ಅಬ್ಬಕ್ಕ ,ಶಿವರಾಮ ಕಾರಂತರು ಮತ್ತು ಮುಗಿಯದ ಸಂಕಥನ..

ಇಂದು ಶಿವರಾಮ ಕಾರಂತರ ಜನ್ಮ ದಿನ.

ಅದರ ಅಂಗವಾಗಿ ಈ ಹಿಂದೆ ಹಿರಿಯ ವಿದ್ವಾಂಸರಾದ ಬಿ ಎ ವಿವೇಕ ರೈ ಅವರು ಜರ್ಮನಿಯಲ್ಲಿದ್ದಾಗ ಹಂಚಿಕೊಂಡ ನೆನಪುಗಳು ಇಲ್ಲಿವೆ.

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ-

೧೯೯೭.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳು ಸಂದ ನೆನಪಿಗಾಗಿ ದೇಶದಲ್ಲೆಡೆ ಸ್ವಾತಂತ್ರ್ಯದ ಸುವರ್ಣ ಸಂಭ್ರಮ ಆಚರಿಸುತ್ತಿದ್ದಾಗ ನಾನು ಮಂಗಳೂರನ್ನು ಕೇಂದ್ರವಾಗಿ ಉಳ್ಳ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದೆ. ನಮ್ಮ ತುಳು ಸಾಹಿತ್ಯ ಆಕಾಡೆಮಿ ಭಾರತದ ಸ್ವಾತಂತ್ರ್ಯದ ಸುವರ್ಣ ಆಚರಣೆಯನ್ನು ಹೇಗೆ ಆಚರಿಸಬೇಕು ಎಂದು ನಮ್ಮ ಸದಸ್ಯರೊಡನೆ ಸಮಾಲೋಚಿಸುತ್ತಿದ್ದಾಗ ನಮ್ಮ ನೆನಪಿಗೆ ಬಂದವಳು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಹೆಮ್ಮೆಗೆ ಪಾತ್ರವಾಗಿದ್ದ, ಪೋರ್ಚುಗೀಸರ  ವಿರುದ್ಧ ಐನೂರು ವರ್ಷಗಳ ಹಿಂದೆಯೇ ಹೋರಾಡಿದ ತುಳುನಾಡಿನ ಉಲ್ಲಾಳ ರಾಣಿ ಅಬ್ಬಕ್ಕ ದೇವಿ.

ನಮ್ಮ ಅಕಾಡೆಮಿಯ ಹಿರಿಯ ಸದಸ್ಯರಾಗಿದ್ದ, ಕನ್ನಡ -ತುಳು ಭಾಷೆಗಳ ಹಿರಿಯ ಸಾಹಿತಿ ಸಂಶೋಧಕ, ಪ್ರಾಧ್ಯಾಪಕ ಅಮೃತ ಸೋಮೇಶ್ವರ ಅವರು ಈ ಆಲೋಚನೆಯನ್ನು ಸಾಕಾರಗೊಳಿಸುವ ಭರವಸೆ ಕೊಟ್ಟರು. ಅಮೃತರು ಉಲ್ಲಾಳ -ಸೋಮೇಶ್ವರ ನಿವಾಸಿ. ಅಬ್ಬಕ್ಕಳ ಬಗ್ಗೆ ಬಹಳಷ್ಟು ವಿಷಯ ತಿಳಿದುಕೊಂಡವರು. ಹಾಗಾಗಿ ಅವರನ್ನೇ ಈ ಯೋಜನೆಯ ಸದಸ್ಯ ಸಂಚಾಲಕರನ್ನಾಗಿ ಮಾಡಿದೆವು. ಅವರ ಸಲಹೆಯಂತೆ ಉಲ್ಲಾಳ -ಸೋಮೇಶ್ವರ ಪರಿಸರದ ನಾಗರಿಕರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿ ಎಲ್ಲ ಜನವರ್ಗದವರನ್ನು ಒಂದುಗೂಡಿಸಿ, ಅಬ್ಬಕ್ಕಳ ಹೆಸರಿನಲ್ಲಿ ಹೊಸ ಪರಿಸರವೊಂದನ್ನು ರೂಪಿಸಬೇಕು ಎನ್ನುವುದು ನಮ್ಮ ಕನಸಾಗಿತ್ತು.

ಅಬ್ಬಕ್ಕ ಜೈನ ಧರ್ಮದ  ಚೌಟ ಅರಸುಮನೆತನದಲ್ಲಿ ಜನಿಸಿದವಳು. ಆದರೆ ತನ್ನದೇ ಧರ್ಮದ ತನ್ನ ಗಂಡ ಬಂಗರಸನು ಶತ್ರುಗಳ ಜೊತೆಗೆ ಸೇರಿಕೊಂಡಾಗ ಗಂಡನನ್ನು ತ್ಯಜಿಸಿ ಅವನೊಡನೆ ಯುದ್ಧಮಾಡಿದವಳು. ತನ್ನ ನಾಡನ್ನು ಪೋರ್ಚುಗೀಸರಿಂದ  ರಕ್ಷಿಸುವುದಕ್ಕಾಗಿ ಕೇರಳದ ಮುಸ್ಲಿಂ ರಾಜರ ನೆರವು ಪಡೆದವಳು. ಜಾಮೊರಿನ್ ದೊರೆಯ ಸೇನಾಧಿಪತಿ ಕುಟ್ಟಿ ಪೋಕರೆ ಅವಳ ನಂಬಿಕೆಯ ಸೇನಾಧಿಪತಿಯಾಗಿ ಪೋರ್ಚುಗೀಸರ  ವಿರುದ್ಧ ಹೋರಾಡಿದವನು. ಕೆಳದಿಯ ಅರಸ ವೆಂಕಟಪ್ಪ ನಾಯಕನ ನೆರವನ್ನು ಆಕೆ ಪಡೆದಳು. ಸ್ವಾತಂತ್ರ್ಯಕ್ಕಾಗಿ ಅಬ್ಬಕ್ಕ ಎಲ್ಲ ಜಾತಿ ಧರ್ಮದವರ ಒಂದು ಸ್ಥಳೀಯ ಒಕ್ಕೂಟವನ್ನು ರಚಿಸಿಕೊಂಡಳು. ಹೀಗೆ ಅಬ್ಬಕ್ಕ ಸರ್ವಧರ್ಮಗಳ ಸಮನ್ವಯದ ತತ್ವದ ಆಧಾರದ ಮೇಲೆ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ನಿಜ ಮಾಡಲು ಹೋರಾಡಿದವಳು .

ಉಲ್ಲಾಳ-ಸೋಮೇಶ್ವರ ಪರಿಸರವು ಇಂತಹ ಬಹುಸಂಸ್ಕೃತಿಗಳ ಅನನ್ಯತೆ ಉಳ್ಳದ್ದು. ಸೋಮನಾಥೇಶ್ವರ ದೇವಾಲಯ, ಅಳೆಕಲ ಮಸೀದಿ, ಸಯ್ಯದ್ ಮದನಿ ದರ್ಗಾ, ಆದಿನಾಥ-ಪಾರ್ಶ್ವನಾಥ ತೀರ್ಥಂಕರ ಬಸದಿ, ಉಳಿಯ ಪಿಲಿ ಚಾಮುಂಡಿ, ಧರ್ಮ ಅರಸು, ರಾಜ ಗುಳಿಗ, ಕೋರ್ದಬ್ಬು ದೈವಸ್ಥಾನಗಳು, ಅಡ್ಕ ಮತ್ತು ಚೀರುಂಬ ಭಗವತಿ ಸ್ಥಾನಗಳು ಇತ್ಯಾದಿ. ಮೊಗವೀರರು ಮತ್ತು ಬ್ಯಾರಿಗಳು ಒಟ್ಟಾಗಿ ಅಬ್ಬಕ್ಕಳ ಸೈನ್ಯದಲ್ಲಿ ಒಂದು ಕುಟುಂಬದಂತೆ ಇದ್ದ ವಿವರಗಳು ದೊರೆಯುತ್ತವೆ. ಇಂತಹ ಉಲ್ಲಾಳ ಪರಿಸರವು ಆಧುನಿಕ ಕಾಲದಲ್ಲಿ ರಾಜಕೀಯ ಕಾರಣಗಳಿಗಾಗಿ ಹಿಂದೂ-ಮುಸ್ಲಿಂ ಕೋಮು ಗಲಭೆಗಳಿಗೆ ಕೆಲವೊಮ್ಮೆ ಆಡುಂಬೊಲ ಆಗಿದ್ದ ನಿದರ್ಶನಗಳೂ ಇವೆ. ಹಾಗಾಗಿ ನಮ್ಮ ಅಬ್ಬಕ್ಕ ಉತ್ಸವದ ಆಚರಣೆಯ ಉದ್ದೇಶಗಳಲ್ಲಿ ಉಲ್ಲಾಳ ಪರಿಸರದಲ್ಲಿ ಮತ್ತು ಆ ಮೂಲಕ ಕರಾವಳಿಯಲ್ಲಿ  ಧಾರ್ಮಿಕ ಸಾಮರಸ್ಯ ತರಬೇಕು ಎನ್ನುವ ಹಂಬಲ ಮುಖ್ಯವಾಗಿತ್ತು.

ಮಂಗಳೂರು ಬಳಿಯ ತೊಕ್ಕೊಟ್ಟು ವಿನಲ್ಲಿ  ನಮ್ಮ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಸ್ಥಳೀಯರ ಒಂದು ಸಭೆ ಕರೆದೆವು. ಆಗ ಉಲ್ಲಾಳ ಶಾಸಕರಾಗಿದ್ದ ಬಿಜೆಪಿಯ ಜಯರಾಮ ಶೆಟ್ಟಿ, ಮಾಜಿ ಶಾಸಕ ಕವಿ ಕಾಂಗ್ರೆಸ್ಸಿನ ಬಿ.ಎಂ.ಇದಿನಬ್ಬ, ಸ್ಥಳೀಯ ಯುವ ಉದ್ಯಮಿ-ಸಂಘಟಕ ದಿನಕರ ಉಳ್ಳಾಲ್, ಸಯ್ಯದ್ ಮದನಿ ದರ್ಗಾದ ಯು.ಕೆ.ಇಬ್ರಾಹಿಮ್, ಸ್ಥಳೀಯ ಸೈಂಟ್ ಸೆಬಾಸ್ಟಿಯನ್ ಚರ್ಚಿನ ಫಾದರ್ ಮೊನಿಸ್, ಮೊಗವೀರ ಸಂಘದ ಸದಾನಂದ ಬಂಗೇರ, ಯುವ ಲೇಖಕ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ, ಬೇರೆ ಬೇರೆ ಕ್ಷೇತ್ರಗಳ ಮಹಿಳೆಯರು  ಲಲಿತಾ ಸುಂದರ್, ಸುವಾಸಿನಿ, ಮಂಜುಳಾ, ಬೆನೆಡಿಕ್ಟ್, ಯುವಕರಾದ ರಹಿಮ್ ಉಚ್ಚಿಲ್, ಆರ್ ಕೆ ಉಳ್ಳಾಲ್, ಪುಷ್ಕಳ ಕುಮಾರ್, ಕೆ.ಆರ್.ಚಂದ್ರ, ಮೆಲ್ವಿನ್, ಜಲಂಧರ ರೈ ಹೀಗೆ ಎಲ್ಲ ಪಕ್ಷ ಧರ್ಮ ವೃತ್ತಿ ತಲೆಮಾರುಗಳ ಪ್ರತಿನಿಧಿಗಳ ಸಭೆ  ನಡೆಯಿತು. ಅಕಾಡೆಮಿ ವತಿಯಿಂದ ನನ್ನ ಜೊತೆಗೆ ಅಮೃತ ಸೋಮೇಶ್ವರರು, ಸದಸ್ಯೆ ಲೀಲಾವತಿ, ರಿಜಿಸ್ಟ್ರಾರ್ ಪಾಲ್ತಾಡಿ ರಾಮಕೃಷ್ಣ ಆಚಾರ್  ಇದ್ದರು.

ಮೊದಲ ಅಬ್ಬಕ್ಕ ಉತ್ಸವ ಉಳ್ಳಾಲದ ಭಾರತ ಹೈಸ್ಕೂಲಿನ ಹೊರಾಂಗಣದಲ್ಲಿ -೧೯೯೭ರ ನವಂಬರ ಎಂಟು ಮತ್ತು ಒಂಬತ್ತರಂದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿವರಾಮ ಕಾರಂತರನ್ನು ಆಹ್ವಾನಿಸಲು ಸಾಲಿಗ್ರಾಮದ ಅವರ ಮನೆ ‘ಮಾನಸ’ಕ್ಕೆ ಹೋಗಿದ್ದೆ.

ಉದ್ಘಾಟನೆಯ ಕಾರ್ಯಕ್ರಮದಲ್ಲಿ ಅಬ್ಬಕ್ಕ ಕುರಿತು ನಮ್ಮ ಅಕಾಡೆಮಿ ಪ್ರಕಟಿಸಿರುವ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲು ಅವರನ್ನು ಕೋರಿಕೊಂಡೆ. ’ನನಗೆ ತುಳು ಬರುವುದಿಲ್ಲವಲ್ಲಾ ? ನಿಮ್ಮ ತುಳು ಅಕಾಡೆಮಿಗೆ ಬಂದು ನಾನು ಏನು ಮಾತಾಡುವುದು?’ ಎಂದು ನಗುತ್ತಾ ಕೇಳಿದರು. ’ತಾವು ಸ್ವಾತಂತ್ರ್ಯದ ಬಗ್ಗೆ ತಮ್ಮ ಅನುಭವ ಮತ್ತು ಆಲೋಚನೆಯನ್ನು ನಮಗೆ ತಿಳಿಸಿ.ತಾವು ಬರಲೇಬೇಕು’ ಎಂದು ಒತ್ತಾಯಿಸಿದೆ. ನನ್ನ ಬಗೆಗಿನ ಅವರ ನಿಡುಗಾಲದ ವಾತ್ಸಲ್ಯದ ಕಾರಣದಿಂದ ಪ್ರೀತಿಯಿಂದ ಒಪ್ಪಿಕೊಂಡರು. ದಿನಾಂಕ, ಸಮಯ, ಸ್ಥಳದ ವಿವರಗಳನ್ನು ಅವರೇ ಬರೆದುಕೊಂಡರು.

ಕಾರ್ಯಕ್ರಮ ಆರಂಭ ನವಂಬರ ಎಂಟರ ಸಂಜೆ ೪.೧೫ಕ್ಕೆ. ನಾನು ಮೂರು ಗಂಟೆಗೆ ಚಪ್ಪರದಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ. ಕೆಲವು ಸಂಘಟಕರು ಬಿಟ್ಟರೆ ಬೇರೆ ಯಾರೂ ಬಂದಿರಲಿಲ್ಲ. ಅಷ್ಟು ಹೊತ್ತಿಗೆ ಅಲ್ಲಿಗೆ ಒಂದು ಕಾರು ಬಂತು. ನೋಡಿದರೆ ಕಾರಿನಿಂದ  ಕಾರಂತರು ಇಳಿಯುತ್ತಿದ್ದಾರೆ. ಅವರಿಗೆ ೯೫ ವರ್ಷ. ನನಗೆ ಗಾಬರಿ. ಕಾರ್ಯಕ್ರಮಕ್ಕೆ ಇನ್ನೂ ಒಂದು ಗಂಟೆ ಸಮಯ ಇದೆ. ನಾನು ವಿಷಯ ತಿಳಿಸಿ ಅವರಿಗೆ ವಿಶ್ರಾಂತಿಗೆ ಶಾಲೆಯಲ್ಲಿ ವ್ಯವಸ್ಥೆ ಮಾಡಲು ಹೊರಡುವಾಗ ಅಲ್ಲೇ ತಡೆದರು. ಹೊರಗೆ ಆಟದ ಬಯಲಿನಲ್ಲಿ ಒಂದು ಕುರ್ಚಿ ತರಿಸಿ ಕುಳಿತುಕೊಂಡರು.

ಶಾಲೆಯ ಮಕ್ಕಳು ಕಾರಂತರನ್ನು ಕಂಡು, ಓಡಿಕೊಂಡು ಬಂದು ಸುತ್ತುವರಿದರು. ಕಾರಂತರು ವಿರಾಮವಾಗಿ ಆ ಮಕ್ಕಳೊಡನೆ ಅವರಿಗೆ ಗೊತ್ತಿರುವ ಕತೆ ಪದ್ಯ ಗಾದೆ ಇತ್ಯಾದಿ ಹೇಳಲು ತಿಳಿಸಿದರು. ಮಕ್ಕಳ ಮನೆ ಕುಟುಂಬದ ವಿವರ ಕೇಳಿದರು. ಮಕ್ಕಳಿಗೆ ಸಂಭ್ರಮ. ನನಗೆ ಕುತೂಹಲ, ಬೆರಗು, ಸಂತಸ ಮತ್ತು ಆತಂಕ.

ಸುಮಾರು ಮುಕ್ಕಾಲು ಗಂಟೆ ಬಯಲಿನಲ್ಲಿ ಮಕ್ಕಳೊಡನೆ ಕಾಲ ಕಳೆದ ಕಾರಂತರು ಉದ್ಘಾಟನೆಯ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಆರ್ಥಿಕ ನೆಲೆಯಲ್ಲಿ ಕೂಡಾ ವಿಶ್ಲೇಷಿಸಿದರು. ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಹೋದದ್ದು ನಮ್ಮ ಹೋರಾಟದ ಕಾರಣಕ್ಕಾಗಿ ಮಾತ್ರ ಅಲ್ಲ, ಆರ್ಥಿಕವಾಗಿ ಅವರು ದುರ್ಬಲರಾಗತೊಡಗಿದ್ದರು ಎಂಬ ಹೊಸ ವಿವರಣೆಯನ್ನು ಕೊಟ್ಟು, ಸ್ವಾತಂತ್ರ್ಯದ ಬಗೆಗಿನ ಉನ್ಮಾದದ ಮಾತುಗಳ ಬೆಲೂನಿಗೆ ನಿಜದ ಸೂಜಿಯನ್ನು ಚುಚ್ಚಿದರು.

ಉದ್ಘಾಟನೆಯ ಕಾರ್ಯಕ್ರಮದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರು  ಮತ್ತು ಅವರ ಪತ್ನಿ ಶ್ರೀಮತಿ ಹೇಮಾವತಿ ಹೆಗ್ಗಡೆ ಅವರು ಭಾಗವಹಿಸಿ ಮಹಿಳೆಯರ ಸ್ವಾವಲಂಬನೆಯ ಕುರಿತು ಮುಖ್ಯ ಮಾತುಗಳನ್ನು ಆಡಿದರು.

ಆ ದಿನದ ಉದ್ಘಾಟನೆಯ ಕಾರ್ಯಕ್ರಮದ ಮೂರು ಫೋಟೋಗಳನ್ನು ಇಲ್ಲಿ ಕೊಟ್ಟಿದ್ದೇನೆ. ಶಿವರಾಮ ಕಾರಂತರು ಭಾಗವಹಿಸಿದ ಅವರ ಜೀವಮಾನದ ಕೊನೆಯ ಕಾರ್ಯಕ್ರಮಗಳಲ್ಲಿ ಅಬ್ಬಕ್ಕ ಉತ್ಸವ ಮಹತ್ವದ್ದು. ಅಬ್ಬಕ್ಕ ಉತ್ಸವ ಕಾರ್ಯಕ್ರಮ ನಡೆದದ್ದು ೧೯೯೭ರ ನವಂಬರ ಎಂಟರಂದು. ಕಾರಂತರು  ತೀರಿಕೊಂಡದ್ದು ಸರಿಯಾಗಿ ಒಂದು ತಿಂಗಳ ಬಳಿಕ ೧೯೯೭ರ  ದಶಂಬರ ಒಂಬತ್ತರಂದು.ಕಾರಂತರ ಬದುಕಿನ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಹುತೇಕ ಕೊನೆಯ ಅಪೂರ್ವ ಫೋಟೋಗಳು ಇಲ್ಲಿವೆ.

ಅಬ್ಬಕ್ಕ ಉತ್ಸವವನ್ನು ಮುಂದೆ ಅನೇಕ ಬಾರಿ  ಉಲ್ಲಾಳ ಅಬ್ಬಕ್ಕ ಉತ್ಸವ ಸಮಿತಿಯವರೇ ತಮ್ಮದೇ ಉತ್ಸಾಹ ಬದ್ಧತೆ ಮತ್ತು ಹಣದಿಂದ  ನಡೆಸಿಕೊಂಡು ಬಂದಿದ್ದಾರೆ. ಕಳೆದವಾರ ಸಪ್ಟಂಬರ ೧೭ರನ್ದು ‘ಅಬ್ಬಕ್ಕ ಸಂಕಥನ’ಎನ್ನುವ ಅಬ್ಬಕ್ಕ ಗಾಥೆಯ ಗ್ರಂಥ ಬಿಡುಗಡೆ ಮಂಗಳೂರಿನಲ್ಲಿ  ನಡೆಯಿತು. ಅಮೃತ ಸೋಮೇಶ್ವರ ಅವರು ಹಿರಿಯ ವಿದ್ವಾಂಸರಾದ ಎ.ವಿ.ನಾವಡ, ವಾಮನ ನಂದಾವರ ಅವರೊಂದಿಗೆ ಭಾಸ್ಕರ ರೈ ಕುಕ್ಕುವಳ್ಳಿ , ಬಿ,ಎಂ ರೋಹಿಣಿ, ಶೈಲಾ ಮುಂತಾದ  ತರುಣ ಸಂಶೋಧಕರ ನೆರವಿನಿಂದ ಸಿದ್ಧಪಡಿಸಿದ ಈ ಬೃಹತ್ ಮತ್ತು ಮಹತ್  ಗ್ರಂಥದ ಬಿಡುಗಡೆಯನ್ನು ರಂಗ ಕಲಾವಿದೆ ಡಾ.ಬಿ.ಜಯಶ್ರೀ ನೆರವೇರಿಸಿದರು.

ಹದಿಮೂರು ವರ್ಷಗಳ ಅಬ್ಬಕ್ಕ ಉತ್ಸವದ ಸಂಕಥನವು ೫೫೦ ವರ್ಷಗಳ ಅಬ್ಬಕ್ಕ ಇತಿಹಾಸದೊಡನೆ ಸೇರಿಕೊಳ್ಳುವಾಗ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಇನ್ನೂ ಜೀವಂತವಾಗಿವೆ. ಅಬ್ಬಕ್ಕ ಉತ್ಸವ ಸಮಿತಿಯ ಜಯರಾಮ ಶೆಟ್ಟಿ ಅವರು ಶಾಸಕರಾಗಿ  ಇರಲೀ ಇಲ್ಲದಿರಲಿ ಪ್ರಾಮಾಣಿಕವಾಗಿ ಅಬ್ಬಕ್ಕ ಸಂಬಂಧಿ ಕೆಲಸಗಳನ್ನು ಮಾಡಿಕೊಂಡು  ಬಂದಿದ್ದಾರೆ. ದಿನಕರ ಉಳ್ಳಾಲ್ ಅವರು ಅಬ್ಬಕ್ಕ ಸಂಕಥನದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು  ಪ್ರಾಂಜಲ ಮನಸ್ಸಿನಿಂದ ಮುನ್ನಡೆಸಿದ್ದಾರೆ. ಭಾಸ್ಕರ ರೈಅವರಂತಹ ಯುವಕರು ಕೆಲವರಾದರೂ ಹಿಂದಿನ ಉದ್ದೇಶಗಳನ್ನು ನೆನಪಿಟ್ಟುಕೊಂಡು ದುಡಿದಿದ್ದಾರೆ. ಆದರೆ ಯುವ ಪೀಳಿಗೆ ಏನು ಕಲಿತಿದೆ ಅಬ್ಬಕ್ಕಳಿಂದ, ನಮ್ಮ ಆಳುವವರು ಎಷ್ಟು ನಿಜ ಮಾಡಿದ್ದಾರೆ ಅಬ್ಬಕ್ಕಳ ಆದರ್ಶಗಳನ್ನು ಎನ್ನುವ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ .

ಕರಾವಳಿಯಲ್ಲಿ ಮತೀಯ ಸಾಮರಸ್ಯ, ಇಲ್ಲಿನ ದುಡಿಯುವ ವರ್ಗದವರಿಗೆ ಆರ್ಥಿಕ ಸ್ವಾವಲಂಬನೆ, ಮೀನುಗಾರರಿಗೆಎಲ್ಲ ರೀತಿಯ  ರಕ್ಷಣೆ, ಇಲ್ಲಿನ ಹೆಣ್ಣು ಮಕ್ಕಳಿಗೆ ಸ್ವಾಭಿಮಾನದಿಂದ ಇಲ್ಲೇ ಬದುಕುವ ಹಕ್ಕು -ಇವೆಲ್ಲ ಸಾಧ್ಯ ಆದಾಗ ಮತ್ತು ಸಾಧ್ಯಮಾಡಲು ಎಲ್ಲರು ಒಟ್ಟಾಗಿ ಕೆಲಸಮಾಡಿದಾಗ ಎಲ್ಲ ಕಾಲದ ನಮ್ಮ ಅಕ್ಕ ಅಬ್ಬಕ್ಕ ದೋಣಿ ಏರಿ ದೊಂದಿ ಹಿಡಿದು  ನಮ್ಮನ್ನು ಸಂಕಷ್ಟದ ಕಡಲಿನಿಂದ ಪಾರುಮಾಡಲು ಖಂಡಿತ ಬರುತ್ತಾಳೆ.

 

‍ಲೇಖಕರು avadhi

October 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: