ಅಭಿಪ್ರಾಯಭೇದಕ್ಕೆ ಅವಕಾಶ ಕಲ್ಪಿಸಿ..

ಮಾನ್ಯರೆ,

ಪ್ರಜಾಪ್ರಭುತ್ವದ ಮೂಲ ಆಶಯಗಳಲ್ಲಿ ಭಾರತ ಸಂವಿಧಾನವು ಕೊಡಮಾಡಿರುವ ಹಕ್ಕು ಮತ್ತು ಜವಾಬ್ದಾರಿಗಳಲ್ಲಿ ನಮಗೆ ಅಚಲ ವಿಶ್ವಾಸವಿದೆ. ಆದರೆ ಈಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಸಾಂಸ್ಕೃತಿಕ ಭಯೋತ್ಪಾದನೆಯನ್ನು ವಿರೋಧಿಸಿ ಈ ಹೇಳಿಕೆ ನೀಡುತ್ತಿದ್ದೇವೆ.

ಕಳೆದೆರಡು ವರ್ಷಗಳಿಂದ ಹುಸಿ ರಾಷ್ಟ್ರೀಯತೆ ಮತ್ತು ವೈಭವೀಕರಿಸಿದ ರಾಷ್ಟ್ರಭಕ್ತಿಗಳ ಉನ್ಮತ್ತತೆಗೆ ಒಳಗಾಗಿರುವ ಕೆಲ ಸಂಘಟನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಲು ನಡೆಸುತ್ತಿರುವ ಹಲವು ಚಟುವಟಿಕೆಗಳು ದೇಶಾದ್ಯಂತ ನಡೆಯುತ್ತಿವೆ. ವೈಜ್ಞಾನಿಕ ಆಲೋಚನೆ ಮತ್ತು ವಿಚಾರವಾದವನ್ನು ದೇಶದ್ರೋಹವೆಂಬಂತೆ ಬಿಂಬಿಸುವ ಕೃತ್ಯಗಳು ನಡೆಯುತ್ತಿರುವುದು ನಿತ್ಯವೂ ದೇಶದ ನಾನಾ ಕಡೆಗಳಿಂದ ವರದಿಯಾಗುತ್ತಿವೆ. ದೋಬಲ್ಕರ್, ಪನ್ಸಾರೆ, ಕಲ್ಬುರ್ಗಿಯವರ ಹತ್ಯೆಗಳು ಇಂತಹ ಮತಾಂಧರು ನಡೆಸಬಹುದಾದ ಪಾಶವೀಕೃತ್ಯಗಳಿಗೆ ಉದಾಹರಣೆಯಾಗಿವೆ.

meti malliarjunaಪ್ರಜಾಪ್ರಭುತ್ವದ ಮೂಲ ಆಶಯಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ, ಅಭಿಪ್ರಾಯಭೇದಗಳಿಗೆ ಅವಕಾಶವನ್ನು ಕಲ್ಪಿಸುವ ಮತ್ತು ಮನ್ನಣೆ ನೀಡುವ ಮಾನವೀಯ ಒಪ್ಪಂದಗಳೇ ಮೂಲ ತಳಹದಿಯಾಗಿವೆ. ಮೊನ್ನೆಯಷ್ಟೆ ರವೀಂದ್ರ ಕಲಾಕ್ಷೇತ್ರದಲ್ಲಿ ಶಶಿಕಾಂತ ಯಡಹಳ್ಳಿ ಅವರ ಅಚ್ಚೇ ದಿನ್ ಬೀದಿ ನಾಟಕಕ್ಕೆ ಅಡ್ಡಿ ಪಡಿಸಿ ಬೆದರಿಕೆ ಹಾಕಿರುವ ಪ್ರಯತ್ನ ಖಂಡನಾರ್ಹ. ಹಿಂಸೆ ಮತ್ತು ಪ್ರಾಣ ಭಯಗಳ ಮೂಲಕ ಆಗುತ್ತಿರುವ ಸಮಾಜದ ಕೇಡನ್ನು ವಿಶ್ಲೇಷಿಸುವ ವಿಮರ್ಶಿಸುವ ಚಿಂತಕರನ್ನು, ತಜ್ಞರನ್ನು, ಕಲಾವಿದರನ್ನು, ವಿಜ್ಞಾನಿಗಳನ್ನು ಹತ್ತಿಕ್ಕುವ, ಬಾಯಿ ಮುಚ್ಚಿಸುವ ಪ್ರಯತ್ನಗಳು ಎಗ್ಗಿಲ್ಲದೇ ಹೆಚ್ಚುತ್ತಿವೆ.

ಈ ಹಿನ್ನೆಲೆಯಲ್ಲಿ ದಿನಾಂಕ: 14.4.2016ರ ಬಾಬಾ ಸಾಹೇಬ ಅಂಬೇಡ್ಕರ್ ಅವರ ಜನ್ಮದಿನದಂದು ಸಾಗರ ನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಕರ್ನಾಟಕದ ಹೊಸ ತಲೆಮಾರಿನ ಸಂಸ್ಕೃತಿ ಚಿಂತಕರು ಮತ್ತು ಭಾಷಾವಿಜ್ಞಾನಿಗಳೂ ಆಗಿರುವ ಡಾ. ಮೇಟಿ ಮಲ್ಲಿಕಾರ್ಜುನ ಅವರು ಭಾಷಣ ಮಾಡುತ್ತಾ “70 ವರ್ಷಗಳ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಬಾಬಾ ಸಾಹೇಬರು ಕಂಡ ಕನಸುಗಳು ಸಂವಿಧಾನದಲ್ಲಿ ನಮಗೆ ನಾವೇ ಕೊಟ್ಟುಕೊಂಡ ಸಾಮಾಜಿಕ ನ್ಯಾಯದ ಆಶಯಗಳು ಇನ್ನೂ ಪೂರ್ಣಗೊಳ್ಳದೇ ಇರುವಾಗ, ಅಂಚಿನ ಮತ್ತು ತಳಸಮುದಾಯಗಳ ಜೀವನಸ್ಥಿತಿಗಳು ದಿನೇದಿನೇ ಮತ್ತೂ ಅಧೋಗತಿಗೆ ಇಳಿಯುತ್ತಿರುವಾಗ ಈ ಸಾಮಾಜಿಕ ತರತಮಗಳನ್ನು ನೀಗಿಸಲು ಪ್ರಯತ್ನಿಸದೇ ಕೇವಲ ಭಾರತ ಮಾತೆಗೆ ಜೈ ಎಂದು ಘೋಷಣೆ ಕೂಗುವುದರಿಂದ ಆಗುವ ಪುರುಷಾರ್ಥವೇನು?” ಎಂದು ಪ್ರಶ್ನಿಸಿದ್ದನ್ನೇ ರಾಷ್ಟ್ರದ್ರೋಹವೆಂದು, ದೇಶದ ಘನತೆಗೆ ಭಂಗ ಉಂಟು ಮಾಡಿರುವ ಮಾತುಗಳೆಂದು ಪರಿಗಣಿಸಿ ಭಾರತೀಯ ಜನತಾಪಕ್ಷ ಹಾಗು ಹಿಂದುತ್ವಪರವಾದ ಸಂಘಟನೆಯ ಕಾರ್ಯಕರ್ತರೆಂದು ಹೇಳಿಕೊಂಡವರು ಸಭೆಯಲ್ಲಿಯೇ ಭಾಷಣಕ್ಕೆ ಅಡ್ಡಿಯುಂಟುಮಾಡಿರುತ್ತಾರೆ. ಅಲ್ಲದೆ ಕಳೆದ ಮೂರು ದಿನಗಳಿಂದ ಡಾ.ಮೇಟಿಯವರನ್ನು ರಾಷ್ಟ್ರದ್ರೋಹದ ಅಡಿಯಲ್ಲಿ ಬಂಧಿಸಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆ ಮತ್ತು ಉಪವಿಭಾಗಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವುದು ವರದಿಯಾಗಿದೆ.

ಡಾ. ಮೇಟಿಯವರ ವಿಶ್ಲೇಷಣೆಯಲ್ಲಿ ರಾಷ್ಟ್ರವನ್ನು ಅಪಮಾನಿಸುವುದಾಗಲಿ, ರಾಷ್ಟ್ರಭಕ್ತಿಯನ್ನು ಗೇಲಿ ಮಾಡುವ ವ್ಯಂಗ್ಯವಾಗಲಿ ಅಥವಾ ರಾಷ್ಟ್ರದ್ರೋಹದ ಮಾತುಗಳಾಗಲಿ ದಾಖಲಾಗಿಲ್ಲ; ಬದಲಾಗಿ ಪ್ರಜಾಪ್ರಭುತ್ವದಿಂದಾಗಿ ಭಾರತದ ಕಟ್ಟಕಡೆಯ ಸಮುದಾಯ / ಮನುಷ್ಯರಿಗೆ ಇನ್ನೂ ಸಿಗದ ಸಾಮಾಜಿಕ ನ್ಯಾಯದ ಬಗೆಗಿನ ತೀವ್ರವಾದ ಕಾಳಜಿ ಮಾತ್ರ ಅಭಿವ್ಯಕ್ತಿಗೊಂಡಿದೆ. ಇಂತಹ ಸಾಮಾಜಿಕ ಕಾಳಜಿಯನ್ನೇ ರಾಷ್ಟ್ರದ್ರೋಹವೆಂದು ಬಿಂಬಿಸಿ ಡಾ.ಮೇಟಿಯವರನ್ನು ಬಂಧಿಸಬೇಕು ಇಲ್ಲವಾದಲ್ಲಿ ತಾವೇ ಬುದ್ಧಿ ಕಲಿಸುವುದಾಗಿ ಬೆದರಿಸುತ್ತಿರುವುದನ್ನು ನಾವು ಸಾಂಸ್ಕೃತಿಕ ಭಯೋತ್ಪಾದನೆ ಎಂದು ಪರಿಗಣಿಸುತ್ತೇವೆ. ಮತ್ತು ambedkar photosಇಂತಹ ಘಟನೆಗಳು ಪ್ರಜಾಪ್ರಭುತ್ವವನ್ನು ಹಾಗು ಜನರ ನಡುವಿನ ಸಾಮರಸ್ಯವನ್ನು ಕೆಡಿಸುವ ಮನೋವಿಕೃತ ಕ್ರಿಯೆಯೆಂದು ಪರಿಗಣಿಸಿ ತೀವ್ರವಾಗಿ ಖಂಡಿಸುತ್ತಿದ್ದೇವೆ. ನ್ಯಾಯ ಮತ್ತು ಸತ್ಯಗಳನ್ನು ನಿಷ್ಟುರವಾಗಿ ವಿಶ್ಲೇಷಿಸಿ ಸಮಾಜ ಮತ್ತು ಸರ್ಕಾರಗಳನ್ನು ತಿದ್ದಬೇಕಿರುವ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರುಗಳ ವಿರುದ್ಧ ನಡೆಯುತ್ತಿರುವ ಈ ಬಗೆಯ ಅಸಹನೆ ಮತ್ತು ಹಿಂಸಾ ಪ್ರವೃತ್ತಿಗಳನ್ನು ನಾವು ಖಂಡಿಸುತ್ತೇವೆ. ಹಿಂಸೆಯ ಮೂಲಕ ವಿಚಾರವಾದಿಗಳನ್ನು ‘ಮೌನ’ವಾಗಿಸುವ, ಭಯ ಬಿತ್ತುವ ಈ ಪ್ರಯತ್ನಗಳು ಸಾಮಾಜಿಕ ಅನ್ಯಾಯಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಹುನ್ನಾರದಿಂದ ಕೂಡಿದ್ದಾಗಿವೆ ಎಂಬುದು ನಮ್ಮ ಗ್ರಹಿಕೆ.

ಜಿಲ್ಲಾಡಳಿತ ಮತ್ತು ಸರ್ಕಾರ ಡಾ.ಮೇಟಿ ಮಲ್ಲಿಕಾರ್ಜುನ ಅವರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕೆಂದು ಆಗ್ರಹಿಸುತ್ತೇವೆ. ಅಲ್ಲದೆ, ಗಾಂಧಿ, ಅಂಬೇಡ್ಕರ್, ಲೋಹಿಯಾ ಅವರುಗಳ ಆಶಯಗಳನ್ನು ಸಾಮಾಜಿಕ ಸಂವಾದಗಳಲ್ಲಿ ಮುನ್ನಲೆಗೆ ತರಲು ಪ್ರಯತ್ನಿಸುತ್ತಿರುವ ವಿಚಾರವಾದಿಗಳ ವಿರುದ್ಧ ಹಿಂಸಾ ಮಾರ್ಗದ ಮೂಲಕ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇವೆ. ಭಿನ್ನಾಭಿಪ್ರಾಯ, ಚರ್ಚೆ, ವಿಶ್ಲೇಷಣೆಗಳು ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂಬುದನ್ನು ನಂಬಿರುವ ನಾವು ಯಾವ ಅಂಜಿಕೆಯೂ ಇಲ್ಲದೆ ಸಾಮಾಜಿಕ ವಿಮರ್ಶೆ ಮತ್ತು ಸಂವಾದಗಳನ್ನು ಮುಂದುವರೆಸಬೇಕೆಂದು ಚಿಂತಕರಲ್ಲಿ ವಿನಂತಿಸುತ್ತೇವೆ.
-ಡಾ. ಮರುಳಸಿದ್ದಪ್ಪ, ಹೆಚ್.ಎಸ್.ದೊರೆಸ್ವಾಮಿ, ಜಸ್ಟಿಸ್ ಸದಾಶಿವ, ಜಿ.ಕೆ.ಗೋವಿಂದರಾವ್, ಎಸ್.ಜಿ.ಸಿದ್ದರಾಮಯ್ಯ, ಡಾ.ಕೆ.ವೈ.ನಾರಾಯಣಸ್ವಾಮಿ, ಆರ್.ಪೂರ್ಣಿಮಾ, ಕೆ.ಷರೀಫಾ, ಶಶಿಧರ್ ಅಡಪ, ಡಾ.ಡಾಮ್ನಿಕ್, ಡಾ.ಚಲಪತಿ..

(ಹಾಗೂ ನಲವತ್ತಕ್ಕೂ ಹೆಚ್ಚು ಜನ ಪ್ರಗತಿಪರರು ಸಹಿ ಮಾಡಿ ಸಾಂಸ್ಕೃತಿಕ ಭಯೋತ್ಪಾದನೆಯನ್ನು ವಿರೋಧಿಸಿದ್ದಾರೆ)

 

‍ಲೇಖಕರು admin

April 21, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: