ಅನಂತಮೂರ್ತಿ ನಿಧನಾನಂತರದ ಕೆಲವು ಪ್ರಮಾದಗಳು – ಬಿ ಆರ್ ಸತ್ಯನಾರಾಯಣ

ಡಾ ಬಿ ಆರ್ ಸತ್ಯನಾರಾಯಣ

* ಅನಂತಮೂರ್ತಿಯವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ಬೇಟಿಯಾದವರ ಪಟ್ಟಿಯಲ್ಲಿ ಲಿಂಗದೇವರು ಹಳೆಮನೆಯವರ ಹೆಸರನ್ನು ಸೇರಿಸಿ ಕನ್ನಡದ ಆನ್ಲೈನ್ ಪತ್ರಿಕೆಯೊಂದು ಸುದ್ದಿಯನ್ನು ಪ್ರಕಟಿಸಿತ್ತು! ಲಿಂಗದೇವರು ಅವರು 2011ರಲ್ಲಿಯೇ ನಿಧರನರಾದರೆಂದು ಹಾಕಿದ ಕಾಮೆಂಟನ್ನು ಪ್ರಕಟಿಸದಿದ್ದರು, ಲೇಖನದಿಂದ ಹಳೆಮನೆಯವರ ಹೆಸರನ್ನು ಕಿತ್ತುಹಾಕಿ ಉಪಕಾರ ಮಾಡಿದರು. ಈ ಸುದ್ದಿಗೆ ಕಾಮೆಂಟ್ ಹಾಕಿದವರಲ್ಲಿ ಹೆಚ್ಚಿನವರು ಸಂಭ್ರಮಿಸಿ ತಮ್ಮ ವಿಕೃತಿಯನ್ನು ಪ್ರಕಟಿಸಿದ್ದು ಅತ್ಯಂತ ಅಮಾನವೀಯವಲ್ಲದೆ ಬೇರಲ್ಲ. ಫೇಸ್ ಬುಕ್ ಮತ್ತು ಟ್ವೀಟರುಗಳಲ್ಲಿಯೂ ಕೆಲವು ಈ ವಿಕೃತಿಯನ್ನು ಪ್ರಕಟಿಸಿದ್ದಾರೆಂದು ತಿಳಿದು ಬೇಸರವಾಯಿತು.
* ಅನಂತಮೂರ್ತಿಯವರ ನಿಧನಾನಂತರ ಕೆಲವು ಕಿಡಿಗೇಡಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಈ ಹಿಂದೆ ಮಹಾತ್ಮ ಗಾಂಧೀಜಿ ಬಲಿಯಾದಾಗ ಕೆಲವು ವಿಕೃತ ಮನಸ್ಸಿನವರು ಸಿಹಿ ಹಂಚಿ ಸಂಭ್ರಮಿಸಿದ್ದರೆಂದು ಓದಿ ತಿಳಿದಿದ್ದವರಿಗೆ ಅಂತಹುದನ್ನು ಕಣ್ಣಾರೆ ಕಂಡು ಪ್ರಮಾಣೀಕರಿಸಿಕೊಳ್ಳುವ ದೌರ್ಬಾಗ್ಯ. ಇಂತಹುದಕ್ಕೆ ಧಿಕ್ಕಾರವಿರಲಿ.
* ಕಲಾಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸುವ ತೀರ್ಮಾನಕ್ಕೆ ಸರ್ಕಾರ ಬಂದಿದ್ದು ಅತ್ಯಂತ ದುರದೃಷ್ಟಕರ. ಕಲಾಗ್ರಾಮವೆಂದು ಹೆಸರಿಟ್ಟು ಅದನ್ನು ಸ್ಮಶಾಣಗ್ರಾಮವನ್ನಾಗಿಸುವತ್ತ ಸರ್ಕಾರ ದಿಟ್ಟ ಎರಡನೇ ಹೆಜ್ಜೆ ಇಟ್ಟಿದೆ. ಜಿ.ಎಸ್.ಎಸ್. ಅವರ ಅಂತ್ಯ ಸಂಸ್ಕಾರ ಅಲ್ಲಿ ನಡೆದಾಗಲೇ ಈ ಆತಂಕ ಪ್ರಜ್ಞಾವಂತರನ್ನು ಕಾಡಿದ್ದು ಸುಳ್ಳಲ್ಲ. ಅದನ್ನು ನಿಜವಾಗಿಸುವತ್ತ ಸಾಗಿದೆ; ದೂರದೃಷ್ಟಿಯಿಲ್ಲದ ಸರ್ಕಾರ. ಇದನ್ನು ಪ್ರಜಾಪ್ರಭುತ್ವದ ಇನ್ನೊಂದು ಮುಖದ ಅನಾವರಣ ಎನ್ನಬಹುದೆ.

* ಇಂತಹ ಸಂದರ್ಭದಲ್ಲಿ ನಮಗೆ ಮಾದರಿಯಾಗುವವರು ಶ್ರೀ ಹಾ.ಮಾ.ನಾಯಕ ಮತ್ತು ತೇಜಸ್ವಿಯವರು. ಕುವೆಂಪು ಅವರ ನಿಧನಾನಂತರ ಕೆಲವರು ಮಾನಸಗಂಗೋತ್ರಿಯಲ್ಲೇ ಅಂತ್ಯಸಂಸ್ಕಾರವಾಗಬೇಕು, ಸ್ಮಾರಕವಾಗಬೇಕು ಎಂದು ಹಠ ಹಿಡಿದು ಕುಳಿತಿದ್ದರಂತೆ. ತೇಜಸ್ವಿ ಇನ್ನೂ ಮೂಡುಗೆರೆಯಿಂದ ಬಂದಿರಲಿಲ್ಲ. ಈ ಗೊಂದಲ ಶ್ರೀ ರಾಮದಾಸ್ ಮತ್ತು ಶ್ರೀರಾಮ್ ಅವರಿಂದ ಹಾ.ಮಾ.ನಾಯಕರಿಗೆ ಮುಟ್ಟಿತು. ತಕ್ಷಣ ಅವರು ಇಂದು ಕುವೆಂಪು ಅವರಿಗೆ ಇಲ್ಲಿ ಅಂತ್ಯಸಂಸ್ಕಾರವಾದರೆ ಮುಂದೆ ಎಲ್ಲಾ ಕುಲಪತಿಗಳನ್ನು ಇಲ್ಲೇ ಮಲಗಿಸಬೇಕು ಎಂಬ ಬೇಡಿಕೆ ಬರುತ್ತದೆ ಎಂದು ಎಚ್ಚರಿಸಿದರು. ಊರಿನಿಂದ ಬಂದ ತೇಜಸ್ವಿಯವರು ಇದನ್ನು ಅನುಮೋದಿಸಿದ್ದಲ್ಲದೆ ಹಠ ಹಿಡಿದು ಕುಳಿತಿದ್ದವರಿಗೆ ತಿಳಿಹೇಳಿ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದರು. ಆದ್ದರಿಂದ ಮಾನಸಗಂಗೋತ್ರಿ ಸ್ಮಶಾಣಗಂಗೋತ್ರಿಯಾಗುವುದು ತಪ್ಪಿತು. ಹಾ.ಮಾ.ನಾಯಕರ ದೂರದರ್ಶಿತ್ವ ಹಾಗೂ ತೇಜಸ್ವಿಯವರ ಕರ್ತೃತ್ವಶಕ್ತಿ ಇಂದಿನ ಸಾಂಸ್ಕೃತಿಕ ಚಿಂತಕರಲ್ಲಿ ಹಾಗೂ ಸಾಹಿತಿಗಳಲ್ಲಿ ಇಲ್ಲದಿರುವುದು ನಮ್ಮ ನಾಡಿನ ದುರಂತ.
* ವಾಹಿನಿಗಳು ತಾಮುಂದು ನಾಮುಂದು ಎಂದು ಸುದ್ದಿ ಪ್ರಕಟಣೆಗೆ ಇಳಿದವು. ನೇರಪ್ರಸಾರಕ್ಕೂ ದಾಂಗುಡಿಯಿಟ್ಟವು. ಒಂದು ವಾಹಿನಿಯಂತೂ ಸ್ಮಾರ್ತ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ಎಂದು ಪ್ರಕಟಿಸಿತು. ಇನ್ನೊಂದು ಮಾಧ್ವ ಸಂಪ್ರದಾಯದ ಪ್ರಕಾರ ಎಂದು ಪ್ರಕಟಿಸಿ ಧನ್ಯವಾಯಿತು. ಮಾಧ್ವ ಸಂಪ್ರದಾಯದಲ್ಲಿ ಶವವನ್ನು ಹೂಳುವ ಪದ್ಧತಿಯಿದೆ. ಸ್ಮಾರ್ತರಲ್ಲಿ ದಹಿಸುವ ಪದ್ದತಿಯಿದೆ. ವಿಶೇಷ ಸಂದರ್ಭಗಳಲ್ಲಿ ಏನಾದರೂ ಬದಲಾಗುವ ಸಾಧ್ಯತೆ ಇದೆಯೆ ಎಂಬುದು ನನಗೆ ಗೊತ್ತಿಲ್ಲ. ಅದೇನೇ ಇರಲಿ, ದೇವರು, ಭಗವಂತ, ಸ್ವರ್ಗ, ನರಕ, ಪುನರ್ಜನ್ಮ ಪರಿಕಲ್ಪನೆಗಳನ್ನು ಪುರಸ್ಕರಿಸಿಯೂ ವೈಚಾರಿಕತೆಯನ್ನು ಪ್ರತಿಪಾದಿಸಿದ್ದ, ಬರೆದಿದ್ದ ರಾಷ್ಟ್ರಕವಿಗಳಾದ ಕುವೆಂಪು, ಜಿ.ಎಸ್.ಎಸ್. ಅವರ ಅಂತ್ಯಸಂಸ್ಕಾರ ಯಾವುದೇ ಸಂಪ್ರದಾಯಕ್ಕೆ ಜೋತುಬಿದ್ದು ನಡೆದಿರಲಿಲ್ಲ. ಆದರೆ, ಜೀವನಪರ್ಯಂತ ಮೌಢ್ಯ, ಪುರೋಹಿತಶಾಹಿ, ತಿಥಿ, ಕರ್ಮ ಇವುಗಳನ್ನು ನಖಶಿಕಾಂತ ವಿರೋಧಿಸಿಕೊಂಡು ಬಂದಿದ್ದ ಅನಂತಮೂರ್ತಿಯವರ ಅಂತ್ಯಸಂಸ್ಕಾರ ಮಾತ್ರ ಸಂಪ್ರದಾಯಬದ್ಧವಾಗಿ, ಶಾಸ್ತ್ರೋಕ್ತವಾಗಿ ಹದಿನಾಲ್ಕು ಪುರೋಹಿತರ ಸಮ್ಮುಖದಲ್ಲಿ ನಡೆದು ಹೋಯಿತು. ಇದಕ್ಕೆ ಸಾಕ್ಷಿಯಾದವರು ಮೌಢ್ಯವಿರೋಧಿ ಕಾನೂನನ್ನು ತರಲು ತುದಿಗಾಲಲ್ಲಿ ನಿಂತಿರುವ ನಾಡಿನ ಮುಖ್ಯಮಂತ್ರಿ, ಅಂತಹ ಕಾನೂನಿಗೆ ಸರ್ವತ್ರ ಬೆಂಬಲ ನೀಡುತ್ತಿರುವ ವಿಚಾರವಾದಿಗಳು. ಕೊನೆಗೂ ಅನಂತಮೂರ್ತಿಗಳು ನಮ್ಮಲ್ಲಿ ಗೊಂದಲಗಳನ್ನು ಉಳಿಸಿಯೇ ಹೋದರು. ಅವರ ಸಂಸ್ಕಾರ ಕಾದಂಬರಿಯಲ್ಲಿ ಬ್ರಾಹ್ಮಣ್ಯಕ್ಕೆ ಎಂದೋ ತಿಲಾಂಜಲಿಯಿಟ್ಟಿದ್ದ ನಾರಣಪ್ಪನ ಅತ್ಯಂಸಂಸ್ಕಾರ ಮಾತ್ರ ಬ್ರಾಹ್ಮಣ ಸಂಪ್ರದಾಯದಂತೆಯೇ ನಡೆಯುತ್ತದೆ. ನಾರಣಪ್ಪ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ನಾರಣಪ್ಪನನ್ನು ಬಿಡಲಿಲ್ಲ. ಇವು ಕಾದಂಬರಿಯದೇ ಸಾಲುಗಳು. ಅನಂತಮೂರ್ತಿಯವರು ಬ್ರಾಹ್ಮಣ್ಯವನ್ನು ಬಿಟ್ಟರು ಬ್ರಾಹ್ಮಣ್ಯ ಅವರನ್ನು ಬಿಡಲಿಲ್ಲ ಎನ್ನಬಹುದು!
* ವಾಹಿನಿಯೊಂದರ ನಿರೂಪಕ, ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಅನಂತಮೂರ್ತಿಯವರು, ಅದೇ ಅಕಾಡೆಮಿಯ ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದರು ಎಂಬ ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಿಬಿಟ್ಟ. ಅದರೆ ಅನಂತಮೂರ್ತಿಯವರಿಗೆ ಕೇಂದ್ರಸಾಹಿತ್ಯ ಅಕಾಡೆಮಿಯ ಬಹುಮಾನ ಸಿಕ್ಕಿರಲಿಲ್ಲ. ಅದನ್ನು ಜೋಗಿಯವರು ಭಾಗವಹಿಸಿದ್ದ ಒಂದು ಚರ್ಚೆಯಲ್ಲಿ ಹೇಳಿದರು ಕೂಡ.
* ಪಟಾಕಿ ಸಿಡಿಸಿ ಸಂಭ್ರಮಿಸಿಕೊಂಡವರನ್ನು ನಮ್ಮ ಹುಡಗರೆಂದು ಹೆಮ್ಮೆಯಿಂದ ಒಬ್ಬ ಸ್ವಾಮೀಜಿ ಹೇಳಿಕೊಳ್ಳುತ್ತಿದ್ದರು. ಅದನ್ನು ನಾಚಿಕೆಗೇಡು ಎಂಬುದು ನಿರೂಪಕಿಯ ಅಭಿಪ್ರಾಯ. ಅಂತಹ ವಿಕೃತ ಸ್ವಾಮೀಜಿಗೆ ಮೈಕು ಸಿಕ್ಕಿಸಿ ಕ್ಯಮೆರಾ ಮುಂದೆ ತಂದು ನಿಲ್ಲಿಸಿಕೊಂಡ ತಮ್ಮ ವಾಹಿನಿಯದು ನಾಚಿಕೆಗೇಡಿನ ಕೆಲಸ ಎಂದು ಆ ನಿರೂಪಿಕಿಗೆ ಅರ್ಥವಾಯಿತೊ ಇಲ್ಲವೊ ಗೊತ್ತಿಲ್ಲ!
 

‍ಲೇಖಕರು G

August 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಯು ಆರ್ ಅನಂತಮೂರ್ತಿ ಸಮೀಪ ದರ್ಶನ

ಯು ಆರ್ ಅನಂತಮೂರ್ತಿ ಸಮೀಪ ದರ್ಶನ

    ಯು.ಆರ್. ಅನಂತಮೂರ್ತಿ - ನಾನು ಕಂಡ ಹಾಗೆ -ಹೊರೆಯಾಲ ದೊರೆಸ್ವಾಮಿ     ಕನ್ನಡ ಸಾಹಿತ್ಯ ಲೋಕದಲ್ಲಿ ಬಹಳಷ್ಟು ಕಾಲ...

13 ಪ್ರತಿಕ್ರಿಯೆಗಳು

  1. kvtirumalesh

    ಶ್ರೀ ಸತ್ಯನಾರಾಯಣ ಅವರೇ,
    ತಮ್ಮ ಅಭಿಪ್ರಾಯಗಳು ನಿಜ. ಆದರೆ ನೀವೂ ಲೇಖನದಲ್ಲಿ ಒಂದು ತಪ್ಪು ಮಾಡಿದ್ದೀರಿ: `ಅವರ ಸಂಸ್ಕಾರ ಕಾದಂಬರಿಯಲ್ಲಿ ಬ್ರಾಹ್ಮಣ್ಯಕ್ಕೆ ಎಂದೋ ತಿಲಾಂಜಲಿಯಿಟ್ಟಿದ್ದ ನಾರಣಪ್ಪನ ಅತ್ಯಂಸಂಸ್ಕಾರ ಮಾತ್ರ ಬ್ರಾಹ್ಮಣ ಸಂಪ್ರದಾಯದಂತೆಯೇ ನಡೆಯುತ್ತದೆ. ನಾರಣಪ್ಪ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ನಾರಣಪ್ಪನನ್ನು ಬಿಡಲಿಲ್ಲ. ಇವು ಕಾದಂಬರಿಯದೇ ಸಾಲುಗಳು. ಅನಂತಮೂರ್ತಿಯವರು ಬ್ರಾಹ್ಮಣ್ಯವನ್ನು ಬಿಟ್ಟರು ಬ್ರಾಹ್ಮಣ್ಯ ಅವರನ್ನು ಬಿಡಲಿಲ್ಲ ಎನ್ನಬಹುದು!’ ಎನ್ನುತ್ತೀರಿ. ನಾರಣಪ್ಪನ `ಶವಸಂಸ್ಕಾರ’ಮಾಡಿದ್ದು ಒಬ್ಬ ಬ್ಯಾರಿ (ಮುಸ್ಲಿಂ). `ಅವನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಟ್ಟಂತಲ್ಲ’ ಎಂಬುದು ಗುರುಗಳು ಹೇಳುವ ಮಾತು. ಅವರಿಗಾಗಲಿ ಅಲ್ಲಿ ಸೇರಿದ ಇತರ ಬ್ರಾಹ್ಮಣರಿಗಾಗಲಿ ನಾರಣಪ್ಪನನ್ನು ಸುಟ್ಟ ವಿಷಯ ಗೊತ್ತಿರುವುದಿಲ್ಲ. ಇನ್ನು ಅನಂತಮೂರ್ತಿಯವರು ಎಷ್ಟರ ಮಟ್ಟಿಗೆ ಎಲ್ಲಾ ಆಚರಣೆಗಳನ್ನೂ ನಿಜ ಜೀವನದಲ್ಲಿ ತೊರೆದರು ಎನ್ನುವುದು ನಮಗೆ ಗೊತ್ತಿಲ್ಲ–ನಾವು ಬಳಸುವ ಅರ್ಥದಲ್ಲಿ ಅವರು `ಸಂಪ್ರದಾಯವಾದಿ’ಯಾಗಿ ಇರಲಿಲ್ಲ ಎನ್ನುವುದು ನಿಜ; ಅವರ ಮಾತು ಬರಹಗಳಲ್ಲಿ ವಿಚಾರವಾದ ಕಾಣುತ್ತದೆ. ಆದರೆ ಅದು ಸಂಸ್ಕೃತಿವಿರೋಧಿಯಾದ ವಿಚಾರವಾದವಾಗಿರಲಿಲ್ಲ; ಅವರಿಗೆ ಸಂಸ್ಕೃತಿಯ ಕುರಿತು ತಮ್ಮದೇ ಅದ ಕಲ್ಪನೆಗಳಿದ್ದುವು. ಹಿಂದೂ ಧರ್ಮ ಮ್ತತ್ತು ಹಿಂದುತ್ವದ ನಡುವೆ ವ್ಯತ್ಯಾಸವಿದೆ ಎನ್ನುತ್ತಿದ್ದರು, ಹಾಗೂ ಹಿಂದೂ ಧರ್ಮದ ಪರ ವಹಿಸಿ ಹಿಂದುತ್ವವನ್ನು ಎದುರಿಸುತ್ತಿದ್ದರು. ಇವೆಲ್ಲ ಚಿಂತನೆಗೆ ಅರ್ಹವಾದ ವಿಚಾರಗಳು.
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
    • ಸತ್ಯನಾರಾಯಣ

      ಸರ್
      ನನ್ನ ತಪ್ಪನ್ನು ತಿದ್ದಿದ್ದಕ್ಕಾಗಿ ಧನ್ಯವಾದಗಳು. ಬಹಳ ಹಿಂದೆ ಓದಿದ್ದು. ಬರವಣಿಗೆಯ ಬೀಸಿನಲ್ಲಿ ಹಾಗೆ ಬರೆದಿದ್ದೇನೆ ಅನ್ನಿಸುತ್ತಿದೆ. ಕ್ಷಮಿಸಿ

      ಪ್ರತಿಕ್ರಿಯೆ
  2. hg malagi

    vikrutigaLige kAraNa bEkilla.adannu takshaNada pratikriye annuvavarU illadE illa. abhivyakti svAtantrya antalU annabahudu avaru. avara nambike avarige. dEvarilla annuvudU ondu nambike, iddAnebmidU nambike. ivarannu TIkisidante avarannU TIkisabEku.andAgalE abhivyaktige artha. illadiddare adU idU eraDU ugravAdagaLu AdAvu. sahishNute nammalli antargatavAgide. idannu bErellU kANalAgadu embudara aruvU ibbaralliyU irabEku. lEkhakaru hELidante mAdhva brAhmaNaru shavagaLannu hULuvudilla. agni samskAradindalE shava samskAra.

    ಪ್ರತಿಕ್ರಿಯೆ
    • ಸತ್ಯನಾರಾಯಣ

      ಶ್ರೀ ಮಾಳಗಿಯವರಿಗೆ ಧನ್ಯವಾದಗಳು. ಮಾಧ್ವ ಸಂಪ್ರದಾಯದಲ್ಲಿ ಅಂತ್ಯಸಂಸ್ಕಾರದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ನಾನು ಆ ಸಂಪ್ರದಾಯದ ಯಾವುದೇ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿಲ್ಲ. ಮಾಧ್ವ ಸಂಪ್ರದಾಯದಲ್ಲಿ ಸಮಾಧಿ (ವೃಂದಾವನ ಎನ್ನಬಹುದೆ?) ಪೂಜೆಗೆ ಆಧ್ಯತೆ ಇರುವುದರಿಂದ ನನ್ನಲ್ಲಿ ಆ ರೀತಿ ಕಲ್ಪನೆ ಮೂಡಿರಬಹುದು. ನನ್ನ ತಪ್ಪನ್ನು ತಿದ್ದಿ ಮಾಹಿತಿಯನ್ನು ವಿಸ್ತರಿಸಿದ್ದಕ್ಕೆ ಧನ್ಯವಾದಗಳು.

      ಪ್ರತಿಕ್ರಿಯೆ
    • ಜೆ.ವಿ.ಕಾರ್ಲೊ

      ಕನ್ನಡದಲ್ಲಿ ಬರೆಯಲು ಏನೂ ತೊಂದರೆಯಿಲ್ಲ. ಇಂಗ್ಲಿಷಿನಲ್ಲಿ ಕನ್ನಡವನ್ನು ಓದಲು ಬಹಳ ತೊಂದರೆಯಾಗುತ್ತಿದೆ. ನಿಮ್ಮ ಅಭಿಪ್ರಾಯವನ್ನು ಓದಲೇ ಆಗಲಿಲ್ಲ.

      ಪ್ರತಿಕ್ರಿಯೆ
  3. srinivasamurthy

    ಯಾರು ಯಾವ ಚಿಂತನೆಗಳನ್ನು ವಿರೋದಿಸುತ್ತಿರುತ್ತಾರೋ ಅವರಲ್ಲಿ ಕೆಲವರು ಆ ವಿಚಾರದ ಪ್ರತಿಪಾದಕರೂ ಆಗಿಬಿಡುತ್ತಾರೆ. ಡಸಳ ಹಾಗೂ ಅನಂತಮೂರ್ತಿಯವರ ಬಾಳ ನಡುಗೆಯನ್ನು ನೋಡಬಹುದು.

    ಪ್ರತಿಕ್ರಿಯೆ
  4. hg malagi

    ಶ್ರೀ ಸತ್ಯನಾರಾಯಣ ಅವರೆ, ನೀವು ಬರೆದದ್ದು ತಪ್ಪಲ್ಲ. ಅದು ಮಾಹಿತಿಯ ಕೊರತೆಯಷ್ಟೆ. ಮಾಧ್ವ ಸಂಪ್ರದಾಯದಲ್ಲಿ ಸನ್ಯಾಸಿಗಳ ದೇಹಾಂತ್ಯವಾದಾಗ ಅವರನ್ನು ಹೂಳಲಾಗುತ್ತದೆ. ಅದನ್ನೇ ವೃಂದಾವನಸ್ಥರಾದರು ಎನ್ನುವುದು. ಮಂತ್ರಾಲಯದ ಶ್ರೀಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಜಗತ್ಪಸಿದ್ಧ. ಏನೇ ಆದರೂ ತಪ್ಪನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡ ನಿಮ್ಮ ದೊಡ್ಡತನವನ್ನು ಮೆಚ್ಚಬೇಕು

    ಪ್ರತಿಕ್ರಿಯೆ
  5. shubha

    ಬಹಳ ಜನರಲ್ಲಿ ಏಳುತ್ತಿರುವ ಗೊಂದಲಗಳಿಗೆ ನಿಮ್ಮ ಮಾತು ಕೇಳುವ, ಅರ್ಥ ಮಾಡಿಕೊಳ್ಳುವ, ತನ್ಮೂಲಕ ಅನಂತಮೂರ್ತಿಯವರನ್ನು ಅರ್ಥಮಾಡಿಕೊಳ್ಳುವ ತುರ್ತು ಈಗಿದೆ ತಿರುಮಲೇಶ್ ಸರ್, ಧನ್ಯವಾದಗಳು…
    ಸತ್ಯನಾರಾಯಣ ಅವರೇ ಸಮಾಧಿ ಪದ್ಧತಿ ಇರುವುದು ಮಾಧ್ವರಲ್ಲಿ ಅವರ ಆಚಾರ್ಯ ಪರಂಪರೆಗೆ ಅಷ್ಟೇ ಅನ್ನಿಸುತ್ತದೆ. ಈ ಪದ್ಧತಿ ಸ್ಮಾರ್ತ ಆಚಾರ್ಯರಲ್ಲೂ ಕಾಣಬಹುದು.

    ಪ್ರತಿಕ್ರಿಯೆ
  6. Dr. Mohan Talakalukoppa

    ತಿರುಮಲೇಶ್ ಸರ್, ಈ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಇರುವ ವ್ಯತ್ಯಾಸವೇನು? ನನಗೆ ಗೊಂದಲವಿದೆ. ದಯವಿಟ್ಟು ಹೇಳ್ತೀರಾ? ಗಂಭೀರವಾಗೇ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಯಾವುದೇ ಕುಹಕಕ್ಕಲ್ಲ.

    ಪ್ರತಿಕ್ರಿಯೆ
    • kvtirumalesh

      ಸಂಸ್ಕೃತಿ ಮತ್ತು ಸಂಪ್ರದಾಯ ಎಂಬೀ ವಿಷಯಗಳ ವ್ಯತ್ಯಾಸವೇನು? ಡಾ. ಮೋಹನ್ ಅವರು ಬಹಳ ಮುಗ್ಧವಾದ, ಆದರೆ ಯಾರೂ ಸ್ಪಷ್ಟವಾಗಿ ಉತ್ತರಿಸಲಾಗದ ಪ್ರಶ್ನೆಯನ್ನೇ ಕೇಳಿದ್ದಾರೆ. ಅವರಿಗೆ ಗೊಂದಲವಿರುವಂತೆ ನನಗೂ ಇದೆ. ಆದರೂ ನಾನು ಇವನ್ನು ಅರ್ಥಮಾಡಿಕೊಳ್ಳುವ ಬಗೆಯೆಂದರೆ, ಸಂಸ್ಕೃತಿ ಹೆಚ್ಚು ಅಮೂರ್ತವಾದುದು, ಮೌಲ್ಯಗಳಿಗೆ ಸೇರಿದ್ದು. ಉದಾಹರಣೆಗೆ, ಪ್ರೀತಿ, ಗೌರವ, ಪರಿಸರ ಪ್ರೇಮ, ಅಹಿಂಸೆ ಇತ್ಯಾದಿ ಸಂಸ್ಕೃತಿಗೆ ಸೇರಿದ್ದು. ಇವನ್ನು ಅಳವಡಿಸಿಕೊಂಡ ಸಮಾಜ ತನ್ನ ಸಂಸ್ಕೃತಿಯನ್ನು ವಿವಿಧ ರೀತಿಯ ಆಚರಣೆಗಳಲ್ಲಿ, ವರ್ತನೆಗಳಲ್ಲಿ ಪ್ರಕಟಪಡಿಸುತ್ತದೆ. ಉದಾಹರಣೆಗೆ, ವಂದಿಸು ಮೂಲಕ ಗೌರವ ತೋರಿಸುತ್ತೇವೆ. ಇಂಥ ಆಚರಣೆಗಳು ಹಿಂದಿನಿಂದಲೂ ಬಂದಾಗ ಅವು ಸಂಪ್ರದಾಯವಾಗುತ್ತವೆ. ಸಂಪ್ರದಾಯ ಆಟೋಮ್ಯಾಟಿಕ್ ಪ್ರತಿಕ್ರಿಯೆ. ಅದು ಪ್ರಶ್ನೆ ಎತ್ತುವುದಿಲ್ಲ. ಹಿರಿಯರನ್ನು ಕಂಡಾಗ ಸೀಟು ಕೊಡುವುದು ಒಂದು ಸಂಪ್ರದಾಯ, ಆದರೆ ಅದರ ಹಿಂದೆ ಒಂದು ಸಂಸ್ಕೃತಿ ಕೂಡ ಇದೆ. ಈ ಎರಡು ಆಯಾಮಗಳಿಗೂ ಸಂಬಂಧವಿರುವುದರಿಂದಲೇ ಇವೆರಡೂ ಒಂದೇ ಎಂಬ ಗೊಂದಲ ಉಂಟಾಗುವುದು. ಆದರೆ ಇವನ್ನು ಭಿನ್ನವಾಗಿ ಕಾಣುವುದರಿಂದ ಸಂಪ್ರದಾಯದ ಸಮಸ್ಯೆಗಳನ್ನು ಎದುರಿಸಬಹುದು ಎಂದು ಕಾಣುತ್ತದೆ. ಉದಾಹರಣೆಗೆ, ವಿಧವೆಯರ ಕೇಶಮುಂಡನ ಮಾಡಿಸುವುದು, ಅವರ ಪುನರ್ ವಿವಾಹವನ್ನು ವಿರೋಧಿಸುವುದು, ಬಹಿಷ್ಕಾರ ಹಾಕುವುದು, ಜಾತಿ ಪದ್ಧತಿ, ಸತೀಪದ್ಧತಿ ಇವೆಲ್ಲ ಸಂಪ್ರದಾಯಕ್ಕೆ ಸೇರಿದಂಥವು; ಅವುಗಳ ಹಿಂದೆ ಏನೇನೋ ತತ್ವಗಳಿರಬಹುದು. ಆದರೆ ನಮಗಿಂದು ಅಂಟ ತತ್ವಗಳಲ್ಲಿ ವಿಶ್ವಾಸವಿಲ್ಲ–ಅವು ಹಿಂಸೆಯನ್ನು ಒಳಗೊಂಡಿವೆ ಎಂದು ನಾವು ತಿಳಿಯುತ್ತೇವೆ. ಆದ್ದರಿಂದ ಈ ಸಂಪ್ರದಾಯಗಳನ್ನು ಕೈಬಿಡುವುದು ಅಗತ್ಯವಾಯಿತು. ಇದರಿಂದ ಸಂಸ್ಕೃತಿಗೇನಾದರೂ ತೊಂದರೆಯಾಯಿತೇ ಎಂದರೆ ಇಲ್ಲ, ಸಂಸ್ಕೃತಿಗೆ ಒಳ್ಳೆಯದೇ ಆಯಿತು; ಯಾಕೆಂದರೆ ಮಾನವಸ್ನೇಹ, ಜೀವಪ್ರೀತಿ, ನ್ಯಾಯನಿಷ್ಟೆ ಇವು ಸಂಸ್ಕೃತಿಯ ಅಂಗಗಳು.
      ಸಂಪ್ರದಾಯದ ಸಮಸ್ಯೆಯೆಂದರೆ, ಅದು ಕಟುವಾಗಿ ಕನ್ಸರ್ವೇಟಿವ್: ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕಾರಣ ಇಂದೂ ಮುಂದೂ ಹಾಗೆ ನಡೆದುಕೊಳ್ಳಬೇಕು ಎನ್ನುತ್ತದೆ, ಒತ್ತಾಯಿಸುತ್ತದೆ, ಒಲ್ಲದವರನ್ನು ದ್ವೇಷಿಸುತ್ತದೆ. ಸಂಸ್ಕೃತಿ ಅದನ್ನು ಮಾಡುವುದಿಲ್ಲ. ಇಡೀ ಮಾನವೇತಿಹಾಸದ ಹಿಂದೆ ಇಂಥ ಸಂಘರ್ಷವೊಂದು ಇರುವಂತೆ ಅನಿಸುವುದಿಲ್ಲವೇ?
      ಇದರರ್ಥ ಎಲ್ಲಾ ಸಂಪ್ರದಾಯಗಳೂ ಹಿಂಸೆ ಮತ್ತು ಅನ್ಯಾಯಗಳಿಂದ ಕೂಡಿವೆ ಎಂದಲ್ಲ. ಆದರೆ ಪ್ರಶ್ನಿಸುವ, ವಿವೇಚಿಸುವ ಹಕ್ಕನ್ನು ಅದು ದಮನಿಸಿದಾಗ ಅಲ್ಲಿ ಬೆಳವಣಿಗೆ ಇರುವುದಿಲ್ಲ.
      ಇಂದು ಕೆಲವರು ಬುಡಕಟ್ಟು ಜನಾಂಗಗಳ ಜೀವನರೀತಿಗೆ, ಸಮಾಜರಚನೆಗೆ ಮಾರುಹೋಗಿದ್ದಾರೆ. ಇವರಿಗೆಲ್ಲ ಒಂದು ರೊಮ್ಯಾಂಟಿಕ್ ತಪ್ಪು ಕಲ್ಪನೆಯಿದೆ: ಅಂಥ ಸಮಾಜಗಳೇ ಹೆಚ್ಚು ಉತ್ತಮ ಎನ್ನುವುದು. ಆದರೆ ಒಳಹೊಕ್ಕು ನೋಡಿದರೆ ತಿಳಿಯುತ್ತದೆ,ಅಲ್ಲಿ ಬೆಳವಣಿಗೆಗೆ ಆಸ್ಪದವಿಲ್ಲ–ಸಾವಿರಾರು ವರ್ಷಗಳಿದಲೂ ಅವು ಸಂಪ್ರದಾಯವನ್ನೇ ಆಚರಿಸಿಕೊಂಡು ಬಂದಿವೆ. ಅಲ್ಲಿ ಸಂಪ್ರದಾಯ ಮತ್ತು ಸಂಸ್ಕೃತಿ ಅಭೇದವಾಗಿವೆ. ಆದ್ದರಿಂದ `ವಿದ್ಯಾಭ್ಯಾಸ’ ಎಂಬ ಕಲ್ಪನೆಯೇ ಅಲ್ಲಿ ಇರುವುದಿಲ್ಲ. ಬೇಡನೊಬ್ಬ ಬಿಲ್ಲು ವಿದ್ಯೆ ಕಲಿಯಬಹುದು, ಆದರೆ ಬಿಲ್ಲಿನಲ್ಲಿ ಹೊಸ ಆವಿಷ್ಕಾರಗಳನ್ನು ತರಲಾರ, ಅಥವಾ ಬೇಟೆಯನ್ನು ತ್ಯಜಿಸಿ ಬೇರೊಂದು ವೃತ್ತಿಯನ್ನು ಹಿಡಿಯಲಾರ. ಈಗ ಇವೆಲ್ಲ ಬದಲಾಗುತ್ತ ಬಂದಿರುವುದರಿಂದ ಈ ಮಾತಿನ ಅರ್ಥ ಹೊಳೆಯದೆ ಇರಬಹುದು. ಈಗ ಕಿಂಗ್ ಶಿಪ್ ಕೂಡಾ ಹೊರಟುಹೋಗಿದೆ–ಯಾಕೆಂದರೆ ಇಂದಿನ ನಮ್ಮ ಗಣತಂತ್ರ ಮೌಲ್ಯಕ್ಕೆ ಅದು ಹೊಂದುವುದಿಲ್ಲ. ಆದರೂ ಬ್ರಿಟನಿನಂಥ ದೇಶದಲ್ಲಿ ಇನ್ನೂ ನಾಮಕಾವಾಸ್ತೇ ಕಿಂಗ್ ಶಿಪ್ ಉಳಿದುಕೊಂಡಿದೆ; ಅದೊಂದು ಸಂಪ್ರದಾಯವಷ್ಟೆ. ಎಲ್ಲೀ ವರೆಗೆ ರಾಜರು (ರಾಣಿಯರು) ಚುನಾಯಿತ ಸರಕಾರದ ನಿರ್ದೇಶನದಂತೆ ನಡೆದುಕೊಳ್ಳುತ್ತಾರೋ ಅಲ್ಲೀ ವರೆಗೆ ರಾಜರು (ರಾಣಿಯರು) ಇರುತ್ತಾರೆ; ಸರಕಾರವನ್ನು ಧಿಕ್ಕರಿಸಿ ಅವರು ಉಳಿಯುವಂತಿಲ್ಲ.
      ಆದರೂ, ಗಣತಂತ್ರದ ತೊಟ್ಟಿಲೆಂದೇ ಖ್ಯಾತವಾದ ಬ್ರಿಟನ್ ಯಾಕೆ ಇನ್ನೂ ಈ ರಾಜ ಸಂಪ್ರದಾಯವನ್ನು ಇಟ್ಟುಕೊಂಡಿದೆ ಎಂಬ ಪ್ರಶ್ನೆ ಇದೆ. ಬಹುಶಃ ಮಾನವ ಸಮಾಜಗಳಿಗೆ ಕೆಲವೊಂದು ಸಂಪ್ರದಾಯಗಳು, ಎಲ್ಲೀ ವರೆಗೆ ಅವು ಸ್ವೀಕೃತ ಮೌಲ್ಯಗಳಿಗೆ ಮತ್ತು ಕಾನೂನುಗಳಿಗೆ ವಿರುದ್ಧ ಹೋಗುವುದಿಲ್ಲವೋ ಅಲ್ಲೀ ವರೆಗೆ, ಅಗತ್ಯವೆನಿಸುತ್ತವೆ. ಹೀಗೆ ಉಳಿಯಲು ಬಿಟ್ಟ ಸಂಪ್ರದಾಯವನ್ನುವುದು `ವೈಲ್ಡ್’ ಆಗಿರದೆ, `ಪಳಗಿ’ರುತ್ತವೆ.
      ಕೆ.ವಿ. ತಿರುಮಲೇಶ್

      ಪ್ರತಿಕ್ರಿಯೆ
  7. Govind Chandra Shekar

    ಹಿರಿಯ ರಂಗಕರ್ಮಿ ಪ್ರಸನ್ನರವರು ಸ್ಮಶಾನವಾಗುತ್ತಿರುವ ಕಲಾಗ್ರಾಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಸರಿಯಷ್ಟೆ, ಆದರೆ ಈ ಮೊದಲೇ ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪನವರನ್ನು ಸಂಸ್ಕಾರ ಮಾಡಿದಾಗ ಸ್ವಲ್ಪ ಯಾರಾದರೂ ದ್ವನಿ ಎತ್ತಿದ್ದರೂ ಬಹುಶಃ ಯು.ಆರ್.ಅನಂತಮೂರ್ತಿಯವರನ್ನು ಅಲ್ಲಿ ಸಂಸ್ಕಾರ ಮಾಡುತ್ತಿರಲಿಲ್ಲವೇನೋ ಅನಿಸುತ್ತೆ. ಅಥವಾ ಕಲಾಗ್ರಾಮಕ್ಕೆಂದು ಸರ್ಕಾರ ಕೊಟ್ಟ ಜಾಗೆಯನ್ನು ಸರಿಯಾದ ಉದ್ದೇಶಕ್ಕೆ ಬಳಸಿಕೊಳ್ಳಲು ಈವರೆಗೂ ಸಂಬಂದಪಟ್ಟ ಯಾರೂ ಯೋಜನೆ ಹಾಕದೇ ಹಾಗೆ ಬಿಟ್ಟ ಕಾರಣಕ್ಕಾಗಿಯೋ ಏನೋ ಸಾಹಿತ್ಯ ದಿಗ್ಗಜರನ್ನು ಅಲ್ಲಿ ಅಂತ್ಯ ಸಂಸ್ಕಾರ ಮಾಡುವ ಮೂಲಕ ಸ್ಮಶಾನ ಮಾಡಿದರೆ ಯಾರೂ ಪ್ರಶ್ನಿಸದೇ ಇದ್ದಲ್ಲಿ ಮುಂದೊಂದು ದಿನ ಭೂಮಾಫ಼ಿಯಕ್ಕೆ ಹಸ್ತಾಂತರಿಸಲು ಸುಲಭ ಎನ್ನುವ ಉದ್ದೇಶದಿಂದ ಈ ಕಾರ್ಯ ಕಾರಣವಿದ್ದಿತೋ ಏನೋ?. ಇರಬಹುದು ಎನ್ನುವ ಗುಮಾನಿ ಹಲವರಲ್ಲಿ ಇರುವುದು ಮುಸುಕಿನೊಳಗಿನ ಮಾತುಗಳ ಹರಿದಾಟದಿಂದ ವೇದ್ಯವಾಗುತ್ತದೆ. ಉದ್ದೇಶವಿದ್ದೋ, ಯಾ ಉದ್ದೇಶವಿಲ್ಲದೆಯೋ ವ್ಯಕ್ತವಾದ ಸಾಂದರ್ಬೀಕ ಟೀಕೆ ಯಾ ಆತಂಕ ಹೊರಹೊಮ್ಮಿದ್ದು, ಅಲ್ಲಿಗೆ ಸುಮ್ಮನಾಗದೆ ಈಗಲಾದರೂ ಸಂಸ್ಕಾರಗೊಂಡ ಸ್ಥಳದಿಂದ ಬೂದಿ ಸಮೇತ ಒಂದಷ್ಟು ಮಣ್ಣನ್ನು ತೆಗೆದುಕೊಂಡು ಹೋಗಿ ಅನಂತಮೂರ್ತಿಯವರದೇ ಸ್ವಂತದ ಹತ್ತು ಎಕರೆ ಜಮೀನಿನ ಒಂದು ಎಕರೆ ಪ್ರದೇಶವನ್ನು ಅವರ ಸ್ಮಾರಕಕ್ಕೆಂದು ಮೀಸಲಿಟ್ಟು ಅವರ ಸ್ಮಾರಕ ನಿರ್ಮಿಸಿದರೆ ಅನಂತಮೂರ್ತಿಯವರ ಮೇಲಿನ ಗೌರವದ ಸತ್ಯಾಸತ್ಯತೆಯನ್ನು ನಿರೂಪಿಸಿದಂತಾಗುತ್ತದೆ. ಈ ವಿಚಾರದಲ್ಲಿ ಯು.ಆರ್.ಅನಂತಮೂರ್ತಿಯವರ ಹೆಂಡತಿ ಮತ್ತು ಮಕ್ಕಳು ದಿಟ್ಟ ನಿರ್ದಾರ ತೆಗೆದುಕೊಳ್ಳಬೇಕು. (ಕುವೆಂಪುರವರ ಸಂಸ್ಕಾರ ಮತ್ತು ಸ್ಮಾರಕದ ವಿಚಾರದಲ್ಲಿ ತೇಜಸ್ವಿಯವರು ತೆಗೆದುಕೊಂಡ ದಿಟ್ಟ ನಿರ್ದಾರದಂತೆ)
    ಇನ್ನು ಅನಂತಮೂರ್ತಿಯವರ ಸಾಹಿತ್ಯದೊಳಗಿನ ಸಮಾಜವಾದದ ಚಿಂತನೆಯಾಗಲಿ, ಕಥೆಗಳಲ್ಲಿನ ಬ್ರಾಹ್ಮಣ್ಯದ ಆಚರಣೆಗಳ ವಿರೋಧಿ ಮಂಥನಗಳಾಗಲಿ, ಕೊನೆಗಾಲದ ರಾಜಕೀಯ ಆಸಕ್ತ ಟೀಕೆಗಳಾಗಲಿ, ಪ್ರತಿಯೊಬ್ಬ ವಿಶ್ಲೇಷಕ ಮನಸ್ಸಿನ, ತಾರ್ತಿಕ ಸಿದ್ದಾಂತದ ನೆಲೆಯಲ್ಲಿ, ಕಾಲಮಾನದ ಸಾಂದರ್ಭೀಕತೆಗೆ ತಕ್ಕಂತೆ ಹೊರಹೊಮ್ಮಿಸುವ ಸತ್ಯಗಳಂತೆ ಎಂಬಲ್ಲಿಗೆ, ಅವರ ವೈಯುಕ್ತಿಕ ಆಶಯಗಳ ಆಸ್ಮಿತೆಗಷ್ಟೆ ಸೀಮಿತಗೊಳಿಸಿ ಅದರೊಳಗೆ ಅನುಸರಣೆಗೋ, ಅನುಕರಣೆಗೋ ಅಗತ್ಯವಿದ್ದಲ್ಲಿ ಅಳವಡಿಸಿಕೊಳ್ಳಬೇಕೆ ವಿನಃ, ಅನಗತ್ಯ ಟೀಕೆ ಸರಿಯಲ್ಲವೇನೋ ಅನಿಸುತ್ತದೆ.
    ಅವರು ಒಬ್ಬ ಬ್ರಾಹ್ಮಣನಾಗಿ ಹುಟ್ಟಿ ವಯೋಮಾನದ ಸಾಂದರ್ಭೀಕ ವೈಚಾರಿಕ ನೆಲೆಗಂಟಿ, ಮೂಲಭೂತವಾದಿ ಬಹಿಷ್ಕಾರ ಮೆಟ್ಟಿ, ಬ್ರಾಹ್ಮಣ್ಯದ ಒಳಹೂರಣವನ್ನು ಲೇಖನಿಯ ಮಸಿಯೊಳಗೆ ಬೆರೆಸಿ ಬಿಳಿಹಾಳೆಯಲಿ ಹರಡಿದ್ದು ಆ ಕಾಲಘಟ್ಟಕ್ಕದು ಶ್ರೇಷ್ಟ. ಬದಲಾದ ಸನ್ನಿವೇಶಕ್ಕೆ ಹೊಂದುವುದು, ಮುಂದುವರಿಯುವುದು ಬದುಕಿನ ಅನಿವಾರ್ಯ ಕೂಡ ಎಂಬುದೂ ಸತ್ಯ. ಅದರಂತೆ ನಡೆದರು ನಿತ್ಯ, ಆದರೆ ನಮಗದು ಬಾಹ್ಯ ನೋಟ. ಹರಿವ ಪಾತ್ರ ಬದಲಿಸಿದ ನದಿಯಂತೆ ಪ್ರವಹಿಸಿದರೂ ಧೀರ್ಘವಾಗಿ ಬೃಹತ್ತಾಗಿ, ಆದರೆ ನದಿಗಳ ಜೋಡಣೆಯ ಯೋಜನೆಯಂತೆ ಕಾದಿದ್ದು ಮರು ಜೋಡಿಸಿದರು ಬ್ರಾಹ್ಮಣ್ಯಕ್ಕೆ ಅಂತ್ಯ ಸಂಸ್ಕಾರದೊಳು. ಹಲವರೆಣಿಸಿದ್ದರು ನದಿ ಸಮುದ್ರ ಸೇರುತ್ತದೆಂದು, ಆದರದು ಸೇರಿದ್ದು ತೊರೆ. ಬಹುಶಃ ಯು.ಆರ್.ಅನಂತಮೂರ್ತಿಯವರು ಸಾವಿನ ನಂತರ ಏನು ಅಂತ ಯೋಚಿಸಿರಲಿಲ್ಲ ಅನಿಸುತ್ತೆ. ಹಾಗೇನಾದರೂ ಯೋಚಿಸಿದ್ದಿದ್ದರೆ, ಸಾವಿನ ನಂತರದ ತನ್ನ ಶರೀರವನ್ನು ಮನುಕುಲದ ಉಪಯೋಗಕ್ಕಾಗಿ ಯಾವುದಾದರೂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಶವದಾನ ಮಾಡುವ ಮೂಲಕ, ಬ್ರಾಹ್ಮಣ್ಯಕ್ಕೆ ಮರಳಿ ಹೋಗಲಾರೆ ಎಂದು ನಿರ್ದರಿಸುತ್ತಿದ್ದರೇನೋ… ಅಂತ ನನ್ನ ಅನಿಸಿಕೆ.
    ಸಾರ್ವತ್ರಿಕವಾಗಿ ವೈಚಾರಿಕ ಚಿಂತನೆಗಳನ್ನು ಪ್ರತಿಪಾದಿಸುವ ಯಾವುದೇ ನೆಲೆಯಲ್ಲಿನ ಮಹನೀಯರುಗಳಿಗೆ ನನ್ನ ಸಲಹೆ, ದಯವಿಟ್ಟು ಜೀವಂತವಿರುವಾಗಲೇ ಸಾವಿನ ನಂತರ ತಮ್ಮ ಶವವನ್ನು ದಾನ ಮಾಡುವ ನೋಂದಣಿ ಮಾಡಿಸುವ ಮೂಲಕ ನಿಮ್ಮ ಶರೀರದ ಹಕ್ಕನ್ನು ನಿಮ್ಮದಾಗಿ ಉಳಿಸಿಕೊಳ್ಳುವುದಲ್ಲದೆ, ನಿಮ್ಮ ವೈಚಾರಿಕ ಚಿಂತನೆಯನ್ನು ಅಮರವಾಗಿರಿಸಿದಂತಾಗುತ್ತದೆ. ಅನೇಕ ಮೆಡಿಕಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗಾಗಿ ಶವಗಳ ಬೇಡಿಕೆಯಿದೆ ಎಂಬುದನ್ನು ಗಮನಿಸಿ………

    ಪ್ರತಿಕ್ರಿಯೆ
    • ಸತ್ಯನಾರಾಯಣ

      ಈ ಬಗೆಯ ಅಂತ್ಯಸಂಸ್ಕಾರವನ್ನು ಅವರೇ ಬಯಸಿದ್ದರೆಂಬ ಸುದ್ದಿಯೂ ಇದೆ. ಇಂದಿನ (27.8.14) ವಿಜಯವಾಣಿ ಪತ್ರಿಕೆಯಲ್ಲಿ ಪ್ರೇಮಶೇಖರ ಅವರ ಜಗದಗಲ ಅಂಕಣದಲ್ಲಿ ಇದು ಪ್ರಸ್ತಾಪವಾಗಿದೆ. ಆದರೆ, ಅದಕ್ಕೆ ನಾವು ಆಶ್ವರ್ಯಪಡುವ ಅಗತ್ಯವೂ ಇಲ್ಲ ಎಂಬುದನ್ನು ಹಲವಾರು ನಿದರ್ಶನಗಳ ಮೂಲಕ ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ. ಬ್ರಾಹ್ಮಣ ಸಂಪ್ರದಾಯದ ಹಲವಾರು ಕಾರ್ಯಕ್ರಮಗಳನ್ನು ತಮ್ಮ ಮನೆಯಲ್ಲೇ ಏರ್ಪಡಿಸಿದ್ದು, ತಮ್ಮ ಹಿರಿಯರು ಪೂಜಿಸುತ್ತಿದ್ದ ದೇವಾಲಯಕ್ಕೆ ಬೇಟಿ ನೀಡಿ, ಇಲ್ಲಿ ನನಗೆ ಶಾಂತಿ ದೊರೆಯಿತೆಂದು ಹೇಳಿಕೆ ನೀಡಿದ್ದು…. ಅವುಗಳ ಮುಂದುವರೆದ ಭಾಗವೇ ಈ ಅಂತ್ಯಸಂಸ್ಕಾರ!

      ಪ್ರತಿಕ್ರಿಯೆ
  8. udayakumar habbu

    ಅನಂತಮೂರ್ತಿಯವರು ತಮ್ಮಮಾತುಗಳಲ್ಲಿ ದ್ವಂದ್ವವನ್ನು ಮತ್ತು ಸಂದೇಹವನ್ನು ನಮ್ಮ ಮುಂದೆ ಬಿತ್ತರಿಸುತ್ತಿದ್ದರು. ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಮಾನುಷ ಆಚರಣೆಗಳು ಉದಾಹರಣೆಗಾಗಿ ಘಟಶ್ರಾದ್ಧ, ಬಾಲ್ಯ ವಿವಾಹ ಮುಂತಾದವುಗಳನ್ನು ವಿರೋಧಿಸುತ್ತಿದ್ದರು ಅಂತ ಅನಿಸುತ್ತೆ.ಆದರೆ ಕಾರಂತರು ಒಮ್ಮೆ ನನ್ನಲ್ಲಿ ಹೇಳಿದ್ದರು‘ ನಾನು ಕಾದಂಬರಿ ಬರಿಯುತ್ತೇನೆ ಹೊರತೂ ಅಲ್ಲಿ ನನ್ನ ಜೀವನ ಚರ್ತ್ರೆಯನ್ನು ಬರೆಯುವುದಿಲ್ಲ.’ ಅವರು ಜಾತ್ಯಾತೀತರಾಗಿದ್ದರು ಎಂಬುದು ನನ್ನ ಕಲ್ಪನೆ.ಕಾರಂತರಂತೆ ಅನಂತಮೂರ್ತಿಯವರು ನಿರೀಶ್ವರವಾದಿಗಳು, ನಾಸ್ತಿಕರೂ ಆಗಿರಲಿಲ್ಲ.ದೇವರು, ನಂಬಿಕೆ ಮತ್ತು ಮೂಢ ನಂಬಿಕೆಗಳ ಬಗ್ಗೆ ಅವರದೆ ಆದ ಸಂದೇಹಗಳಿದ್ದವು.ಕೆಲವರು ಅವರನ್ನು ಲೆಫ್ಟಿಸ್ಟ್ ಅಂತ ತಿಳಿದರು. ಇನ್ನು ಕೆಲವರು ಅವರ ಬಲಪಂಥವನ್ನು ಹುಡುಕಲು ಮುಂದಾದರು. ನನ್ನ ದೃಷ್ಟಿಯಲ್ಲಿ ಅವರು ನಡುಪಂಥೀಯರಾಗಿದ್ದರೆ ಎಂಬುದು ಅನುಮಾನ.ಏನೇ ಆಗಲಿ ಕೆಲವೊಮ್ಮೆ ವಿವಾದ ಸೃಷ್ಟಿಯಾಗಲೆಂದೇ ಅವರು ಮಾತಾಡುತ್ತಿದ್ದರು ಎಂಬುದು ನನ್ನ ಅಭಿಪ್ರಾಯ.ಸದಾ ಚರ್ಚೆಯಲ್ಲಿರುವುದನ್ನು ಅವರು ಬಯಸುತ್ತಿದ್ದರೆ? ಆದರೆ ಅವರು ಕಾಂಗೆಸ್ಸನ್ನು ತುಂಬ ಬಲಿಷ್ಠವಾಗಿ ಬೆಂಬಲಿಸುತ್ತಿದ್ದರು.ಮೋದಿಯವರನ್ನು ಕೋಮುವಾದದ ಆಧಾರದ ಮೇಲೆ ವಿರೋಧಿಸುತ್ತಿದ್ದರು. ಮತ್ತು ಅವರು ಭ್ರಷ್ಟಾಚಾರ ಮತ್ತು ಫ್ಯಾಸಿಸಮ್ ನಡುವೆ ಭ್ರಷ್ಟಾಚಾರವನ್ನೆ ಎತ್ತಿ ಹಿಡಿಯುತ್ತಿದ್ದರು.ನಾನೊಮ್ಮೆ ಅವರ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಕೇಳಿದೆ: ‘ಡು ಯು ಪ್ರಿಫರ್ ಕರಪ್ಶನ್ ಟು ಫ್ಯಾಸಿಸಮ್?’ ಅದಕ್ಕೆ ಅವರು ಉತ್ತರಿಸಿದ್ದು ಹೀಗೆ :‘ಐ ಡೋಂಟ್ ಪ್ರಿಫರ್ ಐದರ್. ಬಟ್ ಅಟ್ಲೀಸ್ಟ್ ಯು ಕನ್ ಗೆಟ್ ಯುವರ್ ಸೆಲ್ಫ್ ರಿಲೀಸಡ್ ಫ್ರೊಮ್ ಜೇಲ್ ಇಫ್ ಯು ಪೇ ಮನಿ. ಬಟ್ ಇನ್ ಫ್ಯಾಸಿಸಮ್ ದೆರ್ ಇಸ್ ನೋ ಚಾನ್ಸ್. ಅಂದರೆ ಮೋದಿಯವರು ಫ್ಯಾಸಿಸ್ಟ್ ಎಂಬುದು ಅವರ ಕಲ್ಪನೆಯಾಗಿತ್ತು.ಬ್ರಾಹ್ಮಣೇತರರು ಅವರನ್ನು ತಮ್ಮವರೆಂದು ತಿಳಿದರೆ? ಹಾಗಾಗಿ ಅವರಿಂದ ಅವರ ಹೀರೋ ವರ್ಶಿಪ್ ಪ್ರಾರಂಭಗೊಂಡಿತೆ? ಎಲ್ಲ ಚರ್ಚೆಗಳನ್ನು ಅವರು ಹುಟ್ಟು ಹಾಕಿದ್ದಂತೂ ಸತ್ಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This