ಅನುಸೂಯ ಯತೀಶ್ ಓದಿದ ‘ಎದೆಯ ದನಿ ಕೇಳಿರೋ’

ಅನುಸೂಯ ಯತೀಶ್

“ರಸಾನುಭವವು ಬ್ರಹ್ಮಾನುಭವವೇ ಆಗಿರಲಿ ಇಲ್ಲದಿರಲಿ ಕಾವ್ಯದ ಅನುಭವದಿಂದ ಉಂಟಾಗುವ ಆನಂದವು ಈ ಪ್ರಪಂಚದಲ್ಲಿ ಮತ್ತೆ ಯಾವ ವೈಷಯಿಕ ಸುಖದಿಂದಲೂ ಉಂಟಾಗುವುದಿಲ್ಲ”. ಎಂಬ ಎ.ಆರ್. ಕೃಷ್ಣ ಶಾಸ್ತ್ರಿಯವರ ನುಡಿಯು ಕಾವ್ಯದ ಸೊಗಸನ್ನು, ಮಹತ್ವವನ್ನು ವ್ಯಕ್ತಪಡಿಸುತ್ತದೆ.

ಕಾವ್ಯ ಎಂಬುದು ಕವಿಯ ಹೃದಯದ ಭಾಷೆ. ಕವಿತೆಯು ಕವಿ ಎದೆಯ ದನಿಯಾಗಿ ಸಹಜವಾಗಿ ಹುಟ್ಟುವ ಕ್ರಿಯೆ. ಕವಿ ತಾನು ಕಂಡ ಸೊಗಸನ್ನು, ರಮಣಿಯತೆಯನ್ನು, ವಿಸ್ಮಯವನ್ನು, ಅನುಭವವನ್ನು ಸುಂದರವಾದ ಕಾವ್ಯ ಮಾಲೆಯಾಗಿಸುತ್ತಾನೆ. ಇದು ಕೇವಲ ಶಬ್ದಗಳ ಜೋಡಣೆಯಲ್ಲ. ಅದು ಅರ್ಥ, ಭಾವ, ಗೂಡಾರ್ಥ, ರೂಪಕಗಳು ಮತ್ತು ಪ್ರತಿಮೆಗಳನ್ನು ಒಳಗೊಂಡಿರುತ್ತದೆ. ಇವುಗಳನ್ನೆಲ್ಲ ರಮಣೀಯ ಭಾಷೆಯ ಮೂಲಕ ಸೃಜನಶೀಲವಾಗಿ ಅಭಿವ್ಯಕ್ತಪಡಿಸಿದಾಗ ಕಾವ್ಯ ಹುಟ್ಟುತ್ತದೆ. ಇದಕ್ಕೆ ಪೂರಕವಾಗಿ “ಕಾವ್ಯ ಬಾಹ್ಯ ಪ್ರಪಂಚದ ಯಥಾವತ್ತಾದ ಜಗತ್ತು” ಎಂಬ ಎ.ಸಿ.ಬ್ರಾಡ್ಲೆಯ ಮಾತನ್ನು ಸ್ಮರಿಸಬಹುದು.

“ಕವಿ ಅಳಿಯಬಹುದು ಆದರೆ ಕವಿತೆ ಅಳಿಯದು” ಎಂಬ ಕವಿವಾಣಿ ಕವಿಯ ಅನುಪಸ್ಥಿತಿಯಲ್ಲಿಯೂ ಕವಿತೆ ಅವನ ಪ್ರಾತಿನಿಧ್ಯತೆ ಸ್ಥಾಪಿಸಿ ಎಲ್ಲಾ ಕಾಲಕ್ಕೂ ಉಸಿರಾಡುತ್ತದೆ. ಇದೆಲ್ಲ ಸಾಧ್ಯವಾಗಬೇಕಾದರೆ ಕವಿಯು ಹೊಸತನಕ್ಕೆ ಎದುರಾಗಬೇಕು. ಸಮಾಜದಲ್ಲಿ ಬದಲಾವಣೆ ಪರ್ವ ಸೃಷ್ಟಿಸಬೇಕು. ಹಾಗಾದರೆ ಕವಿ ಮತ್ತು ಕವಿತೆ ಸರ್ವಕಾಲದಲ್ಲೂ ಮಾನ್ಯರಾಗುತ್ತಾರೆ.

“ಕವಿಯ ಹೃದಯ ಹದವಾಗಿ ಶ್ರುತಿ ಮಾಡಿಟ್ಟ ಒಂದು ವೀಣೆ ಇದ್ದಂತೆ. ಲೋಕದ ಆಗು ಹೋಗುಗಳಿಗೆ ಅದು ಪ್ರತಿಕ್ರಿಯೆಯನ್ನು ತೋರುತ್ತದೆ. ಕವಿ ವ್ಯಕ್ತಿತ್ವ ಒಂದಲ್ಲ ಎರಡಲ್ಲ ಅನಂತವಾದದ್ದು” ಎಂಬ ಕವಿವಾಣಿಯನ್ನ ಜೀರ್ಣಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು. ಲೋಕದ ಸಂವೇದನೆಗಳಿಗೆ ಧ್ವನಿಯಾಗಬೇಕು. ಕವಿತೆಗಳಲ್ಲಿ ಜೀವನ್ಮುಖಿ ಆಲೋಚನೆಗಳನ್ನ ಬಿತ್ತಬೇಕು. ವಿಲಾಸ ವಿನೋದದ ಜೊತೆಗೆ ನೋವಿಗೆ ಮಿಡಿವ ತುಡಿತವಿರಬೇಕು. ಸಂಕಟಗಳಿಗೆ ಕಿವಿಯಾಗಬೇಕು. ಆಗ ಒಬ್ಬ ಕವಿ ಸಮಾಜಮುಖಿ ಕವಿಯಾಗುತ್ತಾನೆ.

