ಅಂದ್ರೆ, ಮದ್ವೆ ಆಗ್ಲೇಬೇಕೂಂತೇನಿಲ್ಲ…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

‘ಮದ್ವೆ ಆಗ್ಲೇಬೇಕೂಂತಾ ಏನೂ ಇಲ್ಲವಾ ಹಾಗಾದ್ರೆ…?ʼ

ಇಂತಹದೊಂದು ಪ್ರಶ್ನೆ, ಓ! ಈಗ ಗೊತ್ತಾಯ್ತು… ದರ್ಶನವಾಯ್ತು, ಎನ್ನುವಂತಹ ಉದ್ಗಾರ ಕೇಳಿ ಬಂದದ್ದು ವಿವಾಹಿತ ಬಾಲಕಿಯರ ಜೊತೆ ನಡೆಯುತ್ತಿದ್ದ ಮಾತುಕತೆಯ ಮಧ್ಯೆ. 

ಭಾರತದಲ್ಲಿ ಬಾಲ್ಯವಿವಾಹ ತಡೆ ಕುರಿತು ಮಾತುಕತೆ, ಕಾಯಿದೆಯೇ ಮೊದಲಾದವು ಸ್ವಾತಂತ್ರ್ಯಪೂರ್ವದಿಂದಲೂ ಬೇರೆ ಬೇರೆ ರೂಪ ತಾಳಿಕೊಂಡು ೨೦೦೬ರಿಂದ ‘ಬಾಲ್ಯವಿವಾಹ ನಿಷೇಧ ಕಾಯಿದೆ’ ಎಂದು ಕೆಲವು ವಿಶೇಷಣಗಳೊಂದಿಗೆ ಜಾರಿಯಲ್ಲಿದೆ. ಕಾಯಿದೆ ಬಂದ  ಮೇಲಿಂದ ಬಾಲ್ಯವಿವಾಹಗಳು ನಿಂತು ಹೋಗಿದೆಯೇ… ಹಾಗೇನಿಲ್ಲ. 

ಪ್ರಾಯಶಃ ನಾವೆಲ್ಲಾ ಹೈಸ್ಕೂಲ್‌ ಪಠ್ಯದಲ್ಲಿ ‘ಸಾಮಾಜಿಕ ಸಮಸ್ಯೆಗಳು’ ಎನ್ನುವ ಪಾಠದಲ್ಲಿ ಬಡತನ, ಬಾಲ್ಯವಿವಾಹ, ಮೊದಲಾದ ವಿಚಾರಗಳನ್ನು ಕುರಿತು ಓದಿರುತ್ತೇವೆ. (ನಾನು ಹೈಸ್ಕೂಲ್‌ ಓದಿದ್ದು ೧೯೭೭ರಿಂದ). ಈಗಲೂ ಈ ವಿಚಾರಗಳು ಪಠ್ಯಗಳಲ್ಲಿ ಇವೆ. ಇರಬೇಕು.

ಬಾಲ್ಯವಿವಾಹ ಎಲ್ಲಿ ಆಗುತ್ತಿದೆ ಎನ್ನುವ ಪ್ರಶ್ನೆಗೆ, ಅಂಡರ್‌ಲೈನ್‌ ಮಾಡಿಕೊಂಡು ಉತ್ತರ ಬರೆದುದು ನೆನಪಿರಬಹುದು ‘ಉತ್ತರ ಭಾರತದ ರಾಜಾಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿ…’. ನಾನು ಸಮಾಜಕಾರ್ಯ (ಎಂ.ಎಸ್.ಡಬ್ಲ್ಯು) ಓದುವಾಗಲೂ (೧೯೮೭-೮೯) ಸಾಮಾಜಿಕ ಸಮಸ್ಯೆಗಳು ಎನ್ನುವ ವಿಶೇಷ ಅಧ್ಯಯನದಲ್ಲೂ ಇದೇ ಓದಿದ್ದೆ! ಆದರೆ ಕ್ರೈ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಸಮಾಜಕಾರ್ಯ ಕ್ಷೇತ್ರಕಾರ್ಯಕ್ಕೆ ತೊಡಗಿಕೊಂಡಾಗ ತಿಳಿದದ್ದು ಬಾಲ್ಯವಿವಾಹಗಳು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆದಿದೆ, ಅಷ್ಟೇ ಅಲ್ಲ ನೆರೆಯ ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲೂ ಅಡೆತಡೆಯಿಲ್ಲದೆ ಅಸ್ತಿತ್ವದಲ್ಲಿದೆ ಎಂದು.

ವಿಜಯಪುರ ಮತ್ತು ಬಾಗಲಕೋಟೆಯ ಗೆಳೆಯರಾದ ಬೂದೆಪ್ಪ ಮತ್ತು ಸುನಂದಾ ತೋಳಬಂದಿಯವರೊಡನೆ ಬಾಲ್ಯವಿವಾಹದ ಪಿಡುಗಿನ ಬಗ್ಗೆ, ಅದನ್ನು ತಡೆಗಟ್ಟಲು ಹೇಗೆ ಸಮುದಾಯಗಳಲ್ಲಿ ತಳಮಟ್ಟದಿಂದಲೇ ಆಂದೋಲನಗಳು ಆಗಬೇಕೆಂದು ಬಹಳ ಮಾತನಾಡಿದ್ದೆವು. ಬೂದೆಪ್ಪನವರೊಡನೆ ವಿವಿಧ ಹಳ್ಳಿಗಳಲ್ಲಿ ಬಾಲ್ಯವಿವಾಹದ ವಿರುದ್ಧ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೆ. ಗ್ರಾಮಪಂಚಾಯತಿಗಳ ಅಧ್ಯಕ್ಷರು ಮತ್ತು ಸದಸ್ಯರೊಡನೆ ಮಾತುಕತೆ ಕೆಲವೆಡೆ ವಾಗ್ಯುದ್ದಕ್ಕೂ ಕಾರಣವಾಗಿತ್ತು. 

ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ ಜಾರಿ ವೇದಿಕೆಯಾದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ (Child Welfare Committee) ಸದಸ್ಯನಾಗಿ (೨೦೦೩-೦೭) ಮತ್ತು ಅಧ್ಯಕ್ಷನಾಗಿ (೨೦೦೭-೦೯) ಬೆಂಗಳೂರಿನಲ್ಲಿ ಕೆಲಸಗಳನ್ನು ನಡೆಸುತ್ತಿದ್ದಾಗ (೨೦೦೩-೦೭) ಬಾಲ್ಯವಿವಾಹದ ಸುಳಿ ನಗರಗಳನ್ನೂ ಬಿಟ್ಟಿಲ್ಲ ಎಂಬುದು ಅರಿವಿಗೆ ಬಂದಿತ್ತು. ಅಷ್ಟು ಹೊತ್ತಿಗೆ ನಾವು ಒಂದಷ್ಟು ಜನ ಸೇರಿ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ (Karnataka Child Rights Observatory) ಎಂಬುದನ್ನು ಆರಂಭಿಸಿದ್ದೆವು (2006).

ಚೈಲ್ಡ್‌ಲೈನ್‌ ೧೦೯೮ ಮೂಲಕ ಮಕ್ಕಳ ರಕ್ಷಣೆ ಕೆಲಸಗಳನ್ನು ವ್ಯಾಪಕವಾಗಿ ಕೈಗೊಂಡಾಗ ಬೆಂಗಳೂರಿನ ಮೂಲೆ ಮೂಲೆಗಳಲ್ಲೂ ಎಲ್ಲ ಜಾತಿ, ಮತ, ಅಂತಸ್ತುಗಳ, ಶಿಕ್ಷಣ ಇರುವ ಇಲ್ಲದಿರುವ, ವಿವಿಧ ರಾಜಕೀಯ ಪಕ್ಷಗಳ ಹಿನ್ನೆಲೆಯ ಜನ ಬಾಲ್ಯವಿವಾಹಗಳನ್ನು ನಡೆಸುವುದು ಮತ್ತು ಬಾಲ್ಯವಿವಾಹಗಳಿಗೆ ಒತ್ತಾಸೆಯಾಗುವುದನ್ನು ನೋಡಿ ಬೆಚ್ಚಿದ್ದೇವೆ. ಹಾಗೆಯೇ ಬಾಲ್ಯವಿವಾಹಗಳನ್ನು ನಿಲ್ಲಿಸಲು ಸಾಕಷ್ಟು ಕಡೆಗಳಲ್ಲಿ ಯಶಸ್ವಿಯೂ ಆಗಿದ್ದೇವೆ. ಕೆಲವೆಡೆ ಬಲವಾದ ಪೆಟ್ಟೂ ತಿಂದಿದ್ದೇವೆ. 

ಮುಂದೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ( Karnataka State Commission for Protection of Child Rights ) ದಲ್ಲಿ ಸದಸ್ಯನಾಗಿ (೨೦೦೯-೨೦೧೧) ಕೆಲಸ ಮಾಡುವಾಗ ಬಾಲ್ಯವಿವಾಹದ ಭೂತ ಅದೆಷ್ಟು ದೊಡ್ಡದು ಎಂದು ಎಲ್ಲರಿಗೂ ಹೇಳುವ ಆವಶ್ಯಕತೆ ಕಂಡುಕೊಂಡಿದ್ದೆ. ರಾಜ್ಯದ ವಿವಿಧೆಡೆ ಓಡಾಡಿ ಬಾಲ್ಯವಿವಾಹ ನಿಷೇಧ ಕಾಯಿದೆ ೨೦೦೬ರ ಮುಖ್ಯಾಂಶಗಳನ್ನು ಹಿಡಿದುಕೊಂಡು ಅದರಲ್ಲೂ ‘ಬಾಲ್ಯವಿವಾಹ ನಿಷೇಧ ಅಧಿಕಾರಿ’ಗಳು ನೀವು ಎಂದು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೆನಪಿಸುವ ಕೆಲಸವನ್ನೂ ಮಾಡಿದ್ದೆ. 

ಇಷ್ಟೆಲ್ಲಾ ಒಂದೇ ಉಸಿರಿನಲ್ಲಿ ಹೇಳಿದ ಮೇಲೂ, ನಾವು ವಿವಿಧೆಡೆ ಹೋದಾಗ, ಈ ವಿಚಾರವನ್ನು ಕುರಿತು ಸಭೆ, ಚರ್ಚೆ ಏರ್ಪಡಿಸಿದಾಗ ಕೇಳಿಬರುವ ಪ್ರಶ್ನೆಯನ್ನು ಈ ಓದುಗರೆದುರು ಇಡಲೇಬೇಕು. ‘ಬಾಲ್ಯವಿವಾಹಗಳು ಈಗಲೂ ಆಗುತ್ತಿದೆಯೆ? ಅವೆಲ್ಲಾ ನಿಂತು ಹೋಗಿದೆಯಲ್ಲಾ..!’

ಇಲ್ಲ. ನಿಂತಿಲ್ಲ. ಬಾಲ್ಯವಿವಾಹದ ಪಿಡುಗು, ಅಪಾಯ ಏನು, ಇದು ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಎದುರಿಸಬೇಕಾದ ತೊಂದರೆಗಳೇನು ಎಂದು ಈಗೀಗ ಕೆಲವರಿಗೆ ಅರ್ಥವಾಗುತ್ತಿದೆ ಎಂದೇ ಹೇಳಬೇಕು.

ಬಾಲ್ಯವಿವಾಹ ನಿಷೇಧ ಕಾಯಿದೆ ೨೦೦೬ರ ಪ್ರಕಾರ ʼ೧೮ ವರ್ಷದೊಳಗಿನ ಹುಡುಗಿಗೆ ಹಾಗೂ ೨೧ ವರ್ಷದೊಳಗಿನ ಹುಡುಗನಿಗೆ ದೇಶದ ಯಾವುದೇ ಭಾಗದಲ್ಲಿ ಮದುವೆ ಮಾಡಿದರೆ ಅಥವಾ ಮದುವೆ ಮಾಡುವ ಪ್ರಯತ್ನ ಮಾಡಿದರೆ ಅಂತಹ ಸಂಬಂಧಿತ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆʼ.

ಕೇಂದ್ರ ಆರೋಗ್ಯ ಮಂತ್ರಾಲಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಕ್ಷಣೆಯ (ಎನ್.‌ಎಫ್‌.ಎಚ್‌.ಎಸ್‌. ೫ – ೨೦೧೯-೨೦) ಸಮಯದಲ್ಲಿ ೨೦ರಿಂದ ೨೪ ವರ್ಷದೊಳಗಿನವರನ್ನು ತಾವು ೧೮ ವರ್ಷದೊಳಗೆ ಮದುವೆಯಾಗಿರುವುದೇ ಎಂದು ಕೇಳಿದಾಗ ಸಿಕ್ಕ ಮಾಹಿತಿ ವಿಶ್ಲೇಷಣೆ ಹೇಳಿರುವುದು ಪ್ರತಿ ನೂರು ಮದುವೆಗಳಲ್ಲಿ ೨೧ ಮದುವೆಗಳು ೧೮ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಆಗಿದೆ ಎಂದಾಗಿದೆ ಮತ್ತು ಈ ಪ್ರಮಾಣ ಕಳೆದ ಐದು ವರ್ಷಗಳಿಂದ (2015-16)ರಿಂದಲೂ ಅಷ್ಟೇ ಇದೆ. 

ಆದರೆ, ಇನ್ನೂ ೧೮ ವರ್ಷವೇ ಆಗಿಲ್ಲದ ವಿವಾಹಿತ ಕಿಶೋರಿಯರೊಡನೆ ಇತ್ತೀಚಿನ ಸಭೆಯೊಂದರಲ್ಲಿ ಈ ಮೇಲಿನ ಮಾಹಿತಿ ಇಟ್ಟುಕೊಂಡು ಮಾತನಾಡಿದಾಗ ಅವರು ಹೇಳಿದ್ದು, ʼನಮ್ಮ ಮನೆಗಳಿಗೆ ಯಾರೂ ಬಂದಿಲ್ಲ. ನಮ್ಮನ್ನ ನಿನಗೆ ಮದುವೆಯಾಗಿದೆಯಾ ಅಂತ ಸಮೀಕ್ಷೆ ಮಾಡುವವರು ಯಾರೂ ಕೇಳೇ ಇಲ್ಲ. ನಮ್ಮಂತವರನ್ನೂ ಕೇಳಿದ್ದರೆ, ಇದು ಬರಿ ಶೇಕಡಾ ೨೧ ಮಾತ್ರ ಅಲ್ಲ ಅನ್ನೋದು ಗೊತ್ತಾಗ್ತಿತ್ತು. ಎಷ್ಟು ಹುಡುಗೀರು ಇದ್ದಾರೆ ಗೊತ್ತಾ… ಇನ್ನೂ ಹದಿನೈದು ಹದಿನಾರು ವರ್ಷ ತುಂಬಕ್ಕೆ ಮುಂಚೇನೇ ಮದ್ವೆಗೆ ಬಿದ್ದಿರೋರು… ಜಗ್ಗಿ ಇದ್ದಾರೆ. ಎಲ್ಲರ ಹೊಟ್ಟೇಲೊಂದು ಕೂಸು ಇಲ್ಲಾ  ಕಂಕ್ಳಲ್ಲೂ ಒಂದೊಂದು ಕೂಸು…  ನಮ್ಮ ಲೆಕ್ಕಾನ ಯಾರೂ ಯಾಕೆ ತೊಗೊಂಡಿಲ್ಲ!?ʼ

ಈ ಪ್ರಶ್ನೆಗೆ ಉತ್ತರ ಕೊಡಬೇಕಿರುವವರು ಸರ್ಕಾರದ ಸಂಬಂಧಿತ ಇಲಾಖೆಗಳು – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ… ಇನ್ಯಾರನ್ನ ಈ ಪಟ್ಟಿಗೆ ಸೇರಿಸಬೇಕು?

ಈ ಬಾಲ್ಯವಿವಾಹದ ಸಂಖ್ಯೆಗಳ ವಿಚಾರ ಇನ್ನೊಂದು ಕಡೆ ಕಂಡುಬರುವುದು – ಜನಗಣತಿಯಲ್ಲಿ. ೨೦೧೧ರ ಜನಗಣತಿಯ ಪ್ರಕಾರ ೧೮ ವರ್ಷದೊಳಗಿನ ವಿವಾಹಿತ ಸ್ತ್ರೀಯರ ಸಂಖ್ಯೆ ಪ್ರತಿ ನೂರು ಮಹಿಳೆಯರಲ್ಲಿ ಸುಮಾರು ೩೦! ಅಂದರೆ ಸುಮಾರು ೧೦ ಕೋಟಿಗೂ ಹೆಚ್ಚಿನ ಸಂಖ್ಯೆಯ ಭಾರತೀಯ ಹುಡುಗಿಯರು ೧೮ ವರ್ಷವಾಗುವ ಮೊದಲೇ ವಿವಾಹಿತರು. ಇದು ಯಾರನ್ನೇ ಆಗಲಿ ಬೆಚ್ಚಿಬೀಳಿಸುವ ಸಂಗತಿ. ಒಂದು ಸಮಾಧಾನಕರ ಸಂಗತಿಯೆಂದರೆ ಇದು ೨೦೦೧ರಲ್ಲಿ ೪೫ ಇದ್ದದ್ದು, ೨೦೧೧ರ ಹೊತ್ತಿಗೆ ಕಡಿಮೆಯಾಗಿದೆ. ಆದರೆ ನಮ್ಮ ಸಮುದಾಯಗಳಲ್ಲಿನ ಒಂದು ಭಾರೀ ದುರಂತ ದೊಡ್ಡ ಸಂಖ್ಯೆಯಲ್ಲಿ ಈಗಲೂ ೧೫ ವರ್ಷದೊಳಗಿನ ಹುಡುಗಿಯರಿಗೆ ಮದುವೆಗಳನ್ನು ಮಾಡುತ್ತಿರುವುದು.

ಇಷ್ಟೆಲ್ಲಾ ಪೀಠಿಕೆ ‘ವಿವಾಹಿತ ಬಾಲಕಿಯರ ಪರಿಸ್ಥಿತಿ’ ಕುರಿತು ಸಮಾಜ, ಸರ್ಕಾರ, ಮಾಧ್ಯಮಗಳನ್ನು ಚಿಂತನೆಗೆ ಹಚ್ಚಲು ಯತ್ನಿಸಿದ ನಮ್ಮ ಒಂದು ಕೆಲಸದ ಬಗ್ಗೆ ಹೇಳುವುದೇ ಆಗಿದೆ. ಬಾಲ್ಯವಿವಾಹಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವಷ್ಟೇ ಅಲ್ಲದೆ ನೂರಾರು ಸ್ವಯಂಸೇವಾ ಸಂಘಟನೆಗಳು ಪ್ರಚಾರ, ಸಾರ್ವಜನಿಕ ಮಾಹಿತಿ ಪ್ರಸರಣೆ ಕೆಲಸಗಳ ಜೊತೆಜೊತೆಗೇ ಬಾಲ್ಯವಿವಾಹಗಳನ್ನು ತಡೆಗಟ್ಟುವ ಮತ್ತು ಯಾರಾದರೂ ಬಾಲ್ಯವಿವಾಹಗಳನ್ನು ನಡೆಸಿದರೆ ಅಂತಹವರ ಮೇಲೆ ದೂರು ದಾಖಲಿಸುವ ಕ್ರಮಗಳನ್ನೂ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ದೊಡ್ಡ ಪ್ರಚಾರವೂ ಸಿಗುತ್ತಿದೆ.

ಆದರೆ ಬಾಲ್ಯವಿವಾಹ ನಿಲ್ಲಿಸಿದ ಮಾತ್ರಕ್ಕೆ, ವಿವಾಹಕ್ಕೆ ಗುರಿಯಾಗಿಬಿಡುತ್ತಿದ್ದ ಹುಡುಗಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯೆದುರು ಹಾಜರುಪಡಿಸಿದ ಮಾತ್ರಕ್ಕೆ ಆ ಹುಡುಗಿ ಸಂಪೂರ್ಣವಾಗಿ ರಕ್ಷಿತಳಾದಳು ಎಂದು ಹೇಳಲಾಗುವುದಿಲ್ಲ. ಅಂತಹವರಿಗೆ ಮತ್ತೆ ಶಿಕ್ಷಣದಲ್ಲಿ ತೊಡಗಿಕೊಳ್ಳುವ ಅವಕಾಶಗಳು ಸಿಗುತ್ತವೆ ಎಂದು ಹೇಳಲಾಗುವುದಿಲ್ಲ. ಅವರಿಗೆ ಮತ್ತೆ ಕದ್ದು ಮುಚ್ಚಿ ಮದುವೆಯಾಗುವ ಸಾಧ್ಯತೆಗಳೇ ಹೆಚ್ಚು. ಒಮ್ಮೆ ಮದುವೆಯಾಯಿತೋ ಅವಳು ‘ಹೆಂಗಸು’. ಜೊತೆಗೆ ದೇಹ ಬಲಿಯುವ ಮೊದಲೇ ಮೇಲಿಂದ ಮೇಲೆ ಬಸಿರು, ಗರ್ಭಸ್ರಾವ, ಹೆರಿಗೆಗಳು. ಮೇಲಾಗಿ ಮದುವೆಯಾಗಿ ಹೋದ ಮನೆಯ ಎಲ್ಲ ಚಾಕರಿಗೊಂದು ಬಿಟ್ಟಿ ಆಳು.

ವಾಸ್ತವವಾಗಿ ಬಹುತೇಕ ಗ್ರಾಮೀಣ ಪ್ರದೇಶಗಳ ಹದಿಹರೆಯದ ಹೆಣ್ಣುಮಕ್ಕಳು ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ಈ ಮೇಲಿನ ಎಲ್ಲ ಭಾರ. ಗಂಡಂದಿರಿಂದ ಹೊಡೆತ ಬಡಿತ, ಆತ್ಮಹತ್ಯೆಗಳು, ಕೊಲೆ, ಇಷ್ಟರ ಮೇಲೆ ಹೆರಿಗೆಯಲ್ಲಿ ಸಾವು… ಜೊತೆಗೆ ಗಂಡನ ಮನೆಯಿಂದ ಹುಡುಗಿಯನ್ನು ಓಡಿಸುವುದು, ಇಲ್ಲವೇ ಗಂಡು ಮಗು ಹೆರಲಿಲ್ಲವೆಂದು ಬಡಿಯುವುದು, ಇಲ್ಲವೇ ಗಂಡನೇ ಯಾವುದಾವುದೋ ಕಾರಣಕ್ಕೆ ಗೊಟಕ್‌ ಎನ್ನುವುದು, ಅಥವಾ ಪತ್ತೆಯೇ ಇಲ್ಲದಂತೆ ಓಡಿ ಹೋಗುವುದು. ಈ ಹುಡುಗಿಗೆ ಒಂದೆರಡು ಮಕ್ಕಳಾಗುತ್ತಿದ್ದಂತೆಯೇ ಅವಳ ಮೇಲಿನ ಆಕರ್ಷಣೆ ಕಳೆದುಕೊಂಡು ಇನ್ನೊಂದು ಹುಡುಗಿಯನ್ನು ಕಟ್ಟಿಕೊಳ್ಳುವುದು!

ಇಂತಹದರಲ್ಲೆಲ್ಲಾ ಪೆಟ್ಟು ಬೀಳುವುದು ಹುಡುಗಿಗೆ ಮಾತ್ರ.

೨೦೦೬ರಲ್ಲಿ ಹೊರಬಂದ ಬಾಲ್ಯವಿವಾಹ ನಿಷೇಧ ಕಾಯಿದೆ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಏನು ತಿಳಿದಿದೆ ಮತ್ತು ಸಮುದಾಯಕ್ಕೆ ಎಂತಹ ಅರಿವು ಉಂಟಾಗಿದೆ ಎಂದು ಪರಿಶೀಲಿಸಲು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು ಮಹಿಳಾ ಸಮಾಖ್ಯಾ, ಎಚ್.ಆರ್.‌ಎಲ್.‌ಎನ್.‌, ಮತ್ತು ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಸಂಸ್ಥೆ ಜೊತೆಗೂಡಿ ವಿಜಯಪುರದಲ್ಲಿರುವ ಮಹಿಳಾ ವಿಶ್ವವಿದ್ಯಾಲಯದಲ್ಲಿ ಒಂದು ವಿಚಾರ ಸಂಕಿರಣ ಏರ್ಪಡಿಸಿದ್ದೆವು. ಇದರ ನೇತೃತ್ವವನ್ನು ಶ್ರೀಮತಿ ನೀನಾ ನಾಯಕ್‌ ಅವರು ವಹಿಸಿದ್ದರು.

ವಿಚಾರ ಸಂಕಿರಣಕ್ಕೆ ಮೊದಲು ವಿಜಯಪುರ ಜಿಲ್ಲೆಯಲ್ಲಿ ಒಂದಷ್ಟು ಹಳ್ಳಿಗಳಲ್ಲಿ ಸುತ್ತಿ ಸಮುದಾಯಗಳೊಡನೆ ಮಾತನಾಡಿ, ಅಲ್ಲೆಲ್ಲಾ ಬಾಲ್ಯವಿವಾಹದ ಪರಿಸ್ಥಿತಿ ಹೇಗಿದೆ ಮತ್ತು ಜನ ಏನನ್ನುತ್ತಾರೆ ಎಂದು ತಿಳಿದು ಬಂದೆವು. ಕಂಡು ಕೇಳರಿಯದ ಕತೆಗಳು. ಹಳ್ಳಿಗಳನ್ನು ಹೊಕ್ಕೊಡನೇ ಅಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಪಾಪ ಹೇಳುತ್ತಿದ್ದುದು ‘ನಮ್ಮಲ್ಲಿ ಇಲ್ರೀ’. ಪರವಾಗಿಲ್ಲ ನಾವು ಊರು ಸುತ್ತುತೀವ್ರೀ ಅಂತ ಹೊರಟ ನಮಗೆ ಎಲ್ಲ ರಸ್ತೆಗಳಲ್ಲೂ ವಿವಾಹಿತ ಬಾಲಕಿಯರೇ ಕಣ್ಣಿಗೆ ಬಿದ್ದದ್ದು! ಊರ ಹಿರಿಯರೊಡನೆ ಕಟ್ಟೆ ಮೇಲೆ ಕುಳಿತು ಮಾತನಾಡುತ್ತಾ ಅವರಿಗೆ ಬಾಲ್ಯವಿವಾಹಗಳು ಅದೆಷ್ಟು ಸಾಮಾನ್ಯ ಸಂಗತಿಗಳಾಗಿವೆ ಎಂಬುದನ್ನೂ ಕಂಡುಕೊಂಡೆವು.

ಶಾಲೆಗಳಿಗೆ ಹೋದಾಗ, ಶಿಕ್ಷಕರು ಮೊದಮೊದಲು ಇಲ್ಲ ಇಲ್ಲ ಎಂದರೂ, ತಾವೇ ಮದುವೆಗಳಿಗೆ ಹೋಗಿ ಆಶೀರ್ವಾದ ಮಾಡಿ ಬಂದಿದ್ದೀವಿ ಎಂದು ಒಪ್ಪಿಕೊಂಡರು. ಕೆಲವು ಶಾಲೆಗಳಲ್ಲಿ ಹುಡುಗಿಯರು ತಾವೇ ನಿಂತು ತಮಗೆ ವಿವಾಹವಾಗಿರುವ ಕುರಿತು ಹೇಳಿದರು. ಸೋಮವಾರದಿಂದ ಶನಿವಾರದ ವರೆಗೆ ಶಾಲೆ ಮತ್ತು ತವರು ಮನೆ, ಶನಿವಾರ ಭಾನುವಾರ ಅತ್ತೆ ಮನೆ ಎಂದು ಹೇಳಿ ನಕ್ಕರು. ನಮಗೆ ನಗಲಾಗಲಿಲ್ಲ. 

ಇಷ್ಟರ ಮೇಲೆ ನಾವು ಹಳ್ಳಿ ಸುತ್ತುತ್ತಿರುವುದು ವಿವಾಹಿತ ಬಾಲಕಿಯರ ಬಗ್ಗೆ ತಿಳಿದುಕೊಳ್ಳಲು ಎಂದು ಗೊತ್ತಾದ ಒಬ್ಬ ೧೨ ವರ್ಷದ ಹುಡುಗಿ ಬಂದು ʼತನಗೆ ಇನ್ನೇನು ಮದುವೆ ಮಾಡಿಬಿಡುತ್ತಾರೆ. ನನಗಿಷ್ಟವಿಲ್ಲ. ನನ್ನನ್ನ ನಿಮ್ಮ ಜೊತೆ ಒಯ್ದುಬಿಡಿ. ನನ್ನನ್ನು ಯಾವ್ದಾದ್ರೂ ಹಾಸ್ಟೆಲ್‌ಗೆ ಸೇರಿಸಿʼ ಎಂದು ದುಂಬಾಲು ಬಿದ್ದಿದ್ದಳು.  

ವಿಜಯಪುರದಲ್ಲಿ ನಡೆದ ವಿಚಾರ ಸಂಕಿರಣದ ಒಟ್ಟು ಫಲಿತಾಂಶ, ಬಾಲ್ಯವಿವಾಹ ನಿಷೇಧ ಕಾಯಿದೆ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರವಾಗಬೇಕು, ಸರ್ಕಾರವಿನ್ನೂ ಈ ಕಾಯಿದೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ‘ಬಾಲ್ಯವಿವಾಹ ಮತ್ತು ಅದರಿಂದಾಗುತ್ತಿರುವ ದುಷ್ಪರಿಣಾಮಗಳಾದ ಶಿಕ್ಷಣ ವಂಚನೆ, ಕೌಟುಂಬಿಕ ದೌರ್ಜನ್ಯ, ಮೇಲಿಂದ ಮೇಲೆ ಗರ್ಭಸ್ರಾವ ಹೆರಿಗೆಯಲ್ಲಿ ತಾಯಂದಿರ ಸಾವು, ಅಪೌಷ್ಟಿಕತೆ, ಶಿಶುಗಳು ಮತ್ತು ಮಕ್ಕಳ ಮರಣ, ವಿಧವೆಯರಾಗುವ ಬಾಲಕಿಯರು ಇತ್ಯಾದಿ ಸಂಬಂಧಿತ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಅವುಗಳು ಏಕೆ ಸಮಾಜದ ಅಭಿವೃದ್ಧಿಗೆ ಮಾರಕವಾಗಿರುವ ಸೂಚಕಗಳೆಂದು  ಪರಿಗಣಿಸಲೇಬೇಕು’.

ಈ ಪರಿಸ್ಥಿತಿ ಹೀಗೇ ಇರಬೇಕೆ ಎಂದು ಪ್ರಶ್ನಿಸಿ ಕೆಲವು ಗೆಳೆಯರು ೨೦೦೮ರ ಸುಮಾರಿಗೆ ಕರ್ನಾಟಕದ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿತ್ತು. ನಂತರ ಕೆಲವು ಸಲಹೆಗಳನ್ನು ನೀಡಿತು. ಅದರ ಪರಿಣಾಮವಾಗಿ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಅವರ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಗಿ ರಾಜ್ಯದಲ್ಲಿ ಬಾಲ್ಯವಿವಾಹಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಲಾಯಿತು.

ಸರ್ಕಾರ, ಸ್ವಯಂಸೇವಾ ಸಂಸ್ಥೆಗಳು, ಮಾಧ್ಯಮಗಳು, ವಿಶ್ವವಿದ್ಯಾಲಯಗಳು ಎಲ್ಲರೂ ಈ ಸಮಿತಿಗೆ ಹಲವು ರೀತಿಯ ಮಾಹಿತಿಗಳನ್ನು ಒದಗಿಸಿದರು. ಬಾಲ್ಯವಿವಾಹ ನಿಷೇಧ ಕಾಯಿದೆ ೨೦೦೬ಕ್ಕೆ ತಿದ್ದುಪಡಿಯನ್ನೂ ಒಳಗೊಂಡು. ಹಲವು ಮಹತ್ವದ ಸಲಹೆಗಳನ್ನು ಈ ಸಮಿತಿ ಸರ್ಕಾರಕ್ಕೆ ನೀಡಿತು. ಆ ಸಲಹೆಗಳ ಕುರಿತಾದ ಒಂದಷ್ಟು ಕ್ರಮಗಳು ನಿಧನಿಧಾನವಾಗಿ ನಡೆಯುತ್ತಿವೆ.  

ಇಂತಹದೊಂದು ಪರಿಸ್ಥಿತಿಯಲ್ಲಿ ರಾಜ್ಯದ ಕೆಲವು ಸ್ವಯಂಸೇವಾ ಸಂಸ್ಥೆಗಳು ಸೇರಿಕೊಂಡು ಒಂದು ನಿರ್ಧಾರಕ್ಕೆ ಬಂದೆವು. ಬಾಲ್ಯವಿವಾಹಗಳನ್ನು ನಿಲ್ಲಿಸುವ ಕೆಲಸ ಒಂದೆಡೆ ನಡೆಯುತ್ತಿರಲಿ, ಜೊತೆಗೆ ‘ವಿವಾಹಕ್ಕೆ ಗುರಿಯಾಗಿರುವ ೧೮ ವರ್ಷದೊಳಗಿನ ಹುಡುಗಿಯರ ಪರಿಸ್ಥಿತಿಯನ್ನು ಅಧ್ಯಯನ ಮಾಡೋಣ. ಅವರ ಪ್ರಮಾಣ ಎಷ್ಟಿರಬಹುದು ಗಮನಿಸೋಣ. ಅವರ ಆಸೆ ಆಶೋತ್ತರಗಳೇನು, ಅವರಿಗೆ ಎಂತಹ ಸಹಾಯ ಮತ್ತು ಸೌಲಭ್ಯ ಬೇಕು, ಅದಕ್ಕಾಗಿ ಎಂತಹ ಕ್ರಮ ಕೈಗೊಳ್ಳಬೇಕು ಎಂದು ತಿಳಿದು ಅದರಿಂದ ಸಿಕ್ಕ ಕಲಿಕೆಯನ್ನು ಸರ್ಕಾರದ ಮುಂದಿಡೋಣʼ. 

ಇದಕ್ಕಾಗಿ ಇಮೇಜ್‌ (IMAGE – Initiative for Married Adolescent Girl’s Empowerment) ವಿವಾಹಿತ ಹದಿಹರೆಯದ ಹೆಣ್ಣುಮಕ್ಕಳ ಸಶಕ್ತೀಕರಣ ಎಂಬ ಕಾರ್ಯಕ್ರಮ ಆರಂಭಿಸಿದೆವು. ಬಹಳ ಮುಖ್ಯವಾಗಿ ಈ ವಿಚಾರ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿನ ೫ನೇ ಗುರಿಯಾದ ಲಿಂಗ ಸಮಾನತೆಯನ್ನು ಸಾಧಿಸಿ ಮತ್ತು ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಸಶಕ್ತರನ್ನಾಗಿಸಿ ಎಂಬುದನ್ನು ಸಾಕಾರಗೊಳಿಸುವ ಪ್ರಯತ್ನವಾಗಿದೆ. 

ತೀರಾ ಇತ್ತೀಚಿನವರೆಗೂ ಸರ್ಕಾರದ ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ದಾಖಲೆಗಳು ಮತ್ತು ಜನಗಣತಿಯ ವರದಿಗಳಲ್ಲಿ, ‘೧೫ ವರ್ಷ ದಾಟಿದ ತಾಯಂದಿರು/ಹೆಂಗಸರು’ ಎನ್ನುವ ಕಾಲಂ ಮತ್ತು ವಿಭಾಗ ಕಾಣಬರುತ್ತಿತ್ತು. ಅಂದರೆ ೧೫ ದಾಟಿದವರಿಗೆ ವಿವಾಹವಾದರೆ ಅವರನ್ನು ಅನಾಮತ್ತಾಗಿ ತಾಯಂದಿರು ಎಂದು ಪರಿಗಣಿಸಿ ಅವರ ಯೋಗಕ್ಷೇಮ ನೋಡಿಕೊಳ್ಳುವುದು ಎನ್ನುವ ನಿಲುವು. ತಪ್ಪೇನಿಲ್ಲ. ಆರೈಕೆ ಕೊಡುವುದು ಉದ್ದೇಶವಾದರೆ ಒಳ್ಳೆಯದೇ. ಈಗ ಅಂತಹ ಕಾಲಂ ಇಲಾಖೆಗಳ ಕಡತಗಳಲ್ಲಿ, ವರದಿಗಳಲ್ಲಿ ಅಧಿಕೃತವಾಗಿ ಕಾಣುವುದಿಲ್ಲ. ಅಂದರೆ ಇಂತಹ ವಿಚಾರವೇ ಇಲ್ಲವೇನೋ ಎಂಬಂತೆ ವರ್ತಿಸಿಬಿಡುವುದು! ಇಲ್ಲ ಎಂಬ ನಿರಾಕರಣೆ.

ಇಮೇಜ್‌ ಯೋಜನೆಯಲ್ಲಿ ಐದು ಸಂಸ್ಥೆಗಳು ಜೊತೆಗೂಡಿ ಮಾಹಿತಿ ಸಂಗ್ರಹ ಮತ್ತು ಕಾರ್ಯಕ್ರಮ ನಿರ್ವಹಣೆಯಲ್ಲಿ ತೊಡಗಿದವು: ವಿದ್ಯಾನಿಕೇತನ (ಬೀದರ್‌), ರೀಚ್‌ (ಬಾಗಲಕೋಟೆ), ಸೇವಕ್‌ (ಬೆಳಗಾವಿ), ಪಿಎಂಆರ್‌ಎಸ್ (ಚಾಮರಾಜನಗರ) ಮತ್ತು ಅರ್ಪಣಂ (ಚಿಕ್ಕಬಳ್ಳಾಪುರ). ನಾನು ಕಂಡುಕೊಂಡಿರುವ ಚೈಲ್ಡ್‌ ರೈಟ್ಸ್‌ ಸಂಸ್ಥೆ ಇವರೆಲ್ಲರಿಗೂ ಕಾನೂನು ಮಾಹಿತಿಗಳೊಡನೆ ತರಬೇತಿಗಳನ್ನು ನೀಡುವುದು, ಸಂಶೋಧನೆಯಲ್ಲಿ ತೊಡಗುವುದು ಹಾಗೂ ಸರ್ಕಾರದೊಡನೆ ವಕೀಲಿ ನಡೆಸುವ ಜವಾಬ್ದಾರಿ ತೆಗೆದುಕೊಂಡಿತು (೨೦೧೭). ನಮ್ಮ ಈ ಪ್ರಯತ್ನಕ್ಕೆ ಟೆರ್ರೆಡೆಸ್‌ ಹೋಮ್ಸ್‌-ನೆದರ್‌ಲ್ಯಾಂಡ್ಸ್‌ ಮತ್ತು ಕಾಮಿಕ್‌ ರಿಲೀಫ್‌ ಫಂಡ್‌, ಇಂಗ್ಲೆಂಡ್‌ ಒತ್ತಾಸೆಯಾಗಿ ಬಂದಿತು.

ನೋಡು ನೋಡುತ್ತಿದ್ದಂತೆಯೇ ಆಯ್ದ ಕೆಲವೇ ಹಳ್ಳಿಗಳಿಂದ ನಮ್ಮ ಕಾರ್ಯಕರ್ತರು ೩೦೦೦ ವಿವಾಹಿತ ಬಾಲಕಿಯರನ್ನು ಸಂಪರ್ಕಿಸಿ, ಕಷ್ಟಪಟ್ಟು ಅವರನ್ನು, ಅವರ ಮನೆಯವರನ್ನು ಮಾತನಾಡಲು ಒಪ್ಪಿಸಿ, ವಿವಿಧ ರೀತಿಯ ಮಾಹಿತಿಯ ಮಹಾಪೂರವನ್ನೇ ಹೊತ್ತು ತಂದರು: ಬಹುತೇಕ ವಿವಾಹಿತ ಬಾಲಕಿಯರು ೧೪ರಿಂದ ೧೬ ವರ್ಷದೊಳಗೆ ಮದುವೆಗೆ ಗುರಿಯಾದವರು. ಈ ಪುಟ್ಟ ವಯಸ್ಸಿನಲ್ಲೇ ಬಾಲ್ಯವಿವಾಹಕ್ಕೆ ಬಿದ್ದವರ ಬದುಕು, ಬವಣೆ ಕೇವಲ ಅವರ ಬದುಕನ್ನು ಮಾತ್ರ ಹದಗೆಡಿಸಿಲ್ಲ, ಬದಲಿಗೆ ನಮ್ಮ ಇಡೀ ಸಮುದಾಯವನ್ನು ಅಧೋಗತಿಗೆ ಜಗ್ಗುತ್ತಿದೆ ಎಂದು ನಿರೂಪಿಸಿದರು.

‍ಲೇಖಕರು ವಾಸುದೇವ ಶರ್ಮ

March 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: