ಪ್ರವೀಣ ಹಿರೇಮಠ / ಬೋಡನಾಯಕದಿನ್ನಿ
ಅಪ್ಪನ ಏಟುಗಳನ್ನು
ಲೆಕ್ಕವಿಡುವ ಅಗತ್ಯವೇ ಇಲ್ಲ
ಒಂದು ಏಟೂ ಕೊಟ್ಟ
ಚಿಕ್ಕ ನೆನಪೂ ನನಗಿಲ್ಲ
ಆದರೆ ಲೆಕ್ಕವಿಡಬೇಕಾಗಿದ್ದು
ಅವ್ವನ ಮೈಮೇಲಿನ ಕಲೆಗಳ
ಮುರಿದ ಮೂಳೆಗಳ ಮತ್ತು
ಅವನ ಉರಿಗಣ್ಣ ನೋಟಕ್ಕೆ ನಾನು
ಚಡ್ಡಿ ಒದ್ದೆ ಮಾಡಿಕೊಂಡ ಕ್ಷಣಗಳ.
ಪ್ರಕೃತಿಯ ಚಿಲಿಪಿಲಿ ಮಕ್ಕಳ ಕುಲುಕುಲು
ನಗೆಯ ತೋಟಕ್ಕೆ ರಾಕ್ಷಸ ಪ್ರವೇಶಿಸಿದಾಗ
ಸಂಭವಿಸುವ ಭೀಕರ ಮೌನ ನಿರ್ವಾತದ ಪಠ್ಯಕ್ಕೆ
ಅಪ್ಪನೇ ಸ್ಫೂರ್ತಿಯಾಗಿರಬೇಕು ಎನಿಸಿದ್ದು ಸುಳ್ಳಲ್ಲ
ಗುಹೆಯಂತಹ ಅವನ ಕೋಣೆಯ ತುಂಬ
ಎಂತೆಂತವೋ ಬೇರು ತಪ್ಪಲು ಚರ್ಮ
ಮೂಳೆ ತಾಮ್ರದ ತಗಡು ಸುಟ್ಟೂ ಸಡುಗಾಡು
ಅತಿಮಾನುಷರ ಜೊತೆ ಗುದ್ದಾಡುತ್ತ
ಮಂತ್ರಕ್ಕೆ ಮಾವಿನ ಕಾಯಿ ಉದುರಿಸುವ ಖಯಾಲಿ
ಎದುರು ನಿಲ್ಲಲು ಹೆದರಿ
ದೂರ ಸರಿಯುವುದನ್ನೇ
ನಾವು ಕೊಡುವ ಗೌರವ
ಎಂದುಕೊಂಡು ಎದೆಯುಬ್ಬಿಸಿದ
ಒಂದೇ ಸೂರಿನ ಕೆಳಗಿದ್ದೂ ತಿಂಗಳುಗಟ್ಟಲೇ
ತುಟಿ ಬಿಚ್ಚದೆ ಕಳೆದಿದ್ದೊಂದು ಕಟು ವಿಸ್ಮಯ
ಅಪ್ಪನ ಪದಕೋಶದಲಿ
‘ಪ್ರಾಣಮಿತ್ರ’ನಿಗೆ ಇಲ್ಲ ಅವಕಾಶ
‘ನಿನಗೆ ನೀನೇ ಗೆಳೆಯ’ ಉಕ್ತಿಯ
ಪಕ್ಕಾ ಪ್ರತಿಪಾದಕ
ಓಹ್…ಅಪ್ಪ ನಗುತ್ತಿದ್ದಾನೆ..!
ಹೆಗಲ ಮೇಲೆ ಮುದ್ದು ಗೊಂಬೆ…ಕುಣಿತ
ತಾತತತತತ ಎನ್ನುವ ಮೊಮ್ಮಗಳ ಜೊತೆ
ದಿನಗಟ್ಟಲೇ ಮಾತುಕತೆ..ಆಡುತ್ತಾನೆ..!
ಜಗದ ಅಚ್ಚರಿಯೆಂಬಂತೆ ಮರೆಯಲ್ಲೇ
ನೋಡಿ ಕಣ್ತುಂಬಿಕೊಳ್ಳುತ್ತೇವೆ.
ಅವನು ಅದೇಕೊ ಮುಖ ತಿರುವಿ
ಕಣ್ಣೊರೆಸಿಕೊಳ್ತಾನೆ..
ಗುಹೆಯ ಕ್ಷುದ್ರ ಪರಿಕರ ಮಟಾಮಾಯ
ಹ್ರಾಂ ಹ್ರೂಂ ಕರ್ಕಶಗಳು ಕಳೆದು
ಸಾರೆಗಮ ಶುರುವಾಗಿದೆ..
ಅಪ್ಪ ಸತ್ತ ಆರು ತಿಂಗಳಿಗೆ
ಬೋರಾಡಿ ಅಳುವ ಮಕ್ಕಳ ಮಧ್ಯ
ಅಪ್ಪ ಜೊತೆಗೆ ‘ಇದ್ದಾನೆ’ ಎಂಬ
ನೆಮ್ಮದಿ ,ಧೈರ್ಯ ವಿವರಿಸಲಸದಳ…
ಅಪ್ಪ ಎಂಬ ಅಚ್ಚರಿಯನ್ನು ಸೊಗಸಾಗಿ ತೆರದಿಟ್ಟಿದ್ದಿರಿ.ಕವನ ಮನ ಮುಟ್ಟುವಂತಿದೆ.ಅಭಿನಂದನೆಗಳು.