ಇತ್ತೀಚೆಗೆ ಕೃತಿಚೌರ್ಯಗಳಂತಹ ಘಟನೆಗಳು ನಡೆಯುತ್ತಲೇ ಇವೆ. ವಾಟ್ಸಾಪ್ , ಫೇಸ್ ಬುಕ್ ನಲ್ಲಂತೂ ಯಾವೂದೇ ಭಯವಿಲ್ಲದೇ ರಾಜಾರೋಷವಾಗಿ ಕೃತಿಚೌರ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಯಾರೋ ಬರೆದ ಪದ್ಯ, ಕವಿತೆಗಳಗೆ ತಮ್ಮ ಹೆಸರನ್ನು ಸೇರಿಸಿ ಶೇರ್ ಮಾಡುವುದು. ಅಥವಾ ಆ ಕವಿತೆಗಳಿಗೆ, ಪದ್ಯಕ್ಕೆ ಇರುವಂತಹ ಬೈ ಲೈನ್ ಗಳನ್ನು ಅಳಿಸಿ ಹಾಕುವುದು ಮಾಡಲಾಗುತ್ತಿದೆ. ಇದೊಂಥರಹದ ವಿಕೃತ ಮನಸ್ಥಿತಿ. ಬೇರೆಯವರು ಹೆತ್ತ ಅಕ್ಷರಗಳನ್ನು ತಮ್ಮದೆಂದುಕೊಳ್ಳುವಲ್ಲಿ ಅದಾವ ರೀತಿಯ ಸಂತೋಷ ಪಡೆದುಕೊಳ್ಳುವರೊ.
ಇಂತಹ ಘಟನೆಗಳು ಪದೇ ಪದೇ ನಡೆಯುತ್ತಲೇ ಇವೆ. ಇತ್ತೀಚೆಗೆ ಪ್ರಸಿದ್ಧ ಸಾಹಿತಿ ಎಚ್ ದುಂಡಿರಾಜ್ ಅವರು ಕೂಡ ತಮ್ಮ ಹನಿಗವಿತೆ ಕೃತಿಚೌರ್ಯ ಆಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ‘ಭಾ-ಮಿನಿ’ ಎನ್ನುವ ಹನಿಗವಿತೆಯನ್ನು ಕೃತಿಚೌರ್ಯ ಮಾಡಿದ್ದ ಆ ವ್ಯಕ್ತಿ ಅಧ್ಯಾಪಕರಂತೆ. ಅಕ್ಷರಸ್ಥರೇ ಅಕ್ಷರಗಳನ್ನ ಕದಿಯುವಂತಹ ಮನಸ್ಥಿತಿ.
ಅಷ್ಟೇ ಅಲ್ಲದೇ ಚುಟುಕು ಭಾರ್ಗವ ಎಂದು ಹೆಸರು ಪಡೆದ ಎ.ಎನ್.ರಮೇಶ್ ಗುಬ್ಬಿ ಅವರೂ ಸಹ ಈ ಕೃತಿಚೌರ್ಯದ ಬಗ್ಗೆ ತಮ್ಮ ಅಸಮಾದಾನ ವ್ಯಕ್ತಪಡಿಸಿದ್ದರು. ತಾವು ರಚಿಸಿದ ʼಅಪ್ಪನೆಂಬ ಅದ್ಭುತʼ ಎಂಬ ಕವಿತೆಯನ್ನು ಹಿರಿಯರಾದ ಗುರುಮೂರ್ತಿ ಪೆಂಡಕೂರು ಅವರು ತಮ್ಮ ಭಾವಚಿತ್ರದೊಂದಿಗೆ ಪ್ರಕಟಿಸಿದ್ದನ್ನು ಸಾಕ್ಷ್ಯಗಳ ಸಮೇತ ಬಿಚ್ಚಿಟ್ಟಿದ್ದರು.
ಈ ರೀತಿಯ ಕೃತಿಚೌರ್ಯಗಳು ತಪ್ಪೇ ಅಲ್ಲವೆಂಬತೆ ಬಹಳ ಸರಳವಾಗಿ ಕದ್ದು ಅವುಗಳಿಗೆ ತಮ್ಮ ಹೆಸರನ್ನು ಲಗತ್ತಿಸುವರು. ಬರಹದ ಅಥವಾ ಕವನದ ಮೂಲ ಸಾಹಿತಿಗಳು ಇಂತವುಗಳನ್ನು ಬಹಳ ಸಾರಿ ಸುಮ್ಮನೆ ಬಿಟ್ಟು ಬಿಡುವರು. ಹೀಗಾಗಿ ಇಂತಹ ಅಕ್ಷರ ಕಳ್ಳರು ಹೆಚ್ಚಾಗಿದ್ದಾರೆ.
0 Comments