ಅನಂತ ಕುಣಿಗಲ್ ರವರ ಎದೆಯ ದನಿಯ ಕೇಳಿರುವ ಕವಿತಾ ಸಂಕಲನ 139 ಕವಿತೆಗಳನ್ನು ಒಳಗೊಂಡ ಬೃಹತ್ ಹೊತ್ತಿಗೆಯಾಗಿದೆ. ಇವುಗಳನ್ನು ಕವಿಯು ಮೂರು ಹಂತಗಳಲ್ಲಿ ವರ್ಗೀಕರಿಸಿ ಓದುಗರ ಮುಂದಿಟ್ಟಿದ್ದಾರೆ. ಅನಂತ ಅವರ ಹಿಂದಿನ ಕವನಸಂಕಲನ ಮೂರನೆಯವಳು ಕೃತಿಗೂ ಇದಕ್ಕೂ ಸಾಕಷ್ಟು ವಿಭಿನ್ನತೆಗಳಿವೆ. ಅಲ್ಲಿ ಸಂಪೂರ್ಣವಾಗಿ ಸ್ತ್ರೀ ಸಂವೇದನೆಗಳನ್ನು ಮಹಿಳಾ ಜಗತ್ತಿನ ಒಳ ಹೊರಗುಗಳನ್ನು ತೆರೆದಿಟ್ಟಿದ್ದಾರೆ. ಆದರಿಲ್ಲಿ ಕವಿಯ ಮಾತೇ ಬೇರೆಯಾಗಿದೆ. ಬಾಲ್ಯದ ಅನುಭವಗಳ ಬುತ್ತಿಯ ಜೊತೆಗೆ ಮೂಢ ಮನಸ್ಸಿನ ಮುಖಗಳನ್ನು ಅನಾವರಣಗೊಳಿಸಿದ್ದಾರೆ. ಇಲ್ಲಿ ಕವಿಯ ವಿಭಿನ್ನ ಬರಹದ ಚಹರೆಗಳನ್ನು ಗುರುತಿಸಬಹುದು. ಬಾಲ್ಯವನ್ನ ಪ್ರತಿನಿಧಿಸುವ ಕವಿತೆಗಳನ್ನು ಓದುವಾಗ ತುಂಬಾ ಮುಗ್ಧ ಸ್ವರೂಪದಲ್ಲಿ ಕಾಣುವ ಕವಿ, ಮುಂದಿನ ಹಂತಕ್ಕೆ ಜಿಗಿದಾಗ ವೈಚಾರಿಕವಾಗಿ ಯೋಚಿಸುತ್ತ ಚಿಂತನಾಶೀಲ ಆಲೋಚನೆಗಳನ್ನು ಬಿತ್ತುತ್ತಾರೆ. ಕಿರಿಯ ವಯಸ್ಸಿನಲ್ಲಿಯೆ ಹಿರಿಯ ಅನುಭವಗಳನ್ನು ಸಂಪಾದಿಸಿಕೊಂಡು, ಲೋಕ ಜ್ಞಾನವನ್ನು ಗ್ರಹಿಸುವ ಸೂಕ್ಷ್ಮಗ್ರಾಹಿಯಾಗಿ ಮೂರನೇ ಹಂತಕ್ಕೆ ಚಲಿಸಿದ್ದಾರೆ.

ಅನಂತ ಅವರ ಕಾವ್ಯಗಳು ಹದಿಹರೆಯದ ರಭಸ, ಭಾವತೀವ್ರತೆಯ ಪ್ರಕಟದ ಜೊತೆಗೆ, ಕಿರಿವಯಸ್ಸಿನಲ್ಲೆ ಅವರುಂಡ ಅಪಾರ ಅನುಭವ ಮಾಗಿ ಕವಿತೆಗಳಾಗಿ ಅಭಿವ್ಯಕ್ತಗೊಂಡಿವೆ. ಇಲ್ಲಿ ಕವಿ ಕಲ್ಪನೆಗೆ ಬಾಗದೆ ನೈಜತೆಗೆ ಮುಖಾಮುಖಿಯಾಗಿ ಮನದ ಮಾತುಗಳನ್ನು ಕಡೆದು ಕಾವ್ಯದ ನವನೀತವಾಗಿಸಿದ್ದಾರೆ. ಹಾಗಾಗಿ ಈ ಸಂಕಲನ ವಾಸ್ತವಿಕತೆಗೆ ಹತ್ತಿರವಾಗಿದೆ. ನೋವುಂಟು ಪುಟ್ಟಿದೆದ್ದ ಕವಿಯ ಭಾವಗಳು ಕಾವ್ಯ ಚಿತ್ರಗಳಾಗಿವೆ. ತನ್ನ ನೋವು ಸಮಾಜದ ನೋವಾಗಿ, ಶೋಷಣೆಯ ವಿಕೃತ ಮುಖವಾಡವನ್ನು ಖಂಡಿಸುವ ಜೀವಪರ ಚಿಂತನೆಯ ಕವಿತೆಗಳು ಕವಿಯ ಲೇಖನಿಯಿಂದ ಪುಂಖಾನುಪುಂಖವಾಗಿ ಹರಿದಿವೆ. ಬದುಕಿನ ಸಂಘರ್ಷಗಳನ್ನು ಎದುರಿಸುವ, ಅನ್ಯಾಯವನ್ನು ಕಂಡಾಗ ಪ್ರತಿಭಟಿಸುವ, ನ್ಯಾಯದ ಅಹವಾಲುಗಳನ್ನು ಮಂಡಿಸುವ ಇರಾದೆ ಕವಿಗಿದೆ. ಇವರು ತೆರೆದಿಟ್ಟ ಅನುಭವದ ಕವಿತೆಗಳು ಹತಾಶೆ, ನಿರಾಸೆಯನ್ನು ಹೊತ್ತು ತರುವುದರೊಂದಿಗೆ ಮಾನವೀಯ ಸಂಬಂಧಗಳಲ್ಲಿ ಉಂಟಾಗುತ್ತಿರುವ ಬಿರುಕುಗಳ ಬಗ್ಗೆ ಖೇದ‌ ಭಾವ ತೋರುತವೆ. “ಕವಿಯಲ್ಲಿ ಪಟ್ಟ ಪಾಡಲ್ಲವೂ ಹುಟ್ಟು ಹಾಡಾಗುತ ರಸವಾಗಿ ಹೊಸದಾಗಿ ಹರಿಯುತ್ತಿವೆ” ಎಂಬ ವರ ಕವಿ ಬೇಂದ್ರೆ ಅವರ ಮಾತನ್ನು ಇಲ್ಲಿ ಸ್ಮರಿಸಬಹುದು.

ಇಲ್ಲಿ ಕವಿ ತಮ್ಮ ಬಾಲ್ಯದ ಸಿಹಿ ಕಹಿ ಅನುಭವಗಳನ್ನು ಕಾವ್ಯದ ಮಡಿಲಿಗೆ ಹಾಕಿ ಲಾಲಿ ಹಾಡಿದ್ದಾರೆ.ಇಲ್ಲಿ ಮನಸ್ಸು ಗತಕಾಲದ ಹುರುಪನ್ನು, ಹರುಷವನ್ನು ನೆನೆದು ಈಗ ಅದಾವುದು ಇಲ್ಲವೆಂದು ರೋಧಿಸಿದರೆ, ಮತ್ತೊಮ್ಮೆ ಉತ್ಸಾಹದ ಬುಗ್ಗೆಯಾಗಿ ಹರಿಯುತ್ತದೆ. ಭವಿಷ್ಯವನ್ನು ಎದುರುಗೊಳ್ಳಲು ವರ್ತಮಾನದಲ್ಲಿ ಸ್ಪೂರ್ತಿಯ ಶಕ್ತಿಯಾಗುತ್ತವೆ ಈ ಕವಿತೆಗಳು. ಬದುಕಿನ ನಿತ್ಯ ಸತ್ಯಗಳನ್ನು, ಆಲೋಚನೆಗಳನ್ನು ಸೂರ್ಯ ರಶ್ಮಿಯಂತೆ, ಮುಂಜಾವಿನ ವೈಭವದಂತೆ ತೆರೆದಿಟ್ಟಿದ್ದಾರೆ.ಇಲ್ಲಿನ ಕವಿತೆಗಳಲ್ಲಿ ಶಬ್ದಾರ್ಥವಿದೆ, ಭಾವಾರ್ಥವು ಇದೆ. ಮುಖ್ಯವಾಗಿ ಹುಡುಕಾಟವಿದೆ, ಮುಖವಾಡಗಳಿಂದ ಮುಕ್ತವಾದ ಬದುಕಿನ ಹಂಬಲವಿದೆ. ಸಮಾಜದ ಕ್ರೌರ್ಯ, ಶೋಷಣೆ, ಅಸಮಾನತೆ, ದಬ್ಬಾಳಿಕೆಯ ಕರಾಳ ಚಿತ್ರಣಗಳಿವೆ. ಸಾಮಾಜಿಕ ಪ್ರಜ್ಞೆ ಇದೆ.ಇವೆಲ್ಲವನ್ನು ತಮ್ಮ ಬರಹಗಳಲ್ಲಿ ರೂಢಿಸಿಕೊಂಡು ಕಾವ್ಯ ಕಟ್ಟುತ್ತಾ ಸಾಗಿದ್ದಾರೆ. ಜಾತಿ ಮತ ಧರ್ಮದ ಜಾಢ್ಯಗಳನ್ನು ಪ್ರಾಂಜಲವಾಗಿ ವಿರೋಧಿಸುವ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ರವರು ಕಂಡು ಕನಸುಗಳು ನನಸಾಗುವಲ್ಲಿ ಎದುರಾಗುವ ತೊಡಕುಗಳಿಗೆ ಕವಿ ಭಾವ ಬಿಕ್ಕಳಿಸುತ್ತದೆ.

ಪ್ರಥಮಾರ್ಧದಲ್ಲಿ ಬಾಲ್ಯದ ಅನುಭವಗಳ ಧಾರೆಯನ್ನು ಪ್ರತಿಯೊಬ್ಬರ ಬಾಲ್ಯದ ನೆನಪುಗಳ ಬುತ್ತಿಯ ಪ್ರತೀಕದಂತೆ ಹೆಣೆದಿದ್ದಾರೆ.ಇಲ್ಲಿ ಪ್ರಮುಖವಾಗಿ ಬಾಲ್ಯದ ಸಿಹಿ ಕಹಿ ಅನುಭವಗಳು, ಗೆಳೆಯರೊಂದಿಗೆ ಆಟ ತುಂಟಾಟ, ಪರಿಮಿತ ಆಸೆಗಳು, ಅಪರಿಮಿತ ಸುಖ ಸಂತೋಷ, ಕನಸುಗಳು, ಶಾಲೆಯ ರೋಚಕ ಅನುಭವಗಳು, ಅದ್ಭುತ ನಿರೀಕ್ಷೆ, ಸಾಧನೆಯ ಹಂಬಲ, ಅವ್ವನ ತ್ಯಾಗ, ಶೋಷಿತ ಮನದ ಆಲಾಪನೆ, ಹಬ್ಬಗಳ ಸಂಭ್ರಮವು ಕಾವ್ಯ ಸಂಭ್ರಮದಂತೆ ಹರಿದಿವೆ. ಮನುಜ ಜೀವನದಲ್ಲಿ ಬಾಲ್ಯ ಚಿರಸ್ಮರಣೀಯ ಘಟ್ಟ. ಇವೆಲ್ಲ ಕವಿಯ ಲೇಖನಿಯಿಂದ ಪಂಖಾನುಪುಂಖವಾಗಿ ಕಾವ್ಯಧಾರೆಯಾಗಿ ಹರಿದಿವೆ. ಎಲ್ಲರ ಬಾಲ್ಯವೂ ಕೂಡ ಒಂದೇ ತೆರನಾಗಿರುತ್ತದೆ ಎಂದು ಹೇಳಲಾಗದು. ಒಬ್ಬೊಬ್ಬರ ಬಾಲ್ಯದ ಅನುಭವಗಳು ಒಂದೊಂದು ರೀತಿಯ ಬುತ್ತಿಯಾಗಿರುತ್ತವೆ. ಅದೊಂದು ಸುಂದರ ಕಾಲ. ಆದರಿಂದು‌ ಒತ್ತಡ, ಆಕರ್ಷಣೆ, ನಾಗರಿಕತೆ ಸೋಗಿನಿಂದ ಮುರುಟಿ ಗಿಡದಿಂದ ಜಾರಿದ ಹೂವಿನಂತಾಗಿದೆ. ಆ ಕ್ಷಣ ಮತ್ತೆಂದು ಬಾರದೆಂಬ ಕಟು ಸತ್ಯವನ್ನು ಹೊತ್ತು ವಾಸ್ತವಕ್ಕೆ ಮರಳಿಸುತ್ತವೆ.

ಎರಡನೇ ಭಾಗದ ಬಹುತೇಕ ಕವಿತೆಗಳು ಎಚ್ಚರಿಕೆಯ ಗಂಘನಾದವನ್ನು ಮೊಳಗಿಸುವ ಮೂಲಕ ಮಾನವನ ಅಳಿವು ಉಳಿವಿನ ಪ್ರಶ್ನೆಯನ್ನು ಎತ್ತುತ್ತವೆ. ವಾಸ್ತವಿಕತೆಯ ಅರಿವಿನಲ್ಲಿ ಸಾಗಲು ದಾರಿ ಮಾಡಿಕೊಡುತ್ತವೆ. ಕರೋನ ಕಾಲದ ಸಾವು ನೋವು ಕುರಿತು ಚರ್ಚಿಸುತ್ತ ಇವೆಲ್ಲಕ್ಕೂ ಮೂಲ ನಾವೇ. ಪ್ರಕೃತಿಯ ಸೃಷ್ಟಿಯ ಕ್ರಿಯೆಯ ವಿರುದ್ಧ ಸಾಗಿದ ನಮ್ಮ ಹೆಜ್ಜೆಗಳೇ ಇಂದು ಭಯಾನಕ ಕುತ್ತಿನಲ್ಲಿ ಸಿಲುಕಿಸಿವೆ ಎಂಬ ಕಹಿ ಸತ್ಯವನ್ನ ನಿರ್ದಾಕ್ಷಿಣ್ಯವಾಗಿ ಮಂಡಿಸಿದ್ದಾರೆ.

ಕೊನೆಯ ಭಾಗದಲ್ಲಿ ಕವಿತೆಯ ಮಾತೇ ಬೇರೆ ಎಂಬ ಟ್ಯಾಗ್ ಲೈನ್ ಅಡಿಯಲ್ಲಿ ಇವರ ಮನದೊಳಗಿನ ಅಖಂಡ ಭಾವಗಳನ್ನ ಹೊರಹಾಕಿದ್ದಾರೆ. ಇಲ್ಲಿ ಕವಿ ವಿಡಂಡನೆ ಮತ್ತು ವ್ಯಂಗ ಭಾವದಲ್ಲಿ ತಾನು ಕಂಡ ಅವ್ಯವಸ್ಥೆಗಳನ್ನು ವಿರೋಧಿಸುತ್ತಾರೆ. ಸಮಾಜಘಾತುಕ ಮನಸ್ಸುಗಳು ತಮ್ಮೊಳಗಿರುವ ಕೊಳಕು ದ್ವೇಷಾಸೂಯೆಗಳನ್ನು ತೊರೆದು ಹಳಸುತ್ತಿರುವ ಮನಸ್ಸುಗಳಲ್ಲಿ ಪ್ರೀತಿ ವಾತ್ಸಲ್ಯಗಳನ್ನು ತುಂಬಿ ತಾಜಾಗೊಳಿಸುವ ಮಹತ್ತರ ಆಶಯವನ್ನು ಬಿಂಬಿಸುತ್ತಾರೆ. ಅನಂತ ಅವರ ಕಾವ್ಯ ವಸ್ತುಗಳಲ್ಲಿ ಹೊಸತನ ಮೈದೋರಿರುವುದು ಗೋಚರಿಸುತ್ತದೆ. ಇವರು ತಮ್ಮ ಕವಿತೆಗಳಿಗೆ ಇಂತದ್ದೇ ಕಾವ್ಯ ವಸ್ತು ಬೇಕೆಂದು ಆಯ್ದು ಬರೆದಿಲ್ಲ. ತನ್ನನ್ನು ಸೆಳೆದ ತನ್ನೆಡೆಗೆ ಮುಖ ಮಾಡಿದ ವಿಚಾರಗಳನ್ನು ತನ್ನದೇ ದಾಟಿಯಲ್ಲಿ ಬರೆಯುತ್ತ ಸಾಗಿದ್ದಾರೆ. ತನಗೆ ತಪ್ಪೆನಿಸಿದ್ದನ್ನು ದರ್ಶಿಸುವ ಮೂಲಕ ನಿರ್ಣಯಿಸಲು‌ ಓದುಗರನ್ನು ಸ್ವಾಗತಿಸುತ್ತಾರೆ. ಇದರಿಂದ ಕವಿತೆಯ ಪರಿಣಾಮಕಾರಿಯಾಗಿರುತ್ತದೆ ಎಂಬುದು ಕವಿಯ ಮನದಿಂಗಿತ. ಇವರ ಆಸಕ್ತಿಯ ವಸ್ತುಗಳು ಕವಿಯ ಕಾವ್ಯ ಪ್ರೀತಿಯ ಧೋತಕವಾಗಿವೆ. ತಮಗೆ ದಕ್ಕಿದ ಅನುಭವವನ್ನು ಅಕ್ಷರ ರೂಪಕ್ಕೆ ತಿಳಿಸಿದ್ದಾರೆ. ಇಲ್ಲಿ ಕವಿಯ ಸಾಮಾಜಿಕ ಹೊಣೆಗಾರಿಕೆಯನ್ನು ನಾವು ಮೆಚ್ಚಲೇಬೇಕು.

“ಓದಬೇಡಿ” ಎಂಬ ಕವಿತೆಯಲ್ಲಿ ಒಡಮೂಡಿರುವ
“ನಾನು ಪದಪುಂಜಗಳ ಕಟ್ಟು
ನ್ಯಾಯದ ತೂಕಕ್ಕೆ ತೂಗುವ ಬೊಟ್ಟು
ಸತ್ಯವನ್ನು ಉಸುರುತ್ತೇನೆ
ಯಾವ ಭಯವಿಲ್ಲದೆ”
ಎಂಬ ಸಾಲುಗಳು ಕವಿತೆಯ ಜವಾಬ್ದಾರಿ ಹಾಗೂ ಬದ್ಧತೆಯನ್ನು ವ್ಯಕ್ತಪಡಿಸುತ್ತವೆ. ಕವಿ ಅಗತ್ಯ ಬಿದ್ದಾಗ ಸತ್ಯವನ್ನು ಹೇಳಲು ತಪ್ಪನ್ನು ತಿದ್ದಲು ಕಂಕಣ ಬದ್ಧನಾಗಿರಬೇಕು. ಇವನು ಪರ ವಿರೋಧಗಳ ಸಾಲಿನಲ್ಲಿ ನಿಲ್ಲದೆ, ನ್ಯಾಯ ಸತ್ಯದ ಮಾರ್ಗದಲ್ಲಿ ನಡೆಯಬೇಕೆಂಬ ಸಂದೇಶವನ್ನು ಇದು ಹೊತ್ತು ತಂದಿದೆ. ಆ ಮೂಲಕ ಕವಿಗಳ ನಡೆ ಯಾವುದಾಗಿರಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಇಂತಹ ಚಿಂತನಯುಕ್ತ ಸಾಲುಗಳು ಕಾವ್ಯವಾದಾಗ ಒಂದಷ್ಟು ಬದಲಾವಣೆಗಳನ್ನು ಸಮಾಜ ಕಾಣಬಹುದೇನೋ..

“ಬೆಳೆಸಿದರೆ ಬೆಳೆಯುವೆನು
ಇಲ್ಲದೆಯೂ ಬೆಳೆಯುವೆನು
ಅವ್ವನ ಆಶೀರ್ವಾದದಿಂದ
ಶತ್ರುವನ್ನೂ ಗೆಲ್ಲುವೆನು”
ಎಂಬ ಸಾಲುಗಳು ಭಿನ್ನಹ ಕವಿತೆಯಲ್ಲಿದ್ದು ಸಾಧನೆ,‌ ಏಳ್ಗೆ, ಗೆಲುವು ಎನ್ನುವುದು ಸ್ವಯಂ ಶಕ್ತಿಯ ಪ್ರತೀಕವೇ ಹೊರತು ಇತರರ ಬಳುವಳಿಯಲ್ಲ ಎನ್ನುತ್ತಾ ತಾಯೊಬ್ಬಳ ಹಾರೈಕೆ ಎಲ್ಲವನ್ನು ಸಾಧ್ಯವಾಗಿಸುತ್ತದೆ ಎಂಬ ಭಾವ ತುಂಬಿದ್ದಾರೆ. ಆ ಮೂಲಕ ಅವ್ವನಿಗೆ ಜಗದಲ್ಲಿ ಯಾರೂ ಸಾಟಿ ಇಲ್ಲ ಎಂಬ ತತ್ವವನ್ನು ಕೂಡ ಹೊರಹಾಕಿದ್ದಾರೆ.

“ಖಾಲಿ ಜೇಬು ಖಾಲಿ ಹೊಟ್ಟೆ
ಖಾಲಿ ಕೈ ಕಾಲುಗಳು ಹರಿದ ಬಟ್ಟೆಗಳು
ಚಾವಣಿ ಇಲ್ಲದ ಮನೆ ಬಿಸಿ ಬೆವರು
ನನ್ನ ಬದುಕಿನ ಆರನೇ ತಿರುವುಗಳು”
ಎಂಬ ತಿರುವುಗಳು ಪದ್ಯದ ಸಾಲುಗಳು ಕವಿಯೊಬ್ಬನ ಮನದಾಳ ಮಾತ್ರವಲ್ಲದೆ ನಮ್ಮ ಮನುಕುಲದ ಬಹುತೇಕರ ಬಿಸಿಯುಸಿರಿನ ಜೀವಂತ ಕಿಡಿಯಾಗಿವೆ.

“ಅಂಬರದಾಗ ಮನೆಯ ಹುಡುಕಿ
ಕೈಲಾಸ ಸೇರಿದನು
ಭುವಿಯೊಳು ನೆನಪಿನ
ಬಗ್ಗೆ ಎಬ್ಬಸಿ ಮಾಯವಾದನು”
ಎಂದು ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸುವ ಈ ಸಾಲುಗಳಲ್ಲಿ ಮಾನವೀಯತೆಯ ಸಾಕಾರ ಮೂರ್ತಿಯಾಗಿದ್ದ ಅಪ್ಪುವಿನ ಆಕಸ್ಮಿಕ ಸಾವಿಗೆ ಕಂಗಳನ್ನು ಒದ್ದೆಯಾಗಿಸುವಂತ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪ್ಪುವಿಗೆ ಸಂದಂತಹ ಸಾಹಿತ್ಯದುಡುಗೊರೆಯನ್ನು ನೋಡಿದಾಗ ನಿಜಕ್ಕೂ ಅಂತಹ ಒಂದು ಬದುಕು ಇತರರಿಗೂ ಮಾದರಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

“ಎಲ್ಲಾ ಧರ್ಮದ ಎಲ್ಲಾ ಜಾತಿಯ
ಎಲ್ಲರೂ ಇಲ್ಲೇ ಇದ್ದಾರೆ ನೋಡಿ
ಇಲ್ಲ ತೇಲುತ್ತಿದ್ದಾರೆ, ನೋಡಿ
ಈ ಬತ್ತದ ಅಗಣಿತ ವಿಶಾಲ ಹೃದಯದಲ್ಲಿ
ಸೋತು ಮುಳುಗಿವೆ ನೋಡಿ
ಸಾಲು ಸಾಲು ಹೆಣಗಳು
ಗಂಗೆಯ ಮಡಿಲಲ್ಲಿ”
ಈ ಕವಿತೆಯಲ್ಲಿ ಕವಿ ಎರಡು ರೀತಿಯ ಚಿಂತನೆಯನ್ನು ಹುಟ್ಟು ಹಾಕಿದ್ದಾರೆ. ಬದುಕಿದ್ದಾಗ ಜಾತಿ ಧರ್ಮದ ಅಮಲಿನಲ್ಲಿ ಹೊಡೆದಾಡಿ ಸಾಯುವ ಎಲ್ಲ ಜನ ಸಾವಿನಲ್ಲಿ ಒಂದಾಗುತ್ತಾರೆ ಎಂಬ ತಾತ್ವಿಕತೆ ಇದ್ದರೆ, ಮುಂದುವರೆದಂತೆ ಪ್ರಕೃತಿಯ ವಿನಾಶ ಮಾಡಿದ ಫಲಶ್ರುತಿಯಾಗಿ ನಾವು ಅಳಿಯುತ್ತಿದ್ದೇವೆ ಎಂಬ ಸಂದೇಶವನ್ನು ಕೂಡ ನೀಡುತ್ತವೆ.

ಹಸಿದು ವ್ಯಾಘ್ರಗಳಾಗಿ
ಒಮ್ಮೊಮ್ಮೆ ಅಸಹಾಯಕರಾಗಿ
ಅಲ್ಲಿಬ್ಬರು ಮತ್ತು ದೂರದಲ್ಲಿಬ್ಭರು
ಬೇಡುತ್ತಾ ನಿಂತಿದ್ದರು
ಅನ್ನಕ್ಕಾಗಿ ಅಲ್ಲ ನೋಟಿಗಾಗಿ
ಅವರು ಭಿಕ್ಷುಕರಲ್ಲ ಭ್ರಷ್ಟರು”
ಎಂಬ ಕವಿತೆ ಭಿಕ್ಷಕರಿಗಿಂತ ಹೀನಾಯ ಬಾಳು ಭ್ರಷ್ಟರದು ಎಂದು ಸಾರುತ್ತದೆ. ಸಾರ್ವಜನಿಕ ಸೇವೆ ಮಾಡುವ ವ್ಯವಸ್ಥೆಯಳಗಿನ ಲಂಚಕೋರರನ್ನು ಕುರಿತು ಕವಿಯ ಆಕ್ರೋಶ ಭರಿತ ಸಾಲುಗಳಿವು. ಈ ಕವನದ ಮೂಲಕ ಕವಿಯು ಪ್ರಾಮಾಣಿಕತೆಯ, ಸತ್ಯದ ಪ್ರಭುತ್ವ ಮತ್ತು ವ್ಯವಸ್ಥೆಯನ್ನು ಬಯಸುತ್ತಾರೆ.

“ನಮ್ಮ ಲಜ್ಜೆತನಗಳು” ಕವಿತೆಯಲ್ಲಿ ಮನುಷ್ಯನ ಮುಖವಾಡದ ವಿರಾಟ ದರ್ಶನ ಮಾಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ, ಕಾಣದ ವೇಷಧಾರಿಗಳು ಮತ್ತು ಅವರ ದುಷ್ಕ್ರತ್ಯಗಳನ್ನು ತೆರೆದಿಡುವ ಮೂಲಕ ಜನತೆ ಜಾಗೃತವಾಗಿರಬೇಕೆಂದು ವ್ಯಾಮೋಹಿಗಳ ಬಲೆಯಲ್ಲಿ ಬೀಳಬಾರದು ಎಂದು ಕವಿತೆ ಬಯಸುತ್ತದೆ.

“ನಾನು ಯಾರ ವಿರುದ್ಧವಲ್ಲ
  ಅನ್ಯಾಯದ ವಿರುದ್ಧ
ತಪ್ಪನ್ನು ಪ್ರಶ್ನಿಸುವುದು
ಎಲ್ಲರ ಹಕ್ಕು
ಇಲ್ಲಿ ಯಾರು ಪ್ರಶ್ನಾತೀತರಲ್ಲ”
ಎಂಬ ಸಾಲುಗಳಲ್ಲಿ ಕವಿ ತಪ್ಪು ಯಾರು ಮಾಡಿದರು ತಪ್ಪೇ, ತಪ್ಪನ್ನ ಕಂಡಾಗ ನಿರ್ಧಾಕ್ಷಿಣ್ಯವಾಗಿ ಖಂಡಿಸಿ, ಪ್ರಶ್ನಿಸುವುದು ಕವಿಯ ಹಕ್ಕು. ಅನ್ಯಾಯ ಕಂಡರೂ ಪ್ರತಿಬಟಿಸದಿದ್ದರೆ ಅವನು ಕವಿ ಅಲ್ಲವೇ ಅಲ್ಲ ಎನ್ನುತ್ತಾರೆ. ಆ ಮೂಲಕ ಕವಿಯ ಸಾಮಾಜಿಕ ಹೊಣೆಗಾರಿಕೆಯನ್ನು ನೆನಪು ಮಾಡುತ್ತಾರೆ.

“ಬಾವುಕತೆಗೆ ಹೆಸರಾದವಳು
ನನ್ನ ಕವಿತೆಗಳಿಗೆ ದನಿಯಾಗಿ
ಕಥೆಗಳಿಗೆ ಪಾತ್ರವಾದವಳು
ನನ್ನವಳು ನನ್ನ ಮನೆಯವಳು
ಎದೆಯಲ್ಲಿನ ಯಾಶಿ ಅವಳು”
ತನ್ನ ಕಾವ್ಯ ಕನ್ನಿಕೆಯನ್ನು ಕವಿ ಪರಿಪರಿಯಾಗಿ‌ ಧೇನಿಸುವ ಸೊಗಸಿದು. ಇಲ್ಲಿ ಯಾಶಿ ಕವಿಯ ಕಥೆಗೆ ಕವಿತೆಗೆ ಮೂಲ ದ್ರವ್ಯವಾಗಿದ್ದಾಳೆ.

“ಓದಿದರೆ ಕಾವ್ಯವಾಗಬಲ್ಲದು
ಮತ್ತೆ ಓದಿದರೆ ಗದ್ಯವಾಗಬಹುದು
ಎಲ್ಲಿಲ್ಲದ ಮಾಂತ್ರಿಕ ಶಕ್ತಿ ಈ ಕಾವ್ಯಕ್ಕೆ
ಕೆಲವರಿಗೆ ನೇರ ಚಾಟಿ ಏಟು
ತಳ ಸುಟ್ಟ ಹಾಗೆ
ಇಲ್ಲಿ ಎಲ್ಲವೂ ಸಂಭವಿಸಲಿದೆ”
ಈ ಕವಿತೆಯ ಸಾಲುಗಳು ಕಾವ್ಯವೆಂದರೇನು? ಕಾವ್ಯಕ್ಕಿರುವ ಅದ್ಭುತ ಶಕ್ತಿ ಏನೆಂಬುದನ್ನ ವಿವರಿಸುತ್ತದೆ.

“ಅಳಗುಣಿ” ಮನೆ ಕವಿತೆಯಲ್ಲಿ “ಎಲ್ಲಿಂದ ಎಲ್ಲಿಗೋ ನಂಟು
ತೀರದು ಸಂಬಂಧದ ಗಂಟು” ಎಂಬ ಸಾಲುಗಳು ಬಸ್ಸಿನಲ್ಲಿ ಬೆಸೆದ ‌ಬಾಂಧವ್ಯವನ್ನು ಪ್ರಸ್ತಾಪಿಸುತ್ತಾ ಇತ್ತೀಚೆಗೆ ಸಂಬಂಧಗಳ ಹಳಸುವಿಕೆಯ ನೆನದು ವಿಷಾದ ಭಾವವನ್ನು ತೋರುತ್ತಾರೆ.

” ನಾವೇ” ಕವಿತೆಯು ಪ್ರಕೃತಿಯು ನಮ್ಮ ವಿರುದ್ಧ ಪ್ರಹಾರ ಮಾಡಲು ನಾವೇ ಕಾರಣಕರ್ತರು, ದುರಾಸೆಯ ದಾಹಕ್ಕೆ ನಿಸರ್ಗವನ್ನು ಬಲಿ ಕೊಟ್ಟು ಈಗ ಚಡಪಡಿಸುವ ಪರಿಯನ್ನು ಸಾರುವ ಜೊತೆಗೆ ಈಗಲಾದರೂ ಎಚ್ಚೆತ್ತುಕೊಂಡು ಜಾಗೃತ ಹೆಜ್ಜೆಯನಿಡದಿದ್ದರೆ ಭೂಗತವಾಗುತ್ತೇವೆ ಎಂಬ ಕಿವಿ ಮಾತನ್ನ ಹೊತ್ತು ತಂದಿವೆ.

“ನನಗೂ ಒಂದು ಹುಡುಗಿ ಬೇಕಿತ್ತು”
ಕವಿತೆಯು ಹಿಂದಿ ಹರೆಯದ ಯುವಕರ ಮನಸ್ಸಿನ ಹಸಿಬಿಸಿ ಬಯಕೆಗಳನ್ನು ರಮ್ಯಾ ಭಾವದಲ್ಲಿ ತನು ಮನಗಳಿಗೆ ಕಚಗುಳಿ ಇಡುವಂತೆ ಭಟ್ಟಿಯಿಳಿಸಿದ್ದಾರೆ.

“ನನ್ನ ಮಾತು ಮೌನವಾಗಿದೆ” ಕವಿತೆಯಲ್ಲಿ ಬರುವ
“ಮೂಕನಿಗೆ ಆಯಸ್ಸು ಹೆಚ್ಚುಂಟು
ಅದಕ್ಕೆ ನನ್ನ ಮಾತು ಮೌನವಾಗಿದೆ” ಎಂಬ ಸಾಲುಗಳಲ್ಲಿ ನಾವು ನ್ಯಾಯ ಕೇಳಿದರೆ, ದುಷ್ಟತನದ ವಿರುದ್ಧ ಪ್ರತಿಭಟಿಸಿದರೆ, ಎದೆಯಾಳದ ನೋವನ್ನು ಬಗೆದಿಟ್ಟರೆ ನಮ್ಮನ್ನು ಸಮಾಜ ನೆಮ್ಮದಿಯಾಗಿರಲು ಬಿಡುವುದಿಲ್ಲ. ಅದಕ್ಕಾಗಿ ನಾವು ಎಲ್ಲವನ್ನು ಕಂಡರೂ ಕಾಣದ ಕುರುಡರಂತೆ, ಬಾಯಿ ಇದ್ದು ಮೂಕರಂತೆ ಮೌನವಾಗಿರಬೇಕೆಂಬ ಹತಾಶೆಯ ಭಾವ ವ್ಯಕ್ತವಾಗಿದೆ.

“ಹಚ್ಚೋಣ ಬನ್ನಿ ದೀವಿಗೆ
ಗಡಿಯನು ಕಾಯುವ ಸೈನಿಕರಿಗೆ
ಸತ್ತು ಸ್ವರ್ಗ ಸೇರಿದ ರೈತರಿಗೆ
ನೋವು ತಿಂದು ಅಗಲಿದ ಹೆಣ್ಣಿಗೆ”
ಈ ಸಾಲುಗಳು ಸಮಾಜದಲ್ಲಿರುವ ಸೈನಿಕ, ರೈತ, ಹೆಣ್ಣಿನ ಸ್ಥಾನಮಾನವನ್ನು ಎತ್ತಿ ಹಿಡಿಯುವುದರ ಜೊತೆಗೆ ಇಂದು ಅವರ ಒಂದು ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕನಕ್ಕೆ ಒಳಪಡಿಸುತ್ತವೆ.

“ಎಂದೋ ಕಳೆದು ಹೋಗಿದ್ದ
ಕವಿತೆಯ ಸಾಲುಗಳು
ಅವಳೊಂದು ಸ್ಪರ್ಶಕೆ
ಮತ್ತೆ ಜೀವ ಪಡೆಯುತ್ತಿವೆ”
ಎನ್ನುವಲ್ಲಿ ಪ್ರೀತಿ ಪ್ರೇಮಕ್ಕೆ ಎಲ್ಲವನ್ನು ಮರು ಸೃಷ್ಟಿಸುವ ಶಕ್ತಿ ಇದೆ ಎಂದು ಸಾಬೀತುಪಡಿಸುತ್ತದೆ.

ನನ್ನನ್ನು ಬಹುವಾಗಿ ಕಾಡಿದ ಕವಿತೆ “ಹೆಲ್ಪ್ಲೈನ್”.
“ಇಲ್ಲಿ ನಾನು ಕೂಡ ಅನಾಥಾಶ್ರಮದಲ್ಲಿರುವೆ
ಆ ವಿಷಯ ಅವರಿಗೆ ಹೇಳುವವರಾರು
ನನ್ನ ಸ್ಥಿತಿ ತಿಳಿದರೆ
ಅವರ ಕರೆಗಳು ತಪ್ಪಬಹುದು
ನಂತರ ನಾ ಒಬ್ಬಂಟಿಯಾಗಬಹುದು
ಮತ್ತೆ ಅನಾಥನಾಗಬಹುದು”
ಇವು ಹಿರಿಯರ ಸಹಾಯವಾಣಿಯಲ್ಲಿ ಕರೆಗಳನ್ನು ಸ್ವೀಕರಿಸಿ ಸಾಂತ್ವನ ಹೇಳುವ ವ್ಯಕ್ತಿಯ ಮನದಾಳದ ಅನಾಥ ಭಾವದ, ಒಂಟಿತನದ, ದುಃಖದ, ಹತಾಶೆಯ ಸಾಲುಗಳು. ತುಂಬಾ ಅದ್ಭುತ ಭಾವದಲ್ಲಿ ಜೀವ ಪಡೆದಿವೆ. ಆ ಮೂಲಕ ಅನಾಥಾಶ್ರಮಗಳ ಸೃಷ್ಟಿಗೆ ಕಾರಣವಾಗುತ್ತಿರುವ ಮಾನವೀಯತೆ ಪ್ರೀತಿ ಕಳೆದುಕೊಂಡ ಸಂಬಂಧಗಳನ್ನು ಅಣಕಿಸುತ್ತವೆ.

“ಹೊಸ ಗೆಳತಿ ಸಿಕ್ಕರೆ
ಹಸಿವೆಯಾಗುವುದಿಲ್ಲ
ಬೇರೆ ಕೆಲಸವೇ ಇರುವುದಿಲ್ಲ
ಕೆಲಸವಿದ್ದರೂ ಮನಸ್ಸಿರುವುದಿಲ್ಲ”
ಎಂಬ “ಮೊದಲೆಲ್ಲ ಹಾಗೆಯೇ” ಕವಿತೆಯ ಸಾಲುಗಳು ಹೊಸದರಲ್ಲಿ ಎಲ್ಲವೂ ಆಸಕ್ತಿದಾಯಕ, ಕ್ರಮೇಣ ಅವುಗಳ ಬಗ್ಗೆ ನಿರ್ಲಕ್ಷ ಭಾವ ತೋರುತ್ತೇವೆ ಎಂಬುದನ್ನು ಹೇಳುತ್ತವೆ.

“ಮೊದಲಿನಂತಿಲ್ಲ ಯಾವುದೂ” ಎಂಬ ಕವಿತೆಯಲ್ಲಿ
“ಅಲ್ಲೊಬ್ಬ ನಾಯಿಯ ಹಾಗೆ
ಹುಡುಗಿಯರನ್ನು ಬೀದಿಯಲ್ಲಿ
ಮುದ್ದಿಸುತ್ತಿದ್ದಾನೆ ನೋಡಿ”
ಎನ್ನುವಲ್ಲಿ ಪ್ರೇಮದ ಹೆಸರಿನಲ್ಲಿ ನಡೆಯುವ ಕಾಮುಕ ಚೇಷ್ಟೆಗಳ ಅನಾವರಣವಿದೆ. ನೈಜ ಪ್ರೀತಿ ಎಂದು ತೋರ್ಪಡಿಕೆಯಾಗದು. ಅದೆಂದು ಪರಮ ಪವಿತ್ರ ಭಾವವೆನ್ನುವ ಕವಿ ಅದರ ದುರುಪಯೋಗಕ್ಕೆ ಕ್ರೋದಗೊಂಡಿದ್ದಾನೆ.

“ನೀ ಎಲ್ಲಿಗೆ ಹೋದೆ ಅಪ್ಪ
ನೊಗ ಕಟ್ಟಿ ಬೀಜ ಬಿತ್ತಿ
ಬೆಳೆದ ಬೆಳೆಯ ಕೈಗಿತ್ತು
ಖಾಲಿ ಹೊಟ್ಟೆಯಲ್ಲಿ ದಿನ ಕಳೆಯುತ್ತಿದ್ದೆ
ಬೆಚ್ಚಗಿರಲೆಂದು ನನ್ನ ತಬ್ಬುತ್ತಿದ್ದೆ
ಆಗ ನನ್ನ ಜೊತೆಯಲ್ಲಿದ್ದೆ”
ಅಪ್ಪನ ಬಗೆಗಿನ ಈ ಸಾಲುಗಳು ಅಪ್ಪನಿಲ್ಲದ ದಿನಗಳನ್ನು ನೆನೆದು ಹೇಳಲಾಗಿದೆ. ಚಿಕ್ಕವನಿದ್ದಾಗ ನೀನು ಜೊತೆಗಿದ್ದೆ. ಆದರೆ ಈಗ ನಾನು ದೊಡ್ಡವನಾಗಿದ್ದೇನೆ, ದುಡಿಯುತ್ತಿದ್ದೇನೆ, ಸುಖಪಡಲು ನೀನಿಲ್ಲವೆಂಬ ಭಾವ ಓದುಗರನ್ನು ಮೌನಕ್ಕೆ ಜಾರಿಸುತ್ತದೆ.

“ಪಜೀತಿ” ಕವಿತೆಯು ಕನ್ನಡಕ ಧರಿಸಿದರೆ ಆಗುವ ಪಜೀತಿಗಳನ್ನು ಹಾಸ್ಯ ಮತ್ತು ವ್ಯಂಗ್ಯ ಭಾವದಲ್ಲಿ ಕಟ್ಟಿಕೊಡುತ್ತದೆ. “ಮೂಢ ಮನಸ್ಸಿನ ಮುಖಗಳು” ಕವಿತೆಯು ಮೌಢ್ಯಗಳಿಂದ ಹೊರಬಂದು ವೈಜ್ಞಾನಿಕ ವಿಸ್ಮಯಗಳನ್ನು ಅರಿಯಿರಿ, ವಿಮರ್ಶಾತ್ಮಕವಾಗಿ ಯೋಚಿಸಿ ಎಂಬ ಕಿವಿಮಾತು ಹೇಳುತ್ತದೆ.

“ಮಾತು ಬಂದರೂ ಬಾಯಿ
ಮುಚ್ಚಿಕೊಳ್ಳಬೇಕು
ಸಂಬಂಧವಿದ್ದರೂ ದೂರ ನಿಲ್ಲಬೇಕು”
ಎಂಬ ಸಾಲುಗಳು ಕೊರೊನ ನಮ್ಮ ಮೇಲೆ ಸಾಮಾಜಿಕವಾಗಿ, ಭಾವನಾತ್ಮಕವಾಗಿ ತೋರಿದ ಕ್ರೌರ್ಯವನ್ನು ಎತ್ತಿ ಹಿಡಿದಿದೆ.

“ಹಬ್ಬ ಹರಿದಿನಗಳಿಗೆ ಅರ್ಧ ಪೆಟ್ಟು
ಶಾಲಾ ಕಾಲೇಜುಗಳಿಗೆ ನೊ ಎಕ್ಸಾಮ್ ಪೆಟ್ಟು
ಸಿನಿಮಾ ಶೂಟಿಂಗ್ ಫುಲ್ ಕಟ್ಟು
ಕೂಲಿ ಕಾರ್ಮಿಕರಿಗೆ ಪೆಟ್ಟು ಪೆಟ್ಟು
ಈಗ ಮಾಸ್ಕುಗಳದ್ದೇ ಮಾರ್ಕೆಟ್ಟು”
ಇದು ಕೊರೋನ ಕಾಲದ ಜನ ಜೀವನದ ಕರಾಳ ಚಿತ್ರಣಗಳನ್ನು ವರ್ಣಿಸುವ ಮನ ಮಿಡಿಯುವ “ಮಹಾಯುದ್ಧ” ಕವಿತೆಯ ಸಾಲುಗಳು. ಸಾಹಿತ್ಯದ ದೃಷ್ಟಿಯಿಂದ ಕೊರೋನ ಕಾಲಘಟ್ಟ ಸಾಹಿತ್ಯ ರಚನೆಯ ಸುಗ್ಗಿಯೆನ್ನಬಹುದು. ಅದೆಷ್ಟು ಸಾಹಿತ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದರೆಂಬುದು ಅತ್ಯಂತ ರೋಚಕ ಘಟನೆ.

ಬದಲಾವಣೆಯ ಚಡಪಡಿಕೆ, ತುಡಿತ ಕವಿಯ ಕಾವ್ಯದುದ್ದಕ್ಕೂ ಕಾಣುತ್ತದೆ. ಆದರೂ ಒಂದಿಷ್ಟು ಲಯಬದ್ಧತೆ ಮಾಗುವಲ್ಲಿ ಮುತುವರ್ಜಿಯ ಅಗತ್ಯವಿದೆ. ವಿಭಿನ್ನ ಕಾವ್ಯಗಳಿಂದೊಡಗೂಡಿದ ಇವರ ಕಾವ್ಯ ಕಣಜ ಮತ್ತಷ್ಟು ಪರಿಪಕ್ವವಾಗುತ್ತಾ ಸಾಗುತ್ತಿರಲಿ. ಕವಿಯು ತಾನು ಹೇಳಬೇಕಾದುದ್ದೆಲ್ಲವನ್ನು ನೇರವಾಗಿ ತೆರೆದಿಡದೆ ಒಂದಷ್ಟು ಮಾರ್ಮಿಕತೆ, ಗೂಢಾರ್ಥ, ಸೂಚ್ಯಾರ್ಥಗಳಲ್ಲಿ, ಸುಂದರವಾದ ರೂಪಕ ಪ್ರತಿಮೆಗಳಲ್ಲಿ ಬಂಧಿಸಿದ್ದರೆ ಅದರ ಸೊಗಸು ಮತ್ತಷ್ಟು ಹೆಚ್ಚುತ್ತಿತ್ತು. ಅವುಗಳ ಕಡೆಗೂ ಒಂದಿನಿತು ಗಮನ ಹರಿಸಿ ಪದ್ಯದ ಲಯಕ್ಕೆ ಹೊಂದಿಸಿದರೆ ಇವರ ಕವಿತೆಗಳು ಓದುಗರೆದೆಯ ಹಾಡಾಗಿ ಪ್ರಜ್ವಲಿಸುತ್ತವೆ. ಈ ದೃಷ್ಟಿಯಿಂದ ಸಾವಧಾನದ ನಡೆಯನ್ನು ರೂಢಿಸಿಕೊಂಡು ಮುನ್ನಡೆಯಲಿ. ಕನ್ನಡ ಕಾವ್ಯದಲ್ಲಿ ಅನಂತ ಕುಣಿಗಲ್ ಅವರ ಹೆಸರು ಅನಂತದವರೆಗೆ ರಾರಾಜಿಸಲಿ ಎಂದು ಮನದುಂಬಿ ಹರಸುವೆ.

ಒಟ್ಟಾರೆ ಈ ಕವನ ಸಂಕಲನ ಯುವಕವಿಯೊಬ್ಬನ ಮನೋಗತವನ್ನು ವಿವಿಧ ಆಯಾಮಗಳಲ್ಲಿ ತೆರೆದಿಟ್ಟಿದೆ. ಅನಂತ ಕುಣಿಗಲ್ ಅವರ ಜಾಗೃತ ಪ್ರಜ್ಞೆ ಮತ್ತು ನೋವಿಗೆ ಮಿಡಿಯುವ ಹೃದಯ ಮತ್ತಷ್ಟು ಮಗದಷ್ಟು ಸಮಾಜಮುಖಿ ಬರಹಕ್ಕೆ ನಾಂದಿ ಹಾಡಲಿ. “ಯುವಕರೆ ದೇಶದ ಅತ್ಯುನ್ನತ ಶಕ್ತಿಗಳು” ಎಂಬ ವಾಣಿಯನ್ನು ಸ್ಮರಿಸುತ್ತಾ ಯುವ ಕವಿಗೆ ಹಾರೈಸುವೆ.

‍ಲೇಖಕರು avadhi

March 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: