ಅಮೃತಾ ಹೆಗಡೆ ಅಂಕಣ- ಎಲ್ಲವೂ ಅವನ ತೊದಲಿಗಾಗಿ..

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

9

ದೀಪಾ ಅವರ ಮಾತಿನ ಶಕ್ತಿಯೇ ಹಾಗಿತ್ತು. ರವೀಂದ್ರ ಭಟ್ಟರ ಮನೆಯಿಂದ ನಮ್ಮ ಮನೆ ತಲುಪುವಷ್ಟರಲ್ಲಿಯೇ ನಾನು  ನಿರ್ಧರಿಸಿಯಾಗಿತ್ತು ‘ಎರಡು ವರ್ಷಗಳ ಮಟ್ಟಿಗೆ ನಾನು ಅಥರ್ವನೊಂದಿಗೆ ಮೈಸೂರಿಗೆ ಹೋಗಲೇ ಬೇಕು’ ಎಂದು. ಬೆಂಗಳೂರಿನಲ್ಲಿದ್ದ ಕೆಲಸ ಬಿಟ್ಟು ತಾನೂ ಬಂದು ನಮ್ಮೊಂದಿಗೆ ಉಳಿಯಲಾರದ ಪರಿಸ್ಥಿತಿಯಲ್ಲಿದ್ದ ವಿನಯ್​, ನಮ್ಮಿಬ್ಬರನ್ನು ಮಾತ್ರ  ಮೈಸೂರಿನಲ್ಲಿಡಲು ಒಪ್ಪಿದ್ದ. ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದ. 

ಮನೆಗೆ ಬಂದಿದ್ದೇ, ಅಥರ್ವನನ್ನು ನನ್ನ ಮುಂದೆ ಕೂರಿಸಿಕೊಂಡು ಆ, ಈ, ಊ ಸ್ವರಗಳನ್ನ ಅಭ್ಯಾಸ ಮಾಡಿಸಲು ಪ್ರಯತ್ನಪಟ್ಟೆ. ಅಥರ್ವನಿಗೆ ದೀಪಾ ಅವರ ಮನೆಯಲ್ಲಿ ಅದೊಂದು ಹೊಸ ಆಟವಾಗಿತ್ತು, ಅವರ ಮುಂದೆ ಕೂತು ಅವರು ಹೇಳಿದಂತೆಲ್ಲ ಮಾಡಿದ್ದ. ಆದರೆ ಈಗ ಆ ಆಟ ಬೇಜಾರಾಗಿತ್ತು. ನನ್ನ ಮುಂದೆ ಕೂರಿಸಿಕೊಳ್ಳುತ್ತಿದ್ದಂತೆ ಕೈತಪ್ಪಿಸಿಕೊಂಡು ಓಡುತ್ತಿದ್ದ. ಒತ್ತಾಯವಾಗಿ ಎತ್ತಿಕೊಂಡು ಬಂದರೂ ಕೊಸರಿಕೊಂಡು ಅತ್ತು ಕರೆದು ಓಡಿಹೋಗಿಬಿಡುತ್ತಿದ್ದ. ಮನೆಯಲ್ಲಿ ಅಂತೂ ಇಂತೂ ದಿನಕ್ಕೆ ಎರಡು ಬಾರಿ ಸ್ವರ ಹೇಳಿಸುವುದೂ ಕಷ್ಟವಾಯ್ತು. 

ಪ್ರತಿಕ್ಷಣ ಹಿಯರಿಂಗ್​ ಏಡ್​ ಬಂದಿಲ್ಲವಲ್ಲ.. ಅನ್ನೋ ಕೊರಗು ನನ್ನ ಸದಾ ಕಾಡುತ್ತಿತ್ತು. ಅದಾಗಲೇ ಮೈಸೂರಿನ ಆಯಿಶ್​ (ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಸ್ಪೀಚ್​ ಅಂಡ್​ ಹಿಯರಿಂಗ್​)ನಲ್ಲಿ ಅಥರ್ವನಿಗಾಗಿ ಹಿಯರಿಂಗ್​ ಏಡ್​ ಬುಕ್​ ಮಾಡಿ 20 ದಿನಗಳು ಕಳೆದುಹೋಗಿದ್ದವು. ನಮ್ಮ ಏರಿಯಾದಲ್ಲಿ ಹುಡುಕಾಡಿ, ಇ.ಎನ್​ಟಿ ಸ್ಟೆಷಲಿಸ್ಟ್​ ಒಬ್ಬರ ಸಹಾಯ ಪಡೆದು ಅಥರ್ವನ ಕಿವಿಯಚ್ಚುಗಳನ್ನೂ (ಶ್ರವಣ ಸಾಧನಗಳನ್ನು ಧರಿಸಲು ಬೇಕೇಬೇಕಾದ ಕಿವಿಯಚ್ಚು) ಮಾಡಿಸಿಟ್ಟಿದ್ದೆ. ಆಯಿಶ್​ನಲ್ಲಿ ಹಿಯರಿಂಗ್​ ಏಡ್​ ಸಿಕ್ಕ ತಕ್ಷಣ ಅದನ್ನ ಹಾಕಲು ತಡವಾಗಬಾರದು ಎಂಬ ಮುನ್ನೆಚ್ಚರಿಕೆ ಅದು. 

ಹಿಯರಿಂಗ್ ಏಡ್​ ಕಿವಿಗೆ ಹಾಕಿದ ಮೇಲೆ ಅಥರ್ವ ನನ್ನ ಜತೆ ಸ್ವರ ಅಭ್ಯಾಸಕ್ಕೆ ಕೂರಬಹುದು ಎಂದು ಯೋಚಿಸುತ್ತಾ ಆಯಿಶ್​ಗೆ ಫೋನಾಯಿಸುತ್ತಿದ್ದೆ. ‘ಯಾವುದೋ ಕಾರಣದಿಂದ, ಹಿಯರಿಂಗ್​ ಏಡ್​ ಹೈದ್ರಾಬಾದ್​ನಿಂದ ಬರುವುದು ತಡವಾಗುತ್ತಿದೆ, ಇನ್ನು ಸ್ವಲ್ಪ ದಿನಗಳಲ್ಲಿ ಬಂದೇ ಬರುತ್ತದೆ’ ಎಂಬ ಮತ್ತದೇ ನಿರ್ಭಾವುಕ ಉತ್ತರಗಳು ಆ ಕಡೆಯಿಂದ..! ನಿರಾಸೆಯ ಚಡಪಡಿಕೆ ಈ ಕಡೆಯಿಂದ..! ಹಿಯರಿಂಗ್​ ಏಡ್​ಗಾಗಿ 50 ಸಾವಿರ ರೂಪಾಯಿಗಳನ್ನು ಕೊಟ್ಟು ಬುಕ್​ ಮಾಡಿದ್ದ ನಮಗೆ, ಕಾಯುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ.   ‘ಕಿವುಡು ಮಕ್ಕಳಿಗೆ ಒಂದೊಂದು ದಿನವೂ ಅತ್ಯಂತ ಮುಖ್ಯವಾದದ್ದು, ಸಮಯ ಹಾಳು ಮಾಡಬೇಡ’ ಎಂಬ ದೀಪಾ ಅವರ ಸಲಹೆ ಮತ್ತೆ ಮತ್ತೆ ಕಿವಿಯಲ್ಲಿ ಗುಂಯಿಗುಡುತ್ತಿತ್ತು. 

ಮೈಸೂರಿಗೆ ಹೋಗುವುದಕ್ಕೂ ಮೊದಲು ಮುಖ್ಯವಾದ ಎರಡು ಕೆಲಸಗಳು ಆಗಬೇಕಿದ್ದವು. ಅಥರ್ವನಿಗೆ ಎದೆಹಾಲೂಡಿಸುವುದನ್ನು ನಿಲ್ಲಿಸುವುದು ಮತ್ತು ಅವನಿಗೆ ಕೂದಲು ಕತ್ತರಿಸುವುದು. ನಮ್ಮ ಕುಟುಂಬದಲ್ಲಿ ಗಂಡು ಮಗುವಿಗೆ ಮೊದಲ ಬಾರಿ ಕೂದಲು ಕತ್ತರಿಸುವಾಗ ’ಚೌಳ’ ಆಚರಿಸುವ ಪದ್ಧತಿ ಇರುವುದರಿಂದ ಅಥರ್ವನ ತಲೆಯ ಮೇಲೆ ಇನ್ನೂ ಕತ್ತರಿಕಾಣದ ತಲೆಕೂದಲು ಯಥೇಚ್ಚವಾಗಿ ಬೆಳೆದಿತ್ತು. ನಾನು ಮೈಸೂರಿಗೆ ಹೋಗುವುದಕ್ಕೂ ಮೊದಲು ಹುಲುಸಾಗಿ ಬೆಳೆದಿದ್ದ ಅವನ ಕೂದಲು ಚಿಕ್ಕದಾಗಿಸುವುದು ನನ್ನ ಉದ್ದೇಶವಾಗಿತ್ತು. ನಾನೇ ಅವನ ಉದ್ದದ ಕೂದಲನ್ನ ಚಿಕ್ಕದು ಮಾಡಿಬಿಡುತ್ತೇನೆ ಅಂದಿದ್ದೆ. 

ಇನ್ನೂ ಎರಡು ವರ್ಷವೂ ಆಗದ ಮಗುವಿಗೆ ಈಗಲೇ ಕೂದಲು ಕತ್ತರಿಸುವುದು  ಬೇಡ ಎಂಬ ಅಭಿಪ್ರಾಯಗಳು ವ್ಯಕ್ತವಾದರೂ ನಾನು ಯಾರ ಮಾತೂ ಕೇಳಲಿಲ್ಲ. ಕೊನೆಗೆ, ಒಂದೊಳ್ಳೆ ಮೂಹೂರ್ತದಲ್ಲಿ ಬೆಂಗಳೂರಿನ ನಮ್ಮ ಮನೆಯಲ್ಲಿಯೇ ಅವನ ಕೂದಲನ್ನ ನಾವೇ ಕತ್ತರಿಸುವುದು ಅಂತ ಮಾತನಾಡಿಕೊಳ್ಳುತ್ತಿರುವಾಗಲೇ, ನನ್ನ ಅತ್ತೆ ಸ್ವತಃ ತಾವೇ ಊರಿನಿಂದ ಬೆಂಗಳೂರಿಗೆ ಹೊರಟಾಗಿತ್ತು. ಮುಹೂರ್ತದೊಂದಿಗೆ..! ಬರುವಾಗಲೇ ಮುಹೂರ್ತ ಕೇಳಿಕೊಂಡೇ ಬಂದಿದ್ದ ಅವರು,  ಬಂದ ದಿನವೇ ಪದ್ಧತಿಗೆ ಏನೇನು ಬೇಕು, ಏನೇನು ಮಾಡಬೇಕು ಎಂಬುದನ್ನ ಹೇಳಿಬಿಟ್ಟರು.  

ಮರುದಿನ ಬೆಳಗ್ಗೆ ಹತ್ತುಗಂಟೆಗೇ ಚೌಳದ ಮುಹೂರ್ತ. ಅದೇ ಗಡಿಬಿಡಿಯಲ್ಲಿ ವಿನಯ್​ ತನ್ನ ಖಾಯಂ ಕಟಿಂಗ್​ ಸಲೂನ್​ಗೆ ಹೋಗಿ,  ಓರ್ವ ಕ್ಷೌರಿಕರನ್ನು ಮುಹೂರ್ತ ಸಮಯಕ್ಕೆ ಬುಕ್​ಮಾಡಿ ಬಂದು,  ಅತ್ತೆ ಹೇಳಿದಂತೆ ಅವರಿಗೆ ಕೊಡುವ ಉಡುಗೊರೆಯನ್ನೂ ತಂದಿಟ್ಟೇ ಆಫೀಸ್​ಗೆ ಹೋಗಿದ್ದ.  ಪದ್ಧತಿಗೆ ಬೇಕಾಗಿದ್ದ ಎಲ್ಲವೂ ಸಿದ್ಧವಾಗಿದ್ದವು. 

ಅತ್ತೆ ಬೆಳಗ್ಗೆ ಎದ್ದಿದ್ದೇ ಸ್ನಾನ ಮಾಡಿಕೊಂಡು ಮಡಿ ಸೀರೆಯುಟ್ಟು ಪಾಯಸ ಮಾಡುತ್ತಿದ್ದರೆ, ನಾನು  ದೇವರ ಮುಂದೆ ಪುಟಾಣಿ ರಂಗೋಲಿ ಹಾಕಿ, ಹೂವು, ಫಲ ತಾಂಬೂಲ ಎಲ್ಲವನ್ನು ಅಣಿಮಾಡಿದೆ. ನಾನು, ಸಿದ್ಧಳಾಗಿ ಅಥರ್ವನನ್ನೂ ಎಬ್ಬಿಸಿದೆ. ಅಷ್ಟರಲ್ಲಿಯೇ ವಿನಯ್​  ಕ್ಷೌರಿಕರನ್ನು ಕರೆತರಲು ಹೊರಹೋಗಿದ್ದ. ಹತ್ತು ಗಂಟಯೊಳಗೇ, ಕ್ಷೌರಿಕ ಮನೆಗೆ ಬಂದಿದ್ದರು. 

ತಲೆತುಂಬಾ ಕೂದಲು ತುಂಬಿಕೊಂಡಿದ್ದ ಅಥರ್ವ ತನ್ನಪ್ಪನ ಕಾಲಮೇಲೆ ಕುಳಿತಿದ್ದ. ಮೊದಲ ಚೌರ ಆರಂಭವಾಯಿತು. ಟ್ರಿಮ್ಮಿಂಗ್​ ಮಷಿನ್​ನ ಸಹಾಯದಿಂದ ಅವನ ಕೂದಲು ಕತ್ತಿರಿಸುತ್ತಿದ್ದರೆ, ಅಥರ್ವ ತನ್ನ ಮೈಮೇಲೆಲ್ಲಾ ಬೀಳುತ್ತಿದ್ದ ಮೆತ್ತನೆಯ ಕೂದಲ ರಾಶಿಯನ್ನು ಎತ್ತಿ ಎತ್ತಿ ನೋಡುತ್ತಿದ್ದ. ಅಲ್ಲೇ ನಿಂತು ಚೌಳದ ಹಾಡು ಹಾಡುತ್ತಿದ್ದ ಅತ್ತೆಯ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರ..!. ಅಂತೂ ನಮ್ಮೆಲ್ಲರ ಮಿಶ್ರ ಮನಸ್ಥಿತಿಯಲ್ಲಿಯೇ ಅಥರ್ವನ ಪ್ರಥಮ ಚೌರ ಮುಗಿಯುತ್ತಿದ್ದಂತೆ, ಕ್ಷೌರಿಕರಿಗೆ ದಕ್ಷಿಣೆ, ಉಡುಗೊರೆ ಕೊಟ್ಟು ನಮಸ್ಕರಿಸಿ ಕಳಿಸಿಕೊಟ್ಟೆವು. ಅತ್ತೆಯ ಹಳೆ ಹಾಡಿನ ಹಿನ್ನೆಲೆಯಲ್ಲಿಯೇ ಅಥರ್ವನ ಮೈಗೆಲ್ಲ ಅರಿಶಿಣ ಹಚ್ಚಿ ಅಭ್ಯಂಜನ ಮಾಡಿಸಿದೆವು. ಹೊಸ ಬಟ್ಟೆ ಹಾಕಿದ ಮುದ್ದು ಅಥರ್ವನಿಗೆ ಆರತಿ ಎತ್ತಿ, ಮಲ್ಲಿಗೆ ಮಾಲೆ ಕೊರಳಿಗೆ ಹಾಕಿ ಫೋಟೋ ಕ್ಲಿಕ್ಕಿಸಿದೆವು. ವಿನಯ್​ ದೇವರಿಗೆ ಪೂಜೆ ಮಾಡಿ, ಪಾಯಸ ನೈವೇದ್ಯ ಮಾಡಿದ್ದ. ಹೀಗೆ ಅಥರ್ವನ ಚೌಳ ಶಾಸ್ತ್ರ ಸಂಪನ್ನವಾಗಿತ್ತು. 

ಚೌಳದ ದಿನ ರಾತ್ರಿಯಿಂದಲೇ, ಎದೆಹಾಲು ಬಿಡಿಸುವ ಪರ್ವ ಆರಂಭವಾಗಿತ್ತು. ಹಗಲಿನಲ್ಲಿ ಇಡೀ ದಿನ ಅವನಿಗೆ ಅಮ್ಮನ ಹಾಲು ಸಿಕ್ಕಿರಲಿಲ್ಲ. ನನ್ನ ಮುಖ ನೋಡಿ ನೋಡಿ ದಯನೀಯವಾಗಿ ಆಗಾಗ ಅಳುತ್ತಿದ್ದ ಅವನ ಕಣ್ಣುತಪ್ಪಿಸಿದ್ದೆ, ನನ್ನ ಕಂಡ ತಕ್ಷಣ ಸನ್ನೆ ಮಾಡುತ್ತಾ ಹತ್ತಿರ ಬರುವ ಅವನಿಂದ ದೂರ ಸರಿದೆ. ಇದನ್ನೆಲ್ಲ ಕಂಡು ‘ಇವತ್ತು ರಾತ್ರಿ ಜಾಗರಣೆ ಫಿಕ್ಸ್​’ ಎಂಬುದು ಎಲ್ಲರ ಅಂದಾಜಾಗಿತ್ತು. ಆದರೆ ಹಾಗಾಗಲೇ ಇಲ್ಲ. ಒಮ್ಮೆ ಮಾತ್ರ ಎದ್ದ ಅವನಿಗೆ ಲೋಟದಲ್ಲಿ ಹಸುವಿನ ಹಾಲು ಕುಡಿಸಿದ್ದೇ ನೆಮ್ಮದಿಯಾಗಿ ಮಲಗಿಬಿಟ್ಟ. 

ಮರುದಿನ ಎರಡು ಬಾರಿ ನನ್ನ ಹತ್ತಿರ ಬರಲು ಪ್ರಯತ್ನ ಪಟ್ಟಿದ್ದಷ್ಟೇ. ಎರಡನೇ ರಾತ್ರಿಗಾಗಲೇ ಅಮ್ಮನ ಹಾಲಿನ ನೆನಪು ಅವನಿಂದ ಮರೆಯಾಗಿಹೋಗಿತ್ತು. ಅವನೇನೋ ಎರಡೇ ದಿನದಲ್ಲಿ ಮರೆತುಬಿಟ್ಟ. ಆದರೆ ನಾನು..? ಕಾಡುವ ನೋವು, ಸೆಳೆತಕ್ಕೆ ಔಷಧ ತೆಗೆದುಕೊಂಡು ಹಾಲು ಬತ್ತಿಸಿದೆ. ಮಗು ಅಮ್ಮನ ಹಾಲನ್ನ ಬಿಟ್ಟರೆ ದೈಹಿಕವಾದ ನೋವೊಂದೇ ಅಲ್ಲ, ಮಾನಸಿಕವಾಗಿಯೂ ನಾವೇನೋ ಕಳೆದುಕೊಂಡ ಭಾವ ಆವರಿಸುತ್ತೆ ಎಂಬ ಹೊಸ ಅನುಭವಾಗಿತ್ತು ನನಗೆ. ನಾನು ಅವನ ಹತ್ತಿರ ಹೋದರೆ, ಹಾಲಿನ ನೆನಪಾಗಬಹುದೇನೋ ಎಂಬ ಕಾರಣದಿಂದ ಎರಡು ದಿನ ದೂರವೇ ಇದ್ದೆನಲ್ಲ..ಅದೆಂಥ ಘೋರ ಯಾತನೆ ಅದು..! ಮಗುವಿಗೆ ನಮ್ಮೊಂದಿಗಿರುವ ವಿಶೇಷ ಸಂಬಂಧವನ್ನ ಕಳಚಿಕೊಳ್ಳುವ ಆ ಘಟ್ಟ ಯಾವ ತಾಯಿಗೂ ಸುಲಭವಲ್ಲ.   

ಆಗಬೇಕಿದ್ದ ಎರಡು ಕೆಲಸಗಳೂ ಒಂದೇ ವಾರದ ಅವಧಿಯಲ್ಲಿ ಸಲೀಸಾಗಿ ಮುಗಿದುಹೋಗಿದ್ದವು. ರವೀಂದ್ರ ಭಟ್​ – ದೀಪಾ ಅವರ ಮನೆಗೆ ಹೋಗಿಬಂದು ವಾರ ಕಳೆದಿತ್ತು. ದೀಪಾ ಅವರ ಜೊತೆಯಲ್ಲಿ ಮೈಸೂರಿಗೆ ಹೋಗುವ ಸಮಯ  ಬಂದಾಗಿತ್ತು. ಅವರಿಗೆ ಫೋನಾಯಿಸಿದೆ. ತಕ್ಷಣ ಫೋನ್​ಎತ್ತಿ ಮಾತನಾಡತೊಡಗಿದರು ‘ಮೈಸೂರಿಗೆ ಯಾವಾಗ ಹೋಗೋಣ ಅಮೃತಾ…? ತಡ ಮಾಡೋದು ಒಳ್ಳೇದಲ್ಲ.’ ಎಚ್ಚರಿಸಿದರು.

‘ನಾಳೆಯೇ ಹೋಗೋಣ್ವಾ…?’ ಹಿಂಜರಿಯುತ್ತಲೇ ಕೇಳಿದ್ದೆ. ಆದರೆ ಅವರಿಗೆ  ಕೆಲಸ, ಕಮಿಟ್​ಮೆಂಟ್​ಏನಿತ್ತೋ..? ಎಲ್ಲವನ್ನೂ ಬದಿಗೊತ್ತಿ, ಒಂದು ಕ್ಷಣ ಕೂಡ ಯೋಚಿಸದೇ ‘ಆಯ್ತು’ ಅಂದುಬಿಟ್ಟರು. ಅವರು ಹೇಳಿದಂತೆ ಅಥರ್ವನ ಕಿವಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ರಿಪೋರ್ಟ್​​ಗಳು, ಅಥರ್ವನ ಪಾಸ್​ಪೋರ್ಟ್​ ಸೈಜ್​​ ಫೋಟೋಗಳು ಮತ್ತು ಅಡ್ಮಿಶನ್​ಗಾಗಿ ಹಣ ಎಲ್ಲವನ್ನೂ ಜೋಡಿಸಿಟ್ಟುಕೊಂಡೆ. ದೀಪಕ್ಕಾ ಹೇಳಿದ ಶಾಲೆಯಲ್ಲಿ ನಮ್ಮ ನೊಂದಣಿ ಮಾಡಿಸಿ, ಅಲ್ಲೆಲ್ಲ ಸುತ್ತಮುತ್ತ ಬಾಡಿಗೆ ಮನೆ ಹುಡುಕುವ ಯೋಜನೆಯೂ ಇದ್ದ ಕಾರಣ, ಅಥರ್ವನನ್ನ ಮನೆಯಲ್ಲಿಯೇ ಬಿಟ್ಟು ಬರುವುದಾಗಿ ಕೇಳಿದಾಗ, ಸ್ವಲ್ಪ ಯೋಚಿಸಿ, ಆಯ್ತು ಅಂದರು ದೀಪಕ್ಕಾ. 

ಮುದ್ದಾಗಿ ಮಲಗಿದ್ದ ಅಥರ್ವನ ತಲೆಗೊಂದು ಮುತ್ತು ಕೊಟ್ಟು, ಅತ್ತೆಯ ಪಕ್ಕದಲ್ಲಿ ಮಲಗಿಸಿ, ಬೆಳಗ್ಗೆ 5ಕ್ಕೇ ಮನೆಬಿಟ್ಟೆ. ಬೆಳಗ್ಗೆ ಐದು ಮುಕ್ಕಾಲಿಗೇ  ಬೆಂಗಳೂರಿನ ಕೆಂಗೇರಿ ರೈಲ್ವೇ ಸ್ಟೇಷನ್​ಗೆ ನನಗಿಂತ ಮುಂಚೆ ಬಂದು ಕಾಯುತ್ತಾ ಇದ್ದ ದೀಪಕ್ಕಾ ದೂರದಿಂದಲೇ ಕೈ ಮಾಡಿದ್ದರು. ಇಬ್ಬರಿಗೂ ಟಿಕೆಟ್​ ಕೂಡ ತೆಗೆದುಕೊಂಡೇ ಕುಳಿತಿದ್ದರು ದೀಪಕ್ಕಾ. ಇಬ್ಬರೂ ಭೇಟಿಯಾಗಿ ಹತ್ತು ನಿಮಿಷ ಕಳೆಯುವುದರೊಳಗೆ ಮೈಸೂರಿಗೆ ಹೋಗುವ ರೈಲು ಬಂದೇಬಿಟ್ಟಿತ್ತು. ಸೀಟು ಕೂಡ ಸಲೀಸಾಗಿ ಸಿಕ್ಕಿತ್ತು. ಎದುಬದುರಾಗಿದ್ದ ಸಿಂಗಲ್​ ಸೀಟ್​ಗಳಲ್ಲಿ ಕುಳಿತೆವು. ಚುಮುಚುಮು ಬೆಳಗು, ಹದವಾದ ಚಳಿ, ಕಿಟಕಿ ಪಕ್ಕದ ಸೀಟು, ರೈಲ್ವೆ ಪ್ರಯಾಣ.  ಮಗುವಿಗೆ ಭವಿಷ್ಯ ಬರೆಯುವುದಕ್ಕಾಗಿ ಹೊರಟ ಪಯಣವದು. ನನ್ನೆದುರಿಗೆ ಕುಳಿತವರು ಅದಾಗಲೇ ನಾನು ಸಾಧಿಸಬೇಕಿರುವುದನ್ನ ಸಾಧಿಸಿದ ಸಾಧಕಿ. ನನ್ನ ಮನಸ್ಸಿನಲ್ಲಿಯೂ ಅದೇ ಗುರಿ ಇತ್ತಲ್ಲ.., ಹೀಗಾಗಿ ಮೊದಲಿನ ಬೇಜಾರು, ಕೊರಗುಗಳೆಲ್ಲ ತಾತ್ಕಾಲಿಕವಾಗಿ ಮಾಯವಾದವು. 

‘ದೀಪಕ್ಕಾ.. ನನಗಾಗಿ ಹೊರಟು ಬಂದಿರಿ, ನಿಮಗೆ ಎಂಥ ತೊಂದರೆ ಇತ್ತೋ ಏನೋ..’ ಅಂದೆ. ‘ನಮ್ಮ ಮಕ್ಕಳಿಗಾಗಿ (ಕಿವುಡು ಮಕ್ಕಳಿಗೆ) ಸಹಾಯ ಮಾಡಲು ನಾನು ಯಾವತ್ತಿಗೂ ಸಿದ್ಧ. ನೀನೂ ನೆನಪಿಟ್ಟುಕೊ. ಅವಕಾಶ ಸಿಕ್ಕಾಗೆಲ್ಲ ಅವಶ್ಯವಿದ್ದವರಿಗೆ ಸಹಾಯ ಮಾಡು’ ಅನ್ನುತ್ತಾ ನಕ್ಕರು. ರೈಲು ಹೊರಟಿತ್ತು. ನಿಧಾನವಾಗಿ ನಾವು ಕುಳಿತ ಬೋಗಿ ತುಂಬಿತು.  

‘ಅಮೃತಾ.. ನಾನು ಆವತ್ತೇ ನಿನಗೆ ಹೇಳಿದ್ದೆ ಅಲ್ವಾ…? ನಾವೀಗ ಹೋಗುತ್ತಿರುವ ಶಾಲೆ ನಮ್ಮ ‘ಪಿ.ಎ.ಡಿ.ಸಿ’ , ಕೇವಲ ಕಿವುಡು ಮಕ್ಕಳ ಶಾಲೆಯಲ್ಲ. ಅದು ತಾಯಂದಿರ ಶಾಲೆಯೂ ಹೌದು ಅಂತ’ ನಾನು ‘ಹಾಂ ಹೌದು ನೆನಪಿದೆ’ ಅಂದೆ. ‘ಆ ಶಾಲೆಯಲ್ಲಿರುವ ವಿಶೇಷವೇನು ಗೊತ್ತಾ..? ಅಲ್ಲಿ ನಿನ್ನನ್ನ, ನಿನ್ನ ಹೆಸರಿನಿಂದ ಯಾರೂ ಗುರುತಿಸೋದಿಲ್ಲ. ನಿನ್ನ ಮಗುವಿನ ಹೆಸರಿನ ಮುಂದೆ  ‘ಅಮ್ಮ’ ಸೇರಿಸಿ ನಿನ್ನ ಕರೆಯುತ್ತಾರೆ. ನೀನು ಅಲ್ಲಿಗೆ ಸೇರಿದಮೇಲೆ ನೀನು ’ಅಮೃತಾ’ ಆಗಿರೋದಿಲ್ಲ. ‘ಅಥರ್ವ ಅಮ್ಮ’ ಆಗಿಬಿಡ್ತೀಯಾ’ ಅಂತ ಅವರಂದಾಗ, ಆ ವಿಶೇಷ ಶಾಲೆಯನ್ನ ಮನಸ್ಸಿನಲ್ಲಿಯೇ ಕಲ್ಪಿಸಿಕೊಳ್ಳತೊಡಗಿದ್ದೆ. 

‘ನಮ್ಮ ಶಾಲೆ, ಪಿ.ಎ.ಡಿ.ಸಿಯಲ್ಲಿ ಒಂದಷ್ಟು ನಿಯಮಗಳಿವೆ. ಶಾಲೆಗೆ ಸುಖಾಸುಮ್ಮನೆ ರಜೆ ಹಾಕುವ ಹಾಗಿಲ್ಲ. ವಾರದಲ್ಲಿ ಭಾನುವಾರ ಒಂದೇ ದಿನ ರಜಾ. ಅದನ್ನ ಬಿಟ್ಟು ಮತ್ಯಾವ ಸರ್ಕಾರಿ ರಜಾಗಳಿಗೂ ಸ್ಕೂಲ್​ ಮುಚ್ಚೋದಿಲ್ಲ. ಎಲ್ಲ ಹಬ್ಬಗಳನ್ನೂ ಸ್ಕೂಲ್​ನಲ್ಲಿಯೇ ಆಚರಿಸುತ್ತಾರೆ. ಹೀಗಾಗಿ ಹಬ್ಬಗಳಿಗೂ ಕೂಡ ನೀನು ಸ್ಕೂಲ್​ ತಪ್ಪಿಸುವಂತಿಲ್ಲ. ಇನ್ನೆರಡು ಮೂರು ವರ್ಷಗಳು ನೀನು ತವರು, ಊರು, ಸಂಬಂಧಿಕರ ಮನೆ, ಮದುವೆ-ಮುಂಜಿ, ಗೃಹಪ್ರವೇಶ ಅನ್ನೋ ಎಲ್ಲ ತಿರುಗಾಟಗಳನ್ನೂ ಮರೆತುಬಿಡಬೇಕು.’ ಅಂದರು. ನಾನು ಯಾಕೆ ಹೀಗೆ..? ಅನ್ನುವಂತೆ ಅವರನ್ನೇ ನೋಡಿದೆ.

ಟಿ.ಟಿ ಕೂಡ ಟಿಕೇಟ್​ತೋರಿಸುಂತೆ ಸನ್ನೆ ಮಾಡುತ್ತಾ ನಮ್ಮನ್ನೇ ನೋಡುತ್ತಾ ನಿಂತಿದ್ದರು..! ತಕ್ಷಣ ತಮ್ಮ ಬ್ಯಾಗ್​ನ ಹೊರಗಿನ ಖಾನೆಯಲ್ಲಿಯೇ ಇಟ್ಟುಕೊಂಡಿದ್ದ ಟಿಕೆಟ್​ನ್ನ ಟಿ.ಟಿ ಅವರ ಕೈಯಲ್ಲಿಟ್ಟ ದೀಪಕ್ಕಾ ನನ್ನ ಮುಖ ನೋಡಿ ಮಾತು ಮುಂದುವರೆಸಿದರು’ ನಾನು ಆವತ್ತೇ ಹೇಳಿದ್ನಲ್ಲ.. ಕಿವುಡು ಮಕ್ಕಳಿಗೆ ಒಂದೊಂದು ದಿನವೂ ಅತೀ ಮುಖ್ಯ ಅಂತ..! ನೀನು ಒಂದು ದಿನ ಸ್ಕೂಲ್​ಗೆ ರಜಾ ಹಾಕಿದರೂ ಮಗು ಒಂದು ವಾರದ ಪಾಠವನ್ನ ಮರೆತುಬಿಡುತ್ತೆ. ಅದಕ್ಕಾಗಿಯೇ ಈ ನಿಯಮ.’ ಟಿ.ಟಿ ನಮ್ಮಿಬ್ಬರ ಮುಖವನ್ನೂ ನಿರುಕಿಸಿ ಟಿಕೇಟ್​ನ್ನ ಹಿಂದುರಿಗಿಸಿ ಅಲ್ಲಿಂದ ಜರುಗಿದ್ದರು.  

ರೈಲು ರಾಮನಗರ ತಲುಪಿದಾಗ ನಮ್ಮ ಬೋಗಿ ಮತ್ತಷ್ಟು ಕಿಕ್ಕಿರಿಯಿತು. ಈಗ ನಾವು ಕುಳಿತ ಸಿಂಗಲ್​ಸೀಟ್​ಗಳನ್ನ ಜೋಡಿಸಿ ಉದ್ದದ ಸೀಟ್​ಮಾಡಿ, ಇನ್ನೂ ಮೂರ್ಲಾನ್ಕು ಜನರಿಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟು, ನಮ್ಮ ನಮ್ಮ ಬ್ಯಾಗ್​ಗಳನ್ನ ಮಡಿಲಲ್ಲಿ ಅಮುಕಿಕೊಂಡು ದೀಪಕ್ಕಾ ನಾನು ಅಂಟಿಕೊಂಡೇ ಕುಳಿತೆವು. ಬಾಹ್ಯ ಪ್ರಪಂಚದಲ್ಲಿ ಏನೇ ಘಟಿಸುತ್ತಿದ್ದರೂ ದೀಪಕ್ಕಾ ಮತ್ತು ನನ್ನ ಮಾತುಕತೆ ನಿಲ್ಲಲೇ ಇಲ್ಲ.  

‘ದೀಪಕ್ಕಾ,  ಆ ಸ್ಕೂಲ್​ನಲ್ಲಿ ತಾಯಿಗೇ ತರಗತಿ ನಡೆಯುತ್ತಾ..? ತರಗತಿ ಸಮಯದಲ್ಲಿ ತಾಯಿ ಮಗುವಿನ ಜತೆಯೇ ಕೂತಿರಬೇಕಾ..?’ ಕುತೂಹಲದಿಂದಲೇ ಕೇಳಿದ್ದೆ. ‘ಹಾಗಲ್ಲ ಅಮೃತಾ,  ತಾಯಿಗೆ ತರಬೇತಿ ಕೊಡುತ್ತಾರೆ ನಿಜ. ಆದರೆ, ತಾಯಿಗಾಗಿ ತರಗತಿಗಳೆಲ್ಲ ಇರಲ್ಲ ಅಲ್ಲಿ. ಸ್ಕೂಲ್​ನ ಪಾಠದ ಸಮಯದಲ್ಲಿ ನಿನ್ನ ಮಗು ನಿನ್ನ ಬಳಿ ಇರೋದಿಲ್ಲ. ಬೇರೊಬ್ಬ ತಾಯಿಗೆ ನಿನ್ನ ಮಗುವನ್ನು ಕೊಟ್ಟು, ನಿನಗೆ ಬೇರೆ ಮಗುವನ್ನ ಕೊಡುತ್ತಾರೆ. ಸ್ಕೂಲಿನ ಪಾಠದ ಸಮಯದಲ್ಲಿ ನೀನು ಬೇರೆ ಮಗುವಿಗೆ ಪಾಠ ಮಾಡಬೇಕಾಗುತ್ತದೆ. ಹೇಗೆ ಪಾಠ ಮಾಡಬೇಕು ಅನ್ನೋದನ್ನೆಲ್ಲ ನಿನ್ನ ಸಹಪಾಠಿ ತಾಯಿಯರು, ಹಿರಿಯ ಅಮ್ಮಂದಿರು, ಶಿಕ್ಷಕರು ನಿನಗೆ ಹೇಳಿಕೊಡುತ್ತಾರೆ. ನಿನ್ನ ಮಗು ಬೇರೆ ತಾಯಿಯೊಂದಿಗೆ ಪಾಠ ಕಲಿಯುತ್ತದೆ. ಇದು ಆ ಶಾಲೆಯ ನಿಯಮ,’ ಸ್ಪುಟವಾಗಿ ವಿವರಿಸಿದ್ದರು ದೀಪಕ್ಕಾ.  

‘ಮತ್ತೊಂದು ವಿಶೇಷ ಏನು ಗೊತ್ತಾ..? ಆ ಸ್ಕೂಲ್​ನ ಶಿಕ್ಷಕಿಯರೆಲ್ಲರೂ ಹಿರಿಯ ತಾಯಂದಿರೇ..!  ಪಿ.ಎ.ಡಿ.ಸಿ ಸ್ಕೂಲ್​ನಲ್ಲಿಯೇ ತಮ್ಮ ಮಕ್ಕಳಿಗೆ ಮಾತು ಕಲಿಸಿ, ಅವರನ್ನ ಸಾಮಾನ್ಯ ಶಾಲೆಗೆ ಕಳಿಸಿ, ಕಲಿಸಿ ಗೆದ್ದ ತಾಯಂದಿರನ್ನ ಆ ಶಾಲೆಯಲ್ಲಿ ಶಿಕ್ಷಕಿಯರಾಗಿ ನೇಮಿಸಿಕೊಳ್ಳಲಾಗುತ್ತೆ. ಹೀಗಾಗಿ ಅಲ್ಲಿಯ ಶಿಕ್ಷಕಿಯರೂ ಕೂಡ ಸಮಾನ ನೋವುಂಡು ಗೊತ್ತಿರುವ ಅನುಭವಿ ತಾಯಿಯರೇ..!’ ಆಶ್ಚರ್ಯವಾಯಿತು. ನೂರಕ್ಕೆ ನೂರು ಇದೊಂದು ವಿಶೇಷವೇ ಸರಿ..! ಅನ್ನಿಸಿತ್ತು ನನಗೆ. 

ದೀಪಕ್ಕಾ ಮುಂದುವರೆಸಿದರು. ‘ಆಬ್ಜೆಕ್ಟ್​ಲೆವೆಲ್​, ಒಂದು ಸಾಲಿನ ಪಾಠ, ಎರಡು ಸಾಲುಗಳ ಪಾಠ,  ಘಟನೆ, ದೊಡ್ಡ ಘಟನೆ ಎಂಬೆಲ್ಲ ಹಂತಗಳು ಅಲ್ಲಿವೆ. ಆ ಎಲ್ಲ ಹಂತಗಳನ್ನೂ ನೀನು ಮುಗಿಸಿದರೆ. ನಿನ್ನ ಮಗು ಖಂಡಿತ ಮಾತನಾಡುತ್ತೆ’ ಎಂಬ ವಿಶ್ವಾಸದಿಂದ ಅವರು ಮಾತನಾಡುತ್ತಿದ್ದಾಗ, ‘ಅಥರ್ವ ಬೇರೊಬ್ಬ ತಾಯಿಯ ಜತೆ ಕೂರುತ್ತಾನಾ..? ನಾನು ಬೇರೆ ಮಗುವಿಗೆ ಪಾಠ ಮಾಡಬಲ್ಲೆನಾ..?’ ಎಂಬ ಅನುಮಾನಗಳು ತಲೆಯೊಳಗೆ ಹೊಕ್ಕವು.   ನನ್ನ ಮುಖಭಾವ ಹೇಗಿತ್ತೋ ಗೊತ್ತಿಲ್ಲ. ‘ಶಾಲೆಯ ವಾತಾವರಣವೇ ನಿನಗೆ ಕಲಿಸುತ್ತದೆ ಅಮೃತಾ, ಅಲ್ಲಿಗೆ ಹೋದಮೇಲೆ ನೀನು ನಿಧಾನವಾಗಿ ಎಲ್ಲವನ್ನೂ ಕಲಿತುಕೊಳ್ಳುತ್ತೀಯಾ. ಹೆದರಬೇಡ’ ಅವರು ಧೈರ್ಯ ತುಂಬತೊಡಗಿದರು. 

‘ಸ್ಕೂಲ್​ ಕಾಂಪೌಂಡ್​ ಒಳಗೆ, ಹಾಸ್ಟೆಲ್​ ವ್ಯವಸ್ಥೆಯೂ ಇದೆ. ಹಾಸ್ಟೆಲ್​ ಸಿಕ್ಕರೆ ನಿನ್ನ ಅದೃಷ್ಠ. ನಿನ್ನಂಥ ಹತ್ತಾರು ತಾಯಿಯರೊಂದಿಗೆ ಬದುಕೋ ಅವಕಾಶ. ನೀನು ಬಹಳ ಕಲಿಯಬಹುದು, ಮಗುವಿಗೆ ಕಲಿಸಬಹುದು ಅಲ್ಲಿ.  ತಾಯಿ ಮತ್ತು ಮಗುವಿಗಾಗಿ ಒಂದು ರೂಂ ಕೊಡುತ್ತಾರೆ. ಅಟಾಚ್ಡ್​ ಬಾತ್​ ರೂಮ್​ ಮತ್ತು ಅಡುಗೆ ಕಟ್ಟೆಯ ವ್ಯವಸ್ಥೆ ಇರುವ ಆ ರೂಮ್​ನ ಒಳಗೆ ಒಂದು ಮಂಚ , ಟೇಬಲ್​ ಕುರ್ಚಿ ಮತ್ತು ಫ್ಯಾನ್​ ಸೌಲಭ್ಯವಿದೆ. ತಾವೇ ಅಡುಗೆ ಮಾಡಿಕೊಂಡು ಊಟ ಮಾಡಬೇಕು. ನೋಡೋಣ, ಹಾಸ್ಟೆಲ್​ನಲ್ಲಿ ರೂಂ ಖಾಲಿಯಿದ್ದರೆ ನೀನೂ ಹಾಸ್ಟೆಲ್​ ಸೇರಿಕೊಂಡುಬಿಡು’ ಸಲಹೆ ಕೊಟ್ಟರು. ನಾನು ಯೋಚಿಸುತ್ತಿದ್ದೆ. ದೀಪಕ್ಕಾ ವಿವರಿಸುತ್ತಲೇ ಇದ್ದರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಇದೊಂದು ತಾಯಿ ಸಂಕಟದ ಸರಣಿ. ನಮಗರಿವಿಲ್ಲದೆ ಮನಸ್ಸು ಆ ಮಗುವಿಗಾಗಿ‌ ಪ್ರಾರ್ಥಿಸತೊಡಗುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: