ಅಮೃತಾ ಹೆಗಡೆ ಅಂಕಣ- ಬೇಡವೇ ಬೇಡ ‘ಇಷ್ಟಾದರೆ ಸಾಕು’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

28

‘ಇರಲಿ ಬಿಡು, ಇವನಿಗೆ ಮಾತೇ ಬರಲ್ಲ ಅಂದುಕೊಂಡಿದ್ದೆವು ನಾವೆಲ್ಲ, ಮಾತಂತೂ ಬರ್ತಾ ಇದೆ. ಸ್ಪಷ್ಟತೆ ಬರಲಿ ಬರದೇ ಇರಲಿ, ಮಾತಂತೂ ಬಂತಲ್ಲ.’ ಸ್ಕೂಲ್​ಗೆ ಹೊರತಾಗಿರುವ ಅನೇಕರಿಂದ ಇಂಥ ಸಮಾಧಾನದ ಮಾತುಗಳು ನನ್ನ ಕಿವಿಗೆ ಬೀಳತೊಡಗಿದ್ದವು. ಯಾಕೋ ಇಂಥ ಮಾತುಗಳಿಂದ ನನಗೆ ಸಮಾಧಾನವಂತೂ ಆಗುತ್ತಿರಲಿಲ್ಲ. ಹೊರತಾಗಿ ಮುಂದೆ ಹೆಜ್ಜೆ ಇಡಲು ಮುಂದಾದವಳನ್ನು ಹಿಂದೆ ಜಗ್ಗಿದಂತೆ ಭಾಸವಾಗುತ್ತಿತ್ತು. ಮನಸಿನ ಮೂಲೆಯಲ್ಲೆಲ್ಲೋ ಚುಚ್ಚಿದಂತಾಗುತ್ತಿತ್ತು. ಏಕೆಂದರೆ ನನ್ನ ನಿರೀಕ್ಷೆ ಅದಾಗಿರಲೇ ಇಲ್ಲ. ನಾನೊಬ್ಬಳೇ ಅಲ್ಲ. ನಮ್ಮ ಶಾಲೆಯಲ್ಲಿ ತನ್ನ ಕಿವುಡು ಮಗುವಿಗೆ ಮಾತು ಕಲಿಸಲು ಕುಳಿತ ಪ್ರತಿ ತಾಯಿಗೂ ‘ತನ್ನ ಕೂಸು ಎಲ್ಲರಂತಾಗಬೇಕು, ಸಾಮಾನ್ಯ ಮಗುವಿಗೆ  ಸಿಗುವ ಸಹಜ ಜೀವನ ತನ್ನ ಮಗುವಿಗೂ ಸಿಗಬೇಕು’ ಅನ್ನೋ ಹಂಬಲವಿರುತ್ತದೆ. ‘ಇಷ್ಟಾದರೆ ಸಾಕು’ ಅನ್ನೋದು ನಮ್ಮ ಪಾಲಿಗೆ ಸಮಾಧಾನ ಕೊಡುವ ಸಂಗತಿಯೇ ಅಲ್ಲ. ಕಿವುಡು ಮಕ್ಕಳ ಕಲಿಕೆ ವಿಚಾರದಲ್ಲಿ ‘ಇಷ್ಟಾದರೆ ಸಾಕು’ ಮನಸ್ಥಿತಿ ಒಳ್ಳೇದಲ್ಲವೇ ಅಲ್ಲ. 

ಅಥರ್ವನ ಒಳಕಿವಿಗೆ ಕಾಕ್ಲಿಯರ್​ ಇಂಪ್ಲಾಂಟ್ ಅಳವಡಿಸಲ್ಪಟ್ಟು ಅದಾಗಲೇ ಏಳೆಂಟು ತಿಂಗಳುಗಳು ಕಳೆದುಹೋಗಿದ್ದವು. ಮೂರು ಮೂರು ಪದಗಳನ್ನು ಜೋಡಿಸಿ ವಾಕ್ಯ ಮಾಡಿ ಮಾತನಾಡುತ್ತಿದ್ದ, ಕೇಳಿದ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಉತ್ತರ ಹೇಳುತ್ತಿದ್ದ, ತನಗೆ ಬೇಕಿರುವುದನ್ನ ಕೇಳಿ ಪಡೆದುಕೊಳ್ಳುತ್ತಿದ್ದ. ವಾಪಾಸ್​ ಪ್ರಶ್ನೆಯನ್ನೂ ಕೇಳುತ್ತಿದ್ದ. ಹೌದು, ಇದೆಲ್ಲವೂ ಅಥರ್ವನಿಗೆ ಬಂದಿತ್ತು. ಆದರೆ, ಅವನ ಮಾತಿನಲ್ಲಿ ಸ್ಪಷ್ಟತೆ ಇರಲಿಲ್ಲ. ಎಲ್ಲ ವ್ಯಂಜನಗಳೂ ಸ್ಪಷ್ಟ ಉಚ್ಛಾರವಾಗದ ಕಾರಣ, ಅಥರ್ವನ ಮಾತು ಯಾರಿಗೂ ಅರ್ಥವೇ ಆಗುವಂತಿರಲಿಲ್ಲ.  ನಮ್ಮ ಶಾಲೆಯ ತಾಯಂದಿರು, ಶಿಕ್ಷಕಿಯರು ಅವನ ಮಾತುಗಳನ್ನು ಅರ್ಥ ಮಾಡಿಕೊಂಡರೂ, ಸ್ಕೂಲ್​ಗೆ ಹೊರತಾಗಿರುವವರು, ಅಕ್ಕಪಕ್ಕದವರು, ಸಂಬಂಧಿಕರು, ಸ್ವತಃ ನನ್ನ ಅಮ್ಮ ಅಪ್ಪನಿಗೇ ಅಥರ್ವನ ಮಾತುಗಳು ಅರ್ಥವಾಗುತ್ತಿರಲಿಲ್ಲ. ‘ಅವನೇನಂದ ಹೇಳೇ’ ಎಂದು  ನನ್ನನ್ನೇ ಕೇಳುತ್ತಿದ್ದ ಅವರಿಗೆಲ್ಲರಿಗೂ, ನಾನು ದುಬಾಷಿಯಂತಾಗಿದ್ದೆ.  ಅತೀ ಹತ್ತಿರದವರೇ ಹಾಗಂದಾಗಲೆಲ್ಲ ಮನಸಿನ ಮೂಲೆಯಲ್ಲೆಲ್ಲೋ ನೋವಿನ ಚಳುಕು ! 

ನನ್ನ ಮಗನ ಮಾತುಗಳನ್ನ ನಾನೊಬ್ಬಳೇ ಅರ್ಥ ಮಾಡಿಕೊಂಡರೆ, ಪ್ರಯೋಜನವೇನು ಬಂತು? ಅವನ ಮಾತುಗಳು ಎಲ್ಲರಿಗೂ ಅರ್ಥವಾಗಬೇಕು ಅವನು ಎಲ್ಲರೊಳಗೊಂದಾಗಬೇಕು ಎಂಬುದು ತಾನೆ ನಮ್ಮ ಉದ್ದೇಶ ? ಅದಕ್ಕಾಗಿ ಏನು ಮಾಡಲಿ..? ಸ್ಪೀಚ್​ ಥೆರಪಿಸ್ಟ್​ಗಳನ್ನ ಕೇಳಿದ್ದೆ, ನಮ್ಮ ಶಾಲೆಯ ಶಿಕ್ಷಕಿಯರನ್ನ ಕೇಳಿದ್ದೆ, ಹಿರಿಯ ತಾಯಂದಿರನ್ನು ಕೇಳಿದ್ದೆ. ಅವರೆಲ್ಲರದೂ ಒಂದೇ ಉತ್ತರ ‘ತಾಳ್ಮೆ’.  ತಾಳ್ಮೆಯಿಂದ ಮಗುವಿಗೆ ಒತ್ತಾಸೆಯಾದರೆ, ಎಲ್ಲವೂ ಸಾಧ್ಯ. ಮಗು ಮಾತನಾಡಿದಾಗ ಆದಷ್ಟು ಅದನ್ನ ಸ್ಪಷ್ಟ ಮಾಡಲು ಪ್ರಯತ್ನಿಸಬೇಕು.  ಮಗು ತನಗೆ ಉಚ್ಛಾರವಾಗುತ್ತಿರುವ ವ್ಯಂಜನಗಳನ್ನು ನುಂಗಿಯೋ, ಅಥವಾ ಆ ಅಕ್ಷರಗಳನ್ನು ತೇಲಿಸಿಯೋ ಮಾತನಾಡಗೊಡದೆ, ಮತ್ತೆ ಮತ್ತೆ ಹೇಳಿಸಿ ಆ ಮಾತುಗಳನ್ನು ಸರಿ ಮಾಡುತ್ತಿರಿ. ಕ್ರಮೇಣವಾಗಿ ಉಚ್ಛಾರ ಸ್ಪಷ್ಟವಾಗುತ್ತೆ ಎಂಬುದೇ ಅವರೆಲ್ಲರ ಸಲಹೆಯಾಗಿತ್ತು. 

ಒಮ್ಮೆ ಶಾಲೆಯಲ್ಲಿ ಅಥರ್ವನನ್ನ ಮಾತನಾಡಿಸಿದ ನಮ್ಮ ಶಾಲೆಯ ಮುಖ್ಯ ಶಿಕ್ಷಕಿ ಪರಿಮಳಾ ಆಂಟಿ, ಮಗುವಿನ ಉಚ್ಛಾರಗಳ ಸ್ಪಷ್ಟತೆಗಾಗಿ ಒಂದು ಟ್ರಿಕ್​ ಹೇಳಿಕೊಟ್ಟರು. ವ್ಯಂಜನಗಳ ಬಳಕೆ ಹೆಚ್ಚಿಸುವುದಕ್ಕಾಗಿ, ಎರಡೇ ಅಕ್ಷರಗಳ ಸರಳ ಶಬ್ಧಗಳನ್ನು ಪಟ್ಟಿಮಾಡಿಕೊಂಡು, ದಿನವೂ ಒಂದೆರಡು ಬಾರಿ ಅವುಗಳನ್ನು ಓದಿಸುವ ಟ್ರಿಕ್​ ಅದು. ಆ ಪದಗಳಿಗೆ ಅರ್ಥವಿದ್ದರೂ ಸರಿ, ಇಲ್ಲದಿದ್ದರೂ ಸರಿ.  ಮಗುವಿಗೆ ಉಚ್ಛಾರವಾಗಬೇಕಾದ ಅಕ್ಷರಗಳನ್ನ ಬಳಸಿ ಶಬ್ಧಗಳನ್ನು ಮಾಡಿ ಹೇಳಿಸುತ್ತಾ ಹೋಗುವ ಚಟುವಟಿಕೆ ಅದು. ‘ನಾಲಿಗೆ ಹೊರಳಿ ಹೊರಳಿ ಅಭ್ಯಾಸವಾಗುತ್ತಾ ಹೋದಂತೆ ಅಕ್ಷರದ ಉಚ್ಛಾರವಾಗುತ್ತೆ. ಎರಡು ಅಕ್ಷರಗಳ ಪದಗಳನ್ನು ಉಚ್ಛರಿಸಲು ಮಗು ಕಲಿತಮೇಲೆ ಮೂರು ಅಕ್ಷರಗಳ ಪದಗಳನ್ನ ಪಟ್ಟಿ ಮಾಡಿಕೊಂಡು ಓದಿಸಿ.  ನಂತರ ಒಂದೊಂದೇ ಅಕ್ಷರಗಳನ್ನು ಹೆಚ್ಚಿಸುತ್ತಾ ಹೋಗಿ. ಎಲ್ಲ ವ್ಯಂಜನಗಳನ್ನೂ ಮಗು ಉಚ್ಛರಿಸಲು ಕಲಿತಮೇಲೆ ಒತ್ತಕ್ಷರಗಳ ಪಟ್ಟಿ ಮಾಡಿಕೊಂಡು ಹೇಳಿಸಿ. ಹೀಗೆ ಹಂತ ಹಂತವಾಗಿ ಮಗುವಿನ ಮಾತಿನಲ್ಲಿ ಸ್ಪಷ್ಟತೆ ಬರುತ್ತೆ. ಈ ಚಟುವಟಿಕೆಯಿಂದ ಫಲಿತಾಂಶ ಬೇಗ ಸಿಗುತ್ತೆ ನೋಡಿ’. ಎಂದರು. ಆವತ್ತೇ ಅದನ್ನ ಪ್ರಯೋಗಕ್ಕೆ ತಂದೆ. ಚರ, ಕರ, ದರ, ಪದ, ಕದ, ಚಳಿ, ತರಿ, ಬಲ, ಫಲ, ಕಲ, ಧನ, ದನ  ಇಂಥ   ಐವತ್ತು  ಶಬ್ಧಗಳನ್ನ ಹಾಳೆಯ ಮೇಲೆ ಬರೆದು ಮನೆಯ ಗೋಡೆಗೆ ಅಂಟಿಸಿಟ್ಟುಕೊಂಡು ದಿನವೂ ಓದಿಸತೊಡಗಿದ್ದೆ.  

