ಅಮೂಲ್ಯ ಪ್ರಕಾಶನದ ಡಾ.ಹೆಚ್.ಸಿ.ಮಹದೇವಪ್ಪ ಅವರ ಸಂವಿಧಾನದ ನೆರಳಲ್ಲಿ ಬಿಡುಗಡೆ

ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ರಚಿಸಿರುವ ಸಾಮಾಜಿಕ ಮತ್ತು ರಾಜಕೀಯ ಕುರಿತ ಬರಹಗಳನ್ನು ಒಳಗೊಂಡ ‘ಸಂವಿಧಾನದ ನೆರಳಲ್ಲಿ’ ಪುಸ್ತಕವು ಶನಿವಾರ ನಗರದ ಕಲಾಮಂದಿರದಲ್ಲಿ ಲೋಕಾರ್ಪಣೆಗೊಂಡಿತು.

ಪುಸ್ತಕ ಬಿಡುಗಡೆಗೊಳಿಸಿದ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಮಾತನಾಡಿ, ನಾವು ಸಂವಿಧಾನದ ನೆರಳಲ್ಲಿದ್ದೀವಾ ಅಥವಾ ಸಂವಿಧಾನದ ಬಲದಲ್ಲಿದ್ದೀವಾ ಎಂಬುದನ್ನು ಅರಿಯಬೇಕು. ಸಂವಿಧಾನ ಎಂಬುದು ದೊಡ್ಡ ವೃಕ್ಷ. ಅದರಡಿ ಮಲಗಿ ನಿದ್ದೆ ಮಾಡಬಾರದು. ಆ ನೆರಳಲ್ಲಿ ಮಲಗಿ ಕಣ್ಣುಬಿಟ್ಟು ಕನಸು ಕಾಣಬೇಕು. ಬಿಟ್ಟಕಣ್ಣಿನ ಕನಸನ್ನು ಸಾಕಾರಗೊಳಿಸಬೇಕು. ಹೆಚ್ಚಿನ ಶ್ರಮವಹಿಸಿ ಜಗತ್ತಿನೊಂದಿಗೆ ಜೀವಂತವಾಗಿ ವ್ಯವಹರಿಸಬೇಕು ಎಂದು ಹೇಳಿದರು

ಈ ಪುಸ್ತಕದ ಇಡೀ ಓದು ಹಾಡು ಮಾತಿನ ಅಡಿಗೆ ಹಾಗೂ ನೇರ ಮಾತಿನ ಬಡಿಗೆಯೇ ಹೌದು. ಇದರಲ್ಲಿ ಎಲ್ಲೂ ತೊಡಕುಗಳಿಲ್ಲ, ಉಪಮೇಯ, ಉಪಮಾನಗಳಿಲ್ಲ. ಅವರು ಕಂಡದ್ದು, ಅನುಭವಿಸಿದ್ದನ್ನು ದಾಖಲಿಸಿದ್ದಾರೆ. ಒಬ್ಬ ರಾಜಕಾರಣಿ ನೇರಮಾತಿನ ಬಡಿಗೆ ಕೈಗೆತ್ತಿಗೊಂಡು ಸಮಾಜಕ್ಕೆ ಹೇಳುವುದು ಬಹಳ ಪ್ರಮುಖವಾಗಿದೆ. ಅವರ ಬಡಿಗೆಯಂಥ ಮಾತುಗಳ ಮೂಲಕ ಈ ದೇಶದಲ್ಲಿ ಚರ್ಚೆಯಾಗುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕೆಲವು ದಿನಗಳ ಹಿಂದೆ ನಾನು ಊಟದ ವಿಚಾರದಲ್ಲಿ ಒಂದು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಕೆಲವರು ವಿರೋಧಿಸಿದ್ದರು. ಆ ಸಂದರ್ಭ ಕುರಿತು ನನ್ನನ್ನು ಸಮರ್ಥಿಸಿಕೊಂಡಿದ್ದು ನನ್ನ ಸಹೋದ್ಯೋಗಿಗಳಲ್ಲ, ಸಂವಿಧಾನ ಎಂದು ಸಚಿವರು ಪುಸ್ತಕದಲ್ಲಿ ಬರೆದಿದ್ದಾರೆ. ಆದರೆ ನಿಜವಾಗಿ ನನ್ನ ಬೆನ್ನಿಗೆ ನಿಂತು ಮಹದೇಶ್ವರ ಬೆಟ್ಟದಿಂದ ಬೀದರ್‌ವರೆಗೂ ಒಂದು ಅಲೆ ಎಬ್ಬಿಸಿದ್ದು ಭೀಮ ಪರಿವಾರದವರು. ಸಂವಿಧಾನದ ನೆರಳು ಹಾಗೂ ಭೀಮ ಪರಿವಾರ ಎರಡೂ ನನ್ನನ್ನು ಕಾಪಾಡಿದೆ ಎಂದು ಸ್ಮರಿಸಿದರು.

ಪ್ರಗತಿಪರ ಚಿಂತಕರು ಸಂವಿಧಾನದ ಪರ ಇದ್ದಾರೆ. ಅವರ ಅನುಭವ ಅತ್ಯಂತ ಮೌಲ್ಯವಾದ್ದು. ಅವುಗಳು ಬರಹ ರೂಪದಲ್ಲಿ ಬರಬೇಕು. ಆ ಸಂಪತ್ತನ್ನು ಯುವ ಪೀಳಿಗೆಗೆ ತಲುಪಿಸುವುದು ಎಲ್ಲಾ ಲೇಖಕರ ಕರ್ತವ್ಯ.

ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಮಾತನಾಡಿ, ನನ್ನ ಭಾವನೆ, ನಿಲುವು ಮತ್ತು ಅಭಿಪ್ರಾಯಗಳನ್ನು ಅಕ್ಷರ ರೂಪಕ್ಕಿಳಿಸಿದ ಪುಸ್ತಕ ಇದಾಗಿದೆ. ಸಾಹಿತಿಗಳು, ಪ್ರಗತಿಪರ ಚಿಂತಕರು, ರಾಜಕೀಯ ಮುಖಂಡರು, ಯುವ ಸಮುದಾಯ ಹಾಗೂ ಮಹಿಳೆಯರು, ಸಾರ್ವಜನಿಕರು ಈ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ನನಗೆ ವೈಯಕ್ತಿಕವಾಗಿ ಸಂತೋಷವಾಗಿದೆ. ಅದರಂತೆ ಈ ಪುಸ್ತಕವನ್ನು ಎಲ್ಲರೂ ಓದಿ ವಿಮರ್ಶೆ ಮಾಡಬೇಕು ಎಂದು ತಿಳಿಸಿದರು.

ಪುಸ್ತಕ ಕುರಿತು ಮಾತನಾಡಿದ ವಿಮರ್ಶಕರಾದ ಡಾ.ಕೆ.ವೈ.ನಾರಾಯಣಸ್ವಾಮಿ ಅವರು, ಸಚಿವರು ತಾವು ಕಂಡಂತ ರಾಜಕೀಯ ಹಾಗೂ ಸಾಮಾಜಿಕ ಸಂಗತಿಗಳನ್ನು ತುಂಬಾ ಪರಿಣಾಮಕಾರಿಯಾಗಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅನೇಕ ರಾಜಕಾರಣಿಗಳು ತಮ್ಮ ನಡೆನುಡಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಆದರೆ ಸಚಿವರು ಪುಸ್ತಕದಲ್ಲಿ ದಾಖಲಿಸಿರುವ ಅನೇಕ ಕಾರ್ಯಸೂಚಿಗಳನ್ನು ಹೇಳುವ ಹಾಗೂ ಮಾತನಾಡುವ ಪ್ರಾಮಾಣಿಕತೆ ಮತ್ತು ನಿಷ್ಠೂರತೆಯು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ತಕ್ಕಂತೆ ತಮ್ಮ ರಾಜಕಾರಣದ ಬದುಕಿನೊಳಗೆ ಹೋರಾಟ ನಡೆಸಬೇಕು
ಎಂಬ ಸಿದ್ಧಾಂತದಿಂದ ದಕ್ಕಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್ ಅವರು ಮಾತನಾಡಿ, ರಾಜಕಾರಣಿಗೆ ಬದ್ಧತೆ ಹಾಗೂ ಪ್ರಭುದ್ಧತೆ ಮುಖ್ಯ. ಆ ಸಾಲಿನಲ್ಲಿನ ಅಪರೂಪದ ರಾಜಕಾರಣಿ ಹೆಚ್.ಸಿ.ಮಹದೇವಪ್ಪ ಅವರು ಕೃತಿಯಲ್ಲಿ ವ್ಯಕ್ತಗತವಾಗಿ ಯಾವುದೇ ನಿಂದನಾತ್ಮಕ ಪದ ಬಳಸದೆ, ತತ್ವಕ್ಕೆ ಕೊಡಬೇಕಾದ ಸೂಕ್ತ ಬೆಲೆ ಕೊಟ್ಟಿದ್ದಾರೆ. ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ‌ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ, ಹಿರಿಯ ಪತ್ರಕರ್ತರಾದ ಕೆ.ಶಿವಕುಮಾರ್, ಅಂಶಿ ಪ್ರಸನ್ನಕುಮಾರ್, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಕಾಂಗ್ರೆಸ್ ಯವ ಮುಖಂಡರಾದ ಸುನೀಲ್ ಬೋಸ್, ಅನಿಲ್ ಬೋಸ್, ಜಗದೀಶ ಕೊಪ್ಪ, ನಟರಾಜ ಹುಳಿಯಾರ್, ಬಿ.ಚಂದ್ರೇಗೌಡ, ಡಾ.ನಾಗೇಶ್ ವಿ.ಬೆಟ್ಟಕೋಟೆ, ಪಿ.ಚಂದ್ರಿಕಾ, ಸಾಸ್ವೆಹಳ್ಳಿ ಸತೀಶ್, ಎಚ್.ಟಿ. ಪೋತೆ, ಕೆ.ವೆಂಕಟರಾಜು, ಕಾಳೇಗೌಡ ನಾಗವಾರ, ಎಂ.ಜಿ. ರಾಮಮೂರ್ತಿ, ಶಿವಕುಮಾರ್ ಮಾವಲಿ, ಎಂ.ಲಕ್ಷ್ಮಣ್ ವಿ.ಎಲ್. ನರಸಿಂಹಮೂರ್ತಿ, ಸ್ವಾಮಿ ಆನಂದ್, ಕಿರಣ್ ಗಾಜನೂರು, ಮಹೇಶ್ ಸೋಸಲೆ, ಹೆಚ್.ಕೆ.ರಮೇಶ್, ಪ್ರಕಾಶಕರಾದ ಕೃಷ್ಣ ಚೆಂಗಡಿ ಉಪಸ್ಥಿತರಿದ್ದರು.

‍ಲೇಖಕರು avadhi

July 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: