ಅನಾಥ ಮಕ್ಕಳ ಪ್ರವಾಹ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

೨೦೦೪ರ ಡಿಸೆಂಬರ್ ಕೊನೆಯ ವಾರ.‌ ಹಲವು ದಿನಗಳಿಂದ ಯೋಜಿಸಿದ್ದಂತೆ ಇಡೀ ಕುಟಂಬ ಕಾರವಾರದಲ್ಲಿದ್ದ ಚಿಕ್ಕಪ್ಪ -ಚಿಕ್ಕಮ್ಮನ ಮನೆಗೆ ೨೪ರಂದು ತಲುಪಿದೆವು. ಕಾರವಾರದ ಕಡಲ ತೀರ, ಠಾಗೂರ್‌ ಪಾರ್ಕ್‌, ಕಡಲಾಮೆಯೊಂದು ಮೊಟ್ಟೆ ಇಟ್ಟಿರುವ ಸ್ಥಳಕ್ಕೆ ಬೇಲಿ ಹಾಕಿ ಕಾವಲು ಕಾಯುತ್ತಿರುವುದನ್ನು ನೋಡಿ ಮತ್ತು ಅಲ್ಲಿ ಲಂಗರು ಹಾಕಿದ್ದ ಒಂದು ಯುದ್ಧ ಹಡಗು ಸುತ್ತು ಹಾಕಿ, ಕ್ರಿಸ್‌ಮಸ್‌ ದಿನ ಗೋವಾ ತನಕವೂ ಹೋಗಿ ಬಂದಿದ್ದೆವು. ಮಾರನೇ ದಿನ ೨೬. ಚಿಕ್ಕಪ್ಪನ ಗೆಳೆಯರು ಸಹೋದ್ಯೋಗಿಗಳೆಲ್ಲಾ ಸೇರಿ ಒಂದು ದೊಡ್ಡ ಗಾತ್ರದ ದೋಣಿಯನ್ನು ಗೊತ್ತು ಮಾಡಿಕೊಂಡು ಸಮುದ್ರ ಯಾನದ ಯೋಜನೆ ಹಾಕಿಕೊಂಡಿದ್ದರು. ಅಚಾನಕ್‌ ಆಗಿ ಸಿಕ್ಕ ಆಹ್ವಾನ ತಪ್ಪಿಸಿಕೊಳ್ಳಲು ಸಾಧ್ಯವೆ? ನಾವೂ ಹೊರಟೆವು.

ಬೆಳಗ್ಗೆ ಸುಮಾರು ೧೦ ಗಂಟೆಗೆ ಆರಂಭವಾದ ಸಮುದ್ರ ಯಾನ ಮುಗಿದಾಗ ಮಧ್ಯಾಹ್ನ ಒಂದೂವರೆ ಗಂಟೆಯಾಗಿತ್ತು. ಆಳ ಸಮುದ್ರದ ತನಕವೂ ಸಾಗಿದ್ದ ನಮ್ಮ ಪ್ರಯಾಣದ ಅನುಭವ ಸೊಗಸಾಗಿತ್ತು. ಅದರ ಗುಂಗಿನಲ್ಲೇ ಮನೆಗೆ ಬಂದು ಎಲ್ಲರೂ ಊಟ ಮುಗಿಸಿ ವಿಶ್ರಾಂತಿಯಲ್ಲಿದ್ದೆವು. ಕೆಲವರು ಕುಂತಲ್ಲೇ ಅರ್ಧ ನಿದ್ರೆಯಲ್ಲಿ, ಮತ್ತೆ ಕೆಲವರು ತಣ್ಣನೆಯ ನೆಲದಲ್ಲಿ ಅಂಗಾತ ಮಲಗಿದ್ದೆವು. 

ಆಗಲೇ ನನ್ನ ಚಿಕ್ಕಮ್ಮನಿಗೆ ಅವಳ ತಮ್ಮನ ಫೋನ್‌ ಬಂತು, ‘ನಾವೆಲ್ಲಾ ಸೇಫ್‌, ಏನೂ ಚಿಂತೆಯಿಲ್ಲ. ಹೆದರಬೇಡಿ… ನಮಗೇನೂ ಆಗಿಲ್ಲ…’ 

ಚಿಕ್ಕಮ್ಮನಿಗೆ ಅಯೋಮಯ. ಇವನ್ಯಾಕೆ ಹೀಗೆಲ್ಲಾ ಹೇಳ್ತಿದ್ದಾನೆ. ಏನಾಗಿದೆ ಅಂತ ಕೇಳಿದರು. ‘ಅಯ್ಯೋ ನಿಮಗೆ ಗೊತ್ತಿಲ್ವಾ. ಇಲ್ಲೆಲ್ಲಾ ಭಾರೀ ಗಲಾಟೆ. ನಾವು ಅಮ್ಮ ಎಲ್ಲಾ ಇಲ್ಲಿ ಕನ್ಯಾಕುಮಾರಿಗೆ ಬಂದಿದ್ದೀವಲ್ಲ. ಸಮುದ್ರ ಫುಲ್‌ ಉಕ್ಕಿ ಉಕ್ಕಿ ಕುಕ್ಕುತಾಯಿದೆ. ನಾವು ಇನ್ನೆಲ್ಲೂ ಹೋಗಲ್ಲ. ಊರಿಗೆ ವಾಪಸ್‌ ಬರೋದಕ್ಕೆ ಆಗುತ್ತಾ ನೋಡಬೇಕು… ತುಂಬಾ ಮಳೆ. ಇರಕ್ಕೆ ಜಾಗ ಇಲ್ಲ. ಎಲ್ಲಾ ಕಡೆ ನೀರು, ಪ್ರವಾಹದ ತರಹ… ಏನು ಸಿಗುತ್ತೋ ಅದರಲ್ಲಿ ಬರಬೇಕು ಈಗ’. 

ಚಿಕ್ಕಮ್ಮ ಏನಿದು ಅಂತ ಆತಂಕದಿಂದ ನಮ್ಮನ್ನ ಕೇಳಿದ್ರು. ಯಾರಿಗೆ ಗೊತ್ತು? ಏನಾದರಾಗಲಿ ಟೀವಿ ಹಾಕಿ ನೋಡೋಣ ಎಂದು ಸಲಹೆ ಕೊಟ್ಟರು. 

ನಮ್ಮ ಚಿಕ್ಕಮ್ಮನ ತಮ್ಮನ ಕುಟುಂಬ ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳು, ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಗೆಳೆಯರೊಂದಿಗೆ ಹೋಗಿದ್ದಾರೆ, ಅದಷ್ಟೆ ಗೊತ್ತು ಎಂದರು ಚಿಕ್ಕಮ್ಮ. 

ಟೀವಿ ವಾರ್ತೆ ನೋಡಿದಾಗಲೇ ಏನು ಆಗ್ತಾಯಿದೆ ಅಂತ ಎಲ್ಲರಿಗೂ ಗೊತ್ತಾಗಿದ್ದು. ಚಂಡಮಾರುತ ಅಪ್ಪಳಿಸಿದ್ದ ಸಮುದ್ರ ಎಲ್ಲೆ ಮೀರಿ ಉಕ್ಕಿ ತನ್ನೆದುರು ಸಿಕ್ಕಿದ್ದೆಲ್ಲವನ್ನೂ ಮುರಿದು, ಹರಿದು, ಕೊಚ್ಚಿ ಧ್ವಂಸ ಮಾಡಿತ್ತು… ಕೆಲವು ವಾರ್ತಾಸಂಚಿಕೆಗಳು ಸಮುದ್ರ ಉಕ್ಕಿ ಬಂದ ದೃಶ್ಯಗಳನ್ನೂ ತೋರಿಸುತ್ತಿದ್ದವು. ಭಾರತದ ಪೂರ್ವ ಕರಾವಳಿಯುದ್ದಕ್ಕೂ, ಪಶ್ಚಿಮದ ಕರಾವಳಿಯತ್ತಲೂ ದೈತ್ಯ ಗಾತ್ರದ ಅಲೆಗಳು ಅಪ್ಪಳಿಸಿದ್ದವು. 

ಸಂಜೆಯ ಹೊತ್ತಿಗೆ ಇನ್ನಷ್ಟು ಮಾಹಿತಿ ತಿಳಿಯಿತು. ದೂರದ ಇಂಡೋನೇಷ್ಯಾ ರಾಷ್ಟ್ರದ ಹತ್ತಿರ ಆರಂಭವಾದ ಅಲೆಗಳಬ್ಬರ ಭಾರತದ ತನಕವೂ ಧಾವಿಸಿ ಬಂದಿದ್ದವು. ಅತಿ ಹೆಚ್ಚು ಹಾವಳಿ ಭಾರತದ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಅಂಡಮಾನ್‌ ನಿಕೋಬಾರ್‌ಗಳಲ್ಲೂ, ಶ್ರೀಲಂಕಾ, ಥಾಯ್‌ಲ್ಯಾಂಡ್‌, ಇಂಡೋನೇಶಿಯಾ, ಮಲೇಷ್ಯಾ, ಮಾಲ್ಡೀವ್ಸ್‌, ತಾಂಜಾನಿಯ, ಸೊಮಾಲಿಯಾ, ಕೀನ್ಯಾ  ಮೊದಲಾದ ರಾಷ್ಟ್ರಗಳಲ್ಲಿಯೂ ವಿನಾಶವೆಸಗಿತ್ತು. ಆಗಲೆ  ಮೊದಲ ಬಾರಿ ನಮ್ಮ ಕಿವಿಗೆ ಬಿದ್ದ ಶಬ್ದ ‘ಸುನಾಮಿ’. 

ಮಾರನೇ ದಿನ ಬೆಳಗ್ಗೆ ಪತ್ರಿಕೆಗಳಲ್ಲೆಲ್ಲಾ ಅದೇ ಸುದ್ದಿ. ಯಾರೋ ಹೇಳಿದರು – ನಮ್ಮ ಕರಾವಳಿ ಜಿಲ್ಲೆ ಕಾರವಾರದ ತೀರದಲ್ಲೂ ಅಲೆಗಳ ಹೊಡೆತಕ್ಕೆ ಒಬ್ಬಾತ ತೀರಿಹೋದರು ಎಂದು. ಈ ನೈಸರ್ಗಿಕ ವಿಕೋಪದ ಬಗ್ಗೆ ಕೇಳಿ ತಲ್ಲಣಿಸಿದ ನಾವೊಂದಷ್ಟು ಜನ ಮನೆಗೆ ಸಮೀಪವೇ ಇದ್ದ ಸಮುದ್ರ ತೀರಕ್ಕೆ ಓಡಿದೆವು. ಸ್ಥಳೀಯರು ಹೇಳಿದ್ದು ಕೇಳಿ ದಂಗಾದೆವು. ಸಮುದ್ರದ ನೀರು ಸಾಮಾನ್ಯ ಎಲ್ಲೆ ಮೀರಿ ಎಷ್ಟು ದೂರದವರೆಗೆ ಅಪ್ಪಳಿಸಿ ಹಿಂದೆ ಸರಿದಿದೆ ಎಂದು  ಗುರುತು ತೋರಿಸಿದರು. ಅದು ನಮ್ಮ ಊಹೆಗೂ ಮೀರಿದ್ದು! 

ಹಿಂದುರುಗಿ ಬಂದ ನಾನು ಪತ್ರಿಕೆ ಹಿಡಿದು ಕುಳಿತೆ. ವರದಿಗಳ ವಿವರಗಳನ್ನು ನೋಡುತ್ತಿದ್ದ ಹಾಗೆ ನನಗೆ ಬೆಂಗಳೂರಿನ ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಲ್ಲಿ ನಿರಾಶ್ರಿತರ ದೊಡ್ಡ ದೊಡ್ಡ ಗುಂಪುಗಳು, ಅವರ ಮಕ್ಕಳು, ಇಷ್ಟರ ಮೇಲೆ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾಗುವ ಮಕ್ಕಳು ಕಾಣಲಾರಂಭಿಸಿದರು. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆಯ ಜಾರಿಯಲ್ಲಿ ಮುಖ್ಯವಾಗಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯನ ಪಾತ್ರ ನನ್ನಲ್ಲಿ ಜಾಗೃತವಾಗತೊಡಗಿತು.

ತಕ್ಷಣವೇ ನನ್ನ ಕೆಲವು ಸಹೋದ್ಯೋಗಿಗಳಿಗೆ, ಸಹವರ್ತಿಗಳಿಗೆ ಕರೆ ಮಾಡಿದೆ. ‘ನಾವು ಸಿದ್ಧವಾಗಬೇಕು. ಅನಾಥ ಮಕ್ಕಳನ್ನು ಯಾರೆಂದರೆ ಅವರು ಎಲ್ಲೆಂದರಲ್ಲಿ ತೆಗೆದುಕೊಂಡು ಬಂದು ಅನಾಥಾಲಯಗಳಲ್ಲಿ ತುಂಬಿಕೊಳ್ಳುವುದನ್ನು ತಡೆಯಬೇಕು. ನಮ್ಮ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಪೊಲೀಸರೊಂದಿಗೆ ಮಾತನಾಡಿ ತಮಿಳುನಾಡು, ಆಂಧ್ರಪ್ರದೇಶದಿಂದ ಯಾರಾದರೂ ಮಕ್ಕಳನ್ನು ತುಂಬಿಕೊಂಡು ಬಂದರೆ ಆ ಕುರಿತು ಏನು ಸಕ್ರಮ ಎಂದು ನೋಡಬೇಕು… ‘ ಇತ್ಯಾದಿ. 

ಮುಂದಿನ ದಿನವೇ ನಾವು ಬೆಂಗಳೂರಿಗೆ ಬಂದೆವು. ಅದರ ಮಾರನೇ ದಿನವೇ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಒಂದಷ್ಟು ಗೆಳೆಯರು ಮತ್ತು ಚೈಲ್ಡ್‌ಲೈನ್‌ ೧೦೯೮ ಪ್ರತಿನಿಧಿಗಳು, ಆಗ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದ ನೀನಾ ನಾಯಕ್‌ ಅವರ ಮುಂದಾಳುತ್ವದಲ್ಲಿ ಅನೌಪಚಾರಿಕ ಸಭೆ ನಡೆಸಿದೆವು. ಬೀದಿಗಳ ಅಕ್ಕಪಕ್ಕ ವಾಸಿಸುವ ಮಕ್ಕಳು, ದುಡಿಯುವ ಮಕ್ಕಳು, ಅನಾಥರು, ನಿರ್ಗತಿಕ ಮಕ್ಕಳೊಡನೆ ಕೆಲಸ ಮಾಡುವ ಸಮಾನ ಮನಸ್ಕರ ಕೆಲವು ಸಂಘಟನೆಗಳ ಪ್ರತಿನಿಧಿಗಳು ಸೇರಿದ್ದೆವು.

ಚರ್ಚೆಯ ವಿಷಯ ಒಂದೇ – ಈ ಹಿಂದೆ ೯೦ರ ದಶಕದಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ತೀರದಲ್ಲಿ ಭಾರೀ ಪ್ರಮಾಣದ ಚಂಡಮಾರುತವೆದ್ದರೆ ಅದೆಷ್ಟೋ ಸಾವಿರಾರು ಹಳ್ಳಿಗಳು ಕೊಚ್ಚಿ ಹೋಗುತ್ತಿದ್ದುದು, ಅಲ್ಲಿನ ಕುಟುಂಬಗಳು ಬೀದಿಗೆ ಬೀಳುತ್ತಿದ್ದುದು, ಜನ ಇದ್ದಬದ್ದುದನ್ನೆಲ್ಲಾ ಹಿಡಿದುಕೊಂಡು ಸಿಕ್ಕ ಸಿಕ್ಕ ವಾಹನಗಳು, ರೈಲುಗಳನ್ನು ಏರಿ ದಿಕ್ಕಾಪಾಲಾಗಿ ಓಡುತ್ತಿದ್ದುದು, ಒಂದಷ್ಟು ಜನ ರೈಲುಗಳಲ್ಲಿ ಗಿಡುಗಿಕೊಂಡು ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿ ಇಲ್ಲಿ ಆಶ್ರಯ ಕಾಣುತ್ತಿದ್ದುದು, ಒಂದಷ್ಟು ಸಂಸ್ಥೆಗಳು, ಸರ್ಕಾರವೂ ಕೈಲಾದ ಸಹಾಯ ಮಾಡುತ್ತಿದ್ದುದು, ಅಂತಹ ಸಂದರ್ಭಗಳಲ್ಲೆಲ್ಲಾ ಇದ್ದಕ್ಕಿದ್ದ ಹಾಗೆ ನಗರದ ಸುತ್ತಮುತ್ತಲಿನ ‘ಅನಾಥಾಲಯ’ಗಳಲ್ಲಿ ಮಕ್ಕಳ ಸಂಖ್ಯೆ ಧಿಡೀರ್‌ ಎಂದು ಏರುತ್ತಿದ್ದುದು, ಸರ್ಕಾರದ ಮಕ್ಕಳ ನಿಲಯಗಳಲ್ಲೂ ಒಂದಷ್ಟು ಮಕ್ಕಳು ಸೇರುತ್ತಿದ್ದುದು, ಎಲ್ಲ ದುರಂತಗಳು ತಣ್ಣಗಾದ ಮೇಲೂ ಒಂದಷ್ಟು ಮಕ್ಕಳಿಗೆ ನಿಲಯಗಳಿಂದ ಬಿಡುಗಡೆಯೇ ಸಿಗದಿರುವುದು… ಇತ್ಯಾದಿ. 

ನಮ್ಮೆದುರು ಇದ್ದ ಪ್ರಶ್ನೆಗಳು – ಈಗ ದುರಂತದಿಂದ ತಪ್ಪಿಸಿಕೊಂಡು ಬೆಂಗಳೂರಿನತ್ತ ಧಾವಿಸಿ ಬರುವ ಕುಟುಂಬಗಳಿಗೆ ಏನು ನೆರವು ನೀಡಬೇಕು. ಅವರೊಂದಿಗೆ ಬರುವ ಮಕ್ಕಳಿಗೆ ಏನು ವ್ಯವಸ್ಥೆ. ಇಷ್ಟರ ಮೇಲೆ ಪೋಷಕರನ್ನು ಸುನಾಮಿಯಿಂದಾಗಿ ಕಳೆದುಕೊಂಡ ಮಕ್ಕಳು ಅಥವಾ ಪೋಷಕರಿಂದ ಬೇರೆಯಾದ ಮಕ್ಕಳು ಅಥವಾ ಪ್ರಯಾಣ ಮಾಡುವಾಗ ಪೋಷಕರು ಸತ್ತು ಹೋದರೆ ಅಥವಾ ಆ ಜನಜಂಗುಳಿಯಲ್ಲಿ ಮಕ್ಕಳು ಬೇರೆಯಾದರೆ ಏನೇನು ಮಾಡಬೇಕು.

ಬಹುತೇಕ ಯಾರಿಗೂ ಆಗ ಆಗಿದ್ದ ಇಂಥ ದೊಡ್ಡ ದುರಂತದ ಪ್ರಸಂಗವನ್ನು ನಿರ್ವಹಿಸಿ ಅನುಭವವಿರಲಿಲ್ಲ. ಮಕ್ಕಳು ಆ‍ಶ್ರಯ ಬಯಸಿ ಬಂದದ್ದೇ ಆದಲ್ಲಿ ತಾವುಗಳು ಸಿದ್ಧವಿದ್ದೇವೆಂದೂ, ಅಗತ್ಯವಾಗಿ ಬೇಕಾದ ಆಹಾರ, ಔಷಧಿ, ಬಟ್ಟೆ, ಆಪ್ತ ಸಮಾಲೋಚನೆ ವ್ಯವಸ್ಥೆ ಮಾಡಿಕೊಂಡು ಎಲ್ಲರೂ ಸೇರಿ ಮಕ್ಕಳ ರಕ್ಷಣೆ ಮಾಡೋಣ ಎಂದು ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುತ್ತಿದ್ದ ಬಾಸ್ಕೋ ಮತ್ತಿತರ ಸಂಸ್ಥೆಗಳು, ಬೀದಿಯ ಮೇಲೆ ಬದುಕುವ ಮತ್ತು ದುಡಿಯುವ ಮಕ್ಕಳೊಡನೆ ಕೆಲಸ ಮಾಡುವ ಅಪ್ಸಾ, ರೆಡ್ಸ್‌, ವೈ.ಎಂ.ಸಿ.ಎ., ಪರಸ್ಪರ, ಮತ್ತಿತರ ಸಂಸ್ಥೆಗಳು ಮುಂದಾದರು. ಹಾಗೆ ಇಲ್ಲಿಗೆ ಬಂದು ಸಿಗುವ ಎಲ್ಲ ಮಕ್ಕಳ ವಿವರಗಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಲು ಎಲ್ಲರೂ ಒಪ್ಪಿದ್ದರು. 

ಈ ಮಧ್ಯೆ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ಗೆ ಸ್ವಯಂಸೇವಕನಾಗಿ ಬಂದಿದ್ದ ಜರ್ಮನಿಯ ಪೀಟರ್‌ ತನ್ನೂರಿನಿಂದ ಬಂದಿದ್ದ ಇತರ ಸ್ವಯಂಸೇವಕರೊಡನೆ ಸೇರಿ ಸುನಾಮಿ ಪೀಡಿತ ನಾಗರಕೋಯಿಲ್‌ ಪ್ರದೇಶದಲ್ಲಿ ಕೆಲಸ ಮಾಡುವವರ ಪಡೆ ಸೇರಿದ. ಕರ್ನಾಟಕದ ಮಕ್ಕಳ ನ್ಯಾಯ ಕಾಯಿದೆಯ ನಿರ್ವಹಣೆಯಲ್ಲಿದ್ದ ನನ್ನಂತಹವರು ಹೆಚ್ಚು ಹೆಚ್ಚು ಎಚ್ಚರಿಕೆ ವಹಿಸುವ ಮಾತನಾಡಿದೆವು. ಹಿಂದೆ ಇಂತಹ ಅನಾಹುತಗಳಾದಾಗ ಯಾರು ಯಾರೋ ಮಕ್ಕಳನ್ನು ಸಾಕಿಕೊಳ್ಳುತ್ತೇವೆ ಎಂದು ಒಯ್ದದ್ದು, ದತ್ತು ಹೆಸರಿನಲ್ಲಿ ಮಕ್ಕಳನ್ನು ಕೊಟ್ಟದ್ದು ಪಡೆದದ್ದು, ಅವು ಕಾನೂನು ಬಾಹಿರ ಮತ್ತು ಅವು ಮಕ್ಕಳಿಗೆ ಒಳಿತು ಮಾಡುವುದಿಲ್ಲ ಎಂದು ನೀನಾ ನಾಯಕ್‌ ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಆಗಿದ್ದ ಕೆಲವು ಅನುಭವಗಳನ್ನು ಉಲ್ಲೇಖಿಸಿ ಹೇಳಿದರು.

ದತ್ತು ಎಂದು ಹೇಳಿಕೊಂಡು ತೆಗೆದುಕೊಂಡವರು ಮಕ್ಕಳನ್ನು ಕೆಲಸದವರನ್ನಾಗಿ ಮಾಡಿಕೊಳ್ಳುವ ಸಾಧ್ಯತೆ, ಹಾಗೆಯೇ ಮಕ್ಕಳ ನಿಲಯಗಳಲ್ಲಿ, ಧಾರ್ಮಿಕ ಸಂಸ್ಥೆಗಳಲ್ಲಿ ಮಕ್ಕಳನ್ನು ಕೂಡುವುದು ಒಳ್ಳೆಯದಲ್ಲ. ಅವರು ಅಂತಹ ವ್ಯವಸ್ಥೆ ಮಾಡಿದರೂ ಅದು ತಾತ್ಕಾಲಿಕವಾಗಬೇಕು, ಆದಷ್ಟೂ ಬೇಗ ಮಕ್ಕಳು ತಮ್ಮ ಮೂಲ ನೆಲೆಗಳಿಗೆ ಹೋಗುವಂತಾಗಬೇಕು. ಅಷ್ಟು ಸುಲಭವಾಗಿ ಯಾವುದೇ ಮಗುವನ್ನು ದತ್ತು ಹೆಸರಿನಲ್ಲಿ ಯಾರೂ ಕೊಡಬಾರದು, ಅದಕ್ಕೆ ವಿಧಿವಿಧಾನಗಳಿವೆ, ಇತ್ಯಾದಿ.

ತಮಿಳುನಾಡಿನ ಸ್ವಯಂಸೇವಾ ಸಂಘಟನೆಗಳ ಗೆಳೆಯರನ್ನು ಮಾತನಾಡಿಸಿ ಅವರ ಅಭಿಪ್ರಾಯಗಳನ್ನು ಪಡೆಯಬೇಕು. ಇಲ್ಲಿಗೆ ಬರುವ ಎಲ್ಲ ಒಂಟಿ ಮಕ್ಕಳು, ಅನಾಥ ಮಕ್ಕಳನ್ನು ಮಾತನಾಡಿಸಿ ಅವರ ವಿವರಗಳನ್ನು ಪಡೆಯಬೇಕು. ಅವುಗಳನ್ನು ತಮಿಳುನಾಡಿನ ಸ್ವಯಂಸೇವಾ ಸಂಘಟನೆಗಳೊಡನೆ ಹಂಚಿಕೊಳ್ಳಬೇಕು ಎಂಬ ಅಭಿಪ್ರಾಯಕ್ಕೆ ಬಂದು ಸಭೆ ಮುಗಿಸಿದ್ದೆವು. 

ಡಿಸೆಂಬರ್‌೨೮ ಕಳೆಯಿತು, ೨೯ ಆಯಿತು. ೩೦, ೩೧ನೇ ತಾರೀಖು ಮುಗಿದು ೨೦೦೫ರ ಹೊಸ ವರ್ಷ ಬಂತು… ಊಹ್ಞು! ನಾವಂದುಕೊಂಡ ಹಾಗೆ ಜನಪ್ರವಾಹ ಬರಲಿಲ್ಲ. ಜೊತೆಗೆ ನೂರಾರು ನಿರಾಶ್ರಿತ ಮಕ್ಕಳು ಕಾಣಲಿಲ್ಲ. ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ಮತ್ತು ಕಂಟೋನ್‌ಮೆಂಟ್‌, ಯಶವಂತಪುರ ನಿಲ್ದಾಣಗಳಲ್ಲಿ ಪ್ರತಿ ದಿನ ಬಂದಿಳಿಯುತ್ತಿದ್ದ ಯಾರೂ ವಯಸ್ಕರ ಜೊತೆಯಿಲ್ಲದ ಒಂಟಿ ಮಕ್ಕಳ ಸಂಖ್ಯೆಯಲ್ಲಿ ಎಲ್ಲೋ ಕೆಲವು ಮಕ್ಕಳು ಹೆಚ್ಚಿಗೆ ಕಂಡು ಬಂದರು. ಅವರಲ್ಲಿ ಎಲ್ಲೋ ಕೆಲವರು ಈ ಸುನಾಮಿಯ ಹೊಡೆತಕ್ಕೆ ಈಡಾದವರು.

ಪ್ರತಿ ದಿನ ದಾರಿ ತಪ್ಪಿ ಹೋದವರು, ಮನೆ, ಹಾಸ್ಟೆಲ್‌, ಆ‍ಶ್ರಮ, ಕೆಲಸದ ಸ್ಥಳ, ಇತ್ಯಾದಿ ಬಿಟ್ಟು ಬಂದವರು, ಮನೆಗಳಿಂದಲೋ ಮತ್ತೆಲ್ಲಿಂದಲೋ ಓಡಿಸಲ್ಪಟ್ಟವರು, ಬೆಂಗಳೂರಿನ ಬೆರಗು ನೋಡಲು ಬಂದವರು, ಹೀಗೆ ನೂರಾರು ಮಕ್ಕಳು ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಬಂದಿಳಿಯುತ್ತಿದ್ದರು. ಅವರೊಡನೆಯ ಕೆಲಸವೇ ಒಂದು ದೊಡ್ಡ ಜಗತ್ತು. (ಆ ಕುರಿತು ಮತ್ತೊಮ್ಮೆ ಬರೆಯುವೆ). ಜೊತೆಗೆ ನಮ್ಮ ಸಂಪರ್ಕದಲ್ಲಿ ಇದ್ದ ಯಾವುದೇ ಮಕ್ಕಳ ನಿಲಯಗಳಲ್ಲಿ ಮಕ್ಕಳ ಸಂಖ್ಯೆ ನಾವಂದುಕೊಂಡಷ್ಟು ಹೆಚ್ಚಾಗಲಿಲ್ಲ! ಮಕ್ಕಳ ಕಲ್ಯಾಣ ಸಮಿತಿಯೆದುರೂ ಮಾಮೂಲಿಗಿಂತ ಹೆಚ್ಚು ಸಂಖ್ಯೆಯ ಮಕ್ಕಳನ್ನು ಚೈಲ್ಡ್‌ಲೈನ್‌ ೧೦೯೮ ಗೆಳೆಯರು ಕರೆತರಲಿಲ್ಲ. 

ಅಂದರೆ ಏನೋ ಆಗಿದೆ… ಪ್ರತಿ ದಿನ ಟೀವೀ ವಾರ್ತೆಗಳು ಮತ್ತು ವಾರ್ತಾ ಪತ್ರಿಕೆಗಳು ಅಷ್ಟೊಂದು ಭಯಂಕರ ಪರಿಸ್ಥಿತಿ ತೋರಿಸುತ್ತಿವೆ. ಕುಟುಂಬಗಳು ಮಕ್ಕಳು ದಿಕ್ಕಾಪಾಲಾಗಿದ್ದಾರೆ. ಸುನಾಮಿ ಹೊಡೆದ ೨೬ರ ನಂತರದ ದಿನಗಳಲ್ಲಿ ಬಂಗಾಳಕೊಲ್ಲಿಯ ತೀರದುದ್ದಕ್ಕೂ ಇರುವ ತಮಿಳುನಾಡಿನ ೧೩ ಜಿಲ್ಲೆಗಳ ಹಳ್ಳಿಹಳ್ಳಿಗಳಲ್ಲಿ ಆದ ದುರಂತಗಳ ನಿಜವಾದ ಚಿತ್ರ ಸಿಗುತ್ತಿದ್ದು ತೊಂದರೆಗೆ ಸಿಲುಕಿದವರ ಸಂಖ್ಯೆ ಬೆಳೆಯುತ್ತಲೇ ಇದೆ…

ಆದರೆ ನಮ್ಮ ಪ್ರಶ್ನೆಗೆ ಉತ್ತರ ಸಿಗಲೇಯಿಲ್ಲ… ಇಷ್ಟಾಗಿದ್ದರೂ ಬೆಂಗಳೂರಿಗೆ ಮಕ್ಕಳು, ದೊಡ್ಡವರು ನಿರಾಶ್ರಿತರಾಗಿ ಬರಲಿಲ್ಲ ಯಾಕೆ? 

ಯಾಕೆ? 

ನಮಗೆ ಉತ್ತರ ಸ್ವಲ್ಪ ತಡವಾಗಿ ತಿಳಿಯಿತು. ಆಶ್ಚರ್ಯ ಮತ್ತು ಸಂತೋಷ ಎರಡೂ ಒಟ್ಟಿಗೆ ಆದ ಅನುಭವ. ತಮಿಳು ನಾಡಿನ ಗೆಳೆಯರ ಜೊತೆ ಸಂಪರ್ಕದಲ್ಲಿ ಇದ್ದೆವು. ಚೆನ್ನೈನ ಗೆಳೆಯರಿಗೆ ಬಿಡುವಿಲ್ಲ. ಮಧುರೈ, ಥೇಣಿ, ಸೇಲಂ, ತಿರುನೆಲ್ವೇಲಿ, ತಿರುವಣ್ಣಾಮಲೈ, ತಂಜಾವೂರು ಈ ಎಲ್ಲಡೆಯ ಸ್ವಯಂಸೇವಾ ಸಂಘಟನೆಗಳ ಗೆಳೆಯರೆಲ್ಲ ತಾವುಗಳು ನಾಗಪಟ್ಟಿನಂ, ಕನ್ಯಾಕುಮಾರಿ, ತೂತುಕುಡಿ, ರಾಮನಾಥಪುರಂ, ಕಡಲೂರು, ಕಾಂಚೀಪುರಂನ ತೀರ ಪ್ರದೇಶಗಳಲ್ಲಿ ಇದ್ದೇವೆ ಮತ್ತೆ ಮಾತನಾಡೋಣ. ಇಲ್ಲಿ ತುಂಬಾ ಕೆಲಸ, ಬಿಡುವಿಲ್ಲ, ಎನ್ನುವವರೇ. ಕೆಲವರು ಮಾತನಾಡಿ ನೀಡಿದ ಚಿತ್ರಣ ಪತ್ರಿಕೆಗಳಲ್ಲಿ ಬರುತ್ತಿದ್ದ ವರದಿಗಳಿಗಿಂತ ಭಯಂಕರವಾಗಿತ್ತು. 

ನಂತರದ ದಿನಗಳಲ್ಲಿ ಸರ್ಕಾರ ನೀಡಿದ ಅಂಕಿಅಂಶದಂತೆ ಮುಖ್ಯವಾಗಿ ನಾಗಪಟ್ಟಿಣಂ, ಕಡಲೂರು ಮತ್ತು ಕನ್ಯಾಕುಮಾರಿಯಲ್ಲಿ ಸುಮಾರು ೮,೦೦೦ ಜನರು ಸಾವಿಗೀಡಾಗಿದ್ದರು, ಅದರಲ್ಲಿ ೨,೩೫೮ ಮಕ್ಕಳು. ಐದಾರು ಸಾವಿರ ಜನ ಕಾಣೆಯಾಗಿದ್ದರು, ೨೫೦ ಮಕ್ಕಳು ಇಬ್ಬರೂ ಪೋಷಕರನ್ನು ೧,೦೫೪ ಮಕ್ಕಳು ಒಬ್ಬರು ಪೋಷಕರನ್ನು ಕಳೆದುಕೊಂಡಿದ್ದರು. ಸುನಾಮಿಯ ಹೊಡೆತದಿಂದಾಗಿ ಸತ್ತವರಲ್ಲಿ ಶೆ. ೭೫ ಮಹಿಳೆಯರು ಮತ್ತು ಮಕ್ಕಳು ಎನ್ನುತ್ತಲೇ ವರದಿಯು ಮುಖ್ಯವಾಗಿ ಹೇಳಿದ್ದು ವಿಧವೆಯರ ಪ್ರಮಾಣ ಪ್ರತಿಶತ ೬೩.೧ಕ್ಕೆ ಏರಿತ್ತು ಎಂದು. ಇದರ ಜೊತೆ ಲಕ್ಷಾಂತರ ಮನೆಗಳು, ಮೀನುಗಾರಿಕೆ ಮತ್ತು ಸಂಚಾರದ ಸಾವಿರಾರು ದೋಣಿಗಳು ಹಾಳಾಗಿದ್ದರೆ ಸಾವಿರಾರು ಎಕರೆ ಕೃಷಿ ಭೂಮಿಗೆ ಸಮುದ್ರದ ಉಪ್ಪುನೀರು ಸೇರಿಹೋಗಿತ್ತು. ಅಲ್ಲಿನ ಜನರ ಆರ್ಥಿಕ ಬದುಕಿಗೆ ದೊಡ್ಡ ಹೊಡೆತ ಬಿದ್ದಿತ್ತು.

ಒಟ್ಟಿನಲ್ಲಿ ಲಕ್ಷಾಂತರ ಜನ ಸುನಾಮಿಯ ದುರಂತದ ಹಿಂದೆ ಮಾನಸಿಕ ಕ್ಷೋಭೆಗೆ ಈಡಾಗಿದ್ದರು, ಬಡತನಕ್ಕೆ ಬಿದ್ದಿದ್ದರು. ಅದರ ಪರಿಣಾಮ ಮಕ್ಕಳ ಮೇಲೆ ಅತ್ಯಧಿಕ. ಮನೆಗಳೊಂದಿಗೆ ಅಂಗನವಾಡಿ ಕೇಂದ್ರಗಳು, ಶಾಲೆಗಳು, ಆರೋಗ್ಯ ಕೇಂದ್ರಗಳು, ದೇವಸ್ಥಾನ, ಚರ್ಚು, ಮಸೀದಿಗಳು ನೆಲಸಮವಾಗಿದ್ದವು.. ವಸತಿ ಕಳೆದುಕೊಂಡ ಸುಮಾರು ಆರೇಳು ಲಕ್ಷ ಜನರಿಗೆ ಸುಮಾರು ೯೦೦ಕ್ಕೂ ಹೆಚ್ಚು ಶಿಬಿರಗಳಲ್ಲಿ ಸರ್ಕಾರ ಆಶ್ರಯ ಒದಗಿಸಿತ್ತು.

ನೂರಾರು ಸ್ವಯಂಸೇವಾ ಸಂಘಟನೆಗಳು ತಾವೇತಾವಾಗಿ ಮುಂದಾಗಿ ಕೈಜೋಡಿಸಿದ್ದವು. ಯುನಿಸೆಫ್‌, ಸೇವ್‌ ದ ಚಿಲ್ಡ್ರನ್‌, ಆಕ್ಸ್‌ಫಾಮ್‌, ಟಿಡಿ.ಎಚ್‌, ಕ್ರೈ, ಐ.ಸಿ.ಸಿ.ಡಬ್ಲ್ಯು, ಎಸ್.ಓ.ಎಸ್‌. ಇತ್ಯಾದಿ ಸಂಸ್ಥೆಗಳು ಹಣಕಾಸು, ಆಹಾರ, ನೀರು, ಬಟ್ಟೆಗಳು, ಟೆಂಟ್‌ಗಳು, ಔಷಧಿಗಳು, ವೈದ್ಯರ ತಂಡಗಳೊಂದಿಗೆ ನೆರವು ಯೋಜನೆಗಳನ್ನೂ ಮುಂದಿಟ್ಟು ಸೇರಿದ್ದರು. ಆದರೆ ಎಲ್ಲ ಪರಿಹಾರ ಕಾರ್ಯಗಳನ್ನು ಸರ್ಕಾರದ ಮೂಲಕವೇ ನಿರ್ವಹಿಸಬೇಕು ಎನ್ನುವ ನಿರ್ದೇಶನವಿತ್ತು. ಎಲ್ಲ ಜಿಲ್ಲೆಗಳಲ್ಲಿ ಯಾರು ಎಂತಹ ಪರಿಹಾರ ಕೆಲಸ ನಡೆಸುತ್ತಿದ್ದಾರೆ ಎನ್ನುವ ವಿಚಾರ ಜಿಲ್ಲಾಧಿಕಾರಿಗಳಿಗೆ ತಿಳಿದಿರುತ್ತಿತ್ತು.

ಆಯಿತು. ಅಷ್ಟೆಲ್ಲಾ ನಿರಾಶ್ರಿತರು, ಅನಾಥರು, ಅರೆ ಅನಾಥರು, ಪೋಷಕರಿಂದ ಬೇರ್ಪಟ್ಟವರು, ಧಿಡೀರ್‌ ಎಂದು ಬೀದಿಗೆ ಬಿದ್ದ ಕುಟುಂಬಗಳ ಮಕ್ಕಳು… ಇವರೆಲ್ಲಾ ಏನಾದರು ಎನ್ನುವ ಪ್ರಶ್ನೆಗೆ ಉತ್ತರ ತಿಳಿಯುವುದು ನಮಗೆ ಬಹಳ ಮುಖ್ಯವಾಗಿತ್ತು.

ಅಷ್ಟು ಹೊತ್ತಿಗೆ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ನಿರಾಶ್ರಿತರಾದ, ಗಾಯಗೊಂಡ, ಅನಾರೋಗ್ಯಕ್ಕೊಳಗಾದ, ಅನಾಥರಾದ, ಕಳೆದು ಹೋದ, ತಪ್ಪಿ ಹೋದ ಮಕ್ಕಳ ಅನೇಕ ಕತೆಗಳು ಬರುತ್ತಿದ್ದವು. ಜೊತೆಗೆ ಸುನಾಮಿಯ ಹೊಡೆತಕ್ಕೆ ಬಿದ್ದು ನಿರ್ಗತಿಕರಾದ ಪ್ರತಿಯೊಬ್ಬರಿಗೂ ತಮಿಳುನಾಡು ಸರ್ಕಾರ ಏರ್ಪಡಿಸಿದ್ದ ಕ್ಯಾಂಪ್‌ಗಳು ಮತ್ತು ಮಕ್ಕಳ ನಿಲಯಗಳ ವಿವರಗಳು ಕಾಣತೊಡಗಿತು. ಸುನಾಮಿಯ ಪರಿಣಾಮದ ಹಿಂದೆಯೇ ಸರ್ಕಾರ ತೆಗೆದುಕೊಂಡ ಹಲವಾರು ನಿರ್ಧಾರಗಳ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಂಬಂಧಿಸಿದ ನಿಲುವುಗಳು ಪ್ರಮುಖವಾದದ್ದು.

ತಮಿಳುನಾಡಿನ ಅಷ್ಟೂ ಸಮುದ್ರ ತೀರದ ಜಿಲ್ಲೆಗಳಲ್ಲಿ ಚೈಲ್ಡ್‌ಲೈನ್‌ ೧೦೯೮ ಸರ್ಕಾರದ ವತಿಯಿಂದಲೇ ಆರಂಭಿಸುವುದು. ಯಾವುದೇ ಮಗು ಎಂತಹದೇ ತೊಂದರೆಯಲ್ಲಿದ್ದರೂ, ಚೈಲ್ಡ್‌ಲೈನ್‌ ಅನ್ನು ಸಂಪರ್ಕಿಸಬೇಕು. ಎಲ್ಲ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗಳು ಸರ್ಕಾರ ಮತ್ತು ಸರ್ಕಾರೇತರ ಮಕ್ಕಳ ನಿಲಯಗಳೊಂದಿಗೆ ಸೇರಿ ತೊಂದರೆಯಲ್ಲಿರುವ ಮಕ್ಕಳ ಯೋಗಕ್ಷೇಮಕ್ಕಾಗಿ ಕ್ರಮ ಕೈಗೊಳ್ಳತೊಡಗಬೇಕು. ಈ ಎಲ್ಲದರೊಂದಿಗೆ ಮುಖ್ಯಮಂತ್ರಿ ಜೆ. ಜಯಲಲಿತಾ ತೆಗೆದುಕೊಂಡ ಮುಖ್ಯ ನಿರ್ಧಾರ: ತೊಂದರೆಯಲ್ಲಿರುವ ಯಾವುದೇ ಮಗುವನ್ನು ಯಾರೂ ಸರ್ಕಾರದ ಒಪ್ಪಿಗೆಯಿಲ್ಲದೆ ಆಯಾ ಜಿಲ್ಲೆಗಳಿಂದ ಹೊರಗೆ ಒಯ್ಯುವಂತಿಲ್ಲ. ಹಾಗೆ ಯಾರಾದರೂ ಸಂಬಂಧಪಟ್ಟ  ಜನರನ್ನು ಪುಸಲಾಯಿಸಿ ಅಥವಾ ಮೋಸ ಮಾಡಿ ಮಕ್ಕಳನ್ನು ಒಯ್ದರೆ (ಅದಕ್ಕಾಗಿ ಹಣಕಾಸಿನ ವ್ಯವಹಾರ ನಡೆದರೆ) ಅಂತ ಪ್ರಕರಣಗಳನ್ನು ಮಕ್ಕಳ ಸಾಗಣೆಯ ಅಪರಾಧ ಮಾಡಲಾಗಿದೆಯೆಂದು ಪರಿಗಣಿಸಲಾಗುತ್ತದೆ.

ಸುನಾಮಿಯಿಂದ ಪೋಷಕರನ್ನು ಕಳೆದುಕೊಂಡಿರುವ ಅಥವಾ ಪೋಷಕರಿಂದ ಬೇರೆಯಾಗಿರುವ ಯಾವುದೇ ಮಗುವನ್ನು ದತ್ತು ಕೊಡಲೇಬೇಕೆಂದು ಭಾವಿಸಬೇಕಿಲ್ಲ. (ನಂತರದ ದಿನಗಳಲ್ಲಿ ತಮಿಳುನಾಡಿನಲ್ಲಿ ಒಂದು ವರ್ಷದ ಅವಧಿಗೆ ದತ್ತು ಪ್ರಕ್ರಿಯೆಯನ್ನೇ ರದ್ದು ಮಾಡಬೇಕೆಂದು ಒತ್ತಾಯವೂ ಇತ್ತು). ಹಾಗೊಂದು ವೇಳೆ ಮಕ್ಕಳು ಪೋಷಕರನ್ನು ಕಳೆದುಕೊಂಡಿರುವುದು ಕಂಡುಬಂದರೆ, ಮೊದಲು ಆಯಾ ಮಕ್ಕಳ ಹತ್ತಿರದ ಸಂಬಂಧಿಗಳನ್ನು ಪತ್ತೆ ಮಾಡಿ ಅವರು ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿರುವರೇ ಇಲ್ಲವೇ ಗಮನಿಸಬೇಕು. ಅವರು ಆರ್ಥಿಕ ಕಾರಣಗಳಿಂದ ತಮ್ಮ ಅಸಾಮರ್ಥ್ಯ ತೋರಿದಲ್ಲಿ, ಸರ್ಕಾರದಿಂದ ಪ್ರತಿ ತಿಂಗಳು ಸಹಾಯ/ಪರಿಹಾರ ನೀಡಲಾಗುವುದು. ಸುನಾಮಿಯಿಂದ ಅನಾಥರಾದ ಮಕ್ಕಳ ಏಳ್ಗೆಗಾಗಿ ಸುನಾಮಿ ಫಂಡ್‌/ನಿಧಿಯನ್ನು ಸೃಷ್ಟಿಸಲಾಗುತ್ತದೆ.

ಅನಾಥರಾದ ಪ್ರತಿ ಮಗುವಿನ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ಸುಮಾರು ರೂ.೫,೦೦,೦೦೦/- ಠೇವಣಿ ಇರಿಸಿ ಆ ಮಕ್ಕಳು ೧೮ ವರ್ಷದವರಾದಾಗ ಪಡೆಯುವ ಅವಕಾಶ ಮಾಡಿಕೊಡಲಾಗುವುದು. ಸಂಬಂಧಿಗಳು ಮಕ್ಕಳನ್ನು ಗಮನಿಸಲಾಗದಿದ್ದಲ್ಲಿ ಮಾತ್ರ ಅಥವಾ ಅಂತಹವರ್ಯಾರೂ ತಕ್ಷಣಕ್ಕೆ ಸಿಗದಿದ್ದಲ್ಲಿ ಆ ಮಕ್ಕಳನ್ನು ವಿಶೇಷವಾದ ತಾತ್ಕಾಲಿಕ ನಿಲಯಗಳಲ್ಲಿ ಸರ್ಕಾರದ ಸುಪರ್ದಿನಲ್ಲಿರಿಸಿ ಅವರ ಶಿಕ್ಷಣ, ರಕ್ಷಣೆ, ದೈಹಿಕ ಮಾನಸಿಕಆರೋಗ್ಯವೇ ಮೊದಲಾದವುಗಳಿಗೆ ಗಮನ ಕೊಡಲಾಗುತ್ತದೆ. ಮಕ್ಕಳನ್ನು ದತ್ತು ನೀಡುವುದೇ ಆದಲ್ಲಿ ಅದನ್ನು ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ಮಾಡಲಾಗುತ್ತದೆ.

ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಿಶೇಷವಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಅವರನ್ನು ಅವರವರ ಹಳ್ಳಿಗಳ ಸನಿಹದಲ್ಲೇ ಆರೈಕೆ ಕೇಂದ್ರಗಳಲ್ಲಿ ಗಮನಿಸಬೇಕು. ಅಂಗವಿಕಲತೆಯಿರುವ ಎಲ್ಲ ವ್ಯಕ್ತಿಗಳ ಪಟ್ಟಿ ತಯಾರಿಸಿ ಅವರಿಗೆ ಬೇಕಾದ ನೆರವುಗಳನ್ನು ಯಾವುದೇ ತಡವಿಲ್ಲದೆ ಒದಗಿಸಬೇಕು.

ತಮಿಳುನಾಡಿನ ಬಂಗಾಳ ಕೊಲ್ಲಿಯುದ್ದಕ್ಕೂ ಇರುವ ಎಲ್ಲ ೧೩ ಜಿಲ್ಲೆಗಳಲ್ಲಿ ಸರ್ಕಾರ ಮತ್ತು ಸ್ವಯಂಸೇವಾ ಸಂಘಟನೆಗಳ ಸಹಕಾರದೊಂದಿಗೆ ಬೆಂಗಳೂರಿನ ನಿಮ್ಹಾನ್ಸ್‌, ಯುನಿಸೆಫ್‌ ಮತ್ತಿತರ ಸಂಸ್ಥೆಗಳ ಮೂಲಕ ಸುನಾಮಿಯಿಂದ ಬಾಧಿತರಾದ ಎಲ್ಲ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ʼಭಯಮುಕ್ತರಾಗಲುʼ ವಿಶೇಷವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಅಂಗವಿಕಲತೆಯಿರುವ ಮಕ್ಕಳು, ಅಲ್ಪಸಂಖ್ಯಾತರ ಮಕ್ಕಳು ಮತ್ತು ಹಿಂದುಳಿದ ಜಾತಿ ವರ್ಗಗಳ ಮಕ್ಕಳಿಗೆ ಯಾವುದೇ ತಾರತಮ್ಯ ಆಗಬಾರದೆಂದು ಸರ್ಕಾರ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿತ್ತು.

ಈ ಎಲ್ಲವೂ ಅಂದುಕೊಂಡಂತೆ ಚ-ಚು ತಪ್ಪದೆ ಸಮರ್ಪಕವಾಗಿ ನಡೆಯಿತೆಂದು ಹೇಳಲಾಗದಿದ್ದರೂ, ತೊಂದರೆಗೆ ಸಿಲುಕಿದ ಮಕ್ಕಳೆಲ್ಲಾ ದಿಕ್ಕಾಪಾಲಾಗಿ ಚದುರಿ ಹೋಗಲಿಲ್ಲ ಎನ್ನುವುದು ಪ್ರಶಂಸಾರ್ಹ. ತಮಿಳುನಾಡಿನ ಈ ಕೆಲವು ಪ್ರದೇಶಗಳಿಗೆ ನಾವು ಕೆಲವರು ೨೦೦೬ರಲ್ಲಿ ಹೋಗಿದ್ದೆವು. ಕೆಲವೆಡೆ ೨೦೦೪ರ ದುರಂತದ ಪಳೆಯಳಿಕೆಗಳು ಇನ್ನೂ ಅಲ್ಲಲ್ಲಿ ಹಾಗೇ ಬಿದ್ದಿತ್ತು. (ಮುರಿದ ಮನೆ ನುಗ್ಗಿ ಬೋರಲು ಬಿದ್ದಿದ್ದ ಹರಿದ ದೋಣಿ, ಒಡೆದ ಮನೆಗೆ ಪ್ಲಾಸ್ಟಿಕ್‌ ಪರದೆ ಕಟ್ಟಿಕೊಂಡು ಹಾಗೇ ಇರುವ ಕೆಲವು ಜನ, ತೀರದಲ್ಲಿ ಬಹಳ ದೂರ ಬಂದು ಬಿದ್ದಿದ್ದ ದೋಣಿಯಲ್ಲಿ ಕುಳಿತು ರೋಧಿಸುವ ಕೆಲವರು… ಅವನ್ನು ಎತ್ತಲು, ಸರಿಪಡಿಸಲು ಅನೇಕ ಸ್ಥಳೀಯರು ಮತ್ತು ಅವುಗಳ ಮಾಲೀಕರು ಬಿಡುತ್ತಿರಲಿಲ್ಲವಂತೆ, ಹೊಸ ದೋಣಿ ಸಿಕ್ಕರೂ ನೀರಿಗೆ ಇಳಿಯದ ಕೆಲವರು, ಇತ್ಯಾದಿ.  ಅದು ಇನ್ನೊಂದು ಕತೆ). ಮೇಲುನೋಟಕ್ಕೆ ಜನರ ಜೀವನ ಮಾಮೂಲಿಯಾಗಿದೆ ಎಂಬಂತೆ ಕಾಣುತ್ತಿತ್ತು. ಆದರೆ ಒಳಗಿನ ದುಗುಡಗಳು ಇನ್ನೂ ಸಂಪೂರ್ಣವಾಗಿ ಆರಿರಲಿಲ್ಲ. 

ಆದಾಯದ ಮೂಲವಾಗಿದ್ದ ಪುರುಷರು ಇಲ್ಲದ ಕುಟುಂಬಗಳು ಚಿಕ್ಕ ಮಕ್ಕಳೊಂದಿಗೆ ಸಂಸಾರದ ನೊಗ ಎಳೆಯಲು ಕಷ್ಟಪಡುವ ತಾಯಂದಿರು, ಸುನಾಮಿಯಲ್ಲಿ ಸತ್ತ ಮೇಲೆ ಗಂಡಸರು ಮರು ಮದುವೆಯಾಗಿರುವುದು (ಮೊದಲ ಸಂಸಾರದಿಂದ  ಮಕ್ಕಳಾಗಿದ್ದರೂ ಅವರನ್ನು ಗಮನಿಸದಿರುವವರು), ಪರಿಹಾರ ತಮಗೆ ಇನ್ನೂ ಸಿಕ್ಕಿಲ್ಲ ಎಂದು ಬಡ ಕುಟುಂಬಗಳು ಅಲವತ್ತುಕೊಳ್ಳುವುದು, ತಮ್ಮ ಮಕ್ಕಳನ್ನು ಮುಂದಿಟ್ಟು ಇವರಿಗೆ ಏನಾದರೂ ಸಹಾಯ ಮಾಡಿ ಎಂದು ಕೇಳಿಕೊಳ್ಳುವುದು, ಮೊದಲಾದವು ಕಂಡುಬಂದವು.

ವಿಶ್ವಸಂಸ್ಥೆಯ ಆಂತರಿಕವಾಗಿ ನಿರಾಶ್ರಿತರಾದವರನ್ನು ಕುರಿತು ಇರುವ ನಿರ್ದೇಶಕ ತತ್ತ್ವಗಳಲ್ಲೊಂದು ಸ್ಪಷ್ಟಪಡಿಸುವುದು : ಮಕ್ಕಳು, ಕುಟುಂಬದಿಂದ ಬೇರ್ಪಡೆಯಾದ ಮಕ್ಕಳು, ಗರ್ಭಿಣಿಯರು ಮತ್ತು ಹಾಲೂಡಿಸುತ್ತಿರುವ ತಾಯಂದಿರು, ತಾಯಿ ಮಾತ್ರ ಇರುವ ಕುಟುಂಬಗಳು, ಅಂಗವಿಲತೆಯಿರುವವರು, ವೃದ್ಧರು – ಇವರೆಲ್ಲರಿಗೆ, ‘ಅವರವರ ‍ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡು ಅವರವರ ವಿಶೇಷ ಆವಶ್ಯಕತೆಗಳನ್ನು ತಕ್ಷಣವೇ ಸಂಬಂಧಪಟ್ಟ ಸರ್ಕಾರಗಳು ಒದಗಿಸಬೇಕು’. ಇದು ಮಾನವ ನಿರ್ಮಿತ ಅಥವಾ ನೈಸರ್ಗಿಕ (ನ್ಯಾಚುರಲ್) ದುರಂತಗಳು, ದೇಶ ದೇಶಗಳ ನಡುವಿನ ಯುದ್ಧ, ಆಂತರಿಕ ಯುದ್ಧಗಳೇ ಮೊದಲಾದವುಗಳಿಗೆ ನೇರವಾಗಿ ಸಂಬಂಧಿಸಿದ್ದು.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೨೦ (ಯಾವುದೇ ಮಗುವನ್ನು ಕೌಟುಂಬಿಕ ವಾತಾವರಣದಿಂದ ವಂಚಿತನ್ನಾಗಿಸಬಾರದು); ಪರಿಚ್ಛೇದ ೨೧ (ಮಕ್ಕಳನ್ನು ಕಾನೂನುಬಾಹಿರವಾಗಿ ದತ್ತು ನೀಡಬಾರು/ತೆಗೆದುಕೊಳ್ಳಬಾರದು); ಪರಿಚ್ಛೇದ ೨೨ (ನಿರಾಶ್ರಿತ ಮಕ್ಕಳಿಗೆ ಎಲ್ಲ ನೆರವು, ರಕ್ಷಣೆ ನೀಡಲೇಬೇಕು) ಮತ್ತು ಪರಿಚ್ಛೇದ ೨೬ (ಮಕ್ಕಳನ್ನು ಸುರಕ್ಷತೆಗಾಗಿ, ಚಿಕಿತ್ಸೆಗಾಗಿ ಅಥವಾ ಆರೈಕೆಗಾಗಿ ಎಲ್ಲಿಯಾದರೂ, ಯಾರ ಬಳಿಯಾದರೂ ಇರಿಸಿದ್ದೇ ಆದಲ್ಲಿ ಆ ಕುರಿತು ನಿಯಮಿತ ಅವಧಿಗಳಲ್ಲಿ ಪುನರ್ವಮರ್ಶೆ ನಡೆಸುತ್ತಿರಬೇಕು) ಎಂದು ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡುತ್ತಿದೆ. 

***

ಸುನಾಮಿಯ ಅಲೆಗಳು ಹಿಂದೆ ಹೋದವು. ಆದರೆ ಅದು ಬಿಟ್ಟುಹೋಗಿದ್ದ ದುರಂತದ ಕತೆಗಳು ಮೇಲಿಂದ ಮೇಲೆ ಮಾಧ್ಯಮಗಳಲ್ಲಿ ಮರುಕಳಿಸುತ್ತಲೇ ಇದ್ದವು. ಅದರಲ್ಲೊಂದು ಮತ್ತೆ ಮತ್ತೆ ಕಂಡುಬಂದದ್ದು, ಸುನಾಮಿಯಿಂದಾಗಿ ಅನಾಥರಾದ ಮಕ್ಕಳು ದತ್ತುವಿಗೆ ಲಭ್ಯವಿದ್ದಾರೆ ಎಂಬುದು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಸುದ್ದಿಯಾಗುತ್ತಲೇ ಇತ್ತು. ಸದ್ಯ ಆಗ, ಈಗಿನಷ್ಟು ಸಾಮಾಜಿಕ ಮಾಧ್ಯಮಗಳು (ಫೇಸ್ಬುಕ್‌, ಟ್ವಿಟ್ಟರು, ಇನ್ಸ್ಟಾಗ್ರಾಂ, ವಾಟ್ಸಪ್‌) ಇರಲಿಲ್ಲ. ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಇಂದು ಬಹುತೇಕ ಮಕ್ಕಳು ತಮ್ಮ ಸಂಬಂಧಿಗಳೊಡನೆ ಬೆಳೆದರು/ಬೆಳೆಯುತ್ತಿದ್ದಾರೆ, ಎಲ್ಲೋ ಕೆಲವರು ದತ್ತು ಹೋದರು, ಇಲ್ಲವೇ ಸಂಸ್ಥೆಗಳಲ್ಲಿ ಬೆಳೆದು ತಮ್ಮ ಗುರಿಗಳತ್ತ ಸಾಗುತ್ತಿದ್ದಾರೆ.

ಭಾರತ ಸರ್ಕಾರ ೨೦೦೫ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯಿದೆಯನ್ನು ಜಾರಿಗೆ ತಂದಿತು. ಈ ಕಾಯಿದೆಯ ಮುಖ್ಯ ಅಂಶ ವಿಪತ್ತುಗಳನ್ನು ಕುರಿತು ಮುಂದಾಲೋಚಿಸುವುದು, ಎಚ್ಚರಿಕೆ ನೀಡುವುದು, ತಡೆಯಲೆತ್ನಿಸುವುದು ಮತ್ತು ಎದುರಿಸುವುದು ಹಾಗೂ ದುರಂತಗಳ ಪ್ರಮಾಣ ಕಡಿಮೆ ಮಾಡುವುದು ಮತ್ತು ಪುನರ್ವಸತಿ ಹಾಗೂ ಪುನರ್ನಿರ್ಮಾಣ. ದುರಂತಗಳಾದ ಮೇಲೆ ಪರಿಹಾರಗಳನ್ನು ಕೈಗೊಳ್ಳುವುದಕ್ಕಿಂತಲೂ ಅವುಗಳು ಆಗದಂತೆ ಮತ್ತು ಒಂದು ವೇಳೆ ಅವು ಸಂಭವಿಸಿದರೂ ಅದರ ಪರಿಣಾಮ ಕಡಿಮೆಗೊಳಿಸುವುದು ಉತ್ತಮ ಎಂಬುದು ಈ ನೀತಿಯ ಧ್ಯೇಯವಾಗಿದೆ. ದುರಂತಗಳ ಸಮಯದಲ್ಲಿ ಮಕ್ಕಳ ರಕ್ಷಣೆ, ಆರೋಗ್ಯ, ಆಹಾರದ ಬಗ್ಗೆ ವಿಪತ್ತು ನಿರ್ವಹಣೆ ಕಾಯಿದೆಯಂತೆ ಗಮನ ಹರಿಸಿರುವುದು ಅನಿವಾರ್ಯ ಮತ್ತು ಪ್ರಶಂಸನೀಯ.

***

೨೦೦೪ರ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಮಕ್ಕಳ ಪ್ರವಾಹ ಬರಲಿಲ್ಲ. ಆದರೆ ನಾವು ತಯಾರಾಗಿದ್ದು ಮತ್ತು ತಮಿಳುನಾಡಿನಲ್ಲಿ ಆಗಿರುವ ಬೆಳವಣಿಗೆಗಳನ್ನು ತಿಳಿದದ್ದು ಒಳ್ಳೆಯ ಅಭ್ಯಾಸವಾಯಿತು. ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಆದಾಗ (ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹಗಳು, ಒರಿಸ್ಸಾದಲ್ಲಿ ಎದ್ದ ಚಂಡಮಾರುತದ ಹಾವಳಿ, ಇತ್ಯಾದಿ) ತಮಿಳುನಾಡಿನ ಅನುಭವಗಳು ಒಳ್ಳೆಯ ಪಾಠವಾಯಿತು.

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದಿನ ಈ ನೆನಪು ಈಗ ಕೋವಿಡ್‌ ಸಾಂಕ್ರಾಮಿಕದ ಹಾವಳಿಯಲ್ಲಿ ಮರುಕಳಿಸುತ್ತಿದೆ. ಕೋವಿಡ್‌ನಿಂದಾಗಿ ಅನಾಥರು, ಅರೆ ಅನಾಥರಾಗುವ ಮಕ್ಕಳ ಹಕ್ಕುಗಳ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ನೆನಪಿಸುತ್ತಿದೆ. ಅದಕ್ಕೆ ನಾವೆಲ್ಲರೂ ಸದಾ ಜಾಗೃತರಾಗಿರಬೇಕು. ಅನಾಥ ಮಕ್ಕಳನ್ನು ಕುರಿತು ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಅವುಗಳನ್ನು ನಾವು ಮುಂದಕ್ಕೆ ಸಾಗಿಸಬಾರದು (ಪರಿಶೀಲಿಸದೆ ಫಾರ್‌ವರ್ಡ್‌ ಮಾಡಬಾರದು), ನಿಜವಾಗಿಯೂ ಯಾರಾದರೂ ಮಕ್ಕಳು ಕೋವಿಡ್‌ನಿಂದಾಗಿ ತೊಂದರೆಯಲ್ಲಿರುವುದು ತಿಳಿದರೆ ಅಂತಹವರಿಗೆ ಏನು ಸಹಾಯ ಬೇಕೆಂದು ಕೇಳಿ, ಸಾಧ್ಯವಾದಲ್ಲಿ ಮಾಡಿ ಜೊತೆಗೆ ಸರ್ಕಾರದೊಡನೆ ನಿಕಟವಾಗಿ ಕೆಲಸ ಮಾಡುವ ಚೈಲ್ಡ್‌ಲೈನ್‌ ೧೦೯೮ಗೆ ಮಾಹಿತಿ ನೀಡಬೇಕು.

‍ಲೇಖಕರು ವಾಸುದೇವ ಶರ್ಮ

May 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. T S SHRAVANA KUMARI

  ಮಾಹಿತಿಪೂರ್ಣ ಬರಹ. ತುಂಬಾ ಇಷ್ಟವಾಯಿತು.

  ಪ್ರತಿಕ್ರಿಯೆ
  • kamalakar bhat

   Read it with great interest. I tend to read from the point of view of writing, so I notice how you pitch your writing. You create a context, you create drama, you provide supplementary information. Then you pass on the kernel of your writing. This makes all readers take an interest in a subject that otherwise has interest for specific readers. A lesson for any media student. Awesome.

   ಪ್ರತಿಕ್ರಿಯೆ
   • kamalakar bhat

    I also think these writings will prove to be rich resources for social work students and activists in the future. You must therefore, publish these as a book eventually.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: