ಮೇಟಿ ಮಲ್ಲಿಕಾರ್ಜುನ
ನಿನ್ನೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಈ ಹಿನ್ನೆಲೆಯಲ್ಲಿ ನಮ್ಮ ನಡುವಿನ ಮಹತ್ವದ ಚಿಂತಕರಾದ ಮೇಟಿ ಮಲ್ಲಿಕಾರ್ಜುನ ಅವರ ನೋಟ ಇಲ್ಲಿದೆ-
**
ಭಾಗ – 1
ಮುನ್ನೋಟ
ಇಡೀ ಲೋಕದ ಅರಿವಿನ ಸನ್ನಿವೇಶದಲ್ಲಿ ದಿನವೂ ನಡೆಯುತ್ತಿರುವ ಒಂದೊಂದು ವಿದ್ಯಮಾನವನ್ನು ಗಮನಿಸಿದರೆ, ಆ ಕುರಿತ ಚರ್ಚೆಗಳಿಗೆ ಪ್ರತಿಕ್ರಿಯಿಸುವುದು ಅತ್ಯಂತ ದುಸ್ತರವಾದ ಸಂಗತಿಯೇ ಸರಿ. ಹಾಗಂತ ಆ ಎಲ್ಲ ವಿಷಯಗಳನ್ನು ಲೆಕ್ಕಿಸದೇ ಮುಂದುವರೆಯುವುದು ಕೂಡ ಅಷ್ಟೇ ದುಸ್ತರವಾದ ನಿಲುವು ಆಗಿರುತ್ತದೆ. ಹಾಗಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಈ ಸನ್ನಿವೇಶದಲ್ಲಿ ನುಡಿ ನಿಲುವುಗಳು, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಆಶಯ ಮತ್ತು ಆಚರಣೆ ಎಂಬ ಮೂರು ಮುಖ್ಯ ಪ್ರಶ್ನೆಗಳನ್ನು ಪರಿಶೀಲಿಸುವ ಪ್ರಯತ್ನವನ್ನು ಇಲ್ಲಿ
ಮಾಡಲಾಗಿದೆ. ಇವುಗಳು ಕೇವಲ ಪ್ರಶ್ನೆಗಳು ಮಾತ್ರವಲ್ಲ ಬದಲಾಗಿ ನಾವು ತೀವ್ರವಾಗಿ ಎದುರಿಸುತ್ತಿರುವ ಈ ಹೊತ್ತಿನ ಪ್ರಮುಖ ಸವಾಲುಗಳೂ ಹೌದು ಮತ್ತು ನಾವು ಗಮನಿಸಬೇಕಾದ ಸದ್ಯದ ಪ್ರಸ್ತಾವನೆಗಳೂ ಆಗಿರುತ್ತವೆ. ಪ್ರಜಾಪ್ರಭುತ್ವ ಎಂಬ ತತ್ವ ಇಲ್ಲವೇ ಆ ಪರಿಕಲ್ಪನೆಯ ಬಗೆಗೆ ನನಗೆ ಯಾವುದೇ ಅನುಮಾನಗಳು ಇಲ್ಲ ಆದರೆ ಇಂತಹದೊಂದು ತಾತ್ವಿಕ ರಚನೆಯ ಮೂಲಕ ರೂಪಿಸಿಕೊಂಡ ನಮ್ಮ ರಾಜಕೀಯ ರಚನೆಯಲ್ಲಿ ಹುದುಗಿರುವ ಅಸಮಾನತೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ವಿನ್ಯಾಸದಲ್ಲಿ ನೆಲೆನಿಂತಿರುವ ಭೇದಭಾವ ಅಲ್ಲದೇ ಸಾಂಸ್ಕೃತಿಕ ತಾರತಮ್ಯದ ನಿಲುವುಗಳು ಹೇಗೆ ನಮ್ಮ ಸಮೂಹಗಳ ಹಸನಾದ ಬದುಕಿಗೆ ತೊಡಕಾಗಿವೆ ಎನ್ನುವುದನ್ನು ವಿಶ್ಲೇಷಿಸುವ ಗುರಿಯನ್ನು ಮಾತ್ರ ಈ ಟಿಪ್ಪಣಿ ಹೊಂದಿರುತ್ತದೆ.
**
ಪ್ರಜಾಪ್ರಭುತ್ವ ಮತ್ತು ನುಡಿ ನಿಲುವುಗಳು
ಭಾರತ ಲೋಕದಲ್ಲಿಯೇ ಪ್ರಜಾಸತ್ತಾತ್ಮಕ ದೇಶವೆಂದು ಹೆಸರು ಗಳಸಿದೆ. ಈ ದೇಶದಲ್ಲಿ ಸಾವಿರಾರು ಮನೆಮಾತುಗಳಿವೆ. ಇವುಗಳಲ್ಲಿ ಹೆಚ್ಚಿನ ನುಡಿಗಳು ಇವತ್ತಿಗೂ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಸಮಾನತೆಗಳನ್ನು ಅನುಭವಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಪ್ರಭುತ್ವದ ಬೆಂಬಲ ಪಡೆಯುತ್ತಿರುವ ಇಂಗ್ಲಿಶ್, ಸಂಸ್ಕೃತ ಮತ್ತು ಹಿಂದಿಯಂತಹ ನುಡಿಗಳೇ ಎಂದು ಹೇಳಬಹುದು. ಮುಖ್ಯವಾಗಿ ಈ ಮೂರೂ ನುಡಿಗಳು ಪ್ರಜಾಪ್ರಭುತ್ವವನ್ನು ನೆಲೆಗೊಳಿಸುವ ಬದಲಾಗಿ ವೈದಿಕಶಾಹಿತ್ವ ಮತ್ತು ವಸಹಾತುಶಾಹಿತ್ವವನ್ನು ಪ್ರತಿನಿಧಿಸುತ್ತವೆ. ದೇಶೀ ನುಡಿಗಳ ಅಸ್ತಿತ್ವಕ್ಕೆ ಇವುಗಳಿಂದ ಧಕ್ಕೆ ಉಂಟಾಗುತ್ತದೆ. ಹಾಗೂ ಆಯಾ ನುಡಿಗಳನ್ನು ಮಾತನಾಡುವ ಜನರಲ್ಲಿ ಅವರಾಡುವ ನುಡಿಗಳ ಬಗೆಗೆ ಅವರಲ್ಲಿಯೇ ಕೀಳರಿಮೆಯನ್ನು ಹುಟ್ಟು ಹಾಕುತ್ತವೆ. ಸಂಸ್ಕೃತ ಇದನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ. ಕನ್ನಡವೂ ಇಂತಹ ಕೀಳರಿಮೆಗೆ ಒಳಗಾಗಿದೆ. ಇಂಗ್ಲಿಶಿಗೆ ಸಂಪರ್ಕ ಮತ್ತು ಆಡಳಿತ ಭಾಷೆಯೆಂಬ ಅಸ್ತಿತ್ವವನ್ನು ಕೊಟ್ಟಿದ್ದರಿಂದ, ಅದು ದೇಶೀ ನುಡಿಗಳ ಜಾಗವನ್ನೇ ಆಕ್ರಮಿಸಿಕೊಂಡಿದೆ.
ಭಾರತದಲ್ಲಿರುವ ದೇಶೀ ಭಾಷೆಗಳ ಅಸ್ತಿತ್ವವನ್ನು ನಿರಾಕರಿಸುವುದರ ಸೂಚನೆಯೇ ಇದಾಗಿದೆ. ದಿಟ ಕೆಲವು ದೇಶೀ ನುಡಿಗಳು ರಾಜ್ಯಾಧಿಕಾರದ ಜಾಗವನ್ನು ಪಡೆದುಕೊಂಡಿವೆ. ಇಂತಹ ಅಧಿಕಾರ ಅವುಗಳಿಗೆ ಯಜಮಾನಿಕೆಯ ಪಟ್ಟವನ್ನೂ ತಂದು ಕೊಟ್ಟಿದೆ. ಪರಿಣಾಮವಾಗಿ ಎಷ್ಟೋ ದೇಶೀ ನುಡಿಗಳು ಮೂಲೆಗುಂಪಾಗಿವೆ. ಈ ಬಗೆಯ ಶ್ರೇಣಿಕರಣ ಎಲ್ಲಾ ವಲಯಗಳಲ್ಲೂ ಬೇರೂರಿದೆ. ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿ ಇಂತಹ ಶ್ರೇಣಿಕರಣ ನೆಲೆಗೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಕೇಳುವ ಪ್ರಯತ್ನವನ್ನು ಯಾರು ಮಾಡಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಆದರೆ ಇಂತಹ ಅಸಮಾನ ನೆಲೆಗಳು ನಿರಂತರ ಮುಂದುವರೆಯುತ್ತವೆ ಎಂಬುದೇ ಸೋಜಿಗದ ಸಂಗತಿಯಾಗಿದೆ. ಹಾಗಾದರೆ ಪ್ರಜಾಪ್ರಭುತ್ವದ ತಾತ್ವಿಕ ಚೌಕಟ್ಟು ಎಂತಹದು? ಸಮುದಾಯಗಳ ಅಸ್ತಿತ್ವ ಹಾಗೂ ಅನನ್ಯತೆಯಲ್ಲಿಯೇ ಅಸಮಾನ ನೆಲೆಗಳು ಹೇಗೆ ಹುದುಗಿಕೊಂಡಿವೇ? ಇಂತಹ ಅಸಮಾನ ನೆಲೆಗಳನ್ನು ಕಾಪಾಡುವುದನ್ನೇ ಪ್ರಜಾಪ್ರಭುತ್ವ ಅನ್ನೋಣವೇ? ಎಂಬ ಗುಮಾನಿ ಬರದೇ ಇರಲಾದು. ಏಕೆಂದರೆ ಪ್ರಜಾಪ್ರಭುತ್ವದ ಮುಖ್ಯ ಲಕ್ಷಣವೇ ಪ್ರಜೆಗಳ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವುದು ಆಗಿರುತ್ತದೆ ಎಂಬ ನಂಬಿಕೆಯೂ ಈಗಾಗಲೇ ನೆಲೆಗೊಂಡಿರುತ್ತದೆ.
ಪ್ರಜಾಪ್ರಭುತ್ವ ಏನಿದರ ಹೆಚ್ಚಳ?
ಪ್ರಜಾಪ್ರಭುತ್ವ ಹಾಗೂ ಬಹುಭಾಷಿಕತೆ ಎಂಬ ಈ ಎರಡೂ ವಿದ್ಯಮಾನಗಳ ನಡುವೆ ಸಮಾನ ನೆಲೆಯ ನಂಟಿರುತ್ತದೆ. ಆ ನೆಲೆಗಳಾವವು ಅಂದರೆ, ಒಂದು ತಾಳಿಕೆ ಗುಣ ಮತ್ತೊಂದು ಸಮಾನತೆ ಆಗಿರುತ್ತದೆ. ಪ್ರಜೆಗಳ ಆಶೋತ್ತರಗಳನ್ನು ಕಾಪಾಡುವುದೇ ಪ್ರಜಾಪ್ರಭುತ್ವವಾದರೇ, ಇಂತಹ ಬೇಡಿಕೆಗಳು ಈಡೇರಲು ಆಯಾ ಸಮುದಾಯಗಳು ತಮ್ಮ ತಮ್ಮ ಭಾಷೆಗಳನ್ನೇ ನೆಮ್ಮಿಕೊಂಡಿರುತ್ತವೆ. ಭಾಷೆಗೂ ಬದುಕಿಗೂ ಹಾಗೂ ಪ್ರಜಾಪ್ರಭುತ್ವಕ್ಕೂ ಅಂತರ್-ಸಂಬಂಧಗಳಿರುತ್ತವೆ ಎಂಬುದನ್ನು ಬೇರೆಯೇ ಹೇಳಬೇಕಿಲ್ಲ. ಊಳಿಗಮಾನ್ಯ ಪದ್ಧತಿ, ಬಂಡವಾಳಶಾಹಿ, ನೌಕರಶಾಹಿಗಳಂತಹ ಬೇರೆ ಬೇರೆ ಪ್ರಭಾವಗಳಿಂದ ಪ್ರಜಾಪ್ರಭುತ್ವದ ವ್ಯಾಖ್ಯಾನಗಳೇ ಬದಲಾಗಿರುವಂತಿದೆ. ಹಾಗಾಗಿ ‘ಎಲ್ಲರೂ ಸಮಾನರು’ ಎನ್ನುವ ಕಲ್ಪನೆ ಅಪಹಾಸ್ಯದಂತೆ ಕಂಡರೆ, ‘ಎಲ್ಲರನ್ನೂ ರಾಜಕೀಯವಾಗಿ ಗೌರವದಿಂದ ಕಾಣಬೇಕು’ಎಂಬ ಕಲ್ಪನೆ ಹುಸಿಮಂತ್ರವೇ ಆಗಿದೆ. ಪ್ರಜಾಪ್ರಭುತ್ವದ ಸಡಗರದ ಈ ಸನ್ನಿವೇಶದಲ್ಲಿ ಇದೊಂದು ಸೋಜಿಗದ ಸಂಗತಿಯೇ ಸರಿ. ಪ್ರಜಾಪ್ರಭುತ್ವದಲ್ಲಿ ಜನರ ಪಾಲುಗೊಳ್ಳುವಿಕೆಗೆ ವಿಶೇಷ ಅರ್ಥವಿರುತ್ತದೆ. ರಾಜಕೀಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲಾ ಗಡಿ ಗೆರೆಗಳನ್ನು ಮೀರಿ ತಮಗೆ ಬೇಕಾದವರನ್ನು ಆರಿಸುವ ಸ್ವಾತಂತ್ರ್ಯ ಇರುತ್ತದೇನೋ ದಿಟ. ಹಾಗಂತ ಈ ಆಯ್ಕೆಗಳು ಎಲ್ಲರನ್ನೂ ಪ್ರತಿನಿಧಿಸುತ್ತವೆಯೇ? ಎಂಬ ಮೂಲಭೂತ ಪ್ರಶ್ನೆಗೆ ಉತ್ತರಿಸುವನ್ನು ಕಂಡುಕೊಳ್ಳುವುದು ದುಸ್ತರವಾಗಿದೆ.
ಒಂದು ವೇಳೆ ಎಲ್ಲ ಸಾಮಾಜಿಕರನ್ನೂ ಪ್ರತಿನಿಧಿಸುವ ವ್ಯಕ್ತಿಗಳು ಆಯ್ಕೆಯಾದರೇ, ಈ ಎಲ್ಲ ಸಾಮಾಜಿಕರ ಬೇಡಿಕೆಗಳು ಈಡೇರುತ್ತವೆಯೇ? ಎಂಬ ಇನ್ನೊಂದು ಪ್ರಶ್ನೆಯೂ ಇಲ್ಲಿ ಹುಟ್ಟಿಕೊಳ್ಳುತ್ತದೆ. ಏಕೆಂದರೆ, ರಾಜ್ಯನೀತಿಗೂ ಸಾಮಾಜಿಕ ರಚನೆಗಳಿಗೂ ಯಾವುದೇ ಬಗೆಯ ಹೊಂದಾಣಿಕೆ ಇರುವುದಿಲ್ಲ, ಇದ್ದರೂ ಆಚರಣೆಗೆ ಬರುವುದಿಲ್ಲ. ಇದು ಕೇವಲ ಅನುಮಾನವಲ್ಲ, ಭಾರತ ಸ್ವಾತಂತ್ರ್ಯವನ್ನು ಪಡೆದು ಏಳು ದಶಕಗಳೇ ಕಳೆದರೂ, ಪ್ರಜಾಪ್ರಭುತ್ವದ ನಿಚ್ಚಳ ರೂಪುರೇಷೆಗಳು ಇನ್ನೂ ಖಚಿತವಾಗಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿರುವ ಕಾಳಜಿಗಳಿಗೂ ಮತ್ತು ಅವುಗಳನ್ನೂ ನಿರ್ವಹಿಸುವ ಜನಪ್ರತಿನಿಧಗಳ ಕಾಳಜಿಗಳ ನಡುವೆ ಯಾವುದೇ ಹೊಂದಾಣಿಕೆ ಇರುವುದಿಲ್ಲ. ಅಲಕ್ಷಿತ ಹಾಗೂ ಅಲ್ಪಸಂಖ್ಯಾತರ ಆಶೋತ್ತರಗಳನ್ನು ಕಾಪಾಡುವ ನೀತಿಗಳು ಹೆಸರಿಗೆ ಮಾತ್ರ ಇದ್ದಂತೆ ಕಾಣುತ್ತವೆ. ತಮ್ಮ ಎಲ್ಲ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ಅವಕಾಶಗಳಿರುವಂತೆ, ಅವುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸುವ ಹಕ್ಕುಗಳೂ ಇರುತ್ತವೆ. ಅಭಿವ್ಯಕ್ತಿ ಹಕ್ಕು, ಶಿಕ್ಷಣ ಹಕ್ಕು, ಆರೋಗ್ಯದ ಹಕ್ಕು, ಮೀಸಲಾತಿ ಎಂಬಿತ್ಯಾದಿ ಹಕ್ಕುಗಳು ಸಂವಿಧಾನ ಒದಗಿಸಿರುವ ಮೂಲಭೂತ ಹಕ್ಕುಗಳಲ್ಲೇ ಅಡಕವಾಗಿರುತ್ತವೆ. ಇಲ್ಲಿ ಎಲ್ಲರನ್ನೂ ಸಮನಾಗಿ ಕಾಣಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಈ ಎಲ್ಲಾ ಹಕ್ಕು ಮತ್ತು ಸ್ವಾತಂತ್ರ್ಯ ಪ್ರತಿಯೊಬ್ಬ ಸಾಮಾಜಿಕನಿಗೂ ಸಿಗಬೇಕು ಎನ್ನುವುದೇ ಪ್ರಜಾಪ್ರಭುತ್ವದ ಮೂಲತತ್ವವು ಹೇಳುತ್ತದೆ.
ಪ್ರಜಾಪ್ರಭುತ್ವದ ಆಶಯದಂತೆ ಅದನ್ನು ನಿರ್ವಹಿಸುವ ಪ್ರಭುತ್ವವು ನಡೆದುಕೊಂಡರೇ, ಇಲ್ಲಿ ಯಾವುದೇ ಸಾಮಾಜಿಕ-ರಾಜಕೀಯ ಹಿತಾಸಕ್ತಿ ಮುಖ್ಯವಾಗುವುದಿಲ್ಲ. ಇಲ್ಲದೇ ಹೋದರೆ, ಪ್ರಜಾಸತ್ತಾತ್ಮಕ ಸರಕಾರ ಎನ್ನುವುದೇ ಒಂದು ಹುಸಿ ಕಲ್ಪನೆಯಾಗುತ್ತದೆ. ಕೇವಲ ‘ಪ್ರಜಾಪ್ರಭುತ್ವ’ ಎಂಬ ಹೆಸರನ್ನು ಲಗತ್ತಿಸಿಕೊಂಡ ಇವತ್ತಿನ ಪ್ರಭುತ್ವಕ್ಕೆ ಬಂಡವಾಳಶಾಹಿ ಮತ್ತು ಮೇಲ್ವರ್ಗದ ಹಿತಾಸಕ್ತಿಯೇ ಬಹು ಮುಖ್ಯವಾಗಿರುತ್ತದೆ. ಪ್ರತಿಯೊಬ್ಬ ಸಾಮಾಜಿಕನ ಬೇಡಿಕೆಗಳನ್ನು ಈಡೇರಿಸಬೇಕೆಂಬ ತುಡಿತ ಇವತ್ತಿನ ಯಾವ ಪ್ರಭುತ್ವಕ್ಕೂ ಇರುವುದಿಲ್ಲ. ಪ್ರತಿಯೊಬ್ಬನಿಗೂ ಸಾರ್ವಜನಿಕ ವ್ಯವಹಾರಗಳಲ್ಲಿ ಪಾಲುಗೊಳ್ಳುವ ಹಕ್ಕಿನಷ್ಟೇ, ಅವನ ವ್ಯಯಕ್ತಿಕ ಬದುಕಿನ ಏಳ್ಗೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವು ಇರುತ್ತದೆ. ಭಾರತದಲ್ಲಿ ಹೆಚ್ಚಿನವರಿಗೆ ತಮ್ಮ ಭಾಷೆಗಳ ಕುರಿತು ಯಾವುದೇ ನಿಲುವುಗಳನ್ನು ತೆಗೆದುಕೊಳ್ಳುವ ಅವಕಾಶವೇ ಇರುವುದಿಲ್ಲ. ಉದಾಹರಣೆಗೆಗಾಗಿ, ಶಿಕ್ಷಣ ಮಾಧ್ಯಮ ಹಾಗೂ ಭಾಷಾಶಿಕ್ಷಣ ವ್ಯವಸ್ಥೆಯನ್ನು ಗಮನಿಸಬಹುದು. ಪ್ರತಿಯೊಂದು ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ‘ಸಮಾನತೆ’ಯೇ ಮೂಲ ಮಂತ್ರವೆಂದು ಹೇಳುತ್ತಾರೆ. ಆದರೆ ಜನರಾಡುವ ಹಾಗೂ ಪ್ರಭುತ್ವದ ಬೆಂಬಲ ಪಡೆದ
ನುಡಿಗಳ ನಡುವೆ ಇಂತಹ ಯಾವುದೇ ಸಮಾನತೆಯ ಅಸ್ತಿತ್ವವೇ ಇರುವುದಿಲ್ಲ.
ಸಮಬಾಳು, ಸಮಪಾಲು, ಸಹಜೀವನ ಎಂಬಿತ್ಯಾದಿ ತತ್ವಗಳು ಇವತ್ತು ಕೇವಲ ರಾಜಕೀಯ ಪ್ರೇರಿತ ತತ್ವಗಳಾಗಿವೆ. ಹಾಗಾಗಿ ಇವುಗಳನ್ನು ಸಾಮಾಜಿಕವಾಗಿ ಹಾಗೂ ಭಾಷಿಕವಾಗಿ ನೆಲೆಗೊಳಿಸಲು ಸಾಧ್ಯವಾಗದೇ ಇರುವುದು ಪ್ರಜಾಪ್ರಭುತ್ವದ ಮತ್ತೊಂದು ಸವಾಲೆಂದೇ ಹೇಳಬೇಕು. ಸಮೂಹಗಳ ಬದುಕಿನ ಬಗೆಗೆ ವಹಿಸಬಹುದಾದ ಎಚ್ಚರಗಳಲ್ಲಿ ಅವರ ನುಡಿಗಳ ಕುರಿತ ನೀತಿ ಮತ್ತು ಯೋಜನೆಗಳು ಅತ್ಯಂತ ಮುಖ್ಯವಾಗಿರುತ್ತವೆ. ಸಮೂಹಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಏಳ್ಗೆಗೆ ಈ ನುಡಿ ನೀತಿ ಮತ್ತು ಯೋಜನೆಗಳು ಒತ್ತಾಸೆಯಾಗಿರುತ್ತವೆ. ಪ್ರಭುತ್ವಕ್ಕೆ ಈ ಪ್ರಜಾಸತ್ತಾತ್ಮಕ ನಿಲುವುಗಳನ್ನು ಹೊಂದುವುದಕ್ಕೆ ಸಾಧ್ಯವೇ ಇಲ್ಲವಾಗಲು ಕಾರಣವೇನೆಂದರೆ, ತನ್ನ ಅಧಿಕಾರ ಪ್ರಾಬಲ್ಯ ಮತ್ತು ಯಜಮಾನಿಕೆಯನ್ನು ಮಾತ್ರ ಕಾಪಾಡಿಕೊಳ್ಳುವ ಇರಾದೆಯೇ ಪ್ರಭುತ್ವಕ್ಕೆ ಮುಖ್ಯವಾಗುತ್ತದೆ. ಹಾಗಾಗಿ ಮೌಲ್ಯಗಳು ಕೇವಲ ಸಡಗರದ ಸಂಕೇತಗಳಾಗಿ ಮಾತ್ರ ನಮ್ಮಲ್ಲಿ ನೆಲೆಗೊಂಡಿರುತ್ತವೆ.
**
ಭಾಗ-2
ಅವಕಾಶಗಳು ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ
ಕರ್ನಾಟಕ ಸರಕಾರವು ಈಚೆಗೆ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ. ಇದೊಂದು ಸಹಜ ಪ್ರಕ್ರಿಯೆ. ಪ್ರತಿಯೊಂದು ರಾಜಕೀಯ ಪಕ್ಷವು ತಾನು ಅಧಿಕಾರಕ್ಕೆ ಬಂದ ಕೂಡಲೇ ತನ್ನ ತತ್ವ ಸಿದ್ಧಾಂತಗಳನ್ನು ಒಪ್ಪುವ ಇಲ್ಲವೇ ಒಪ್ಪಿದಂತೆ ನಟಿಸುವ ಮತ್ತು ಅವುಗಳನ್ನು ಅನುಸರಿಸುವವರನ್ನು ಅಥವಾ ಹಾಗೆ ಬಿಂಬಿಸಿಕೊಳ್ಳುವವರನ್ನು ಕರ್ನಾಟಕದ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷ ಹಾಗೂ ಸದಸ್ಯರನ್ನಾಗಿ ನೇಮಿಸುವುದು ವಾಡಿಕೆ. ಕೆಲವೊಂದು ಸಂದರ್ಭದಲ್ಲಿ ಈ ನಿಲುವಿಗೆ ವ್ಯತರಿಕ್ತವಾಗಿ ವಿದ್ವತ್ತು, ಸಾಂಸ್ಥಿಕ ಅನುಭವ, ದೂರದೃಷ್ಟಿ, ಸಮೂಹಗಳ ಏಳಿಗೆಗಾಗಿ ತುಡಿಯುವ ವ್ಯಕ್ತಿಗಳನ್ನೂ ಗುರುತಿಸಿ ನೇಮಿಸಲಾಗುತ್ತದೆ. ಆದರೆ ಯಾವುದೇ ಸರಕಾರ ಇಂತಹ ದಿಟ್ಟ ನಿಲುವುಗಳನ್ನು ತಾಳುವುದು ಅತ್ಯಂತ ಅಪರೂಪ ಮತ್ತು ಅಪವಾದವೂ ಆಗಿರುತ್ತದೆ. ಇತ್ತೀಚೆಗೆ ಇಂತಹ ಬೆಳವಣಿಗೆಗಳು ಕರ್ನಾಟಕದಲ್ಲಿ ತಲೆದೋರಿದ್ದು ದಿಟ. ಆದಾಗ್ಯೂ ಇದರಲ್ಲೇನೂ ಹೊಸತನವಿಲ್ಲ ಅನ್ನುವ ಅಭಿಪ್ರಾಯಗಳು ಕೂಡ ತೇಲಿಹೋದವು. ಕಾರಣ ಅವಕಾಶಗಳನ್ನು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಹಾಗೂ ಮಹಿಳಾ ಸಮೂಹಗಳ ವ್ಯಕ್ತಿಗಳಿಗೆ ಒದಗಿಸುವಲ್ಲಿ ಸಾಮಾಜಿಕ ನ್ಯಾಯವನ್ನು ಪರಿಗಣಿಸಿಲ್ಲ ಅನ್ನಲಾಗುತ್ತಿದೆ ಮತ್ತು ಈ ಅಭಿಪ್ರಾಯ ದಿಟವೂ ಆಗಿದೆ. ಕಣ್ಣೊರೆಸುವ ತಂತ್ರಗಳು ಕೂಡ ಇಲ್ಲಿ ನಡೆದಿರುವುದನ್ನು ಅಲ್ಲಗಳೆಯುವಂತಿಲ್ಲ. ಸಾಮಾಜಿಕ ನ್ಯಾಯ ಅನ್ನುವ ಪರಿಕಲ್ಪನೆ ರಾಜಕೀಯ ಮತ್ತು ತಾತ್ವಿಕ ಸಿದ್ಧಾಂತವನ್ನು ನೆಲೆಯಾಗಿಸಿಕೊಂಡಿರುವ ಬಗೆಯಾಗಿದೆ. ಹಾಗಾಗಿಯೇ ಸಾಮಾಜಿಕ ನ್ಯಾಯ ಅನ್ನುವುದು ಪ್ರತಿಯೊಂದು ಸಮುದಾಯದ ವ್ಯಕ್ತಿಗಳ ನಡುವಣ
ಸಂಬಂಧವನ್ನು ನ್ಯಾಯಸಮ್ಮತಗೊಳಿಸುವ ಮಾನದಂಡವೂ ಆಗಿರುತ್ತದೆ. ಅಂದರೆ, ಸಂಪತ್ತು, ಅವಕಾಶಗಳು ಮತ್ತು ಸಾಮಾಜಿಕ ಸೌಲಭ್ಯಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಅನ್ನುವ ತಾತ್ವಿಕ ನಿಲುವನ್ನು ಹೊಂದಿರುವ ಪರಿಕಲ್ಪನೆಯೇ ಈ ಸಾಮಾಜಿಕ ನ್ಯಾಯವಾಗಿದೆ.
ಈ ನಿಲುವಿನ ಪ್ರಕಾರ ಸಾಮಾಜಿಕ ನ್ಯಾಯ ಎಂಬ ವಿದ್ಯಮಾನವು ಭಾರತದಲ್ಲಿ ಇವತ್ತಿಗೂ ನೆಲೆಗೊಂಡಿರುವುದಿಲ್ಲ. ಏಕೆಂದರೆ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಕೇವಲ ರಾಜಕೀಯ ಸರಿತನದ ನೆಲೆಯಲ್ಲಿ ಮಾತ್ರ ಪರಿಗಣಿಸುವ ಜಾಯಮಾನ ನಮ್ಮದಾಗಿದೆ. ಭೂಮಿ, ಬಂಡವಾಳ, ಅಧಿಕಾರ ಮತ್ತು ರಾಜಕೀಯ ಪ್ರಾತಿನಿಧ್ಯದ ನಿಲುವುಗಳನ್ನು ಕುರಿತು ಮಾತನಾಡುವ ಒಂದೊಂದು ಸನ್ನಿವೇಶದಲ್ಲಿಯೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಬಗೆಗಿನ ಕಾಳಜಿಗಳು ಕೇವಲ ರಾಜಕೀಯ ಸರಿತನವನ್ನು ಪ್ರತಿಪಾದಿಸುವುದಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಸಾಮಾಜಿಕ ನ್ಯಾಯದ ಆಶಯಗಳನ್ನು ಗುರುತಿಸಿ, ಅವುಗಳನ್ನು ತಾತ್ವಿಕವಾಗಿ ಚರ್ಚಿಸುವ ನಾವು, ಆ ಎಲ್ಲ ಆಶಯಗಳನ್ನು ಆಚರಣೆಗಳನ್ನಾಗಿ ರೂಪಾಂತರಿಸುವಲ್ಲಿ ಸೋಲುತ್ತೇವೆ. ಏಕೆಂದರೆ, ಆಚರಣೆ ಅನ್ನುವುದು ಬರೀ ಅಧಿಕಾರ ಮತ್ತು ಸಂಪನ್ಮೂಲಗಳ ವಿಕೇಂದ್ರೀಕರಣಕ್ಕೆ ಮಾತ್ರ ಸೀಮಿತಗೊಳ್ಳದೇ, ನಾವು ಇದುವರೆಗೂ ಅನುಭವಿಸಿದ ಅಧಿಕಾರ, ಸಾಮಾಜಿಕ ಸೌವಲತ್ತು ಮತ್ತು ಸಾಂಸ್ಕೃತಿಕ ಹೆಗ್ಗಳಿಕೆ ಎಂಬೆಲ್ಲ ಅಧಿಕಾರ ಸಂಬಂಧಗಳನ್ನು ಕಳೆದುಕೊಳ್ಳುವ ಆತಂಕಕ್ಕೆ ಈಡಾಗುವ ಬಗೆಯೂ ಆಗಿರುತ್ತದೆ. ಅಧಿಕಾರ ಸಂಬಂಧಗಳನ್ನು ಕಳೆದುಕೊಳ್ಳುವುದೆಂದರೆ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಅಧಿಕಾರ, ಪ್ರಾತಿನಿಧ್ಯ ಹಾಗೂ ಪ್ರಾಬಲ್ಯವನ್ನು ತ್ಯಜಿಸುವ ದೃಢ ಸಂಕಲ್ಪವಾಗಿದೆ.
ಈ ಮಟ್ಟದ ಸಾಂಸ್ಕೃತಿಕ ಪಲ್ಲಟವನ್ನು ಏರ್ಪಡಿಸುವ ಇರಾದೆ ಇಲ್ಲವೇ ಪ್ರಜಾಸತ್ತಾತ್ಮಕ ಮನೋಭಾವ ಈ ಹೊತ್ತಿಗೂ ಮೇಲ್ವರ್ಗದ ಸಮೂಹಗಳಲ್ಲಿ ನೆಲೆಗೊಂಡಿಲ್ಲ. ಅಷ್ಟೆ ಅಲ್ಲದೇ, ಭಾರತ ದೇಶವು ‘ಪ್ರಜಾಪ್ರಭುತ್ವದ ತಾಯಿ’ ಎಂದು ಬೀಗುವ ನಮಗೆ, ನಮ್ಮಿಂದಲೇ ಶೋಷಣೆ, ದೌರ್ಜನ್ಯ, ಅಸ್ಪೃಶ್ಯತೆ, ಕೋಮುಭೇದ ಹಾಗೂ ಲಿಂಗ ತಾರತಮ್ಯಕ್ಕೆ ಒಳಗಾದ ಸಮೂಹಗಳ ಏಳಿಗೆಗಾಗಿ ತುಡಿಯುವುದು ಇರಲಿ, ಕೊನೆಯ ಪಕ್ಷ ಪ್ರಜಾಸತ್ತಾತ್ಮಕ ನಿಲುವುಗಳನ್ನು ತಾಳುವಷ್ಟು ಮಟ್ಟಿಗಾದರೂ ಪ್ರಜಾಪ್ರಭುತ್ವದ ಪಾಲಕರೂ ನಾವು ಆಗಿರುವುದಿಲ್ಲ. ಹಾಗಾಗಿ ಸಂಪನ್ಮೂಲ ಹಂಚಿಕೆ, ಸಮಾನ ನ್ಯಾಯ (ಇಕ್ವಿಟಿ), ಭಾಗವಹಿಸುವಿಕೆ, ವೈವಿಧ್ಯತೆಯ ಆಚರಣೆ ಹಾಗೂ ಮಾನವ ಹಕ್ಕುಗಳ ಪಾಲನೆ ಮೊದಲಾದ ಸಾಮಾಜಿಕ ನ್ಯಾಯದ ಮೂಲ ತತ್ವಗಳನ್ನು ಆಚರಣೆಗೆ ತರುವುದು ಅತ್ಯಂತ ದುಸ್ತರವೂ ಮತ್ತು ಅಸಾಧ್ಯವಾದ ಕೆಲಸವೇ ಆಗಿರುತ್ತದೆ. ಪ್ರಜಾಪ್ರಭುತ್ವದ ತಾಯಿ ಭಾರತವೆಂದು ಹೇಳುವಾಗ ತಾಯಿಯ ಮಮತೆ, ಕಾಳಜಿ, ಹೊಣೆಗಾರಿಕೆ ಹಾಗೂ ತಾನೇ ಪೊರೆದ ತನ್ನೆಲ್ಲ ಮಕ್ಕಳನ್ನು ಹೇಗೆ ಸಮಾನವಾಗಿ ಪೋಷಿಸಬೇಕು ಅನ್ನುವ ಬದ್ಧತೆಯನ್ನು ಭಾರತದಲ್ಲಿ ಅತ್ಯಂತ ಪ್ರಜ್ಞಾಪೂರಕವಾಗಿಯೇ ಮರೆಯಲಾಗಿದೆ. ಹಾಗಾಗಿ ಸಾಮಾಜಿಕ ನ್ಯಾಯ ಅನ್ನುವುದು ಕೇವಲ ಘೋಷಣೆಯಾಗಿ ಮಾತ್ರ ಕೇಳಿಸುತ್ತದೆ. ಯಾವುದೇ ಬಗೆಯ ಉದ್ದೇಶವನ್ನು ಈಡೇರಿಸಿಕೊಳ್ಳಲು ಹಲವು ದಾರಿಗಳು ಇರುತ್ತವೆ. ಈ ಎಲ್ಲ ದಾರಿಗಳು ಕೂಡ ಸಮಾನ ಪ್ರಾತಿನಿಧ್ಯವನ್ನು ಪಡೆದಿರುತ್ತವೆ ಎಂದು ಭಾವಿಸುವುದು ಸೂಕ್ತವಾದ ನಿಲುವು ಆಗಿರಲು ಸಾಧ್ಯವಿಲ್ಲ. ಆದ್ದರಿಂದ ಈ ಟಿಪ್ಪಣಿಯಲ್ಲಿ ನಾನು ಮಾತನಾಡಲು ಯೋಚಿಸಿದ ಹಾಗೂ ಚಿಂತಿಸಿದ ಪ್ರತಿಯೊಂದು ಸಂಗತಿಯನ್ನು ಕೇವಲ ಮಾತಿನಲ್ಲಿ ಹರಿಬಿಟ್ಟರೆ ಸಾಲದು ಎಂದು ನನಗೆ ಖಚಿತವಾಗಿ ಅನಿಸಿದೆ. ಆ ಎಲ್ಲ ಮಾತುಗಳನ್ನು ಇಲ್ಲಿ ದಾಖಲಿಸುತ್ತೇನೆ.
ದಲಿತತ್ವದ ಯಾವುದೇ ವಿಷಯವನ್ನು ಕುರಿತು ಚರ್ಚಿಸುವ ಪ್ರತೀ ಸನ್ನಿವೇಶವನ್ನೂ ದಾಖಲೀಕರಿಸುವ ಜರೂರಿದೆ. ಕಾರಣವೇನೆಂದರೆ, ಮಾತು ಇವತ್ತು ನಂಬಿಕೆಯ ವಿದ್ಯಮಾನವಾಗಿ ಉಳದಿಲ್ಲ. ಹಾಗಂತ ಬರಹ ನಂಬಿಕೆಯನ್ನು ಖಚಿತಪಡಿಸುತ್ತದೆ ಎಂದೂ ಹೇಳಲು ಸಾಧ್ಯವಿಲ್ಲ. ಆದರೆ ಚರಿತ್ರೆಯನ್ನು ಗ್ರಹಿಸುವ ಮತ್ತು ಪುನರ್ರಚಿಸುವ ಪ್ರಕ್ರಿಯೆಯಲ್ಲಿ ಬರಹ ಕೇವಲ ದಾಖಲೆಯಾಗದೇ, ಅದೊಂದು ಕಾಲದ ಸಾಕ್ಷಿಯೂ ಆಗುವ ಸಾಧ್ಯತೆಯಿದೆ. ಸಾಕ್ಷಿಗಳನ್ನು ಸಿದ್ಧಪಡಿಸುವುದಕ್ಕಾದರೂ ನಾವು ಕೇವಲ ಮಾತುಗಳನ್ನು ಆಡುವುದಷ್ಟೆ ಅಲ್ಲದೇ ಅವುಗಳನ್ನು ಚರಿತ್ರೆಯನ್ನು
ಕಟ್ಟುವುದಕ್ಕೆ ಬೇಕಾದ ಸಾಕ್ಷಿಗಳನ್ನಾಗಿ ರೂಪಿಸಬೇಕಿದೆ. ಹಾಗಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ರಾಜಕಾರಣ, ಶಿಕ್ಷಣ, ಹಾಗೂ ಸಾಮಾಜಿಕ ವ್ಯವಸ್ಥೆಯ ಭಾಗವಾಗಿ ಚರ್ಚಿಸುವುದು ಅತ್ಯಂತ ತುರ್ತಿನ ವಿದ್ಯಮಾನವಾಗಿದೆ. ಅಂದರೆ ಪ್ರಜಾಪ್ರಭುತ್ವದ ಆಚರಣೆ ಅನ್ನುವುದು ಸಾಮಾಜಿಕ ನ್ಯಾಯದ ಅನುಷ್ಠಾನವೇ ಆಗಿರುತ್ತದೆ.
**
ಭಾಗ – 3
ನಮ್ಮ ಸಂವಿಧಾನ: ಆಶಯ ಮತ್ತು ಆಚರಣೆ
ಸಮೂಹಗಳು ಎದುರಿಸುತ್ತಿರುವ ತೊಡಕುಗಳು ಎಂತಹವು ಅನ್ನುವ ಪ್ರಶ್ನೆಯ ಮೂಲಕ ನಮ್ಮ ಸಂವಿಧಾನದ ಆಶಯ ಮತ್ತು ಆಚರಣೆಗಳನ್ನು ಕುರಿತು ಚರ್ಚಿಸುವುದು ಸೂಕ್ತವೆಂದು ಕಾಣುತ್ತದೆ. ‘ವಿರೋಧಾಭಾಸಗಳಿಂದ ಕೂಡಿದ ಜೀವನವನ್ನು ನಾವು ಪ್ರವೇಶಿಸಲಿದ್ದೇವೆ’ ಎಂಬ ಈ ಮುನ್ನೆಚ್ಚರಿಕೆಯ ಮಾತನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ಅಂಗೀಕರಿಸುವ ಸನ್ನಿವೇಶದಲ್ಲಿ ಹೇಳಿದ್ದರು. ಅಂದರೆ ರಾಜಕೀಯವಾಗಿ ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದರೂ, ಆರ್ಥಿಕವಾಗಿ ಬಂಡವಾಳಶಾಹಿತ್ವವನ್ನು ಹಾಗೂ ಸಾಮಾಜಿಕವಾಗಿ ವರ್ಣ ವ್ಯವಸ್ಥೆ ಅಥವಾ ಧರ್ಮವನ್ನು ಒಪ್ಪಿಕೊಂಡಿರುವುದನ್ನು ಬಾಬಾ ಸಹೇಬರ ಈ ಮೇಲಿನ ಮಾತು ನಿಚ್ಚಳಪಡಿಸುತ್ತದೆ. ಹಾಗಾಗಿಯೇ ರಾಜಕೀಯ ಜೀವನದಲ್ಲಿ ನಾವು ಸಮಾನತೆಯನ್ನು ಹೊಂದಿದ್ದರು, ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಮಾತ್ರ ಅಸಮಾನತೆಯನ್ನು ಇವತ್ತಿಗೂ ಅನುಭವಿಸುತ್ತಿದ್ದೇವೆ. ಪರಿಣಾಮವಾಗಿ ಒಬ್ಬ ವ್ಯಕ್ತಿ ಒಂದು ಮತ ಮತ್ತು ಒಂದು ಮತ ಒಂದು ಮೌಲ್ಯ ಎಂಬ ತತ್ವವನ್ನು ರಾಜಕೀಯದಲ್ಲಿ ಗುರುತಿಸಿದಂತೆ, ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಗುರುತಿಸಲು ಇಂದಿಗೂ ನಮಗೆ ಸಾಧ್ಯವಾಗಿಲ್ಲ. ಏಕೆಂದರೆ ಈಗಾಗಲೇ ನೆಲೆನಿಂತಿರುವ ಸಾಮಾಜಿಕ ಮತ್ತು ಆರ್ಥಿಕ ರಚನೆಗಳ ಪರಿಣಾಮದಿಂದ ಒಬ್ಬ ವ್ಯಕ್ತಿ ಒಂದು ಮೌಲ್ಯ ಅನ್ನುವ ತತ್ವವನ್ನೇ ಸಂಪೂರ್ಣವಾಗಿ ಸಮೂಹಗಳಲ್ಲಿ ನಿರಾಕರಿಸಲಾಗಿದೆ.
ಇಂತಹ ವೈರುಧ್ಯ ಇಲ್ಲವೇ ವಿರೋಧಾಭಾಸಗಳನ್ನು ಮೀರಿ “ನಾವು ಭಾರತೀಯರು” ಅನ್ನುವ ಒಗ್ಗಟ್ಟನ್ನು ಮೆರೆಯಲು, ಅರಾಜಕತೆಯ ರೂಢಿಗಳನ್ನು ತ್ಯಜಿಸಬೇಕು, ವ್ಯಕ್ತಿ ಆರಾಧನೆಯನ್ನು ಕೈಬಿಡಬೇಕು ಮತ್ತು ಕೇವಲ ರಾಜಕೀಯ ಪ್ರಜಾಪ್ರಭುತ್ವವನ್ನು ಮಾತ್ರ ನೆಲೆಗೊಳಿಸುವ ಬದಲಾಗಿ ಸಾಮಾಜಿಕ ಪ್ರಜಾಪ್ರಭುತ್ವವನ್ನು ಒಡಮೂಡಿಸುವ ಕಡೆಗೆ ನಮ್ಮ ಗಮನವನ್ನು ಹರಿಸಬೇಕಿದೆ ಎಂದು 1949 ನವೆಂಬರ್ 26 ರಂದು ಸಂವಿಧಾನ ಸಭೆಯ ಕೊನೆಯ ಭಾಷಣದಲ್ಲಿ ಡಾ. ಅಂಬೇಡ್ಕರ್ ಅವರು ನೀಡಿದ ಈ ಮೂರು ಎಚ್ಚರಿಕೆಗಳನ್ನು ಪ್ರಸ್ತುತ ಸನ್ನಿವೇಶದಲ್ಲಿ ಅರಿಯಬೇಕಾದ ಜರೂರಿದೆ. ಭಾರತದಂತಹ ದೇಶದಲ್ಲಿ ವ್ಯಕ್ತಿ ಪೂಜೆ, ಅರಾಜಕತೆಯ ನಿಲುವುಗಳು ಹಾಗೂ ರಾಜಕೀಯ ಪ್ರಜಾಪ್ರಭುತ್ವದ ನೆಲೆಗಳು ಹೇಗೆ ಅಸ್ತಿತ್ವವನ್ನು ಪಡೆದುಕೊಳ್ಳುತ್ತಿವೆ ಎಂಬುದನ್ನು ನಿಗಾವಹಿಸಿ ನೋಡಬೇಕಾಗಿದೆ. ಪ್ರಜಾಪ್ರಭುತ್ವದ ಆಶಯ ಮತ್ತು ಆಚರಣೆಗಳ ನಡುವಣ ಅಂತರ ಇಲ್ಲವೇ ಕಂದಕಗಳನ್ನು ಅರಿಯುವುದೆಂದರೆ ಸಂವಿಧಾನದ ಬಗೆಗಿನ ಎಚ್ಚರ ಮತ್ತು ಅರಿವನ್ನು ಹೊಂದುವುದೇ ಆಗಿರುತ್ತದೆ. ಕಳೆದ ಏಳು ದಶಕಗಳಿಂದ ನಾವು ಅನುಸರಿಸಿಕೊಂಡು ಬಂದಿರುವುದು ಬಹುತೇಕವಾಗಿ ರಾಜಕೀಯ ಪ್ರಜಾಪ್ರಭುತ್ವದ ಪ್ರದರ್ಶನವೇ ಆಗಿರುತ್ತದೆ. ಹಾಗಾಗಿ ವ್ಯಕ್ತಿ ಮತ್ತು ಸಮುದಾಯಗಳ ಅಂತರ್ನಿಹಿತ ಘನತೆಯನ್ನು ಕಾಪಾಡುವ ಬಗೆಗಳು ಎಂತಹವು ಅನ್ನುವುದು ನಮ್ಮ ಅರಿವಿಗೆ ಬರಲೇ ಇಲ್ಲ. ಕೋಮುವಾದ ತಾಂಡವಾಡುತ್ತಿರುವ ಈ ಸನ್ನಿವೇಶದಲ್ಲಾದರೂ ನಮ್ಮ ಸಂವಿಧಾನದ ಆಶಯಗಳನ್ನು ಮನವರಿಕೆ ಮಾಡಿಕೊಳ್ಳಬೇಕಿದೆ.
ಸಂವಿಧಾನದ ಆಶಯಗಳು
ಸಂವಿಧಾನ ಮುಖ್ಯ ಏಕೆಂದರೆ, ಜನಾಭಿಪ್ರಾಯ ಮತ್ತು ಜನರ ಪ್ರಾತಿನಿಧ್ಯದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ನಮ್ಮ ಜನನಾಯಕರಿಗೆ ಮತ್ತು ಅಧಿಕಾರ ಕೇಂದ್ರದಲ್ಲಿ ಇರುವವರಿಗೆ ಇದು ನೀಡುತ್ತದೆ. ಇಂತಹ ಅಧಿಕಾರವನ್ನು ಹೊಂದಿರುವ ಮತ್ತು ಅದನ್ನು ಜನರ ಮೇಲೆ ಚಲಾಯಿಸುವ ಪ್ರತಿಯೊಬ್ಬರೂ, ಯಾವ ರೀತಿಯಲ್ಲಿ ಆಯಾ ಜನರಿಗೆ ಉತ್ತರದಾಯಿಗಳು ಆಗಿರಬೇಕು ಅನ್ನುವುದನ್ನು ಇದು ವಿವರಿಸುತ್ತದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಖಾತರಿಪಡಿಸುವಲ್ಲಿ ನಮ್ಮ ಸಂವಿಧಾನದ ಪಾತ್ರ ಅಗಾಧವಾಗಿದೆ ಅನ್ನುವುದು ಅತ್ಯಂತ ಗಮನಾರ್ಹವಾದ ಸಂಗತಿ. ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವ ಘನತೆಯನ್ನು ಕಾಪಾಡುವಲ್ಲಿ ಈ ಹಕ್ಕುಗಳು ಹೇಗೆ ಒತ್ತಾಸೆಯಾಗಬಲ್ಲವು ಅನ್ನುವ ವಿವೇಕವನ್ನೂ ಈ ನಮ್ಮ ಸಂವಿಧಾನ ನೆಲೆಗೊಳಿಸುತ್ತದೆ. ಒಕ್ಕೂಟ (ಕೇಂದ್ರ) ಸರಕಾರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿ ಮತ್ತು ವಿಕೇಂದ್ರೀಕರಣದ ಸ್ವರೂಪವನ್ನು ಸಂವಿಧಾನ ಅತ್ಯಂತ ನಿಚ್ಚಳವಾಗಿ ಅರ್ಥೈಸುತ್ತದೆ. ಅಷ್ಟೆ ಅಲ್ಲದೇ ಭಿನ್ನ ರಾಜಕೀಯ ದೃಷ್ಟಿಕೋನಗಳನ್ನು ಹೊಂದುವ ಅವಕಾಶವನ್ನು ಸಂವಿಧಾನ ಅನುಮೋದಿಸುತ್ತದೆಯೇ ಹೊರತು ಅದು ಆರೋಪಿಸುವುದಿಲ್ಲ. ಸಂವಿಧಾನವೆಂದರೆ ಒಪ್ಪಿಗೆಯೇ ಆಗಿರುತ್ತದೆ ಹಾಗಾಗಿ ಅದೊಂದು ಹೇರಿಕೆ ಆಗುವ ಯಾವ ಸಾಧ್ಯತೆಯೂ ಇಲ್ಲ.
ಸಂವಿಧಾನ ಸಾಕಾರಗೊಳ್ಳುವ ಬಗೆ
ನಮ್ಮ ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳನ್ನು ಸಾಧಿಸಲು ಈ ಸಂವಿಧಾನಾತ್ಮಕ ವಿಧಾನಗಳು ಒತ್ತಾಸೆಯಾಗುತ್ತವೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದೆಂದರೆ ಸಮುದಾಯಗಳಲ್ಲಿ ಅಹಿಂಸಾತ್ಮಕ ಮನೋಬಲವನ್ನು ರೂಪಿಸಿಕೊಳ್ಳುವುದು. ಇದರರ್ಥ ಸಮುದಾಯಗಳ ನಡುವೆ ನಾಗರಿಕ ಸಹಕಾರ, ಪರಸ್ಪರ ತಾಳಿಕೆಯ ಗುಣ ಮತ್ತು ಸತ್ಯಾಗ್ರಹದ ವಿಧಾನವನ್ನು ಅನುಸರಿಸುವ ನಿಲುವುಗಳು ಅಸ್ತಿತ್ವವನ್ನು ಪಡೆಯಬೇಕಿದೆ. ಆರ್ಥಿಕ ಮತ್ತು ಸಾಮಾಜಿಕ ಉದ್ದೇಶಗಳನ್ನು ಸಾಧಿಸಲು ಸಂವಿಧಾನಾತ್ಮಕ ವಿಧಾನಗಳಿಗೆ ಹೊರತಾದ ಬೇರೆ ಯಾವುದೇ ಮಾರ್ಗವಿರುವುದಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಪ್ರಕಾರ ಅಸಂವಿಧಾನಾತ್ಮಕ ವಿಧಾನಗಳಿಗೆ ಸಾಕಷ್ಟು ಸಮರ್ಥನೆ ಹಿಂದೆಯೂ ಇತ್ತು ಮತ್ತು ಇವತ್ತಿಗೂ ಇದೆ. ಆದರೆ ಸಂವಿಧಾನಾತ್ಮಕ ವಿಧಾನಗಳು ಸಾಮಾಜಿಕ ವಿವೇಕ ಮತ್ತು ಸಮೂಹಗಳ ಅನುಭವವಾಗಿ ನೆಲೆಗೊಂಡರೆ, ಸಮಾನ ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯವನ್ನು ಸಾಕಾರಗೊಳಿಸಲು ನಮಗೆ ಸಾಧ್ಯವಾಗುತ್ತದೆ. ಸಂವಿಧಾನದಲ್ಲಿ ಒಡಮೂಡಿದ ಪ್ರತಿಯೊಂದು ಆಶಯವು ಈ ದೇಶದ ಪ್ರತಿ ವ್ಯಕ್ತಿಯ ಬದುಕಿನ ಹಕ್ಕು ಮತ್ತು ಘನತೆಯನ್ನು ಎತ್ತಿಹಿಡಿಯುವ ಮಾಧ್ಯಮವಾಗಿ ಸಂವಿಧಾನ ನಮಗೆ ಒದಗಿ ಬಂದಿದೆ. ಅಂದರೆ ಸಮುದಾಯಗಳ ಏಳ್ಗೆಯನ್ನು ಕಾಪಾಡುವ ಮತ್ತು ಅವುಗಳ ಕೈಹಿಡಿದು ನಡೆಸುವ ಊರುಗೋಲಾಗಿ ಸಂವಿಧಾನ ನಮಗೆ ಒದಗಿಬರಬೇಕು. ಆಶಯ ಮತ್ತು ಆಚರಣೆಗಳ ನಡುವಣ ಅಂತರಗಳು ನಾಶಗೊಳ್ಳದೇ ಸಮೂಹಗಳ ವಿಕಾಸ ನೆರವೇರಲು ಸಾಧ್ಯವಿಲ್ಲ. ರಾಜಸತ್ತೆಯ ಪ್ರಾಬಲ್ಯದಿಂದ ಬಿಡುಗಡೆಗೊಳಿಸಿ ಪ್ರಜಾಸತ್ತೆಯ ನಡೆಗಳನ್ನು ನಿರಂತರವಾಗಿ ನೆಲೆಗೊಳಿಸಲು ನಮ್ಮ ಸಂವಿಧಾನ ದಾರಿದೀಪವಾಗಿ ಪರಿಣಮಿಸಬೇಕಿದೆ.
**
ಭಾಗ-4
ವರ್ತಮಾನದ ಬಿಕ್ಕಟ್ಟುಗಳಿಗೆ ಸಾಕ್ಷಿಗಳು ಯಾವವು?
ಬದುಕಿನಲ್ಲಿ ನಾವು ಎದುರುಗೊಳ್ಳುವ ಒಂದೊಂದು ಸಂಗತಿಯೂ ಈಗಾಗಲೇ ಅರ್ಥೈಸಿದ ಇಲ್ಲವೇ ವ್ಯಾಖ್ಯಾನಿಸಿದ ವಿಷಯವೇ ಆಗಿರುತ್ತದೆ ಎಂದು ಹೇಳಿದರೂ, ನಾವು ಅದನ್ನು ಹಾಗೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂದರೆ ಚರಿತ್ರೆ, ಸಂಸ್ಕೃತಿ, ರಾಜಕಾರಣ, ಧರ್ಮ, ಜಾತಿ ಹಾಗೂ ಲಿಂಗ ಮುಂತಾದ ವಿದ್ಯಮಾನಗಳಿಗೆ ಸಂಬಂಧಿಸಿದ ಯಾವುದೇ ವಿಷಯವಾದರೂ ಸರಿ ಅದನ್ನು ಈಗಾಗಲೇ ವ್ಯಾಖ್ಯಾನಿಸಿ ನಮಗೆ ಒಪ್ಪಿಸಲಾಗಿರುತ್ತದೆ. ಈ ಒಪ್ಪಿತ ನಿಲುವು ನಮ್ಮ ಬದುಕಿಗೆ ಮಾರ್ಗದರ್ಶಿ ಆಗಿರುತ್ತದೆ ಅನ್ನುವ ನಂಬಿಕೆಯೂ ನಮ್ಮ ಸಮುದಾಯದಲ್ಲಿರುತ್ತದೆ. ಇದನ್ನು ಮೀರಿದ ಇಲ್ಲವೇ ಇದಕ್ಕೆ ವ್ಯತರಿಕ್ತವಾದ ಬೇರೊಂದು ಹಾದಿಯನ್ನು ನಾವು ತುಳಿಯುವಂತಿಲ್ಲ ಅನ್ನುವ ನಂಬಿಕೆಯೂ ನಮ್ಮಲ್ಲಿ ಅತ್ಯಂತ ಗಟ್ಟಿಯಾಗಿ ನೆಲೆಗೊಂಡಿರುತ್ತದೆ. ಹೀಗೆ ನೆಲೆಯೂರಿದ ಇಂತಹ ನಿಲುವುಗಳನ್ನು ಪ್ರಶ್ನೆ ಮಾಡುವ ಹಾಗೂ ಪರ್ಯಾಯ ಚಿಂತನೆಯ ನೆಲೆಗಳನ್ನು ಕಂಡುಕೊಳ್ಳುವ ಪ್ರಯತ್ನವೂ ಗಮನಾರ್ಹವಾಗಿದೆ. ಯತಾಸ್ಥಿತಿ ಗ್ರಹಿಕೆಗಳನ್ನು ಪರಿಶೀಲಿಸಿ, ಅವುಗಳಿಗೆ ಪರ್ಯಾಯ ಮಾದರಿಗಳನ್ನು ರೂಪಿಸುವ ಹೊಣೆ ನಮ್ಮ ಅರಿವಿನ ಲೋಕದ ಮೇಲಿದೆ. ಹಾಗಾಗಿ ನಮಗೆ ಎದುರಾಗುವ ಈ ಹೊತ್ತಿನ ಬಿಕ್ಕಟ್ಟುಗಳನ್ನು ಕುರಿತು ಯೋಚಿಸುವ ಜರೂರಿದೆ. ಪ್ರಜಾಪ್ರಭುತ್ವವೇ ಈ ಬಿಕ್ಕಟ್ಟುಗಳಲ್ಲಿ ಮುಖ್ಯವಾಗಿ ನಾವು ಮಾತನಾಡಬೇಕಾಗಿರುವ ಸಂಗತಿಯಾಗಿದೆ.
ವರ್ತಮಾನ ಅನ್ನುವುದು ಬಿಕ್ಕಟ್ಟಿನ ಸೂಚಕವೇ ಆಗಿರುತ್ತದೆ. ಪ್ರತಿಯೊಂದು ತಲೆಮಾರಿಗೆ ಎದುರಾಗುವ ಬಿಕ್ಕಟ್ಟು ಯಾವುದೆಂದರೆ, ಆಯಾ ತಲೆಮಾರು ಬಾಳಿ ಬದುಕುವ ಕಾಲಘಟ್ಟವೇ ಆ ಬಿಕ್ಕಟ್ಟನ್ನು ವಿವರಿಸುವ ಬಗೆಯೂ ಆಗಿರುತ್ತದೆ. ಆದರೆ ಬಿಕ್ಕಟ್ಟಿನ ಸ್ವರೂಪ ಬದಲಾಗಿರುತ್ತದೆ ಹಾಗೂ ಅದನ್ನು ವಿವರಿಸುವ ಮಾನದಂಡಗಳು ಕೂಡ ಭಿನ್ನವಾಗಿರುತ್ತವೆ. ತಲೆಮಾರುಗಳ ನಡುವಣ ಕಂದಕವೇ ಆಗಲೀ ಇಲ್ಲವೇ ಸಾತತ್ಯತೆಯಾಗಲೀ ಕಾಲದ ಮನೋಧರ್ಮವನ್ನು ವಿವರಿಸುವಾಗೆಲ್ಲ ಕಾಲ ಸರಿಯಿಲ್ಲ ಕೆಟ್ಟಿದೆ ಎಂದು ಗೊಣಗುವುದನ್ನು ಎಲ್ಲ ಕಾಲದಲ್ಲಿಯೂ
ಕೇಳುತ್ತಲೇ ಬಂದಿದ್ದೇವೆ. ಆದರೆ ಪ್ರಜಾಪ್ರಭುತ್ವದ ಬಗೆಗಿನ ಹಂಬಲ ಮತ್ತು ಪ್ರಜಾಸತ್ತಾತ್ಮಕ ನಿಲುವುಗಳ ತುಡಿತ ಎಲ್ಲ ಕಾಲಕ್ಕೂ ಸಲ್ಲುವ ನೀತಿಗಳೂ ಹೌದು ಹಾಗೂ ತತ್ವಗಳೂ ಹೌದು. ಯಾವುದೇ ಬಹುಸಾಂಸ್ಕೃತಿಕ ಹಾಗೂ ಬಹುಭಾಷಿಕ ದೇಶದ ಸೌಂದರ್ಯ ನಿರಂತರಗೊಳ್ಳಲು ಮತ್ತು ಆಯಾ ದೇಶದ ಜನರ ಸಾಮಾಜಿಕ ವಾತಾವರಣ ಸ್ನೇಹಪರವಾಗಿರಲು ಪ್ರಜಾಪ್ರಭುತ್ವವೇ ಮೂಲಮಂತ್ರವಾಗಿದೆ. ತಂತ್ರಜ್ಞಾನ. ವಿಜ್ಞಾನ ಹಾಗೂ ಜಾಗತೀಕರಣದ ಈ ಭರಾಟೆಯಲ್ಲಿ ನಮ್ಮ ಬದುಕುಗಳು ಬದುಕಗಳಾಗಿಯೇ ಮುಂದುವರಿಯಲು ಪ್ರಜಾಸತ್ತಾತ್ಮಕ ನಡೆ ಮತ್ತು ನುಡಿಗಳು ನಲೆಗೊಂಡಾಗ ಮಾತ್ರ ಸಾಧ್ಯ.
0 ಪ್ರತಿಕ್ರಿಯೆಗಳು