
ಬಿ.ಎಂ.ಹನೀಫ್
—
ಮೊನ್ನೆ ಲಲಿತಾ ಸಿದ್ದಬಸವಯ್ಯ ಅವರು ಮಾತನಾಡುತ್ತಾ, ಮನುಷ್ಯನ ಅಲ್ಪತ್ವದ ಬಗ್ಗೆ ಹೇಳುತ್ತಿದ್ದರು. ಸುವಿಶಾಲ ಜಗತ್ತಿನ ಅದ್ಭುತ ಸೃಷ್ಟಿಲೋಕದ ಮುಂದೆ ಮನುಷ್ಯ ಸಣ್ಣದೊಂದು ಮಣ್ಣಕಣ… ಎಂದೆಲ್ಲ ಅವರು ಮಾತನಾಡುತ್ತಿದ್ದಾಗ ನಾನು ನನ್ನೊಳಗಿನ ಅಲ್ಪತ್ವದ ಬಗ್ಗೆ ಸಣ್ಣಗೆ ಯೋಚಿಸುತ್ತಿದ್ದೆ.
ಚೆನ್ನಾಗಿ ಭಾಷಣ ಮಾಡುತ್ತೇನೆ, ಚೆನ್ನಾಗಿ ಕತೆ ಬರೆಯುತ್ತೇನೆ, ಚೆನ್ನಾಗಿ ಅಧಿಕಾರ ನಡೆಸುತ್ತೇನೆ… ಎಂದೆಲ್ಲ ಭಾವಿಸುವಾಗ ನಮ್ಮ ಬಗ್ಗೆ ನಮಗೇ ಹೆಮ್ಮೆ ಉಂಟಾಗುತ್ತದೆ. ಆ ಹೆಮ್ಮೆಯನ್ನು ಒಂದರೆ ಕ್ಷಣ ಅನುಭವಿಸುತ್ತಿರುವಾಗಲೇ ನಮಗೇ ಗೊತ್ತಿಲ್ಲದಂತೆ ಅಹಂ ಅದರ ಜಾಗವನ್ನು ಆಕ್ರಮಿಸಿ ಆಗಿರುತ್ತದೆ.
ಭಾಷಣ / ವಾಗ್ವಾದ ಶುರು ಮಾಡುವಾಗ ಸತ್ಯದ ಬೇಸ್ ಲೈನ್ ನಲ್ಲೇ ಟೆನಿಸ್ ಆಟ ಶುರು ಮಾಡುತ್ತೇವೆ. ಆದರೆ ಒಂದು ಡಬಲ್ ಸರ್ವ್ ಸಿಕ್ಕಾಕ್ಷಣ ಪ್ರೇಕ್ಷಕರ ಚಪ್ಪಾಳೆ/ ಹರ್ಷೋದ್ಘಾರ ಮಾತಿನ ದಾರಿ ತಪ್ಪಿಸುತ್ತದೆ. ಉತ್ಪ್ರೇಕ್ಷೆ ಮುಂಗೈ ಹೊಡೆತ ಹೊಡೆದದ್ದು ಗೊತ್ತಾಗುವುದೇ ಇಲ್ಲ. ಅದರ ಬೆನ್ನಲ್ಲೇ ಅರ್ಧ ಸತ್ಯ, ಅರ್ಧ ಸುಳ್ಳು, ಪೂರಾ ಸುಳ್ಳು ನಮ್ಮನ್ನು ಸುತ್ತುವರಿಯುತ್ತದೆ.
ನಮ್ಮ ಅಲ್ಪತ್ವದ, ನಾವೊಂದು ಮರಳಕಣ ಎಂಬ ಅರಿವು ಹೆಚ್ಚಾಗಿ ಆಗುವುದು ಯಾವಾಗ? ನನಗನ್ನಿಸುತ್ತೆ- ಕಣ್ಣಕೊನೆಯುದ್ದಕ್ಕೂ ಕಾಣಿಸುವ ಈ ಅಗಾಧ ಜಲರಾಶಿಯ ಮುಂದೆ ಏಕಾಂಗಿಯಾಗಿ ಕುಳಿತಾಗ.
ಸಮುದ್ರವನ್ನು ನೋಡುತ್ತಾ ಒಬ್ಬಂಟಿಯಾಗಿ ಕುಳಿತಾಗ ಒಂದು ಕ್ಷಣ ಅಧೀರರಾಗುತ್ತೇವೆ. ಹಗಲೂ ರಾತ್ರಿ ಈ ಜಲರಾಶಿ ಒಂದೇ ಸಮನೆ ಏನನ್ನು ಮೊರೆಯುತ್ತಿದೆ? ಯಾಕಾಗಿ ಮೊರೆಯುತ್ತಿದೆ? ಅದ್ಯಾವ ದುಃಖ ದುಮ್ಮಾನಗಳು ಅದರ ಒಡಲು ತುಂಬಿವೆ? ನಿರಂತರ, ನಿಲುಗಡೆಯೇ ಇಲ್ಲದ ಈ ಮೊರೆತವನ್ನು ನೋಡುತ್ತಾ ನೋಡುತ್ತಾ ಮನುಷ್ಯ ತನ್ನೊಳಗಿನ ಮೊರೆತಕ್ಕೆ ಮುಖಾಮುಖಿ ಆಗುತ್ತಾನೆಯೆ?
ಎದುರು ಕುಳಿತ ಮನುಷ್ಯನ ಒಳಮನಸ್ಸಿನ ಮೊರೆತವೇನಾದರೂ ಈ ಸಮುದ್ರಕ್ಕೆ ಅರ್ಥವಾಗುತ್ತದೆಯೆ? ಅಥವಾ ನನ್ನ ಅಗಾಧ ದುಃಖದ ಎದುರು ನಿನ್ನದ್ಯಾವ ಮಹಾ… ಎಂದು ಕಡಲು ಹೇಳುತ್ತಿದೆಯೆ?
ಸಮುದ್ರದ ಮುಂದೆ ಏಕಾಂಗಿಯಾಗಿ ಕುಳಿತಾಗಲೆಲ್ಲ ಖಲೀಲ್ ಗಿಬ್ರಾನನ “ಸಮುದ್ರ” ಎನ್ನುವ ಕವಿತೆ ನೆನಪಾಗುತ್ತದೆ.
ನಟ್ಟನಡು ಗಾಢಾಂಧಕಾರದಲ್ಲಿ ಮನುಷ್ಯ ಮೈಮುರಿದು ಗೊರಕೆ ಹೊಡೆಯುತ್ತಿರುವಾಗ
ಅರಣ್ಯ ಘೋಷಿಸುತ್ತದೆ:
ಭೂಮಿಯ ಎದೆಯಿಂದ ಸೂರ್ಯ
ಸಾಗಿಸಿ ತಂದ ಶಕ್ತಿ ನಾನು.
ಸಮುದ್ರ ಸುಮ್ಮನಿರುತ್ತದೆ
ತನಗೆ ತಾನೇ ಹೇಳಿಕೊಳ್ಳುತ್ತದೆ
ನಾನೇ ಶಕ್ತಿ!
ಹೆಬ್ಬಂಡೆ ಹೇಳುತ್ತದೆ: ಕಾಲವೇ
ನನ್ನನ್ನು ಒಂದು ಸ್ಮಾರಕವಾಗಿ ಕೆತ್ತಿದೆ
ಅಂತಿಮ ದಿನದವರೆಗೆ.
ಸಮುದ್ರ ಸುಮ್ಮನಿದ್ದು ತನಗೆ ತಾನೇ
ಹೇಳಿಕೊಳ್ಳುತ್ತದೆ
ನಾನೇ ಸ್ಮಾರಕ!
ಬಿರುಗಾಳಿ ಮೊರೆಯುತ್ತದೆ:
ನಾನೇ ಬಲಶಾಲಿ
ಸ್ವರ್ಗವನ್ನು ಭೂಮಿಯಿಂದ ಬೇರ್ಪಡಿಸುವವನು.
ಸಮುದ್ರ ಸುಮ್ಮನಾಗಿ
ಮನದಲ್ಲೇ ಹೇಳಿಕೊಳ್ಳುತ್ತದೆ
ಗಾಳಿ ನನ್ನದು!
ನದಿ ಹೇಳುತ್ತದೆ:
ಭೂಮಿಯ ದಾಹವನ್ನು ತಣಿಸುವ
ಶುದ್ಧ ನೀರು ನಾನು.
ಸಮುದ್ರ ಮೆತ್ತಗೆ ಹೇಳುತ್ತದೆ
ನದಿ ನನ್ನದು!
ಪರ್ವತ ಶಿಖರ ಗುಡುಗುತ್ತದೆ:
ಆಕಾಶದ ಮಧ್ಯೆ ನಾನು ನಿಂತಿದ್ದೇನೆ
ನಕ್ಷತ್ರದಂತೆ ಎತ್ತರೆತ್ತರಕ್ಕೆ.
ಸಮುದ್ರ ತನಗೆ ತಾನೇ ಹೇಳಿಕೊಳ್ಳುತ್ತದೆ
ಪರ್ವತ ಶಿಖರ ನನ್ನದು!
ಮೆದುಳು ಹೇಳುತ್ತದೆ:
ನಾನು ಆಳುವವನು
ಜಗತ್ತು ಆಳುವವನಿಗೆ ಸೇರಿದ್ದು.
ಸಮುದ್ರ ನಿದ್ದೆಯಲ್ಲೇ ಗೊರಕೆ
ಹೊಡೆಯುತ್ತಾ ಹೇಳುತ್ತದೆ
ಎಲ್ಲವೂ ನನ್ನದು!
ಖಲೀಲ್ ಗಿಬ್ರಾನನ ಈ ಕವಿತೆ ಸಮುದ್ರದ ಅಗಾಧತೆಯನ್ನು ಹೇಳುತ್ತಲೇ ಮನುಷ್ಯನ ನಶ್ವರತೆಯ ಬಗ್ಗೆಯೂ ಹೇಳುತ್ತದೆಯೆ? ಮೊರೆಯುತ್ತಿರುವ ಅದೇ ಸಮುದ್ರದ ಮೇಲೆ ಪುಟ್ಟದೊಂದು ದೋಣಿ ಹತ್ತಿ ಸಹಸ್ರಾರು ಗಾವುದ ಕ್ರಮಿಸುವ ಮನುಷ್ಯ, ಸಮುದ್ರದ ಮೇಲೆ ತನ್ನ ಮಹಾನತೆಯನ್ನು ಸಾಧಿಸಿದ್ದಾನೆಯೆ? ಹಾಗೆ ಸಮುದ್ರದ ಮೇಲೆ ಐಶಾರಾಮಿ ಹಡಗಿನಲ್ಲಿ ತೇಲುವ ಮನುಷ್ಯ ದೊಡ್ಡದೊಂದು ಬಿರುಗಾಳಿ ಅಪ್ಪಳಿಸಿದರೆ ತನ್ನೆಲ್ಲ ಜೀವವನ್ನು ಹಿಡಿಯಾಗಿಸಿ ಆಕಾಶಕ್ಕೆ ಮೊಗವೆತ್ತಿ ಮೊರೆ ಇಡುವುದಿಲ್ಲವೆ? ಬಿರುಗಾಳಿ ಶಾಂತವಾದ ಮೇಲೆ ಕಡಲಿಗೇ ಕರಮುಗಿದು ಕಣ್ಣು ಮುಚ್ಚಿ ಧ್ಯಾನಿಸುವುದಿಲ್ಲವೆ?
ಗಿಬ್ರಾನನ ಪದ್ಯ ಮತ್ತು ಗದ್ಯ ಎರಡೂ ಮಹಾಸಮುದ್ರದಂತೆ ಓದುಗನ ಆಳದಲ್ಲಿ ಸದಾ ಮೊರೆಯುತ್ತದೆ:
” ನಾನು ವಾಚಾಳಿತನದಿಂದ ಮೌನವನ್ನು ಕಲಿತೆ. ಅಸಹನೆಯಿಂದ ಸಹಿಷ್ಣುತೆಯನ್ನು ಕಲಿತೆ. ಕ್ರೌರ್ಯದಿಂದ ದಯಾಳುತನವನ್ನು ಕಲಿತೆ. ಆದರೂ ವಿಚಿತ್ರವೆಂದರೆ, ಆ ಎಲ್ಲ ಶಿಕ್ಷಕರಿಗೂ ನಾನು ಕೃತಘ್ನನಾಗಿದ್ದೇನೆ!”
ಆ ಮನುಷ್ಯ ಅದೆಷ್ಟೋ ಹೊತ್ತಿನಿಂದ ಸಮುದ್ರವನ್ನು ನೋಡುತ್ತಾ ಕುಳಿತಿದ್ದಾನೆ. ನಾನು ದೂರದಿಂದ ಅವನನ್ನೇ ನೋಡುತ್ತಾ ಕುಳಿತಿದ್ದೇನೆ. ನನ್ನ ಸುತ್ತ ಕುಳಿತಿರುವವರು ಸಮುದ್ರದ ಭೋರ್ಗರೆತವನ್ನು ಮೀರಿಸುವಂತೆ ಕಡಲು ಕೊರೆತದ ಬಗ್ಗೆ ಹರಟುತ್ತಿದ್ದಾರೆ.
ಇಡೀ ದೃಶ್ಯವೇ ಒಂದು ಅಸಂಗತ ಪದ್ಯದಂತೆ ಅನ್ನಿಸುತ್ತಿದೆ!
ಹನೀಫ್ ಅವರೇ ನಿಮ್ಮ ಬರಹ ಹೃದಯಕ್ಕೆ ಹಿಡಿಸಿತು. ನಾನೂ ಇದೇ ಆಲೋಚನೆಗಳೊಂದಿಗೆ ಗುದ್ದಾಡುತ್ತಿರುವೆ. ವೆತ್ಯಾಸವಿಷ್ಟೆ ನೀವು ದಡದಲ್ಲಿರುವಿರಿ ನಾನು ಸಮುದ್ರದ ನಡುವಲ್ಲಿರುವೆ. ಬರಹಕ್ಕೆ ಧನ್ಯವಾದಗಳು.
ರೊನಿ ಅರುಣ್