ಮಾತಿನ ಸ್ಪಷ್ಟತೆಗಾಗಿ ಶ್ಲೋಕ ಹೇಳಿಸಬೇಕು ಎಂಬ ಸಲಹೆ ಬಂದಿದ್ದೇ, ಸರಳ ಶ್ಲೋಕಗಳು, ಕನ್ನಡದ ಪದ್ಯಗಳು ಮನೆಯ ಗೋಡೆಗೆ ಅಂಟಿಕೊಂಡಿಕೊಂಡವು. ಮೊದಲು ಪದ್ಯಗಳ ಸಾಲುಗಳನ್ನು ಓದಿಸಿ ಹೇಳಿಸಿ, ನಂತರ ಅಭಿನಯ ಮಾಡುತ್ತಾ ಕುಣಿಯುತ್ತಾ ಅದೇ ಹಾಡುಗಳನ್ನು ಹೇಳಿಕೊಡುತ್ತಿದ್ದೆ. ಪದ್ಯಗಳ ಚಟುವಟಿಕೆ ಎಂದರೆ ಅಥರ್ವನಿಗೆ ಬಹಳ ಇಷ್ಟ. ಬಣ್ಣದ ತಡಗಡಿನ ತುತ್ತೂರಿ, ನಾಯಿಮರಿ, ತೋಟಕೆ ಹೋಗು ತಿಮ್ಮ, ಇಂಥ ಹಾಡುಗಳು ಅಥರ್ವನಿಗೆ ಕಂಠಪಾಠವಾದವು. ಇದರಿಂದ ಅಥರ್ವನ ಮಾತಿನಲ್ಲಿ ಉಸಿರಿನ ಹಿಡಿತವನ್ನ ಗಮನಿಸಿದ್ದೆ.  ವಾಕ್ಯಗಳನ್ನು ತುಂಡರಿಸಿ, ಪ್ರತಿ ಶಬ್ಧಕ್ಕೂ ಉಸಿರು ಬಿಟ್ಟು ಮಾತನಾಡುತ್ತಿದ್ದ ಅಥರ್ವನ ಮಾತು ಕ್ರಮೇಣ ಸಹಜವಾಗುತ್ತಾ ಬಂದಿತ್ತು. ಈ ಸುಧಾರಣೆಯಲ್ಲಿ ಪದ್ಯಗಳ ಪ್ರಭಾವವಿದೆ ಅಂತೆನ್ನಿಸಲು ಶುರುವಾಗಿದ್ದೇ, ನಿಧಾನವಾಗಿ ಇಂಗ್ಲೀಷ್​ ರೈಮ್ಸ್​ ಗಳನ್ನೂ ಅವನಿಗೆ ಪರಿಚಯಿಸಲು ಆರಂಭಿಸಿದೆ. 

ಕಾಕ್ಲಿಯರ್​ ಕಂಪನಿಯ ಹ್ಯಾಬಿಲಿಟೇಶನ್​ ಮ್ಯಾನೇಜರ್​ ಆಗಿರುವ ಜಸ್​ಪಾಲ್​ ಮೇಡಮ್​ ಒಮ್ಮೆ ನಮ್ಮ ಪಿ.ಎ.ಡಿ.ಸಿ ಶಾಲೆಗೆ ಭೇಟಿ ನೀಡಿದ್ದರು. ಅಂದು ಕಾಕ್ಲಿಯರ್​ ಇಂಪ್ಲಾಂಟ್​ ಫಲಾನುಭವಿ ಮಕ್ಕಳ ತಾಯಂದಿರೊಂದಿಗೆ ಅವರ ಸಂವಾದವಿತ್ತು. ಆವತ್ತು ಅವರು ಕೊಟ್ಟ ಎಲ್ಲ ಸಲಹೆಗಳನ್ನೂ ನೋಟ್​ ಮಾಡಿಕೊಂಡು ಬಂದಿದ್ದ ನನಗೆ, ಅವರ ಸಲಹೆಗಳೊಲ್ಲೊಂದನ್ನ ಮಾತ್ರ ಕಾರ್ಯರೂಪಕ್ಕೆ ತರುವುದು ಕಷ್ಟವಿತ್ತು.  ಇಂಪ್ಲಾಂಟ್​ ಆದ ಮಕ್ಕಳನ್ನು ಸಾಮಾನ್ಯ ಮಕ್ಕಳೊಂದಿಗೆ ಆಡಲು, ಮಾತನಾಡಲು ಬೆರೆಯಲು ಬಿಡಿ ಎಂಬ ಸಲಹೆಯದು. ಸಾಮಾನ್ಯ ಮಕ್ಕಳೊಂದಿಗೆ ನಮ್ಮ ಮಕ್ಕಳು ಬೆರೆತರೆ, ಅತ್ಯಂತ ಸಹಜವಾಗಿ ಭಾಷೆಯ ಬಳಕೆ ನಿಮ್ಮ ಮಕ್ಕಳಿಗೆ ಅರ್ಥವಾಗಬಲ್ಲದು ಎಂದಿದ್ದರು ಅವರು. ಹಗಲಿನಲ್ಲಿ ಶಾಲೆಯ ಪಾಠ, ಸಂಜೆ ಅಮ್ಮನೊಂದಿಗೆ ಥೆರಪಿ ಚಟುವಟಿಕೆಯಲ್ಲಿ, ಮುಳುಗಿರುತ್ತಿದ್ದ ಅಥರ್ವನನ್ನ ಸಾಮಾನ್ಯ ಮಕ್ಕಳೊಂದಿಗೆ ಆಡಲು ಬಿಡಲು ಸಮಯವೇ ಇರುತ್ತಿರಲಿಲ್ಲ. ಅಂದಹಾಗೆ, ನನ್ನ ಮನೆಯ ಸುತ್ತಮುತ್ತ ಅಥರ್ವನ ಜತೆ ಆಡುವಂಥ ಮಕ್ಕಳೂ ಇರಲಿಲ್ಲ. ಇದ್ದರೂ ಅವರಿಗೆ ಅಥರ್ವನ ಮಾತು ಅರ್ಥವಾಗದ ಕಾರಣ, ಅವರ ಆಟಕ್ಕೆ ಇವನನ್ನ ಸೇರಿಸಿಕೊಳ್ಳುತ್ತಲೂ ಇರಲಿಲ್ಲ. ಈ ಹೊಸ ಸಮಸ್ಯೆ ಸವಾಲಾಗಿ ಬಂದು ತಣ್ಣಗೆ ಕುಳಿತಿತ್ತು. 

ಆಗಷ್ಟೇ ಅಥರ್ವನಿಗೆ ಮೂರು ವರ್ಷದ ಹುಟ್ಟೂಹಬ್ಬವಾಗಿತ್ತು. ಅತ್ಯಂತ ಸರಳವಾಗಿ ಸ್ಕೂಲ್​ನಲ್ಲಿ ಹುಟ್ಟೂಹಬ್ಬದ ಘಟನೆ (ಹುಟ್ಟೂ ಹಬ್ಬದ ಬಗ್ಗೆ ಪಾಠ) ಮಾಡಿ, ಚಾಕಲೇಟು ಹಂಚಿ ಬರ್ತ್​​ಡೇ ಆಚರಿಸಿದ್ದೆವು ಅಷ್ಟೆ. ಹುಟ್ಟೂ ಹಬ್ಬವಲ್ಲವೇ..? ತುಂಬಾ ದಿನದಿಂದ ಕೇಕ್​ ಬೇಕೆಂದು ಕೇಳುತ್ತಿದ್ದ, ಹಾಗೇ ಆ ವಾರದ ಪಾರ್ಕ್ ವಿಸಿಟ್​ ಕೂಡ ಆಗಿರಲಿಲ್ಲವಾದ್ದರಿಂದ ಪಾರ್ಕ್​ನ ಕಡೆಯೇ ಹೊರಟೆ. ಆಟೋ ಹತ್ತಿ ಸರಸ್ವತಿಪುರಂನ ಜವರೇಗೌಡ ಪಾರ್ಕ್​​ನ ಬಳಿ ಇಳಿದುಕೊಂಡು, ಅದರ ಪಕ್ಕದಲ್ಲಿಯೇ ಇರುವ ಬೇಕರಿಯೊಂದಕ್ಕೆ ಅಥರ್ವನನ್ನ ಕರೆದುಕೊಂಡುಹೋದೆ. ಅಲ್ಲಿ ಅಥರ್ವನದೇ ವಯಸ್ಸಿನ ನಾರ್ಮಲ್​ ಹುಡುಗನೊಬ್ಬನನ್ನು ಕಂಡೆ. ಅವನಮ್ಮ ಅವನಿಗೆ ಕೇಕ್​ ತಿನ್ನಿಸುತ್ತಿದ್ದರು. ನಾನೂ ಬೇಗ ಬೇಗ ಕೇಕ್ ಕೊಂಡು, ಅಥರ್ವನನ್ನು ಆ ಹುಡುಗನ ಪಕ್ಕದಲ್ಲಿಯೇ ಕೂರಿಸಿದೆ. ಇಬ್ಬರೂ ಮುಖ ಮುಖ ನೋಡಿಕೊಂಡು ನಕ್ಕರು. ನಾವು ಅಮ್ಮಂದಿರಿಬ್ಬರೂ ನಗು ವಿನಿಮಯ ಮಾಡಿಕೊಂಡೆವು. ಆ ಹುಡುಗ ಅಥರ್ವನ ಕಿವಿಯನ್ನೇ ಗಮನಿಸುತ್ತಾ, ತನ್ನಮ್ಮನ ಬಳಿ ಕುತೂಹಲದ ಪ್ರಶ್ನೆಗಳನ್ನು ಕೇಳುತ್ತಿದ್ದ. ಅವರು ನನ್ನ ಎದರು ಅದಕ್ಕೆ ಉತ್ತರಿಸಲು ಮುಜುಗರ ಪಟ್ಟುಕೊಳ್ಳುತ್ತಿರುವುದನ್ನ ಅರಿತು, ಅಲ್ಲೇ ಅದನ್ನು ತಿಳಿಗೊಳಿಸಿ, ಅಥರ್ವನ ಕಿವಿಯಲ್ಲಿದ್ದಿದ್ದೇನು, ಅದನ್ನ ಏಕೆ ಅವನು ಹಾಕಿಕೊಂಡಿದ್ದಾನೆ ಎಂಬುದನ್ನು ಆ ಹುಡುಗನಿಗೆ ಹೇಳಿದೆ. 

 ಅಮ್ಮ ಮಗ ಇಬ್ಬರದೂ ಫ್ರೆಂಡ್ಲೀ ನೇಚರ್​ ಎಂಬುದು ಆಗಲೇ ಅರ್ಥವಾಗಿತ್ತು ನನಗೆ. ಅವರ ಜತೆ ನಮ್ಮ ಕಿರು ಪರಿಚಯ ಮಾಡಿಕೊಂಡು, ಮಕ್ಕಳಿಬ್ಬರ ನಡುವೆ ಪರಿಚಯ ಮಾಡಿಸಲು ಶುರು ಮಾಡಿದೆ. ‘ಹಾಯ್​ಹೇಳು’ ಎಂದೆ, ನಿನ್ನ ಹೆಸರು ಏನು ? ಎಂದು ಕೇಳಿಸಿದೆ. ಅಥರ್ವ ಖುಷಿಯಲ್ಲಿ, ನಾನು ಹೇಳಿಕೊಟ್ಟಂತೆಯೇ ಅವನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದ. ಆ ಹುಡುಗನ ಹೆಸರು ಸಮರ್ಥ್. ಅವನ ಅಮ್ಮ ವಾಣಿ. ವಾಣಿಯ ಮುಖದಲ್ಲಿ ಅದ್ಯಾವುದೇ ಧಾವಂತವಿರಲಿಲ್ಲ. ಬಿಡುವಾಗಿಯೇ ಬಂದಿದ್ದಾರೆ ಅಂದುಕೊಂಡೆ. 

ನಾವು ಪರಸ್ಪರ ಅಪರಿಚಿತರಾದರೂ, ಸ್ನೇಹಪೂರ್ವಕವಾಗಿ ನಕ್ಕು, ಅವರೂ ನಮ್ಮೊಂದಿಗೆ ಬರೆಯತೊಡಗಿದ್ದರು. ಆ ಬೇಕರಿಯ ಪಕ್ಕದಲ್ಲಿಯೇ ಇರುವ ಪಾರ್ಕ್​​ಗೆ ಮಕ್ಕಳನ್ನ ಕರೆದೊಯ್ಯೋಣವಾ? ಎಂದರು ಅವರು. ನನಗೂ ಅದೇ ಬೇಕಿತ್ತು. ಆಯ್ತು ಎಂದೆ. ಕೇಕ್​ ಕೈಯಲ್ಲಿ ಹಿಡಿದುಕೊಂಡು ಪುಟಾಣಿ ಸ್ಪೂನ್​ನ ಸಹಾಯದಿಂದ ಮಕ್ಕಳ ಬಾಯಿಗೆ ಚೂರು ಚೂರೇ ಕೇಕ್​ ಹಾಕುತ್ತಾ ಪಾರ್ಕ್​ನ ಕಡೆ ನಡೆದು ಬಂದೆವು.  

ನೀನು ಏನ್​ ತಿಂತಾ ಇದ್ದೀಯಾ ?, ಕೇಕ್​ ಯಾವ ಬಣ್ಣ ಇದೆ ? ಕೇಕ್​ ತಿನ್ನಲು ಹೇಗಿದೆ ? ಮುಟ್ಟಲು ಹೇಗಿದೆ ? ಗಟ್ಟಿಯಾಗಿದೆಯಾ, ಮೆತ್ತಗಿದ್ಯಾ ?  ಯಾವ ಅಂಗಡಿಯಲ್ಲಿ ಕೇಕ್ ಸಿಗುತ್ತೆ ? ಇಂಥ ಹಲವು ಪ್ರಶ್ನೆಗಳನ್ನು ನಿಧಾನವಾಗಿ ಮಕ್ಕಳಿಬ್ಬರಿಗೂ ಕೇಳುತ್ತಾ ಅಥರ್ವನಿಗೆ ಕೇಕ್​ ತಿನ್ನಿಸಿದೆ. ಸಮರ್ಥ್​ ಈ ಎಲ್ಲ ಪ್ರಶ್ನೆಗಳಿಗೆ ಅವನಮ್ಮನ ಸಹಾಯವಿಲ್ಲದೇ ಉತ್ತರಿಸುತ್ತಿದ್ದ. ಅಥರ್ವ ಕೆಲವೊಂದಕ್ಕೆ ತಾನೇ ಉತ್ತರಿಸಿದರೂ, ಹಲವಕ್ಕೆ ನಾನು ಅವನಿಗೆ ಪ್ರಶ್ನೆಗಳನ್ನು ಅರ್ಥ ಮಾಡಿಸಿ ಉತ್ತರವನ್ನೂ ಹೇಳಿಸಬೇಕಾಯ್ತು. ಇಬ್ಬರೂ ಹೊಂದಿಕೊಂಡು ಪಾರ್ಕ್​​ನಲ್ಲಿ ಆಡತೊಡಗಿದ್ದರು. 

ಜಾರುಬಂಡಿ, ಉಯ್ಯಾಲೆ, ಜೀಕುಮೂಕೆಲ್ಲ ಆಡಿ ಸುಸ್ತಾದಮೇಲೆ ಮರಳಾಡಲು ಕೂತ ಈ ಮಕ್ಕಳ ಬಳಿ, ಮತ್ತೆ ಪ್ರಶ್ನೆಗಳನ್ನ ಕೇಳತೊಡಗಿದ್ದೆ.  ಸಮರ್ಥ್, ನೀನು ಏಕೆ ಪಾರ್ಕ್​​ಗೆ ಬಂದಿದ್ದೀಯಾ ? ಎಂದೆ. ‘ಆಂಟೀ, ನಂಗೆ ಪಾರ್ಕ್​ನಲ್ಲಿ ಆಟ ಆಡೋದು ಅಂದ್ರೆ ತುಂಬಾ ಇಷ್ಟ. ಸ್ಲೈಡ್​, ಸ್ವಿಂಗ್​ ಎಲ್ಲ ತುಂಬಾ ಇಷ್ಟ ಆಂಟೀ, ಆಟ ಆಡೋಕೆ ಅಂತ ಪಾರ್ಕ್​ಗೆ ಬರ್ತೀನಿ. ಅಥರ್ವಂಗೂ ಪಾರ್ಕ್​ಅಂದ್ರೆ ಇಷ್ಟಾನಾ..?’ ನಾನು ಕೇಳಿದ ಒಂದು ಪ್ರಶ್ನೆಗೆ ಇಷ್ಟುದ್ದ ಉತ್ತರ ಹೇಳಿದ್ದಲ್ಲದೇ, ಅದರ ಜತೆ ಮತ್ತೊಂದು ಪ್ರಶ್ನೆಯನ್ನೂ ಇಟ್ಟು ವಾಪಾಸ್​ ಕೊಟ್ಟಿದ್ದ ಆ ಪೋರ. ಅವನ ಮಾತು ಕೇಳುತ್ತಲೇ, ‘ನನ್ನ ಮಗ ಇಷ್ಟು ಸಹಜವಾಗಿ ಇಷ್ಟೆಲ್ಲ ಮಾತನಾಡೋದು ಯಾವಾಗಪ್ಪಾ?’ ಮನಸ್ಸಿನಲ್ಲಿ ಲೆಕ್ಕಾಚಾರ ಹಾಕುತ್ತಾ ಕುಳಿತಿದ್ದೆ.  ಸಮರ್ಥ ಮಾತನಾಡುವುದನ್ನೇ ನೋಡುತ್ತಾ ಕುಳಿತಿದ್ದ ನನ್ನ ಮಗ ಅಥರ್ವನಿಗೂ ಸಮರ್ಥಂಗೆ ಕೇಳಿದ ಪ್ರಶ್ನೆಯನ್ನೇ ಕೇಳಿದ್ದೆ. ಅಥರ್ವ ನೀನು ಏಕೆ ಪಾರ್ಕ್​ಗೆ ಬಂದಿದ್ದೀಯಾ ? ಎಂದು. ಅಥರ್ವ ಉತ್ತರಿಸಲಿಲ್ಲ. ನಕ್ಕು ನನ್ನ ಮುಖವನ್ನೇ ನೋಡಿ, ಮತ್ತೆ ಮಣ್ಣಾಡತೊಡಗಿದ್ದ. ನನ್ನ ಗಂಟಲು ಕಟ್ಟಿ, ಮೂಗಿನ ನರಗಳೆಲ್ಲ ಬಿಗಿದುಕೊಂಡಂತಾಗಿ ಕಣ್ಣೀರು ಧುಮುಕಲು ಸಿದ್ಧಗೊಂಡಿತ್ತು. ಸಮರ್ಥನ ಅಮ್ಮ ವಾಣಿ, ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡಿರಬೇಕು, ವಿಷಯಾಂತರ ಮಾಡಿ, ಅವಳು ಬೇರೆ ಏನೋ ಮಾತನಾಡತೊಡಗಿದ್ದು ಕೂಡ ನನ್ನ ಅನುಭವಕ್ಕೆ ಬಂತಾದರೂ ಮನಸ್ಸು ತಿಳಿಯಾಗಲಿಲ್ಲ.

ನನ್ನ ಮಗ ಮಾತನಾಡುತ್ತಾನೆ ಹೌದು. ನಾನು ಹೇಳಿಕೊಟ್ಟಷ್ಟು, ಅಭ್ಯಾಸ ಮಾಡಿಸಿದಷ್ಟು, ಅರ್ಥ ಮಾಡಿಸಿದಷ್ಟು ಮಾತ್ರ. ‘ಹಾಗಾದರೆ, ಈ ಹುಡುಗ ಸಮರ್ಥನ ಹಾಗೆ ಪ್ರತಿ ಪರಿಸ್ಥಿತಿಯಲ್ಲಿಯೂ ತಾನೇ ವಿಚಾರ ಮಾಡಿ, ಸಮಯಕ್ಕೆ ತಕ್ಕಂತೆ ಸ್ವಂತವಾಗಿ ಮಾತನಾಡುವುದು ಯಾವಾಗ ?’ ಇರಿಯತೊಡಗಿದ್ದವು ಪ್ರಶ್ನೆಗಳು. ಇವತ್ತಿನಿಂದಲೇ ‘ಏಕೆ’ ಪ್ರಶ್ನೆಯನ್ನು ನಮ್ಮ ಮಾತುಗಳಲ್ಲಿ ಜಾರಿ ತರಬೇಕು ಅಂದುಕೊಂಡೆ ಮನಸ್ಸಿಲ್ಲಿ. 

ಸಮರ್ಥನೊಂದಿಗೆ ಅಥರ್ವನನ್ನು ಹೋಲಿಸಿ ಬೇಸರಿಸಿಕೊಳ್ಳುತ್ತಿದ್ದ ನನಗೆ ಅಲ್ಲೊಂದು ಚಮತ್ಕಾರವಾಗಿರುವುದು ಗಮನಕ್ಕೇ ಬಂದಿರಲಿಲ್ಲ. 

ಸಮರ್ಥ ಅಥರ್ವನಿಗೆ ಸಿಕ್ಕಿದ್ದು ಆ ಒಂದು ದಿನ ಮಾತ್ರ. ಸಾಸಿವೆ ಸಿಡಿದಂತೆ ಚಟಪಟ ಮಾತನಾಡುವ ಸಮರ್ಥನ ಪ್ರಭಾವ , ಅಷ್ಟೇ ಸಮಯದಲ್ಲಿಯೇ ಅಥರ್ವನ ಮೇಲಾಗಿತ್ತು ಅನ್ನೋ ಸಂತಸದ ಸತ್ಯವನ್ನ ಆಗ ನಾನು ಅರ್ಥ ಮಾಡಿಕೊಂಡಿರಲೇ ಇಲ್ಲ.  ಅಲ್ಲಿಗೆ ಹೋಗಣ್ವಾ..? ಸ್ವಿಂಗ್​ ಆಡಾಣ್ವಾ ? ಇಲ್ಲಿ ಮಣ್ಣು ಸುರಿಯೋಣ್ವಾ ? ಜಂಪ್​ ಮಾಡೋಣ್ವಾ? ಎಂಬಂಥ ‘ಣ್ವಾ’ ಪ್ರಶ್ನೆಗಳನ್ನು ಅದೆಷ್ಟೋ ಬಾರಿ ಸಮರ್ಥ ಅಥರ್ವನಿಗೆ ಕೇಳಿದ್ದ. ಪ್ರತಿಯೊಂದಕ್ಕೂ ‘ಣ್ವಾ..?’ ಪ್ರಶ್ನೆ ಮಾಡೋದು ಅವನ ಅಭ್ಯಾಸವಿರಬಹುದು. ಆಗ ನಾನು ಅದನ್ನ ಅಷ್ಟೇನೂ ಗಮನಿಸಿರಲಿಲ್ಲ ಬಿಡಿ. ಮನೆಗೆ ವಾಪಾಸ್​ ಬಂದಮೇಲೆ ಅಥರ್ವ, ಅಮ್ಮಾ ಆತ ಆಆನಾ ? (ಅಮ್ಮಾ ಆಟ ಆಡಣ್ವಾ?) ಎಂದ. ಹಾಗೆಯೇ, ಪ್ರತಿಯೊಂದಕ್ಕೂ ‘ಣ್ವಾ’ ಹಾಕಿ ಪ್ರಶ್ನೆ ಕೇಳತೊಡಗಿದ್ದ. ಅಬ್ಬಾ..! ಒಂದುವರೆ ಗಂಟೆ ಆಡಿರಬಹುದು ಮಕ್ಕಳು. ಅಷ್ಟು ಚಿಕ್ಕ ಸಮಯದಲ್ಲಿ ಒಂದು ಪರಿಯ ಪ್ರಶ್ನೆಯ ಮಾದರಿಯನ್ನೇ ಕಲಿಸಿಬಿಟ್ಟಿದ್ದ ಸಮರ್ಥ. ಮಕ್ಕಳು ಮಕ್ಕಳೊಂದಿಗೆ ಬಹುಬೇಗ ಕಲಿಯುತ್ತಾರೆ ಎಂಬ ಜಸ್​ಪಾಲ್​ ಮೇಡಮ್​ ಅವರ ಮಾತು ನೂರಕ್ಕೆ ನೂರು ಸತ್ಯವಾಗಿತ್ತು. ಸಾಮಾನ್ಯ ಮಕ್ಕಳು ಸಿಗುತ್ತಾರೆ ಎಂಬ ಕಾರಣಕ್ಕೇ ಸಾಯಂಕಾಲದ ಹೊತ್ತು ಪಾರ್ಕ್​​ಗಳನ್ನ ಹುಡುಕಿಕೊಂಡು ಹೋಗತೊಡಗಿದೆ. 

ಬೆಂಗಳೂರಿನಲ್ಲಿ ನಾವಿರುವ ಮನೆ, ಆಪಾರ್ಟ್​​ಮೆಂಟ್​ನಲ್ಲಿದ್ದ ಕಾರಣ ಅಲ್ಲಿ ಹಲವು ಮಕ್ಕಳು ಅಥರ್ವನಿಗೆ ಆಡಲು ಸಿಗುತ್ತಿದ್ದರು. ನನ್ನ ಗೆಳತಿಯರ ಮಕ್ಕಳು, ಸಂಬಂಧಿಕರ ಮಕ್ಕಳು, ನಮ್ಮ ಅಪಾರ್ಟ್​ಮೆಂಟ್​ಗೆ ಹತ್ತಿರದಲ್ಲೇ ಇರುವುದರಿಂದ ಅಥರ್ವನನ್ನ ಅವರೊಂದಿಗೆ ಬೆರೆಯಲು ಬಿಡುವ ಅವಕಾಶ ಬೆಂಗಳೂರಿನಲ್ಲೇ ಜಾಸ್ತಿ ಇತ್ತು. ಇದೇ ಕಾರಣಕ್ಕೆ ಹದಿನೈದು ದಿನಕ್ಕೊಮ್ಮೆ ಶನಿವಾರ, ಭಾನುವಾರ ಬೆಂಗಳೂರಿಗೆ ಬರತೊಡಗಿದ್ದೆ. ಗೆಳತಿ ವಸಂತಾ ಮಗ ವಿಹಾನ್​ ವಯಸ್ಸಿನಲ್ಲಿ ಅಥರ್ವನಿಗಿಂತ 3 ವರ್ಷ ದೊಡ್ಡವನಾದರೂ, ಅಥರ್ವನೊಂದಿಗೆ ಹೊಂದಿಕೊಂಡು ಆಡುತ್ತಿದ್ದ.  ಅವರಿಬ್ಬರಲ್ಲಿ ಗೆಳೆತನದ ಬಾಂಡಿಂಗ್​ ಬೆಳೆದಿತ್ತು. ವಿಹಾನ್​ ತನ್ನ ಅಕ್ಕಪಕ್ಕದ ಮನೆಗೂ ಅಥರ್ವನನ್ನ ಕರೆದೊಯ್ದು, ತನ್ನ ಸ್ನೇಹಿತರಿಗೆಲ್ಲ ಅಥರ್ವನನ್ನ ಪರಿಚಯಿಸಿದ್ದ.  ಸಾಮಾನ್ಯ ಮಕ್ಕಳೊಂದಿಗೆ ಅತ್ಯಂತ ಸಹಜವಾಗಿ ಬೆರೆತು ಅಥರ್ವ ಆಡುತ್ತಿದ್ದರೆ, ನನ್ನೊಳಗೆಲ್ಲೋ ಖುಷಿಯ ಅಲೆಯೇಳುತ್ತಿತ್ತು. 

ನನಗೇ ಗೊತ್ತಿಲ್ಲದಂತೆ, ಅಥರ್ವನದೇ ವಯಸ್ಸಿನ ಸಾಮಾನ್ಯ ಮಕ್ಕಳೊಂದಿಗೆ ಅಥರ್ವನ ಬೆಳವಣಿಗೆಯನ್ನ ತುಲನೆ ಮಾಡತೊಡಗಿದ್ದೆ. ಸಾಮಾನ್ಯ ಮಗುವನ್ನ ಮಾತನಾಡಿಸಿ, ಪ್ರಶ್ನೆಕೇಳಿ ಅದರ ವಿಚಾರಶಕ್ತಿಗೂ ಅಥರ್ವನ ವಿಚಾರಶಕ್ತಿಗೂ ತಾಳೆ ಮಾಡುವ ಚಟಕ್ಕೇ ಬಿದ್ದುಬಿಟ್ಟೆ ನಾನು. ಬಸ್​ನಲ್ಲಿ ಸಿಗಲಿ, ಪಾರ್ಕ್​​ನಲ್ಲಿ ಸಿಗಲಿ, ಕ್ಲಿನಿಕ್​ನಲ್ಲಿ, ಅಂಗಡಿಯಲ್ಲಿ ಏಲ್ಲೇ ಅಥರ್ವನ ವಯಸ್ಸಿನ ಮಕ್ಕಳು ಸಿಕ್ಕರೂ ಅವರನ್ನ, ಅವರ ಅಮ್ಮಂದಿರನ್ನು ಮಾತನಾಡಿಸಿ, ತಾಳೆ ಮಾಡುತ್ತಿದ್ದೆ. ಅಥರ್ವ ಮತ್ತು ಆ ಸಾಮಾನ್ಯ ಮಗುವಿನ ನಡುವೆ ನನಗೆ ಕಂಡ ವ್ಯತ್ಯಾಸವನ್ನ ಬರೆದಿಟ್ಟುಕೊಂಡು, ಆ ವ್ಯತ್ಯಾಸವನ್ನ ತುಂಬಲು ಪ್ರಯತ್ನಪಡುತ್ತಿದ್ದೆ. ಥೆರಪಿಸ್ಟ್​ ಕಡೆಯಿಂದ ಅಸೆಸ್​ಮೆಂಟ್​ ರಿಪೋರ್ಟ್​​ಗಳನ್ನ ಪಡೆದುಕೊಂಡು, ಮಗು ಆಯಾ ವಯಸ್ಸಿಗೆ ಏನೇನು ಕಲಿಯಬೇಕು, ಅದರ ಪ್ರಕಾರ ಅಥರ್ವ ಎಷ್ಟು ಕಲಿತಿದ್ದಾನೆ ಎಂಬುದನ್ನು ಪಟ್ಟಿ ಮಾಡಿಕೊಂಡು, ಅಲ್ಲಿರುವ ಕೊರತೆಗೆ ಪರಿಹಾರವನ್ನೂ ಕೇಳಿ ಪಡೆದು ಕಾರ್ಯರೂಪಕ್ಕಿಳಿಸುತ್ತಿದ್ದೆ.  

ಸಾಮಾನ್ಯ ಮಕ್ಕಳಿಗೂ ನನ್ನ ಮಗನಿಗೂ ವ್ಯತ್ಯಾಸವೇ ಇರಬಾರದು ಎಂಬುದು ನನ್ನ ಗುರಿ. ನನ್ನ ಮಗನಿಗೆ ಕಿವಿಯೊಂದಿರಲಿಲ್ಲ. ಅದನ್ನ ಈಗ ಅವನಿಗೆ ಕೊಟ್ಟಾಗಿದೆ. ಇವನೂ ಕೂಡ ನೂರಕ್ಕೆ ನೂರರಷ್ಟು ಸಾಮಾನ್ಯನಾಗಬೇಕು ಎಂಬುದೇ ಮುಂದಿದ್ದ ಉದ್ದೇಶ. ಸದಾ ಅದೇ ಆಲೋಚನೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: