಸಾಮಾನು ಸಿಗುತ್ತಿದೆ ಎಂದು ಸಾಮಾನುಗಳನ್ನು ಲೋಡುಗಟ್ಟಲೆ ಮುಂದೆ ಎಂದಾದರೂ ಪ್ರಯೋಜನಕ್ಕೆ ಬರಲಿ ಎಂದು ಖರೀದಿಸುವುದೂ ಉಂಟು.

ಇನ್ನು ಕೆಲವರು, ನಿಜವಾಗಿಯೂ ಅವಶ್ಯಕ ಸಾಮಗ್ರಿಗಾಗಿ ವರ್ಷಪೂರ್ತಿ ಕನಸಿಸುತ್ತ ಕಾದು ಸಾಮಾನು ಕೊಳ್ಳುವವರೂ ಉಂಟು. ಅದೇನೇ ಇರಲಿ ’ಬ್ಲ್ಯಾಕ್ ಫ್ರೈಡೇ ‘ ಸೇಲ್ ಗಳಂತೂ ಅಮೆರಿಕಾದ್ಯಂತ ಅತ್ಯಂತ ಜನಪ್ರಿಯ ಸೇಲುಗಳು. ಹಾಗಂತ ಶುದ್ಧ ವ್ಯಾಪಾರೀ ಮನೋಭಾವದ ಅಮೆರಿಕನ್ ಉದ್ದಿಮೆದಾರರು, ಧರ್ಮಕ್ಕೇನು ಮಾರಾಟ ಮಾಡುವವರಲ್ಲ. ಒಂದು ದಿನದ ವ್ಯಾಪಾರ, ಅವರಿಗೆ ವರ್ಷದ ಲಾಭವನ್ನೂ ತಂದು ಕೊಡುವುದುಂಟು. ಇಡೀ ಕಂಪನಿಯ ಲಾಭ – ನಷ್ಟಗಳನ್ನು ನಿರ್ಧರಿಸುವುದು ಆ ದಿನ ನಡೆದ ವಹಿವಾಟುಗಳೇ.

‘ಥ್ಯಾಂಕ್ಸ್ ಗಿವಿಂಗ್ ‘ ಸುಗ್ಗಿಯ ಹಬ್ಬವಾದರೆ, ‘ಬ್ಲ್ಯಾಕ್ ಫ್ರೈಡೇ’ ರಾತ್ರಿ ಔತಣ ಕೂಟಗಳಿಗೆ ಹೆಸರಾದ ಹಬ್ಬ. ಮನೆಮಂದಿಯೆಲ್ಲ ಒಟ್ಟಿಗೆ ಕೂತು ಆನಂದಿಸುವ ರಾತ್ರಿಯೂಟದ ಸಂಭ್ರಮವನ್ನು ಈ ಶಾಪಿಂಗ್ ಅಡ್ಡಿ ಮಾಡಿ, ಪಾರಂಪಾರಿಕ ಸಾಂಸ್ಕೃತಿಕ ಆಚರಣೆಗಳಿಗೇ ಕುತ್ತು ತಂದಿದೆ, ಎಂದು ಹಿರಿಯರು ಅಲವತ್ತು ಕೊಳ್ಳುವುದುಂಟು. ಅವೆಲ್ಲವೂ ಶಾಪಿಂಗ್ ಮೋಜು, ಮಸ್ತಿಯಲ್ಲಿ ಮುಳುಗಿದ ಗ್ರಾಹಕರ ಕಿವಿ ಮೇಲೆ ಬೀಳುವುದಾದರೂ ಎಂತು? ಅದೇನೇ ಇರಲಿ, ಅದು ಅಮೆರಿಕಾದ ‘Highest Sales Day ‘ ವ್ಯಾಪಾರಿ – ಗ್ರಾಹಕ, ಇಬ್ಬರೂ ಖುಷ್ ಆದ ಸಂಭ್ರಮದಲ್ಲಿ ಮುಂದಿನ ವಾರಾಂತ್ಯಗಳನ್ನು ಅನುಭವಿಸುತ್ತಾರೆ.

ವಾರಾಂತ್ಯದ ಕಳೆದು ಬರುವ ಸೋಮವಾರವೇ ‘ಸೈಬರ್ ಮಂಡೆ‘. ವಿಶೇಷವಾಗಿ ಯುವ ಸಮುದಾಯ ಅತಿ ಆಸಕ್ತಿಯಿಂದ ಕಾತರಿಸಿ ಕಾಯುವ ಹಬ್ಬ. ಈ ಮೇಳ ಮಾರಾಟದಲ್ಲಿ ಬರೀ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ. ಐ ಫೋನುಗಳು, ಏರ್ ಪಾಡ್ ಗಳು, ಕಂಪ್ಯೂಟರ್, ಟೆಲಿವಿಷನ್ ಗಳು, ದ್ರೋಣ್ ಗಳು, ಸಗ್ ವೇಗಳು ಕನಸಿಸಲಾರದ ಅಗ್ಗದ ‘ಥ್ರೋ ಅವೇ ‘ ದರದಲ್ಲಿ. ಇವುಗಳೂ ಮೊದಲು ಬಂದವರಿಗೆ ಮೊದಲು ಹಾಗೂ ಸ್ಟಾಕ್ ಗಳು ಇರುವವರೆಗೆ ಮಾತ್ರ.

ಈ ಸೇಲಿಗೆ ಅಮೆರಿಕೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಮಕ್ಕಳಂತೂ ತಮಗೆ ಸಗ್ವೇ, ದ್ರೋಣ್ ಗಳನ್ನು ಕೊಡಿಸು ಎಂದು ಬೇಡಿಕೆಯಿಟ್ಟು ಸಾಂತಾ ಕ್ಲಾಸಿಗೆ ಪತ್ರಗಳನ್ನು ಬರೆಯುವುದೂ ಉಂಟು. ಬ್ಲಾಕ್ ಫ್ರೈಡೇ ಸೇಲಾಗಲಿ, ಸೈಬರ್ ಮಂಡೇ ಸೇಲಾಗಲಿ ಈವರೆಗೆ ಆನ್ ಲೈನ್ ಆದುದಿಲ್ಲ. ಈ ವರ್ಷ ಕೋವಿಡ್ ಕಾರಣಕ್ಕಾಗಿ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಕೆಲವು ಪ್ರತಿಷ್ಠಿತ ಅಂಗಡಿಗಳಲ್ಲಿ ಆನ್ಲೈನ್ ಸೇಲುಗಳು ಕಂಡು ಬಂದವು.

ಮುಂದಿನ ಬಹುದೊಡ್ಡ ಪರ್ವವೇ ಕ್ರಿಸ್ಮಸ್ ಈವ್ ಹಾಗೂ ಕ್ರಿಸ್ಮಸ್ ಹಬ್ಬಗಳು. ಡಿಸೆಂಬರ್ ನ ಇಡೀ ತಿಂಗಳು ಭರ್ತಿ ಕ್ರಿಸ್ಮಸ್ ಆಚರಣೆಯ ಸಿದ್ಧತೆಯಲ್ಲಿ ಮುಳುಗುತ್ತಾರೆ. ಈಗಾಗಲೇ ಮನೆಯಲ್ಲಿ ಕ್ರಿಸ್ಮಸ್ ಮರಗಳು, ಮನೆಗಳ ಮುಂದೆ ದೀಪಾಲಂಕಾರಗಳು, ಸಾಂತಾಕ್ಲಾಸ್, ಅವನ ರಥಗಳ ಪ್ರತಿಕೃತಿಗಳು ಪ್ರತಿಷ್ಠಾಪನೆಯಾಗಿವೆ. ಡೆಟ್ರಾಯ್ಟ್ ಸಮೀಪದ ಫ್ರಾಂಕನ್ ಮೂತ್ ನ 365 ದಿನವೂ ಕ್ರಿಸ್ಮಸ್ ಸಂಭ್ರಮದ ಬ್ರಾನರ್ಸ್ ಮಳಿಗೆಯಲ್ಲಿ ದಾಖಲೆ ಪ್ರಮಾಣದ ಕ್ರಿಸ್ಮಸ್ ವಸ್ತುಗಳ ಖರೀದಿ ಸಾಗಿದೆ. ಇನ್ನೇನು, ಇಲ್ಲಿಯ ಜನಪ್ರಿಯ ಬೇಕರಿಗಳು, ಕಂಪನಿಗಳು ಕೇಕು, ಕುಕಿಗಳ ತಯಾರಿಕೆಯಲ್ಲಿ ತೊಡಗಿವೆ. ಇಲ್ಲಿನ ಜನಪ್ರಿಯ ‘ಶಟೀಲಾ‘ ಎಂಬ ಮೆಡಿಟರೇನಿಯನ್ ಸಿಹಿ ಅಂಗಡಿಯಲ್ಲಿ ಬಕ್ಲಾವ, ಪೇಸ್ಟ್ರಿ ಹಾಗೂ ಕುಕಿಗಳು – ಇವುಗಳನ್ನು ಕೊಳ್ಳಲು ನೋಂದಣಿ ಮುಗಿದೇ ಹೋಗಿದೆ.

ಈಗಾಗಲೇ ಚರ್ಚುಗಳಿಗೆ ಸುಣ್ಣ – ಬಣ್ಣ, ಸಾರಣೆ – ಕಾರಣೆಗಳು ನಡೆದು ಮಿಷಿಗನ್ನಿನ ಚರ್ಚುಗಳು ಮದು ಮಕ್ಕಳಂತೆ ಸಿಂಗಾರಗೊಂಡಿವೆ. ಆಗಲೇ ಭಾನುವಾರದ ಪ್ರಾರ್ಥನಾ ಘಂಟೆಗಳು ಮೊಳಗಿವೆ. ಆದರೆ ಕೋವಿಡ್ ಕಾರಣದಿಂದ ಪ್ರತಿ ವರ್ಷದಂತೆ ಈ ವರ್ಷ ಮುಕ್ತ ಪ್ರವೇಶವಿಲ್ಲದೆ, ಭಕ್ತರಿಗೆ ಖಡಾ ಖಂಡಿತವಾಗಿ ಪ್ರವೇಶ ದ್ವಾರವನ್ನು ಮುಚ್ಚಲಾಗಿವೆ. ಪ್ರಾರ್ಥನೆ, ಪೂಜೆ, ಕ್ರಿಸ್ಮಸ್ ಕರೋಲ್ಗಳು – ಎಲ್ಲಾ ವರ್ಚುಯಲ್. ಜನ ಕೂಡ ಇದಕ್ಕೆ ತಮ್ಮನ್ನು ತಾವು ಸಿದ್ಧಗೊಳಿಸಿಕೊಳ್ಳತ್ತಿದ್ದಾರೆ.

ಈ ಬಾರಿ ಸಂಪ್ರದಾಯಸ್ಥರು ಶುಭದ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಕೇಡಿನ ವರ್ಷವಾಗಿ ವಿಶ್ವಾದ್ಯಂತ ಅನೇಕ ಸಾವು – ನೋವುಗಳು ಸಂಭವಿಸಿವೆ. ಈ ವರ್ಷ ‘ವೈಟ್ ಕ್ರಿಸ್ ಮಸ್‘ ಆಗಲಿ, ಎಂಬ ಹಾರೈಕೆಯಲ್ಲಿದ್ದಾರೆ. ವೈಟ್ ಕ್ರಿಸ್ ಮಸ್, ಎಂದರೆ ಹಿಮ ಸುರಿಯುವ ಕ್ರಿಸ್ ಮಸ್, ಶುಭ ಎಂಬುದು ಇವರ ನಂಬಿಕೆ. ಮಿಷಿಗನ್ ಈಗಾಗಲೇ ಹಿಮಪಾತದಲ್ಲಿ ಮುಳುಗೇಳುತ್ತಿದೆ. ಬೆಳಗ್ಗೆ ಏಳುವಾಗಲೇ ಆಕಾಶದಿಂದ ಅರಳೆ ರಾಶಿಗಳೋಪಾದಿಯಲ್ಲಿ ಹಿಮ ನಿಧಾನವಾಗಿ ಆಕಾಶದಿಂದ ಕೆಳಕ್ಕಿಳಿದು ಮರಗಳ ಮೇಲೆ, ಮನೆಗಳ ಚಾವಣಿಗಳ ಮೇಲೆ, ಹುಲ್ಲು ರಾಶಿಯನ್ನು ತಬ್ಬಿ ಸಾಂಗತ್ಯ ಸ್ಥಾಪಿಸುತ್ತಿದೆ. ಸ್ವಲ್ಪ ಸೂರ್ಯನ ಬೆಳ್ಳಿ ಕಿರಣಗಳು ತಾಗಿದರೂ, ತಾವೇ ಕರಗಿ, ಇದ್ದೆವೆಂಬ ಗುರುತೂ ಇಲ್ಲದಂತೆ ಇಲ್ಲವಾಗುತ್ತಿದೆ. ಹಿರಿಯರ ಹಾರೈಕೆಯಂತೆ ‘ಬಿಳಿ ಕ್ರಿಸ್ ಮಸ್‘ ಆಗಲಿ, ಜಗತ್ತು ಎಲ್ಲ ಸಂಕಷ್ಟಗಳಿಂದ ಮುಕ್ತವಾಗಲಿ, 2021 – ಹೊಸ ವರ್ಷ ಮನುಕುಲಕ್ಕೆ ಶುಭ ತರಲಿ.

ಮಿಷಿಗನ್, ಅಮೆರಿಕಾ

‍ಲೇಖಕರು Avadhi

December 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: