ಅಮಾರ್ತ್ಯ ಸೇನ್ ರ ನಿಲುವು ಸರಿಯಾಗಿತ್ತು ಎಂಬುದು ಸಾಬೀತಾಗುತ್ತಿದೆ…

ಮ ಶ್ರೀ ಮುರಳಿ ಕೃಷ್ಣ

ಈ ಬರಹವನ್ನು ಬರೆಯುತ್ತಿರುವ ಹೊತ್ತಿನಲ್ಲಿ ನಮ್ಮ ದೇಶದಲ್ಲಿ ಕೊರೋನಾ ಕಾರಣದಿಂದ ಮೃತರಾದವರ ಸಂಖ್ಯೆ 2,01,000 ತಲುಪಿದೆ.  ಕಳೆದ 24 ಗಂಟೆಗಳಲ್ಲಿ 3,60,960 ಹೊಸ ಪ್ರಕರಣಗಳು ಮತ್ತು 3293 ಸಾವುಗಳು ಸಂಭವಿಸಿವೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಬೆಡ್ಗಳ, ಔಷಧಿಗಳ, ಆಕ್ಸಿಜನ್ನಿನ ಕೊರತೆಗಳಿಂದ ಜನತೆ ಕಂಗಾಲಾಗಿದ್ದಾರೆ. ಈ ಪಟ್ಟಿಗೆ ವ್ಯಾಕ್ಸಿನಿನ ಲಭ್ಯತೆಯ ಕೊರತೆಯೂ ಸೇರ್ಪಡೆಯಾಗಿರುವುದು ಆತಂಕಕಾರಿ ವಿಷಯವಾಗಿದೆ. ಸ್ಮಶಾನಗಳಲ್ಲಿ ಕಳೇಬರಗಳನ್ನು ವಿಲೇವಾರಿ ಮಾಡುವುದು ಕೂಡ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಇಂತಹ ತಲ್ಲಣಕಾರಿ ಸಂದರ್ಭದಲ್ಲಿ, ನಮ್ಮ ದೇಶದ ಸಾಮಾಜಿಕ ರಂಗದ ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿನ ಸರ್ಕಾರದ ಪಾತ್ರದ ಬಗೆಗೆ ಸುಮಾರು ಏಳು ವರ್ಷಗಳ ಹಿಂದೆ ಭಾರತದ ಇಬ್ಬರು ಹೆಸರಾಂತ ಅರ್ಥಶಾಸ್ತ್ರಜ್ಞರಾದ ಅಮಾರ್ತ್ಯ ಸೇನ್ ಮತ್ತು ಜಗದೀಶ್ ಭಗವತಿ ನಡುವೆ ಜರುಗಿದ ವಾಗ್ವಾದದತ್ತ ನೆನಪು ಹರಿಯಿತು. ಈ ಜಟಾಪಟಿ 2014ರ ಸಾರ್ವತ್ರಿಕ ಚುನಾವಣೆಯ ಸ್ವಲ್ಪ ಮುನ್ನ ಸಾರ್ವಜನಿಕ ವಲಯದಲ್ಲೇ ಜರುಗಿತು. 

ಅವರ ಮುಂದಿದ್ದದ್ದು ಗುಜರಾತಿನ ಅಭಿವೃದ್ಧಿ ಮಾದರಿ. ಸಾಮಾಜಿಕ ರಂಗದಲ್ಲಿ ಸರ್ಕಾರಿ ಪಾತ್ರವನ್ನು ಕಡಿತಗೊಳಿಸುವ ಆರ್ಥಿಕ ಅಭಿವೃದ್ಧಿಯ ಮಾದರಿಯ ಪರವಾಗಿದ್ದಾರೆ ಮೋದಿ. ಇದರ ನೀತಿಗಳ ಸಮರ್ಥಕರಾಗಿದ್ದಾರೆ ಜಗದೀಶ್ ಭಗವತಿ. ಆದರೆ ಸಾಮಾಜಿಕ ರಂಗದ ಸಬಲೀಕರಣವಿಲ್ಲದೆ ಆರ್ಥಿಕ ಅಭಿವೃದ್ಧಿ ಆಗುವುದಿಲ್ಲ ಎಂಬುದು ಅಮಾರ್ತ್ಯ ಸೇನರ ನಿಲುವಾಗಿದೆ. ಈ ಹಿನ್ನೆಲೆಯಲ್ಲೇ ಅಂದು ಇವರೀರ್ವರ ನಡುವೆ ವಾದಗಳು ಜರುಗಿದ್ದವು.

ನಮ್ಮ ದೇಶದಲ್ಲಿ 1991ರಲ್ಲಿ ಈ ಕಾಲಘಟ್ಟದ ಜಾಗತೀಕರಣದ ಭಾಗವಾಗಿ ಖಾಸಗೀಕರಣ ಮತ್ತು ಉದಾರೀಕರಣದ ನೀತಿಗಳು ಜಾರಿಯಾದವು. ಆಗ ನವ ಆರ್ಥಿಕ ನೀತಿಗಳನ್ನು ಅನುಷ್ಠಾನಗೊಳಿಸಲಾಯಿತು. ಇವೆಲ್ಲವೂ ನವ ಉದಾರ ನೀತಿಗಳ ಭಾಗವಾಗಿಯೇ ಇದ್ದವು.  ಇವುಗಳಿಗೆ ಅಂತರರಾಷ್ಟ್ರೀಯ ಸಂಸ್ಥೆಗಳಾದ ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ವಿತ್ತ ನಿಧಿ(ಐಎಂಎಫ್)ಯ ಕುಮ್ಮಕ್ಕು ಇತ್ತು. ಆಗ ಅಸ್ತಿತ್ವದಲ್ಲಿದ್ದದ್ದು ಪಿ ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ. ಸಾಮಾಜಿಕ ರಂಗದಿಂದ ಕ್ರಮೇಣ ಸರ್ಕಾರ ಕಾಲ್ತೆಗೆಯಬೇಕೆಂಬುದು ಇಂತಹ ನೀತಿಗಳ ಪರವಾಗಿರುವವರ ವಾದವಾಗಿತ್ತು. ಈಗಲೂ ಅಂತಹವರ ನಿಲುವು ಇದೇ ಆಗಿದೆ. ಕಾಂಗ್ರೆಸ್ ಶುರುಮಾಡಿದ್ದನ್ನು ಬಿಜೆಪಿ ನೇತೃತ್ವದ ಸರ್ಕಾರ ಇನ್ನೂ ಜೋರಾದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿದೆ, ಅಷ್ಟೇ.

ಗುಜರಾತ್ ಅಭಿವೃದ್ಧಿ ಮಾದರಿ ಬಗೆಗೆ ಅನೇಕ ರೀತಿಗಳಲ್ಲಿ ಟಾಂಟಾಂ ಮಾಡಲಾಯಿತು. ಈ ಮಾದರಿಯ ಅನ್ವಯ ಕೈಗಾರಿಕೋದ್ಯಮಗಳಿಗೆ ಸಬ್ಸಿಡಿಗಳು, ರಿಯಾಯಿತಿಗಳು, ಕಾರ್ಮಿಕ ಸಂಘಗಳಿಲ್ಲದ ಪರಿಸ್ಥಿತಿ ಮುಂತಾದ ಸವಲತ್ತುಗಳನ್ನು ದೀರ್ಘ ಕಾಲ ಸೃಷ್ಟಿಸಿದರೇ ಅವುಗಳ ಫಲಗಳು ಜನರಿಗೆ ದೊರೆತು ಅವರಿಗೆ ಅನೇಕ ಅನುಕೂಲಗಳು ಲಭ್ಯವಾಗುತ್ತವೆ ಎಂಬುದು ಅದರ ಪ್ರತಿಪಾದಕರ ಅಂಬೋಣ. ಆದರೆ ಅಮಾರ್ತ್ಯ ಸೇನರ ಅಭಿಪ್ರಾಯಗಳು ಭಿನ್ನವಾಗಿದ್ದವು. 

ಯಾವುದೇ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾದರೇ ಅದರ ಜನತೆ ಶಿಕ್ಷಿತರಾಗಿರಬೇಕು ಮತ್ತು ಆರೋಗ್ಯವಂತರು ಕೂಡ. ಸರ್ಕಾರಕ್ಕೆ ಅಷ್ಟೇನೂ ಆರ್ಥಿಕ ಬಲವಿಲ್ಲದಿದ್ದಾಗಲೂ ಅದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮುನ್ನಡೆಗೆ ಸೂಕ್ತ ಕ್ರಮಗಳನ್ನು ಜಾರಿಗೊಳಿಸಬಹುದು.  ಇದಕ್ಕೆ ಉತ್ತಮ ಉದಾಹರಣೆ ಕ್ಯೂಬಾ. ವಿಶ್ವದ ಯಾವುದೇ ಮುಂದುವರೆದ ದೇಶದಲ್ಲಿ ಈ ಎರಡು ಕ್ಷೇತ್ರಗಳಲ್ಲಿನ ಸಾಧನೆ ಗಮನೀಯವಾಗಿರುತ್ತದೆ. ಸಾಮಾಜಿಕ ರಂಗಕ್ಕೆ ಹೆಚ್ಚಿನ ಆರ್ಥಿಕ ಶಕ್ತಿ ಒದಗಿದರೇ, ಅದು ಪ್ರಗತಿಗೆ ಪಥ ಹಾಕಿದಂತಾಗುತ್ತದೆ. ಬರೀ ಕೈಗಾರಿಕೋದ್ಯಮಿಗಳು ಬೆಳೆದರೆ ಸಾಲದು. ದೇಶದ ಸರ್ವಾಂಗೀಣ ಬೆಳವಣಿಗೆಗೆ ಶಕ್ತಿಶಾಲಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಅವಶ್ಯ ಎಂಬುದು ಅಮಾರ್ತ್ಯ ಸೇನರು ಮುಂಚಿನಿಂದಲೂ ಪ್ರತಿಪಾದಿಸಿಕೊಂಡು ಬಂದಿರುವ ನಿಲುವುಗಳಾಗಿವೆ.

ಅಲ್ಲದೆ ಅಮಾರ್ತ್ಯ ಸೇನರು ಮನ್ರೇಗಾ(MNREGA)ನಂತಹ ಯೋಜನೆಗಳಿಗೆ ಮತ್ತು ಆಹಾರದ ಹಕ್ಕಿನಂತಹ ವಿಷಯಗಳ ಪರವಾಗಿದ್ದಾರೆ.  ಮೋದಿ ಮನ್ರೇಗಾ ಒಂದು ಬೃಹತ್ ವಿಫಲ ಯೋಜನೆ ಎಂದು ಬಣ್ಣಿಸಿದ್ದರು. ಗುಜರಾತಿನಲ್ಲಿ ಅನಿವಾಸಿ ಭಾರತೀಯರನ್ನು ಮತ್ತು ವಿದೇಶಿ ಬಂಡವಾಳಿಗರನ್ನು ಆಕರ್ಷಿಸಲು ದೊಡ್ಡ ಮೇಳಗಳನ್ನು ಜರುಗಿಸಲಾಗುತ್ತಿದೆ. 

ಇವುಗಳಿಂದ ಎಷ್ಟು ಪ್ರಯೋಜನಗಳಾಗಿವೆ? ಸಾಮನ್ಯ ಜನತೆಗೆ ಎಷ್ಟು ಸೌಲಭ್ಯಗಳು ನೈಜಾರ್ಥದಲ್ಲಿ ಲಭಿಸಿವೆ? ಅಲ್ಲಿನ ಮಾನವ ಅಬಿವೃದ್ಧಿ ಸೂಚ್ಯಂಕ ಏಕೆ ಕಡಿಮೆ ಮಟ್ಟದಲ್ಲಿದೆ? ರಾಜಕೀಯವಾಗಿ ಪ್ರಬಲವಾಗಿರುವ ಪತಿದಾರ್ ಸಮುದಾಯ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಆಗ್ರಹಿಸಿ ಏಕೆ ಬೀದಿಗಿಳಿಯಿತು? ಅಲ್ಲಿ ಅಪೌಷ್ಟಿಕತೆ, ಅದರಲ್ಲೂ ಮಹಿಳೆಯರದ್ದು, ಏಕೆ ಹೆಚ್ಚಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಗುಜರಾತ್ ಅಭಿವೃದ್ಧಿ ಮಾದರಿಯ ಸಮರ್ಥಕರು ಸೂಕ್ತ ಉತ್ತರಗಳನ್ನು ನೀಡಲು ತಡಕಾಡುತ್ತಾರೆ. 2012ರಲ್ಲಿ ‘ವಾಲ್ ಸ್ಟ್ರೀಟ್ ಜರ್ನಲ್ ‘ ಮೋದಿಯವರನ್ನು ಸಂದರ್ಶಿಸುತ್ತ ‘ಗುಜರಾತಿನಲ್ಲಿ ಅಪೌಷ್ಟಿಕತೆ ಏಕೆ ಹೆಚ್ಚಿದೆ? ಎಂದು ಪ್ರಶ್ನಿಸಿತ್ತು. ಅದಕ್ಕೆ ಉತ್ತಿರಿಸುತ್ತ ಅವರು ‘ನಮ್ಮಲ್ಲಿ ಹುಡುಗಿಯರು ಫ್ಯಾಶನ್ ಪ್ರಜ್ಞೆಯುಳ್ಳವರು. ಅವರು ಹಾಲನ್ನು ಕುಡಿಯಲು ಇಚ್ಛಿಸುವುದಿಲ್ಲ…’ ಎಂದು ಉತ್ತರಿಸಿದ್ದರು!

ಮೋದಿ ಸರ್ಕಾರದ ನೀತಿಗಳ ವಿರುದ್ಧ ಅಪಸ್ವರಗಳನ್ನು ಎತ್ತುತ್ತ ಬಂದಿರುವ ಅಮಾರ್ತ್ಯ ಸೇನರು 2016ರಲ್ಲಿ ನಳಂದಾ ವಿಶ್ವವಿದ್ಯಾಲಯಕ್ಕೆ ವಿದಾಯ ಹೇಳಿದರು.  ಅದೇ ವರ್ಷ ನವೆಂಬರ್ 8 ರಂದು ಜಾರಿಯಾದ ಡಿಮಾನಿಟೈಝೇಶನ್ ವಿರುದ್ಧ ಸಹ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇವೆಲ್ಲದರ ಹಿನ್ನೆಲೆಯಲ್ಲಿ ಮೋದಿ ‘ಶ್ರಮ ಮುಖ್ಯ, ಹಾರ್ವರ್ಡ್ ಅಲ್ಲ…’ ಎಂದು ಹೆಸರು ಹೇಳದೆಯೇ ಅಮಾರ್ತ್ಯ ಸೇನರನ್ನು ಮೂದಲಿಸಿದ್ದರು.

ಪ್ರಸ್ತುತ ಕೊರೋನಾದ ಎರಡನೇ ಅಲೆಯಿಂದ ನಮ್ಮ ಜನತೆ ಅನೇಕ ತೆರನಾದ, ಅಪಾರ ಸಂಕಷ್ಟಗಳಿಗೆ ಈಡಾಗಿದ್ದಾರೆ. ಮಾನವೀಯತೆಯನ್ನು ಮರೆತ ಖಾಸಗಿ ಆಸ್ಪತ್ರೆಗಳು ರಣ ಹದ್ದುಗಳಾಗಿವೆ. ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳ ಸೌಲಭ್ಯಗಳಲ್ಲಿ ಹೆಚ್ಚಿನ ಸಕಾರಾತ್ಮಕ ಬದಲಾವಣೆಗಳಾಗಿಲ್ಲ. ಇನ್ನು ಮುಂದಾದರೂ, ನಮ್ಮನ್ನು ಆಳುವ ಪ್ರಭುಗಳು ಒಂದು ಸದೃಢ ಆರೋಗ್ಯ ವ್ಯವಸ್ಥೆಯನ್ನು ನೆಲೆಗೊಳಿಸಲು ಪ್ರಯತ್ನಿಸುತ್ತಾರೆಯೇ? ಅಮಾರ್ತ್ಯ ಸೇನ್ ರ ಆಶಯ ಈಡೇರುವುದೇ?

‍ಲೇಖಕರು Avadhi

May 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: