ಅಚಾನಕ್ಕಾಗಿ ಅದ್ಭುತ ಭೇಟಿಗಳಾಗುವುದು ದಿಲ್ಲಿಯಲ್ಲಿ ನನಗೆ ಹೊಸದೇನಲ್ಲ!

ಪ್ರಸಾದ್ ನಾಯ್ಕ್

ನಿನ್ನೆ ಕೂಡ ಹಾಗೇ ಆಯಿತು. ಈ ಬಾರಿ ಹೀಗೆ ಸಿಕ್ಕಿದ್ದು ಖ್ಯಾತ ಲೇಖಕಿ ಗೀತಾಂಜಲಿ ಶ್ರೀ. 2022 ರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಸೇರಿದಂತೆ ಹಿಂದಿ ಸಾಹಿತ್ಯಲೋಕದಲ್ಲಿ ಈಗಾಗಲೇ ದೊಡ್ಡ ಹೆಸರು ಮಾಡಿರುವ ಲೇಖಕಿ. ಅದು ಮಂಗಳವಾರದ ಸಂಜೆಯಾದರೂ, ಹೆಚ್ಚಿನ ಪ್ರಚಾರವಿಲ್ಲದ ಕಾರ್ಯಕ್ರಮವಾದರೂ ಇಂಡಿಯನ್ ಹ್ಯಾಬಿಟಾಟ್ ಸೆಂಟರಿನ ಸಭಾಂಗಣವು ತುಂಬಿತ್ತು. ತಮ್ಮ “ರೇತ್ ಕಿ ಸಮಾಧಿ” (ಮರಳಿನ ಸಮಾಧಿ) ಕೃತಿಯ ಚಿಕ್ಕದೊಂದು ಆಯ್ದ ಭಾಗವನ್ನು ಅವರು ಓದುತ್ತಿದ್ದರೆ ಸಭಾಂಗಣದಲ್ಲಿ ಪಿನ್ ಡ್ರಾಪ್ ಸೈಲೆನ್ಸ್. ಇನ್ನು ಕಾದಂಬರಿಯಲ್ಲಿ ಬರುವ ಕತ್ತಿಯಲಗಿನಂತಹ ಹಾಸ್ಯಮಯ ಸಂಭಾಷಣೆಗಳನ್ನು ಓದುತ್ತಿದ್ದರೆ, ಅಲ್ಲಿ ಮೌನವು ಆಗಾಗ ನಗುವಾಗಿ ಜೀವತಾಳುತ್ತಿತ್ತು. ಅದೊಂದು wicked sense of humor ಭಾಗವಾಗಿದ್ದರಿಂದಲೇ ಲೇಖಕಿ ಅದನ್ನು ಆರಿಸಿಕೊಂಡರು ಎಂಬ ತುಂಟ ಗುಮಾನಿ ನನ್ನದು!

ವೇದಿಕೆಯಲ್ಲಿ ಲೇಖಕಿಯೊಂದಿಗೆ ನಡೆದ ಚುರುಕು ಸಂಭಾಷಣೆಯ ಕೆಲ ತುಣುಕುಗಳು ಹೇಗಿವೆ ನೋಡಿ:
ಪೂನಂ ಸಕ್ಸೇನಾ (ಸಂದರ್ಶಕಿ): ಬೂಕರ್ ಬಂದಾಗಿನಿಂದ ನೀವು ರಾತ್ರೋರಾತ್ರಿ ಸೆಲೆಬ್ರಿಟಿಯಾಗಿಬಿಟ್ಟಿದ್ದೀರಿ. ಈ ಖ್ಯಾತಿಯನ್ನು ನೀವು ಹೇಗೆ ಅರಗಿಸಿಕೊಳ್ಳುತ್ತಿದ್ದೀರಿ? ಈ ವಿಶ್ವವಿಖ್ಯಾತಿಯು ನಿಮ್ಮ ಮುಂದಿನ ಬರವಣಿಗೆಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಲಿದೆ?

ಗೀತಾಂಜಲಿ ಶ್ರೀ (ಅತಿಥಿ): ಖ್ಯಾತಿಯನ್ನು ನಾನು ಎಂಜಾಯ್ ಮಾಡುತ್ತಿಲ್ಲ ಎಂದರೆ ತಪ್ಪಾಗುತ್ತದೆ. ಈ ಕ್ಷಣಗಳನ್ನು ನಾನು ಖಂಡಿತ ಎಂಜಾಯ್ ಮಾಡಿದ್ದೇನೆ. ಆದರೆ ಇದು ಕೆಲವೇ ದಿನಗಳ ಬಿಸಿ ಎಂಬುದು ನನಗೆ ತಿಳಿದಿದೆ. ಸದಾ ಕಾಲ ಸುದ್ದಿಯಲ್ಲಿರಲು ನಾನು ಕ್ರಿಕೆಟರ್ರೂ ಅಲ್ಲ, ಚಿತ್ರನಟಿಯೂ ಅಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಹೀಗಾಗಿ ಸದ್ಯದ ಹೈಪ್ ಒಮ್ಮೆ ತಣ್ಣಗಾದ ನಂತರ ನನ್ನ ಬದುಕು ಮತ್ತೊಮ್ಮೆ ಮುಂಚಿನಂತಾಗುತ್ತದೆ. ಮತ್ತೆ ನಾನು ಏಕಾಂತದಲ್ಲಿ ಕೂತು ಬರೆಯುತ್ತೇನೆ. ಹೊಸ ಪಾತ್ರಗಳನ್ನು ಸೃಷ್ಟಿಸುತ್ತೇನೆ. ಅವುಗಳ ಜೊತೆ ಒಡನಾಡುತ್ತೇನೆ, ಅವುಗಳೊಂದಿಗೆ ಬದುಕುತ್ತೇನೆ.

ಪೂನಂ ಸಕ್ಸೇನಾ: ನಿಮ್ಮ ಭಾಷೆ ಮತ್ತು ಶೈಲಿಗಳು ಓದುಗರಿಗೆ ಕೊಂಚ ಕ್ಲಿಷ್ಟಕರ ಎಂಬ ಆರೋಪವಿದೆ. ಈ ಬಗ್ಗೆ ಏನು ಹೇಳುತ್ತೀರಿ?

ಗೀತಾಂಜಲಿ ಶ್ರೀ: ನನ್ನ ಮಿತ್ರರೊಬ್ಬರು ಹೇಳುತ್ತಾರೆ: “ಸಾಹಿತ್ಯವೆಂಬುದು ತಿಂದು ಮರೆತುಬಿಡುವ ಸಮೋಸಾದಂತಿರಬಾರದು” ಎಂದು. ಸಾಹಿತ್ಯವು ನಿಮ್ಮನ್ನು ಕೊಂಚ ಕೆಲಸಕ್ಕೆ ಹಚ್ಚಿದರೆ, ಆಳವಾಗಿ ಯೋಚಿಸುವಂತೆ ನಿಮ್ಮನ್ನು ಪ್ರೇರೇಪಿಸಿದರೆ, ಕ್ರಾಂತಿಕಾರಿ ವಿಚಾರಧೋರಣೆಗಳಿಂದ ಜಡವಾದ ನಿಮ್ಮ ಮನಸ್ಸನ್ನು ಕೊಂಚ ಬಡಿದೆಬ್ಬಿಸಿದರೆ ತಪ್ಪಾದರೂ ಏನು ಎಂಬುದು ನನ್ನ ಪ್ರಶ್ನೆ. ಸುಲಭವಾಗಿ ಓದಬಲ್ಲದ್ದು ಮಾತ್ರ ಸಾಹಿತ್ಯ ಎನ್ನುವುದಾದರೆ ಶೇಕ್ಸ್ ಪಿಯರ್ ಯಾವತ್ತೋ ಮೂಲೆಗುಂಪಾಗಿಬಿಡುತ್ತಿದ್ದ. ಇವೆಲ್ಲಾ ಫಾಸ್ಟ್ ಫುಡ್ ಜಮಾನಾದ ಅರ್ಥವಿಲ್ಲದ ನಖರಾಗಳು. ಅಷ್ಟೇ!

ಪೂನಂ ಸಕ್ಸೇನಾ: ಈ ಪ್ರಶಸ್ತಿಯನ್ನು ನೀವು ವೈಯಕ್ತಿಕ ಗೆಲುವು ಎನ್ನುವುದಕ್ಕಿಂತಲೂ ಹಿಂದಿಯ ಗೆಲುವು ಎಂದು ಅರ್ಥೈಸಿಕೊಂಡಿದ್ದೀರಿ. ಅಲ್ಲವೇ?

ಗೀತಾಂಜಲಿ ಶ್ರೀ: ಹೌದು. ನನಗೆ ಬಂದಿರುವ ಬೂಕರ್ ಈ ನಿಟ್ಟಿನಲ್ಲಿ ಮುಖ್ಯವಾಗುತ್ತದೆ. ಈ ಸಂದರ್ಭವನ್ನು ನಾವೆಲ್ಲರೂ ನಮಗೆ ಅನುಕೂಲವಾಗುವಂತೆ ಬಳಸಿಕೊಳ್ಳಬೇಕು ಎಂಬುದು ನನ್ನ ಅನಿಸಿಕೆ. ಲೇಖಕರು, ಅನುವಾದಕರು, ಪ್ರಕಾಶಕರು… ಎಲ್ಲರೂ! ಲ್ಯಾಟಿನ್ ಅಮೆರಿಕನ್ ಸಾಹಿತ್ಯದತ್ತ ಜಗತ್ತಿನ ದೃಷ್ಟಿ ಹೊರಳಿದ್ದು ಮಾರ್ಕ್ವೆಜ್ ನ ಯಶಸ್ಸಿನ ಬಳಿಕವಷ್ಟೇ. ದಕ್ಷಿಣ ಏಷ್ಯಾಗಳ ನೂರಾರು ಭಾಷೆಗಳಲ್ಲಿ ಈಗಾಗಲೇ ಬಂದಿರುವ ಮತ್ತು ಬರುತ್ತಿರುವ ಒಳ್ಳೆಯ ಪುಸ್ತಕಗಳ ಸಂಖ್ಯೆಯು ಕಮ್ಮಿಯೇನಲ್ಲ. ಹೀಗಿರುವಾಗ ಸಾಹಿತ್ಯ ಎಂದರೆ ಇಂಗ್ಲಿಷ್ ಭಾಷೆಯದ್ದು ಮಾತ್ರ ಎಂಬ ಭ್ರಮೆಗಳಿಂದ ನಾವು ಹೊರಬರಬೇಕಿದೆ.

ಪೂನಂ ಸಕ್ಸೇನಾ: ನಿಮ್ಮ ಈ ಕಾದಂಬರಿಯ ಮುಖ್ಯ ಪಾತ್ರ ಓರ್ವ ಅಜ್ಜಿ. ಇನ್ನು ಕೆಲವು ಪಾತ್ರಗಳ ಹೆಸರುಗಳು ಕಾದಂಬರಿ ಅರ್ಧ ಮುಗಿಯುವವರೆಗೆ ಎಲ್ಲೂ ಬಹಿರಂಗವಾಗುವುದಿಲ್ಲ. ಅವುಗಳ ಸಂಪೂರ್ಣ ವ್ಯಕ್ತಿತ್ವಗಳೂ ಕೂಡ. ಇದೊಂಥರಾ ಅಸಾಂಪ್ರದಾಯಿಕ ಶೈಲಿಯ ನಿರೂಪಣೆ ಎಂಬುದು ನನ್ನ ಅಭಿಪ್ರಾಯ. ಇದಕ್ಕೆ ನೀವೇನನ್ನುತ್ತೀರಿ?

ಗೀತಾಂಜಲಿ ಶ್ರೀ: ನಿಸ್ಸಂದೇಹವಾಗಿ! ನಾವು ಸೂಕ್ಷ್ಮವಾಗಿ ನೋಡಿದರೆ ಬಹಳ ಜೀವನೋತ್ಸಾಹವಿರುವ ಅಜ್ಜಿಯಂದಿರು ನಮ್ಮ ನಡುವೆ ನಮಗೆ ಸಾಕಷ್ಟು ಸಿಗುತ್ತಾರೆ. ವಯಸ್ಸಾದ ನಂತರ ಮೂಲೆ ಹಿಡಿದು ಜಪ ಮಾಡಬೇಕು ಅಂತೆಲ್ಲ ನಾವೇನೋ ಹೇಳುತ್ತೇವೆ. ಆದರೆ ಅವರ ಮನದಿಗಿಂತವೂ ಅದೇ ಇರಬೇಕು ಅಂತಿಲ್ಲವಲ್ಲ! ಇನ್ನು ವ್ಯಕ್ತಿತ್ವದ ಮಾತು. ಒಬ್ಬ ವ್ಯಕ್ತಿಯನ್ನು ಹೀಗೆಯೇ ಎಂದು ಲೇಬಲ್ಲು ಹಚ್ಚುವುದು ಮೂರ್ಖತನ. ವಯಸ್ಸು, ಕಾಲ ಮತ್ತು ಸಂದರ್ಭಗಳಿಗನುಗುಣವಾಗಿ ಮನುಷ್ಯ ಬದಲಾಗುತ್ತಾ ಇರುತ್ತಾನೆ. ನಾನು ಸೃಷ್ಟಿಸುವ ಪಾತ್ರಗಳೂ ಇದಕ್ಕೆ ಹೊರತಲ್ಲ.

ಗೀತಾಂಜಲಿ ಶ್ರೀ ಹೀಗೆ ಅರಳು ಹುರಿದಂತೆ ಮಾತಾಡುತ್ತಲೇ ಇದ್ದರು. ಇಂಥದ್ದೊಂದು ಅಪರೂಪದ ಸಂಜೆಯನ್ನು ಸವಿಯಲು ಆಗಮಿಸಿದ್ದ ಮಂದಿಯಲ್ಲೂ ಉತ್ಸಾಹವು ಸಾಕಷ್ಟಿತ್ತು. ಇನ್ನು ತನ್ನ ಕ್ಯಾಂಪಸ್ಸಿನಲ್ಲಿ ಈ ಬಗೆಯ ಅಸಂಖ್ಯಾತ ಅದ್ಭುತ ಕ್ಷಣಗಳನ್ನು, ಹಲವಾರು ವರ್ಷಗಳಿಂದ ಸೃಷ್ಟಿಸುತ್ತಲೇ ಇರುವ ಪರಂಪರೆಯು ಇಂಡಿಯನ್ ಹ್ಯಾಬಿಟಾಟ್ ಸೆಂಟರಿನ ಹೆಗ್ಗಳಿಕೆ ಎಂದರೆ ತಪ್ಪಾಗಲಿಕ್ಕಿಲ್ಲ.

ರೇತ್ ಕೀ ಸಮಾಧಿ ಒಂದು ಬೃಹತ್ ಕಾದಂಬರಿ. ಹಿಂದಿಯ ಖ್ಯಾತ ಸಾಹಿತಿಯಾದ ಕೃಷ್ಣಾ ಸೋಬ್ತಿಯವರಿಗೆ ಕೃತಿಯು ಅರ್ಪಣೆಯಾಗಿದೆ. ಇಂಗ್ಲಿಷ್ ಅನುವಾದವು ಲಭ್ಯವಿದ್ದರೂ, ಮೂಲ ಹಿಂದಿ ಪುಸ್ತಕವನ್ನೇ ತಂದಿಟ್ಟಿದ್ದೇನೆ.
ಇನ್ನು ಕೂತು ಓದುವುದಷ್ಟೇ ಬಾಕಿ!

‍ಲೇಖಕರು Admin

July 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: