ಅಭಿರಾಮ್ ಕಥೆ- ತೇಪೆ

ಅಭಿರಾಮ್ ಎಸ್

ಬಸ್ಸು ಬಸ್ ನಿಲ್ದಾಣವನ್ನ ಬಿಟ್ಟು ಆಚೆ ಬಂದು ನಿಂತಿತ್ತು. ಕಂಡಕ್ಟರ್ ಬಸ್ಸಿನ ಹೊರಗೆ ನಿಂತು ‘ತೀರ್ಥಳ್ಳಿ ತೀರ್ಥಳ್ಳಿ…’ ಎಂದು ಬೊಬ್ಬೆ ಇಡುತ್ತಿದ್ದ. ಯಾರೊಬ್ಬರೂ ಬರುವ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ಬಸ್ಸಿನಲ್ಲಿದ್ದವರಿಗೆಲ್ಲ ರೋಸಿ ಹೋಗಿ ಕಿಡಕಿ ಆಚೆ ಕಂಡಕ್ಟರ್ ನನ್ನ ನೋಡಿ ಮನಸಿನಲ್ಲೇ  ಹಿಡಿ ಶಾಪ ಹಾಕುತ್ತಿದ್ದರು.

ಅನಂತರಾಯರು ತಮ್ಮ ಬ್ಯಾಗಿನಿಂದ ಉದ್ದನೆಯ ಫ್ಲಾಸ್ಕ್ ತೆಗೆದು ಬಿಸಿ ನೀರನ್ನ ಒಂದು ಗುಟುಕು ಬಾಯಿಗಿರಿಸಿದರು. ‘ಲೇ ಹುಡ್ಗ.. ಟೈಮ್ ಆಯ್ತು ಕಣೋ’ ಎಂದು ಸಣ್ಣದಾಗಿ ಗದರಿದರು. ‘ಸಾರ್, ನಿಮ್ ಕಾಲೇಜಿಗೆ ಕರೆಕ್ಟ್ ಟೈಮ್ ಗೆ ಹೋಗ್ತೀರಾ, ಆರಾಮಾಗಿ ಕೂತ್ಕೊಳಿ. ಹತ್ತೂ ಸೀಟ್ ಆಗಿಲ್ಲ ಅಂದ್ರೆ ಹೆಂಗ್ ಹೋಗೋದು?’ ಎಂದು ಗೋಳಾಡಿದ. ಅವನ ಮಾತಿಗೆ ನಕ್ಕು ಸೀಟಿಗೆ ವರಗಿಕೊಂಡರು.

ಶಿವಮೊಗ್ಗದ ಪ್ರತಿಷ್ಟಿತ ಕಾಲೇಜಾದ ಆರ್. ಎಮ್.ಸಿ ಯಲ್ಲಿ ಗಣಿತಶಾಸ್ತ್ರವನ್ನ ಭೋಧಿಸುತ್ತಿದ್ದರು ಅನಂತರಾಯರು. ನಿವೃತ್ತಿ ಹೊಂದಿ ಒಂದು ವಾರವಷ್ಟೇ ಕಳೆದಿತ್ತು. ವಿಷಯವನ್ನ ಆಳವಾಗಿ ತಿಳಿದಿದ್ದರೂ, ಅಷ್ಟೇ ಸರಳವಾಗಿ ವಿದ್ಯಾರ್ಥಿಗಳಿಗೆ ಭೋಧಿಸುತ್ತಿದ್ದರು. ಹಾಗಾಗಿ ಅವರನ್ನ ಕಂಡರೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚು.

ನಗರದ ಉಳಿದ ಕಾಲೇಜಿನವರು ಲಕ್ಷಗಟ್ಟಲೆ ಸಂಬಳವನ್ನ ಕೊಟ್ಟು ಅವರನ್ನ ಕಾಲೇಜಿಗೆ ಬಂದು ಪಾಠ ಮಾಡುವಂತೆ ಮನವಿ ಮಾಡಿದರೂ ಸಹ ಅವರ ಮನಸ್ಸು ವಾಲಿದ್ದು ತೀರ್ಥಹಳ್ಳಿಯಲ್ಲಿನ ಒಂದು ಎನ್.ಜಿ.ಓ ನಡೆಸುತ್ತಿದ್ದ ಕಾಲೇಜಿಗೆ. ಜೀವನಕ್ಕೆ ದುಡಿದು ಮಾಡಿಟ್ಟದ್ದಾಯ್ತು. ಮನಸ್ಸಿಗೆ ಖುಶಿ ಕೊಡುವ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದರು. ಬಸ್ಸು ಹೊರಡುವುದನ್ನೇ ಕಾದು ಕಾದು ಅನಂತರಾಯರಿಗೆ ಸಣ್ಣ ಮಂಪರು ಹತ್ತಿತ್ತು. ಒಂದಿಬ್ಬರು ಹತ್ತಿದ ತಕ್ಷಣ ಬಸ್ಸು ಹೊರಟಿತು. ಬಸ್ಸಿನ ಶಬ್ದಕ್ಕೆ ಮತ್ತೆ ಎಚ್ಚರ ಬಂದಿತ್ತು. 

ಬಸ್ಸು ಗಾಜನೂರು ಅಣೆಕಟ್ಟು ದಾಟಿ ಸಕ್ರೆಬೈಲಿಗೆ ಬಂದಿತ್ತು. ಆಗ ತಾನೆ ಹಚ್ಚ ಹಸಿರಿನ ಕಾಡು ಪ್ರಾರಂಭವಾಯಿತು. ಕಿಡಕಿಯ ಬಳಿ ಎಲ್ಲವನ್ನೂ ನೋಡುತ್ತ ಆಸ್ವಾದಿಸುತ್ತಿದ್ದರು ಅನಂತರಾಯರು. ‘ಎಷ್ಟು ದಿನಗಳಾಗಿತ್ತು ಈ ದಾರಿಗೆ ಬಂದು?’ ಮನದಲ್ಲಿ ಲೆಕ್ಕ ಹಾಕತೊಡಗಿದರು. ನಿವೃತ್ತಿ ಜೀವನವನ್ನ ಆರಾಮಾಗಿ ಕಳೆಯುವ ಆಸೆ ಅವರಿಗ್ಗಿದ್ದರೂ ಒಬ್ಬನೇ ಮನೆಯಲ್ಲಿ ಕೂತು ಕಾಲ ಕಳೆಯುವ ಮನಸ್ಸಿರಲಿಲ್ಲ ಅನಂತರಾಯರಿಗೆ. ಹೆಂಡತಿ ತೀರಿ ಬಹಳ ದಿನಗಳು ಕಳೆದಿತ್ತು. ಮಗಳು ಮದುವೆಯಾಗಿ ಅಮೇರಿಕಾದ ಪಾಲಾಗಿದ್ದಳು. ಅವಳು ಸದ್ಯಕ್ಕೆ ಇಲ್ಲಿಗೆ ಬರುವುದಿಲ್ಲ. ಇವರಿಗೂ ಅಲ್ಲಿಗೆ ಹೋಗುವ ಮನಸಿರಲಿಲ್ಲ. ಮಕ್ಕಳಿಗೆ ಪಾಠ ಮಾಡಿಯೇ ಜೀವ ಸವೆಸಿದರಾಯ್ತು ಎನ್ನುವ ನಿರ್ಧಾರಕ್ಕೆ ಬಂದಿದ್ದರು.

ಖಾಲಿ ಇದ್ದ ಬಸ್ಸು ಕ್ರಮೇಣ ಭರ್ತಿಯಾಗಲಾರಂಭಿಸಿತು. ಹಸಿರನ್ನ ಇನ್ನೂ ಜನರು ಉಳಿಸಿರೋದಕ್ಕೆ ಸ್ವಲ್ಪ ಸಮಾಧಾನವಾಯಿತು. ಬಸ್ಸು ಮುಡುಬಾ ತಲುಪಿದಾಗ ಅನಂತರಾಯರ ಮುಖದಲ್ಲಿ ಮಂದಹಾಸ ಮಾಯವಾಯಿತು. ಕಾರಣ ಆ ಊರಿನಲ್ಲಿ ಹತ್ತಿದ ಒಬ್ಬ ವ್ಯಕ್ತಿ. ದೊಗಲ ಅಂಗಿ ಅದಕ್ಕೆ ಸರಿ ಹೊಂದದ ಬಣ್ಣ ಮಾಸಿದ ಪ್ಯಾಂಟ್, ಮುಖದ ತುಂಬಾ ಸೋಡಾ ಕನ್ನಡಕ. ಯಾವ ವ್ಯಕ್ತಿಯನ್ನ ತಮ್ಮ ಸ್ಮೃತಿ ಪಟಲದಿಂದ ಸಂಪೂರ್ಣವಾಗಿ ಮಾಯವಾಗಿಸಿದ್ದರೋ ಅದೇ ವ್ಯಕ್ತಿ ಅಲ್ಲಿ ಬಂದು ನಿಂತಿದ್ದ!!.

ವೃತ್ತಿಜೀವನದಲ್ಲಿ ಆದ ದೊಡ್ಡ ಆಘಾತಕ್ಕೆ ಒಂದು ಗೋಡೆ ಕಟ್ಟಿದ್ದರು. ಅದು ಸಣ್ಣದಾಗಿ ಬಿರುಕು ಬಿಡುತ್ತಿರುವಂತೆ ಭಾಸವಾಯಿತು. ಅವರದ್ದೇ ಮುಖಭಾವ ಆ ವ್ಯಕ್ತಿಯದ್ದೂ ಆಗಿದ್ದರಿಂದ ಇಬ್ಬರಿಗೂ ಮಾತು ಶುರುಮಾಡುವ ಆಸೆ ಇರಲಿಲ್ಲ. ಅವನೂ ಬೇರೆಯ ಸೀಟಿನಲ್ಲಿ ಕುಳಿತ.ತೀರ್ಥಹಳ್ಳಿ ಬಸ್ ಸ್ಟ್ಯಾಂಡ್ ಬಂದಾಗ ಇಬ್ಬರೂ ಬಸ್ಸನ್ನ ಇಳಿದು ಬೇರೆ ಬೇರೆ ದಿಕ್ಕುಗಳಲ್ಲಿ ಸಂಚರಿಸಿದರು. ಕಾಲೇಜಿನ ಪ್ಯೂನ್ ಒಬ್ಬ ಅನಂತರಾಯರಿಗೆ ಕಾಯುತ್ತಿದ್ದ. ಅವರು ಬಂದ ತಕ್ಷಣ ಅವರನ್ನ ಬರಮಾಡಿಕೊಂಡು ಕಾಲೇಜಿನ ಕಡೆ ಕರೆದುಕೊಂಡು ಹೋದ.

ಕಾಲೇಜಿನ ವಾತಾವರಣ ಅನಂತರಾಯರಿಗೆ ಬಹಳವಾಗಿ ಹಿಡಿಸಿತು. ತಂಪಾದ ಪ್ರದೇಶ ಹಿತವಾದ ಗಾಳಿ ಒಳ್ಳೆಯ ವಿದ್ಯಾರ್ಥಿ ಬಳಗ ಎಲ್ಲವೂ ಆಪ್ತವೆನಿಸಿತು. ಆದರೆ ಪ್ರತಿ ದಿನ ಮುಡುಬಾದಲ್ಲಿ ಸಿಗುವ ಆ ವ್ಯಕ್ತಿಯಿಂದ ಅವರ ಮನಸ್ಸು ಕಸಿವಿಸಿಗೊಳ್ಳುತ್ತಿತ್ತು. ಅವನ ಸಹವಾಸವೇ ಬೇಡ ಎಂದು ಬೇರೆ ಬಸ್ಸನ್ನ ಹತ್ತಿದ್ದರೆ ಕಾಲೇಜಿಗೆ ತಡವಾಗಿ ವಿದ್ಯಾರ್ಥಿಗಳೆದುರು ಮುಜುಗರಕ್ಕೀಡಾಗುವ ಪ್ರಸಂಗ ಎದುರಾಯಿತು. ಪುನ: ಮತ್ತೆ ಅದೇ ಬಸ್ಸಿಗೆ ತಮ್ಮ ದಿನನಿತ್ಯದ ಪ್ರಯಾಣ ಶುರುಮಾಡಿದರು.

ಆ ವ್ಯಕ್ತಿಯನ್ನ ಪ್ರತಿನಿತ್ಯ ಎದುರಿಸುವುದು ಅನಂತರಾಯರಿಗೆ ಅಷ್ಟು ಸುಲಭದ ವಿಷಯ ಎನಿಸಲಿಲ್ಲ. ಆ ವ್ಯಕ್ತಿಯನ್ನ ಬಸ್ಸಿನಲ್ಲಿ ನೋಡಿದಾಗಲೆಲ್ಲ ತಮ್ಮ ಅಪರಾಧಿ ಭಾವ ಜಾಗೃತಗೊಳ್ಳುತ್ತಿತ್ತು. ತೀರ್ಥಹಳ್ಳಿ ಕಾಲೇಜಿಗೆ ಸೇರುವ ತಮ್ಮ ನಿರ್ಧಾರಕ್ಕೆ ಪ್ರತಿ ದಿನವೂ ತಮ್ಮನ್ನ ತಾವೇ ಬೈದುಕೊಳ್ಳುತ್ತಿದ್ದರು. ಬಸ್ಸು ತನ್ನ ವೇಗ ಹೆಚ್ಚಿಸಿಕೊಂಡು ಮುಂದೆ ಸಾಗುತ್ತಿದ್ದರೆ ಅನಂತರಾಯರ ಮನಸ್ಸು ಹಿಂದಿನ ಘಟನೆಗಳಿಗೆ ವಾಲುತ್ತಿತ್ತು.

ಸುಮಾರು ಹದಿನೈದು ವರ್ಷದ ಹಿಂದಿನ ಘಟನೆ.ಆರ್. ಎಮ್.ಸಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಎಲ್ಲರಿಗೂ ಕಾಣುವಂತೆ ಒಬ್ಬ ವಿದ್ಯಾರ್ಥಿಗೆ ಅನಂತರಾಯರು ಕಪಾಳಕ್ಕೆ ಬಾರಿಸಿದ್ದರು!!. ಹೊಡೆದ ರಭಸಕ್ಕೆ ಹುಡುಗ ಸ್ವಲ್ಪ ಮುಂದೆ ಹೋಗಿ  ಬಿದ್ದ. ಅಲಿದ್ದವರಿಗೆಲ್ಲ ಅನಂತರಾಯರ ಈ ರೀತಿಯ ವರ್ತನೆ ಅಚ್ಚರಿ ಮೂಡಿಸಿತ್ತು. ಅವರೆಂದೂ ತಮ್ಮ ತಾಳ್ಮೆ ಕಳೆದುಕೊಂಡವರಲ್ಲ.

ಶಿಸ್ತಿನ ಮನುಷ್ಯರಾದರೂ ಯಾವ ವಿದ್ಯಾರ್ಥಿಗೂ ಹೊಡೆದವರಲ್ಲ. ‘ಎಷ್ಟ್ ಧೈರ್ಯ ಇದ್ರೆ ನನ್ನೆದ್ರಿಗೆ ಸಿಗರೇಟ್ ಸೇದ್ತೀಯಾ? ಇನ್ನೂ ಸರಿಯಾಗಿ ಮೀಸೆ ಚಿಗುರಿಲ್ಲ ಆಗ್ಲೇ ಈ ಥರಾ ಶೋಕಿ. ಮತ್ತೆ ರಿಪೀಟ್ ಆದ್ರೆ ಸರಿ ಇರಲ್ಲʼ ಎಂದು ಉಗಿದು ತಮ್ಮ ಕೊಠಡಿಯ ಒಳ ಹೊಕ್ಕರು.  ಹುಡುಗ ಕೆಳಗೆ ಬಿದ್ದಿದ್ದ ತನ್ನ ಕನ್ನಡಕವನ್ನ ಹಾಕಿಕೊಂಡು ಸುತ್ತಲೂ ಒಮ್ಮೆ ನೋಡಿದ. ಎಲ್ಲರೂ ಅವನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದರು. ಯಾರನ್ನೂ ಎದುರಿಸಲು ಆಗದೇ ಅಲ್ಲಿಂದ ಹೊರಟ.

‘ನೀವೇನೆ ಹೇಳಿ ಸರ್. ಫಣೀಂದ್ರನಿಗೆ ಎಲ್ಲರೆದ್ರಿಗೂ ಕಪಾಳಕ್ಕೆ ಹೊಡಿಬಾರ್ದಿತ್ತು. ಅಂತ ಬ್ರೈಟ್ ಸ್ಟೂಡೆಂಟ್ ಎಲ್ಲಿ ಸಿಗ್ತಾನೆ? ನೀವಿದನ್ನ ವೈಯಕ್ತಿಕ ದೃಷ್ಠಿಲಿ ನೋಡ್ಬಾರ್ದಿತ್ತು.’ ಕಾಲೇಜಿನ ಗಣಿತಶಾಸ್ತ್ರದ ಹೆಚ್.ಓ.ಡಿ ಸುರೇಶ್ ಅವರು ಅನಂತರಾಯರಿಗೆ ತಿಳಿ ಹೇಳಿದರು. ‘ಸರ್ ಇನ್ನು ಸಣ್ ವಯಸ್ಸು ಈಗ್ಲೇ  ಸಿಗರೇಟ್ ಕುಡಿತ ಎಲ್ಲ ಶುರು ಮಾಡ್ಕೊಂಡ್ರೆ ಮುಂದೆ ಅವನ ಜೀವನ?’ ಅನಂತರಾಯರು ಮರು ಉತ್ತರಿಸಿದರು. ‘ಅವನು ಕಾಲೇಜಲ್ಲಿ ಆ ರೀತಿ ಕೆಲ್ಸ ಮಾಡಿದ್ರೆ ನಾನೇ ಅವನಿಗೆ ಸರಿಯಾಗಿ ಬುದ್ದಿ ಕಲಿಸ್ತಿದ್ದೆ. ಅವನು ಸೇದಿರೋದು ಅದೆಲ್ಲೋ ೩ ಕಿಲೋಮೀಟರ್ ದೂರ ಇರೋ ಅಂಗಡಿಲಿ. ಎಷ್ಟ್ ಜನ ಕಾಲೇಜ್ ಹುಡುಗ್ರು ಸೇದಲ್ಲ? ಅವರ್ನೆಲ್ಲ ಹುಡುಕ್ಕೊಂಡು ಹೋಗಿ ಹೀಗೆ ಕಪಾಳಕ್ಕೆ ಹೊಡೀತೀರಾ? ನಿಮಗೆ ಒಳ್ಳೆ ಹೆಸರಿದೆ ಹಾಳ್ ಮಾಡ್ಕೋಬೇಡಿ. ನಿಮಗೆ ಅವನ ಮೇಲೆ ಅಕ್ಕರೆ ಇದ್ರೆ ಕೂರ್ಸಿ ಬುದ್ದಿ ಹೇಳಿ. ನೀವು ಲೆಕ್ಚರರ್ ಟೀಚರಲ್ಲ’ ಎಂದು ಸುರೇಶ್ ತಮ್ಮ ಕ್ಲಾಸಿಗೆ ನಡೆದರು.

ಇದ್ಯಾವುದೂ ತಿಳಿಯದಿರುವಷ್ಟು ದಡ್ಡರಲ್ಲ ಅನಂತರಾಯರು. ಆದರೆ ತನಗಿಂತಲೂ ಗಣಿತದಲ್ಲಿ ಹೆಚ್ಚು ಬುದ್ದಿವಂತನಾಗಿರುವ ಫಣೀಂದ್ರನನ್ನ ಅವರಿಗೆ ಸಹಿಸಲಾಗುತ್ತಿರಲಿಲ್ಲ. ಕಾಲೇಜಿನ ಸಾಕಷ್ಟು ವಿದ್ಯಾರ್ಥಿಗಳು ಅವರ ಮನೆ ಪಾಠಕ್ಕೆ ಬಂದರೂ ಫಣೀಂದ್ರನಷ್ಟು ಅಧ್ಭುತ ವಿದ್ಯಾರ್ಥಿಯನ್ನ ಅವರು ನೋಡಿರಲಿಲ್ಲ. ಕ್ಲಾಸಿನಲ್ಲಿ ಲೆಕ್ಕ ಬಿಡಿಸುವ ಅವನ ನಿಪುಣತೆಗೆ ಮಾರು ಹೋಗದವರಿರಲಿಲ್ಲ.

ಅನಂತರಾಯರೂ ಒಮ್ಮೆ ಅವನ ಜಾಣ್ಮೆಗೆ ತಲೆ ಬಾಗಿದ್ದರು. ಆದರೆ ಅವನ ಬ್ಯಾಚಿನ ವಿದ್ಯಾರ್ಥಿಗಳೆಲ್ಲರೂ ಇವರು ಮಾಡಿದ ಪಾಠ ಅರ್ಥವಾಗದಿದ್ದರೆ ಸೀದಾ ಓಡುತ್ತಿದ್ದದ್ದು ಫಣೀಂದ್ರನ ಹತ್ತಿರ. ಪಾಸೇ ಆಗದ ಹುಡುಗರೆಲ್ಲ ಮೊದಲನೇ ವರ್ಷದ ಪದವಿಪೂರ್ವ ಕೋರ್ಸ್ ಅನ್ನು ಇವನು ಹೇಳಿಕೊಟ್ಟದ್ದಕ್ಕೆ ಗಣಿತದಲ್ಲಿ ಪಾಸಾಗಿದ್ದರು. ರಾಯರು ಅವನ ಮೇಲೆ ಪ್ರೀತಿ ಬೆಳೆಸಿಕೊಳ್ಳುವ ಬದಲು ಅಸೂಯೆ ಪಡುವುದಕ್ಕೆ ಶುರು ಮಾಡಿದ್ದರು.

ಮನೆ ಪಾಠಕ್ಕೆ ಬರುವ ಹುಡುಗರೂ ಸಹ ಅರ್ಥ ಆಗದ ವಿಷಯವನ್ನ ಅವನ ಬಳಿ ಹೇಳಿಸಿಕೊಳ್ಳುತ್ತಿದ್ದರು. ಇದನ್ನಂತೂ ಅವರಿಗೆ ಸಹಿಸಲಾಗಲ್ಲಿಲ್ಲ. ಮನೆ ಪಾಠಕ್ಕೆ ಬಂದಾಗ ಆ ಹುಡುಗರನ್ನೆಲ್ಲ ಎಲ್ಲರೆದುರೂ ಬೈದಿದ್ದರು. ‘ನಿಮಗೆ ಅರ್ಥ ಆಗಿಲ್ಲ ಅಂದ್ರೆ ನನ್ನನ್ನ ಕೇಳಿ. ನಿಮ್ ಅಪ್ಪ ಅಮ್ಮ ಟ್ಯೂಷನ್ ಫೀ ಏನ್ ದಂಡಕ್ಕೆ ಕೊಡ್ತಿದಾರಾ?’ ಎಂದು ತಮಗೆ ಫಣೀಂದ್ರನ ಮೇಲಿದ್ದ ಸಿಟ್ಟನ್ನ ಪರೋಕ್ಷವಾಗಿ ಹೊರಹಾಕಿದ್ದರು.

ಗಣಿತದಲ್ಲಿ ಹೆಚ್ಚು ಅಂಕ ತೆಗೆದವರಿಗೆ ನೀಡುತ್ತಿದ್ದ ಸ್ಕಾಲರ್ಶಿಪ್ ಅನ್ನು ಅವನಿಗೆ ಕೊಡಿಸದೇ ತನ್ನ ಮಗಳಿಗೆ ಬರುವ ಹಾಗೆ ಮಾಡುವುದರಲ್ಲಿ ಯಶಸ್ವಿಯಾಗಿದ್ದರು. ಇದೆಲ್ಲವೂ ಗೊತ್ತಿದ್ದರೂ ಫಣೀಂದ್ರ ಅದರ ಬಗ್ಗೆ ಯೋಚಿಸಲಿಲ್ಲ. ಅವನ ಮುಖ್ಯ ಗುರಿ ಇದ್ದದ್ದೇ ಗಣಿತದಲ್ಲಿ ಏನಾದರೂ ಸಾಧಿಸುವ ಅದಮ್ಯ ಉತ್ಸಾಹ.ಮುಂದೆ ಅದರಲ್ಲೇ ಪಿ.ಹೆಚ್.ಡಿ ಮಾಡುವ ಹಂಬಲವಿತ್ತು. ಎಷ್ಟೇ ದ್ವೇಶಿಸಿದರೂ ಅವನಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರದೇ ಅವನ ಪಾಡಿಗೆ ಅವನಿರುವುದೇ ಇವರಿಗೆ ಹುಚ್ಚು ಹಿಡಿಸಿತ್ತು. 

ಎರಡನೇ ವರ್ಷದ ಪದವಿಪೂರ್ವ ಪರೀಕ್ಷೆಗಳಿಗೆ ಇನ್ನೇನು ಪ್ರಾರಂಭದ ಹಂತದಲ್ಲಿದ್ದವು. ಕಾಲೇಜಿನಲ್ಲಿಯೂ ಅದರ ತಯಾರಿ ಜೋರಿತ್ತು. ಇದೇ ಸಮಯಕ್ಕೆ ಕಾಲೇಜಿನ ಹಾಸ್ಟೆಲ್ ಅಲ್ಲಿ ಒಂದಷ್ಟು ಉತ್ತರ ಭಾರತದ ವಿದ್ಯಾರ್ಥಿಗಳು ಡ್ರಗ್ಸ್ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದರು. ಕಾಲೇಜು ಹಾಸ್ಟೆಲ್ಲಿನ ವಾರ್ಡನ್ ಸಹ ಆಗಿದ್ದ ಅನಂತರಾಯರು ಈ ಅನಾಚಾರವನ್ನ ಸಹಿಸಲಿಲ್ಲ.

ಡ್ರಗ್ಸ್ ಸೇವನೆಯಲ್ಲಿ ಭಾಗಿಯಾದವರನೆಲ್ಲ ಪೋಲಿಸ್ ಕಸ್ಟಡಿಗೆ ಒಪ್ಪಿಸಿದರು. ಫಣೀಂದ್ರನ ಜೊತೆಯಿದ್ದ ರೂಮೇಟ್ ಸಹ ಡ್ರಗ್ಸ್ ಸೇವಿಸಿ ಸಿಕ್ಕಿ ಬಿದ್ದಿದ್ದ. ಫಣೀಂದ್ರನ ಬೀರುವನ್ನ ಶೋಧಿಸಿದಾಗ ಡ್ರಗ್ಸ್ ಸಿಕ್ಕಿದ್ದರಿಂದ, ಅನಂತರಾಯರು ಮುಲಾಜಿಲ್ಲದೆ ಫಣೀಂದ್ರನನ್ನೂ ಈ ಹಗರಣದಲ್ಲಿ ಸೇರಿಸಿದರು. ಅವನ ರೂಮೇಟ್ ಮಾಡಿದ ಅಚಾತುರ್ಯಕ್ಕೆ ಫಣೀಂದ್ರ ಸಿಕಿಬಿದ್ದ. ಅವನೆಷ್ಟೇ ಸಮಜಾಯಿಷಿ ಕೊಟ್ಟರೂ ಅವನ ಮಾತು ಯಾರು ಕೇಳುವವರಿರಲಿಲ್ಲ.

ಅನಂತರಾಯರೂ ಸತ್ಯಾಸತ್ಯತೆ ನೋಡುವ ಗೋಜಿಗೆ ಹೋಗದೇ, ಈ ಘಟನೆಯನ್ನು ಅವನನ್ನ ಹೆಣೆಯುವ ಸದಾವಕಾಶವೆಂದು ಭಾವಿಸಿದರು. ಫಣೀಂದ್ರ ಎಷ್ಟೇ ಅಂಗಲಾಚಿದರೂ ಅನಂತರಾಯರ ಮನಸ್ಸು ಕರಗಲಿಲ್ಲ. ‘ಸಿಗರೇಟ್ ಸೇದಿರೋನ್ಗೆ ಡ್ರಗ್ಸ್ ತಗೋಳೋದು ಕಷ್ಟ ನಾ’ ಎಂದು ಅಪಹಾಸ್ಯ ಮಾಡಿದರು. ಅಷ್ಟುದಿನ ಸುಮ್ಮನಿದ್ದವನು ಪೋಲಿಸ್ ಕರೆದುಕೊಂಡು ಹೋಗುವಾಗ ‘ನನ್ ಬದುಕು ನಾಶ ಮಾಡಿದಿರಾ ನೀವ್ ಚೆನಾಗಿರ್ತೀರಾ ಸರ್?’ ಎಂದು ನಕ್ಕು ಪೋಲಿಸ್ ಜೀಪ್ ಹತ್ತಿದ.

ಫಣೀಂದ್ರನನ್ನೂ ಸೇರಿಸಿ ಅಷ್ಟೂ ಜನರನ್ನ ಕಾಲೇಜ್ ಡಿಸ್ಮಿಸ್ ಮಾಡಿತು. ಅವರ ಪರೀಕ್ಷೆಗಳನ್ನ ರದ್ದು ಮಾಡಿತು. ಅವರ ಫೋಟೋಗಳೆಲ್ಲವೂ ಟಿ.ವಿ. ಪೇಪರ್ ಗಳಲ್ಲಿ ಹರಿದಾಡಿತು. ನಿಜವಾದ ಹೊಡೆತ ಬಿದ್ದದ್ದು ಮಾತ್ರ ಏನೂ ಮಾಡದೇ ಸಿಕ್ಕಿಹಾಕಿಕೊಂಡ ಫಣೀಂದ್ರನಿಗೆ. ಗಣಿತದಲ್ಲಿ ಎಮ್.ಎಸ್ಸಿ ಮಾಡಿ ಪಿ.ಹೆಚ್.ಡಿ ಮಾಡುವ ಕನಸು ಸದ್ಯಕ್ಕೆ ನುಚ್ಚುನೂರಾಗಿತ್ತು.

ಆ ಹುಡುಗರ ತಂದೆ ತಾಯಿಗಳೆಲ್ಲ ಶ್ರೀಮಂತರಾದ್ದರಿಂದ ಡ್ರಗ್ಸ್ ಕೇಸ್ ಅಲ್ಲಿಗೆ ಖುಲಾಸೆಯಾಯಿತು. ಸಾಕ್ಷ್ಯಾಧಾರದ ಕೊರತೆಯಿಂದ  ಫಣೀಂದ್ರನನ್ನೂ ಸೇರಿಸಿ ಎಲ್ಲರನ್ನೂ ಬಿಡುಗಡೆ ಮಾಡಿದರು. ಕೇಸ್ ಖುಲಾಸೆ ಆದರೂ ಡ್ರಗ್ ಅಡಿಕ್ಟ್ ಎಂಬ ಹಣೆಪಟ್ಟಿ ಫಣೀಂದ್ರನನ್ನ ಯಾವ ಕಾಲೇಜಿಗೂ ಹೋಗದಂತೆ ಮಾಡಿತು. ಉತ್ತರಭಾರತದ ಹುಡುಗರು ಶಿವಮೊಗ್ಗ ಬಿಟ್ಟು ಬೇರೆ ಊರಿನ ಕಾಲೇಜ್ ಸೇರಿದರು. ಶಿವಮೊಗ್ಗದ ಯಾವ ಕಾಲೇಜಿನವರು ಫಣೀಂದ್ರನನ್ನ ಸೇರಿಸಿಕೊಳ್ಳದಿದ್ದಾಗ ತೀರ್ಥಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಮತ್ತೊಮ್ಮೆ ಎರಡನೇ ವರ್ಷದ ಪದವಿಪೂರ್ವ ಕಾಲೇಜಿಗೆ ಸೇರಿದ.

ಇದೆಲ್ಲ ಮುಗಿದು ಮೂರು ತಿಂಗಳ ನಂತರ ಅನಂತರಾಯರು ತಮ್ಮ ಬೆಳಗಿನ ವಾಕಿಂಗ್ ಮುಗಿಸಿ ಮನೆಗೆ ತೆರಳಿದರು. ಬೆಳಗ್ಗೆ ಎಂಟಾದರೂ ಮಗಳು ವರ್ಷ ಎದ್ದಿರಲಿಲ್ಲ. ಎಲ್ಲ ಪರೀಕ್ಷೆಗಳು ಮುಗಿದದ್ದರಿಂದ ಅನಂತರಾಯರು ಚೆನ್ನಾಗಿ ಮಲಗಲಿ ಎಂದು ಸುಮ್ಮನಿದ್ದರು. ಹೆಂಡತಿ ಕ್ಯಾನ್ಸರಿಂದ ಸತ್ತು ಹತ್ತು ವರ್ಷ ಕಳೆದಿದ್ದವು. ಹಾಗಾಗಿ ಅಡಿಗೆ ತಿಂಡಿ ಎಲ್ಲವೂ ರಾಯರದ್ದೆ. ತಾಯಿ ಇಲ್ಲದ ಮಗಳೆಂಬ ಅಕ್ಕರೆ ಸ್ವಲ್ಪ ಜಾಸ್ತಿಯೇ ಇದ್ದದ್ದರಿಂದ ಮುದ್ದಾಗಿ ಸಾಕಿದ್ದರು.

ಮಗಳು ಇನ್ನು ಎದ್ದಿಲ್ಲದ ಕಾರಣ ಅವಳ ಕೊಠಡಿಗೆ ಹೋಗಿ ಎಬ್ಬಿಸಲು ಮುಂದಾದರೆ, ವರ್ಷ ಅತಿಯಾದ ಡ್ರಗ್ ಸೇವನೆಯಿಂದ ಎಚ್ಚರತಪ್ಪಿ ಬಿದ್ದಿದ್ದಳು!!. ಅವಳ ಸ್ಥಿತಿಯನ್ನ ನೋಡಿ ಅನಂತರಾಯರಿಗೆ ಒಮ್ಮೆಲೇ ತಲೆ ತಿರುಗಿದಂತಾಯಿತು.ತಕ್ಷಣ ಆಸ್ಪತ್ರೆಗೆ ಸೇರಿಸಿ ಅವಳನ್ನ ಕಷ್ಟಪಟ್ಟು ಉಳಿಸಿಕೊಂಡರು. ಹೇಗೋ ತಮ್ಮ ಅಧಿಕಾರದ ಬಲದಿಂದ ಎಲ್ಲವನ್ನ ಮುಚ್ಚಿಟ್ಟರು. ಅವಳನ್ನ ಬೆಂಗಳೂರಿನ ರಿಹೆಬಿಲಿಟೇಷನ್ ಸೆಂಟರ್ ಗೆ ಸೇರಿಸಿ ಮೊದಲ ಸ್ಥಿತಿಗೆ ಬರುವಂತೆ ನೋಡಿಕೊಂಡರು.

ಶಿವಮೊಗ್ಗ ಬಿಡಿಸಿ ಚಿಕ್ಕಮಗಳೂರಿನಲ್ಲಿದ್ದ ತನ್ನ ತಂಗಿಯ ಮನೆಯಲ್ಲಿ ವರ್ಷಳನ್ನ ಡಿಗ್ರಿಗೆ ಸೇರಿಸಿದರು. ಇದಾದ ಮೇಲೆ ರಾಯರಿಗೆ  ವರ್ಷಳ ಮೇಲಿದ್ದ ಪ್ರೀತಿ ಮಾಯವಾಗಿತ್ತು. ಅವಳೂ ಕೂಡ ಮಾತನಾಡುವುದನ್ನೇ ಬಿಟ್ಟದ್ದಳು. ಇದೆಲ್ಲದರ ನಡುವೆ ಅವರನ್ನ ಕಾಡಿದ್ದು ಫಣೀಂದ್ರ ಹೇಳಿದ್ದ ಕೊನೆಯ ಮಾತು. ತಮ್ಮ ಅಹಂಗೆ ಸ್ವಂತ ಮಗಳೇ ಬಲಿಯಾದದ್ದು ಅವರನ್ನ ಹಣ್ಣಾಗಿಸಿತು.ಫಣೀಂದ್ರನನ್ನ ಹುಡುಕಿ ಕ್ಷಮೆ ಕೇಳಬೇಕೆಂದು ಪ್ರಯತ್ನಿಸಿದರು. ನಂತರದ ದಿನಗಳಲ್ಲಿ ಯಾವ ವಿದ್ಯಾರ್ಥಿಯ ಮೇಲೂ ಅಸೂಯೆ ಪಡುವ ಮಟ್ಟಕ್ಕೆ ಹೋಗಲಿಲ್ಲ.

ಎಲ್ಲರನ್ನೂ ಪ್ರೀತಿಸುವ ಪ್ರಯತ್ನ ಮಾಡಿದರೂ ಯಾರನ್ನೂ ದ್ವೇಶಿಸುವುದಕ್ಕಂತೂ ಹೋಗಲಿಲ್ಲ. ಫಣೀಂದ್ರನ ಬಗ್ಗೆ ಅವನ ಸ್ನೇಹಿತರನ್ನ ವಿಚಾರಿಸಿದಾಗ ಆ ಘಟನೆ ನಡೆದ ಬಳಿಕ ಅವನು ಯಾರ ಬಳಿಯೂ ಸಂಪರ್ಕದಲ್ಲಿಲ್ಲ ಎನ್ನುವ ಸುದ್ದಿ ಬಂತು. ಕಾಲೇಜಿನ ಅಡ್ಮಿಶನ್ ಬುಕ್ ತೆಗೆದು ಅವನ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಅಸ್ತಿತ್ವದಲ್ಲಿಲ್ಲ ಎನ್ನುವ ಧ್ವನಿ.

ಎಲ್ಲವನ್ನೂ ಮುಚ್ಚಿಟ್ಟು ಮಗಳ ಡಿಗ್ರಿ ಮುಗಿದ ಬಳಿಕ ಮದುವೆ ಮಾಡಿದರು.ಬೇಕಂತಲೇ ಅಮೆರಿಕದಲ್ಲಿರುವ ಹುಡುಗನಿಗೆ ಮದುವೆ ಮಾಡಿ ಅವಳಿಗೆ ಇಲ್ಲಿಯ ಸಂಪರ್ಕವನ್ನ ಕಡಿತಗೊಳಿಸಿದರು. ವರುಷಗಳು ಉರುಳಿ, ರಾಯರು ತಮ್ಮ ವೃತ್ತಿಯಲ್ಲಿ ಹೆಚ್ಚು ತೊಡಗಿಕೊಂಡರು. ಫಣೀಂದ್ರ ಅವರಿಂದ ಮರೆಯಾಗಿದ್ದ. ಮಗಳೂ ಕೂಡ ದೂರವಿದ್ದದ್ದರಿಂದ ಒಂಟಿತನ ಮೊದಲು ಕಷ್ಟವಾದರೂ ಅದೇ ಕಡೆಗೆ ಆಪ್ತವೆನಿಸಿತು.ಮರೆಯಾದವನು ಹದಿನೈದು ವರ್ಷದ ನಂತರ ಬಸ್ಸಿನಲ್ಲಿ ಪ್ರತ್ಯಕ್ಷನಾಗಿದ್ದ.

ಅಂದು ಬಸ್ಸಿನಲ್ಲಿ ಅಷ್ಟೇನೂ ಜನರಿರಲಿಲ್ಲ.ಮುಡುಬಾ ಬಂದಾಗ ಇವನೊಬ್ಬನೇ ಹತ್ತಿದ. ಬಸ್ಸಿನಲ್ಲಿ ಸೀಟುಗಳು ಭರ್ತಿಯಾಗಿದ್ದರೂ ರಾಯರ ಪಕ್ಕದಲ್ಲಿ ಸೀಟು ಖಾಲಿ ಇತ್ತು. ಫಣೀಂದ್ರ ಕೂರದೇ ನಿಂತಿದ್ದ. ಕಂಡಕ್ಟರ್ ‘ಸರ್ ಅಲ್ಲಿ ಸೀಟಿದ್ರೂ ಕೂರಲ್ಲ ಅಂತೀರಲ್ಲಾ ಕುತ್ಕಳಿ’ ಎಂದು ದಬಾಯಿಸಿದ. ಒಲ್ಲದ ಮನಸ್ಸಿನಿಂದ ಅಲ್ಲಿಗೆ ಹೋಗಿ ಕುಳಿತ. ಇಬ್ಬರಲ್ಲೂ ಮಾತಿರಲಿಲ್ಲ. ದೃಷ್ಠಿ ಬದಲಿಸುವ ಪ್ರಯತ್ನ ಮಾಡಿದರು. ಬಸ್ಸು ತೀರ್ಥಹಳ್ಳಿಗೆ ತಲುಪುವುದಕ್ಕೆ ಹತ್ತು ಕಿಲೋಮೀಟರ್ ಇತ್ತು.

ಅನಂತರಾಯರಿಗೆ ಸುಮ್ಮನೆ ಕೂರಲು ಆಗಲಿಲ್ಲ. ಅವನ ಬದುಕಿನ ಬಗ್ಗೆ ತಿಳಿದುಕೊಳ್ಳುವ ಹುಚ್ಚು ಕುತೂಹಲವಿತ್ತು. ಮಾತನಡಿಸಿದರೆ ಎಲ್ಲಿ ರೇಗಾಡುತ್ತಾನೋ ಎನ್ನುವ ಭಯ ಬೇರೆ. ತಮ್ಮಲ್ಲಿರುವ ಅಷ್ಟೂ ಧೈರ್ಯವನ್ನ ಒಗ್ಗೂಡಿಸಿ ‘ಹೇಗಿದ್ದೀಯೋ?’ ಎಂದು ಕೇಳಿಯೇಬಿಟ್ಟರು. ಫಣೀಂದ್ರ ತಕ್ಷಣಕ್ಕೆ ಪ್ರತಿಕ್ರಿಯೆ ನೀಡದಿದ್ದರೂ ಒಂದೆರಡು ನಿಮಿಷದ ನಂತರ ‘ನಿಮ್ಮಷ್ಟ್ ಆರಾಮಾಗಿಲ್ಲ ಸರ್. ಹೇಗೋ ನಡೀತಿದೆ ಜೀವನ. ನೆಮ್ಮದಿ ಅಂತೂ ಇದೆ’ ಎಂದ. ‘ಏನ್ ಮಾಡ್ತಿದೀಯ ಇವಾಗ?’ ರಾಯರು ಕೇಳಿದರು.

‘ತೀರ್ಥಹಳ್ಳಿ ಸರ್ಕಾರಿ ಕಾಲೇಜಲ್ಲಿ ಅತಿಥಿ ಉಪನ್ಯಾಸಕ ಆಗಿದೀನಿ. ತಿಂಗ್ಳಿಗೆ ಹತ್ತು ಸಾವಿರ ಬರತ್ತೆ. ಊರಲ್ಲಿ ಸ್ವಲ್ಪ ಜಮೀನಿದೆ ಹೇಗೋ ನಡೀತಿದೆ’ ಎಂದ. ‘ಪಿ.ಹೆಚ್.ಡಿ ಮಾಡ್ತಿನಿ ಅಂತಿದ್ದೆ?’ ಅವರ ಮಾತಿಗೆ ನಕ್ಕು’ಈಗ್ಲೂ ಆಸೆ ಇದೆ. ನೆಟ್ ಎಕ್ಸಾಮ್ ಪಾಸ್ ಆಗಿದೀನಿ ಇಂಟರ್ವ್ಯೂ ಕೂಡ ಆಗತ್ತೆ. ಆದ್ರೆ ಗಣಿತದಲ್ಲಿ ನಿಮ್ಮಷ್ಟೇ ಪ್ರತಿಭೆ ಇರೋ ಮೇಷ್ಟ್ರನ್ನ ಗೈಡ್ ಆಗಿ ಹುಡುಕ್ತಿದೀನಿ ಇನ್ನೂ ಸಿಕ್ಕಿಲ್ಲ. ಎಲ್ರೂ ನಿಮ್ ಥರಾನೆ ಸರ್. ಬರೀ ಸಭ್ಯರಿಗೆ ಮಾತ್ರನೇ ಗೈಡ್ ಮಾಡೋದು ನಾವು ಅಂತಾರೆ’ ಎಂದು ಕುಹಕವಾಡಿದ. ಫಣೀಂದ್ರನ ಮಾತಿಗೆ ರಾಯರು ಮರುಮಾತನಾಡಲಿಲ್ಲ.

ತೀರ್ಥಹಳ್ಳಿ ಬಸ್ ನಿಲ್ದಾಣ ಬಂದಿತು. ಅವನು ಇಳಿದು ಹೋದ. ಅನಂತರಾಯರಿಗೆ ಅವನ ಮಾತು ಬೇಸರತಂದರೂ ಅವರ ತಪ್ಪನ್ನ ತಿದ್ದಿಕೊಳ್ಳುವ ಅವಕಾಶ ಕಾಣತೊಡಗಿತು. ‘ಹೌದಲ್ವ? ಇವನಿಗೆ ಸರಿಯಾಗಿ ಮಾರ್ಗದರ್ಶನ ನೀಡಿದರೆ ಗಣಿತದಲ್ಲಿ ಫಣೀಂದ್ರನನ್ನ ಮೀರಿಸೋರು ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಯಾರೂ ಸಿಗಲಿಕ್ಕಿಲ್ಲ. ಹಾಗೆ ಯೊಚನೆ ಬಂದದ್ದೇ ತಡ ತಮ್ಮ ಆತ್ಮೀಯ ಸ್ನೇಹಿತ ರಂಗನಾಥ್ ಅವರಿಗೆ ಕರೆ ಮಾಡಿದರು.

ಮಾರನೆಯ ದಿನ ಫಣೀಂದ್ರ ಸಿಕ್ಕಾಗ, ‘ನನ್ನ ಸ್ನೇಹಿತ ರಂಗನಾಥ್ ಮೇಷ್ಟ್ರು ನಿಂಗೆ ಗೈಡ್ ಆಗೋದಕ್ಕೆ ಒಪ್ಪಿದಾರೆ. ಆ ಮನುಷ್ಯ ಒಬ್ರಿಗೆ ಮಾತ್ರ ಗೈಡ್ ಆಗೋದಕ್ಕೆ ಒಪ್ಕೊಳೋದು. ನಿನ್ ಬಗ್ಗೆ ಹೇಳಿದಿನಿ. ಅವರಿಗೂ, ವಿಷಯದ ಮೇಲೆ ನಿಂಗೆ ಇರೋ ಆಸಕ್ತಿ ಗೊತ್ತಿದೆ. ಸಂಜೆ ನನ್ ಜೊತೆ ಶಿವಮೊಗ್ಗ ಬಾ’ ಎಂದರು.ಅವರ ಮಾತಿಗೆ ನಕ್ಕು, ‘ನೀವು ಈಗಾಗ್ಲೇ ನನ್ನ ಬದುಕಿಗೆ ಸಾಕಷ್ಟು ಸಹಾಯ ಮಾಡಿದೀರಾ. ಅದರ ಫಲವನ್ನ ಇನ್ನೂ ಅನುಭವಿಸ್ತಾ ಇದೀನಿ. ದಯವಿಟ್ಟು ಬೇಡ ಸಾರ್’ ಫಣೀಂದ್ರ ಕೈ ಮುಗಿದ. ಮಾತಿನಲ್ಲಿ ವ್ಯಂಗ್ಯ ಇತ್ತು. ರಾಯರು ಮಾತನಾಡಲಿಲ್ಲ. ಅಂದು ಕಾಲೇಜಲ್ಲಿ ಪಾಠ ಮಾಡುವ ಮನಸ್ಸಿರಲಿಲ್ಲ. ಮಕ್ಕಳಿಗೆ ಮನೆಗೆ ಹೋಗಲು ಹೇಳಿ ಅವರೂ ಬೇಗ ಹೊರಟು ಬಂದರು. 

ಮಾರನೆಯ ದಿನ ಬಸ್ಸು ಮುಡುಬಾ ತಲುಪಿದಾಗ ಫಣೀಂದ್ರನ ಕಣ್ಣುಗಳು ರಾಯರನ್ನೇ ಹುಡುಕುತ್ತಿದ್ದವು. ಬಸ್ಸು ಹತ್ತಿದವನು ಸೀದಾ ರಾಯರ ಬಳಿ ಬಂದು, ‘ರಂಗನಾಥ ಮೇಷ್ಟ್ರು ನಿಮ್ಗಿಂತ ಟ್ಯಾಲೆಂಟಡ್ ಅಂತೀರಾ ಸರ್’ ಎಂದ. ಅವನ ಮಾತಿಗೆ ನಕ್ಕು, ‘ಹಾ ಬುದ್ದಿವಂತ್ರೆ ಆದ್ರೆ ನಿನ್ನಷ್ಟ್ ಅಲ್ಲ’ ಎಂದರು. ಅತಿಶಯೋಕ್ತಿ ಎನಿಸಿದರೂ ಫಣೀಂದ್ರ ನಕ್ಕ. ‘ಇವತ್ತಾದ್ರೂ ಬರ್ತೀಯಾ ಶಿವಮೊಗ್ಗಕ್ಕೆ?’ ಎಂದು ಅಧಿಕಾರದ ಧ್ವನಿಯಲ್ಲಿ ಕೇಳಿದರು. ಅವರ ಮಾತಿಗೆ ಸುಮ್ಮನೆ ತಲೆಯಾಡಿಸಿದ.

ಫಣೀಂದ್ರನಿಗೆ ಎಲ್ಲಿಲ್ಲದ ಸಂತೋಷವಾದರೂ ವ್ಯಕ್ತಪಡಿಸುವುದಕ್ಕೆ ಹೋಗಲಿಲ್ಲ. ಒಂದು ರೀತಿಯ ಭಾಂಧವ್ಯ ಇಬ್ಬರಲ್ಲೂ ಮೂಡುವುದಕ್ಕೆ ಶುರುವಾಯಿತು. ಹೆಸರಿಗಷ್ಟೇ ರಂಗನಾಥ ಮೇಷ್ಟ್ರು, ಅವನ ಪಿ.ಹೆಚ್.ಡಿಯ ಸಂಪೂರ್ಣ ಜವಾಬ್ದಾರಿ ಇವರೇ ಹೊತ್ತಿದ್ದರು. ಅನಂತರಾಯರಿಗೆ ತಮ್ಮಲ್ಲಿದ್ದ ತಪ್ಪಿಸ್ಥಭಾವ ಕ್ರಮೇಣ ಕಮ್ಮಿಯಾಗುತ್ತ ಹೋಯಿತು. ಅವರೇ ಹಾಳು ಮಾಡಿದ್ದ ಬದುಕಿಗೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದರು. ದಿನಾ ಬಸ್ಸಿನಲ್ಲಿ ಇವರು ಫಣೀಂದ್ರನಿಗೆ ಶಿವಮೊಗ್ಗದಿಂದಲೇ ಸೀಟು ಹಿಡಿಯುವುದಕ್ಕೆ ಶುರುವಿಟ್ಟರು. ಅವನೂ ಕೂಡ ತೋಟದಲ್ಲಿ ಬೆಳೆದಿದ್ದ ಹಣ್ಣುಗಳನ್ನ ತರಕಾರಿಗಳನ್ನ ತಂದು ಕೊಡುತ್ತಿದ್ದ. ಸಂಜೆ ತಡವಾದರೆ ಮುಡುಬಾದ ಫಣೀಂದ್ರನ ಮನೆಯಲ್ಲೇ ಉಳಿಯುತ್ತಿದ್ದರು. ಅವನಿಗೂ ಮದುವೆ ಆಗಿರಲಿಲ್ಲ. ತಂದೆ ತಾಯಿ ತೀರಿ ಹೋಗಿ ಸುಮಾರು ವರ್ಷಗಳು ಉರುಳಿದ್ದವು.ಅವನೂ ಒಬ್ಬಂಟಿ. 

ಅಂದು ಸಂಜೆ ಇಬ್ಬರಿಗೂ ತಡವಾಗಿತ್ತು. ಕಾಲೇಜುಗಳಲ್ಲಿ ಪರೀಕ್ಷೆಯ ಸಮಯ. ಇಬ್ಬರೂ ತಮ್ಮ ತಮ್ಮ ಕಾಲೇಜಿನಲ್ಲಿ ಪಾಠ ಪ್ರವಚನ ಮುಗಿಸಿ ಬರುವಷ್ಟರಲ್ಲಿ ರಾತ್ರಿ ಏಳಾಗಿತ್ತು. ರಾಯರು ಸ್ವಲ್ಪ ದಣಿದಿದ್ದರು.ವಿಪರೀತ ಸುಸ್ತಾಗಿದ್ದರಿಂದ ಮಾತಿಗೆ ಇಳಿಯಲಿಲ್ಲ. ಮಲಗುವ ಪ್ರಯತ್ನ ಮಾಡುತ್ತಿದ್ದರು. ‘ಸರ್ ನಿಮಿಗೆ ಯಾಕೆ ಸರ್ ಈ ವಯಸ್ಸಲ್ಲಿ ಇದೆಲ್ಲ. ಆರಾಮಾಗಿ ಮನೇಲಿರ್ಬಾರ್ದ? ಯಾರಿಗೋಸ್ಕರ ದುಡೀಬೇಕು ನೀವು? ಮಗಳ ಮನೆಗಾದ್ರು ಹೋಗ್ಬಾರ್ದ?’ ಫಣೀಂದ್ರ ಅಕ್ಕರೆಯಿಂದಲೇ ಕೇಳಿದ. ‘ಏನಾದ್ರು ಆದ್ರೆ ನೀನಿದಿಯಲ್ಲೋ’ ಎಂದರು. ‘ಏನೂ ಆಗಲ್ಲ ಬಿಡಿ. ನೀವು ಮಲಗಿ ನಾನು ಶಿವಮೊಗ್ಗಕ್ಕೆ ಬರ್ತೀನಿ ಇವತ್ತು. ನಿಮ್ಮನ್ನ ಒಬ್ರೆ ಕಳ್ಸೋಕ್ಕೆ ಯಾಕೋ ಭಯ ಆಗ್ತಿದೆ’ ಎಂದ. ರಾಯರು ಬೇಡವೆನ್ನಲಿಲ್ಲ. ಸ್ವಲ್ಪ ದಾರಿ ಸವೆದ ಬಳಿಕ ರಾಯರಿಗೆ ವಿಪರೀತ ಎದೆನೋವು ಕಾಣಿಸಿಕೊಂಡಿತು.

ಫಣೀಂದ್ರನ ಭುಜವನ್ನ ಗಟ್ಟಿಯಾಗಿ ಹಿಡಿದಾಗಲೇ ಅವನಿಗೆ ಎಚ್ಚರವಾಗಿದ್ದು. ತಕ್ಷಣ ನೀರು ಕುಡಿಸಿದ. ಆದರೂ ಅದು ಉಪಯೋಗಕ್ಕೆ ಬರಲಿಲ್ಲ. ಬಸ್ಸಿನಲ್ಲಿದ್ದವರಿಗೆಲ್ಲ ಗಾಬರಿ ಆಗಿತ್ತು. ಕ್ಷಣ ಹೊತ್ತು ಏನು ಮಾಡುವುದೆಂದು ತೋಚದೆ ಮುಡುಬಾದಲ್ಲಿದ್ದ ತನ್ನ ಸ್ನೇಹಿತನಿಗೆ ಕಾರ್ ತರಲು ಹೇಳಿದ. ಕೆಲವು ನಿಮಿಷದಲ್ಲಿ ಬಸ್ ಮುಡುಬಾ ತಲುಪಿತು. ಅವನ ಸ್ನೇಹಿತನ ಜೊತೆ ಸೇರಿ ಫಣೀಂದ್ರ ರಾಯರನ್ನ ಕಾರಿಗೆ ಸಾಗಿಸಿದ. ತನ್ನ ಗೆಳೆಯನನ್ನ ರಾಯರ ಜೊತೆ ಹಿಂಬದಿ ಸೀಟಿನಲ್ಲಿ ಕೂರಿಸಿ, ಗಾಡಿಯನ್ನ ವೇಗವಾಗಿ ಚಲಾಯಿಸಿದ. ಸುಮಾರು ಐವತ್ತು ನಿಮಿಷದ ಪ್ರಯಾಣದ ನಂತರ ಕಾರು ಶಿವಮೊಗ್ಗ ಸಿಟಿ ಆಸ್ಪತ್ರೆ ತಲುಪಿತು. ರಾಯರನ್ನ ಅಡ್ಮಿಟ್ ಮಾಡಿಕೊಳ್ಳಲಾಯಿತು.

ಫಣೀಂದ್ರನ ಗೆಳೆಯ ಶಶಿ ಅವನ್ನನ್ನೇ ಅನುಮಾನದ ಕಣ್ಣುಗಳಿಂದ ನೋಡುತ್ತಿದ್ದ. ಫಣೀಂದ್ರ, ವೈದ್ಯರು ಹೇಳಿದ ಮಾತ್ರೆಗಳನ್ನ ತರುಲು ಹೋದವನು ವಾಪಸ್ಸು ಬಂದು, ‘ಹೇಗಿದಾರೆ?’ ಎಂದ.ಶಶಿ ಅವನ ಮಾತಿಗೆ ಉತ್ತರಿಸದೇ ‘ನಾವು ಬರೋ ದಾರೀಲೇ ಎರಡು ಆಸ್ಪತ್ರೆ ಇದ್ವು. ನೀನು ಅಲ್ಲಿ ಇವರನ್ನ ಅಡ್ಮಿಟ್ ಮಾಡೋ ಬದ್ಲು ಇಷ್ಟು ದೂರ ಇರೋ ಸಿಟಿ ಆಸ್ಪತ್ರೆಗೆ ಯಾಕೆ ಕರ್ಕೊಂಡ್ ಬಂದೆ? ದಾರಿ ಮಧ್ಯದಲ್ಲೇ ಪ್ರಾಣ ಹೋಗಿದ್ರೆ ಏನ್ ಗತಿ?’ ಎಂದ. ಫಣೀಂದ್ರನ ಮುಖ ಬಿಳುಚಿಕೊಂಡಿತು. ಅಲ್ಲಿನ ನರ್ಸ್ ಒಬ್ಬರು ಬಂದು, ‘ಫಣೀಂದ್ರ ಅಂದ್ರೆ ಯಾರು? ಪೇಶಂಟ್ ಕರೀತಿದಾರೆ’ ಎಂದಳು. ಫಣೀಂದ್ರ ಒಳ ಹೋದ.

ರಾಯರ ಪಕ್ಕದಲ್ಲಿ ಹೋಗಿ ಕುಳಿತ. ಫಣೀಂದ್ರನನ್ನ ನೋಡಿ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ತಮ್ಮ ಎರಡು ಕೈಗಳನ್ನ ಜೋಡಿಸಿ, ‘ಕ್ಷಮಿಸಿಬಿಡೋ ಹುಡ್ಗ. ನನ್ನ ಅಸೂಯೆಯಿಂದ ಇವತ್ತು ನೀನ್ ಅನುಭವಿಸ್ತಾ ಇರೋ ನೋವು ಇಷ್ಟ್ ಕಠೋರವಾಗಿದೆ ಅಂತ ಗೊತ್ತಿರ್ಲಿಲ್ಲ. ನಿಮ್ಮ ಮನೆಗೆ ಬಂದಾಗ್ಲೇ ಗೊತ್ತಗಿದ್ದು. ನಿಮ್ಮ ತಂದೆ ನೀನ್ ಡ್ರಗ್ಸ್ ಕೇಸಲ್ಲಿ ಸಿಕ್ಕಾಕೊಂಡ ವಿಷಯ ಕೇಳಿ ಆತ್ಮಹತ್ಯೆ ಮಾಡ್ಕೊಂಡ್ರು ಅಂತ. ನಿಮ್ ಪಕ್ಕದ ಮನೆಯವರು ಹೇಳಿದ್ರು. ಮನಸಲ್ಲಿ ಅಷ್ಟ್ ನೋವಿದ್ರೂ ನನ್ನನ್ನ ದ್ವೇಷಿಸಲಿಲ್ಲ. ಸೇಡು ತೀರಿಸಿಕೊಳ್ಳೋ ಪ್ರಯತ್ನ ಮಾಡ್ಲಿಲ್ಲ. ಸ್ವಂತ ಮಗಳೇ ನಾನ್ ಸತ್ತಿದೀನೋ ಬದುಕಿದ್ದೀನೋ ಕೇಳಲ್ಲ. ನಿನ್ ಜೀವನ ಹೀಗ್ ಮಾಡಿದ್ದಕ್ಕೆ ಇವತ್ತು ಬೇವರ್ಸಿ ಥರಾ ಬೆಡ್ ಅಲ್ಲಿ ಬಿದ್ದಿದ್ದೀನಿ, ನಾನು ಈಗ ಏನೇ ಸಹಾಯ ಮಾಡಿದ್ರು ಅದು ನಿನ್ನ ಬದುಕಿಗೆ ಆದ ಗಾಯಕ್ಕೆ ಒಂದು ತೇಪೆ ಅಷ್ಟೇ. ಸಾಧ್ಯ ಆದ್ರೆ ಕ್ಷಮಿಸು’ ಎಂದರು.

ಫಣೀಂದ್ರ ಏನೂ ಮಾತನಾಡದೆ ತಂದಿದ್ದ ಮಾತ್ರೆಗಳನ್ನ ಅವರ ಪಕ್ಕದಲ್ಲಿಟ್ಟು ಅಲ್ಲಿಂದ ನಡೆದ. ಸಿಟ್ಟಲ್ಲಿ ಬುಸುಗುಡುತ್ತಿದ್ದ ಫಣೀಂದ್ರ. ಎಲ್ಲವೂ ನೆನಪಿಗೆ ಬಂದು ಮನಸ್ಸು ಹದೆಗೆಟ್ಟಿತ್ತು. ಆಸ್ಪತ್ರೆಯ ಅದೇ ನರ್ಸ್ ಬಂದು ‘ರಿಕವರ್ ಆಗ್ತಿದಾರೆ. ಏನೂ ಪ್ರಾಬ್ಲಮ್ ಇಲ್ಲ’ ಎಂದಳು. ‘ಪಾಪಿ ಚಿರಾಯು..’ ಎಂದು ಅಲ್ಲಿದ್ದ ಗೋಡೆಗೆ ಒಂದು ಗುದ್ದು ಕೊಟ್ಟು ಹೊರನಡೆದ.

‍ಲೇಖಕರು Admin

July 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಕಥೆ ಚೆನ್ನಾಗಿದೆ. ಮನುಷ್ಯ ರಾಗ ದ್ವೇಷಗಳ ಆಳು. ಅವನು ಅವುಗಳನ್ನಾಳುವುದು ಕಷ್ಟ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: