ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.
ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.
ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು. ಮಾಡಿದ್ದಾರೆ.
‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.
ಕೋಣೆಯ ಹೊರಗೆ ನನ್ನನ್ನೇ ಕಾಯುತ್ತಾ ಕೂತಿದ್ದ ಚಿಕ್ಕಮ್ಮ ಅದ್ಯಾವುದೋ ಚಡಪಡಿಕೆಯಲ್ಲಿದ್ದರು. ಅವರ ಮುಖದಲ್ಲಿ ಗೊಂದಲವಿತ್ತು. ‘ಏನಾಯ್ತು ಚಿಕ್ಕಮ್ಮ..?’ ಅಂದೆ. ‘ಬಾ ಕುಳಿತುಕೊ ಸ್ವಲ್ಪ ಮಾತಾಡಬೇಕು’ ಅವರ ಮುಖ ಗಂಭೀರವಾಗಿತ್ತು.
ಅನುಮಾನದ ಬೆನ್ನೇರಿ…
ಆ ಸೌಂಡ್ ಪ್ರೂಫ್ ಕೊಣೆಯೊಳಗೆ, ಅಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನೆಲ್ಲ ನೋಡುತ್ತಾ, ಅತೀ ಒತ್ತಡದಿಂದ ಕೂತಿದ್ದ ನಮಗೆ ಆವತ್ತು ಅಕ್ಷರಷಃ ಉಸಿರುಗಟ್ಟುತ್ತಿತ್ತು. ದೇವರಾಣೆ ಹೇಳ್ತಿದ್ದೀನಿ, ಪ್ರಪಂಚದಲ್ಲಿ ದುಃಖದ ತೀವ್ರತೆ ಹೇಗಿರುತ್ತೆ ಅಂತ ತಿಳಿದಿದ್ದೇ ಆವತ್ತು. ವಿಷಯ ದೃಢವಾದ ಮೇಲಂತೂ ನಮ್ಮಿಬ್ಬರಲ್ಲೂ ಗಾಢ ಮೌನ. ಯಾರು ಮೊದಲು ಮಾತನಾಡಿದರೂ ಕಣ್ಣೀರಿನ ಕಟ್ಟೆ ಒಡೆಯುವುದಂತೂ ನಿಶ್ಚಯ !
ಅದು 2017 ರ ಗಣೇಶ ಚತುರ್ಥಿ ಸಂಭ್ರಮದ ಸಂದರ್ಭ. ಚತುರ್ಥಿಯ ಹಿಂದಿನ ದಿನ, ಗೌರಿ ಪೂಜೆಗೆ ಪ್ರೀತಿಯ ಚಿಕ್ಕಮ್ಮ ನಮ್ಮನ್ನ ಊಟಕ್ಕೆ ಕರೆದಿದ್ದರು. ನನ್ನ ಗಂಡ ವಿನಯ್ ಆಫೀಸ್ ಗೆ ರಜಾ ಇಲ್ಲದ ಕಾರಣ ನಾನೊಬ್ಬಳೇ ಒಂದೂವರೆ ವರ್ಷದ ನನ್ನ ಮಗನನ್ನು ಎತ್ತಿಕೊಂಡು ಅವರ ಮನೆಗೆ ಹೋಗಿದ್ದೆ. ಮಗು ಅಲ್ಲಿ ಚೆಂದದ ಆಟವಾಡ್ದ. ತುತ್ತು ಊಟವನ್ನೂ ಮಾಡಿದ್ದ. ಖುಷಿಯಾಗಿತ್ತು ಸಮಯ. ಪೂಜೆಯೆಲ್ಲ ಮುಗಿದು, ಊಟವೂ ಮುಗಿದ ಮೇಲೆ ಮಗುವನ್ನ ಮಲಗಿಸಲು ಚಿಕ್ಕಮ್ಮನ ಕೋಣೆಗೆ ಹೋಗಿದ್ದೆ.
ಕೋಣೆಯ ಹೊರಗೆ ನನ್ನನ್ನೇ ಕಾಯುತ್ತಾ ಕೂತಿದ್ದ ಚಿಕ್ಕಮ್ಮ ಅದ್ಯಾವುದೋ ಚಡಪಡಿಕೆಯಲ್ಲಿದ್ದರು. ಅವರ ಮುಖದಲ್ಲಿ ಗೊಂದಲವಿತ್ತು. ‘ಏನಾಯ್ತು ಚಿಕ್ಕಮ್ಮ..?’ ಅಂದೆ. ‘ಬಾ ಕುಳಿತುಕೊ ಸ್ವಲ್ಪ ಮಾತಾಡಬೇಕು’ ಅವರ ಮುಖ ಗಂಭೀರವಾಗಿತ್ತು.
ಸುಮ್ಮನೆ ಹೋಗಿ ಕುಳಿತೆ ಅವರ ಪಕ್ಕದಲ್ಲಿ. ‘ನೋಡು, ಅಮೃತಾ ನಾನು ಹೀಗೆ ಹೇಳ್ತಿದ್ದೀನಿ ಅಂತ ಬೇಜಾರಾಗಬೇಡ’ ಅನ್ನೋ ಪೀಠಿಕೆ ಇಟ್ಟರು. ನಾನು ಆಯ್ತು ಎಂಬಂತೆ ತಲೆ ಅಲ್ಲಾಡಿಸಿದೆ. ‘ನಿನ್ನ ಮಗು ಚೂಟಿಯಿದ್ದಾನೆ, ತುಂಬಾ ಚುರುಕಾಗಿದ್ದಾನೆ. ಆರೋಗ್ಯವಾಗಿದ್ದಾನೆ. ಆದರೆ ಅವನ ಬೆಳವಣಿಗೆಯ ಹಂತದಲ್ಲಿ ಒಂದೇ ಒಂದು ಕೊರತೆ ಇದೆಯಲ್ವಾ..?’ ಅಂದರು.
ಅವರು ಮುಂದೇನು ಹೇಳಬಹುದು ಎಂಬ ಕುತೂಹಲದಲ್ಲಿಯೇ ಅವರ ಮುಖವನ್ನೇ ನೋಡುತ್ತಾ ಕುಳಿತೆ. ಅವರೇ ಮುಂದುವರೆದರು.
‘ಸಮಯಕ್ಕೆ ಸರಿಯಾಗಿ ಎಲ್ಲ ಚಟುವಟಿಕೆಗಳನ್ನೂ ಮಾಡುತ್ತಿರುವ ಅವನ ಬೆಳವಣಿಗೆ ನೋಡಿದರೆ, ಇಷ್ಟೊತ್ತಿಗಾಗಲೇ ಅವನು ಮಾತನಾಡಬೇಕಿತ್ತು’ ಯಾಕೋ ಹೊಟ್ಟೆಯಲ್ಲಿ ತಳಮಳ ಶುರುವಾಗಿತ್ತು ನನಗೆ. ‘ನಿನ್ನ ಮಗುವಿಗೆ ಕಿವಿ ತೊಂದರೆ ಇದೆ ಅಂತ ನನಗೆ ಅನ್ನಿಸ್ತಿದೆ. ಒಂದೂವರೆ ವರ್ಷವಾದರೂ ಮಗು ಏನೊಂದೂ ಮಾತನಾಡಿಲ್ಲ. ನಾನು ಕರೆದು, ಶಬ್ಧಮಾಡಿ, ಚಪ್ಪಾಳೆ ತಟ್ಟಿದರೂ ಮಗು ಗಮನಿಸಿಲ್ಲ. ಮಗೂಗೆ ಒಂದುವರೆ ವರ್ಷವಾಗಿಬಿಟ್ಟಿದೆ. ಇನ್ನೂ ತಡ ಮಾಡಬೇಡಿ. ತಡ ಮಾಡಿದಷ್ಟೂ ತೊಂದರೆ ಜಾಸ್ತಿ. ಇವತ್ತೇ ನೀನು ನಿನ್ನ ಗಂಡನ ಹತ್ತಿರ ಮಾತನಾಡಿ ಒಂದು ಬಾರಿ ಮಗುವನ್ನ ಟೆಸ್ಟ್ ಮಾಡಿಸಿ’ ಅಂದುಬಿಟ್ಟರು.
ಅಳೆದು ತೂಗಿ, ಸಮಾಧಾನವಾಗಿ ಸೂಕ್ತ ಸಂದರ್ಭ ಹುಡುಕಿ ತಮ್ಮ ಸಲಹೆ ನೀಡಿದ್ದ ನನ್ನ ಚಿಕ್ಕಮ್ಮನ ಮಾತು ನನಗೆ ಆವತ್ತು ರುಚಿಸಲಿಲ್ಲ. ನನ್ನ ಮನಸಿಗೇನೋ ಕಸಿವಿಸಿ, ಕೋಪ ಮಿಶ್ರಿತ ದುಃಖ. ಮಲಗಿರುವ ಮಗು ಏಳುವ ತನಕವೂ ಅಲ್ಲಿರೋಕೆ ಮನಸ್ಸಾಗದೇ, ನಿದ್ದೆಯಲ್ಲಿದ್ದ ಮಗುವನ್ನೇ ಎತ್ತಿಕೊಂಡು ಮನೆಗೆ ಹೊರಟುಬಿಟ್ಟೆ. ಓಲಾ ಕ್ಯಾಬ್ ನಲ್ಲಿ ನನ್ನ ಕಾಲ ಮೇಲೆ ಮಲಗಿರುವ ಮಗುವಿನ ಮುಖ ನೋಡ್ತಾ ‘ಬೇಗ ಮಾತನಾಡಿಬಿಡು ಮಗಾ..’ ಅಂದುಕೊಂಡೆ. ಡ್ರೈವರ್ ಒಂದು ಕ್ಷಣ ಮುಖ ತಿರುಗಿಸಿ ಮುಂದೆ ನೋಡಿದ್ದ. ನಾನದನ್ನ ಅಷ್ಟು ಜೋರಾಗಿ ಹೇಳಿಬಿಟ್ಟಿದ್ದೆ ಎಂದು ಗೊತ್ತಾಗಿದ್ದೇ ಆವಾಗ. ‘ಇಲ್ಲ ಇಲ್ಲ ಹಾಗೆಲ್ಲ ಆಗಲ್ಲ. ಚಿಕ್ಕಮ್ಮ ಹೇಳಿದ್ದೆಲ್ಲ ಸುಳ್ಳಾಗಲಿ ದೇವರೇ..’ ಮನಸ್ಸು ಒಂದೇ ಸವನೆ ಕನವರಿಸುತ್ತಿತ್ತು.
ಚಂದ್ರಾ ಲೇಔಟ್ ನ ಚಿಕ್ಕಮ್ಮನ ಮನೆಯಿಂದ ರಾಜರಾಜೇಶ್ವರಿ ನಗರಕ್ಕೆ ಅರ್ಧಗಂಟೆಯೊಳಗೇ ಕ್ಯಾಬ್ ಬಂದು ತಲುಪಿತ್ತು. ಚಿಕ್ಕಮ್ಮನ ಮಾತುಗಳೇ ಮನಸ್ಸಿನ ತುಂಬಾ ತುಂಬಿಕೊಂಡಿದ್ದ ನನಗೆ ಡ್ರೈವರ್ ಲೊಕೇಶನ್ ರೀಚ್ ಆಗಿದ್ದೂ ಗೊತ್ತಾಗಲಿಲ್ಲ. ನಮ್ಮ ಮನೆಯ ಮುಂದೆ ಕ್ಯಾಬ್ ನಿಲ್ಲಿಸಿದ ಡ್ರೈವರ್, ‘ಮೇಡಮ್, ಓಲಾ ಮನೀನಾ…?’ ಅಂದ. ಆತ ನನ್ನ ಕೇಳಿದಾಗಲೇ ನನಗೆ ಮೈಮೇಲೆ ಪ್ರಜ್ಞೆ ಬಂದಿದ್ದು. ಹಾ.. ಹೌದು ಸರ್ ಎನ್ನುತ್ತಾ, ಕಾರ್ ನ ಬಾಗಿಲು ತೆರೆದು ಮಗುವನ್ನ ಎದೆಗೊರಗಿಸಿ ಎತ್ತಿಕೊಂಡು ಕ್ಯಾಬ್ ಇಳಿದೆ. ‘ಮೇಡಮ್… 5 ರೇಟಿಂಗ್ ಕೊಡಿ’ ಅಂದ ಆತ ನಗುತ್ತಾ. ನಾನು ‘ಆಯ್ತು ಸರ್’ ಎಂದೆ ಗಂಭೀರವಾಗಿ.
ಮನೆಯ ಗೇಟ್ ತೆರೆದು, ಲಾಕ್ ಆಗಿದ್ದ ಬಾಗಿಲ ಬಳಿ ನಿಂತು, ವ್ಯಾನಿಟಿ ಬ್ಯಾಗ್ ನ ಹೇಗ್ಯೇಗೋ ತಡಕಾಡಿ ಕೀ ತೆಗೆದು, ಕಿಂಡಿಯಲ್ಲಿ ಕೀ ತೂರಿಸಿ ಬಾಗಿಲು ತೆರೆದೆ. ‘ಕಿವಿ ಕೇಳಲ್ವಂತಾ ನನ್ನ ಮಗಂಗೆ..? ಇಷ್ಟು ಮುದ್ದಾದ, ಚೂಟಿ ಮಗುವಿಗೆ..?’ ಹೇಗೆ ಮನಸ್ಸು ಬರುತ್ತೋ ಇಂಥ ಮಾತನ್ನಾಡೋಕೆ..!’ ಮತ್ಯಾರೂ ಇಲ್ಲದ ಆ ಮನೆಯಲ್ಲಿ ನನಗೆ ನಾನೇ ಜೋರಾಗಿ ಹೇಳಿಕೊಂಡೆ.
ನನ್ನೊಳಗಿನ ಅಸಮಾಧಾನ ಮನಸ್ಸನ್ನು ಕಲಸಿಬಿಟ್ಟಿತ್ತು. ದುಃಖ ಒತ್ತರಿಸಿ ಬಂತು. ಅಳುತ್ತಲೇ ಬೆಡ್ ರೂಂಗೆ ಹೋಗಿ, ಇದ್ಯಾವುದರ ಪರಿವೆಯೂ ಇಲ್ಲದಂತೆ ನಿಶ್ಚಿಂತೆಯಿಂದ ನಿದ್ದೆ ಮಾಡಿದ್ದ ಮಗುವಿನ ತಲೆಗೊಂದು ಮುತ್ತುಕೊಟ್ಟು ಹಾಸಿಗೆಯ ಮೇಲೆ ಮಲಗಿಸಿದೆ. ಮಲಗಿದ್ದ ಮುದ್ದು ಮಗುವಿನ ಮುಖ ನೋಡಿ ಕಣ್ಣೀರು ಒತ್ತರಿಸಿ ಬಂತು.
ಪೀಣ್ಯದ ‘ಧರಿತ್ರಿ ಅಜಿತ ಚೇತನ’ ವಿಶೇಷ ಮಕ್ಕಳ ಶಾಲೆಯ ಮುಖ್ಯೋಧ್ಯಾಪಕಿಯಾಗಿರುವ ನನ್ನ ಚಿಕ್ಕಮ್ಮ ವನಿತಾ ಹೆಗಡೆ ಮಾತನ್ನ ಅಲಕ್ಷಿಸುವಂತೆಯೂ ಇರಲಿಲ್ಲ. ಯಾಕಂದರೆ, ಸಮಸ್ಯೆಯಿರುವ ಅದೆಷ್ಟೋ ಮಕ್ಕಳನ್ನ ಅವರು ದಿನನಿತ್ಯ ಕಾಣುತ್ತಾರೆ. ಅವರ ಅನುಭವದ ಎದುರು ನಮ್ಮ ಮಮತೆ ಕುರುಡು ಎಂಬುದು ಮನೆಗೆ ಬಂದು ತಂಪಾಗಿ ಯೋಚಿಸಿದಾಗ ಅನ್ನಿಸತೊಡಗಿತ್ತು.
ಗಂಟೆಗಟ್ಟಲೇ ಯೋಚಿಸುತ್ತಾ ಅಲ್ಲೇ ಒರಗಿದೆ. ಮಗುವಿಗೆ ಎಚ್ಚರಾಯ್ತು. ಮಗುವಿಗೆ ಹಾಲೂಡಿಸಿ ಹಾಲ್ ಗೆ ಕರೆತಂದು ಅದಕ್ಕೊಂದಿಷ್ಟು ಆಡಲು ಆಟಿಕೆ ಕೊಟ್ಟು, ನನ್ನ ಪರೀಕ್ಷೆ ಶುರು ಮಾಡಿದ್ದೆ. ಅವನಿಗೆ ಕಾಣದಂತೆ ನಿಂತುಕೊಂಡು ‘ಅಥರ್ವ’ ಅಂತ ಕೂಗಿದೆ. ಮೆದುವಾಗಿ, ಜೋರಾಗಿ ಒಂದೆರಡ್ಮೂರು ಬಾರಿ ಕರೆದೆ. ಮಗು ಆಡುವುದರಲ್ಲೇ ಮಗ್ನನಾಗಿತ್ತು. ಅಡುಗೆ ಮನೆಯಿಂದ ಒಂದೆರಡು ಪಾತ್ರೆಗಳನ್ನು ತಂದು ಅವನ ಹಿಂದೆ ನಿಂತು ಬೀಳಿಸಿದ್ದೆ. ಪಾತ್ರೆ ಬಿದ್ದ ಶಬ್ಧಕ್ಕೂ ಆತ ತಿರುಗಿ ನೋಡಲಿಲ್ಲ. ಚಪ್ಪಾಳೆ ತಟ್ಟಿದೆ, ಬಲೂನ್ ಊದಿ ಒಡೆದೆ, ಬಾಗಿಲು ತಟ್ಟಿದ್ದೆ, ಮತ್ತೆ ಮತ್ತೆ ಹೆಸರು ಕೂಗಿದೆ. ಊಹೂಂ. ಇಲ್ಲ ನನ್ನ ಪರೀಕ್ಷೆಗಳಿಗೆ ನಾನು ಬಯಸಿದ ಫಲಿತಾಂಶ ಬಂದೇ ಇಲ್ಲ.
ಒಂದೇ ಒಂದು ಬಾರಿಯೂ ನನ್ನ ಮಗ ಶಬ್ಧಗಳಿಗೆ ಪ್ರತಿಕ್ರಿಯಿಸಲಿಲ್ಲ. ನನ್ನ ಪ್ರತಿಯೊಂದು ಪರೀಕ್ಷೆ ಸೋತಾಗಲೂ ಕಣ್ಣಲ್ಲಿ ನೀರು ಒತ್ತರಿಸಿಕೊಂಡು ಬರುತ್ತಿತ್ತು. ಪೂರ್ತಿನಿದ್ದೆ ಮಾಡಿ ಎದ್ದು ನೆಮ್ಮದಿಯಾಗಿ ಆಟವಾಡ್ತಿದ್ದ ಕಂದ, ತನ್ನ ಆಟಕ್ಕೆ ಕರೆಯುವುದಕ್ಕಾಗಿ ನನ್ನತ್ತ ನೋಡಿದ. ಅಳುತ್ತಿದ್ದ ನನ್ನ ನೋಡಿ ಅವನಿಗೇನನ್ನಿಸಿತ್ತೋ ಏನೋ.. ಖುಷಿಯಲ್ಲಿದ್ದ ಮಗು ಮಂಕಾಯಿತು. ಬಿಕ್ಕುತ್ತಿದ್ದ ನನ್ನನ್ನೇ ಐದು ನಿಮಿಷ ನೋಡಿ, ತಾನೂ ಅಳೋಕೆ ಶುರುಮಾಡಿದ್ದ. ‘ನೀನ್ಯಾಕೆ ಅಳ್ತಿಯೋ ಕಂದ..’ ಅನ್ನುತ್ತಾ ಅವನನ್ನ ಗಟ್ಟಿಯಾಗಿ ತಬ್ಬಿಕೊಂಡೆ.
ರಾತ್ರಿ 8.30ರ ಸಮಯ. ರಾಯಲ್ ಎನ್ಫೀಲ್ಡ್ ಬೈಕ್ ಮನೆಯ ಮುಂದೆ ಪಾರ್ಕ್ ಆಗ್ತಾ ಇದ್ದಂತೆ, ನೆಲದ ಮೇಲೆ ಮಲಗಿ ಅದೇನೋ ಆಡ್ತಾ ಇದ್ದ ಅಥರ್ವ, ಬಾಗಿಲ ಬಳಿ ಓಡಿಹೋಗಿದ್ದ. ನನಗೋ ಆಶ್ಚರ್ಯವೋ ಆಶ್ಚರ್ಯ. ಇಷ್ಟೊತ್ತು, ಯಾವ ಶಬ್ಧಕ್ಕೂ ಪ್ರತಿಕ್ರಿಯಿಸದ ಇವನಿಗೆ ಬೈಕ್ ಶಬ್ದ ಕೇಳಿಸಿದೆ ಎಂಬ ಸಂಗತಿ, ನನ್ನ ಮುಖದ ಮೇಲೆ ಮುಗುಳು ನಗು ತರಿಸಿತ್ತು.
ನಗುತ್ತಾ ಬಾಗಿಲು ತೆರೆದೆ. ಅಥರ್ವನ ಅಪ್ಪ ಬಂದಿದ್ದರು. ಮಗನಿಗೋ ಖುಷಿಯೋ ಖುಷಿ. ತನ್ನ ಕೈಲಿದ್ದ ಬಾಲ್ ನ ಅಪ್ಪನ ಕೈಯ್ಯಲ್ಲಿಟ್ಟು ಅವರ ಕೈ ಹಿಡಿದೆಳೆಯಲು ಶುರು ಮಾಡಿದ್ದ. ಗಂಡ ಆಫೀಸ್ನಿಂದ ಬರುವುದನ್ನೇ ಕಾಯ್ತಾ ಇದ್ದ ನಾನು, ಇಡೀ ದಿನ ನಡೆದಿದ್ದೆಲ್ಲ ಒಂದೇ ಉಸುರಿಗೆ ಹೇಳಿದೆ. ನನ್ನ ಕತ್ತಿನ ತನಕ ತುಂಬಿದ್ದ ಆತಂಕವನ್ನ ಅವನಿಗೂ ಹಂಚಿದ್ದೆ. ಊದಿಕೊಂಡ ನನ್ನ ಕಣ್ಣುಗಳನ್ನ ನೋಡಿಯೇ, ಪರಿಸ್ಥಿತಿ ಅರ್ಥಮಾಡಿಕೊಂಡ ಅವನು ಆ ಕ್ಷಣವೇ ಚಿಕ್ಕಮ್ಮನಿಗೆ ಫೋನಾಯಿಸಿದ್ದ.
ನನಗೆ ಹೇಳಿದ್ದೆಲ್ಲವನ್ನ ಅವನಿಗೂ ಹೇಳಿದ್ದರು ಚಿಕ್ಕಮ್ಮ. ಚಿಕ್ಕಮ್ಮನ ಸಲಹೆಯ ಪ್ರಕಾರ ಸಧ್ಯದಲ್ಲೇ ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿರುವ ‘ಡಾ. ಎಸ್.ಆರ್. ಚಂದ್ರಶೇಖರ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್’ ಹೋಗಿ ಮಗುವನ್ನ ಟೆಸ್ಟ್ ಮಾಡಿಸುವ ನಿಶ್ಚಯವೂ ಆಗಿಹೋಯ್ತು.
ಗಣೇಶನ ಹಬ್ಬ ಮುಗಿದ ಮರುದಿನದ ಶನಿವಾರ ಆಗಸ್ಟ್ 27 ರಂದು ಬೆಳಗ್ಗೆ 8.30ಕ್ಕೆ ಓಲಾ ಕ್ಯಾಬ್ ಬಂದು ಮನೆಯ ಮುಂದೆ ನಿಂತಿತ್ತು. ಅದಾಗಲೇ ಸಿದ್ಧರಾಗಿ ನಿಂತಿದ್ದ ನಾವು, ಪುಟಾಣಿ ಅಥರ್ವನನ್ನ ಎತ್ತಿಕೊಂಡು ಕ್ಯಾಬ್ ಏರಿದೆವು. ಬೆಳಗಿನ ಸಮಯವಾದ್ದರಿಂದ ರಾಜರಾಜೇಶ್ವರಿ ನಗರದಿಂದ ಲಿಂಗರಾಜಪುರಂನ ಒಂದನೇ ಹಂತದಲ್ಲಿರುವ ಇನ್ಸ್ಟಿಟ್ಯೂಟ್ ತಲುಪಲು ಕೇವಲ 45 ನಿಮಿಷ ತೋರಿಸ್ತಾ ಇತ್ತು. ನಮ್ಮಿಬ್ಬರಲ್ಲೂ ಅದೇನೋ ಅವ್ಯಕ್ತ ಆತಂಕ. ಆವತ್ತೇ ಸಂಪೂರ್ಣ ಪರೀಕ್ಷೆ ಮಾಡಿಸಿ, ‘ನಮ್ಮ ಮಗುವಿಗೆ ಏನೂ ತೊಂದರೆ ಇಲ್ಲ’ ಎಂಬ ಫಲಿತಾಂಶ ಪಡೆಯುವ ತವಕ.
ಕಾರ್ ನ ಕಿಟಕಿ ದಿಟ್ಟಿಸುತ್ತಾ ಕುಳಿತಿದ್ದ ನನ್ನ ನೋಡಿ ‘ಅಮ್ರೂ.. ಏನೂ ಆಗಲ್ಲ, ಚಿಂತೆ ಮಾಡಬೇಡ. ಕಿವಿಯೊಳಗೆ ಗುಗ್ಗೆ ಕಟ್ಟಿಕೊಂಡಿರಬೇಕು. ಅದನ್ನ ಕ್ಲೀನ್ಮಾಡಿದರೆ ಎಲ್ಲ ಸರಿಹೋಗುತ್ತೆ. ಟೆಸ್ಟ್ ಮಾಡಿ ಏನೂ ಪ್ರಾಬ್ಲಮ್ ಇಲ್ಲ ಅಂತ ಹೇಳ್ತಾರೆ ನೋಡು’ ಆತ್ಮವಿಶ್ವಾಸದಿಂದ ಹೇಳಿದ್ದ ವಿನಯ್. ನನ್ನ ಸಮಾಧಾನಕ್ಕೆ ಅವನು ಹಾಗೆ ಹೇಳ್ತಿದ್ದಾನೆ ಅಂತ ನನಗೆ ಗೊತ್ತಿದ್ದರೂ, ನಾನು ನಗುತ್ತಲೇ ‘ಹಾ..ಇರಬಹುದು. ನೋಡೋಣ’ ಎಂದೆ.
ಅದೂ ಕೂಡ ಅವನ ಸಮಾಧಾನಕ್ಕಾಗಿಯೇ.
ಅಲ್ಲಿಯ ತನಕ ಮಕ್ಕಳ ವೈದ್ಯರಲ್ಲಿಗೆ ಮಾತ್ರ ಹೋಗಿ ಅನುಭವವಿದ್ದ ನಮಗೆ, ನಮ್ಮ ಮಗುವಿನ ಕಿವಿ ತೊಂದರೆಯೂ ಹಾಗೆಯೇ, ಹೋದ ತಕ್ಷಣ ಡಾಕ್ಟರ್ ಪರೀಕ್ಷೆ ಮಾಡಿ ಸಮಸ್ಯೆ ಇದೆಯೋ ಇಲ್ಲವೋ ಎಂಬುದನ್ನ ಹೇಳಿಬಿಡುತ್ತಾರೆ ಅಂದುಕೊಂಡಿದ್ದೆವು.
ಬೆಳಗ್ಗೆ 9.30ಕ್ಕೆ ಕ್ಯಾಬ್ ಇನ್ಸ್ಟಿಟ್ಯೂಟ್ ತಲುಪಿತ್ತು. ಮಗುವನ್ನ ವಿನಯ್ಎತ್ತಿಕೊಂಡಿದ್ದ. ನಾನು ಕ್ಯಾಬ್ ನಿಂದ ಇಳಿದು ಆ ಕಟ್ಟಡವನ್ನ ದಿಟ್ಟಿಸಿದೆ. ದೊಡ್ಡ ಕಟ್ಟಡ. ‘ಡಾ. ಎಸ್.ಆರ್. ಚಂದ್ರಶೇಖರ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್’ ಎಂದು ದಪ್ಪ ಅಕ್ಷರಗಳಲ್ಲಿ ಕಟ್ಟಡದ ಮೇಲೆ ಬರೆಯಲಾಗಿತ್ತು. ಆ ಕಟ್ಟಡವನ್ನ ನೋಡಿದಾಗ, ಮನಸ್ಸಿನೊಳಗೇನೋ ಮಿಶ್ರಭಾವ! ‘ನನ್ನ ಮಗನ ಭವಿಷ್ಯ ನಿರ್ಧರಿಸುವ ಜಾಗ ಇದು. ಓ ದೇವರೇ, ನಮ್ಮ ಸಂದೇಹವನ್ನೆಲ್ಲ ಇಲ್ಲಿ ಸುಳ್ಳು ಮಾಡಪ್ಪ’ ಅಂತ ದೇವರನ್ನ ಬೇಡಿಕೊಂಡೆ.
ನಾವು ಮೂವರು ಕಟ್ಟಡದ ಕಾಂಪೌಂಡ್ಒಳಗೆ ಕಾಲಿಟ್ಟೆವು. ಅಲ್ಲಿಯ ತನಕ ಒಬ್ಬ ಕಿವುಡು ಮಗುವನ್ನೂ ಹತ್ತಿರದಿಂದ ನೋಡಿರದಿದ್ದ ನಮಗೆ ಆಗೇನು ಗೊತ್ತು, ಕಿವುಡು ಮಕ್ಕಳ ಪಾಲಕರ ಗುಂಪಿನಲ್ಲಿ ನಾವೂ ಕೂಡ ಖಾಯಂ ಸದಸ್ಯರಾಗುತ್ತೇವೆ ಅಂತ..!
0 ಪ್ರತಿಕ್ರಿಯೆಗಳು