ಪಿ ಬಿ ಪ್ರಸನ್ನ
**
ಇರಬೇಕು ಸದಾ
ಎಚ್ಚರ
ಇದ್ದಷ್ಟು ಹೊತ್ತೂ
ಮಾತು ನಡೆ
ಇರಬೇಕು ಪರಿಶುದ್ಧ
ಹಿರಿಯರ ನುಡಿ
ಆದರೆ ನನಗೋ
ಅರೆ ನಿದ್ದೆ ಬಲು ಪ್ರೀತಿ
ಅದರಲ್ಲೂ ಮುಸ್ಸಂಜೆ ಮಬ್ಬಲ್ಲಿ
ತೆರೆದುಕೊಳ್ಳುವ ಅಮರಾವತಿಯಲ್ಲಿ
ಬರುವ ಅರೆ ನಿದ್ದೆ ಇದೆಯಲ್ಲಾ
ಅದರ ಸೊಗಸೇ ಬೇರೆ
ಬುರು ಬುರುಗುವ ಸೋಮರಸ
ಒಳ ಬರುವ ಕೆಲವರಲಿ ಮಂದಹಾಸ
ಆಕಾಶವೇ ಕಳಚಿದ ಭಾವ ಹಲವರಲಿ
ಬೆರೆಸುತ್ತಾ ಹೋದಂತೆ ಹಲವು ರಸ
ಹೊರ ಹೊಮ್ಮುವುದು
ನಿಜದ ನಡೆ
ನುಡಿ
ಮುದಿ ರಂಭೆ
ಊರ್ವಶಿ ಮೇನಕೆಯರು
ಹದಿ ಹರೆಯದವರಂತೆ ಕಂಡು
ಅಪಸ್ವರದ ಮೇಳದಾಟಕ್ಕೆ ಹೆಜ್ಜೆ ಹಾಕಿ
ಭುಜ ಕುಲುಕಿದಾಗ
ಸೊಂಟ ಕುಲುಕಿದಂತನಿಸಿ
ಮಬ್ಬಲ್ಲಿ ಅವರು ನಕ್ಕದ್ದು
ತನ್ನನ್ನೇ
ಎಂದೆನಿಸಿ ರೋಮಾಂಚನ
ಹೊತ್ತೇರಿದಂತೆಲ್ಲ ಅಪ್ಸರೆಯರು
ಒಂದೊಂದೇ ಕಳಚಿ
ಬಯಲಾದಾಗ
ಎಲ್ಲವೂ ಬಯಲೇ
ಅಮರಾವತಿಯಲ್ಲಿ ಬೆಳಕಾದಾಗ
ಹೆಚ್ಚಿನವರು ಇರುವುದಿಲ್ಲ
ಇದ್ದವರು ಮಾತನಾಡುವುದಿಲ್ಲ
0 ಪ್ರತಿಕ್ರಿಯೆಗಳು