ಜಿ ಎನ್ ಮೋಹನ್
**
‘ಏತೆತ್ತರ ತೂಯಿರಾ’ ಎಂದು ಕವಿತೆ ಬರೆದವರು ಪ್ರೊ ಅಮೃತ ಸೋಮೇಶ್ವರರು.
ತುಳು ಸಾಂಸ್ಕೃತಿಕ ಲೋಕವನ್ನು ಇನ್ನಿಲ್ಲದಂತೆ ತಿದ್ದಿದವರು. ಯಕ್ಷಗಾನ, ಜಾನಪದವನ್ನು ಇನ್ನಿಲ್ಲದಂತೆ ಪ್ರೀತಿಸಿ ಅದು ಹುರಿಗಟ್ಟಿ ನಿಲ್ಲುವಂತೆ ಮಾಡಿದವರು.
‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದರೆ ಏನು ಎನ್ನುವುದನ್ನು ಕಾಣಬೇಕಿದ್ದರೆ ಅಮೃತರನ್ನು ಭೇಟಿಯಾಗಬೇಕಿತ್ತು. ತಮ್ಮ ಇಡೀ ಜೀವಮಾನದುದ್ದಕ್ಕೂ ಅವರು ಬಿರುನುಡಿಯನ್ನಾಗಲೀ, ಎತ್ತರದ ದನಿಯಲ್ಲಾಗಲೀ ಮಾತನಾಡಿದ್ದನ್ನು ಕೇಳಿದವರೇ ಇಲ್ಲ.
ನನ್ನ 9 ವರ್ಷದ ಕರಾವಳಿಯ ಬದುಕು ಸುಂದರ ಎನಿಸುವುದಕ್ಕೆ ಕಾರಣರಾದ ಮುಖ್ಯರಲ್ಲಿ ಅಮೃತರೂ ಒಬ್ಬರು. ಅದು ನಮ್ಮದೇ ಮನೆಯೇನೋ ಎನ್ನುವಂತೆ ನಾವು ಓಡಾಡಿಕೊಂಡು ಇದ್ದೆವು. ಮಂಗಳೂರು-ಕಾಸರಗೋಡಿನ ಹೆದ್ದಾರಿಯಲ್ಲಿದ್ದ ಅವರ ಮನೆಯ ಗೃಹ ಪ್ರವೇಶವನ್ನು ಅವರು ಕವಿ ಗೋಷ್ಟಿ ನಡೆಸಿಯೇ ಕಾಲಿಟ್ಟರು. ನನಗೆ ಅದಕ್ಕಿಂತಲೂ ಚಂದ ಅನಿಸಿದ್ದು ಅವರ ಮನೆಗೆ ಮಾಡಿಸಿದ್ದ ಯಕ್ಷಗಾನದ ವಿನ್ಯಾಸಗಳಿದ್ದ ಗ್ರಿಲ್ ಗಳು.
ಅವರನ್ನು ‘ಪ್ರಜಾವಾಣಿ’ಯ ಪುಟದಲ್ಲಿ ಕಾಣಿಸುವುದಕ್ಕೆ, ‘ಈಟಿವಿ’ಯ ತೆರೆಯ ಮೇಲೆ ಕೂಡಿಸುವುದಕ್ಕೆ ನನಗೆ ಇನ್ನಿಲ್ಲದ ಸಂಭ್ರಮ. ಅವರಿಗೆ 60 ತುಂಬಿದಾಗ ಸೋಮೇಶ್ವರದ ಕಡಲ ಕಿನಾರೆಯಲ್ಲಿ ಜರುಗಿಸಿದ ಅಭಿನಂದನಾ ಸಮಾರಂಭ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅಲ್ಲಿ ಅವರು ಒಂದು ಮಾತನ್ನು ಹೇಳಿದರು- ನನ್ನನ್ನು ಎಲ್ಲರೂ ಒಳ್ಳೆಯವ ಎಂದು ಬಣ್ಣಿಸುತ್ತಾರೆ, ನಾನು ಒಳ್ಳೆಯವನೋ ಅಲ್ಲವೋ ಗೊತ್ತಿಲ್ಲ. ಆದರೆ ನನಗೆ ಕೆಟ್ಟವನಾಗಿ ಇರಲು ಬರುವುದಿಲ್ಲ ಅಷ್ಟೇ ಎಂದು. ಅದು ಅಮೃತರ ವ್ಯಕ್ತಿತ್ವ.
ಅಮೃತರ ಜೊತೆ ಜಾನಪದದ ಅನೇಕ ದಾಖಲಾತಿಗಳ ಜೊತೆಗಿದ್ದೆ. ಅದರಲ್ಲಿ ಕರಾವಳಿಯ ಭೂತಗಳ ದಾಖಲಾತಿಯೂ ಒಂದು. ಅವರ ಮನೆಯ ಜೊತೆಗಿನ ಬಾಂಧವ್ಯ ಇನ್ನೂ ತುಸು ಹೆಚ್ಚಾದದ್ದು ಅವರ ಮಗ ಚೇತನ ಸೋಮೇಶ್ವರ ಅವರ ನಂಟು ಮತ್ತೆ ಸಿಕ್ಕ ಮೇಲೆ. ಅವರ ಸೊಸೆ ರಾಜೇಶ್ವರಿ ಅವರಿಂದಾಗಿ ಮತ್ತೆ ಮತ್ತೆ ಅಮೃತರ ಬಗ್ಗೆ ಮಾತನಾಡುವಂತಾಯಿತು. ಚೇತನ ಸೋಮೇಶ್ವರ ಅವರ ಮಹತ್ವದ ಕೃತಿ ‘ಲೋಕ ರೂಢಿಯ ಮೀರಿ’ಯನ್ನು ಬಹುರೂಪಿ ಪ್ರಕಟಿಸಿತು. ಅದನ್ನು ವಿಡಿಯೋ ಸಂವಾದದ ಮೂಲಕ ಬಿಡುಗಡೆ ಮಾಡಿದಾಗ ಅನಾರೋಗ್ಯದಿಂದ ಆಗಲೇ ನಿಶಕ್ತರಾಗಿದ್ದ ಅಮೃತರು ತುಂಬು ಉತ್ಸಾಹದಿಂದ ಮಾತನಾಡಿದರು.
ಅಮೃತರ ಜೊತೆಗೆ ದೊಡ್ಡ ಬಳಗವೇ ಇತ್ತು. ಹಾಗಾಗಿ ಅವರು ಎಂದಿಗೂ ಒಂಟಿಯಾಗಲಿಲ್ಲ.
ಅಮೃತರು ಇಂದು ಇಲ್ಲವಾಗಿದ್ದಾರೆ. ಅವರು ಉಣಿಸಿದ ಅಮೃತದ ಹನಿಗಳು ನಮ್ಮೆಲ್ಲರೊಂದಿಗಿದೆ.
‘ಎಷ್ಟು ಎತ್ತರವಯ್ಯಾ ನೀನು’ ಎಂದು ಅವರು ಬಾಹುಬಲಿಯನ್ನು ನೋಡಿ ಕವಿತೆ ಬರೆದಿದ್ದರು.
ಅದೇ ಮಾತನ್ನು ಅಮೃತರಿಗೆ ಹೇಳಬೇಕೆಂದಿದೆ
ಸರ್, ಏತೆತ್ತರ ತೂಯಿರಾ….
0 ಪ್ರತಿಕ್ರಿಯೆಗಳು