ಅಂತರಂಗದಲ್ಲಿ ಮೂಡುವ ಶ್ರೀರಾಮನ ಚಿತ್ರ..

ಎಸ್‌.ಆರ್‌. ವಿಜಯಶಂಕರ

ಭಾರತ ದೇಶ ಸಾರ್ವಜನಿಕವಾಗಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯ ಸಂಭ್ರಮದಲ್ಲಿರುವಾಗ ನನಗೆ ನನ್ನ ಅಂತರಂಗದ ರಾಮ ಕಾಣುತ್ತಿದ್ದಾನೆ. ಈ ರಾಮ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಮ. ಈ ರಾಮನ ಮೂರ್ತಿಯನ್ನು ನನ್ನ ಹೃದಯ ಮಂದಿರದಲ್ಲಿ ಸ್ಥಾಪಿಸಿ ಕೊಟ್ಟುದು ಕನ್ನಡ ಸಾಹಿತ್ಯ. ಹಳೆಗನ್ನಡ, ನಡುಗನ್ನಡಗಳನ್ನು ಬಿಟ್ಟರೂ ಹೊಸಗನ್ನಡ ಸಾಹಿತ್ಯ ನನಗೆ ನೀಡಿದ ವೈವಿಧ್ಯಮಯ ರಾಮನ ಚಿತ್ರಗಳು ನನ್ನ ಮನಃಪಟಲದಲ್ಲಿ ಮೂಡುತ್ತಿವೆ. ಅದು ಕೇವಲ ಬಿಲ್ಲು ಹಿಡಿದ ವೀರಯೋಧ ರಾಮನ ಚಿತ್ರ ಮಾತ್ರವಲ್ಲ.

ಕುವೆಂಪು, ಡಿವಿಜಿ, ಮಾಸ್ತಿ, ಬೇಂದ್ರೆ, ವಿ.ಸೀ. ದೇರಾಜೆ, ಮಿರ್ಜಿ ಅಣ್ಣಾರಾಯ (ಜೈನ ರಾಮಾಯಣ), ಗೋಪಾಲಕೃಷ್ಣ ಅಡಿಗ, ಎಚ್.ಎಸ್. ವೆಂಕಟೇಶ ಮೂರ್ತಿ‌, ವೀರಪ್ಪ ಮೊಯ್ಲಿ, ಸಿ.ಎನ್. ಶ್ರೀನಿವಾಸ ಅಯ್ಯಂಗಾರ್ (ಕನ್ನಡ ವಾಲ್ಮೀಕಿ ರಾಮಾಯಣ) ಈಚೆಗೆ ಎಸ್.ಎಲ್. ಭೈರಪ್ಪ , ತುಳುವಿನಿಂದ ಬಂದ ಮಂದಾರ ರಾಮಾಯಣ ಮತ್ತು ಬನ್ನಂಜೆ ಗೋವಿಂದಾಚಾರ್ಯ, ಕೆ.ವಿ. ಅಕ್ಷರ ಸೇರಿದಂತೆ ಹಲವು ಅನುವಾದಗಳು- ಹೀಗೆ ರಾಮಾಯಣದ ವೈವಿಧ್ಯ. ಇದಲ್ಲದೆ ಯಕ್ಷಗಾನ ಪ್ರಿಯರಿಗಂತೂ ಪಾರ್ತಿಸುಬ್ಬನು ರಾಮಾಯಣವನ್ನು ಆಧರಿಸಿ ರಚಿಸಿದ ಎಂಟು ಪ್ರಸಂಗಗಳು ನಿತ್ಯವೂ ಕೇಳಲು, ನೋಡಲು ಸಿಗುತ್ತವೆ. ಅಲ್ಲಿಯಂತೂ ಶೇಣಿ, ಸಾಮುಗ, ಪ್ರಭಾಕರ ಜೋಷಿ, ಉಮಾಕಾಂತ ಭಟ್ಟ, ಜಬ್ಬರ್ ಸ.ಮೊ. ಹೀಗೆ ಹಲವರ ಹೊಸ ವ್ಯಾಖ್ಯಾನಗಳ ನಿತ್ಯ ಪಾಠ.

ಇವೆಲ್ಲವೂ ತಿಳಿಸುವುದೆಂದರೆ, ಸಾರ್ವಜನಿಕ ರಾಮನ ಚಿತ್ರ ಏಕೋದ್ದೇಶದ, ಏಕ ಚಿತ್ರದ ರಾಮನದ್ದಾಗಿದ್ದರೂ, ಸಾಹಿತ್ಯದ ಏಕಾಂತದ ಓದಿನಲ್ಲಿ ಶ್ರೀರಾಮ ಅವನ ಬಹುತ್ವದಲ್ಲೇ ಕಾಣಿಸುತ್ತಿದ್ದಾನೆ. ಸುಮಾರು ಒಂದು ಶತಮಾನದ ಹಿಂದೆ ತಮ್ಮ ಆದಿಕವಿ ವಾಲ್ಮೀಕಿ ಕೃತಿಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ವಾಲ್ಮೀಕಿಯನ್ನು ಕಾವ್ಯಧರ್ಮದಿಂದ ಓದಬೇಕು ಎಂದರು. ನಿತ್ಯ ಮನೆಯಲ್ಲಿ ವಾಲ್ಮೀಕಿ ರಾಮಾಯಣವನ್ನು ಪೂಜೆಯ ಭಾಗವಾಗಿ ಪಾರಾಯಣ ಮಾಡುತ್ತಿದ್ದ ಮಾಸ್ತಿಯವರು ತಮ್ಮ ಶ್ರೀರಾಮ ಪಟ್ಟಾಭಿಷೇಕ ಕೃತಿಯನ್ನು ರಾಮಾಯಣದ ಹಲವು ಪವಾಡಗಳನ್ನು ಬಿಟ್ಟು ಬರೆದರು. ಅವರ ಹನುಮಂತ ದೊಡ್ಡ ನೀರಿನ ರಾಶಿಯನ್ನು ಈಜಿ ದಾಟಿ ಲಂಕೆಗೆ ಹೋಗುವವನು. ರಾಮಾಯಣದಲ್ಲಿ ಮಾಸ್ತಿಯವರಿಗೆ ರಾಮನ ಪೌರುಷಕ್ಕಿಂತಲೂ ಹೆಚ್ಚು ನಂಬಿಕೆ ಮನುಷ್ಯನ ನೇರವಾದ ನಡೆನುಡಿಗಳ ಬಗ್ಗೆ. ಶ್ರೀರಾಮ ಪಟ್ಟಾಭಿಷೇಕದಲ್ಲಿ ಅವರು ಹೇಳುತ್ತಾರೆ; “ನಡೆನುಡಿ ನೇರ ಇದ್ದಾಗ ಲೋಕವನು ನಡೆಸುವ ಋತ ನಮ್ಮನು ಮಗುವಂತೆ ಕಾಪಾಡುವುದು.” ಇಂತಹ ನೇರ ನಡೆನುಡಿ ನಮ್ಮ ಸಾರ್ವಜನಿಕ ಜೀವನಕ್ಕೂ ಅನ್ವಯಿಸಿದಾಗ ಮಾತ್ರ ನಮ್ಮ ಸಂಸ್ಕೃತಿ ಉಜ್ವಲವಾಗಲು ಸಾಧ್ಯ.

ಕುವೆಂಪು ಅವರ ʼಶ್ರೀರಾಮಾಯಣ ದರ್ಶನಂʼ ಕೃತಿಯ ʼಶ್ರೀ ಸಂಪುಟಂʼ ನಲ್ಲಿ ʼರೈಯ್ ಗೆ ಕರೆದೊಯ್, ಓ ಅಗ್ನಿʼ ಸಂಚಿಕೆಯಲ್ಲಿ ಕುವೆಂಪು ಅವರು ರಾಮನ ವಿಮರ್ಶಾತ್ಮಕ ವಿಶ್ಲೇಷಣೆ ಮಾಡುತ್ತಾರೆ. ಈ ಲೋಕದ ಅಪವಾದದಲ್ಲಿ ಬೇಯುವುದಕ್ಕಿಂತ ನಿಜವಾದ ಬೆಂಕಿಯೇ ʼರಯ್‌ʼ (ಚೆಲುವಾದದ್ದು, ಸುಂದರವಾದದ್ದು, ರಮ್ಯವಾದದ್ದು) ಎಂಬುದು ಕುವೆಂಪು ಅವರ ಭಾವ.

ಯುದ್ಧದಲ್ಲಿ ಗೆದ್ದು ಏಕಾಂತದಲ್ಲಿ ಪತ್ನಿಯನ್ನು ಕಾಣದೆ ಸಾರ್ವಜನಿಕ ಸಭೆಗೆ ಸೀತೆಯನ್ನು ಕರೆಸಿದ್ದಾನೆ ಶ್ರೀರಾಮ. ಕುವೆಂಪು ಹೇಳುವಂತೆ, ರಾಮನ ಮಾತುಗಳಿಂದ ಬೆನ್ನಿಗೆ ಬಡಿಗೆಯಿಂದ ಹೊಡೆದಂತಾಗಿ ಸೀತೆ ಬಾಗುತ್ತಾಳೆ. ರಾಮ ಅವಳನ್ನು ಕಡೆಗಣ್ಣಿನ ಉಪೇಕ್ಷೆಯಿಂದ ನೋಡುತ್ತಿದ್ದಾನೆ. ಅವಳು ಅಗ್ನಿಪ್ರವೇಶದ ಮೊದಲು ದಿಂಡುರಳಿ “ತೊಳೆದಳಾ| ಪಾದಂಗಳಂ, ಗೌತಮ ಸತಿಯ ಶಾಪ ಕಿಲ್ಬಿಷ| ವಿಮೋಚನಾ ಪೂಜ್ಯಂಗಳಂ.” ಕುವೆಂಪು ನಿರೂಪಕನ ಧ್ವನಿ ಎಷ್ಟು ವ್ಯಂಗ್ಯವಾಗಿದೆ ಎಂದರೆ, ಶೀಲದ ಬಗೆಗೆ ಗಂಡನಿಂದ ಆಪಾದನೆ ಹೊತ್ತು ಕಲ್ಲಾಗಿದ್ದ ಅಹಲ್ಯೆಯ ಶಾಪ ವಿಮೋಚನೆ ಮಾಡಿದ ರಾಮನ ಪಾದಗಳನ್ನು ಪುನಃ ಶೀಲದ ಬಗೆಗೆ ಗಂಡನಿಂದ ಅಪವಾದ ಕೇಳಿದ ಸೀತೆ ತನ್ನ ಕಣ್ಣೀರಿನಿಂದ ತೊಳೆಯುತಿದ್ದಾಳೆ. ಕುವೆಂಪು ಅವರು ಚಿತ್ರಿಸಿರುವ ಈ ಸಾಹಿತ್ಯ ಚಿತ್ರವನ್ನು ಎಷ್ಟು ಬೇಕಾದರೂ ವಿವರಿಸಬಹುದು.

ನಮ್ಮ ಕವಿಗಳು ರಾಮನ ಬಗ್ಗೆ ಕಟುವಾಗಿ ಹೇಳಬೇಕಾದಾಗ ಹಾಗೆ ಹೇಳಲು ಹಿಂಜರಿಯಲಿಲ್ಲ. ಹಾಗೆಯೇ ನಮ್ಮ ಭಕ್ತರು ಕೂಡಾ. ನನ್ನ ಅಜ್ಜ ಮಧ್ಯಾಹ್ನ ಪೂಜೆಯ ಮಂಗಳಾರತಿ ಮಾಡಿ ಶ್ರೀರಾಮಚಂದ್ರ ಕಾಪಾಡಪ್ಪ ಎಂದು ದೀರ್ಘದಂಡ ನಮಸ್ಕಾರ ಮಾಡುತ್ತಿದ್ದರು. ಆದರೆ ಸಂಜೆ ಚಾವಡಿಯಲ್ಲಿ ತಮ್ಮ ಗೆಳೆಯರೊಡನೆ ರಾಮ ಸೀತೆಯನ್ನು ಕಾಡಿಗಟ್ಟಿದುದು ಸರಿಯಲ್ಲ ಎಂದು ವಾದಿಸುತ್ತಿದ್ದರು. ಅಗ್ನಿಪರೀಕ್ಷೆಯಾದ ಸತಿ ಅವಳು. ನಮ್ಮ ಮನೆ ಮಗಳನ್ನು, ಯಾಕೆ ನಮ್ಮ ಊರಿನ ಹೆಣ್ಣು ಮಗಳನ್ನು ಯಾವನೇ ಗಂಡ ಹೀಗೆ ಬಿಟ್ಟರೆ ನಾವು ಸಹಿಸಿಯೇವೆಯೆ? ಆ ಹುಡುಗನನ್ನು ಹಿಡಿದು ನಿಲ್ಲಿಸಿ ಯಾಕೆ ಹೀಗೆ ಮಾಡಿದೆ? ನಮ್ಮ ಹುಡುಗಿಯ ತಪ್ಪೇನು ಎಂದು ಕೇಳುವುದಿಲ್ಲವೇ? ಎಂದು ವಾದಿಸುತ್ತಿದ್ದರು. ತನ್ನ ಮಗನಿಗೇ ರಾಮ ಎಂದು ಹೆಸರಿಟ್ಟ ಅಜ್ಜನ ವಾದ ಇದು. ನಮ್ಮ ಸಮಾಜದ ಬಹುತ್ವ ಎಂದರೆ ಇದು. ಇಂತಹ ವಿಮರ್ಶೆಯನ್ನು ಸಹಿಸುವ ಶಕ್ತಿಯನ್ನು ಸಮಾಜ ಕಳೆದುಕೊಳ್ಳಬಾರದು.

ಮಾಸ್ತಿಯವರ ʼನವರಾತ್ರಿʼ ಕಥನ ಕವನಗಳ ಗುಚ್ಚಗಳಲ್ಲಿ ʼನಾಮದ ಮಹಿಮೆʼ ಎಂಬೊಂದು ಕವನವಿದೆ. ಅದನ್ನು ನವರಾತ್ರಿಯಲ್ಲಿ ಗೆಳೆಯರಿಗೆ ಹೇಳಿದವರು ದತ್ತ ೋಜಿ ( ದ.ರಾ. ಬೇಂದ್ರೆ) ಎಂದು ನಿರೂಪಕ ಹೇಳುತ್ತಾನೆ. ಸಮುದ್ರಕ್ಕೆ ಸೇತುವೆ ಕಟ್ಟುವಾಗ ಸೇನಾಧಿಪತಿ ನೀಲ ಹಾಕಿದ ಕಲ್ಲುಗಳು ತೇಲುತ್ತಿರುತ್ತವೆ. ಕಾರಣವೇನೆಂದು ಶ್ರೀರಾಮ ನೋಡಲು ನೀಲನ ತಂತ್ರ ಬಹು ಸರಳ. ಪ್ರತಿ ಕಲ್ಲಿನಲ್ಲೂ ಶ್ರೀರಾಮ ಎಂದು ಬರೆದಿರುತ್ತಾನೆ. ಪರೀಕ್ಷಿಸುವುದಕ್ಕಾಗಿ ಇರುಳಲ್ಲಿ ಶ್ರೀರಾಮನೇ ಒಂದು ಕಲ್ಲನ್ನು ಸಮುದ್ರಕ್ಕೆ ಹಾಕಿದಾಗ ಅದು ಮುಳುಗಿ ಹೋಗುತ್ತದೆ. ದೇವರೇ ಕೈಬಿಟ್ಟಾಗ ಬೇರೆ ಯಾರು ತೇಲಿಸಬಲ್ಲರು? ಅದು ಮುಳುಗಲೇ ಬೇಕಷ್ಟೇ ಎಂಬುದು ಭಾವ.

ಮಾಸ್ತಿಯವರ ʼರಾಮನವಮಿʼ ಕಥನಕವನ ಹೇಳುವುದು ಶ್ರೀರಾಮ ಅಯೋಧ್ಯೆಯಲ್ಲಿ ಮಾತ್ರ ಇರುವವರಲ್ಲ. ಎಲ್ಲಾ ಕಡೆ ಇರುವವ ರಾಮ. ಬೋವನಹಳ್ಳಿಗೆ ರಾಮ, ಸೀತೆ, ಲಕ್ಷ್ಮಣರು ಬಂದ ಕತೆ ಹೇಳಿ ಅಲ್ಲಿಯ ನೀರಿನ ಬಾವಿ ಆರದಿರಲು, ಬಸರಿಯ ಮರ ಒಣಗದಿರಲು ಸೀತೆಯ ವರ ಕಾರಣ ಎಂಬುದನ್ನು ಕವನ ವಿವರಿಸುತ್ತದೆ. ರಾಮನವಮಿ ದಿನ ಆ ಹಳ್ಳಿಗೆ ರಾಮ ಸೀತೆ ಬರುತ್ತಾರೆ, ಪುಣ್ಯವಂತರ ಕಣ್ಣಿಗೆ ಕಾಣುತ್ತಾರೆ ಎಂಬುದು ನಂಬಿಕೆ. ಕೊನೆಗೂ ಕವನ ಹೇಳುವುದು ಪ್ರತಿ ನಮ್ಮೆಲ್ಲರ ಮನೆ ಮತ್ತು ಹೃದಯಗಳು ಶ್ರೀರಾಮನ ಜನ್ಮಸ್ಥಳ ಎಂಬುದನ್ನು. “ಮಾತಿನ ಜಾಣರು ಮನೆ ಮಗ ರಾಮ|ಎಲ್ಲ ಹೆಣ್ಣು ಸೀತೆ,| ಎಂದು ಹೇಳುವುದು ಕೇಳಿದೆ ನಾನು,| ಇದೇನು ಬರೀ ಮಾತೇ?” ಗೌಡನನ್ನು ಮನೆಗೆ ಕರೆದುಕೊಂಡು ಹೋಗಲು ಬಂದ ಮನೆಯ ಮಗ-ಸೊಸೆಯನ್ನು ನೋಡಿದಾಗ ಮೇಲಿನ ಮಾತುಗಳು ಹುಟ್ಟಿವೆ.

ʼಶ್ರೀರಾಮನವಮಿಯ ದಿವಸʼ ಕವನ ಬರೆದಿರುವ ಕವಿ ಗೋಪಾಲಕೃಷ್ಣ ಅಡಿಗರಿಗೆ ಶ್ರೀರಾಮ ಕಾರ್ಯಕಾರಣದೊಂದು ಅಪೂರ್ವ ನಟನೆ. ಮಣ್ ಟ್ಟ ಭಿತ್ತದಿಂದಾಗುವ ಅಶ್ವತ್ಥದ ಆವರ್ತನದ ಹಾಗೆ, ಕತ್ತಲನ್ನು ಬೆಳಕು ಓಡಿಸುವ ಹಾಗೆ , ಆವರ್ತನದ ಒಂದು ನಿತ್ಯ ಘಟನೆ. ಆದರೆ ಇವೆರಡೂ ಇರುವ ಅಂತಹ ಪುರುಷೋತ್ತಮನ ರೂಪುರೇಖೆಗಳನ್ನು ಕಾಣಲು ಚಿತ್ತ ಹುತ್ತುಗಟ್ಟಬೇಕು. ಸಾರ್ವಜನಿಕ ಘೋಷಣೆಗಳ ನಡುವೆಯೂ ಅಡಿಗರನ್ನು ಓದಿದವರಿಗೆ ಹುತ್ತುಗಟ್ಟುವ ಚಿತ್ತದ ಶಕ್ತಿ ಗೋಚರಿಸದೆ ಇರಲಾರದು.

ಸಾರ್ವಜನಿಕ ಪೋಸ್ಟರುಗಳಲ್ಲಿ ಒಬ್ಬನೇ ಇರುವ ಶ್ರೀರಾಮನನ್ನು ನೋಡುವಾಗ ಎಚ್.ಎಸ್. ವೆಂಕಟೇಶಮೂರ್ತಿಗಳ ʼಶ್ರೀಸಂಸಾರಿʼ ಕವನ ನೆನಪಾಗುತ್ತದೆ. ಶ್ರೀರಾಮ ಪೂಜೆಯನ್ನು ಎಂದೂ ಒಬ್ಬನೇ ಒಳಗೊಳ್ಳನು. ಮನೆಯೊಳಗೆ ಪೂಜೆಗೆ ಶ್ರೀರಾಮನ ಫೋಟೋ ಒಂದು ಬೇಕಾಗಿದೆ. ಅದಕ್ಕಾಗಿ ಶ್ರೀ ರಾಮನ ಫ್ಯಾಮಿಲಿ ಫೋಟೋ ತೆಗೆಯಲು ಬಂದ ಬಿಂಬಗ್ರಾಹಿ (ಫೋಟೋಗ್ರಾಫರ್‌) ರಾಮ, ಸೀತೆ, ಲಕ್ಷ್ಮಣ, ಚಾಮರ ಬೀಸುವ ಭರತ, ಶತೃಘ್ನ ಕೆಳಗೆ ಕುಳಿತ ಹನುಮಂತ ಎಲ್ಲಾ ಅವರವರ ಸ್ಥಾನದಲ್ಲಿ ಇದ್ದಾರೆ. ಇನ್ನೂ ಏನೋ ಸರಿ ಆಗುತ್ತಿಲ್ಲ. ಶ್ರೀರಾಮನಲ್ಲಿ ಬಿಂಬಗ್ರಾಹಿ ಮೆಲ್ಲಗೆ, ಇನ್ನೂ ಸ್ವಲ್ಪ ಜಾಗ ಇದೆ ಸ್ವಾಮಿ ಎನ್ನುತ್ತಾನೆ. ಶ್ರೀರಾಮ ಹೆಗಲಿನಿಂದ ತನ್ನ ಬಿಲ್ಲನ್ನು ತೆಗೆಯುತ್ತಾನೆ. ರಾಮನ ಹೆಗಲಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟುವಾಗ ಸೇವೆಮಾಡಿದ ಅಳಿಲು ಹತ್ತಿ ಕೂರುತ್ತದೆ. ಪೂಜೆಗೆ ಬೇಕಾದ ಶ್ರೀರಾಮನ ಕುಟುಂಬ ಚಿತ್ರ ಸಿದ್ಧವಾಗುತ್ತದೆ.

ಭಾರತ ಬಹುತ್ವದ ದೇಶ. ಸರ್ವಧರ್ಮ ಸಮಾನತೆಯ ದೇಶ. ಬಿಲ್ಲಿನ ಹೆದೆಯೇರಿಸಿದ ಶ್ರೀರಾಮನ ಯುದ್ಧ ಮುಗಿದಿದೆ. ಈಗ ರಾಮ ಮಂದಿರ ನಿರ್ಮಾಣ ಪ್ರಾರಂಭವಾಗಿದೆ. ನಮಗೀಗ ಬೇಕಾಗಿರುವುದು, ಶಾಂತಿಯ, ನೆಮ್ಮದಿಯ, ಸಹಬಾಳ್ವೆಯ ರಾಮರಾಜ್ಯ. ಅಂತರಂಗ ಆಸೆಪಡುವ ಚಿತ್ರ ಹೆಗಲಿನಿಂದ ಬಿಲ್ಲನ್ನು ಇಳಿಸಿ ಅಲ್ಲಿ ಅಳಿಲನ್ನು ಕೂರಿಸಿಕೊಂಡ ಶಾಂತಾರಾಮನ ಚಿತ್ರ.

‍ಲೇಖಕರು avadhi

August 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: