ಚಿತ್ರ: ಖ್ಯಾತ ಕಲಾವಿದ ಚಂದ್ರನಾಥ ಆಚಾರ್ಯ ಅವರು ಕಂಡಂತೆ ಎಚ್ ಎನ್ ಆನಂದ
ಎಚ್ ಎನ್ ಆನಂದ ಹೆಸರು ಕೇಳಿದ ತಕ್ಷಣ ಅವರ ಸಂಪರ್ಕದಲ್ಲಿರುವ ಎಲ್ಲರ ಮುಖದಲ್ಲೂ ಇಂದು ಮುಗುಳ್ನಗೆ ಮೂಡುತ್ತದೆ. ಎಚ್ ಎನ್ ಆನಂದ ಎಂದರೆ ಹಾಗೆ.
ನ್ಯೂಸ್ ರೂಮ್ ನ ಒಳಗೆ ಬೆತ್ತ ಹಿಡಿದ ಸ್ಕೂಲ್ ಮಾಸ್ಟರ್ ರಂತೆ ಗಂಭೀರವಾಗಿ ಪತ್ರಿಕೋದ್ಯಮದ ‘ಆ ಆ ಇ ಈ’ ಕಲಿಸುವ ಆನಂದ ಅವರು ನಡುವಿನ ಬ್ರೇಕ್ ಟೈಮ್ ನಲ್ಲೂ, ಊಟ ತಿಂಡಿ ವೇಳೆಯಲ್ಲೂ ತಮ್ಮದೇ ಶೈಲಿಯ ‘ಪಂಚ್’ ಕೊಡುವುದಕ್ಕೆ ಹೆಸರುವಾಸಿ. ಒಂದಿನಿತೂ ಕೊರಗದ ಆನಂದರ ಜೊತೆ ಇರುವುದೆಂದರೆ ಜೀವನದ ಖುಷಿಯ ಮೇಲೆ ತೇಲಿದಂತೆ.
ಇಂಗ್ಲಿಷ್, ಕನ್ನಡ ಎರಡೂ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದಂತೆಯೇ ಸುದ್ದಿ ಹಾಗೂ ಲೇಖನ ಎರಡೂ ರಂಗದಲ್ಲಿ ಛಾಪು ಮೂಡಿಸಿದವರು ಇವರು.
ನಾವಿನ್ನೂ ಆಗ ತಾನೇ ಲೇಖನ ಬರೆಯಲು ಪೆನ್ನು ಕೈಗೆತ್ತಿಕೊಳ್ಳುತ್ತಿದ್ದಾಗ ನಮ್ಮನ್ನು ಕೈಹಿಡಿದು ನಡೆಸಿದ ದಂಡಿನಲ್ಲಿ ಎಚ್ ಎನ್ ಆನಂದ ಅವರೂ ಮುಖ್ಯರು. ತಣ್ಣಗೆ ಗದರುತ್ತಲೇ ಪ್ರತಿಯೊಬ್ಬರನ್ನೂ ಕೆತ್ತಿ ರೂಪಿಸಿದ ವ್ಯಕ್ತಿತ್ವ.
ನಾನು ಅವರಿಂದ ಕಲಿತ ಬಗ್ಗೆ, ಪತ್ರಿಕೋದ್ಯಮ ಅವರಿಂದ ಪಡೆದ ಕ್ವಾಲಿಟಿಯ ಬಗ್ಗೆ ಈಗಾಗಲೇ ನಾನು ‘ಮೀಡಿಯಾ ಮಿರ್ಚಿ’ ಸೇರಿದಂತೆ ಹಲವು ಬಾರಿ ಬರೆದಿದ್ದೇನೆ. ಅವರ ಅಭಿನಂದನಾರ್ಥ ತಂದ ಕೃತಿಯಲ್ಲಿ ಸಾಕಷ್ಟು ವಿವರವಾಗಿಯೇ ಬರೆದಿದ್ದೇನೆ.
ಎಚ್ ಎನ್ ಆನಂದ ಸದಾ ಹೊಸತನ್ನು ಯೋಚಿಸುವವರು. ಅವರು ನಿವೃತ್ತಿಯ ನಂತರದ ಲಾಭ ದೊಡ್ಡದಾಗಿ ಧಕ್ಕಿದ್ದರೆ ಅದು ‘ಅಪರಂಜಿ’ಗೆ. ಅಪರಂಜಿಯ ಪ್ರತೀ ಸಂಚಿಕೆಯೂ ಭಿನ್ನ. ಅಷ್ಟೇ ಅಲ್ಲ ಆನಂದ ಅವರು ಹೊಸದಾಗಿ ಬರೆಯುವ, ಭಿನ್ನವಾಗಿ ಬರೆಯುವವರ ಪತ್ತೆ ಹಚ್ಚುವುದೇ ವಿಶೇಷ.
‘ಒಂದು ಕಥೆ- ಆದರೆ ಹಲವಾರು ಸಾಹಿತಿಗಳ ರೀತಿ’ ಇದು ಆನಂದರ ಲೇಟೆಸ್ಟ್ ಐಡಿಯಾ.
ಮೇಲುನೋಟಕ್ಕೆ ಒಂದು ಕಚಗುಳಿ ಅನಿಸಿದರೂ ಈ ಸರಣಿಯನ್ನು ಉತ್ತಮವಾಗಿ ವಿಶ್ಲೇಷಿಸಿರುವ ಚ ಹ ರಘುನಾಥ್ ಅವರ ಪ್ರಕಾರ ‘ಕನ್ನಡದ ಹಲವು ರೂಪಗಳನ್ನು ಪ್ರತಿನಿಧಿಸುವ ‘ಅಪರಂಜಿಕನ್ನಡ’ದ ಈ ಬರಹಗಳು ಮೇಲ್ನೋಟಕ್ಕೆ ಒಂದು ತುಂಟ ಪ್ರಯೋಗದ ರೂಪದಲ್ಲಿ, ಓದುಗರ ತುಟಿಗಳಲ್ಲಿ ನಗೆಯರಳಿಸಬಹುದು. ಆದರೆ, ಈ ಅನುಸರಣೆಯನ್ನು ಮತ್ತೊಂದು ರೂಪದಲ್ಲೂ ನೋಡಲಿಕ್ಕೆ ಸಾಧ್ಯವಿದೆ. ವಿನಾಶದ ಪರಂಪರೆಗೆ ವಿವೇಕದ ಪ್ರತಿಕ್ರಿಯೆಯ ರೂಪದಲ್ಲಿ ಈ ಬರಹಗಳನ್ನು ನೋಡುವುದಾದರೆ, ಇಲ್ಲಿನ ಅಭಿವ್ಯಕ್ತಿ ಈ ಹೊತ್ತಿನ ಅಥವಾ ‘ಅಪರಂಜಿ’ ಬಳಗದ ಬರಹಗಾರರ ಪ್ರತಿಕ್ರಿಯೆಯಷ್ಟೇ ಆಗಿರದೆ; ಕನ್ನಡ ಸಾಂಸ್ಕೃತಿಕ ಪರಂಪರೆಯನ್ನೇ ತನ್ನ ಜೊತೆಗಿರಿಸಿಕೊಳ್ಳುವ ಹಂಬಲವಾಗಿದೆ.’
ಇಂತಹ ಪ್ರಯೋಗ ಮಾಡುತ್ತಿದ್ದೇವೆ ಎಂದು ಆನಂದರು ನನ್ನ ಜೊತೆ ಮಾತನಾಡುತ್ತಾ ತಿಳಿಸಿದಾಗ ಈ ಪ್ರಯೋಗ ಇನ್ನಷ್ಟು ವಿಸ್ತಾರವಾದ ಓದುಗ ಬಳಗಕ್ಕೆ ಧಕ್ಕಲಿ ಎಂದು ಆ ಎಲ್ಲಾ ಬರಹಗಳನ್ನೂ ಅವಧಿಯ ‘ಸಂಡೆ ಸ್ಪೆಷಲ್’ ಭಾಗವಾಗಿಸುವ ಬಗ್ಗೆ ಮಾತನಾಡಿದೆ. ಅದರ ಫಲ ನಿಮ್ಮ ಮುಂದಿದೆ.
ಅಪರಂಜಿ ಬಳಗ ದೊಡ್ಡದು. ಸಂಪಾದಕೀಯ ಬಳಗಕ್ಕೂ ಓದುಗರಿಗೂ ಅವಧಿಯ ವಂದನೆಗಳು.
-ಜಿ ಎನ್ ಮೋಹನ್
ಯಾವ ರೀತಿ ಇರಬಹುದು ಎನ್ನುವ ಕುತೂಹಲ