ಅಬ್ಬಾ!! ರೋಚಕತೆಯ ತುಟ್ಟತುದಿಗೊಯ್ದ ಆ ನಾಲ್ಕು ಪಂದ್ಯಗಳು!!

ಗೊರೂರು ಶಿವೇಶ್

ಕರೋನಾ ಕಾಲದ ಎರಡು ವರ್ಷಗಳಲ್ಲಿ ಸ್ತಬ್ಧವಾಗಿದ್ದ ಕ್ರೀಡಾ ಚಟುವಟಿಕೆಗಳು ಮತ್ತೆ ಗರಿಗೆದರತೊಡಗಿದೆ. ಮೊದಲಿಗೆ ಒಲಿಂಪಿಕ್ಸ್ ನಂತರ ವಿಶ್ವಕಪ್ ಕ್ರಿಕೆಟ್, ಐಪಿಎಲ್, ಪುಟ್ಬಾಲ್, ಶಟಲ್ ಬ್ಯಾಡ್ಮಿಂಟನ್, ಟೆನಿಸ್.. ಹೀಗೆ ಕ್ರೀಡೆಯ ವಿವಿಧ ಪ್ರಕಾರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಅಂತೆಯೇ ನಿಂತು ಹೋಗಿದ್ದ ದೇಶಿಯ ಕ್ರಿಕೆಟ್ ಪಂದ್ಯಾವಳಿಗಳು ಕೂಡ ಆರಂಭವಾಗಿವೆ. ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಮುಗಿದು ವಿಜಯ ಹಜಾರೆ ಒಂದು ದಿನದ ಪಂದ್ಯಗಳು ಹಾಗು ರಣಜಿ ಪಂದ್ಯಗಳು ಆರಂಭವಾಗಲಿವೆ.

ಕ್ರಿಕೆಟ್, ಫುಟ್ಬಾಲ್, ಹಾಕಿ, ಶಟಲ್ ಬ್ಯಾಡ್ಮಿಂಟನ್ ಟೆನಿಸ್, ಕಬಡ್ಡಿ, ಕೋಕೋ ಹೀಗೆ ಯಾವುದೇ ಕ್ರೀಡೆ ಇರಲಿ, ಪಂದ್ಯದ ನಿಯಮಗಳನ್ನು ತಿಳಿದು ನಿಮಗೆ ಅದು ಆಸಕ್ತಿಯನ್ನು ಕೆರಳಿಸಿದರೆ ಪಂದ್ಯಗಳನ್ನು ವೀಕ್ಷಿಸುವಂತಹ ರೋಚಕತೆ ಮತ್ತೊಂದಿಲ್ಲ. ಹೆಚ್ಚು ಕಡಿಮೆ ವಾರ ಹದಿನೈದು ದಿನಗಳಿಗೊಮ್ಮೆ ನಡೆಯುವ ಬಿ ಡಬ್ಲ್ಯು ಎಫ್ ಶಟಲ್ ಬ್ಯಾಡ್ಮಿಂಟನ್ ನಲ್ಲಿ ಪಂದ್ಯಾವಳಿಗಳಲ್ಲಿ ಪಿ ವಿ ಸಿಂದು, ಶ್ರೀಕಾಂತ್, ಸಾಯಿ ಪ್ರಣೀತ್, ರಂಕಿ ರೆಡ್ಡಿ, ಚಿರಾಗ್ ಶೆಟ್ಟಿ ಮುಂತಾದವರು ವಿಶ್ವ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಸಮಿಫೈನಲ್ ಕೆಲವೊಮ್ಮೆ ಫೈನಲ್ಗೆ ಬಂದು ಕುತೂಹಲ ಮೂಡಿಸುವುದು ಉಂಟು.

ವಿಶ್ವದ ಶ್ರೀಮಂತ ಕ್ರೀಡೆಗಳ ಒಂದಾದ ಎಫ್1 ಕಾರ್ ರೇಸ್ ನಲ್ಲಿ ಇನ್ನೂ ಮುಗಿಯಲು ಮೂರು ರೇಸ್ ಇರುವಂತೆ ಕಳೆದ ಬಾರಿಯ ಚಾಂಪಿಯನ್ ಹ್ಯಾಮಿಲ್ಟನ್ ಮತ್ತು ಮತ್ತು ವೇಟರ್ಫನ್ ನಡುವೆ ಪ್ರಬಲ ಪೈಪೋಟಿ ನಡೆಯುವುದರ ಜೊತೆಗೆ ಕಾರಿನ ತಯಾರಕರಾದ ಮರ್ಸಿಡಿಸ್ ಮತ್ತು ರೆಡ್ಬುಲ್ ಗಳ ನಡುವೆ ಚಾಂಪಿಯನ್ ಕನ್ಸ್ಟ್ರಕ್ಟರ್ ಚಾಂಪಿಯನ್ ಮಟ್ಟಕ್ಕೆ ಪೈಪೋಟಿ ನಡೆದಿದೆ.

ಇನ್ನು ಜನಪ್ರಿಯ ಕ್ರೀಡೆ ಪುಟ್ಬಾಲ್ ನಲ್ಲಿ ಮುಂದಿನ ವರ್ಷ ನಡೆಯಲಿರುವ ವರ್ಲ್ಡ್ ಕಪ್ ಗಾಗಿ ಯೂರೋಪಿಯನ್ ತಂಡಗಳ ಕ್ವಾಲಿಫಿಕೇಶನ್ ಗಾಗಿ ನಡೆದ ಪಂದ್ಯದಲ್ಲಿ ಚಿಕ್ಕ ರಾಷ್ಟ್ರ ಸರ್ಬಿಯಾ ತಂಡ ಪೋರ್ಚುಗಲ್ ವಿರುದ್ಧ ಜಯ ಪಡೆದು ಅರ್ಹತೆ ಪಡೆದ ಸಂದರ್ಭ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಸರ್ಬಿಯಾದ ಜೋಕೋವಿಕ್ ಅಪರಾತ್ರಿ ಹೋಟೆಲ್ ನ ಕಿಟಕಿಯ ಬಾಗಿಲು ತೆಗೆದು ಊರಿಗೆ ಕೇಳುವಂತೆ ಜೋರಾಗಿ ಕಿರುಚಿ ಕುಪ್ಪಳಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ಕ್ರೀಡಾಸಕ್ತಿ ಹೊಂದಿರುವ ಎಲ್ಲರಲ್ಲೂ ತಮ್ಮ ಆಸಕ್ತಿಯ ಕ್ರೀಡಾ ತಂಡಗಳು ಇಲ್ಲವೇ ಕ್ರೀಡಾಪಟುಗಳು ಪಂದ್ಯದಲ್ಲಿ ಹಾಡುವಾಗ ಪಂದ್ಯದ ಏರಿಳಿತಗಳ ಸಂದರ್ಭದಲ್ಲಿ ವೀಕ್ಷಕರಲ್ಲಿ ಉಂಟಾಗುವ ಉನ್ಮಾದ, ಕಾತರತೆ, ಉದ್ವೇಗ, ಕೌತುಕ, ಗೆದ್ದಾಗ ಮೂಡುವ ತಕ್ಷಣದ ಸಂಭ್ರಮ ಸೋತಾಗ ಒಡಮೂಡುವ ತಕ್ಷಣದ ನಿರಾಸೆ, ಆಕ್ರೋಶ ಅವುಗಳನ್ನು ಅನುಭವಿಸಿಯೇ ತೀರಬೇಕು. ಇಂತಹ ಅನುಭವವನ್ನು ಒಟ್ಟಿಗೆ ತಂದದ್ದು ಕಳೆದ ವಾರ ಮುಕ್ತಾಯವಾದ ಸಯ್ಯದ್ ಮುಸ್ತಾಕ್ ಅಲಿ ಟ್ವೆಂಟಿ-20 ಪಂದ್ಯಗಳು. ಕರ್ನಾಟಕ ಆಡಿದ ಆರಂಭದಿಂದ ಅಂತ್ಯದವರೆಗಿನ ಎಲ್ಲ ಪಂದ್ಯಗಳು ರೋಚಕತೆಯಿಂದ ಕೂಡಿದ್ದದ್ದು ಪಂದ್ಯಾವಳಿಯ ವಿಶೇಷ. 

ದೇಶಿಯ ಕ್ರಿಕೆಟ್ನಲ್ಲಿ ಮೊದಲಿನಿಂದಲೂ ಮುಂಬೈ ಮತ್ತು ದೆಹಲಿ ತಮ್ಮ ಪಾ ರಮ್ಯ ಮೆರೆದಿದ್ದವು. ಕಳೆದ 70 80 90 ರ ದಶಕದಲ್ಲಿ ದೇಶೀಯ ಕ್ರಿಕೆಟ್ ಎಂದರೆ ಕೇವಲ ರಣಜಿ ಟ್ರೋಫಿ ಪಂದ್ಯಗಳು ಮಾತ್ರ. ದುಲೀಪ್ ಟ್ರೋಫಿ ವಲಯ ಮಟ್ಟದಲ್ಲಿ ನಡೆಯುತ್ತಿತ್ತು. ರಣಜಿ ಪಂದ್ಯಗಳು ಆಗ ದೇಶೀಯ ಮಟ್ಟದಲ್ಲಿ ಹೆಚ್ಚು ಆಸಕ್ತಿ ಮೂಡಿಸಲು ಕಾರಣ ರಾಜ್ಯ ರಾಜ್ಯಗಳ ನಡುವೆ ನಡೆಯುತ್ತಿದ್ದ ಪೈಪೋಟಿ.

ಇತಿಹಾಸದ ಪುಟವನ್ನು ತಿರುವಿ ಹಾಕಿದರೆ ಅದರಲ್ಲಿ ಮುಂಬೈನ ಹೆಜ್ಜೆಗಳೇ ಹೆಚ್ಚು. ಆದರೂ ಇವುಗಳ ನಡುವೆ ಕೆಲವೊಮ್ಮೆ ಕರ್ನಾಟಕ ತನ್ನ ಛಾಪು ಮೂಡಿಸಿದೆ ಕಳೆದ ಹತ್ತು ವರ್ಷಗಳಲ್ಲಿ 2 ರಣಜಿ ಟ್ರೋಫಿ, 2 ಇರಾನಿ ಕಪ್, 4 ವಿಜಯ್ ಹಜಾರೆ ಟ್ರೋಫಿ ಮತ್ತು 2 ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಗಳನ್ನು ಗೆದ್ದಿರುವ ಕರ್ನಾಟಕ ಈ ದಶಕದ (2010-19) ಅತ್ಯಂತ ಪ್ರಬಲ ದೇಶೀಯ ಕ್ರಿಕೆಟ್ ತಂಡವಾಗಿದೆ. ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಶ್ರೀನಾಥ್ ಅರವಿಂದ್, ರಾಬಿನ್ ಉತ್ತಪ್ಪ ಮತ್ತು ಸಿಎಂ ಗೌತಮ್ ಅವರಂತಹ ಸ್ಥಾಪಿತ ಆಟಗಾರರ ಸಮ್ಮುಖದಲ್ಲಿ ಕೆಎಲ್ ರಾಹುಲ್, ಮನೀಶ್ ಪಾಂಡೆ, ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಅವರಂತಹ ಹಲವಾರು ಯುವ ಆಟಗಾರರು ಹೊರಹೊಮ್ಮಿರುವುದು ಇದಕ್ಕೆ ಕಾರಣವಾಗಿದೆ.

90 ರ ದಶಕದಲ್ಲಿ, ಕರ್ನಾಟಕವು ಮುಂಬೈ ಜೊತೆಗೆ ಪ್ರಬಲವಾಗಿತ್ತು, 1995/96, 1998/99 ಮತ್ತು 1997/98 ಋತುಗಳಲ್ಲಿ ರಣಜಿ ಟ್ರೋಫಿಗಳನ್ನು ಗೆದ್ದು, ಕ್ರಮವಾಗಿ ತಮಿಳುನಾಡು, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ವಿರುದ್ಧ ಫೈನಲ್‌ನಲ್ಲಿ ಗೆದ್ದಿತು. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ, ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್ ಮತ್ತು ದೊಡ್ಡ ಗಣೇಶ್ ಅವರಂತಹ ಆಟಗಾರರು ದೇಶವನ್ನು ಪ್ರತಿನಿಧಿಸುವ ಮೂಲಕ ರಣಜಿ ಟ್ರೋಫಿಯಲ್ಲಿ ಈ ಪ್ರಬಲ ಓಟಕ್ಕೆ ಕಾರಣರಾದರು .

ಅದಕ್ಕೂ ಮೊದಲು, ಇಎಎಸ್ ಪ್ರಸನ್ನ, ಭಾಗವತ್ ಚಂದ್ರಶೇಖರ್, ಗುಂಡಪ್ಪ ವಿಶ್ವನಾಥ್, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್, ರಘುರಾಮ್ ಭಟ್ ಮತ್ತು ಸೈಯದ್ ಕಿರ್ಮಾನಿ ಅವರ ತಂಡವು 1973-82 ರ ನಡುವೆ 10 ವರ್ಷಗಳ ಅವಧಿಯಲ್ಲಿ ಕರ್ನಾಟಕವನ್ನು 3 ರಣಜಿ ಪ್ರಶಸ್ತಿಗಳಿಗೆ (ಮತ್ತು 3 ರನ್ನರ್ ಅಪ್ ಪ್ರಶಸ್ತಿ) ಮುನ್ನಡೆಸಿತು.

ಪ್ರತಿ ಬಾರಿಯೂ ತನ್ನ ಸಮರ್ಥ ತಂಡವನ್ನು ಮೈದಾನಕ್ಕಿ ಸುತ್ತಿದ್ದ ಕರ್ನಾಟಕ ಈ ಬಾರಿ ಪ್ರಮುಖ ಆಟಗಾರರಿಲ್ಲದೆ ಆಡಬೇಕಾದ ಪರಿಸ್ಥಿತಿ. ಅಲ್ಲಿ ಅನುಭವಿ ಆಟಗಾರರು ಅಂತ ಇದ್ದವರು ಮನೀಶ್ ಪಾಂಡೆ ಮತ್ತು ಕರುಣ್ನಾಯರ್ ಮಾತ್ರ. ಉಳಿದಂತೆ ಕಾರ್ಯಪ್ಪ ಮತ್ತು ಸುಚಿತ್ ಇದ್ದರೂ ಇವರು ಈ ಬಾರಿಯ ಐಪಿಎಲ್ ನಲ್ಲಿ ಅಲ್ಲೊಂದು ಇಲ್ಲೊಂದು ಪಂದ್ಯಗಳನ್ನಾಡಿದರು ಅಷ್ಟೇ. ಆದರೆ ಮನೀಶ್ ಪಾಂಡೆ ನೇತೃತ್ವದಲ್ಲಿ ಎರಡು ಬಾರಿ ಮುಸ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಪ್ರಶಸ್ತಿಗಳನ್ನು ಗೆದ್ದಿದ್ದರಿಂದ ಅವರ ನೇತೃತ್ವದ ಬಗ್ಗೆ ಒಂದು ಭರವಸೆಯಂತೂ ಇತ್ತು.

ಪ್ರಮುಖ ತಂಡಗಳು ಐದು ಗುಂಪುಗಳಲ್ಲಿ ಮತ್ತು ಪ್ಲೇಟ್ ಗುಂಪಿನಲ್ಲಿ ಆಡುವ ಇನ್ನುಳಿದ ತಂಡಗಳಲ್ಲಿ ಒಟ್ಟು ಕ್ವಾರ್ಟರ್ ಫೈನಲ್   ಆಡುವ ಎಂಟು ತಂಡಗಳಾಗಿ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಆರಂಭದ ಪಂದ್ಯದಲ್ಲಿ ಕರ್ನಾಟಕ ಮುಂಬೈ ವಿರುದ್ಧ ಜಯವನ್ನೂ ರೋಮಾಂಚಕ ಪಂದ್ಯದಲ್ಲಿ ಸಾಧಿಸಿತು. ಗ್ರೂಪ್ ಹಂತದ ಉಳಿದ ಪಂದ್ಯಗಳಲ್ಲಿ ಬಹಳ ಕಡಿಮೆ ಅಂತರದಲ್ಲಿ ಜಯಸಾಧಿಸಿದ ರಿಂದ ಮತ್ತು ಬಂಗಾಳದ ವಿರುದ್ಧ ಸೋಲನುಭವಿಸಿದ್ದ ಕಾರಣ ಕ್ವಾರ್ಟರ್ ಫೈನಲ್ ಏರುವ ತೀವ್ರ ಪೈಪೋಟಿಯ ಸಂದರ್ಭದಲ್ಲಿ ಪಾಯಿಂಟ್ ಹಾಗೂ ರನ್ರೆಟ್ ಆಧಾರದ ಮೇಲೆ ಅಂತೂ ಇಂತೂ ಫ್ರೀ ಕ್ವಾರ್ಟರ್ ಪಟ್ಟಕ್ಕೇರಿತು.

 ಅಲ್ಲಿವರೆಗೂ ಪಂದ್ಯಗಳು ಗೌಹಾತಿಯಲ್ಲಿ ನಡೆದ ಕಾರಣ ಪಂದ್ಯವನ್ನು ನೇರಪ್ರಸಾರದಲ್ಲಿ ನೋಡಲಾಗಿರಲಿಲ್ಲ. ಮುಂದೆ ದೆಹಲಿಯಲ್ಲಿ ನಂತರದ ಪಂದ್ಯಗಳು ನಡೆದು ಸೌರಾಷ್ಟ್ರ ಪಶ್ಚಿಮಬಂಗಾಳ ಮುಂದೆ ವಿದರ್ಭದ ಮೇಲೆ ಅಂತಿಮವಾಗಿ ತಮಿಳುನಾಡಿನ ವಿರುದ್ಧ ಕರ್ನಾಟಕ ನಡೆಸಿದ ಹೋರಾಟ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು.

ಸೌರಾಷ್ಟ್ರದ ವಿರುದ್ಧ ನಡೆದ ಪಂದ್ಯದಲ್ಲಿ ಸೌರಾಷ್ಟ್ರ 145 ರನ್ ಮಾಡಿ 146ರ ಗುರಿ ನಿಗದಿ ಮಾಡಿದಾಗ ಕರ್ನಾಟಕಕ್ಕೆ ಸುಲಭದ ತುತ್ತು ಆಗಬಹುದೇನೋ ಅನ್ನಿಸಿತು. ಆದರೆ ಮನೀಶ್ ಪಾಂಡೆ, ಕರುಣ್ ನಾಯರ್ ಸೇರಿದಂತೆ ಬಹುತೇಕ ಆಟಗಾರರು ಪಿಚ್ನಿಂದ ಪೆವಿಲಿಯನ್ಗೆ ಪೆರೇಡ್ ನಡೆಸಿದಾಗ ಸೋತು ಹೋಯಿತೇನೋ ಅಂದುಕೊಳ್ಳುವಷ್ಟರಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಪದ್ಯ ಗೆಲ್ಲಿಸಿದ್ದು ದೇಶಿಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಮನೋಹರ್.

ಕೊನೆಯ ಒಂದು ಚೆಂಡಿರುವಂತೆ ಸಿಕ್ಸರ್ ಎತ್ತಿ ಮ್ಯಾಚ್ ಗೆಲ್ಲಿಸಿದ್ದು ರೋಮಾಂಚಕಾರಿ ಅನುಭವ. ಕ್ವಾರ್ಟರ್ ಫೈನಲ್ನಲ್ಲಿ ಎದುರಾದದ್ದು ಬಂಗಾಳ. ಗ್ರೂಪ್ ಹಂತದಲ್ಲಿ ಕರ್ನಾಟಕ ಅವರೆದುರಿಗೆ ಸೋತಿತ್ತು ಸಹ. ಆದರೆ ಕರ್ನಾಟಕ ಮೊದಲು ಬ್ಯಾಟ್ ಮಾಡಿ 160 ರನ್ ಗಳಿಸಿ ಎದುರಾಳಿಯ ವಿಕೆಟುಗಳನ್ನು ಆರಂಭದಲ್ಲಿ ತೆಗೆದಾಗ ಪಂದ್ಯ ಸುಲಭವಾಗಿ ಗೆಲ್ಲಬಹುದೆಂದು ಅನ್ನಿಸಿದ್ದರೂ ಕೊನೆಗೆ ಬಂದ ಆಟಗಾರರು ಹೊಡಿಬಡಿ ತಂತ್ರವನ್ನು ಅನುಸರಿಸಿ ಪಂದ್ಯವನ್ನು ಕೊನೆಯ ಬಾಲಿನವರೆಗೂ ಕೊಂಡೊಯ್ದು ಕೊನೆಯ ಬಾಳಿನಲ್ಲಿ ಗೆಲ್ಲಲು 1ರಂದು ಬೇಕಾಗಿದ್ದಾಗ ಮನೀಶ್ ಪಾಂಡೆ ಎಸೆದ ಮಿಂಚಿನ ಎಸೆತ ರನೌಟ್ ಗೆ ಕಾರಣವಾಗಿ ಪಂದ್ಯ ಸೂಪರ್ ಓವರ್ಗೆ ಹೋಯಿತು. ಮತ್ತೆ ಮನೀಶ್ ಪಾಂಡೆ ಮತ್ತು ಕಾರ್ಯಪ್ಪ ಅಮೋಘ ಆಟವಾಡಿ ಪಂದ್ಯವನ್ನು ಗೆಲ್ಲಿಸಿದರು.

ಸೆಮಿಫೈನಲ್ ನಲ್ಲಿ ಭಾರತದ ವಿದರ್ಭದ ವಿರುದ್ಧದ ಪಂದ್ಯದಲ್ಲಿ ಮನೀಶ್ ಪಾಂಡೆ ಮತ್ತು ಕದಮ್ ಆರಂಭಿಕ ಜೊತೆಯಾಟದಲ್ಲಿ ನೂರಕ್ಕೂ ಹೆಚ್ಚು ರನ್ ಸಂಗ್ರಹಿಸಿದಾಗ  ಕರ್ನಾಟಕಕ್ಕೆ ಸುಲಭ ತುತ್ತಾಗಬಹುದು ಏನೊ ಅನ್ನಿಸಿತ್ತು. ಆದರೆ ವೇಗದ ಬೌಲರ್ ಮಾರ್ಕಂಡೆ 4 ಬಾಲಿಗೆ ನಾಲ್ಕು ವಿಕೆಟುಗಳನ್ನು ಗಳಿಸಿ ದಾಖಲೆ ನಿರ್ಮಿಸಿ 176 ರನ್ನಿಗೆ ಬೇಲಿ ಹಾಕಿದರು. ಕರ್ನಾಟಕದ ಬೆನ್ನತ್ತಿದ ವಿಧರ್ಬ ಕೊನೆಯವರೆಗೂ ಹೋರಾಡಿ 172 ರನ್ನುಗಳಿಗೆಪಂದ್ಯ ಮುಕ್ತಾಯಗೊಳಿಸಿದಾಗ ಕರ್ನಾಟಕಕ್ಕೆ ನಾಲ್ಕು ರನ್ನುಗಳ ವಿಜಯ.

ಟೂರ್ನಿಯ ಫೈನಲ್ ನಲ್ಲಿ ಎದುರಾದದ್ದು ಸಾಂಪ್ರದಾಯಿಕ ಎದುರಾಳಿ ತಮಿಳುನಾಡು. ಈ ಪಂದ್ಯವಂತೂ ಒಮ್ಮೆ ಆಕಡೆ ಒಮ್ಮೆ ಈ ಕಡೆ ಹೊ ಯ್ದಾಡಿ ಅಂತಿಮವಾಗಿ ತಮಿಳುನಾಡಿನ ಶಾರುಖ್ ಖಾನ್ ಹೊಡೆದ ಸಿಕ್ಸರ್ ನಿಂದ ಕರ್ನಾಟಕ ಸೋಲನ್ನಪ್ಪಿತು. ಎಂಟು ದಿನಗಳ ಅಂತರದಲ್ಲಿ ನಡೆದ ಈ ನಾಲ್ಕು ಪಂದ್ಯಗಳು ರೋಚಕತೆಯಲ್ಲಿ ಮೈಮರೆಸಿ ಸೀಟಿನ ತುದಿಗೆ ಕೂರಿಸಿ ಮೈನವಿರೇಳಿಸಿದ್ದಂತು ನಿಜ. 

‍ಲೇಖಕರು Admin

December 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: