ಅಮೃತಾ ಹೆಗಡೆ ಅಂಕಣ- ‘ಓ ದೇವರೇ.. ಒಂದು ಪವಾಡ ಮಾಡಿಬಿಡು ತಂದೆ…’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

16

ಅರ್ಜಿ ಬರೆದಿದ್ದೂ ಆಯ್ತು, ‘ಆಯಿಶ್​’ (ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಸ್ಪೀಚ್​ ಅಂಡ್​ ಹಿಯರಿಂಗ್​) ನ ಅಧಿಕಾರಿಯೊಬ್ಬರ ಸಹಾಯದಿಂದ ಅರ್ಜಿ ಸಲ್ಲಿಸಿದ್ದೂ ಆಯ್ತು. ಬುಕ್​ ಮಾಡಿದ್ದ ಹಿಯರಿಂಗ್​ ಏಡ್​ ಕ್ಯಾನ್ಸಲ್​ ಕೂಡ ಆಗೋಯ್ತು. ಆದರೆ, ನಾವು ಬುಕ್ಕಿಂಗ್​ಗಾಗಿ ಪಾವತಿಸಿರುವ ಹಣ ವಾಪಾಸ್ ಬ್ಯಾಂಕ್​ ಅಕೌಂಟ್​ಗೆ ಕ್ರೆಡಿಟ್​ಆಗುವುದಕ್ಕೆ

ಸಮಯ ಹಿಡಿಯುತ್ತದೆ ಅಂದುಬಿಟ್ಟರು ಅವರು. ಅದೇ ಹಣಕ್ಕೋಸ್ಕರ ಕಾಯುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಹೊಸ ಹಿಯರಿಂಗ್​ ಏಡ್​ ಕೊಳ್ಳುವುದಕ್ಕೆ, ಗಂಡನಿಗೆ ತಿಳಿಯದಂತೆ ಹಣ ಹೊಂದಿಸಬೇಕಿತ್ತಲ್ಲ, ದಾರಿಕಾಣದಂತಾಗಿತ್ತು. ಪ್ರತಿ ಬಾರಿ ಫೋನ್​ನಲ್ಲಿ ಮಾತನಾಡುವಾಗಲೂ ಹೇಳಬೇಕೆಂದುಕೊಂಡು, ಹೇಳಲು ಮನಸ್ಸಾಗದೆ ಬಿಟ್ಟುಬಿಟ್ಟಿದ್ದೆ.  

ಪಿ.ಎ.ಡಿ.ಸಿ ಸ್ಕೂಲ್​ ಲೈಫ್​ ಶುರುವಾಗಿ ಅಂದಿಗೆ ನಾಲ್ಕನೇ ದಿನ. ಅಥರ್ವ ಪಾಠಕ್ಕೆ ಕುಳಿತ ಸಂದರ್ಭ. ಯಾವುದೋ ಮಗುವಿಗೆ ಲಿಸನಿಂಗ್​ ಥೆರಪಿ ಕೊಡಲು ಸೀನಿಯರ್​ ಆಟಿಯೋಲಾಜಿಸ್ಟ್​ ಪ್ರವೀಣ್​ ಸರ್​ ಬಂದ ವಿಚಾರ ತಿಳಿದಿತ್ತು. ಅವರನ್ನ ಭೇಟಿ ಮಾಡುವುದಕ್ಕೋಸ್ಕರವೇ ಅಥರ್ವನ ರಿಪೋರ್ಟ್​​ನೊಂದಿಗೆ ಸ್ಕೂಲ್​ಗೆ ಹೋಗಿದ್ದೆ ಆವತ್ತು. ಥೆರಪಿ ತರಗತಿ ಮುಗಿಯುವದನ್ನೇ ಕಾಯುತ್ತಿದ್ದ ನಾನು, ಗಡಬಡಾಯಿಸಿ ಹೋಗಿ ಪ್ರವೀಣ್​ ಸರ್​ ನ್ನು ಭೇಟಿ ಮಾಡಿದೆ.

ನನ್ನ ನಾನು ಪರಿಚಯಿಸಿಕೊಂಡು, ಆಯಿಶ್​ನಲ್ಲಿ ಹಿಯರಿಂಗ್ ಏಡ್​ ಕ್ಯಾನ್ಸಲ್​ ಮಾಡಿದ ವಿಚಾರವನ್ನೂ ಹೇಳಿದೆ. ಅಥರ್ವನ ಕಿವಿ ಪರೀಕ್ಷೆಯ ಎಲ್ಲ ರಿಪೋರ್ಟ್​ಗಳನ್ನು ಪರಿಶೀಲಿಸಿದ ಅವರು, ‘ಹಿಯರಿಂಗ್​ ಲಾಸ್ ಜಾಸ್ತಿ ಇದೆಯಲ್ವಾ, ಹಿಯರಿಂಗ್​ ಏಡ್​ನಿಂದ ಅಂಥ ಉಪಯೋಗವಾಗೋದಿಲ್ಲ ಅಥರ್ವ ಅಮ್ಮಾ, ಇಂಥ ಮಕ್ಕಳಿಗೆ ನಾವು ಕಾಕ್ಲಿಯರ್​ ಇಂಪ್ಲಾಂಟ್​ನ್ನೇ ಸಜೆಸ್ಟ್​ ಮಾಡ್ತೀವಿ.’ ಎಂದರು. ‘ಹಾಗಾದರೆ ಹಿಯರಿಂಗ್​ ಏಡ್​ ಕೊಳ್ಳೋದೇ ಬೇಡ್ವಾ..? ಅಥರ್ವನಿಗಾಗಿ..?’ ಕೇಳಿದೆ. ‘ನಾನು ಹೇಳಿದ್ದು ಖಂಡಿತ ಹಾಗಲ್ಲ. ನೀವು ಕಾಕ್ಲಿಯರ್​ ಇಂಪ್ಲಾಂಟ್​ ಬಗ್ಗೆ ತಿಳಿದಿದ್ದೀರಾ..? ಅದರ ಬಗ್ಗೆ ನಿಮಗೆ ಗೊತ್ತಾ..?’ ಮರುಪ್ರಶ್ನೆ ಇಟ್ಟರು. ‘ಅಲ್ಪ ಸ್ವಲ್ಪ ತಿಳಕೊಂಡಿದೀನಿ, ಆಪರೇಶನ್​ ಆಗಿರೋ ಮಕ್ಕಳು ಚೆಂದವಾಗಿ ಮಾತಾಡೋದನ್ನ ಈ ಸ್ಕೂಲ್​ನಲ್ಲಿ ನೋಡಿದ್ದೀನಿ’ ಅಂದೆ. ‘ಹಾಂ. ಇಂಪ್ಲಾಂಟ್​ ಬಗ್ಗೆ ನೀವು ನಿಮ್ಮ ಮನೆಯಲ್ಲಿ ಮಾತಾಡಿ, ಡಿಸೈಡ್​ ಮಾಡಿ, ಹಣ ಹೊಂದಿಸೋಕೆ ಸಮಯ ಹಿಡಿಯುತ್ತೆ. ಅಲ್ಲಿಯವರೆಗೆ ಹಿಯರಿಂಗ್​ ಏಡ್​ ಹಾಕದೇ ಇರೋಕಾಗಲ್ಲ. ಲಾಸ್ ಜಾಸ್ತಿ ಇರುವುದರಿಂದ ಕಡಿಮೆ ಹಣದ, ಕಡಿಮೆ ಗುಣಮಟ್ಟದ ಹಿಯರಿಂಗ್​ ಏಡ್​ ಕೂಡ ಪ್ರಯೋಜನವಾಗಲ್ಲ. ಹೀಗಾಗಿ ನನ್ನ ಪ್ರಕಾರ, ಈ ಹಿಯರಿಂಗ್​ ಏಡ್​ ಅವನಿಗೆ ನೀವು ಕೊಳ್ಳಬಹುದು ಅನ್ನಿಸುತ್ತೆ’ ಎನ್ನುತ್ತಾ, ಬ್ರೋಷರ್​ ತೋರಿಸಿದರು. ‘ಇದಕ್ಕೆ ಹಣ ಎಷ್ಟಾಗಬಹುದು.?’ ದನಿಯಲ್ಲಿ ಕುತೂಹಲವಿತ್ತು. ‘ಎರಡೂ ಹಿಯರಿಂಗ್​ ಏಡ್​ ಸೇರಿ 55 ಸಾವಿರ ಆಗುತ್ತೆ ಅಥರ್ವ ಅಮ್ಮಾ’ ‘ಆಯಿತು ಸರ್​, ಆರ್ಡರ್​ ಮಾಡಿ’ ಅಂದುಬಿಟ್ಟೆ ಧೈರ್ಯವಾಗಿ. 

‘ಹಿಯರಿಂಗ್​ ಏಡ್ಸ್​ ಆರ್ಡರ್​ ಮಾಡೋಕೆ, ಅದರ 10 ಪರ್ಸೆಂಟ್​ ಅಡ್ವಾನ್ಸ್​ ಕೊಡಬೇಕಾಗುತ್ತೆ ನೀವು, ಆಮೇಲೆ ಹಿಯರಿಂಗ್ ಏಡ್​ ಬಂದಮೇಲೆ ಸಂಪೂರ್ಣ ಹಣ ನೀಡಬಹುದು.’ ಅಂದು ಮುಗುಳ್ನಕ್ಕರು. ‘ಆಗಲಿ’  ಅಂದುಬಿಟ್ಟೆ. ಆದರೆ, ನನ್ನ ಅಕೌಂಟ್​ನಲ್ಲಿ ಹಿಯರಿಂಗ್​ ಏಡ್​ ಕೊಳ್ಳುವಷ್ಟು ಹಣವಿಲ್ಲ ಅನ್ನೋದಂತೂ ಚೆನ್ನಾಗಿಯೇ ಗೊತ್ತಿತ್ತು. 

ಯಾವುದಾದರೂ ದಾರಿ ಕಾಣಿಸುತ್ತದೆ, ಎಂಬ ಭಂಡ ಧೈರ್ಯ ಆ ಕ್ಷಣಕ್ಕೆ ಶಕ್ತಿಕೊಟ್ಟಿತ್ತು. 

ಮನೆಗೆ ಹೋಗುವುದಕ್ಕೂ ಮುಂಚೆ, ಎಟಿಎಮ್​ಗೆ ಹೋಗಿ ನನ್ನ ಅಕೌಂಟ್​ನಲ್ಲಿ ಹಣವೆಷ್ಟಿದೆ..? ಚೆಕ್​ ಮಾಡಿದೆ. ಕೇವಲ 7 ಸಾವಿರವಿತ್ತು ಅಷ್ಟೆ. ಅಷ್ಟನ್ನೂ ಡ್ರಾ ಮಾಡಿದೆ. ಯಾಕೋ ಕೈಯಲ್ಲಿದ್ದ ಉಂಗುರದತ್ತ ಕಣ್ಣು ಹರಿಯಿತು.  ಅಡವಿಟ್ಟುಬಿಡೋಣವೇ..? ಅನ್ನಿಸಿತು. ಮಾರಿದರೂ 50 ಸಾವಿರ ಗೀಟೋದಿಲ್ಲ. ‘ಛೇ.. ಬೇಡ. ಬೇಡ.’ ನಾನೊಬ್ಬಳೇ ಇಂಥ ನಿರ್ಧಾರಕ್ಕೆಲ್ಲ ಬರುವುದು ತಪ್ಪು. ಢೋಲಾಯಮಾನ ಸ್ಥಿತಿ ಅದು. ‘ಏನು ಮಾಡಲಿ..? ವಿನಯ್​ಗೆ ವಿಷಯ ತಿಳಿಸಿಬಿಡಲೇ..?’ ಊಹೂಂ. ಧೈರ್ಯವೇ ಸಾಕಾಗಲಿಲ್ಲ. ‘ನೆನಪಾದರು ನನ್ನ ಅಪ್ಪ..! ಅಪ್ಪಂಗೆ ಫೋನಾಯಿಸಿದೆ. ‘ಅರ್ಜೆಂಟಾಗಿ ಐವತ್ತು ಸಾವಿರ ಬೇಕಾಗಿತ್ತಲ್ಲಪ್ಪ..’ ಅಂದೆ. ನಾವು ಮೈಸೂರಿಗೆ ಬಂದಿದ್ದು, ಮನೆ ಮಾಡಿದ್ದು, ಸ್ಕೂಲಿಗೆ ಸೇರಿಕೊಂಡಿದ್ದು ಎಲ್ಲ ವಿಚಾರಗಳ ಪ್ರತಿ ಹಂತವನ್ನೂ ದಿನನಿತ್ಯ ತಿಳಿಯುತ್ತಿದ್ದ ಅವರು ಏನೊಂದೂ ಪ್ರಶ್ನಿಸದೇ, ನಾಳೆಯೇ ನಿನ್ನ ಅಕೌಂಟ್​ಗೆ ಹಾಕ್ತೀನಿ ಅಂದುಬಿಟ್ಟರು.   

ಹಣದ ವ್ಯವಸ್ಥೆಯಾಗಿತ್ತಲ್ಲ, ಮರುದಿನವೇ ನೆಮ್ಮದಿಯಿಂದ ಐದು ಸಾವಿರ ಅಡ್ವಾನ್ಸ್​ ಕೊಟ್ಟು, ರೀಸೌಂಡ್ ಕಂಪನಿಯ ಹಿಯರಿಂಗ್​ ಏಡ್​ ಬುಕ್​ ಮಾಡಿಸಿಯೇಬಿಟ್ಟೆ. ನಾಳೆಯೇ, ಮಗೂಗೆ ಸ್ಪೇರ್​ ಹಿಯರಿಂಗ್​ ಏಡ್​ ಹಾಕೋಣ, ಇಯರ್​ ಮೌಲ್ಡ್ಸ್​ ಮಾಡ್ಸಿದ್ದೀರಾ ಅಲ್ವಾ..?’ ಅಂದರು ಪ್ರವೀಣ್​ಸರ್​ (ಶ್ರವಣ ಸಾಧನ ಕಿವಿಗೆ ಹಾಕಲು ಬೇಕಾದ ಕಿವಿಯಚ್ಚು. ಅಕ್ರೆಲಿಕ್​ ಅಥವಾ ಸಿಲಿಕಾನ್​ ಮಟೀರಿಯಲ್​ ಬಳಸಿ ಇಯರ್​ ಮೌಲ್ಡ್​ ತಯಾರಿಸಿರುತ್ತಾರೆ.) ‘ಹಾ.. ಸರ್​ಮೋಲ್ಡ್​ ಇದೆ. ನಾಳೆ ತರ್ತೀನಿ’ ಉತ್ತರಿಸಿದೆ. ಬುಕ್​ ಮಾಡಿದ ಹೊಸ ಹಿಯರಿಂಗ್​ ಏಡ್​ ಬರುವವರೆಗೆ ತಮ್ಮ ಬಳಿಯಿದ್ದ ಸ್ಪೇರ್​ ಹಿಯರಿಂಗ್​ ಏಡ್​ನ್ನ ಅಥರ್ವನಿಗೆ ಹಾಕಿಕೊಡುತ್ತೇನೆ ಅಂದಿದ್ದು ಕೇಳಿ ಖಷಿಯಿಂದ ಗಂಟಲು ಕಟ್ಟಿದಂತಾಗಿತ್ತು. 

ಅಥರ್ವನ ಕಿವಿಗಳಿಗೆ ಶ್ರವಣ ಸಾಧನ ಹಾಕಲು ಇನ್ನೂ ನಾಳೆಯ ತನಕ ಕಾಯಬೇಕಲ್ಲ, ಇವತ್ತು ಬೇಗ ಬೇಗ ಕಳೆದುಹೋಗಲಿ ಅನ್ನಿಸುತ್ತಿತ್ತು. ಆವತ್ತೆಲ್ಲ ನಾನೇನೋ ಸಾಧಿಸಿದ ಖುಷಿ. ಅಂತೂ ಮಗನ ಕಿವಿಗೆ ಹಿಯರಿಂಗ್​ ಏಡ್​ ಹಾಕಿಸುತ್ತಿದ್ದೇನೆ ಎಂಬ ಹೆಮ್ಮೆ. ಅದೆಲ್ಲದಕ್ಕಿಂತ ಹೆಚ್ಚಾಗಿ ನನ್ನ ಮಗ ನಾಳೆ ಕೇಳಿಸಿಕೊಳ್ಳುತ್ತಾನೆ, ನಾನಿನ್ನು ಅವನ ಬಾಯಲ್ಲಿ ಅಮ್ಮ ಅಂತ ಕರೆಸಿಕೊಳ್ಳಬಹುದು. ಅಬ್ಬಾ..! ಎಂಥ ತವಕ. ಖುಷಿ. ಅಥರ್ವ ಕಿವುಡ ಎಂದು ಗೊತ್ತಾದಾಗಿನಿಂದ ಅವನನ್ನ ಮಲಗಿಸೋವಾಗ ಜೋಗುಳ ಹಾಡೋದನ್ನೂ ಬಿಟ್ಟಿದ್ದೆ. ಆದರೆ ನಾಳೆಯಿಂದ ಮತ್ತೆ ಶುರು ಮಾಡಬಹುದು. 

ಇಷ್ಟು ದಿನ ನಾನು ಹಾಡಿದ್ದು ಅವನಿಗೆ ಕೇಳಿಸಲಿಲ್ಲ ಅಲ್ವಾ..? ಇನ್ನು ಅವನಿಗೆ ಕೇಳಿಸ್ತೀನಿ. ಈ ಶ್ರವಣ ಸಾಧನಗಳ ಮೂಲಕವೇ ಅವನು ಕೇಳಿಸಿಕೊಳ್ಳುವಂತಾದರೆ, ಆ ಇಂಪ್ಲಾಂಟ್​ ಸರ್ಜರಿಯೇ ಬೇಕಾಗಿಲ್ಲವಲ್ಲ. ‘ಓ ದೇವರೇ.. ಒಂದು ಪವಾಡ ಮಾಡಿಬಿಡು ತಂದೆ… ಹಿಯರಿಂಗ್​ ಏಡ್​ ಮೂಲಕವೇ ನನ್ನ ಮಗ ಕೇಳಿಸಿಕೊಂಡು ಮಾತನಾಡುವಂತೆ ಮಾಡಿಬಿಡು ದೇವಾ..’ ಮತ್ತೆ ಮತ್ತೆ ಬೇಡಿಕೊಂಡೆ. ಇಡೀ ದಿನ ಅದೇ ಗುಂಗು. ನಾಳೆ ನನ್ನ ಮಗ ಕೇಳಿಸಿಕೊಳ್ತಾನೆ ಎಂಬ ಸಂಭ್ರಮ. 

ಅಂತೂ ಕಾದು ಕಾದೂ ನಾಳೆ ಬಂದಿತ್ತು. ಅಥರ್ವ ಎಂದಿನಂತೆ ಪಾಠಕ್ಕೆ ಕುಳಿತಿದಿದ್ದ. ನಾನು ಅವನಿಂದ ಮರೆಯಾಗಿ ಮತ್ತೊಬ್ಬ ಪಾಠದ ತಾಯಿಯ ಜತೆ ಕುಳಿತಿದ್ದೆ. ಪ್ರವೀಣ್​ ಸರ್​ಗಾಗಿ ಕಾಯುತ್ತಲೇ, ಸಾವಿರ ಬಾರಿ ಗೇಟ್​ನತ್ತ ಕಣ್ಣು ಹಾಯಿಸಿದ್ದೆ.  ಯಾಕೋ ಆವತ್ತು ಅವರಿಗೆ ಸ್ವಲ್ಪ ತಡವಾಗಿದ್ದಿರಬಹುದು. ಬೆಳಗ್ಗೆ ಕಳೆದು ಮಧ್ಯಾಹ್ನ 12 ಗಂಟೆಯೂ ಆಗಿತ್ತು. ‘ಅಯ್ಯೋ… ಪ್ರವೀಣ್​ ಸರ್​ ಇವತ್ತು ಬರೋದಿಲ್ಲ ಅನ್ಸುತ್ತೆ’ ಅಂದುಕೊಳ್ಳುತ್ತಿರುವಾಗಲೇ. ಅವರ ಕಾರ್​ ಬಂದು ಗೇಟ್​ನ ಮುಂದೆ ನಿಂತಿದ್ದನ್ನು ಕಂಡೆ. ಖುಷಿಯಾಯಿತು. ಅವರು ಬಂದವರೇ, ಅಥರ್ವನನ್ನ ಕರೆದುಕೊಂಡು ಬರಲು ಹೇಳಿ ಕಳಿಸಿದ್ದರು. 

ಅಥರ್ವ ಪಾಠದ ಆಂಟಿಯ ಮುಂದೆ ಕುಳಿತು, ಕ್ರೆಯಾನ್ಸ್​ನಿಂದ ನೋಟ್​ಬುಕ್​ನಲ್ಲಿ ಗೀಚುತ್ತಾ ಇದ್ದ. ಅವರು ಅವನ ಬಳಿ ಬಣ್ಣಗಳ ಹೆಸರು ಹೇಳುತ್ತಾ, ಗೀಚಿಸುತ್ತಾ ಇದ್ದರು. ಬಣ್ಣಗಳ ಪರಿಚಯ ನಡೆಯುತ್ತಿದೆ ಅನ್ನೋದು ಗೊತ್ತಾಯ್ತು ನನಗೆ. ‘ಅಥರ್ವ ಅಮ್ಮಾ.. ಬರಬೇಡಿ ಈ ಕಡೆ, ಇವತ್ತು ತುಂಬಾ ಚೆನ್ನಾಗಿ ಕುಳಿತಿದ್ದಾನೆ’ ಸನ್ನೆ ಮಾಡಿದರು ಅವರು. ಅಥರ್ವನಿಗಂತೂ ನನ್ನ ನೋಡಿ ಖುಷಿಯೋ ಖುಷಿ. ‘ಅಥರ್ವನಿಗೆ ಹಿಯರಿಂಗ್​ ಏಡ್​ ಹಾಕಿಸ್ತೀನಿ ಇವತ್ತು. ಪ್ರವೀಣ್​ ಸರ್​ ಬಂದಿದ್ದಾರೆ, ಅವನನ್ನ ಕಳಿಸಿಕೊಡಿ’ ಮೆಲುದನಿಯಲ್ಲಿ ಕೋರಿದೆ. ನನ್ನ ಮಾತು ಕೇಳಿದ್ದೇ,  ಪಾಠದ ತಾಯಿಯ ಮುಖ ಇಷ್ಟಗಲ ಅರಳಿತ್ತು. ‘ಹೌದಾ.. ಕರಕೊಂಡ್​ ಹೋಗಿ ಅಥರ್ವ ಅಮ್ಮಾ.. ಆಲ್​ದ ಬೆಸ್ಟ್​’ ಹಾರೈಸಿದರು ಅವರು. ‘ಮಗನನ್ನೆತ್ತಿಕೊಂಡು, ಪ್ರವೀಣ್​ಸರ್​ ಇದ್ದ ಕೊಠಡಿಯತ್ತ ಓಡಿದೆ.’

ನಾನು ಬೆಂಗಳೂರಿನಲ್ಲಿ ಮಾಡಿಸಿದ್ದ ಮೋಲ್ಡ್​ ಪರೀಕ್ಷಿಸಿ, ಸಾಫ್ಟ್​ ಮೋಲ್ಡ್​ ಚೆನ್ನಾಗಿದೆ ಅಂದರು. ಮೋಲ್ಡ್​ಗೆ ಹಿಯರಿಂಗ್​ ಏಡ್​ ಫಿಕ್ಸ್​ ಮಾಡಿ   ಅಥರ್ವನ ಕಿವಿಯೊಳಗದನ್ನು ತೂರಿಸಿ, ಲ್ಯಾಪ್​ಟಾಪ್​ನ ಮೂಲಕ ಅದರ ವಾಲ್ಯೂಮ್​ ಸೆಟ್​ ಮಾಡಿದರು. ತಮ್ಮ ಮೆಲುದನಿಯಲ್ಲಿ ಅಥರ್ವನನ್ನ ಮಾತನಾಡಿಸುತ್ತ, ಆಡಿಸುತ್ತ ಅವನ ಕಿವಿಗೆ ಹಿಯರಿಂಗ್​ ಏಡ್​ ಹಾಕಿಬಿಟ್ಟರು. ಆಶ್ಚರ್ಯಕರ ರೀತಿಯಲ್ಲಿ ಅಥರ್ವ ನನ್ನ ಕಾಲ ಮೇಲೆ ಸುಮ್ಮನೆ ಕುಳಿತು ಹಿಯರಿಂಗ್​ ಏಡ್​ ಹಾಕಿಸಿಕೊಂಡ. ನನ್ನ ಮನಸ್ಸಿನಲ್ಲೇನೋ ತವಕ, ಹಿಯರಿಂಗ್​ ಏಡ್​ ಹಾಕಿದ ತಕ್ಷಣ ಅಥರ್ವನ ಪ್ರತಿಕ್ರಿಯೆ ನೋಡಲು ಕಾಯುತ್ತಿದ್ದೆ. ಅವನ ಮುಖದಲ್ಲೇನಾದರೂ ಬದಲಾವಣೆ ಆಗಬಹುದು ಎಂದು ಅಥರ್ವನ ಮುಖವನ್ನೇ ಗಮನಿಸುತ್ತಿದ್ದೆ.    

‘ಸ್ವಿಚ್​ ಆನ್​ ಆಗಿದೆಯಾ ಸರ್​?’ ಕಸಿವಿಸಿಯಿಂದ ಕೇಳಿದೆ. ‘ಹಾ ಹೌದು ಮೇಡಮ್​’ ಅಂದರು. ‘ಅಥರ್ವ.. ಅಥರ್ವ.. ಅಥರ್ವ.. ಕೇಳಿಸುತ್ತಿದೆಯಾ ಪುಟ್ಟಾ..?’ ಅವನ ಮುಖವನ್ನೇ ದಿಟ್ಟಿಸಿ ಕೇಳಿದೆ. ಆದರೆ.. ಅಥರ್ವನ ಮುಖದಲ್ಲಿ ಹೊಸದಾದ, ನಾನು ನಿರೀಕ್ಷಿಸಿದ ಯಾವುದೇ ಪ್ರತಿಕ್ರಿಯೆ ಇರಲೇ ಇಲ್ಲ. ಮೊದಲಿನಂತೆಯೇ ಅವನು ನನ್ನ ತುಟಿಯನ್ನೇ ನೋಡಿ ನಗುತ್ತಾ ಅಭಿನಯಿಸುತ್ತಿದ್ದ. ಗಂಟಲು ಕಟ್ಟಿತು ನನಗೆ. ‘ಅವನಿಗೆ ಕೇಳಿಸುತ್ತಿಲ್ಲವಾ ಸರ್​?’ ಅಂದೆ. ‘ಅಥರ್ವ ಅಮ್ಮಾ, ನಿನ್ನೆ ನಾನು ನಿಮಗೆ ಹೇಳಿದ್ದೆ ಅಲ್ವಾ.. ತೀವ್ರ ಶ್ರವಣ ದೋಷವಿರು ಮಗುವಿಗೆ ಹಿಯರಿಂಗ್​ಏಡ್​ನಿಂದ ಅಂಥ ಪ್ರಯೋಜನವಾಗೋದಿಲ್ಲ ಅಂತ’ ಸಮಾಧಾನ ಮಾಡುವ ದನಿಯಲ್ಲಿ ಹೇಳುತ್ತಿದ್ದರು ಅವರು. ‘ಹಿಯರಿಂಗ್ ಏಡ್​ಹಾಕಿದ ತಕ್ಷಣ ಅವನಿಗೆ ಏನೂ ಕೇಳಿಸೋದಿಲ್ಲ. ಒಂದು ಒಂದು ವಾರ, ಹತ್ತು ದಿನ ಅಡ್ಜೆಸ್ಟ್​ ಆಗಲಿ. ಶಬ್ಧಗಳ ಪರಿಚಯ ಮಾಡಿಸ್ತಾ ಹೋಗಿ. ಹದಿನೈದು ದಿನ ಅಥವಾ ತಿಂಗಳೊಳಗೆ ನಿಮಗೆ ಅವನ ರೆಸ್ಪಾನ್ಸ್​ ಸಿಗುತ್ತೆ’ ತಿಳಿಸಿ ಹೇಳಿದರು ಮತ್ತೊಮ್ಮೆ.   

ಆಶಾಗೋಪುರ ಮತ್ತೆ ಕುಸಿದಿತ್ತು. ಹಿಯರಿಂಗ್​ ಏಡ್​ ಹಾಕಿಸಿದ ತಕ್ಷಣ ಮಗುವಿಗೆ ಕೇಳಿಸೋದಿಲ್ಲ, ಅದಕ್ಕೆ ನಾವು ಕೇಳಿಸಿಕೊಳ್ಳುವ, ಮಾತನಾಡುವ ತರಬೇತಿ ಕೊಡಬೇಕು ಅಂತ ಮೇಲಿಂದ ಮೇಲೆ  ಎಲ್ಲರೂ ಹೇಳುತ್ತಿದ್ದರೂ ಕೂಡ ನಾನು ಅದ್ಯಾವುದೋ ಪವಾಡಕ್ಕಾಗಿ ಕಾಯುತ್ತಿದ್ದೆ ! ಎಂಥ ವಿಚಿತ್ರ ಮನಸ್ಥಿತಿ ಅದು ಅಲ್ಲವೇ..? ಆ ಅಸಹಾಯಕ ಪರಿಸ್ಥಿತಿಯಲ್ಲಿ ಅದ್ಹೇಗೆ ನನ್ನ ಮನಸ್ಸು ನನಗೇ ಗೊತ್ತಿಲ್ಲದಂತೆ ಪವಾಡದ ಕಲ್ಪನೆಯಲ್ಲಿ ತೊಡಗಿಕೊಂಡಿತ್ತೋ ತಿಳಿಯೆ. ವಿಚಿತ್ರ ನಿರೀಕ್ಷೆ ಅದು. ನನ್ನೊಳಗೇ ನಾನು ತಿಳಿಯದ ನಿರೀಕ್ಷೆಗಳನ್ನ ಇಟ್ಟುಕೊಂಡುಬಿಟ್ಟಿದ್ದಕ್ಕೋ ಏನೋ, ಮತ್ತೊಮ್ಮೆ ಕಣ್ಣೀರ ಕಟ್ಟೆ ಒಡೆದಿತ್ತು. ಉಮ್ಮಳಿಸುತ್ತಿದ್ದ ದುಃಖ ಕಟ್ಟಿಕೊಂಡು ‘ಥ್ಯಾಂಕ್ಯೂ ಸರ್​ಹೊಸ ಹಿಯರಿಂಗ್​ ಏಡ್​ ಬಂದಮೇಲೆ ಹೇಳಿ’ ಎಂದು ಹೇಳಿ. ಅಲ್ಲಿಂದೆದ್ದು ಹೊರಗೆ ಬಂದೆ.  

ಅದಾಗಲೇ ಎಲ್ಲ ತಾಯಂದಿರೂ ಊಟದ ಹಾಲ್​ನಲ್ಲಿ ತಮ್ಮ ತಮ್ಮ ಮಕ್ಕಳನ್ನು ಕೂರಿಸಿಕೊಂಡು ಊಟ ಮಾಡಿಸುತ್ತಿದ್ದರು. ನಾನು ಅಥರ್ವನನ್ನ ಎತ್ತಿಕೊಂಡು, ನನ್ನ ಜಾಗಕ್ಕೆ ಹೋಗಿ ಕುಳಿತುಕೊಳ್ಳುತ್ತಿದ್ದಂತೆ, ನನ್ನ ಮುಖ ನೋಡಿದ ಮಾನಸಾ (ಅರ್ಜುನ್​ ಅಮ್ಮ), ‘ಯಾಕೆ..? ಏನಾಯ್ತು’ ಅಂದರು. ಅವರ ಬಳಿಯೂ ಒಮ್ಮೆ ಕಣ್ಣೀರಾದೆ. ‘ಅಯ್ಯೋ , ಅಮೃತಾ, ಹಿಯರಿಂಗ್​ ಏಡ್​ ಕಿವಿಗೆ ಬಿದ್ದ ತಕ್ಷಣ ಕೇಳಿಸೋದಿಲ್ಲ ಕಣೇ, ನನ್ನ ಮಗಂಗೆ ಹಿಯರಿಂಗ್​ ಏಡ್​ ಹಾಕಿ ಅವನಿಂದ ರೆಸ್ಪಾನ್ಸ್ ಸಿಗೋಕೆ, ಹತ್ತರಿಂದ ಹದಿನೈದು ದಿನ ಬೇಕಾಯ್ತು. ಆಗುತ್ತೆ. ತಾಳ್ಮೆ ಬೇಕು ನಮಗೆ. ಬೇಜಾರ್​ ಮಾಡ್ಕೋಬೇಡ.’ ಸಮಾಧಾನ ಮಾಡಿದಳು.   

ಅದೆಷ್ಟು ಕಿರಿಕಿರಿಯಾಗುತ್ತಿತ್ತೋ ಏನೋ, ತನ್ನ ಕಿವಿಯೊಳಗೆ ತೂರಿಕೊಂಡ ಹಿಯರಿಂಗ್​ ಏಡ್​ ಮೋಲ್ಡ್​ನ್ನ ತೆಗೆಯುವುದಕ್ಕೆ ಪ್ರಯತ್ನಿಸುತ್ತಾ, ಎರಡೂ ಕಿವಿಗಳನ್ನೂ ತನ್ನ ಪುಟ್ಟ ಕೈಗಳಿಂದ ಉಜ್ಜಿಕೊಳ್ಳುತ್ತಿದ್ದ, ಸರಿಯಾಗಿ ಊಟವನ್ನೂ ಮಾಡದೇ, ಮತ್ತೆ ಮತ್ತೆ ಕಿವಿಯಲ್ಲಿದ್ದ ಶ್ರವಣ ಸಾಧನಗಳನ್ನ ತೆಗೆದು ಹಾಕುವುದೇ ಅವನ ಕೆಲಸವಾಗೋಯ್ತು. ಅಕ್ಕಪಕ್ಕದ ಮಕ್ಕಳನ್ನು ತೋರಿಸಿ, ಮತ್ತೆ ಮತ್ತೆ ಹಿಯರಿಂಗ್​ ಏಡ್​ಹಾಕಿದೆ. ನನಗೂ ಹೊಸದು, ಅವನಿಗೂ ಹೊಸದು.  ಹಿಯರಿಂಗ್​ ಏಡ್​ನ ಮೋಲ್ಡ್​ನ್ನ ಅವನ ಕಿವಿಯೊಳಗೆ ತೂರಿಸೋಕೆ ನನ್ನ ಕೈ ನಡುಗುತ್ತಿತ್ತು. ನಾನು ಹಾಕಿದ್ದು ನೋವಾಗುತ್ತಿತ್ತೋ ಏನೋ ಅವನು ಅಳುತ್ತಿದ್ದ.  

ಅಥರ್ವನ ಕೈತೊಳೆಯಿಸುತ್ತಾಗ, ಅಲ್ಲೇ ಬಂದು ನಿಂತಿದ್ದ ಅರ್ಜುನ್​ ಅಮ್ಮ, ‘ಇಲ್ಲೇ ಸ್ಕೂಲ್​ನ ಹತ್ತಿರ ಯಾವುದೋ ಮನೆ ಖಾಲಿ ಇದೆಯಂತೆ. ಇವತ್ತು ಸ್ಕೂಲ್ ಮುಗಿದ ಮೇಲೆ ಒಮ್ಮೆ ಆ ಮನೆ ನೋಡ್ಕೊಂಡ್​ ಹೋಗು. ನಾನು ನಮ್ಮನೆಯವ್ರಿಗೆ ಹೇಳಿದ್ದೀನಿ. ಅವರು ನಿಂಗೆ ಮನೆ ತೋರಿಸ್ತಾರೆ’ ಎಂದಳು. ಚಿಕ್ಕ ಮಗುವನ್ನೆತ್ತಿಕೊಂಡು ಹಳ್ಳಿ ಭೋಗಾದಿಯಿಂದ ದಿನನಿತ್ಯ ಆಟೋದಲ್ಲಿ ಬಂದು ಹೋಗಿ ಮಾಡುವುದು, ತುಂಬಾ ಕಷ್ಟ ಎಂಬುದನ್ನ ತಾನೇ ತಿಳಿದುಕೊಂಡು, ತನ್ನ ಗಂಡನಿಗೂ ಹೇಳಿ ನನಗೆ ಸಹಾಯ ಮಾಡಲು ಮುಂದಾಗಿದ್ದಳು ಮಾನಸಾ. ಅವಳ ಮಾತಿನಂತೆ, ಸ್ಕೂಲ್​ ಬಿಟ್ಟಮೇಲೆ ಮನೆಯನ್ನ ನೋಡಿ, ಮನೆ ಓನರ್​ ಅಜ್ಜಿಯ ಹತ್ತಿರವೂ ಮಾತನಾಡಿ, ನಾಳೆ ತಿಳಿಸುತ್ತೇನೆ ಎಂದು ಹೇಳಿಬಂದೆ. ಮನೆಯೇನೋ ತಕ್ಕಮಟ್ಟಿಗಿತ್ತು. ಶಾಲೆಗೆ ಅತೀ ಹತ್ತಿರವಿರುವ ಕಾರಣ, ನನಗೆ ಈ ಮನೆ ಅವಶ್ಯವೂ ಇತ್ತು.  

ಆದರೆ.. ನನ್ನ ಗಂಡನಿಗೆ ಹೇಳುವುದೂ.. ಸಾಕಷ್ಟಿತ್ತು. ಮುಚ್ಚಿಟ್ಟ ವಿಷಯಗಳನ್ನೆಲ್ಲ ಹೇಳಿ ಹಗುರಾಗಬೇಕಿತ್ತು. ವಾರಾಂತ್ಯದ ರಜೆ ಸಮೀಪವಿದ್ದ ಕಾರಣ ವಿನಯ್​ಗೆ ಫೋನಾಯಿಸಿ, ನಾಳೆಯೇ ಮೈಸೂರಿಗೆ ಬಾ ಅಂದುಬಿಟ್ಟೆ. ಇದೆಲ್ಲದರ  ಜತೆ, ‘ವಿನಯ್​ ಏನನ್ನುತ್ತಾನೋ..?’ ಎಂಬ ಕಸಿವಿಸಿ ತಣ್ಣಗೆ ಕೊರೆಯುತ್ತಿತ್ತು.   

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: