ಅನಸೂಯ ಜಹಗೀರದಾರ
ಕೊಪ್ಪಳ ಜಿಲ್ಲೆಯವರು. ಪ್ರೌಢಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಾಯಕಿ ಮತ್ತು ಲೇಖಕಿಯೂ ಆಗಿದ್ದಾರೆ.
ಕೈ ಕಟ್ಟಿ ಕುಣಿಸುವ ಹುನ್ನಾರಕೆ ಮನವ ತೆರೆದಿರುವೆ ಬಂದದ್ದು ಬರಲಿ
ಬೆನ್ನಹಿಂದಿನ ಹೊರೆಯ ಭಾರಕೆ ಸ್ವೀಕಾರ ಬರೆದಿರುವೆ ಬಂದದ್ದು ಬರಲಿ
ಜಗದ ರಂಗದಲಿ ಪಾತ್ರಗಳ ವಿಜೃಂಭಣೆ ಮುಖವಾಡ ಕಳಚಿನೋಡು
ನುಗ್ಗಿ ನುಗ್ಗಾಗುವ ನೆನಪಿಗೆ ಪರದೆಯ ಎಳೆದಿರುವೆ ಬಂದದ್ದು ಬರಲಿ
ಸಾವು ಶರೀರಕೆ ರೂಹಿಗಿದೆಯೆ ಸುತ್ತಿ ಕುತ್ತಾಗುವ ಭ್ರಾಂತಿಯ ಮಾಣು
ಎದೆ ನೋವುಗಳೆ ಹಾಗೆಯೇ ಇರಿ ಖುಶಿಯಲಿರುವೆ ಬಂದದ್ದು ಬರಲಿ
ಓ! ಖುದಾ! ನನಗ್ಯಾವ ಜನ್ನತ್ತಿನ ಚಿಂತೆಯಿಲ್ಲ ಬೇಡ ನಿನ್ನ ಭಿಡೆಯು
ಇಂದಿಗಿಷ್ಟು ಬದುಕು ಸಾಕು ತುಟಿಗೆ ನಗೆ ಸವರಿರುವೆ ಬಂದದ್ದು ಬರಲಿ
ನಿನ್ನಿರುವ ನೆನೆದು ನರಳಿಕೆ ಬಿಕ್ಕಳಿಕೆ ಇಲ್ಲ ಇದು ನನ್ನದೇ ಪಾಡು
ತಿಂಗಳ ಬೆಳಕಿಗೂ ಸಮಯ ಬೇಕಲ್ಲ ಮೌನವಿರುವೆ ಬಂದದ್ದು ಬರಲಿ
ದಫನ್ ಆಗುವ ದೇಹಕೆ ಕಫನ್ ಹೊದಿಸುವ ಛಲವೇ ನಿತ್ಯ ಸೆಣಸಾಟ ನೋಡು
ನಿಂತನೆಲ ಬಾಡಿಗೆಯದು ಇಲ್ಲಿ ಎಲ್ಲವ ಒಪ್ಪಿರುವೆ ಬಂದದ್ದು ಬರಲಿ
ಜೀವರ ಹೊಂದಿಕೆ ಕಗ್ಗಂಟು ಹೊರಳಿದ ಮುಖ ನೂರಾರು ʻಅನುʼ
ಅಂಕಪರದೆ ಜಾರಿದ ಮೇಲೆ ನೇಪಥ್ಯವ ಕರೆದಿರುವೆ ಬಂದದ್ದು ಬರಲಿ
0 ಪ್ರತಿಕ್ರಿಯೆಗಳು