ಅಪಾರ ಹಂಬಲದ ಕಥೆಗಾರ 'ಹಂದ್ರಾಳ' – ಕುಂ ವೀ ಬರೆದಿದ್ದಾರೆ

ಕುಂ ವೀರಭದ್ರಪ್ಪ

ಕೇಶವರೆಡ್ಡಿ ಹಂದ್ರಾಳ ಸೇರಿದಂತೆ ನಾವೆಲ್ಲ ಈ ಕಾಲದವರಲ್ಲ. ನೂರೈವತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ನಡೆದ ಪ್ರಥಮ ಸ್ವಾತಂತ್ರ್ಯಸಂಗ್ರಾಮದಲ್ಲಿ ಹುತಾತ್ಮರೇ ನಾವು, ಪ್ರಸ್ತುತ ಸಂದರ್ಭದಲ್ಲಿ ನೈಜಸ್ವಾತಂತ್ರ್ಯಕ್ಕಾಗಿ ನಾವೆಲ್ಲ ಹಪಹಪಿಸುತ್ತಿರುವುದೇ ಇದಕ್ಕೆ ಕಾರಣ. ಅದೃಷ್ಟವಶಾತ್ ಎಟುಕಿದ ಒಂದು ಬೊಗಸೆ ಅಕ್ಷರಗಳನ್ನೇ ಅಕ್ಷಯ ಪಾತ್ರೆಯನ್ನಾಗಿ ಪರಿವತರ್ಿಸಿಕೊಂಡಿದ್ದೇವೆ. ಅಕ್ಷರಗಳ ಮಾಲೆಯನ್ನು ಎದೆಯ ಕೊರಳಿಗೆ ಧರಿಸಿ ಬೀಗುತ್ತಿದ್ದೇವೆ. ಶಬ್ದಗಳನ್ನೇ ತಂಬೆಳಕಿನ ಹಾದಿಯನ್ನಾಗಿ ರೂಪಿಸಿಕೊಂಡಿದ್ದೇವೆ, ಗೆರೆಗಳು ಅಳಿಸಿದ ಹೆತ್ತವರ ಹೆಬ್ಬೆರಳುಗಳನ್ನೇ ಹಲಗೆಗಳನ್ನಾಗಿಯೂ, ಅವರ ಕಾಲ ಮೀನಖಂಡದ ನರಗಳನ್ನೇ ಬಳಪಗಳನ್ನಾಗಿ ಪರಿವರ್ತಿಸಿಕೊಂಡಿದ್ದೇವೆ. ಹಸಿವು ಆಕ್ರಂದನಗಳಿಗೆ ಹೊಚ್ಚಹೊಸ ವ್ಯಾಖ್ಯಾನ ಬರೆಯುತ್ತಿದ್ದೇವೆ. ಬಲಿ ಹಿರಣ್ಯಕಶಿಪು ದಶಾನನರೇ ಮೊದಲಾದ ನಮ್ಮ ತ್ರಿಷಷ್ಠಿ ಪುರಾತನ ಪೂರ್ವಿಕರ ಆತ್ಮಗಳಿಗೆ ಕಥೆಕವಿತೆ ಕಾದಂಬರಿಗಳನ್ನು ನೈವೇದ್ಯ ಮಾಡುತ್ತಿದ್ದೇವೆ. ಮುಳ್ಳುಗಳ ರೂಪ ಧರಿಸಿ ತರಾವರಿ ಹೂವುಗಳನ್ನು ರಕ್ಷಿಸುತ್ತಿದ್ದೇವೆ. ಹಳ್ಳಕೊಳ್ಳಗಳಾಗಿ ದಾರಿಹೋಕರ ದಾಹ ತಣಿಸುತ್ತಿದ್ದೇವೆ. ಮರಗಿಡಗಳಲ್ಲಿ ಬಿಕ್ಕೆ ಕಾರಿ ಬೋರೆ ಹಣ್ಣುಗಳಾಗಿ ಹಸಿವನ್ನು ತೀರಿಸಿದವರು ನೆರಳಾಗಿದ್ದೇವೆ.
ಗುಡಿಗುಂಡಾರಗಳಾಗಿ ದೇವರುದಿಂಡಿರುಗಳಿಗೆ ವಸತಿ ಸೌಲಭ್ಯ ಕಲ್ಪಿಸಿದ್ದೇವೆ. ಮಂತ್ರತಂತ್ರ ಹೋಮ ಹವನ ಯಜ್ಞಯಾಗಾದಿಗಳ ಹೆಬ್ಬಂಡೆಗಳನ್ನು ಜ್ವಾಲಾಮುಖಿಯಾಗಿ ಸೀಳಿ ಉಕ್ಕಿ ಹರಿದಿದ್ದೇವೆ. ಉಳ್ಳವರ ಹಲ್ಲು ಸಂದುಗಳನ್ನು ಶುಭ್ರಗೊಳಿಸಲು ಕಡ್ಡಿಗಳಾಗಿದ್ದೇವೆ. ಕಮರು ಡೇಗುಗಳನ್ನು ಅಕ್ಷರಗಳ ಮೂಲಕ ಪ್ರಶ್ನಿಸುತ್ತಲೇ ಇದ್ದೇವೆ. ಸಹಸ್ರ ಸಹಸ್ರ ನೆಲಮೂಲ ಭಾಷೆಗಳಿಗಳಿಗೆ ಸ್ತನ್ಯಪಾನ ಮಾಡಿಸಿದ್ದೇವೆ. ಅವುಗಳಿಗೆ ತಮ್ಮ ತೊಟ್ಟಿಲಲ್ಲಿ ಆಶ್ರಯ ನೀಡಿ ಬೆಳೆಸಿದ್ದೇವೆ. ಆಡುನುಡಿಯೊಡನೆ ಆಡ್ಯಾಡಿ ಬೆಳೆದಿದ್ದೇವೆ, ಅದರೊಟ್ಟಿಗೆ ನಾವೂ ಬೆಳೆಯುತ್ತಿದ್ದೇವೆ. ಇಂಥ ಜಾಯಮಾನದ ನಾವು ಸೈನ್ಯ ಸದೃಶ ಅಸಂಖ್ಯಾತ ಲೇಖಕರು, ನಾವು ಬರೀ ಲೇಖಕರು ಮಾತ್ರವಲ್ಲ, ಒಂದು ರೀತಿಯ ಕ್ರುಸೇಡರ್ಸ್. ಇಂಥ ನಮಗೆ ಸಹಸ್ರಾರು ವರ್ಷಗಳ ಸೃಜನಶೀಲ ಇತಿಹಾಸವಿದೆ.
ಒಂದೆರಡು ತಲೆಮಾರಿನ ಲೇಖಕರ ಮನೋಧರ್ಮವನ್ನು ತುಸು ಸಂಕೀರ್ಣಭಾಷೆಯಲ್ಲಿ ವ್ಯಾಖ್ಯಾನಿಸಿದ್ದೇನೆ, ಅದೂ ಕಾವ್ಯಾತ್ಮಕ ಮತ್ತು ರೂಪಕಾತ್ಮಕ ಪರಿಭಾಷೆಯಲ್ಲಿ. ಈ ನನ್ನ ಅನ್ನಿಸಿಕೆ ಕೇವಲ ಕೇಶವರೆಡ್ಡಿ ಹಂದ್ರಾಳರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಇದು ನವ್ಯೋತ್ತರ ಸಾಹಿತ್ಯ ಸಂದರ್ಭವನ್ನು ಗಮನದಲ್ಲಿರಿಸಿಕೊಂಡಿದ್ದಾಗಿದೆ, ಅದಲ್ಲದೆ ನಾನ್ ಅಕಾಡೆಮಿಕ್ ಹಿನ್ನಲೆಯ ಲೇಖಕರನ್ನು ಗಮನದಲ್ಲಿರಿಸಿಕೊಂಡಿದ್ದಾಗಿದೆ. ಈ ದಶಕದಲ್ಲಿ ಬರೆಯುತ್ತಿರುವ ಗ್ರಾಮೀಣ ಹಿನ್ನಲೆಯುಳ್ಳ ಸೃಜನಶೀಲ ಲೇಖಕರು ಸ್ವಭಾವತಃ ಬಂಡುಕೋರರು, ಉಲ್ಲಂಘನಾ ಪ್ರವೀಣರು, ಸಹಸ್ರಾರು ಪ್ರಶ್ನೆಗಳ ಬತ್ತಳಿಕೆಯನ್ನು ಬೆನ್ನಿಗೇರಿಸಿಕೊಂಡಂಥವರು. ಎಲ್ಲಾ ಮೂಲಗಳಿಂದ ಉತ್ತರ ಕಂಡುಕೊಳ್ಳಲೆಂದು ಸಾಹಿತ್ಯದ ಎಲ್ಲಾ ಪ್ರಾಕಾರಗಳ ಬುಲಂದೇ ದರವಾಜುಗಳನ್ನು ಮುರಿಯುವುದರ ಮೂಲಕ ಶಿಷ್ಟಲೇಖಕರ ಕೆಂಗಣ್ಣಿಗೆ ಅಸಮಾಧಾನಕ್ಕೆ ಮಜುಗರಕ್ಕೆ ಗುರಿಯಾದಂಥವರು. ಶಿಷ್ಟ ಮತ್ತು ಪರಿಶಿಷ್ಟ ಈ ಎರಡು ಸೂಕ್ಷ್ಮ ವಗರ್ೀಕರಣ ಗಮನಿಸಿ, ಇವೆರಡೂ ವಿಭಿನ್ನ ದೃವಗಳು.
ಶಿಷ್ಟರು! ಅಕ್ಷರಾವಲಂಭಿಗಳಾದ ಇವರಿಗೆ ವಸುದೈವಕಂ ಕುಟುಂಬಂ ಎಂಬ ಪೊಳ್ಳು ಸನಾತನ ಮೌಲ್ಯಗಳು ಮುಖ್ಯ, ಇವರು ಅಂದರಿಕಿ ಮಂಚಿವಾಳ್ಳು, ಸದಾ ಪ್ರಶಾಂತರು, ಹೆದ್ದಾರಿ ಸದೃಶ ಅತ್ಯುತ್ತಮ ಕೃತಿಗಳ ರಚನೆಯೇ ಪರಮೋಚ್ಚ ಗುರಿ. ಪ್ರಶ್ನೆಗಳಿರದ ಸುಂದರ ಬತ್ತಳಿಕೆ ಇವರ ಆಯುಧ, ಎಲ್ಲರೊಳಗೊಂದಾಗುವುದು ಇವರ ಮನೋಧರ್ಮ, ಇವರ ಕೃತಿಗಳು ಸುಂದರ ಉದ್ಯಾನಗಳು. ವಿಮರ್ಶಕರಿಂದ ಸೈ ಅನ್ನಿಸಿಕೊಳ್ಳುವುದೇ ಇವರ ಸೃಜನಶೀಲತೆಯ ಪರಮೋಚ್ಚ ಗುರಿ. ಇವರು ಗಾಳಿ ಬಂದ ಕಡೆ ಕೊಡೆ ಹಿಡಿಯುವುದರಲ್ಲಿ ನಿಸ್ಸೀಮರು.
ಪರಿಶಿಷ್ಟರು! ಗ್ರಾಮೀಣ ಹಿನ್ನಲೆಯ ಇವರು ಅಕಸ್ಮಾತ್ ಒಂದು ಹಿಡಿ ಅಕ್ಷರಗಳನ್ನು ಕಂದೀಲುಗಳನ್ನಾಗಿ ಪರಿವರ್ತಿಸಿಕೊಂಡವರು, ಇವರು ನಿಮ್ನಸಮಾಜಾವಲಂಭಿಗಳು, ತಮ್ಮ ದೇಶದ ಜಾತಿವ್ಯವಸ್ಥೆಯನ್ನು ಅರ್ಥಮಾಡಿಕೊಂಡ ಅಶಾಂತರು, ಕಾಲುಹಾದಿ ಸದೃಶ ಜಾನಪದೀಯ ಕೃತಿಗಳನ್ನು ಬರೆಯುವ ಇವರ ಅಸುಂದರ ಬತ್ತಳಿಕೆಯಲ್ಲಿರುವ ಪ್ರಶ್ನೆಗಳು ಅಗಣಿತ, ತಳಸಮುದಾಯಗಳೊಂದಿಗೆ ಒಂದೊಂದಾಗುವುದು ಇವರ ಮನೋಧರ್ಮ. ಇವರ ಕೃತಿಗಳು ಚಾರಣಿಗರಿಗೆ ಸವಾಲೆಸುವ ಕುರುಚಲು ಕಾಡುಗಳು. ಇವರಿಗೆ ವಿಮರ್ಶಕರಿಗೆ ಇವರೆಂದರೆ ಅಷ್ಟಕಷ್ಟೆ, ಪ್ರವಾಹದ ವಿರುದ್ದ ಈಜುವುದರಲ್ಲಿ ಇವರು ಪರಾಕ್ರಮಿಗಳು. ಸಿಟಿ ಲೈಟ್ಸ್ ಚಲನಚಿತ್ರದಲ್ಲಿ ಸಣಕಲ ದೇಹಿ ಚಾಪ್ಲಿನ್ ಬಾಕ್ಸಿಂಗ್ ಪಂದ್ಯದಲ್ಲಿ ಮಾಂಸರ್ವತ ಸದೃಶ ಬಾಕ್ಸರನನ್ನು ಸೋಲಿಸುವಂತೆ ಇವರು ಎಷ್ಟೋ ಪ್ರಸಿದ್ದರನ್ನು ಓವರ್ ಟೇಕ್ ಮಾಡಿ ಹಿಂದಿಕ್ಕಬಲ್ಲರು.

ಈ ಅಲ್ಲಮನ ಆತ್ಮಲಿಂಗ ಕಥಾ ಸಂಕಲನದ ಕತೃ ಕೇಶವರೆಡ್ಡಿ ಹಂದ್ರಾಳ ಪರಿಶಿಷ್ಟ ವರ್ಗಕ್ಕೆ ಸೇರಿದ ಲೇಖಕರು. ಮಧುಗಿರಿ ಸಮೀಪದ ಪುಟ್ಟಹಳ್ಳಿ ಹಂದ್ರಾಳ ಇವರ ನೇಟಿವ್ ಪ್ಲೇಸು, ಇವರದ್ದು ಸಣ್ಣಹಿಡುವಳಿ ರೈತಾಪಿ ಕುಟುಂಬ, ರೆಡ್ಡಿ ಎಂಬ ಉಪಾದಿ ನೆಗೆಟಿವ್ ಪಾಯಿಂಟು. ಶೂದ್ರ ದಲಿತರೊಂದಿಗೆ ಒಡನಾಡಿ ಬೆಳೆದವರು, ಅವರ ಜೀವನ ಶೈಲಿಯನ್ನೊಂದೇ ಅಲ್ಲದೆ ಆಯಾ ಕೇರಿಗಳ ದೇಸೀಯತೆಯನ್ನು ಮೈಗೂಡಿಸಿಕೊಂಡವರು, ದೇವನೂರು ಮಹಾದೇವ ಚಾಮರಾಜನಗರ ಸರಹದ್ದಿನ ಭಾಷೆಯನ್ನು ಅರಗಿಸಿಕೊಂಡಿರುವಂತೆಯೇ ಇವರು ಮಧುಗಿರಿ ಆಜುಬಾಜು ಚಾಲ್ತಿಯಲ್ಲಿರುವ ಒಕ್ಕಲಿಗರ ಆಡುನುಡಿಯನ್ನು ಜೀಣರ್ಿಸಿಕೊಂಡಿದ್ದಾರೆ, ಎಲ್ಲ ದಲಿತ ಶೂದ್ರರಂತೆ ತಮಗೊಲಿದ ಅಕ್ಷರಗಳನ್ನೇ ನಿಚ್ಚಣಿಕೆಯನ್ನಾಗಿಸಿಕೊಂಡು ಪದವೀಧರರಾಗಿದ್ದಾರೆ, ಕೆಎಎಸ್ ಪ್ಯಾಸು ಮಾಡಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉನ್ನತ ಶ್ರೇಣಿ ಅಧಿಕಾರಿಯಾಗಿ ಬೆಂಗಳೂರಿನಂಥ ಮಾಯಾವಿ ಶಹರದವಾಸಿಯಾಗಿದ್ದರೂ ನೇಟಿವಿಟಿ ಕಳೆದುಕೊಂಡಿಲ್ಲ. ಪ್ರೌಢವಯಸ್ಕರೊಂದೇ ಅಲ್ಲದೆ ಆಕರ್ಷಕ ವ್ಯಕ್ತಿತ್ವದ ವ್ಯಕ್ತಿ. ಮುಗ್ದತೆ ಇವರ ಸಣ್ಣ ಮೆದುಳಾಗಿದ್ದರೆ ಅಮಾಯಕತನ ಇವರ ದೊಡ್ಡ ಮೆದುಳು. ಈ ಕಾರಣದಿಂದಾಗಿ ಛದ್ಮವೇಷಧಾರಿಗಳು ಇವರನ್ನು ಸುಲಭವಾಗಿ ಯಾಮಾರಿಸಬಹುದು. ಆದರೂ ಅಯ್ಯೋ ಬಿಡಿ ಸಾರ್ ಪಾಪ ಏನೋ ತೆಪ್ ಮಾಡ್ಯಾವೆ ಎಂದು ಉದಾರವಾಗಿ ಕ್ಷಮಿಸುವುದು ಇವರ ಜಾಯಮಾನ, ಇವರಲ್ಲಿ ಆಸ್ತಿಕತೆ ಗುಲಗಂಜಿಯಷ್ಟಿದ್ದರೆ ನಾಸ್ತಿಕತೆ ಮಧುಗಿರಿ ಬೆಟ್ಟದಷ್ಟಿದೆ, ಇವರು ಪ್ರೀತಿ ವಿಶ್ವಾಸಕ್ಕೆ ಸಂಬಂಧಿಸಿದಂತೆ ಮಾನವ ರೂಪದಲ್ಲಿರುವ ಕರಡಿಯೇ ಸರಿ. ತಳ ಸಮುದಾಯದ ಹಿರಿಕಿರಿಯ ಲೇಖಕರು ಇವರ ಒಡನಾಡಿಗಳು, ಗುಡಿಸಲು ಝೋಪಡಿಗಳನ್ನು ಪಂಚತಾರಾ ಹೋಟಲುಗಳೊಂದಿಗೆ ಸಮೀಕರಿಸುವುದು ಇವರ ಸ್ವಭಾವ, ನಿರಾಯುಧ ನಕ್ಸಲೈಟ್ ಯುವಕನನ್ನು ತಮ್ಮ ಹೃದಯದ ಪಡಸಾಲೆಯಲ್ಲಿ ಬೆಚ್ಚಗೆ ಮಲಗಿಸಿ ಜೋಗುಳ ಹಾಡುತ್ತಲೇ ಇದ್ದಾರೆ, ಬಡಬಗ್ಗರ ಮದುವೆ ಮುಂಜಿ ಅವರ ಮಕ್ಕಳ ವ್ಯಾಸಂಗಕ್ಕೆ, ಉದಯೋನ್ಮುಖೀಯ ಲೇಖಕರ ಚೊಚ್ಚಲ ಕೃತಿಗಳ ಪ್ರಕಟಣೆಗೆ ಎಡಗೈಗೆ ತಿಳಿಯದ ರೀತಿಯಲ್ಲಿ ಧನ ಸಹಾಯ ಮಾಡುವುದು, ದೊಡ್ಡಲೇಖಕರ ಹಲವು ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿ ಕೈ ಸುಟ್ಟುಕೊಳ್ಳುವುದು ಇವರ ಹವ್ಯಾಸ. ವೈಶ್ಯ ಕಮ್ಯುನಿಟಿಗೆ ಸೇರಿದ ಪಂಚಮಿ ಎಂಬ ಹೆಸರಿನ ತಮ್ಮ ವಿದ್ಯಾರ್ಥಿನಿಯನ್ನು ಪ್ರೇಮಿಸಿ ವರಿಸಿ ತಮ್ಮ ಪ್ರಗತಿಪರತೆ ಮೆರೆದಿದ್ದಾರೆ, ಕ್ರಾಂತಿ ಎಂಬ ಮುಗ್ದ ಬಾಡಿಬಿಲ್ಡರ್, ವೆನ್ನೆಲ ಎಂಬ ಪ್ರತಿಭಾ ಸಂಪನ್ನ ಇವರ ಪುತ್ರರು.
ಹಂದ್ರಾಳದಲ್ಲಿರುವ ತಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ರೈತಾಪಿ ಕನಸುಗಳನ್ನು ಬೆಳೆಯಲು, ಅಲ್ಲಿನ ಕೃಷಿಕರನ್ನು ಪ್ರಗತಿಪರರನ್ನಾಗಿಸಲು ಅಹರ್ನಿಶಿ ಶ್ರಮಿಸುತ್ತಲೇ ಇದ್ದಾರೆ, ಇಂಥ ಹಲವು ಮಾನವೀಯ ಮುಖಗಳ ದಶಾನನ ನಮ್ಮ ಈ ಕೇಶವರೆಡ್ಡಿ ಹಂದ್ರಾಳ. ಯೋಜನದುದ್ದದ ಕರುಳನ್ನೂ, ಭೂಮಿ ತೂಕದ ಹೃದಯವನ್ನೂ ತಮ್ಮ ದೇಹದಲ್ಲಡಗಿಸಿಕೊಂಡಿರುವ ಕಾರಣಕ್ಕೆ ನಾನು ಇವರಿಗೆ ‘ಗೌಡರು’ ಎಂಬ ಹೆಚ್ಚವರಿ ವಿಶೇಷಣವನ್ನು ಪ್ರಿಫಿಕ್ಸ್ ಮಾಡಿರುವುದು. ಕಥೆ ಕವಿತೆ ಅಂಕಣದಂಥ ಸಾಹಿತ್ಯಿಕ ಪ್ರಾಕಾರಗಳಲ್ಲಿ ಕಳೆದ ಎರಡೂವರೆ ದಶಕಗಳಿಂದ ಬರೆಯುತ್ತಿದ್ದರೂ, ತಮ್ಮ ಎರಡು ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದಿದ್ದರೂ ಇವರು ತಮ್ಮ ಜಿಲ್ಲೆಯಲ್ಲಿ ಅಪರಿಚಿತರು. ಇವರ ಕುರಿತು ಪ್ರಸ್ತಾಪಿಸಿದ್ದಕ್ಕೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಮಹೋದಯ ಯಾವ ಕೇಶವರೆಡ್ಡಿ? ಏನು ಬರೆದಿದ್ದಾರೆ? ಎಂದು ಪ್ರಶ್ನಿಸಿದರು, ಹೇಳಿದ್ದು ಕೇಳಿಸಿಕೊಂಡಾದ ಬಳಿಕ ಓಹ್ ಹೌದಾ ಎಂದು ಆ ಸನ್ಮಿತ್ರ ಮೂಗಿನ ಮೇಲೆ ಉಂಗುರದ ಬೆರಳನ್ನಿರಿಸಿಕೊಂಡ ಅವರೂ ತಮ್ಮೊಂದು ಕೃತಿಗೆ ನನ್ನಿಂದ ಮುನ್ನುಡಿಯನ್ನು ಬರೆಸಿಕೊಂಡಿರುವ ಕಾದಂಬರಿಕಾರರು. ಇದು ನಮ್ಮ ಸಾಹಿತ್ಯಿಕ ಸಾಂಸ್ಕೃತಿಕ ಸಂಘಸಂಸ್ಥೆಗಳ ಚುನಾಯಿತ ನೇತಾರರ ಗ್ರಹಿಕಾ ದಾರಿದ್ರ್ಯ. ಇದು ನಾಡಿನ ಎಲ್ಲಾ ನಾನ್ ಅಕಾಡೆಮಿಕ್ ಹಿನ್ನಲೆಯಲ್ಲಿ ಬರೆಯುತ್ತಿರುವ ಗ್ರಾಮೀಣ ಸಂವೇದನೆಯ ಲೇಖಕರ ಹಣೆಬರಹ. ಏನೇ ಇರಲಿ ಈ ನಮ್ಮ ಗೌಡರು ಸಾಮಾನ್ಯ ಓದುಗರ ಡಾರ್ಲಿಂಗ್.
ಕೇಶವರೆಡ್ಡಿ ಹಂದ್ರಾಳ ಪ್ರಧಾನವಾಗಿ ಕಥಾ ಪ್ರಾಕಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಕ್ಷಿ ಋಜುವಾತು ದೇಶಕಾಲ ಸಂಕ್ರಮಣ ಶೂದ್ರಗಳಂಥ ಟಿಪಿಕಲ್ ಅಕಾಡೆಮಿಕ್ ಪತ್ರಿಕೆಗಳಿಗಿಂತ ಮುಖ್ಯವಾಗಿ ಸುಧಾ ಮಯೂರ ಪ್ರಜಾವಾಣಿಗಳಂಥ ಜನಪ್ರಿಯ ನಿಯತಕಾಲಿಕಗಳಲ್ಲಿ, ಲಂಕೇಶ್ ಪತ್ರಿಕೆ ಅಗ್ನಿ ಹಾಯ್ ಬೆಂಗಳೂರುಗಳಂಥ ಟ್ಯಾಬ್ಲಾಯ್ಡ್ಗಳಲ್ಲಿ ಇವರ ಕಥೆಗಳು ಅಂಕಣ ಬರಹಗಳು ಪ್ರಕಟಗೊಳ್ಳುತ್ತಲೇ ಇವೆ. ತಮ್ಮ ಪೂರ್ವಾಶ್ರಮದ ನಾಡೋಜ (ಕವಿವಿಯದ್ದಲ್ಲ) ಡಾ ಬೆಸಗರಹಳ್ಳಿ ರಾಮಣ್ಣನ ಬಗ್ಗೆ ಸೊಗಸಾದ ಮೊನೋಗ್ರಾಫ್ ಸಹ ರಚಿಸಿದ್ದಾರೆ, ಸ್ಥಳೀಯ ವಿಮರ್ಶಕರಿಗಿಂತ ಮುಖ್ಯವಾಗಿ ಇವರ ವಾಚಕಾಭಿಮಾನಿಗಳು ನಾಡಿನಲ್ಲೊಂದೇ ಅಲ್ಲದೆ ಜಗತ್ತಿನ ಹಲವು ದೇಶಗಳಲ್ಲಿದ್ದಾರೆ. ಹೀಗೆ ಕಳೆದ ಎರಡೂವರೆ ದಶಕಗಳಲ್ಲಿ ಈ ನಮ್ಮ ಗೌಡರ ಸುಮಾರು ಹದಿನೈದು ಕೃತಿಗಳು ಪ್ರಕಟವಾಗಿವೆ. ಈಗ ಅಲ್ಲಮನ ಆತ್ಮಲಿಂಗ ಎಂಬ ಕಥಾಸಂಕನಲವೂ, ಮರೆತ ಭಾರತ ಎಂಬ ಅಂಕಣ ಬರಹಗಳ ಸಂಕಲನವೂ ಇವರ ಕರೀರಿಗೆ ಜಮಾ ಆಗಲಿವೆ. ಒಟ್ಟಾರೆ ಹೇಳುವುದಾರೆ ಈ ನಮ್ಮ ಪ್ರೀತಿಯ ಗೌಡರು ಒಳ ಅರಿವು ಸಹಜಜ್ಞಾನವಿರುವ, ಜಾನಪದೀಯ, ತಾನೊಲಿದಂತೆ ನಿರ್ವಿರಾಮವಾಗಿ ಹಾಡುವ ‘ಅಪಾರ ಹಂಬಲದ ದಾಹವಂತ ಜನಪ್ರಿಯ ಕಥೆಗಾರರು’
ವರ್ತಮಾನ ಸಂದರ್ಭದ ವಿಮರ್ಶೆಗೂ ಜನಪ್ರಿಯತೆ ಎಂಬ ಪದಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ. ಅಕಾಡೆಮಿಕ್ ಇರುವಲ್ಲಿ ರಿಸ್ಕು ಪುರುಸೊತ್ತು ಸಮೃದ್ದತೆ ಇರುವುದಿಲ್ಲ, ಇಲ್ಲಿ ಸಾಮಾಜಿಕ ಜಗತ್ತಿಗಿಂತ ವ್ಯಕ್ತಿಗತ ಜಗತ್ತು ಮುಖ್ಯ. ಇಲ್ಲಿ ದೇಸೀಯವಾದ ಮಾಪನಗಳಿಗಿಂತ ಪಾಶ್ಚಿಮಾತ್ಯವಾದ ಮಾಪನಗಳೇ ಮುಖ್ಯ, ಅಭಿವ್ಯಕ್ತಿಕ್ರಮ ಸಂಕೀರ್ಣ, ಇಲ್ಲಿ ಸಾಮಾಜಿಕ ಮೌಲ್ಯಗಳು ರುಚಿಗೆ ಮಾತ್ರ, ಆದರೆ ಸಾಹಿತ್ಯಿಕ ಮೌಲ್ಯಗಳಿಗೆ ಪ್ರಥಮ ಪ್ರಾಶಸ್ತ್ಯ, ಭಾಷೆಯ ಪೋಷಕಾಂಶಗಳು ಕಡಿಮೆ, ಇಲ್ಲಿನ ಪ್ರಾಡಕ್ಟ್ ಲೇಖಕರಿಂದ ಲೇಖಕರಿಗೆ, ವಿಮರ್ಶಕರಿಂದ ವಿಮರ್ಶಕರಿಗೆ ಬಟವಾಡೆಯಾಗುತ್ತದೆ. ಆದ್ದರಿಂದ ಈ ಸಾಹಿತ್ಯ ಸಂವಹನಾ ಶೂನ್ಯ.
ಜನಪ್ರಿಯ ಸಾಹಿತ್ಯದ ಕ್ಷಿತಿಜ ವಿಸೃತವಾದುದು, ವಿಮರ್ಶೆಯ ವ್ಯಾಸಪೀಠದಿಂದ ವಂಚಿತವಾದುದು, ಅಕಾಡೆಮಿಕ್ ವಲಯದ ಇಂಗಾಲಾಮ್ಲವನ್ನೂ ನಾನ್ ಅಕಾಡೆಮಿಕ್ ವಲಯದ ಆಮ್ಲಜನಕವನ್ನೂ ಸೇವಿಸಿ ಚಿರಂಜೀವತ್ವವನ್ನು ಆವಹಿಸಿಕೊಂಡಿರುವಂಥದ್ದು. ತನ್ನ ಸುತ್ತಲಿನ ಸಮಾಜ, ವ್ಯಕ್ತಿಗತ ಅನುಭವಗಳು ಅದರೊಟ್ಟಿಗೆ ತನ್ನದೇ ಆದ ಕಾಲ್ಪನಿಕ ಜಗತ್ತು ಇದರ ಸೃಷ್ಠಿಯ ಪ್ರಧಾನ ವ್ಯಂಜಕಗಳು. ಇಲ್ಲಿ ಅಭಿಜಾತ ಕಥನಶೈಲಿ ಪ್ರಧಾನ, ಆದರೆ ವಿದೇಶಿ ಸಾಹಿತ್ಯದಿಂದ ಆಮದು ಮಾಡಿಕೊಂಡ ಸಿದ್ದಮಾದರಿ ಸಂವಿಧಾನವಲ್ಲ. ಇದು ಜಾನಪದ ಕಥನ ಕಲೆ- ಎಂದರೆ ಇದರ ವಾರಸುದಾರರು ತಮ್ಮ ಪರಿಸರದ ಭಾಷೆ ಅನುಭವಗಳಿಂದ ಪ್ರೇರಿತರಾದವರು, ಆದ್ದರಿಂದ ಇಲ್ಲಿನ ಸಾಹಿತ್ಯ ಸಮಾಜಮುಖಿ ಸುಲಭಗ್ರಾಹಿ. ವರ್ತಮಾನ ಸಾಹಿತ್ಯದಲ್ಲಿ ಈ ಕಾಲುಹಾದಿಗಳನ್ನು ವಿಸ್ತರಿಸಿದವರು, ತಮ್ಮ ಮುಂದಿನ ತಲೆಮಾರುಗಳಿಗೆ ಮಾರ್ಗದರ್ಶಕರಾದವರಲ್ಲಿ ಮುಖ್ಯ ಹೆಸರುಗಳೆಂದರೆ ನವೋದಯ ಯುಗದ ಹಲವು ಪ್ರಾತಃಸ್ಮರಣೀಯರು ಮತ್ತು ಪೂರ್ಣಚಂದ್ರ ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ ಸೇರಿದಂತೆ ಕೆಲವರು.
ಈ ಹಿನ್ನಲೆಯಲ್ಲಿ ನೋಡಿದಾಗ ಕೇಶವರೆಡ್ಡಿ ಹಂದ್ರಾಳ ಹುಲುಸು ಕಥೆಗಾರರು. ಇವರ ವೈಶಿಷ್ಟವೆಂದರೆ ಇವರಲ್ಲಿ ಎರಡು ಮಸೂರಗಳಿವೆ, ನಗರ ಕೇಂದ್ರಿತ ಮಸೂರದಿಂದ ಗ್ರಾಮೀಣ ಪರಿಸರವನ್ನೂ, ಗ್ರಾಮೀಣ ದೂರದರ್ಶಕದಿಂದ ನಗರಕೇಂದ್ರಿತ ಬದುಕನ್ನೂ ದರ್ಶಿಸಬಲ್ಲ ತಾಕತ್ತು ಇವರಿಗೆ. ಆದ್ದರಿಂದ ಈವರೆಗೆ ಪ್ರಕಟಿಸಿರುವ ಕಥಾಸಂಕಲನಗಳಲ್ಲಿ ಸಮ್ಮಿಶ್ರ ಅನುಭವಗಳಾಧಾರಿತ ಕಥೆಗಳಿವೆ. ಪ್ರತಿಯೊಂದು ಕಥೆಯ ಸ್ಥಾಯಿ ಮನುಷ್ಯ ಸಂಬಂಧಗಳ ಬಗೆಗಿನ ಅಂತಃಕರಣ. ಇವರು ಪೊಳ್ಳು ನೈತಿಕ ಮೌಲ್ಯಗಳ ವಕ್ತಾರರಲ್ಲ, ಹಾಗೆಯೇ ಕಾಲ್ಪನಿಕ ಜಗತ್ತಿಗಿಂತ ವಾಸ್ತವ ಜಗತ್ತು ಮುಖ್ಯ. ಸುಸ್ಪಷ್ಟ ಗಿಲೀಟು ಮಾತುಗಳು ಕೃತ್ರಿಮತೆ ಕುಯುಕ್ತಿ ಸೋಗಲಾಡಿತನ ಅಥವಾ ಸ್ವಯಂ ವೈಭವೀಕರಣ ಇವರಿಗೊಗ್ಗುವುದಿಲ್ಲ. ತೀರಾ ಬೌದ್ದಿಕವಾಗಿ ಆಕರ್ಷಕವಾಗಿ ಬರೆಯಲು ಪ್ರಯತ್ನಿಸಿದವರೂ ಅಲ್ಲ, ಪಟ್ಟು ಹಿಡಿದು ಕೂತು ಎಡಪಂಥೀಯವಾದಗಳನ್ನು ಅರಗಿಸಿಕೊಂಡವರೂ ಅಲ್ಲ. ರಾಘವಾಂಕ ಹೇಳುವ ಹಾಗೆ ಜನ ಬದುಕ ಬೇಕೆಂದು ಬರೆಯುವ ಬದುಕುವ ಕ್ರಮದಿಂದಾಗಿ, ರೋಮಾಂಚನಗೊಳ್ಳದ ನಿರ್ಲಿಪ್ತ ಸ್ವಭಾವದಿಂದಾಗಿ ಗೌಡರ ಜವಾರಿ ವ್ಯಕ್ತಿತ್ವ ಮತ್ತು ನೆಲಮೂಲ ಬರಹಗಳು ನಮ್ಮೆಲ್ಲರಿಗೆ ಇಷ್ಟ. ಆದ್ದರಿಂದ ಇಂಥ ಬಲಿಷ್ಠ ಗ್ರಾಮೀಣ ಭಾಷಿಕ ಕುಲ ಸಂಜಾತ ಲೇಖಕರು ಕುರುಚಲು ಕಾಡುಗಳಿದ್ದಂತೆ. ಅಲ್ಲಲ್ಲಿ ಕೊರಕಲುಗಳು, ಜುಳಜುಳು ಹರಿಯುವ ಪುಟ್ಟಪುಟ್ಟ ತೊರೆಗಳು, ಕಲ್ಲುಮುಳ್ಳಿನ ಕಾಲುದಾರಿಗಳು, ಸಮತಟ್ಟಿಲ್ಲದ ನೆಲ, ಅಗೋ ಅಲ್ಲೊಂದು ದಿಬ್ಬ, ಇಗೋ ಇಲ್ಲೊಂದು ಗುಡ್ಡ. ಅದಲ್ಲದೆ ಕಾಡುಹಂದಿ ಮಿಕಗಳು, ಪುಟಿದು ನೆಗೆವ ಮೊಲ ಜಿಂಕೆಗಳು, ಕಾಗೆ ಗುಬ್ಬಿ ಗೂಬೆ ಹದ್ದುಗಳೊಂದೇ ಅಲ್ಲದೆ ಗಿಳಿಗೊರವಂಕ ಕೋಗಿಲೆಗಳಂಥ ಬಾನಾಡಿಗಳು ಬೇರೆ.
ಇದು ಗ್ರಾಮೀಣ ಕಥೆಗಳೆಂಬ ಕರುಚಲು ಕಾಡುಗಳ ಒಳವಿನ್ಯಾಸ. ಇಂಥ ಕಾಡುಗಳು ದನಗಾಹಿಗಳಿಗೆ, ಬುಡಕಟ್ಟು ಆದಿವಾಸಿಗಳಿಗೆ, ಉರುವಲು ಇಂದನ ಆಯುವವರಿಗೆ ಪಂಚಪ್ರಾಣ, ಆದರೆ ಚಾರಣಿಗರನ್ನು ಇವು ಆಕರ್ಷಿಸುವುದು ಅಪರೂಪ. ಆದ್ದರಿಂದ ಇಂಥ ಕುರುಚಲು ಕಾಡುಗಳು ಸುಶಿಕ್ಷಿತ ನಾಗರಿಕ ಪಟ್ಟಣವಾಸಿಗಳನ್ನು ಬರಸೆಳೆಯುವುದು ಅಪರೂಪ. ಅವರೇನಾದರೂ ಕಾಡಿನೊಳಗೆ ಹೊಕ್ಕು ಬಂದರೆಂದರೆ ಅಂಥವರನ್ನು ದ್ವಂದ್ವಗಳು ಗೊಂದಲಗಳು ವೈರುಧ್ಯಗಳು ಕಾಡುವುದು ಸಹಜ. ಇಂಥ ವಿವೇಚನಾಪ್ರಜ್ಞೆ ಮೊಳೆಸುವ ಕಾರಣಕ್ಕೆ ಗೌಡರ ಕಥೆಗಳು ಸಮಕಾಲೀನ ನಗರವಾಸಿ ಕಥೆಗಳಿಗಿಂತ ಭಿನ್ನ ಮತ್ತು ಪ್ರಗತಿಪರ.
ಪ್ರಸ್ತುತ ಅಲ್ಲಮನ ಆತ್ಮಲಿಂಗ ಸಂಕಲನದಲ್ಲಿ ಹದಿನೆಂಟು ಕಥೆಗಳು ಈಗಾಗಲೇ ನಾಡಿನ ಹಲವು ಪ್ರಸಿದ್ದ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿರುವವಲ್ಲದೆ ಜನಪ್ರಿಯಗೊಂಡಿವೆ. ಇಲ್ಲಿನ ಕೆಲವು ಕಥೆಗಳು ಚಲನಚಿತ್ರ ನಿರ್ದೇಶಕರನ್ನೂ ನಿರ್ಮಾಪಕರನ್ನೂ ಆಕರ್ಷಿಸಿವೆ. ಇಲ್ಲಿನ ಕಥೆಗಳಲ್ಲಿ ಎರಡು ವಿಭಿನ್ನ ಪರಿಸರಗಳಿವೆ, ರೆಡ್ಡಿಯವರ ಹಿಂದಿನ ಸಂಕಲನಗಳಂತೆ ಇದು ಸಹ ಸಮ್ಮಿಶ್ರ ಕಥೆಗಳ ಪ್ರಭುತ್ವ. ಒಕ್ಕಲ ಒನಪು ಮತ್ತು ಮರೆತ ಭಾರತದಂಥ ಅಂಕಣಗಳ ಬರಹಗಳಲ್ಲಿನ ದೇಶೀಯಭಾಷೆಯನ್ನು ಅರಗಿಸಿಕೊಂಡಿರುವಂತೆಯೇ ನಗರಕೇಂದ್ರಿತ ಭಾಷೆಯನ್ನೂ ಕೈವಶಮಾಡಿಕೊಂಡಿದ್ದಾರೆ. ಗ್ರಾಮೀಣ ರೈತಾಪಿ ಕೃಷಿಕಾರ್ಮಿಕರ ದೈನಂದಿನ ಕಷ್ಟಕಾರ್ಪಣ್ಯ ರೋಗರುಜಿಣಗ್ರಸ್ತ ಬದುಕಿರುವಂತೆಯೇ ನಗರಕೇಂದ್ರಿತ ಸುಶಿಕ್ಷಿತ ನೆಲೆಗಳೂ ಇವೆ. ಇಲ್ಲಿನ ಕಥೆಗಳನ್ನು ಸುಲಭವಾಗಿ ಓದಿ ಅರಗಿಸಿಕೊಳ್ಳಬಹುದು. ಕಥನಶೈಲಿಯ ಹಿಂದೆ ತಮ್ಮ ಗ್ರಹಿಕೆಗೆ ದಕ್ಕಿದ ಅನುಭವವನ್ನು ಯಾವ ಆಡಂಬರವಿಲ್ಲದೆ ತೆಕ್ಕೆಗಟ್ಟಲೆ ಮೊಗೆದು ಕೊಡುವ ಮುಗ್ದತನವಿದೆ. ನಮ್ಮ ಗೌಡರು ಮನಸ್ಸು ಮಾಡಿದರೆ ದಿನಕ್ಕೊಂದು ಕಥೆಯನ್ನು ಹೀಗೆ ಬರೆದು ಹಾಗೆ ಪತ್ರಿಕೆಗಳಿಗೆ ರವಾನಿಸುವ ಸೃಜನಶೀಲ ತಾಕತ್ತುಳ್ಳವರು. ಆದ್ದರಿಂದ ಗೌಡರಿಗೆ ಇದೊಂದು ಸೃಜನಶೀಲ ಕ್ರೀಡೆ. ಕೊರ್ಗ ಕುಕ್ಲ ರಾಣಿರಂಗಮ್ಮ ಪಂದಿಕದ್ರರಂಥ ಜೀವನೋತ್ಸಾಹಿ ಹಳ್ಳಿಗಾಡಿನ ಪಾತ್ರಗಳನ್ನು ಸೌಂದರ್ಯಪ್ರಸಾದನಗಳ ಹಂಗಿಲ್ಲದೆ ಶಿಷ್ಟವಾಚಕರಿಗೆ ಪರಚಯಿಸುವ ದೈರ್ಯವಿದೆ. ಶ್ಲೀಲ ಅಶ್ಲೀಲಗಳ ನಡುವೆ ಭೇದವೆಣಿಸದೆ, ಭಾಷೆಯ ನೈರ್ಮಲ್ಯವನ್ನು ಲೆಕ್ಕಿಸದೆ ಗ್ರಾಮೀಣ ಬದುಕಿನ ದುರಂತಗಳನ್ನೂ ಸಾಂಸ್ಕೃತಿಕ ಆಯಾಮಗಳನ್ನೂ ಹೃದಯಸ್ಪರ್ಶಿಯಾಗಿ ನಿರೂಪಿಸುವ ಕೌಶಲ್ಯವಿದೆ. ಆದ್ದರಿಂದಾಗಿ ಕೇಶವರೆಡ್ಡಿ ಲಿಪಿಕಾರ ಹಾಗೆಯೇ ಜಾನಪದೀಯ ಮೌಖಿಕ ಕಥೆಗಾರ.
ನಾನು ಹತ್ತಿರದಿಂದ ಬಲ್ಲಂತೆ ಈ ಗೆಳೆಯ ದಿವಸಕ್ಕೊಂದು ಕಥೆಯನ್ನು ಬರೆಯಬಲ್ಲರು, ತಮ್ಮ ಪ್ರತಿಯೊಂದು ಕಥೆ ಪ್ರಕಟವಾದಾಗಲೂ ರೋಮಾಂಚನಗೊಳ್ಳುತ್ತಾರೆ. ತಮ್ಮ ಮುಂದಿನ ಕಥೆಯನ್ನು ಉದಯೋನ್ಮುಖೀಯತೆಯಿಂದ ಬರೆಯಲು ಪ್ರಯತ್ನಿಸುತ್ತಾರೆ. ಹೆಚ್ಚು ಹೆಚ್ಚು ಓದುಗರನ್ನು ತಲುಪುವ ಕಾರಣದಿಂದಾಗಿ ತಮ್ಮ ಹಲವು ಕಥೆಗಳಲ್ಲಿ ರೋಮ್ಯಾಂಟಿಕ್ ಶೈಲಿಯನ್ನು ಮತ್ತು ಜನಪ್ರಿಯ ಭಾಷೆಯನ್ನೂ ಬಳಸುತ್ತಾರೆ. ಸಾಮಾಜಿಕ ಸಮಾನತೆಯನ್ನು ಜಪಿಸುತ್ತಾರೆ. ಇದು ಈ ಗೆಳೆಯನ ಶಕ್ತಿ ಮತ್ತು ದೌರ್ಬಲ್ಯ. ಎರಡೂ ಹೌದು. ಆದ್ದರಿಂದ ಈ ಗೌಡರ ಕಥಾಸಂಕಲನಗಳೆಂದರೆ ಸಮ್ಮಿಶ್ರ ಸರ್ಕಾರವಿರುವ ಅಸೆಂಬ್ಲಿ. ಅಥವಾ ಸಸ್ಯಾಹಾರಿ ಮತ್ತು ಮಾಂಸಹಾರಿ ಹೋಟಲುಗಳು. ಇಷ್ಟೊಂದು ಸೃಜನಶೀಲ ತಾಕತ್ತುಳ್ಳ ನಮ್ಮ ಕೇಶವರೆಡ್ಡಿ ಹಂದ್ರಾಳ ಪಟ್ಟು ಹಿಡಿದು ಕೂತು ಕಾದಂಬರಿಯನ್ನೇನಾದರೂ ಬರೆದರೆಂದರೆ! ವ್ಹಾ!
(ಕೇಶವರೆಡ್ಡಿ ಹಂದ್ರಾಳ ಅವರ ಪ್ರಕಟವಾಗಲಿರುವ ‘ಅಲ್ಲಮನ ಆತ್ಮಲಿಂಗ’ ಕಥಾಸಂಕಲನಕ್ಕೆ ಬರೆದ ಮುನ್ನಡಿ)
 

‍ಲೇಖಕರು G

August 13, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. maheshwari.u

  Sir,Shishta- parishishta endu neevu hege vargeekarana madidaruu ellaru hulu manushyaraagi nelamooladinda bandavru horatu yaaruu aakaashadinda uduridavaralla.nelamoolavalladavru iddare avaru illi usiraaduvuduu badukuvduu saadhyavilla.

  ಪ್ರತಿಕ್ರಿಯೆ
  • gururaja katraguppe

   Namma ‘Handral’ estu sarala andre. namma commercial tax dept nalle yarigu ivaru nadina hemmeya sahithi endu gothilla, ivaru kooda adara bagge tale kedisikollallaa. nanu ivara ‘ankana’ baraha mechi ‘rajadhaniya rastegalalli’ krithiyannu kondu kevala nalku gantegalalli odhi mugisidde…. astu saragavagi odisikalluva sasaktha baraha…. mundina ‘katha sankalana’kkagi baka pakshiyanthe kayuthhiddene, nadina ella sahitya premigala hage……best of luck ‘handral’ sir, ‘kumvee’ hstra sai anisikolladu andre ‘gnanapeeta’ awardna deal madade niyathagi ‘hodakonda” hagee……

   ಪ್ರತಿಕ್ರಿಯೆ
 2. kumvee

  ಶಿಷ್ಟ (ಅಕಾಡೆಕ್), ಪರಿಶಿಷ್ಟ (ನಾನ್ ಅಕಾಡೆಮಿಕ್) ವಿಪರೀತ ಊಹಿಸಿಕೊಳ್ಳುವ ಅಗತ್ಯವಿಲ್ಲ

  ಪ್ರತಿಕ್ರಿಯೆ
 3. ಜೆ.ವಿ.ಕಾರ್ಲೊ

  ಬಹಳ ವರ್ಷಗಳ ಹಿಂದೆ ಹಾಸನದ ಕನ್ನಡ ಉಪನ್ಯಾಸಕರಾದ ಬಿ.ಎಸ್. ದೇವರಾಜುರವರು, ‘ಇವರು ಕೇಶವರೆಡ್ಡಿ, ಹಂದ್ರಾಳ’, ಕತೆಗಾರರು ಎಂದು ಪರಿಚಯ ಮಾಡಿಕೊಟ್ಟರು. ಆ ಹೊತ್ತಿನಲ್ಲಿ ಅವರು ಹಾಸನದ ಒಂದು ಗ್ರಾಮಾಂತರ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಅವರು, ಬಹುಶಃ ಬಹಳ ಕಾಲ ಹಾಸನದಲ್ಲಿ ಇರಲಿಲ್ಲ. ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ ಅವರ ಸರಣಿ ಗ್ರಾಮಲೋಕದ ಕತೆಗಳನ್ನು (ಶೀರ್ಷಿಕೆ ಮರೆತಿದೆ) ಓದಿದ ನಂತರ ನಂತರವೇ ಅವರ ಸಾಹಿತ್ಯದ ಪರಿಚಯವಾಗಿದ್ದು. ನನಗೆ ಕುಂ.ವಿ., ಯವರ ಸಾಹಿತ್ಯ ಪರಿಚಯವಾದದ್ದು ನಂತರ. ಕೇಶವ ರೆಡ್ಡಿಯವರು ಕೆ.ಎ.ಎಸ್., ಅಧಿಕಾರಿ ಎಂದಾಗ ನನಗೆ ಗೊಂದಲವಾಗಿದೆ. ಇವರೇ ಅವರೇ? ಅಥವ ಇವರೇ ಬೇರೆಯವರೇ?

  ಪ್ರತಿಕ್ರಿಯೆ
  • kumvee

   ನಿಮ್ಮ ಊಹೆ ಸರಿ ಇದೆ ಮಿತ್ರ ಕಾರ್ಲೋ, ಅವರೇ ಇವರು ಇವರೇ ಅವರು

   ಪ್ರತಿಕ್ರಿಯೆ
  • jagadishkoppa@gmail.com

   ಪ್ರಿಯ ಕಾರ್ಲೋ ಅದೇ ಕೇಶವರೆಡ್ಡಿ ಇವರು. ಹಾಸನ ಸಮೀಪದ ಭೂವನಳ್ಳಿ ಸರ್ಕಾರಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದರು. ನಂತರ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಕಾಲೇಜಿಗೆ ಬಂದರು. ಅಲ್ಲಿ ತನ್ನ ವಿದ್ಯಾರ್ಥಿನಿಯನ್ನು ಪ್ರೀತಿಸಿ ಅಂತರ್ಜಾತಿ ವಿವಾಹದ ಮೂಲಕ ದಾಂಪತ್ಯ ಬದುಕಿಗೆ ಕಾಲಿಟ್ಟರು. ಅನಂತರ ಕೆ.ಎ.ಎಸ್. ಪಾಸ್ ಮಾಡಿ ಈಗ ಕರ್ನಾಟಕ ವಾಣಿಜ್ಯ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಧ್ಯ ಶಿರಸಿ ವೃತ್ತದಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿ.ಸಿ. ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: