ಮಿಂದ ನದಿ ನೆನಪಿಗೆ ಒಂದೊಂದು ಬಿಂದಿಗೆ ನೀರು…
ಅದ್ಯಾಕೋ ಗೊತ್ತಿಲ್ಲ. ನಮ್ಮ ಮನೆಯ ಹೆಣ್ಣು ಮಕ್ಕಳಿಗೆಲ್ಲ ನದಿಗಳೆಂದರೆ ವಿಚಿತ್ರ ಅಬ್ಸೇಶನ್ ಜೊತೆಗೆ ಅಷ್ಟೇ ಆಕರ್ಷಣೆ. ಅಜ್ಜ, ದೊಡ್ಡಕ್ಕನನ್ನು ಚೊಚ್ಚಿಲ ಬಸುರಿಯ ಬಯಕೆ ಏನು ಎಂದು ಕೇಳಿದಾಗ ಅಲಕನಂದಾ-ಭಾಗೀರಥಿ ನದಿ ಸಂಗಮ ನೋಡಬೇಕು ಎಂದಿದ್ದಳು.
ಏಳು ತಿಂಗಳ ಪುಣ್ಯರೂಪಿಣಿಯನ್ನು ವಿಶೇಷ ಅನುಮತಿ ಮೇರೆಗೆ ಕಾಕಾ ಫ್ಲೈಟಿನಲ್ಲಿ ಕರೆದುಕೊಂಡು ಹೋಗಿ ತೋರಿಸಿಕೊಂಡು ಬಂದಿದ್ದರು. ಹೊರಗೆ ಹರಿವ ನದಿಗಳಿಗಿಂತ ಕಿರಿದಾಗಿ ಬರಿದಾಗಿ ನೀರ ಗೆರೆಯಾಗಿ, ತಳದೊಳೆಲ್ಲೋ ತಳುವಿ ಗುಳುಗುಳಿಸುತಿದೆ ಸೆಲೆಯು, ಏನನೋ ಕಾಯುತಿರುವೆ ಎನ್ನುವಂತೆ ಬದುಕುತ್ತ, ಒಳಗೊಳಗೊಳಗೆ ಹರಿವ ಗುಪ್ತಗಾಮಿನಿಗಳೆಂದರೆ ಜೀವ ಎನ್ನುವ ನನಗೆ ಬಸಿರು ಮತ್ತು ನದಿ ಒಟ್ಟೊಟ್ಟಿಗೆ ನೆನಪಾಗುತ್ತವೆ.
ನಮ್ಮ ಕಡೆ ‘ನಿಂತಿದೆ’ ಎಂದಾದ ಮೇಲೆ ಹೆಣ್ಣುಮಗಳನ್ನ ಯಾರಾದರೂ ಬೇರೆ ಊರಿಗೆ ಕರೆದರೆ, ಬೇಡ ಇನ್ನೂ ಮೂರು ಮುಗಿದಿಲ್ಲ ನದಿ ದಾಟುವುದು ಬೇಡ ಅಂತಲೇ ಹೇಳುವುದು ದೊಡ್ಡವರು. ನಾಲ್ಕರಲ್ಲಿ ಬೀಳುತ್ತಿದ್ದ ಹಾಗೆ ಎರೆದು, ಹೊಸದೊಂದು ಹಸುರು ಸೀರೆ ಉಡಿಸಿ ಆರತಿ ಮಾಡುವವರೆಗೆ ಬಟ್ಟೆ-ಬರೆ ಹೋಗಲಿ ಒಂದು ಹೊಸ ಹೇರ್ ಪಿನ್ ಕೂಡ ಮುಟ್ಟಗೊಡುತ್ತಿರಲ್ಲಿ ಅವ್ವ ಅಕ್ಕಂದಿರಿಗೆ.
ನಿನ್ನ ಬರುವಿಕೆ ಅದರ ಎದುರು ನೋಡುವಿಕೆಯ ಖುಷಿ ಸಂಭ್ರಮದ ಮುಂದೆ ಮಿಕ್ಕದ್ದೆಲ್ಲ ಗೌಣ ಎನ್ನುವ ಈ ಭಾವವೇ ಎಷ್ಟು ಚೆನ್ನ. ಸಂಪ್ರದಾಯ, ನಂಬಿಕೆ ಏನೇ ಇದ್ದರೂ, ತುಂಬು ತಿಂಗಳಿನ ಮಲ್ಲಿಗೆ ಹಂಬಿನ ನಡುವೆ ಹರಿವ ನದಿಯಂಥ ಹೆಣ್ಣು ಒಡಲೊಳಗೊಂದು ಮಿಡುಕನಿಟ್ಟುಕೊಂಡು ಇನ್ನೊಂದು ಭೋರ್ಗರೆವ ಜೀವವನ್ನು ಎದುರಾದಾಗ ಉಂಟಾಗುವ ಭಾವದಬ್ಬರವನ್ನು ನಿಲ್ಲಿಸುವುದು ಸುಲಭದ ಮಾತಲ್ಲವಲ್ಲ ಅಂತಲೇ ಇದನ್ನ ಪಾಲಿಸುತ್ತಿರಬೇಕು ಎನ್ನುವುದು ನಾನು ಅರ್ಥೈಯಿಸಿಕೊಂಡಿದ್ದು.
ನದಿ ತೀರದ ಊರುಗಳಲ್ಲಿ ಫ್ಯಾಕ್ಟರಿ, ಅದರ ನೀರು ನದಿಗೆ ಸೇರುವುದು, ದೇವಸ್ಥಾನಗಳಿದ್ದರೆ ಭಕ್ತರ ದಂಡು, ಸಮೂಹ ಸ್ನಾನ ಇಂತಹ ಅನೇಕ ನೂನ್ಯತೆಗಳ ನಡುವೆಯೂ ನೆನಪಾಗಿ ಕಾಡಿ, ಸೆಳೆವ ಎರಡು ನದಿಗಳೆಂದರೆ ಒಂದು ಗೋದಾವರಿ ಇನ್ನೊಂದು ಸರಯೂ.
ನಾನು ಹುಟ್ಟಿದ ವರ್ಷ ಅಜ್ಜ ಗೋದಾವರಿ ನದಿ ತೀರದ ಊರಲ್ಲಿದ್ದರಂತೆ. ಬಾಣಂತನಕ್ಕೆ ಹೋದ ಅವ್ವನಿಗೆ ದೇಶದ ಎರಡನೇ ದೊಡ್ಡ ನದಿ ಬಗ್ಗೆ ಮಮತೆ ಬೆಳೆದದ್ದು ನೋಡಿ, ವ್ಯಾಪಾರದಲ್ಲಿ ನಷ್ಟದ ಬಾಬತ್ತೇ ಹೆಚ್ಚಿದ್ದರೂ ಮಗಳಿಗಾಗಿ ಐದಾರು ವರ್ಷ ಅಲ್ಲೇ ಹಾಲಿವಸ್ತಿ ಮಾಡಿದ್ದರಂತೆ ಅಜ್ಜ. ನನಗೆ ನಾಲ್ಕು ತುಂಬಿದ ವರ್ಷ ‘ಗೋದಾವರಿ ಮಹಾಪುಷ್ಕರ ಮೇಳ’ ನಡೆದಿತ್ತು ಎನ್ನುವುದು ಅಪ್ಪನ ಸಂಭ್ರಮದಿಂದ ನೆನಕೆ.
ಹನ್ನೆರಡು ವರ್ಷಕ್ಕೊಮ್ಮೆ ನಡೆವ ಮೇಳ 2015ರಲ್ಲಿ ಎಂದು ನಿಕ್ಕಿಯಾದಾಗ ಅವ್ವ ವರ್ಷ ಮುಂಚೆಯೇ ನೆನಪಿಸಿದ್ದಳು. ಅಲ್ಲಿನ ಜನಾವಂತರ ನೆನಪಾಗಿ ಕಿರಿಕಿರಿ ಮಾಡಿಕೊಂಡವಳಿಗೆ ಗದ್ದಲ ಎಂದರೆ ನಿನಗಾಗದೆಂದು ಗೊತ್ತು ತಲ್ಲೀ, ಮುಗಿದ ಮೇಲೆ ಹೋಗಿ ಬರೋಣ. ನೋಡಬೇಕಿರುವುದು ಮೇಳವನ್ನಲ್ಲವಲ್ಲ ಗೋದಾವರಿನ್ನ ಎಂದು ಕರೆದುಕೊಂಡು ಹೋಗಿ ನೋಡಿ, ಸ್ಪರ್ಶಿಸಿ, ಹರ್ಷಿಸಿದ್ದಳು.
ಅಜ್ಜ ಬದುಕಿರುವವರೆಗೆ ಕಾರ್ತೀಕ ಪೂರ್ಣಿಮೆಯ ದಿನ ಪವಿತ್ರ ಸ್ನಾನ ಮಾಡಲು ಸರಯೂ ನದಿ ತೀರಕ್ಕೆ ಹೋಗುತ್ತಿದ್ದರು. ಧೋತರದ ಚುಂಗು ಹಿಡಿದು ನಾನೂ.
ಈಗಲೂ ನೆನಪಾಗಿದ್ದಕ್ಕೆ ಬಂದು ಕೂತಿದ್ದೇನೆ… ತೀರದಲ್ಲಿ ಕೂತು ನದಿ ಜೊತೆ ಸಂಭಾಷಿಸುವುದನ್ನು ಕಲಿಸಿದ್ದು ನನಗಿಂತ ಐದು ವರ್ಷ ದೊಡ್ಡವಳಾದ ಸೋದರತ್ತೆ. ಅಜ್ಜ-ಅಜ್ಜಿಗೆ ಕಡೆಯ ಕುಡಿ. ಅಪ್ಪ-ಅವ್ವನಿಗೆ ನಾನು ಕೊನೆಯ ಕೂಸು. ಹೀಗಾಗಿ ಯಾರೊಟ್ಟಿಗೆ ಏನೇ ಗುದುಮುರಿಗೆ ಹಾಕಿದರೂ ‘‘ಹೋಗಲಿ ಬಿಡ್ರೋ ಸಣ್ಣವವು’’ ಎನ್ನುವ ಒಂದು ದೊಡ್ಡ ಮಾರ್ಜಿನ್‌ನಲ್ಲಿ ಉಳಿದು ಬೆಳೆದು ಬಿಟ್ಟಿದ್ದೆವು. ಇಬ್ಬರೊಳಗೆ ಇದ್ದ ಗುಟ್ಟು, ಮಾಡಿದ ಅವಾಂತರಗಳೋ ಲೆಕ್ಕಕ್ಕೆ ಸಿಗದಷ್ಟು.
ಹಿಂದೊಮ್ಮೆ ಇಬ್ಬರೇ ಯಾರಿಗೂ ಹೇಳದೆ ನದಿ ತೀರಕ್ಕೆ ಬಂದು ಕೂತಿದ್ದೆವು. ಆವತ್ತು ಅತ್ತೆ ತುಂಬ ಇಷ್ಟಪಡುತ್ತಿದ್ದ ಆದರೆ ಮದುವೆಯಾಗಲಾರೆ ಎನ್ನುವ ಹುಡುಗನೂ ಬಂದಿದ್ದ. ಬಹುಶಃ ಅದೇ ಕೊನೆಯ ಸಾರಿ ಅವಳು ಅವನನ್ನು ಭೇಟಿಯಾಗಿದ್ದು. ಕಣ್ಣಾಲಿಗಳನ್ನು ತುಂಬಿಕೊಂಡು ತೋಳ್ತೆರೆದು ನಿಂತವನ ಎದೆಗೆ ಇವಳು ಹಣೆ ಹಚ್ಚಿ ನಿಂತಿದ್ದಳು.
ಅವನು ಹೊರಟ ಮೇಲೆ ಏನೇ ಇದು ಎಂದರೆ, ತಪ್ಪು ಒಪ್ಪು ಮೀರಿ ಉತ್ಕಟ ಇಚ್ಛೆಯನ್ನು ಅನುಭವಿಸಿದಾಗಲೇ ಹೆಚ್ಚು ತೃಪ್ತಿಯಂತೆ. ನನ್ನ ಒಲವ ಹರಿವೇ ಬೇರೆ, ಕಿರುಬೆರಳ ಬಿಗಿತವೇ ಬೇರೆ ಎಂದಳು. ತನಗೇನು ಬೇಕು ಎನ್ನುವುದನ್ನು ಸ್ಪಷ್ಟವಾಗಿ ಅರಿತ ಮಧ್ಯಮ ವರ್ಗದ ಹೆಣ್ಣಿನ ಬದುಕ ರೀತಿನೀತಿಗೆ ನಾನಂತೂ ಅಕ್ಷರಶಃ ಮಾರು ಹೋಗಿದ್ದೆ.
ಅತ್ತೆ ನಿಯಮಗಳನ್ನು ಮುರೀತಿದ್ದ ರೀತಿ ಆಶ್ಚರ್ಯ ಮೂಡಿಸಿದರೆ ಸಂಬಂಧಗಳೆಡೆಗಿನ ಈ ಕರಾರುವಾಕ್ಕುತನ ನಾನು ಯಾವಾಗಲೂ ಮೆಚ್ಚುವಂಥದ್ದು. ಎಲ್ಲರೂ ಕೋಗಿಲೆ ಕಂಠ, ಸಂಪಿಗೆ ನಾಸಿಕ, ದಾಳಿಂಬೆ ಹಲ್ಲು ಎನ್ನುವಾಗ ಹೆಣ್ಣು ಮಕ್ಕಳು ಹೇಗಿರಬೇಕು ಎನ್ನುವುದಕ್ಕೆ ಅವಳು ಕೊಡುತ್ತಿದ್ದ ಉದಾಹರಣೆಗಳು, ಲೇಖಕ ಗಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್, ಜಮೈಕಾದಿಂದ ಕೆರಿಬಿಯನ್ ಸಮುದ್ರವನ್ನು ನೋಡಿದಾಗ ಕಾಣುವ ಹಳದಿಯನ್ನು ವರ್ಣಿಸಿದ್ದಾನಲ್ಲ ಹಾಗಿರಬೇಕು.
ಹೆಮಿಂಗ್ವೇಯ ಸಣ್ಣ ಕತೆಗಳಿಂತರಬೇಕು ಎನ್ನುತ್ತಿದ್ದುದು. ಇದೆಲ್ಲಕ್ಕಿಂತ ನನಗೆ ಇಷ್ಟವಾದ ಪ್ರತಿಮೆ, ಹೆಣ್ಣುಮಕ್ಕಳು ರಾಜೀವ ತಾರಾನಾಥರ ಸರೋದ್ ನುಡಿಸಾಣಿಕೆಯಂತಿರಬೇಕು ಮತ್ತು ಎಲ್ಲರಿಗೂ ಸಂಗೀತ ಜ್ಞಾನವಿದ್ದು ಎಲ್ಲವನ್ನೂ ಸಂಗೀತದ ಕಣ್ಣಿನಿಂದ ನೋಡುವಂತಾಗಬೇಕು. ಆಗಲೇ ಹೆಣ್ಣುಮಕ್ಕಳ ಒಲವ ನೇಯ್ಗೆಯ ಒಪ್ಪ, ಸ್ನಿಗ್ಧತೆ, ಶ್ರೀಮಂತಿಕೆ, ಧೀಮಂತಿಕೆ ಒಟ್ಟಾಗಿ ಕಾಣಿಸಲು ಸಾಧ್ಯ ಎಂದಿದ್ದು.
ನನ್ನ ಮನಸ್ಸು ಮತ್ತು ಮಾಗಿಯ ಚಳಿ ರಾಗದ ರಸವಿದ್ದಂತೆ. ಎಷ್ಟು ವಿಸ್ತರಿಸಿದರೂ ತನಷ್ಟಕ್ಕೆ ತಾನೇ ಮುಕ್ತಾಯವಾಗುತ್ತವೆ ಎಂದುಕೊಳ್ಳುತ್ತಿರುವಾಗ ಹಿಂದೆ ಯಾರೋ ನಿಂತತಾಗಿ ತಿರುಗಿ ನೋಡಿದೆ. ಅತ್ತೆ! ಹೇಗೇ ಗೊತ್ತಾಯ್ತು? ಎಂದೆ. ಮನೆಗೆ ಫೋನ್ ಮಾಡಿದ್ದೆ ನೀನು ಇಲ್ಲಿರುವುದನ್ನು ಹೇಳಿದರು ಎಂದು ಕಣ್ಣು ಮಿಟುಕಿಸಿದಳು.
ಸದ್ಯ ನಿನ್ನ ಅವಶ್ಯಕತೆ ಇತ್ತು ನನಗೆ ಎಂದವಳಿಗೆ ಇದೆಲ್ಲ ಇದ್ದಿದ್ದೆ ಸಮಾಧಾನ ಎನ್ನುವಂತೆ ಭುಜದ ಮೇಲೆ ಅಂಗೈ ಒತ್ತುತ್ತ ‘ಏನಾಯ್ತೇ’ ಎಂದು ಕಣ್ಣಲ್ಲೇ ಕೇಳಿದಳು.
‘ನಾ ನಿಲ್ಲುವಳಲ್ಲ’ ಅಲ್ಲಿಂದಲೂ ಹೊರ ಬಂದೆ. ಜತೆಗಿದ್ದಷ್ಟು ದಿನ ಅಂದುಕೊಂಡಿದ್ದನ್ನು ಕಣ್ಣಿನಿಂದಲೇ ಸಾಧಿಸಿ, ಮಾತಿನಲ್ಲಿ ಮಳೆಬಿಲ್ಲು ತಂದಿದ್ದೇನೆ. ಹಾಗಂತ ಯಾರಿಗೂ ನೀನೇ ನನ್ನ ಸಂಗಾತಿ, ಸದಾ ನಿನ್ನೊಟ್ಟಿಗೆ ಇರುತ್ತೇನೆ ಎಂದು ಆಣೆ ಪ್ರಮಾಣ ಮಾಡಿಲ್ಲ.
ಒಲವ ಕುಲುಮೆಯಲ್ಲಿ ನಾನು ಬೆಂದು ಬೆಳೆದ ಹಾಗೆ ಅವರೂ ಇರಬೇಕಲ್ಲವೇ… ಅದು ಬಿಟ್ಟು ಹಿಂದೆ ಬಿದ್ದವರನ್ನ ಸಂತೈಸುವುದೂ ನಿನ್ನ ನೈತಿಕ ಜವಾಬ್ದಾರಿ ಎನ್ನುವಂತೆ ಆಡಿದರೆ ಏನು ಮಾಡಲಿ. ಎಲ್ಲ ಹೊತ್ತಲ್ಲಿ ಕರೆದು ಕೈಹಿಡಿದು ಕೂರಿಸಲಾಗದ ಸಂಚಾರಿ ಭಾವವನ್ನೇ ಸ್ಥಾಯಿಭಾವ ಮಾಡಿಕೊಂಡ ನನಗೆ ಸಿಕ್ಕು ಆಸಕ್ತಿ ಕಳೆದುಕೊಳ್ಳದೆ, ಸಿಗದೆ ಕುದಿಯಲು ಏನಾದರೊಂದು ಬೇಕು. ಇದನ್ನು ಅರ್ಥ ಮಾಡಿಸುವುದು ಹೇಗೇ ಎಂದೆ.
ಹುಚ್ಚಿ, ಮಿಂದ ನದಿ ನೆನಪಿಗೆ ಒಂದೊಂದು ಬಿಂದಿಗೆ ನೀರು ಸುರಿದುಕೊಂಡು, ಸಾವಿರ ನದಿಗಳು ತುಂಬಿ ಹರಿದರೂ ಒಂದೇ ಸಮನಾಗಿರುವ ಸುನೀಲ ವಿಸ್ತರದಂತಹ ನಮ್ಮ ಮನಸ್ಥಿತಿ ಯಾರಿಗೂ ಅರ್ಥವಾಗಲ್ಲ. ವಯಸ್ಸು ಮತ್ತು ತಲೆಮಾರಿನ ತಳಮಳದಿಂದ ನಾವು ನಾವೇ ಪಾರಾಗಬೇಕು ಎನ್ನುತ್ತ ಬೆನ್ನು ಸವರಿದಳು.
ನಿಂದೇನೇ ಎಂದೆ? ನಿನ್ನಂಥದ್ದೇ ಇನ್ನೊಂದು ಕತೆ ಎಂದು ತುಟಿಯಂಚಲ್ಲಿ ಮಾಗಿದ ನಗುವೊಂದನ್ನು ತುಳುಕಿಸಿದಳು. ದಂಡೆಯ ಮೇಲೆ ವಿಮೋಚನೆಯಿಲ್ಲದ ಪ್ರಣಯರುದ್ರಿಯರಂತೆ ಕುಳಿತವರನ್ನು ಮಳೆಯೂ ಸೋಜಿಗದಿಂದ ನೋಡಿತು. ಎದ್ದು ನಡೆವಾಗ ಒಮ್ಮೆ ತಿರುಗಿ ನೋಡಿದೆವು. ತುಂಬಿ ಹರಿಯುತ್ತಿದ್ದ ನದಿಯ ರಭಸಕ್ಕಿಂತ ನಮ್ಮೊಳಗಿನ ಮರ್ಮರವೇ ಹೆಚ್ಚಾಗಿತ್ತು.
Wahh, the best words in best order, the feelings as well!!